ಬಿರ್ಸಾ ಮುಂಡಾನನ್ನು ನೆನಪಿಸಿಕೊಳ್ಳುವ ವಿಶೇಷ ಲೇಖನ

ಲೇಖಕರು: ಸಚಿನ್ ಪಾರ್ಶ್ವನಾಥ್
ಕೃಪೆ: news13.in

ಹೆಸರಿಗೆ ತಕ್ಕಂತೆ ಬಿರುಸು, ಸಾಯುವಾಗ ಇಪ್ಪತ್ತೈದರ ಹರೆಯ. ಹುತಾತ್ಮನಾಗಿ ಒಂದು ಶತಮಾನವೇ ಆಗಿದೆ. ಆದರೆ ನಾವು ಜೀವಂತವಾಗಲು ಆ ಹೆಸರು ಸಾಕು, ಬಿರ್ಸಾ ಮುಂಡ. ಇಂದಿಗೂ ಭಾರತೀಯ ಸಂಸತ್ತಿನ ಗೋಡೆಯಲ್ಲಿ ಕಾಣುವ ಏಕೈಕ ಬುಡಕಟ್ಟು ವೀರ. ಕನ್ನಡದಲ್ಲಿ ಬಿರುಸು ಎಂಬ ಪದಕ್ಕೆ ಹರಿತ, ವೇಗ ಎಂದೆಲ್ಲ ಅರ್ಥ ಬರುತ್ತದೆ. ಅಂತೆಯೇ ಬದುಕಿದವರು ಬಿರ್ಸಾ ಮುಂಡ.

ಬ್ರಿಟೀಷರ ವಿರುದ್ಧ, ಕ್ರಿಶ್ಚಿಯನ್ ಮಿಷನರಿಗಳ ವಿರುದ್ಧ, ಬಡತನದ ವಿರುದ್ಧ ಮತ್ತು ಕೊನೆಗೆ ಮೂಢನಂಬಿಕೆಗಳ ವಿರುದ್ಧ ಹೀಗೆ ಬದುಕನ್ನು ಬಿರುಸಾಗಿಯೇ ಎದುರಿಸಿ ಕೆಲ ಕಾಲ ಬದುಕಿ, ಚಿರಕಾಲ ಉಳಿದವರು ಬಿರ್ಸಾ ಮುಂಡ.

ಸ್ವಾಮಿ ವಿವೇಕಾನಂದ, ಭಗತ್ ಸಿಂಗ್, ಬಿರ್ಸಾ ಮುಂಡ ಇವರೆಲ್ಲಾ ಬದುಕಿದ್ದು ಕೆಲವು ವರ್ಷಗಳು ಅಷ್ಟೇ ಆದರೂ ಇಂದಿಗೂ ಆ ಹೆಸರು ಸಾಕು ನಮಗೆ ಬದುಕುವ ಛಲ ಮೂಡಲು.

ಅಂದು 15 ನವೆಂಬರ್ 1875. ಆಗಿನ ಬಂಗಾಳದ ಉಲಿಹಾತುವಿನಲ್ಲಿ ಬಿರ್ಸಾನ ಬುಡಕಟ್ಟು ಕುಟುಂಬದಲ್ಲಿ ಜನನ. ತಂದೆ ಸುಗ್ನಾ ಮುಂಡ, ತಾಯಿ ಕರ್ಮಿ. ಬಡತನಕ್ಕೆ ಮಕ್ಕಳು ಜಾಸ್ತಿ ಅನ್ನುವ ಹಾಗೆ ಮನೆಯಲ್ಲಿ ತುಂಬಾ ಬಡತನ, ಮನೆಯ ತುಂಬ ಜನ. ಅಂದು ಗುರುವಾರ, ಬೃಹಸ್ಪತಿಯ ವಾರ. ಅದಕ್ಕಾಗಿಯೇ ಅಂದು ಜನಿಸಿದವ ಬಿರ್ಸಾ. ಮುಂಡ ಎಂಬುದು ಜಾತಿ ಸೂಚಕ ಪದ. ಕಾರಿರುಳು, ಜನಿಸಿದ ಸಮಯದಲ್ಲಿ ಆಗಸದಲ್ಲಿ ಒಂದು ಚುಕ್ಕಿ ಇನ್ನಿಲ್ಲದಂತೆ ಮಿನುಗುತ್ತಿತ್ತು. ಅಂದೇ ಆ ಸಮುದಾಯದವರು ತೀರ್ಮಾನಿಸಿದ್ದರು ಇವನು ತಮ್ಮನ್ನು ಕಾಯಲು ಬಂದವ ಎಂದು. ಬಿರ್ಸಾ ಭಗವಾನ್ ಎಂದೇ ಇಂದಿಗೂ ಪರಿಚಿತ. ಅವರನ್ನು ಧರ್ತಿ ಆಭ ಅಂದರೆ ಭೂಮಿಯ ಒಡೆಯ ಎಂದೂ ಕರೆಯುತ್ತಾರೆ.

