‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ : 92% ಹೌದು ಎನ್ನುತ್ತಾರೆ! #ರಾಜ್ಯೋತ್ಸವ_ವಿಶೇಷ #ಕನ್ನಡದನೆನಪು #ಕನ್ನಡಕ್ಕಾಗಿ_ಲಿಂಕ್_ಒತ್ತಿ

‘ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮಾತೃಭಾಷೆ / ಪ್ರಾದೇಶಿಕ ಭಾಷೆಯಲ್ಲಿ ಕಡ್ಡಾಯ ಮಾಡಬೇಕೇ?’ ಎಂಬುದು ನಮ್ಮ ಕಡೆಯ ಹಾಗೂ ಮಹತ್ವದ ಪ್ರಶ್ನೆಯಾಗಿತ್ತು. ಈ ಪ್ರಶ್ನೆಗೆ ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು, ವಿ ಎಸ್ ಕೆ ತಂಡ ಹೀಗೆ ವಿಶ್ಲೇಷಿಸುತ್ತಾರೆ.

ಶೇಕಡಾ 92 ಮಂದಿ ‘ಹೌದು’ ಎಂದು ಉತ್ತರಿಸಿದ್ದಾರೆ. ಶೇಕಡಾ 8ರಷ್ಟು ಕೆಲವೇ ಕೆಲವು ಜನ ‘ಇಲ್ಲ’ ಎಂದಿದ್ದಾರೆ. ‘ಇಲ್ಲ’ ಎನ್ನುವವರಲ್ಲೂ ಕೂಡ ‘ಕಡ್ಡಾಯ’ಕ್ಕೆ ಇಲ್ಲ ಎಂದು ಹೇಳಿರಬಹುದೇ ಹೊರತು, ಮಾತೃ/ಪ್ರಾದೇಶಿಕ ಭಾಷೆಗಳಿಗೆ ಪ್ರಾಮುಖ್ಯತೆ ಕೊಡುವುದಕ್ಕಲ್ಲ ಎನ್ನುವುದನ್ನೂ ಕೂಡ ಊಹಿಸಬಹುದು. ಒಟ್ಟಿನಲ್ಲಿ ಇಷ್ಟು ವ್ಯಾಪಕವಾಗಿ ಏಕ ಅಭಿಪ್ರಾಯ ಸಿಗುವ ಪ್ರಶ್ನೆಗೆ ಸಮೀಕ್ಷೆ ಮಾಡಬೇಕಾಗಿತ್ತೇ ಎಂಬುದೇ ನಾವು ಕೇಳಬೇಕಾದ ಮೊದಲ ಪ್ರಶ್ನೆಯಾಗುತ್ತದೆ.


ಪ್ರಸ್ತುತ ಸಂದರ್ಭದಲ್ಲಿ ಈ ಪ್ರಶ್ನೆ / ಸಮೀಕ್ಷೆ ಸೂಕ್ತವಾಗಿದೆ. ಏಕೆಂದರೆ, ಆಂಗ್ಲ ಭಾಷಾ ಮಾಧ್ಯಮ ಶಾಲೆಗಳು ಹೆಚ್ಚುತ್ತಿವೆ. ಪ್ರಾದೇಶಿಕ/ಮಾತೃಭಾಷಾ ಮಾಧ್ಯಮದ ಶಾಲೆಗಳು ಕಡಿಮೆಯಾಗುತ್ತಿವೆ. ಹದಿಹರೆಯದವರಿಗೆ ಕನ್ನಡಕ್ಕಿಂತ ಆಂಗ್ಲ ಭಾಷೆಯ ಮೇಲೆ ಹಿಡಿತ ಚೆನ್ನಾಗಿದೆ. ಆದ್ದರಿಂದ ಈ ವಿಚಾರದಲ್ಲಿ ಜನರ ಅಭಿಪ್ರಾಯವನ್ನು ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ತಿಳಿದುಕೊಳ್ಳುವುದು ಸೂಕ್ತವಾಗಿದೆ. ಈ ಪ್ರಬಲ ಜನಾಭಿಪ್ರಾಯವು ಕನ್ನಡಕ್ಕೆ ಸಿಗಬೇಕಾದ ಪ್ರಾಮುಖ್ಯತೆಯನ್ನು ಪಡೆದುಕೊಳ್ಳಲು ಹೇಗೆ ಅನುಕೂಲ ಮಾಡಿಕೊಡುತ್ತದೆ ಎನ್ನುವ ಕಡೆ ನಮ್ಮ ಗಮನ ಹರಿಸಲು ಅನುಕೂಲ ಮಾಡಿಕೊಡುತ್ತದೆ.


