17ಜುಲೈ 2020, ಮೈಸೂರು:  ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಯವರ ಬದುಕಿನ ಕುರಿತಾದ ಕೃತಿ “ತಾಷ್ಕೆಂಟ್ ಡೈರಿ” ಶುಕ್ರವಾರ, ಕನ್ನಡದ ಖ್ಯಾತ ಕಾದಂಬರಿಕಾರರು, ಸಾಹಿತಿಗಳಾದ ಡಾ. ಎಸ್ ಎಲ್ ಭೈರಪ್ಪನವರ ಮೈಸೂರಿನ ಸ್ವಗೃಹದಲ್ಲಿ  ಲೋಕಾರ್ಪಣೆಗೊಂಡಿದೆ.  ಹಿರಿಯ ಕಾದಂಬರಿಕಾರರೂ ಸರಸ್ವತಿ ಸಮ್ಮಾನ್ ಪುರಸ್ಕೃತರಾದ ಡಾ. ಎಸ್.ಎಲ್.ಭೈರಪ್ಪನವರು ಲೇಖಕರಾದ ಎಸ್.ಉಮೇಶ್‍ರವರಿಂದ ಪ್ರಥಮ ಕೃತಿಯನ್ನು ಸ್ವೀಕರಿಸುವ ಮೂಲಕ ಕೃತಿಯನ್ನು ಲೋಕಾರ್ಪಣೆಗೊಳಿಸಿದರು. ಅನಂತರ ಕೃತಿ ಮತ್ತು ಶಾಸ್ತ್ರೀಜಿಯವರನ್ನು ಕುರಿತು ಲೇಖಕರ ಜೊತೆ ತಮ್ಮ ಹಳೆಯ ನೆನಪುಗಳನ್ನು ಕೆದಕಿ ಕೆಲವು ಸ್ವಾರಸ್ಯಕರ ಘಟನೆಗಳನ್ನು ಮೆಲುಕು ಹಾಕಿಕೊಂಡರು.

ಚಿತ್ರದಲ್ಲಿರುವವರು:
ಲೇಖಕ ಉಮೇಶ್, ಶ್ರೀಮತಿ ಸರಸ್ವತಿ ಭೈರಪ್ಪ, ಡಾ. ಪ್ರಧಾನ್ ಗುರುದತ್ತ, ಧಾತ್ರಿ ಪ್ರಕಾಶನದ ಮುಖ್ಯಸ್ಥರಾದ ಶ್ರೀಮತಿ ಬೃಂದಾ ಉಮೇಶ್

‘ಕ್ಷೀರ ಕ್ರಾಂತಿ’ ಅತ್ಯಂತ ಆವಶ್ಯಕವೆಂದು ಮನಗಂಡು ಶಾಸ್ತ್ರೀಜಿಯವರು ಆ ಕ್ಷೇತ್ರದಲ್ಲಿ ತಜ್ಞರಾಗಿದ್ದ ಶ್ರೀ ಕುರಿಯನ್‍ರವರಿಗೆ ಸಂಪೂರ್ಣ ಜವಾಬ್ದಾರಿ ವಹಿಸಿದ್ದರು ಎಂದು ನೆನಪು ಮಾಡಿಕೊಂಡರು.
ಶಾಸ್ತ್ರೀಜಿಯವರು ಸರಳತೆಗೆ ಅತ್ಯುತ್ತಮ ನಿದರ್ಶನದಂತೆ ಬದುಕಿದ್ದರು ಎಂದರು. ವಯಕ್ತಿಕವಾಗಿ ಬನಾರಸ್‍ನಲ್ಲಿ ವಾಸವಿದ್ದ ಶಾಸ್ತ್ರೀಜಿಯವರ ಮನೆಗೆ ಭೇಟಿಕೊಟ್ಟ ಪ್ರಸಂಗ ಚಿರಸ್ಮರಣಿಯ ಎಂದು ಅವರು ನುಡಿದರು. ಶಾಸ್ತ್ರೀಜಿಯವರು ಮತ್ತೂ ಹೆಚ್ಚು ಕಾಲ ಪ್ರಧಾನಿಯಾಗಿದ್ದಿದ್ದರೆ ಬಹುಶಃ ಭಾರತ ಬೇರೆಯದೇ ದಿಕ್ಕಿನಲ್ಲಿ ಸಾಗಿರುತ್ತಿತ್ತು ಎಂದು ಡಾ. ಭೈರಪ್ಪನವರು ಅಭಿಪ್ರಾಯಪಟ್ಟರು.

