ಭಾರತದ ಭಾಗ್ಯ ವಿಧಾತ ಯಾರು?

ಲೇಖನ: ಶೈಲೇಶ್ ಕುಲಕರ್ಣಿ

Constitution of India

ಅಕ್ಟೋಬರ್ 17, 1949 ರಂದು ಸಂವಿಧಾನ ಸಭೆ ಮಹತ್ವದ ಚರ್ಚೆಗಾಗಿ ಸೇರಿತ್ತು.  ಚರ್ಚೆಯ ಪ್ರಮುಖ ಬಿಂದು ಸಂವಿಧಾನದ ಪೀಠಿಕೆಯ ಕುರಿತಾಗಿತ್ತು. ಸಂವಿಧಾನ ಸಭೆಯ ಅಧ್ಯಕ್ಷ ಡಾ.ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಸಭೆಯ ಎದುರು, “ಭಾರತದ ಜನರಾದ ನಾವು,  ಭಾರತವನ್ನು ಸಾರ್ವಭೌಮ, ಲೋಕತಾಂತ್ರಿಕ, ಗಣರಾಜ್ಯವಾಗಿ ರೂಪಿಸುವ ಸಂಕಲ್ಪವನ್ನು ತಳೆದಿದ್ದೇವೆ” ಎಂಬ ಪೀಠಿಕೆಯನ್ನು ಮುಂದಿರಿಸಿದರು. ಈ ಪೀಠಿಕೆಯ ಕುರಿತಾಗಿ ಹಲವಾರು ಪ್ರಶ್ನೆಗಳೆದ್ದವು . ಅವುಗಳಲ್ಲಿ ಪ್ರಮುಖವಾಗಿದ್ದು  ಕಾಂಗ್ರೆಸ್ಸಿನ ನಾಯಕರಾಗಿದ್ದ ಮೌಲಾನಾ ಹಸರತ್ ಮೊಹಾನಿಯವರದ್ದು.

ಪ್ರಸ್ತಾವಿತ ಪೀಠಿಕೆಗೆ ಮೌಲಾನಾ ತಮ್ಮ ವಿರೋಧ ವ್ಯಕ್ತಪಡಿಸುತ್ತ, ‘ಭಾರತದ ಜನರಾದ ನಾವು,  ಭಾರತವನ್ನು ಸಾರ್ವಭೌಮ, ಸಂಘೀಯ,ಪ್ರಜಾಸತ್ತೆಯಾಗಿ  ರೂಪಿಸುವ ಸಂಕಲ್ಪವನ್ನು ತಳೆದಿದ್ದೇವೆ’ ಎಂದಾಗಿಯೋ ಇಲ್ಲವೇ ‘ಭಾರತದ ಜನರಾದ ನಾವು,  ಭಾರತವನ್ನು ಸಾರ್ವಭೌಮ, ಸ್ವತಂತ್ರ, ಪ್ರಜಾಸತ್ತೆಯಾಗಿ ರೂಪಿಸಲು ಸಂಕಲ್ಪವನ್ನು ತಳೆದಿದ್ದೇವೆ’ ಎಂದಾಗಿಯಾದರೂ ಬದಲಾಯಿಸಬೇಕೆಂದು ಸೂಚಿಸಿದರು.

ತಮ್ಮ ತಿದ್ದುಪಡಿಗೆ ಸಹ ಸದಸ್ಯರಿಂದ ವಿರೋಧ ವ್ಯಕ್ತವಾದಾಗ್ಯೂ ಮುಂದುವರೆದು ಅವರು ಡಾ. ಅಂಬೇಡ್ಕರರ ಮುಂಚಿನ ಭಾಷಣವನ್ನು ನೆನಪಿಸುತ್ತಾ, ‘ಡಾ.ಅಂಬೇಡ್ಕರ್ ಹೇಳಿದ್ದಂತೆ  “ಇಂಡಿಯಾ ಅರ್ಥಾತ್ ಭಾರತವಾಗಿರುವುದಾದರೂ ಏನು? ಅದು ರಾಜ್ಯಗಳ ಒಕ್ಕೂಟವಾಗಿರುವುದು. ಇದರ ಅರ್ಥವೇನು? ನೀವು ‘ಸಂಯುಕ್ತ ಒಕ್ಕೂಟ’ ಎಂಬ ಪದವನ್ನು ಬಿಟ್ಟುಕೊಟ್ಟಿರಿ; ನೀವು ‘ಸಂಘ’ಎಂಬ  ಪದವನ್ನು ಬಿಟ್ಟುಕೊಟ್ಟಿರಿ ; ನೀವು ‘ಸ್ವತಂತ್ರ’ ಎಂಬ ಪದವನ್ನೂ ತ್ಯಜಿಸಿದ್ದೀರಿ..” ಮೌಲಾನಾರ ವಾದಗಳ ಹೊರತಾಗಿಯೂ ಸಭೆ ಒಕ್ಕೊರಲಿನಿಂದ ಅವರ ತಿದ್ದುಪಡಿಯನ್ನು ತಿರಸ್ಕರಿಸಿತು.