ಕನ್ನಡದ ಹೋರಾಟಗಾರರು ಸಾರ್ವಜನಿಕರ ನೆಲೆಯಲ್ಲಿ ನಿಂತು ಸರ್ಕಾರದತ್ತ ಬೆರಳು ತೋರಿಸುವ ಸನ್ನಿವೇಶಗಳನ್ನು ನಾವು ಗಮನಿಸಬಹುದು. ಸರಿಯಾಗಿ ಹೇಳಬೇಕೆಂದರೆ, ಸರ್ಕಾರಕ್ಕೆ, ನೀತಿನಿರೂಪಣೆ-ಆಡಳಿತ-ಕಾನೂನುರಚನೆ ಮತ್ತು ಕಾನೂನುನಿಷ್ಕರ್ಷೆಗಳ ಮುಖಗಳಿವೆ. ಪ್ರಸ್ತುತ ಕನ್ನಡದ ಪರಿಸ್ಥಿತಿ ಮತ್ತು ಸಮೀಕ್ಷೆಯ ಫಲಿತಾಂಶಗಳನ್ನು ನೋಡಿದಾಗ ಜನಾಭಿಪ್ರಾಯ ಮತ್ತು ನೀತಿಗಳ ಮಧ್ಯೆ ಕಂದರ ಇದೆಯೇ ಎಂಬ ಪ್ರಶ್ನೆ ಮನದಲ್ಲಿ ಮೂಡುತ್ತದೆ.


ಭಾಷಾ ನೀತಿಯ ಬಗ್ಗೆ ಉಚ್ಚ ನ್ಯಾಯಾಲಯವು ಮಹತ್ವದ ತೀರ್ಪುಗಳನ್ನು ನೀಡಿದೆ. ಈ ತೀರ್ಪು ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಮಾಡುವ ರಾಜ್ಯ ಸರ್ಕಾರಗಳ ಕ್ರಮಗಳ ಹಿನ್ನೆಲೆಯಲ್ಲಿ ನೀಡಲಾಗಿದೆ. ಮತ್ತು ಈ ತೀರ್ಪಿನ ಸಾರಾಂಶ ಎಂದರೆ, ಮಕ್ಕಳ ಭಾಷಾ ಕಲಿಕೆಯನ್ನು ಪ್ರಾಥಮಿಕ ಹಂತದಲ್ಲಿ ನಿರ್ಧರಿಸಬೇಕಾದ್ದು ಅವರ ಪಾಲಕರೇ ಹೊರತು ಸರ್ಕಾರಗಳಲ್ಲ ಎಂಬುದೇ ಆಗಿದೆ. ಇತ್ತೀಚೆಗೆ ಸ್ವೀಕೃತವಾದ ನೂತನ ಶಿಕ್ಷಣ ನೀತಿಯೂ ಸಹ ಮಾತೃಭಾಷೆ / ಪ್ರಾದೇಶಿಕ ಭಾಷಾ ಶಿಕ್ಷಣವನ್ನು ಅನುಮೋದಿಸಿದೆ. ಶಿಕ್ಷಣ ತಜ್ಞರು ಸಾಮಾನ್ಯವಾಗಿ ಮಾತೃ ಭಾಷಾ ಶಿಕ್ಷಣಕ್ಕೆ ಆದ್ಯತೆಯನ್ನು ಕೊಡುತ್ತಾರೆ.