BIRSA MUNDA, (1875–1900) was an Indian tribal freedom fighter and a folk hero, who belonged to the Munda tribe, and was behind the Millenarian movement that rose in the tribal belt of modern day Bihar, and Jharkhand during the British Raj, in the late 19th century, thereby making him an important figure in the history of the Indian independence movement.

ಕೇವಲ ಇಪ್ಪತ್ತೈದು ವರ್ಷಗಳ ಕಾಲ ಬದುಕಿದ ಒಬ್ಬ ಬುಡಕಟ್ಟು ವ್ಯಕ್ತಿ ಒಂದೂ ಕಾಲು ಶತಮಾನ ಕಳೆದ ನಂತರವೂ ಜನರ ಮನದಲ್ಲಿ ದೈವವಾಗಿ ಉಳಿದಿದ್ದಾರೆ ಎಂದರೆ ಅದು ಮಹಾತ್ಮನಾಗುವ ಪರಿ. ಬಿರ್ಸಾ ಮುಂಡ ಎಂದು ನೆನಪು ಮಾಡಿಕೊಂಡಾಗೆಲ್ಲಾ ಬರಿ ಮೈ ಫಕೀರನೊಬ್ಬ ವೈದ್ಯನಾಗಿ, ವೀರ ಸ್ವಾತಂತ್ರ್ಯ ಹೋರಾಟಗಾರನಾಗಿ, ಸಂತನಾಗಿ ಮತ್ತು ಧರ್ಮ ರಕ್ಷಕನಾಗಿ ಕಣ್ಣ ಮುಂದೆ ಒಂದು ಚಿತ್ರ ಹಾದು ಹೋಗುತ್ತದೆ.

ಬಾಲ್ಯ ಬರೀ ಓಡಾಟದಲ್ಲಿಯೇ ಕಳೆದು ಹೋಯಿತು. ಬಡತನದ ಬದುಕನ್ನು ಕೆಲಸ ಅರಸುವ ಕಾಯಕದಲ್ಲಿ ಊರಿಂದ ಊರಿಗೆ ತೆರಳುವಂತೆ ಆಯಿತು. ಈ ಸಂದರ್ಭದಲ್ಲಿ ಬರೀ ಮುಂಡಾ ಸಮುದಾಯ ಅಲ್ಲದೆ ಇನ್ನಿತರ ಜನಜೀವನವೂ ಬಿರ್ಸಾ ಬದುಕಿನ ಮೇಲೆ ಪ್ರಭಾವ ಬೀರಿತು. ಬಿರ್ಸಾ ಮುಂಡ ಕೇವಲ ಅವರ ಆಸ್ತಿ ಹಕ್ಕುಗಳಿಗೆ ಅಷ್ಟೇ ಹೋರಾಡಲಿಲ್ಲ, ಅವರ ವಿಭಿನ್ನ ಸಂಸ್ಕೃತಿಯನ್ನು ರಕ್ಷಿಸುವ ಜವಾಬ್ದಾರಿ ಅವರ ಮೇಲಿತ್ತು.

