ತಮಿಳುನಾಡಿನ ಓಬವ್ವ ! : ಕುಯಿಲಿ ಎಂಬ ಧೀರೆಯ ಕಥನ

ಪುಸ್ತಕ ಪರಿಚಯ: ವಾದಿರಾಜ್, ಸಾಮಾಜಿಕ ಕಾರ್ಯಕರ್ತ

ಮೂಲ ತೆಲಗು ಭಾಷಿಗ ದಲಿತ ಹೆಣ್ಣುಮಗಳು, ತಮಿಳುನಾಡಿನ ಶಿವಗಂಗೆ ಸಾಮ್ರಾಜ್ಯದ ಉಳಿವಿಗಾಗಿ ಮಾಡಿದ ಹೋರಾಟ, ಪ್ರಾಣಾರ್ಪಣೆಯ ಕಥನ ಇದೀಗ ಮೊದಲಬಾರಿಗೆ ಕನ್ನಡದಲ್ಲಿ ಪುಸ್ತಕವಾಗಿ ಹೊರಬರುತ್ತಿದೆ.

ತಮಿಳುನಾಡಿನ ಕುಂಡಚವಾಡಿಯಲ್ಲಿ ಅರುಂಧತಿಯಾರ್ ಸಮಾಜದ ಪೆರಿಯಮುತ್ತನ್ – ರಾಕು ದಂಪತಿಗಳ ಮಗಳು ಕುಯಿಲಿ. ತಾಯಿ ರಾಕುವಿನದು ಕೊಬ್ಬಿದ ಗೂಳಿಗಳನ್ನು ಪಳಗಿಸುವ ಕಾಯಕ. ತಂದೆ ಪೆರಿಯಮುತ್ತನ್ ಕುದುರೆ ಲಾಯದಲ್ಲಿ ದುಡಿಯುವವನು . ಮಗಳು ಕುಯಿಲಿಗೆ ಸಾಹಸ ಪ್ರವೃತ್ತಿ ರಕ್ತದಲ್ಲೇ ಇತ್ತೇನೊ!

ವಿಲಕ್ಷಣ ಸನ್ನಿವೇಶದಲ್ಲಿ ಕಾಡುಪಾಲಾದ ಶಿವಗಂಗೆಯ ರಾಜಮನೆತನದ ರಾಣಿ ವೇಲುನಾಚಿಯಾರ್ ಕಟ್ಟಿದ ಐದು ಸಾವಿರ ಮಹಿಳಾ ಸೈನಿಕರ ಪಡೆಗೆ ಅಧಿನಾಯಕಿಯಾದವಳು ಕುಯಿಲಿ .

ಬ್ರಿಟಿಷ್ ಸೈನ್ಯ, ಆರ್ಕಾಟ್ ನವಾಬ ಒಟ್ಟಾಗಿ 1772ರಲ್ಲಿ ಶಿವಗಂಗೆಯ ಮೇಲೆ ನೆಡಸಿದ ಆಕ್ರಮಣದಲ್ಲಿ ರಾಜ ಮನ್ನಾರ್ ಮುತ್ತುವದುಗಂತಾರ್ ಮತ್ತು ಮಗಳು ಗೌರಿ ಸಾವಿಗೀಡಾಗುತ್ತಾರೆ. ಬ್ರಿಟಿಷರ ಅಪಾರ ಶಸ್ತ್ರಾಸ್ತ್ರ ಸಂಗ್ರಹದೆದುರು ಶಿವಗಂಗೆಯ ಸೈನಿಕರ ಪರಾಕ್ರಮ ಸಾಕಾಗುವುದಿಲ್ಲ. ಆಗಲೇ ರಾಣಿ ವೇಲುನಾಚಿಯಾರ್ ಮತ್ತೆ ಸೈನ್ಯ ಕಟ್ಟಲು ಕಾಡು ಸೇರಿದ್ದು. ಅಲ್ಲಿಯೇ ಕುಯಿಲಿಗೂ ಸೈನ್ಯ ತರಬೇತಿ ಸಿಕ್ಕಿದ್ದು .