ಜನಾಭಿಪ್ರಾಯ, ನ್ಯಾಯಾಲಯದ ತೀರ್ಪುಗಳು ಮತ್ತು ನೀತಿ ನಿರೂಪಕರ ಅಭಿಪ್ರಾಯಗಳು ಮಾತೃ/ ಪ್ರಾದೇಶಿಕ ಭಾಷೆಯ ಪರವಾಗಿ ಇದ್ದರೂ ಸಹ ಆಂಗ್ಲ ಭಾಷಾ ಮಾಧ್ಯಮದ ಶಾಲೆಗಳು ಏಕೆ ಹೆಚ್ಚುತ್ತಿವೆ? ಏಕೆ ಸರ್ಕಾರಗಳು ಆಂಗ್ಲ ಭಾಷಾ ಶಾಲೆಗಳಿಗೆ ಅನುಮತಿ ನೀಡುತ್ತಿವೆ ಪ್ರಾದೇಶಿಕ/ಮಾತೃಭಾಷೆ ಕಡ್ಡಾಯ ಮಾಡಲು ಹಿಂದೆ-ಮುಂದೆ ನೋಡುತ್ತಿವೆ. ಜನಾಭಿಪ್ರಾಯ ವ್ಯಕ್ತವಾಗುತ್ತಿದ್ದಾಗಲೂ ವಿರೋಧೀ ಧ್ವನಿಗಳು ಕಾಣದಿದ್ದಾಗಲೂ ಸರ್ಕಾರದ ವರ್ತನೆ ಏಕೆ ಈ ರೀತಿ ಇವೆ ಎಂಬುದೇ ಮುಂದಿನ ಪ್ರಶ್ನೆಯಾಗಿದೆ.
ಸರ್ಕಾರದ ಶಿಕ್ಷಣ ಇಲಾಖೆಯು ಬೇಡಿಕೆಗೆ ಅನುಗುಣವಾಗಿ ಶಾಲೆಗಳನ್ನು ತೆಗೆಯಲು ಅನುಮತಿ ನೀಡುತ್ತದೆ. ಖಾಸಗೀ ಶಾಲೆಗಳು ಜನರ ಬೇಡಿಕೆಗಳಿಗೆ ಅನುಗುಣವಾಗಿ ಮಾಧ್ಯಮಗಳನ್ನು ತೆರೆಯುತ್ತವೆ. ಸಾರ್ವಜನಿಕರು ತಮ್ಮ ಮಕ್ಕಳನ್ನು ಆಂಗ್ಲ ಭಾಷಾ ಮಾಧ್ಯಮಗಳಿಗೆ ಸೇರಿಸುವುದರಿಂದ ಕನ್ನಡ ಮಾಧ್ಯಮ ಶಾಲೆಗೆ ಬೇಡಿಕೆ ಕುಸಿದಿದೆ. ಚುನಾವಣೆ ಎದುರಿಸಬೇಕಾದ ಪಕ್ಷಗಳು ಮಾತೃಭಾಷೆ/ಪ್ರಾದೇಶಿಕ ಭಾಷೆಯನ್ನು ಕಡ್ಡಾಯ ಮಾಡುವ ಸಾಹಸಕ್ಕೆ ಹಿಂಜರಿಯುತ್ತಿದ್ದಾರೆ.