ಬಾಲಕ ಬಿರ್ಸಾನನ್ನು ಅಯುಭಾಟುವಿನ ಸಂಬಂಧಿಕರ ಮನೆಗೆ ಕಳಿಸಲಾಯಿತು. ಅಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ಮುಂದೆ ಆತನನ್ನು ಜರ್ಮನ್ ಮಿಷನರಿ ಶಾಲೆಗೆ ಸೇರಿಸುವ ಅನಿವಾರ್ಯತೆ ಬಂದಾಗ ಅಲ್ಲಿ ಮತಾಂತರ ನಡೆಯುತ್ತಿರುವ ವಿಚಾರ ಬಿರ್ಸಾನ ಅರಿವಿಗೆ ಬರುತ್ತದೆ. ಶಾಲೆಗೆ ಸೇರಬೇಕೆಂದರೆ ಕ್ರಿಶ್ಚಿಯನ್ ಆಗಲೇಬೇಕು ಎಂಬ ಕಾರಣಕ್ಕೆ ಬಿರ್ಸಾ ಮುಂಡ ಹೆಸರು ಬಿರ್ಸಾ ಡೇವಿಡ್ ಆಗುತ್ತದೆ. ಇದು ಇಂದಿಗೂ ಬುಡಕಟ್ಟು ಸಮುದಾಯಗಳೊಂದಿಗೆ ನಡೆಯುತ್ತಲೇ ಇದೆ ಎಂಬುದು ದುರಂತ. ವಿದ್ಯಾಭ್ಯಾಸ ಮತ್ತು ಆತನ ಬದುಕಿನ ಕುರಿತು ಹಲವಾರು ರೀತಿಯ ಕತೆಗಳಿವೆ. ಆತ ಯಾವುದೋ ಸಂದರ್ಭದಲ್ಲಿ ಮನೆಯಿಂದ ಹೊರಹಾಕಲ್ಪಟ್ಟು ಕೊನೆಗೆ ಓರ್ವ ಸಂತನ ಬಳಿ ಇದ್ದು ಆಯುರ್ವೇದ ಕಲಿತು, ಶಿಕ್ಷಣ ಕಲಿತು ಬರುತ್ತಾನೆ ಎಂದು ಹೇಳುವುದೂ ಇದೆ. ಅಲ್ಲದೆ ಆತ ಹನ್ನೊಂದು ವರ್ಷವಾದ ನಂತರ ಸರ್ದಾರರ ಕೂಗಿಗೆ ಓಗೊಟ್ಟು ತನ್ನ ಜನರನ್ನು ಸಂಘಟಿಸಲು ಮುಂದಾದ ಎಂದೂ ಹೇಳುತ್ತಾರೆ. ಅದೂ ಅಲ್ಲದೆ ಕ್ರಿಶ್ಚಿಯನ್ ಮತಾಂತರದ ದನಿ ಎತ್ತಿದ, ಹಿಂದೂ ಧರ್ಮಕ್ಕೆ ಮರಳಿದ ನಂತರ ತನಗೆ ದೈವ ಪ್ರೇರಣೆ ಆಗಿದೆ ಎಂದು ಹೇಳಿ ಮುಂದಿನ ದಿನಗಳಲ್ಲಿ ಮುಂಡಾ ಸಮುದಾಯದಲ್ಲಿ ಮಹತ್ವಪೂರ್ಣ ಬದಲಾವಣೆಗಳನ್ನು ಆಹಾರ, ವಿಚಾರ, ವೇಷಭೂಷಣ ಮತ್ತು ದೈನಂದಿನ ಬದುಕಿನಲ್ಲಿ ತಂದ ಎಂದೂ ಹೇಳಲಾಗುತ್ತದೆ.