ಅದೇ ಸಭೆಯಲ್ಲಿ ಮತ್ತೊಮ್ಮೆ ತಮ್ಮ ಪಕ್ಷವಿರಿಸಿದ ಮೌಲಾನಾ, “ಭಾರತದ ಜನರಾದ ನಾವು,  ಭಾರತವನ್ನು ಸಾರ್ವಭೌಮ, ಲೋಕತಾಂತ್ರಿಕ, ಗಣರಾಜ್ಯವಾಗಿ ರೂಪಿಸಲು ದೃಢನಿಶ್ಚಯವನ್ನು ಹೊಂದಿದ್ದೇವೆ” ಎಂಬ ಪೀಠಿಕೆಗೆ ಬದಲಾಗಿ “ಭಾರತದ ಜನರಾದ ನಾವು,  ಭಾರತವನ್ನು ಯೂ.ಎಸ್.ಎಸ್.ಆರ್ (ಸಂಯುಕ್ತ ರಶಿಯಾದ ಒಕ್ಕೂಟ)ದ ಮಾದರಿಯಲ್ಲಿ ಭಾರತೀಯ ಸಮಾಜವಾದಿ ಗಣರಾಜ್ಯಗಳ ಒಕ್ಕೂಟ (UISR)ವಾಗಿ ಕರೆಯಲು  ದೃಢನಿಶ್ಚಯವನ್ನು ಹೊಂದಿದ್ದೇವೆ” ಎಂದಾಗಿ ಬದಲಾಯಿಸುವಂತೆ ಆಗ್ರಹಿಸಿದರು. ಸಭೆ ಮತ್ತೊಮ್ಮೆ ಈ ತಿದ್ದುಪಡಿಯನ್ನೂ ಅನಾವಶ್ಯಕ ಎಂದಾಗಿ ಕೈಬಿಟ್ಟಿತು.