ಸರ್ಕಾರೀ ಶಾಲೆಗಳು ಮತ್ತು ಪ್ರಾದೇಶಿಕ ಭಾಷಾ ಮಾಧ್ಯಮದ ಶಾಲೆಗಳು ಗುಣಮಟ್ಟದ ಶಿಕ್ಷಣ ಕೊಡಬಲ್ಲವು ಎಂಬುದನ್ನು ಸಾರ್ವಜನಿಕರು ಒಪ್ಪುವಂತೆ ಕಾಣುವುದಿಲ್ಲ. ಈ ತಪ್ಪು ಅಭಿಪ್ರಾಯವನ್ನು ಶಾಸನದ ಬಲದಿಂದ ತಿದ್ದುವ ಸ್ಥೈರ್ಯ ಸರ್ಕಾರಗಳು ತೋರುತ್ತಿಲ್ಲ. ಖಾಸಗೀ ಹಿತಾಸಕ್ತಿಗಳು ನೀತಿ-ನ್ಯಾಯಾಲಯ-ಆಡಳಿತವನ್ನು ಪ್ರಭಾವಿಸುವಂತೆ ಮಾತೃಭಾಷೆ / ಪ್ರಾದೇಶಿಕ ಭಾಷೆಗಳನ್ನು ಬೆಂಬಲಿಸುವ ಸಾರ್ವಜನಿಕ ಹಿತಾಸಕ್ತಿಗಳು ಸಕ್ರಿಯವಾಗುತ್ತಿಲ್ಲ.


ಹೀಗೆ ಸಾರ್ವಜನಿಕ ಅಭಿಪ್ರಾಯದಲ್ಲಿ ಮತ್ತು ಆಡಳಿತದಲ್ಲಿ ವಿರೋಧಾಭಾಸಗಳು ಇರುವುದು ವ್ಯಕ್ತವಾಗುತ್ತಿದೆ. ತಾತ್ವಿಕವಾಗಿ ಮಾತೃ/ಪ್ರಾದೇಶಿಕ ಭಾಷೆಯ ಮಹತ್ವ ಅವರ ಅರಿವಿನಲ್ಲಿ ಇದೆ. ಆದರೆ, ಮಹತ್ವದ ಮಾತೃಭಾಷಾ ಶಿಕ್ಷಣವನ್ನು ತಮ್ಮ ಮಕ್ಕಳಿಗೆ/ಸಮಾಜಕ್ಕೆ ಒದಗಿಸುವಲ್ಲಿ ಅವರಿಗೆ ವ್ಯಾವಹಾರಿಕ ಗೊಂದಲ/ತೊಂದರೆಗಳಿವೆ.
ಭಾಷಾ ವಿಚಾರದಲ್ಲಿ ಈ ಸಮೀಕ್ಷೆಯು ಬಿಚ್ಚಿಟ್ಟಿರುವ ವಿರೋಧಾಭಾಸವು ದೇಶೀ ಭಾಷೆಗಳನ್ನು ಪ್ರಮುಖವಾಗಿಸುವ ನಮ್ಮ ಆಶಯಕ್ಕೆ ಇನ್ನೂ ಕೆಲವು ಒಳನೋಟಗಳು ಬೇಕಾಗಿವೆ ಎನ್ನುವುದನ್ನು ಹೇಳುತ್ತಿದೆ. ಮಾತೃಭಾಷೆ ಮತ್ತು ಪ್ರಾದೇಶಿಕ ಭಾಷೆಗಳು ಬಹುಜನರಿಗೆ ಒಂದೇ ಆಗಿರಬಹುದು. ಆದರೆ ಎಲ್ಲರಿಗೂ ಅಲ್ಲ. ಭಾಷಾ ಕಲಿಕೆಯ ಮತ್ತು ಮಾಧ್ಯಮಗಳ ಚರ್ಚೆಗಳನ್ನು ಬಿಡಿಸುವುದರಿಂದ ಹಲವು ಲಾಭಗಳಿವೆ. ಮುಖ್ಯವಾಗಿ ವಿಷಯ ನಿರೂಪಣೆಯಲ್ಲಿ ಸ್ಪಷ್ಟತೆ ಮೂಡಿ ಈಗ ಇರುವ ಹಲವಾರು ಗೊಂದಲಗಳು ಪರಿಹಾರ ಆಗುವ ಸಾಧ್ಯತೆಗಳಿವೆ. ಭಾಷೆಯನ್ನು ಕಡ್ಡಾಯ ಗೊಳಿಸುವ ಮತ್ತು ಭಾಷಾ ಆಯ್ಕೆಯ ನಿರಾಕರಣೆ – ಈ ಎರಡೂ ತುದಿಗಳಲ್ಲಿ ನಿಲ್ಲದೇ – ಚರ್ಚೆ ಮುಂದುವರೆಸಬೇಕಾಗಿದೆ. ಪ್ರತಿಯೊಂದು ಶಾಲೆಯ ಸುತ್ತಾ ಇಂದು ಒಂದು ಆವರಣ ಇದೆ. ಖಾಸಗೀ ಶಾಲಾ ಆಡಳಿತ ಮಂಡಳಿಗಳ ಪರಿಧಿ ಬಿಗಿಯಾಗಿದೆ. ಕಲಿಕೆಯನ್ನು ಈ ಪರಿಧಿಯೊಳಗಿನಿಂದ ಬಿಡಿಸುವ ಇಂಗಿತವನ್ನು ಇತ್ತೀಚೆಗೆ ಅಂಗೀಕೃತವಾದ ಶಿಕ್ಷಣ ನೀತಿ ವ್ಯಕ್ತಪಡಿಸುತ್ತಿದೆ. ಭಾಷಾ ವಿಚಾರದಲ್ಲಿ, ನ್ಯಾಯಾಂಗದ ತೀರ್ಪಿಸ ಆಶಯವನ್ನು ಸಾಕಾರಗೊಳಿಸಲೂ ಸಹ, ಶಿಕ್ಷಕರನ್ನು ಶಾಲಾ ಪರಿಧಿಯೊಳದಿಂದ ಬಿಡಿಸುವ ಅಗತ್ಯತೆಯನ್ನು ಈ ಸಮೀಕ್ಷೆಯ ವಿಮರ್ಶೆ ತಿಳಿಸಿಕೊಡುತ್ತದೆ.