ನಮ್ಮೆಲ್ಲರಿಗೂ ತಿಳಿದಿರುವಂತೆ ಭಾರತೀಯ ಇತಿಹಾಸ ಎಡಪಂಥೀಯರಿಗೆ ದಶಕಗಳ ಕಾಲ ಸಿಕ್ಕ ನಂತರ ಅದರಲ್ಲಿ ಅವರ ಅನುಕೂಲಕ್ಕೆ ಅನುಗುಣವಾಗಿ ಸಾಕಷ್ಟು ತಿದ್ದುಪಡಿ ಮಾಡಿದರು. ಆದರೂ ಬಿರ್ಸಾ ಆ ಮಹಾತ್ಮನಂತೆ ಪುಸ್ತಕಗಳಲ್ಲಿ ಬದುಕದೇ ಜನರ ನರನಾಡಿಗಳಲ್ಲಿ ಬದುಕಿದ ಕಾರಣ ಇಂದಿಗೂ ಆತ ದೈವವೇ ಆಗಿದ್ದು, ಅಲ್ಲಿಯ ಮಣ್ಣಿನಲ್ಲಿ ಆತನ ಸೊಗಡಿದೆ. ಬಿರ್ಸಾ ಭಗವಾನ್ ಅಂದಾಗೆಲ್ಲಾ ಮನದ ಯಾವುದೇ ಮೂಲೆಯಲ್ಲಿ ಒಂದು ಹಿತಕರ ಬಿಸಿಯ ಛಳಕು ಮೂಡದೇ ಇರದು.

ಬ್ರಿಟಿಷರು ಜಾರಿಗೆ ತಂದ ಜಮೀನ್ದಾರಿ ಪದ್ಧತಿಯ ಮೂಲಕ ಹೊರಗಿನವರು ಆದಿವಾಸಿಗಳ ಜಮೀನು ಕೊಳ್ಳುವಂತೆ ಆಯಿತು. ಈ ಮೂಲಕ ಕ್ರಮೇಣ ಅಲ್ಲಿಯ ಜಮೀನಿನ ಮೇಲೆ ಇದ್ದ ಆದಿವಾಸಿಗಳ ಹಿಡಿತ ತಪ್ಪಿತು. 1894, ಬ್ರಿಟಿಷರ ದುರುದ್ದೇಶದ ಜಮೀನ್ದಾರಿ ನೀತಿಯ ವಿರುದ್ಧ ಬಿರ್ಸಾ “ಉಲ್ಗುಲನ್” ಸಂಘಟಿಸಿದ. ಅಂದರೆ ದಿಕುಸ್ ಅಂದರೆ ಹೊರಗಿನವರು ಮತ್ತು ಬ್ರಿಟಿಷರ ವಿರುದ್ಧದ ಹೋರಾಟ. ಈ ಸಂದರ್ಭದಲ್ಲಿ ಆತನಿಗೆ ತನ್ನ ಸಾಮರ್ಥ್ಯದ ಪೂರ್ಣ ಬಳಕೆ ಮಾಡಿಕೊಂಡು ಹೋರಾಟ ಮಾಡುವ ಅವಶ್ಯಕತೆ ಕಂಡು ಬಂದಿತು. ಕೂಡಲೇ ತನ್ನನ್ನು ತಾನು ದೇವದೂತ ಎಂತಲೂ, ತನಗೆ ತಮ್ಮ ದೇವರ ಸಾಕ್ಷಾತ್ಕಾರ ಆಗಿದೆ ಎಂತಲೂ ತಿಳಿಸುತ್ತಾನೆ. ಸಸ್ಯಾಹಾರ, ಶುಚಿತ್ವ, ನ್ಯಾಯ ನೀತಿ, ಒಗ್ಗಟ್ಟು ಮತ್ತು ದೇವರ ಕುರಿತಾಗಿ ಎಲ್ಲರಿಂದಲೂ ಪ್ರಮಾಣ ಮಾಡಿಸಿಕೊಳ್ಳುತ್ತಾನೆ. ಅಲ್ಲಿಂದ ಬಿರ್ಸಾನ ಹೋರಾಟ ಇನ್ನಷ್ಟು ತೀಕ್ಷ್ಣತೆ ಪಡೆಯುತ್ತದೆ. ಸ್ಥಳೀಯರು ಅಲ್ಲದೆ ದೂರದ ಊರುಗಳಿಂದ ಜನರು ಬಂದು ಔಷಧ ಪಡೆಯುವುದು, ಸಮಸ್ಯೆಗಳ ಇತ್ಯರ್ಥ ಮಾಡಿಕೊಳ್ಳುವುದು ಶುರುವಾಗುತ್ತದೆ. ಕ್ರಮೇಣ ಬಿರ್ಸಾನ ಪ್ರಸಿದ್ಧಿ ಹೆಚ್ಚಿದಂತೆ, ಆದಿವಾಸಿಗಳಲ್ಲಿ ಆತನ ಕುರಿತು ವಿಶ್ವಾಸ ಧೃಢವಾಗುತ್ತದೆ. ಅವನ ಅಣತಿಯಂತೆ ಬ್ರಿಟಿಷರಿಗೆ ತೆರಿಗೆ ಕಟ್ಟದೆ ತಿರುಗಿ ನಿಲ್ಲುತ್ತಾರೆ.