ಅಂದಿನ ಸಭೆಯ ಮತ್ತೊಂದು ತಿದ್ದುಪಡಿ ಬಂದಿದ್ದು ದೇವರ ಮಹತ್ತನ್ನು ಸ್ಮರಿಸಲು. ಪೀಠಿಕೆ, “ದೇವರ ಹೆಸರಿನಲ್ಲಿ, ಭಾರತದ ಜನರಾದ ನಾವು..” (ಅಮೇರಿಕನ್ ಸಂವಿಧಾನದ ಮಾದರಿಯಲ್ಲಿ)  ಎಂಬ ಬದಲಾವಣೆ ತರಲು ಸದಸ್ಯ ಎಚ್.ವಿ.ಕಾಮತ್  ಪ್ರಸ್ತಾವಿಸಿದರು. ಇದಕ್ಕೆ ವಿರೋಧಿಸಿದ ಮತ್ತೊಬ್ಬ ಸದಸ್ಯ ಥನು ಪಿಳ್ಳೈ ‘ಖಂಡಿತವಾಗಿಯೂ, ನಾನು ದೇವರಲ್ಲಿ ನಂಬಿಕೆಯುಳ್ಳವನಾಗಿದ್ದೇನೆ (ಆದರೆ) ಶ್ರೀ ಕಾಮತರ ತಿದ್ದುಪಡಿಯನ್ನು ಅಂಗೀಕರಿಸಿದರೆ – ಆಸ್ಥೆಯ ವಿಷಯದಲ್ಲಿ ಅದು ಬಲವಂತಮಾಡಿದಂತಾಗುವುದಿಲ್ಲವೇ ?..’ ಎಂದಾಗಿ ಅಸಹಮತಿ ಸೂಚಿಸಿದರು. ಇದೇ ತಿದ್ದುಪಡಿಗೆ ಮತ್ತೊಂದು ತಿದ್ದುಪಡಿಯನ್ನು ಸೂಚಿಸುತ್ತ ಮತ್ತೊಬ್ಬ ಸದಸ್ಯೆ ರೋಹಿಣಿ ಕುಮಾರ್ ಚೌಧರಿ, ‘ತಿದ್ದುಪಡಿಯನ್ನು ದೇವನ ಹಸರಿನಲ್ಲಿ ಅಲ್ಲದೇ ದೇವಿಯ ಹೆಸರಿನಲ್ಲಿಯೂ  ಸ್ವೀಕರಿಸಲು ನಿಮಗೆ ಸಂತಸವಾದೀತೇ?  ನಾವು ಶಕ್ತಿ ಪಂಥಕ್ಕೆ ಸೇರಿದವರು, ದೇವನ ಹೆಸರನ್ನು ಮಾತ್ರ ಆಹ್ವಾನಿಸುವುದನ್ನು ವಿರೋಧಿಸುತ್ತೇವೆ, ಇದು  ದೇವಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವಂತಾಗುತ್ತದೆ. ನಾವು ದೇವರ ಹೆಸರನ್ನು ಸ್ಮರಿಸುವುದೇ ಎಂದಾದರೆ ನನ್ನ ಅರಿಕೆಯೆಂದರೆ ದೇವಿಯ ಹೆಸರನ್ನೂ ಅದರಲ್ಲಿ ಸೂಚಿಸಬೇಕು’ ಎಂದು ಪ್ರಸ್ತಾವಿಸಿದರು. ಕೊನೆಗೆ ಈ ತಿದ್ದುಪಡಿಯನ್ನು  ಅಭಿಪ್ರಾಯ ನಿರ್ಣಯಕ್ಕೆಂದು  (Division Of Votes )ಸಭೆಯ ಮುಂದಿರಿಸಿದಾಗ ಪರವಾಗಿ 41 ಮತಗಳು ಮತ್ತು ವಿರೋಧದಲ್ಲಿ 68 ಮತಗಳು ಬರುವಲ್ಲಿ ದೇವರೂ ಸಹ ಸಂವಿಧಾನದ ಪೀಠಿಕೆಯಿಂದ ಹೊರಗುಳಿಯುವಂತಾಯ್ತು .

ಪೀಠಿಕೆಯಲ್ಲಿ ಸೇರಿಸಲೆಂದು ದೇವರು, ಧರ್ಮ, ಪಂಥನಿರಪೇಕ್ಷವಾದ (ಸೆಕ್ಯುಲರಿಸಂ), ರಾಷ್ಟ್ರಪಿತನ ಹೆಸರು, ಸತ್ಯ, ಅಹಿಂಸೆಗಳ ಸಮೇತ ಅನೇಕ ವಿಷಯಗಳ  ಪರ-ವಿರೋಧದ ಗಾಢ ಮತ್ತು ಬಿರುಸಾದ ಚರ್ಚೆಗಳು ಈ ಸಭೆಗಳಲ್ಲಿ ನಡೆದಿದ್ದವು. ಭಾರತೀಯರ ಪ್ರತಿನಿಧಿಗಳಾಗಿ ಭಾರತೀಯರ ಚಿಂತನಾಧಾರೆ, ಗುಣಧರ್ಮಗಳನ್ನು ಯಥೋಚಿತವಾಗಿ ಪ್ರತಿಫಲಿಸುವ ಜವಾಬ್ದಾರಿ ಹೊತ್ತ ಸದಸ್ಯರ  ಅನುಭವ ಮತ್ತು ಪಾಂಡಿತ್ಯಜನ್ಯ ಚರ್ಚೆ-ಸಂವಾದಗಳ ಮೂಲಕ  ಸಂವಿಧಾನದಲ್ಲಿ ಸೇರ್ಪಡೆಗೊಳ್ಳಬೇಕಾದ  ಮಾರ್ಗದರ್ಶಿ ವಿಷಯಗಳ ಆಮೂಲಾಗ್ರ ವಿಶ್ಲೇಷಣೆಗಳ ನಂತರವಷ್ಟೇ ಸಂವಿಧಾನದ ಪೀಠಿಕೆ ಅಂಗೀಕೃತವಾಯಿತು.