ಯುದ್ಧಕಲೆ ಕಲಿಸುತ್ತಿದ್ದ ತರಬೇತುದಾರನೊಬ್ಬ ಆರ್ಕಾಟ್ ನವಾಬನ ಆಮಿಷಕ್ಕೆ ಬಿದ್ದು ರಾಣಿಯನ್ನು ಮೋಸದಿಂದ ಮುಗಿಸಲು ಗುಪ್ತಸಂಚು ನೆಡಸುತ್ತಿರುವದನ್ನು ಕುಯಿಲಿ ಪತ್ತೆ ಹಚ್ಚುತ್ತಾಳೆ. ಸಂಚುಗಾರ ತರಬೇತುದಾರನಿಗೆ ಗತಿ ಕಾಣಿಸುತ್ತಾಳೆ. ಇದರಿಂದಾಗಿ ಕುಯಿಲಿ ರಾಣಿಗೆ ನಂಬಿಕಸ್ಥ ಬಂಟಳಾಗುತ್ತಾಳೆ .

ಮಹಿಳಾ ಪಡೆಯೊಂದಿಗೆ ಮತೈದು ಸಾವಿರ ಅಶ್ವದಳವೂ ಸಿದ್ಧವಾಗುತ್ತದೆ. ಇಷ್ಟೆಲ್ಲ ತಯಾರಿಗೆ ಎಂಟು ವರ್ಷಗಳೇ ಬೇಕಾಗುತ್ತದೆ. ಆದರೂ ರಾಣಿ ವೇಲೂನಾಚಿಯಾರ್ ಗೆ ವಿಶ್ವಾಸ ಸಾಕಾಗುವುದಿಲ್ಲ, ಸೈನ್ಯದ ಶೌರ್ಯ, ಪರಾಕ್ರಮವೇನೋ ಸರಿ. ಆದರೆ ಶತೃರಾಜ್ಯದಲ್ಲಿನ ಅಧುನಿಕ ಶಸ್ತ್ರಾಸ್ತ್ರಗಳನ್ನು ಸರಿಗಟ್ಟುವುದು ಹೇಗೆ? ಕುಯಿಲಿ ಅದಕ್ಕೊಂದು ಷಡ್ಯಂತ್ರ ಹೆಣೆಯುತ್ತಾಳೆ.

ಶಿವಗಂಗೆಯಲ್ಲಿ ಬ್ರಿಟಿಷರ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟ ಗೋದಾಮು, ಅದರ ಪಕ್ಕದಲ್ಲೇ ಚಿಕ್ಕದೊಂದು ರಾಜರಾಜೇಶ್ವರಿ ದೇಗುಲ. ಅವತ್ತು ೧೭೮೦ನೇ ಇಸವಿಯ ವಿಜಯದಶಮಿ, ನವರಾತ್ರಿಯ ಕೊನೇ ದಿನ. ಕುಯಿಲಿ ಕೆಲ ಗೆಳತಿಯರೊಂದಿಗೆ ದೇಗುಲಕ್ಕೆ ತೆರಳಿದಳು . ಕಾವಲಿಗಿದ್ದ ಭಟರು ಬಡಪಾಯಿ ಹೆಣ್ಣುಮಕ್ಕಳೆಂದು ನಿರ್ಲಕ್ಷಿಸಿದರು. ಸ್ವಲ್ಪ ಹೊತ್ತಷ್ಟೆ. ಗೋದಾಮು ಸ್ಫೋಟಿಸಿತು . ಊರಿಗೆ ಊರೇ ಬೆಚ್ಚಿ ಬೀಳುವಂತಹ ಶಬ್ದ, ಬೆಂಕಿಯ ಕೆನ್ನಾಲಿಗೆ. ಇಡೀ ಶಸ್ತ್ರಾಗಾರ ಸುಟ್ಟುಬೂದಿ. ಅದೇ ಕ್ಷಣವೆ ರಾಣಿ ವೇಲುನಾಚಿಯಾರ್ ಸೈನ್ಯ ಶಿವಗಂಗೆಯ ಮೇಲೆ ಎರಗಿತು. ಸಿದ್ಧತೆಯೂ ಇಲ್ಲದೆ , ಶಸ್ತ್ರಾಸ್ತ್ರಗಳಿಲ್ಲದೆ ವೈರಿ ಪಡೆ ಕಂಗಾಲು. ನೋಡುನೋಡುತ್ತಿದ್ದಂತೆ ಹಾರಿದ ವಿಜಯಪತಾಕೆ . ಸೋತು ದಿಕ್ಕೆಟ್ಟು ಓಡಿದ ಶತೃಸೈನ್ಯ …..