ಇದು ಆಂಗ್ಲರ ಕಿವಿಗೆ ಬಿದ್ದಾಗ, ಬಿರ್ಸಾ ಕ್ರಿಶ್ಚಿಯನ್ ಮತಾಂತರ ತಿರಸ್ಕರಿಸಿ ಹಿಂದುವಾಗಿ ಅದ್ಯಾವುದೋ ಕಾಲವಾಗಿರುತ್ತದೆ. ಇತ್ತ ಮತಾಂತರವು ಇಲ್ಲ, ಅತ್ತ ತೆರಿಗೆಗೂ ಕಲ್ಲು ಹಾಕಿದ ಬಿರ್ಸಾನ ವಿರುದ್ಧ ಬಂಧನದ ಆದೇಶ ಹೊರಡುತ್ತದೆ. ಬಿರ್ಸಾ ಭಗವಾನನ ತಲೆಗೆ 500 ರೂಪಾಯಿಗಳ ಬಹುಮಾನ ಕಟ್ಟಿದ್ದು ಉಂಟು. ಆ ಹೊತ್ತಿಗೆ ಬಿರ್ಸಾ ಕಾಡಿನ ಪ್ರತಿ ಹಾಡಿಗಳ ತಲುಪಿ ಆದಿವಾಸಿಗಳಲ್ಲಿ ಸಂಘಟನೆ ತಂದಿರುತ್ತಾನೆ. ಅದಾಗಲೇ ಮತಾಂತರವಾದವರು ಕೂಡ ಹಿಂದೂ ಧರ್ಮಕ್ಕೆ ಮರಳುತ್ತಿದ್ದುದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಅಲ್ಲದೆ ಕ್ರಿಶ್ಚಿಯನ್ ಆಗಿ ಮತಾಂತರವಾದ ಕಾರಣಕ್ಕೆ ಅವರಿಂದ ಪಡೆಯುತ್ತಿದ್ದ ತೆರಿಗೆಯು ದೊರಕದಂತಾಗಿ ಆದಾಯಕ್ಕೂ ಅಡ್ಡಿಯಾಗಿತ್ತು. 1895 ರಲ್ಲಿ ಬಿರ್ಸಾನ ಬಂಧಿಸಿ ಎರಡು ವರ್ಷಗಳ ಕಾಲ ಬಿಡುಗಡೆ ಮಾಡಲಿಲ್ಲ.

“ಅಬುವ ರಾಜ್ ಸೆಟೆರ್ ಜಾನ, ಮಹಾರಾಣಿ ರಾಜ್ ತುಂಡು ಜಾನ..” ಬಿರ್ಸಾನ ಪ್ರಸಿದ್ಧ ಘೋಷಣೆ. ಅಂದರೆ ಇಂಗ್ಲೆಂಡಿನ ಮಹಾರಾಣಿಯ ಅಧಿಕಾರ ಮುಕ್ತಾಯ ಕಂಡು, ನಮ್ಮದೇ ಪ್ರಭುತ್ವ ಆರಂಭವಾಗಲಿ ಎಂದರ್ಥ.