ತಿದ್ದುಪಡಿಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸುತ್ತ ಡಾ.ಅಂಬೇಡ್ಕರ್ ಹೀಗೆ ಹೇಳುತ್ತಾರೆ : “I say that this Preamble embodies what is the desire of every Member of the House that this Constitution should have its root, its authority, its sovereignty, from the people. That it has.” ಅಂದರೆ ಪ್ರತಿಯೊಬ್ಬ ಭಾರತೀಯನ ಭಾವನೆಗಳನ್ನೂ ತನ್ನಲ್ಲಿ ನಿಹಿತಗೊಳಿಸಿಕೊಂಡ ಸಂವಿಧಾನವನ್ನು ದೇಶದ ಜನ ತಮಗೆ ತಾವೇ ಕೊಡಮಾಡಿದ್ದನ್ನು ಅದರ ಮುನ್ನುಡಿ ಕನ್ನಡಿಸಿತ್ತು.

ಆದರೆ, ‘ಕಿರು ಸಂವಿಧಾನ’ದ  ಹೆಸರಿನಲ್ಲಿ 1976 ರಲ್ಲಿ ಸಂವಿಧಾನಕ್ಕೆ ಮಾಡಲಾದ 42ನೇ ತಿದ್ದುಪಡಿಗಳೆಲ್ಲವೂ ಅಂದಿನ ಪ್ರಧಾನಿ ಇಂದಿರಾಗಾಂಧಿ ಹೇರಿದ್ದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ನಡೆದದ್ದು ಎಂಬುದೇ ಸ್ವತಂತ್ರ ಭಾರತದ ಇತಿಹಾಸದ ಅತ್ಯಂತ ಕರಾಳ ಮತ್ತು ವಿಷಾದದ ಸಂಗತಿ. ಪ್ರಜಾಸತ್ತೆಯನ್ನು ಮೂಲೋದ್ಧೆಶ್ಯವಾಗಿರಿಸಿದ್ದ ಈ ದೇಶದ ಸಂವಿಧಾನ ತನ್ನ ಸರ್ವಾಧಿಕಾರದ  ಮಾರ್ಗದ ಅತಿದೊಡ್ಡ ತಡೆಗೋಡೆಯಾಗಿ ಕಂಡಿದ್ದೆ ಇಂದಿರಾ ಸರ್ಕಾರ ಅದರ ಮೂಲಚೈತನ್ಯಕ್ಕೇ  ಕೈಹಾಕಿತು.

ಸಂವಿಧಾನ ಸಭೆಯ ಚರ್ಚೆಗಳ ಸಂದರ್ಭದಲ್ಲೇ , ಭಾರತವನ್ನು ಸಂವಿಧಾನದ ವಿಧಿ 1ರ ಪ್ರಕಾರ ‘ಸಮಾಜವಾದಿ’ ದೇಶ ಎಂದು ಘೋಷಿಸುವಂತೆ ಪ್ರಸ್ತಾವಿಸಿದ  ಕೆ.ಟಿ .ಶಹಾರ ಮಾತುಗಳನ್ನು ಡಾ.ಅಂಬೇಡ್ಕರ್  ಸಾರಾಸಗಟಾಗಿ ತಿರಸ್ಕರಿಸುತ್ತ ಯಾವುದೇ ‘ವಾದ’ಗಳನ್ನು ಪ್ರಜೆಗಳ ಮೇಲೆ ಹೇರುವುದು  ಕಾಲ ಮತ್ತು ಸಂದರ್ಭಗಳಿಗನುಸಾರವಾಗಿ ಸಾಮಾಜಿಕ- ಆರ್ಥಿಕ ರಚನೆಯನ್ನು ಆಯ್ದುಕೊಳ್ಳುವಲ್ಲಿ  ಅವರಿಗಿರುವ ಸ್ವಾತಂತ್ರಕ್ಕೆ ತಂದೊಡ್ಡುವ ಅಡ್ಡಿ ಎಂದು ಅಭಿಪ್ರಾಯ ಪಟ್ಟಿದ್ದರು. ಫ್ಯಾಸಿಸ್ಟ್ ಮನೋಭಾವದ  ಇಂದಿರಾಗಾಂಧಿ ಮತ್ತವರ ಮಗ ಸಂಜಯನ ಪಟಾಲಮ್ಮಿನ  ರಾಜಕೀಯ ಮಹತ್ವಾಕಾಂಕ್ಷೆಗಳಿಗೆ ಇಂತಹ ಅಪ್ಪಟ ಪ್ರಜಾಪ್ರಭುತ್ವದ ತತ್ವಗಳು ಅಪಥ್ಯವಾಗಿದ್ದರಲ್ಲಿ ಅಚ್ಚರಿಯೇನಿರಲಿಲ್ಲ. ಪರಿಣಾಮವಾಗಿ ದೇಶ 21 ತಿಂಗಳ ತುರ್ತುಪರಿಸ್ಥಿತಿಗೆ ಒಳಗಾಗಬೇಕಾಯ್ತು. ಸಂವಿಧಾನದ ದಿಕ್ಸೂಚಿಯಾದ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯಾತೀತ ದಂತಹ ಶಬ್ದಗಳನ್ನು ಚರ್ಚೆ -ಸಂವಾದಗಳಿಗೆ ಅವಕಾಶವೇ ಇಲ್ಲವಾಗಿಸಿ  ಸೇರಿಸಲಾಯಿತು.