ಕುಯಿಲಿಯ ಯೋಜನೆ ಫಲಿಸಿತು . ರಾಜರಾಜೇಶ್ವರಿಯ ಪೂಜೆಗೆಂದು ತಂದ ತುಪ್ಪವನ್ನು ತಾನೇ ಸುರಿದುಕೊಂಡಿದ್ದಳು . ಬೆಳಗಬೇಕಾದ ದೀಪದಿಂದಲೇ ಮೈಗೆ ಬೆಂಕಿ ಹಚ್ಚಿಕೊಂಡಿದ್ದಳು . ಗೋದಾಮಿನ ಮೇಲೆ ಧುಮಿಕಿದ್ದಳು …..

ಅದೊಂದು ಐತಿಹಾಸಿಕ ಅತ್ಮಾರ್ಪಣೆ !

ಯುದ್ಧ ಗೆದ್ದ ರಾಣಿ ವೇಲುನಾಚಿಯಾರ್ ರಾಜರಾಜೇಶ್ವರಿ ದೇಗುಲದತ್ತ ಧಾವಿಸಿದಳು. ಸುಟ್ಟು ಕರಕಲಾದ ಕುಯಿಲಿಯನ್ನು ತೊಡೆಯ ಮೇಲಿಟ್ಟುಕೊಂಡು ಕಣ್ಣೀರಾದಳು .

ಅಮರಳಾದಳು ಕುಯಿಲಿ ಕನ್ನಡದ ಓಬವ್ವಳಂತೆ!

ಆರ್ಕಾಟ್ ನವಾಬನ ಕೌರ್ಯಕ್ಕೆ ಸಿಲುಕಿ ಹುಸೈನ್ ನಗರವಾದದ್ದು ಮತ್ತೆ ಶಿವಗಂಗೆಯಾಯಿತು .

************

ಇಂತಹದೊಂದು ಐತಿಹಾಸಿಕ ವಿದ್ಯಮಾನವನ್ನು ಹುಡುಕಿ ತೆಗೆದು, ದಾಖಲೆಗಳನ್ನು ಶೋಧಿಸಿ ‘ಬೆಂಕಿಯ ಚೆಂಡು ಕುಯಿಲಿ’ ಪುಸ್ತಕ ಬರೆದವರು ಮೈಸೂರಿನ ಹಿರಿಯ ವಕೀಲ, ಸಾಮಾಜಿಕ ಕಾರ್ಯಕರ್ತ ಓ ಶಾಮಭಟ್ . ಈ ಹಿಂದೆ ಅವರು ಸಮಾಜ ಸುಧಾರಕ ನಾರಯಣಗುರುಗಳ ಬಗ್ಗೆಯೂ ಪುಸ್ತಕ ಬರೆದು ಗಮನ ಸೆಳೆದವರು. ವಾಸ್ತವದಲ್ಲಿ ಶಾಮಭಟ್ಟರಿಗೆ ಬರವಣಿಗೆ ಅಧ್ಯತೆಯ ವಿಷಯವಲ್ಲ. ಸಮಾಜಕ್ಕಾಗಿ ಧುಮುಕಿ ಕೆಲಸ ಮಾಡುವುದು ಅವರ ಆಧ್ಯತೆ. ಬಡಾವಣೆಯ ಪೌರಕಾರ್ಮಿಕರನ್ನು ಮನೆಗೆ ಕರೆದು ಸತ್ಕರಿಸಿ ಹೊಸ ಮನೆಯ ಗೃಹಪ್ರವೇಶ ಮಾಡಿದವರು ಶಾಮಭಟ್. ‘ಬೆಂಕಿಯ ಚೆಂಡು…. ‘ ಪುಸ್ತಕ ಮಾದಿಗ ಸಮುದಾಯದಿಂದ ಬಂದ ಕುಯಿಲಿಯ ಕಥೆಯನ್ನಷ್ಟೆ ಹೇಳುವುದಿಲ್ಲ , ತಮಿಳಿನಾಡಿನ ರಾಜಕೀಯ ವೈರುಧ್ಯಗಳನ್ನು ತೆರೆದಿಡುತ್ತದೆ .