ಇದೇ ಸಮಯದಲ್ಲಿ ಉಪಸ್ಥಿತರಿದ್ದ ನಾಡಿನ ಹಿರಿಯ ವಿದ್ವಾಂಸರೂ ಭಾಷಾವಿಜ್ಞಾನಿಗಳೂ ಆದ ಡಾ.ಪ್ರಧಾನ್ ಗುರುದತ್ತರವರು ಮಾತನಾಡಿ ಕೃತಿಗೆ ಉತ್ತಮ ಪ್ರತಿಕ್ರಿಯೆ ದೊರೆಯಲಿ, ಹಾಗೂ ಯಶಸ್ಸು ದೊರೆಯಲಿ ಎಂದು ಹಾರೈಸಿದರು.

ಕಾರ್ಯಕ್ರಮದಲ್ಲಿ ಧಾತ್ರಿ ಪ್ರಕಾಶನದ ಮುಖ್ಯಸ್ಥರಾದ ಶ್ರೀಮತಿ ಬೃಂದಾ ಉಮೇಶ್ ಸಹ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿದ್ದ ಎಲ್ಲ ಗಣ್ಯರು ಮಾಸ್ಕ್ ಧರಿಸಿ ಸಾಮಾಜಿಕ ಅಂತರವನ್ನು ಕಾಯ್ದುಕೊಂಡೇ ಪುಸ್ತಕ ಲೋಕಾರ್ಪಣೆಗೊಳಿಸಿ ಮಾದರಿಯಾದರು. ಕಾರ್ಯಕ್ರಮದ ನಂತರ ಪ್ರಕಾಶಕಿ ಶ್ರೀಮತಿ ಬೃಂದಾ ಉಮೇಶ್ ಬಿಡುಗಡೆಗೂ ಮುನ್ನವೇ ಓದುಗರಿಂದ ವ್ಯಕ್ತವಾದ ಅಭೂತಪೂರ್ವ ಪ್ರತಿಕ್ರಿಯೆಗೆ ಧನ್ಯವಾದ ಸಮರ್ಪಿಸಿದರು. ಮೊದಲ ಮುದ್ರಣದ ಬಹುತೇಕ ಎಲ್ಲ ಪ್ರತಿಗಳನ್ನು ಓದುಗರು ಕಾಯ್ದಿರಿಸಿದ್ದಾರೆ. ಈಗ ಅದನ್ನು ಅವರಿಗೆ ತಲುಪಿಸುವ ದೊಡ್ಡ ಜವಾಬ್ದಾರಿ ತಮ್ಮ ಮೇಲಿದೆ ಎಂದು ತಿಳಿಸಿದರು. ಪ್ರಸ್ತುತ ಕರೋನಾ ಸಂದರ್ಭದಲ್ಲಿ ಓದುಗರ ಮನೆ ಮನೆಗೆ ಪುಸ್ತಕವನ್ನು ಕಳುಹಿಸುವುದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಧಾತ್ರಿ ಪ್ರಕಾಶನ ಮಾಡಿಕೊಂಡಿದೆ. ಇಂದಿನಿಂದ ಅಂಚೆ ಮತ್ತು ಕೊರಿಯರ್ ಮೂಲಕ ಪುಸ್ತಕವನ್ನು ಕಳುಹಿಸಲಾಗುವುದು ಎಂದೂ ಅವರು ತಿಳಿಸಿದರು.

‘ತಾಷ್ಕೆಂಟ್ ಡೈರಿ’
ಲೇಖಕರು: ಶ್ರೀ ಎಸ್ ಉಮೇಶ್
ಪ್ರಕಾಶಕರು: ಧಾತ್ರಿ, ಮೈಸೂರು
ಪುಟಗಳು : ೨೪೦
ಬೆಲೆ: ೧೭೦/-
https://www.dhatripublication.com ನಲ್ಲಿ ಆರ್ಡರ್   ಮಾಡಬಹುದಾಗಿದೆ.