‘ಭಾರತಕ್ಕೆ ಶಾಕ್ ಟ್ರೀಟ್ಮೆಂಟ್ ಬೇಕಾಗಿದೆ’ ಎಂದು ತಾನು ಹೇರಿದ್ದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದ ಇಂದಿರಾ ಸರ್ಕಾರಕ್ಕೆ  ತನ್ನ ನಿರಂಕುಶತೆಯನ್ನು ನಿರ್ಲಜ್ಜೆಯಿಂದ ಪ್ರದರ್ಶಿಸಲು ಅನುವು ಮಾಡಿಕೊಟ್ಟ ಭಾರತೀಯ ಕಮ್ಯುನಿಸ್ಟ್ ಪಕ್ಷ(CPI)ಗಳಂತಹ ಕ್ಷುದ್ರತತ್ವಗಳ ಉಲ್ಲೇಖವೂ ಈ ಸಂದರ್ಭದಲ್ಲಿ ಅತ್ಯಂತ ಸಮಂಜಸವೆನಿಸುತ್ತದೆ. ದ್ವಿತೀಯ ಮಹಾಯುದ್ಧದಲ್ಲಿ ಸೋವಿಯತ್ ರಷ್ಯಾ ಬ್ರಿಟಿಷರ ಪಕ್ಷ ವಹಿಸಿದ ಕಾರಣಕ್ಕೆ ಭಾರತದಲ್ಲಿ ಬ್ರಿಟಿಷರ ಆಳ್ವಿಕೆಯ ಸಮರ್ಥನೆಗಿಳಿದಿದ್ದ ಭಾರತೀಯ ಕಮ್ಯುನಿಸ್ಟರಿಗೆ ತುರ್ತುಪರಿಸ್ಥಿತಿ ಸಹಜವಾಗಿಯೇ ಛದ್ಮ ಆಳ್ವಿಕೆಯ ಮತ್ತು ದೇಶಾದ್ಯಂತದ ಪ್ರತಿಷ್ಠಿತ ಅಕ್ಯಾಡೆಮಿಕ್ ವಲಯಗಳ ಮೂಲಕ ತಮ್ಮ ಕುತ್ಸಿತ ವಿಚಾರಗಳ ಪ್ರಸರಣಕ್ಕೆ ಸಂದ ಪರಮಾವಕಾಶವಾಗಿ ಕಂಡಿತು. ಸಿಪಿಐ, ಇಂದಿರಾರ 20 ಅಂಶಗಳ ಕಾರ್ಯಕ್ರಮವನ್ನೂ ಸಂಜಯನ 5 ಅಂಶಗಳ ಕಾರ್ಯಸೂಚಿ ಎಂಬ ಸಾಮಾಜಿಕ- ಆರ್ಥಿಕ – ಹಿಂಸಾಪರ್ವವನ್ನು ತುರ್ತುಪರಿಸ್ಥಿತಿಯುದ್ದಕ್ಕೂ ಅನುಮೋದಿಸಿತ್ತು.

ಹಾಗಾದರೆ ಈ  ದೇಶವನ್ನು ಅಂದಿನ ನೈರಾಶ್ಯದ ಶಾಶ್ವತ ಕತ್ತಲೆಯಿಂದ, ಅಭದ್ರತೆ – ದ್ವೇಷಗಳ  ಪರಿಸ್ಥಿತಿಯಿಂದ ಪಾರುಮಾಡಿದ್ದ್ಯಾರು ? ಅದನ್ನು ಸಾಧ್ಯಗೊಳಿಸಿದ್ದು ಜಯಪ್ರಕಾಶ್ ನಾರಾಯಣರ ‘ಸಂಪೂರ್ಣ ಕ್ರಾಂತಿ’ಯ ದೀಕ್ಷೆತೊಟ್ಟು, ಸರ್ವಾಧಿಕಾರತ್ವ ಮತ್ತು ದಮನಕಾರಿ ತತ್ವಗಳನ್ನು ಧಿಕ್ಕರಿಸಿ ಹಿಮ್ಮೆಟ್ಟಿಸಿದ ಅಸಂಖ್ಯ, ಅನಾಮಿಕರು. ಅವರೇ ನಮ್ಮ ಸಂವಿಧಾನದ ಪೀಠಿಕೆ ಗುರುತಿಸುವ ಭಾರತದ ಜನರಾದ ನಾವು.