1897 ರಲ್ಲಿ ಬಿಡುಗಡೆ ಹೊಂದಿದ ಬಿರ್ಸಾ ಭೂಗತನಾದ. ಈ ಸಂದರ್ಭದಲ್ಲಿ ಸುದೀರ್ಘ ತಯಾರಿ ನಡೆಸಿದ ಬಿರ್ಸಾ ದೊಡ್ಡ ಸೈನ್ಯವನ್ನು ಕೂಡಿಸಿಬಿಟ್ಟಿದ್ದ. ತನ್ನೆಲ್ಲಾ ಪರಿಶ್ರಮ ಮತ್ತು ಬುದ್ಧಿಮತ್ತೆ ಬಳಸಿ ಆಧುನಿಕ ಅಲ್ಲದಿದ್ದರೂ ಗೆರಿಲ್ಲಾ ಮಾದರಿಯ 7000 ಸೈನಿಕರ ಪಡೆಯೇ ಅವನ ಬಳಿಯಿತ್ತು. ಡಿಸೆಂಬರ್ 24, 1899 ರಂದು ಕೆಲವು ಚರ್ಚ್‌ಗಳು ಮತ್ತು ಪೋಲೀಸ್ ಠಾಣೆಗಳ ಮೇಲೆ ಆಕ್ರಮಣ ಮಾಡಿ ಇಬ್ಬರು ಪೇದೆಗಳ ಕೊಂದರು. ಛೋಟಾನಾಗ್ಪುರ ಬಿರ್ಸಾ ಕಾರ್ಯಸ್ಥಾನವಾಗಿತ್ತು. ಸರಿಸುಮಾರು ಎರಡು ವರ್ಷಗಳ ಕಾಲ ಈ ರೀತಿಯ ಕಾಳಗಗಳು ನಡೆದವು. ಆದರೆ ಬ್ರಿಟಿಷರ ಆಧುನಿಕ ಶಸ್ತ್ರಾಸ್ತ್ರ, ಯುದ್ಧ ತಂತ್ರ ಮತ್ತು ಸಂಪರ್ಕ ಸಾಧನಗಳು ಅವರನ್ನು ಮೇಲುಗೈ ಸಾಧಿಸುವಂತೆ ನೋಡಿಕೊಂಡವು. ಬಿರ್ಸಾನ ಸೈನ್ಯ ನೂರಾರು ಸಂಖ್ಯೆಯಲ್ಲಿ ಕರಗುತ್ತಾ ಬಂದಾಗ ಆತ ಸಿಂಘ್‌ಭುಮ್ ಪ್ರದೇಶದಲ್ಲಿ ಭೂಗತನಾದ.

ಮಾರ್ಚ್ 3, 1900 ರಂದು ಚಕ್ರಧರಪುರದ ಜಮ್ಕೊಪಾಯಿ ಕಾಡಿನಲ್ಲಿ ಬಿರ್ಸಾನ ಸೆರೆ ಹಿಡಿದರು. ಅದೇ ವರ್ಷ ಜೂನ್ 9 ರಂದು ಕಾಲರಾ ಬಂದು ಜೈಲಿನಲ್ಲೇ ಬಿರ್ಸಾ ನಿಧನವಾಯಿತು ಎಂದು ಬ್ರಿಟಿಷರು ಘೋಷಿಸಿದರು. ಆದರೆ ಬಿರ್ಸಾಗೆ ಸ್ಲೋ ಪಾಯ್ಸನ್ ಕೊಟ್ಟು ಸಾಯಿಸಲಾಯಿತು ಎಂಬ ವದಂತಿಯು ಇದೆ. ಇನ್ನೂ ದೊಡ್ಡ ಪಾಲು ಆಯಸ್ಸನ್ನು ಹೊಂದಿದ್ದ ಬಿರ್ಸಾ ಸ್ವಾತಂತ್ರ್ಯದ ಹೋಮದಲ್ಲಿ ಲೀನನಾದ.