ಈ ಅಪರೂಪದ ಪುಸ್ತಕ ಇದೇ ಡಿಸೆಂಬರ್ 26ರಂದು ಮೈಸೂರಿನಲ್ಲಿ ಬಿಡುಗಡೆಯಾಗುತ್ತಿದೆ, ಅದಕ್ಕೆಂದೆ ಐಪಿಎಸ್ ಅಧಿಕಾರಿಯಾಗಿದ್ದ ಅಣ್ಣಾಮಲೈ ಮೈಸೂರಿಗೆ ಬರುತ್ತಿದ್ದಾರೆ.

ಪುಸ್ತಕ ಪರಿಚಯ: ವಾದಿರಾಜ್, ಸಾಮಾಜಿಕ ಕಾರ್ಯಕರ್ತ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ವಾಸ್ತವದಲ್ಲಿ ಮಕ್ಕಳ ದಿನಾಚರಣೆ ನಡೆಯಬೇಕಿರುವುದು ಡಿಸೆಂಬರ್ 26ರಂದು!

Sat Dec 26 , 2020
ಚಿಂತನ ಲೇಖಕಿ: ಸಿಂಚನ.ಎಂ.ಕೆ ಇಂದಿನ ಕಾಲದ ಮಕ್ಕಳು, ಯುವಜನರು ಯಾರನ್ನು ತಮ್ಮ ಆದರ್ಶವನ್ನಾಗಿಸಿಕೊಂಡಿದ್ದಾರೆ? ಯಾರ ಮೇಲೆ ಹೆಚ್ಚು ಅಭಿಮಾನವನ್ನು ಹೊಂದಿದ್ದಾರೆ? ಯಾರ ಬಗ್ಗೆ ಹೆಚ್ಚು ಚಿಂತನೆ ಮಾಡುತ್ತಿದ್ದಾರೆ? ಯಾರನ್ನು ತಮ್ಮ ನಾಯಕನ ಸ್ಥಾನದಲ್ಲಿ ಕೂರಿಸಿದ್ದಾರೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಹೋದರೆ ಇಂದಿನ ಸಮಾಜ ಎತ್ತ ಸಾಗುತ್ತಿದೆ ಎಂದು ಗಾಬರಿಯಾಗುವುದು ಖಂಡಿತ. ಯಾವ ಹಿಂದುಸ್ಥಾನದ ಶಿಕ್ಷಣ ವ್ಯವಸ್ಥೆಯು ವಿಶ್ವದಲ್ಲೇ ಸರ್ವಶ್ರೇಷ್ಠವೆಂದು ಮೆಕಾಲೆ ಎಂಬಾತನು ಬ್ರಿಟಿಷ್ ಸಂಸತ್ತಿನಲ್ಲೇ ವಿವರಿಸಿದ್ದನೊ ಹಾಗೂ ಅದನ್ನು […]