3-ತಲಾಕ್ ನಂತಹ ಸಾಮಾಜಿಕ ಪಿಡುಗಿನ ವಿರುದ್ಧ ಪ್ರಜಾತಾಂತ್ರಿಕವಾಗಿ ಚುನಾಯಿತವಾದ ಸರ್ಕಾರವೊಂದಕ್ಕೆ  ಸಂವಿಧಾನ ಪುರಸ್ಸರವಾದ ಕ್ರಮಕೈಗೊಳ್ಳುವಂತೆ ಮಾಡುವ ತಾಕತ್ತು ಇದೆ ಎಂದು ನಂಬಿದ್ದೇ ನಾವು!. ಸಂವಿಧಾನದ ನಿರ್ದೇಶನದಂತೆ ಚರ್ಚೆ-ಸಂವಾದಗಳ ಮೂಲಕ ದೇಶದ ಸಂಸತ್ತಿನಲ್ಲಿ ಬಹುಮತದೊಡನೆ 37೦ನೇ ವಿಧಿಯ ರದ್ಧತಿಯೊಂದಿಗೆ ಭಾರತದ ತಲೆನೋವಾಗಿದ್ದ ಜಮ್ಮುಕಾಶ್ಮೀರದ ಸಮಸ್ಯೆಯನ್ನು  ಇಲ್ಲವಾಗಿಸಿದ ಮೂಕಶಕ್ತಿಯೂ ಇದೇ ನಾವು!. ದೇಶ ವಿಭಜನೆಯಲ್ಲಿ ಘಾಸಿಗೊಂಡು ತಮ್ಮದಲ್ಲದ ತಪ್ಪಿಗೆ ಪರಿತಪಿಸುತ್ತಿರುವ ಕೆಲ ನೆರೆರಾಷ್ಟ್ರಗಳ ಅಲ್ಪಸಂಖ್ಯಾತರಿಗೆ ಭಾರತೀಯ ಪೌರತ್ವ ದೊರಕಿಸಿಕೊಡುವ ಮಾನವೀಯ ಕಾರ್ಯಗಳೂ ಸಂವಿಧಾನದ ಸರಹದ್ದಿನಲ್ಲಿ ನಡೆಯುವಂತಾಗಲಿ ಎಂದು ಪರಿತಪಿಸಿ ಸಹಾಯಕ್ಕೆ  ಸನ್ನದ್ಧರಾಗುವವರೂ ಭಾರತದ ಭಾಗ್ಯವಿಧಾತ  ಭಾರತದ ಜನರಾದ ನಾವು!!.

ತುರ್ತುಪರಿಸ್ಥಿತಿಯಂತಹ ಕಪ್ಪುಚುಕ್ಕೆ ನಮ್ಮ ಸಮಾಜಕ್ಕೆ ಮತ್ತೆ ಅಂಟದಿರಲು ನಮ್ಮ  ಸಂವಿಧಾನದ ಪೀಠಿಕೆಯ ಮೂಲ ಆಶಯದಂತೆ ಮತ-ಪಂಥದ, ಮೇಲು-ಕೀಳಿನ, ವಾದ-ನಂಬುಗೆಗಳ ಕಟ್ಟಿಗೆ ಸಿಲುಕದೇ ರಾಷ್ಟ್ರದ ಸಾರ್ವಭೌಮತೆ, ಲೋಕತಂತ್ರ ಮತ್ತು ಗಣರಾಜ್ಯದ ನಮ್ಮ ಸಂಕಲ್ಪನೆಗಳು ಅನುದಿನವೂ  ಗಟ್ಟಿಗೊಳಿಸಿಕೊಳ್ಳುತ್ತ ಜಾಗರೂಕರಾಗಿರುವುದೇ ‘ಭಾರತದ ಜನರಾದ  ನಾವು’ ಮಾಡಬೇಕಾದ ನಿಜ ರಾಷ್ಟ್ರಕಾರ್ಯ.