ಬಿರ್ಸಾ ಮುಂಡ ಹೋರಾಟ ಎರಡು ರೀತಿಯ ಬದಲಾವಣೆಗಳ ತಂದವು, ಮೊದಲನೆಯ ಭಾಗದಲ್ಲಿ ಬುಡಕಟ್ಟು ಜನರ ಭೂಮಿಯನ್ನು ಅನ್ಯರಿಗೆ ಮಾರುವಂತಿಲ್ಲ ಮತ್ತು ಎರಡನೆಯದಾಗಿ ಅನಕ್ಷರಸ್ಥ ಬುಡಕಟ್ಟು ವೀರರ ಶಕ್ತಿ ಸಾಮರ್ಥ್ಯಗಳ ಪರಿಮಿತಿ ಅರಿವಿಗೆ ಬಂದಿದ್ದು ದೊಡ್ಡ ವಿಚಾರವಾಯಿತು. ಬಿರ್ಸಾನ ನಿಧನದ ನಂತರ ಬ್ರಿಟಿಷರು ಬುಡಕಟ್ಟು ಸಮುದಾಯಗಳ ಆಸ್ತಿ ಹಕ್ಕುಗಳ ಕುರಿತು ಛೋಟಾನಾಗ್ಪುರ ಟೆಂಡನ್ಸಿ ಕಾಯ್ದೆ ಜಾರಿಗೊಳಿಸಿ, ವನವಾಸಿಗಳ ಆಸ್ತಿ ಹಕ್ಕುಗಳ ಕಾಯ್ದರು. ಅಲ್ಲದೆ ಮುಂಡಾ ಸಮುದಾಯದ ಖುಂಖಟ್ಟಿ ಹಕ್ಕುಗಳನ್ನು ಗಮನಿಸಿ ಬೆತ್ ಬೆಗಾರಿ ಅಂದರೆ ಒತ್ತಾಯಪೂರ್ವಕ ಕೂಲಿಕೆಲಸವನ್ನು ರದ್ದು ಮಾಡಿದರು.

ಬಿರ್ಸಾ ಮುಂಡ ಅಂದಾಗೆಲ್ಲ ಕಣ್ಣ ಮುಂದೆ ಇಪ್ಪತ್ತೈದರ ಹರೆಯದ ಒಬ್ಬ ವೀರನ ಚಿತ್ರ ಹಾದು ಹೋಗುತ್ತದೆ. ಹುತಾತ್ಮನಾಗಿ ಸುಮಾರು ಒಂದೂ ಕಾಲು ಶತಮಾನ ಕಳೆದಿದೆ. ಆದರೂ ಜನರ ಮನದಲ್ಲಿ ಭಗವಾನನಾಗಿ ಉಳಿದ ವ್ಯಕ್ತಿತ್ವ ಆತ. ಹುಟ್ಟಿದ್ದು ಅನಕ್ಷರಸ್ಥ ಬುಡಕಟ್ಟು ಸಮಾಜದಲ್ಲಿ, ಬ್ರಿಟಿಷರ ಆಳ್ವಿಕೆ, ಬಡತನ, ಶಿಕ್ಷಣದ ಸಮಸ್ಯೆ, ಆಹಾರಕ್ಕೂ ಕೊರತೆ, ಸಂಪರ್ಕ ಸಾಧನಗಳು ಮತ್ತು ಸಾರಿಗೆ ವ್ಯವಸ್ಥೆ ಹೀಗೆ ಎಲ್ಲವೂ ತೊಡಕುಗಳೇ ಇದ್ದ ಕಾಲದಲ್ಲಿ ಆತ ಮಿನುಗಿ ಮರೆಯಾದ. ಬದುಕಿದರೆ ಹಾಗೆ ಬದುಕಬೇಕು. ಇಂದಿಗೂ ಜಾರ್ಖಂಡ್­ನ ಚುನಾವಣೆಗಳಲ್ಲಿ ಮುಂಡಾ ಸಮುದಾಯ ಪ್ರಭಾವಶಾಲಿ ಮತ್ತು ಅವರ ಹೆಸರು ಪ್ರಸ್ತಾಪ ಆಗದೇ ಚುನಾವಣೆಗಳು ಮುಗಿಯುವುದಿಲ್ಲ. ಸಂಸತ್ತಿನಲ್ಲಿ ಹಾಕಿರುವ ಏಕೈಕ ಬುಡಕಟ್ಟು ವೀರನ ಚಿತ್ರ ಅದು ಬಿರ್ಸಾ ಮುಂಡ ಚಿತ್ರ. ಬಿಹಾರ ರಾಜ್ಯದ ಸೈನ್ಯ ಯುದ್ಧದ ಕರೆಯಲ್ಲಿ (Battle Cry) ಇಂದಿಗೂ ಬಿರ್ಸಾ ಮುಂಡ ಹೆಸರು ಹೇಳುತ್ತಾರೆ.

