ಗಾಂಧೀಜಿ ಮತ್ತು ಗೋಮಾತೆ

ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣಭಾರತದ ಮಾನಬಿಂದುಗಳಲ್ಲಿ ಗೋವೂ ಒಂದು. ಈ ಭೂಮಿಯಲ್ಲಿ ಗೋಸಂರಕ್ಷಣೆಗಾಗಿ ಜೀವವನ್ನೇ ತೆತ್ತ ಮಹಾತ್ಮರ ವಿವರ ಪುರಾಣ ಇತಿಹಾಸಗಳಲ್ಲೆಲ್ಲ ಬರುತ್ತದೆ. ಈ ಪ್ರಪಂಚದಲ್ಲಿ ಚರಾಚರಗಳಲ್ಲೆಲ್ಲ ದೇವರನ್ನು ಕಂಡ ಭೂಮಿ ಭಾರತ. ಗೋವಿನಲ್ಲಿ ಎಲ್ಲ ದೇವತೆಗಳೂ ವಾಸ ಮಾಡುತ್ತಾರೆ ಎನ್ನುವ ಶ್ರದ್ಧೆ ನಮ್ಮದು. ಗಾಂಧೀಜಿಯವರಲ್ಲಿಯೂ ಈ ಭಾವ ಈ ಶ್ರದ್ಧೆ ಉಚ್ಚಕೋಟಿಯದ್ದಾಗಿತ್ತು. ಗೋತಳಿಯ ಸಂರಕ್ಷಣೆ ಗೋಸೇವೆಯ ಮಖ್ಯವಾದ ವಿಷಯ ಎಂದು ಮಹಾತ್ಮಾ ಗಾಂಧಿ ಹೇಳುತ್ತಿದ್ದರು. ’ಹಣದ ಮಾನದಲ್ಲಿ ಮಾತ್ರ ನೋಡುವವರಿಗೆ ಹಾಲು ನೀಡುವ ಆಕಳನ್ನು ಬಿಟ್ಟು ಉಳಿದೆಲ್ಲ ಹಸುಗಳನ್ನು ಕಸಾಯಿಖಾನೆಗೆ ದಬ್ಬಿಬಿಡಬಹುದು ಅನಿಸುವುದು ಸಹಜ. ಇಂತಹ ಆರ್ಥಿಕತೆಗೆ ಆತ್ಮವೇ ಇರುವುದಿಲ್ಲ, ಮತ್ತು ಇಂತಹ ಕರುಣೆರಹಿತ ಅರ್ಥನೀತಿಗೆ ಭಾರತದಲ್ಲಿ ಅವಕಾಶವಿಲ್ಲ’ ಎಂದಿದ್ದರು.


ಗೋರಕ್ಷಣೆ ಗೋಸೇವೆ ಕುರಿತ ಗಾಂಧೀಜಿಯವರ ಚಿಂತನೆ ತುಂಬಾ ಆಳವಾದದ್ದು. ಭಾರತದ ಕೃಷಿ, ಆರ್ಥಿಕತೆ, ಪರಂಪರೆಯ ಶ್ರದ್ಧೆ ಮತ್ತು ಸಹಜ ಮಾನವೀಯತೆಯನ್ನು ಆಧರಿಸಿದ್ದು ಗೋಪಾಲನೆ. ಈ ಕುರಿತು ೧೯೨೧ ಅಕ್ಟೋಬರ್ ೬ರಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಅವರು ಬರೆದ ವಾಕ್ಯಗಳು ಕಾವ್ಯವೇ ಆಗಿವೆ. ಅಲ್ಲಿ ಅವರು ಬರೆಯುತ್ತಾರೆ ’ಹಸುವೆಂದರೆ ಕರುಣೆಯ ಕಾವ್ಯ. ಈ ಸಭ್ಯ ಪಶುವಿನ ಸಂಪರ್ಕದಲ್ಲಿ ಬಂದವರಿಗೆ ಕರುಣೆ ಅನುಭವಕ್ಕೆ ಬರುತ್ತದೆ. ಗೋಸಂರಕ್ಷಣೆಯೆಂದರೆ ದೇವಸೃಷ್ಟಿಯ ಮೂಕಲೋಕದ ರಕ್ಷಣೆಯಂತೆ. ನಮ್ಮ ಪ್ರಾಚೀನ ಋಷಿಪರಂಪರೆ ಗೋಪಾಲನೆಯೊಂದಿಗೆ ಆರಂಭವಾಯಿತು. ಮಾತಿಲ್ಲದ ಜೀವಗಳು ರಕ್ಷಣೆಗಾಗಿ ಮನುಷ್ಯನನ್ನು ಕೇಳುವಂತಿದೆ ಈ ಪರಂಪರೆ.’