ಡಾ. ಎಂ ಕೆ ಶ್ರೀಧರನ್, ಮಾಧ್ಯಮ ವಿಶ್ಲೇಷಕರು, ವಿ ಎಸ್ ಕೆ ತಂಡ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಖ್ಯಾತ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ನಿಧನ - ಬಹಳ ದುಃಖದ ಸುದ್ದಿ : ದತ್ತಾಜಿ ಶ್ರದ್ಧಾಂಜಲಿ

Sun Dec 13 , 2020
ಸಂಸ್ಕೃತ ವಿದ್ವಾಂಸರು, ಖ್ಯಾತ ವಾಗ್ಮಿಗಳಾದ ಬನ್ನಂಜೆ ಗೋವಿಂದಾಚಾರ್ಯರು ಇಂದು ನಿಧನರಾಗಿದ್ದಾರೆ. ಉಡುಪಿಯ ಅಂಬಲಪಾಡಿಯ ಸ್ವಗೃಹದಲ್ಲಿ ಬನ್ನಂಜೆಯವರು ಇಂದು ಬೆಳಿಗ್ಗೆ ಅಸುನೀಗಿದರು. ಅವರಿಗೆ ೮೪ ವರ್ಷ ವಯಸ್ಸಾಗಿತ್ತು. ಬನ್ನಂಜೆ ಎಂದೇ ಪ್ರಸಿದ್ಧರಾಗಿದ್ದ ಅವರು ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಹಲವು ಗ್ರಂಥಗಳನ್ನು ರಚಿಸಿದ್ದಾರೆ. ಹಲವಾರು ಲೇಖನಗಳನ್ನು ಬರೆದಿದ್ದಾರೆ. ಬನ್ನಂಜೆಯವರ ಕಿರಿಯ ಪುತ್ರ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. ತತ್ಸಂಬಂಧದ ವಿಧಿಗಳನ್ನು ಮನೆಯಲ್ಲಿಯೇ ನಡೆಸಲಾಗುತ್ತಿತ್ತು. "ನಾಡಿನ ಖ್ಯಾತ ವಿದ್ವಾಂಸರಾದ ಬನ್ನಂಜೆ ಗೋವಿಂದಾಚಾರ್ಯರು ನಮ್ಮನ್ನು ಅಗಲಿರುವುದು […]