ಬಿರ್ಸಾ ಎಂದರೆ ಒಂದು ಧರ್ಮ, ಒಂದು ಶಕ್ತಿ, ಒಂದು ಸ್ಪೂರ್ತಿ, ಒಂದು ಅನಂತ ತೇಜಸ್ಸು. ವ್ಯಕ್ತಿ ಎಷ್ಟು ದಿನ ಜೀವಂತವಾಗಿದ್ದ ಎಂಬುದು ವಿಷಯವಾಗುವುದೇ ಇಲ್ಲ, ಆತ ಎಷ್ಟು ಕಾಲ ಮನೆ ಮನಗಳಲ್ಲಿ ಬದುಕಿದ್ದ ಎಂಬುದಷ್ಟೇ ಮೌಲ್ಯವಾಗುತ್ತದೆ. ಬುಡಕಟ್ಟು ಸಮುದಾಯಗಳು ಎಂದರೆ ಎರಡೋ ಮೂರೋ ಕಿಲೋ ಮೀಟರುಗಳಲ್ಲ, ನಾಲ್ಕು ರಾಜ್ಯಗಳಲ್ಲಿ ಆ ಕಾಲದಲ್ಲಿ ಬಿರ್ಸಾನ ಪ್ರಸಿದ್ಧಿ ಇತ್ತು ಎಂದರೆ ಆತನ ಸಾಮರ್ಥ್ಯ ನಿಮಗೆ ಅರ್ಥ ಆಗಬಹುದು. ಇಂದು ಅಂತಹ ಶಕ್ತಿವಂತನ ಪುಣ್ಯತಿಥಿ. ಇಂದು ಬುಡಕಟ್ಟಿನ ಬಿರ್ಸಾ ಮುಂಡ ಹೆಸರಿನಲ್ಲಿ ರಾಂಚಿಯ ವಿಮಾನ ನಿಲ್ದಾಣ, ಬಿರ್ಸಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಿಂಡ್ರಿ, ಬಿರ್ಸಾ ಮುಂಡ ವನವಾಸಿ ಛತ್ರವಾಸ್ ಕಾನ್ಪುರ್, ಪುರುಲಿಯದ ಸಿಧೋ ಕನ್ಹೋ ಬಿರ್ಸಾ ವಿಶ್ವವಿದ್ಯಾಲಯ, ಬಿರ್ಸಾ ಕೃಷಿ ವಿಶ್ವವಿದ್ಯಾಲಯ ಹೀಗೆ ಹಲವು ಸ್ಮಾರಕಗಳನ್ನು ನಿರ್ಮಿಸಿ ಗೌರವಿಸಲಾಗಿದೆ. ಈ ಕಟ್ಟಡಗಳ ಆಚೆಗೂ ಜನರ ಮನದಲ್ಲಿ ಭಗವಾನನಾಗಿ ನಿಂತಿರುವ ಇಂದಿಗೂ ಧರ್ತಿ ಆಭ ಆಗಿಯೇ ಇದ್ದಾನೆ. ಬದುಕಿದರೆ ಬಿರ್ಸಾನಂತೆ ಬದುಕಬೇಕು. ಬಿರ್ಸಾ ಮುಂಡ ಕೀ ಜೈ ಹೋ.
**********************************************************************************************************

ಸಚಿನ್ ಪಾರ್ಶ್ವನಾಥ್

ಹವ್ಯಾಸಿ ಬರಹಗಾರ
ಬ್ಯಾಕೋಡು, ತುಮರಿ
ಸಾಗರ ತಾಲೂಕು