Mahatma Gandhi


೧೯೨೪ ಜೂನ್ ೨೬ರಂದು ಯಂಗ್ ಇಂಡಿಯಾ ಪತ್ರಿಕೆಯಲ್ಲಿ ಬರೆದ ಸಾಲುಗಳು ಹೀಗಿವೆ. ’ಮನುಷ್ಯೇತರ ಜೀವಿಗಳಲ್ಲಿ ಅತ್ಯಂತ ಪವಿತ್ರವಾದುವೆಂದರೆ ಗೋವುಗಳು. ಎಲ್ಲ ಮೂಕಪ್ರಾಣಿಗಳ ಪರವಾಗಿ ಅವು ನಮ್ಮಲ್ಲಿ ನ್ಯಾಯಕ್ಕಾಗಿ ಮೊರೆಯಿಡುತ್ತಿವೆ. ಮೊದಲನೆಯದಾಗಿ ಬದುಕುವ ಅವಕಾಶಕ್ಕಾಗಿ ಅವಳು ಅವಳ ಕಣ್ಣುಗಳ ಮೂಲಕ ಮಾತಾಡುತ್ತಿದ್ದಾಳೆ. ನಮ್ಮನ್ನು ಕೆಟ್ಟದಾಗಿ ಬಳಸಿಕೊಳ್ಳುವುದಕ್ಕಾಗಿ, ಕೊಲ್ಲುವುದಕ್ಕಾಗಿ, ನಮ್ಮ ಮಾಂಸವನ್ನು ತಿನ್ನಲಿಕ್ಕಾಗಿ ನಿಮ್ಮನ್ನು ನೇಮಿಸಿಲ್ಲ. ನಮ್ಮನ್ನು ಸ್ನೇಹದಿಂದ ರಕ್ಷಿಸುವುದಕ್ಕಾಗಿ ನೀವಿದ್ದೀರಿ ಎಂದು ಹೇಳುತ್ತಿದ್ದಾಳೆ.’ ಗಾಂಧೀಜಿ ಮತ್ತೆ ಹೇಳುತ್ತಾರೆ ’ನಾನು ಗೋವನ್ನು ಪೂಜಿಸುತ್ತೇನೆ ಮತ್ತು ಇಡೀ ಜಗತ್ತನ್ನು ಎದುರುಹಾಕಿಕೊಂಡರೂ ಸರಿಯೇ ಗೋವಿನ ರಕ್ಷಣೆಗೆ ನಿಲ್ಲುತ್ತೇನೆ.’


ಗಾಂಧೀಜಿಯವರ ಗೋಭಕ್ತಿ ವಿಶೇಷವಾದುದು. ಸಸ್ಯಾಹಾರ ಶಾಖಾಹಾರದ ಬಗ್ಗೆ ಅವರಿಗಿದ್ದ ಒಲವಿನಿಂದಾಗಿ ಗೋಪಾಲನೆ ಹೈನುಗಾರಿಕೆಯ ಕುರಿತು ಗಾಂಧೀಜಿಯವರಿಗೆ ವಿಶೇಷ ಕಾಳಜಿಯಿತ್ತು. ೧೯೪೦ರ ಸೆಪ್ಟೆಂಬರ್ ೧೫ರಂದು ಬರೆದ ಲೇಖನದಲ್ಲಿ ಅವರು ಹೇಳುತ್ತಾರೆ ’ನಮಗೆ ಜನ್ಮನೀಡಿದ ತಾಯಿಗಿಂತ ಗೋಮಾತೆ ಹೆಚ್ಚಿನವಳೆಂದು ನನ್ನ ಭಾವನೆ. ಹುಟ್ಟಿದಾಗ ಒಂದು ವರ್ಷ ಹಾಲುಣಿಸಿದ ತಾಯಿ ವೃದ್ಧಾಪ್ಯದಲ್ಲಿ ಮಗ ನನ್ನ ಸೇವೆ ಮಾಡಲಿ ಎಂದು ನಿರೀಕ್ಷಿಸುತ್ತಾಳೆ. ಆದರೆ ಗೋಮಾತೆ ಹುಲ್ಲು ಹಿಂಡಿಗಳಿಗಿಂತ ಹೆಚ್ಚಿನದನ್ನು ನಿರೀಕ್ಷಿಸದೇ ಜೀವನಪರ್ಯಂತ ಹಾಲು ನೀಡುತ್ತಾಳೆ. ಗೋಮಾತೆ ಅನಾರೋಗ್ಯಕ್ಕೆ ತುತ್ತಾಗುವುದೂ ಅಪರೂಪ, ಸತ್ತಮೇಲೂ ಹಸು ಉಪಯುಕ್ತ. ಅದರ ಪ್ರತಿ ಅಂಗವೂ ಮಾನವಲೋಕಕ್ಕೆ ಉಪಕಾರಿಯಾಗುತ್ತದೆ. ನಾನು ಹೀಗೆ ಹೇಳುತ್ತಿರುವುದು ಜನ್ಮನೀಡಿದ ತಾಯಿಯ ಗೌರವವನ್ನು ಕಡಿಮೆ ಮಾಡುವುದಕ್ಕಲ್ಲ.

ಗೋಮಾತೆಯ ವಿಶೇಷವನ್ನು ಎತ್ತಿ ಹೇಳುವುದಕ್ಕೆ, ಗೋಪೂಜೆಯ ಮಹತ್ವವನ್ನು ತಿಳಿಸುವುದಕ್ಕೆ. ಭಾರತೀಯರಿಗೆ ಗೋಸಂಪತ್ತಿನ ರಕ್ಷಣೆ ಕರ್ತವ್ಯವೇ ಆಗಿದೆ. ಮಾನವ ವಿಕಾಸದಲ್ಲಿ ಗೋಸೇವೆ ಅತಿ ಮುಖ್ಯ ಭಾಗ ಎಂದು ನನ್ನ ಭಾವನೆ. ಗೋಸೇವೆಯಿಂದಾಗಿ ಮಾನವ ಲೋಕಕ್ಕೆ ಮೂಕಸೃಷ್ಟಿಯೊಡನೆ ಅನುಸಂಧಾನ ಒದಗುತ್ತದೆ. ಮಾನವನ ಅತ್ಯುತ್ತಮ ಸಂಗಾತಿ ಗೋವುಗಳು. ನಮ್ಮ ಕೃಷಿಯನ್ನು ಸಾಧ್ಯವಾಗಿಸಿದವಳು ಈ ಗೋಮಾತೆ’ ಹೀಗೆ ಹೇಳುವ ಗಾಂಧೀಜಿಯವರು ಸನಾತನ ಭಾರತದ ಸಮರ್ಥ ಪ್ರತಿನಿಧಿಯೇ ಆಗಿದ್ದರು.

ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