ಸ್ಮಶಾನ ಕಾಯುವವರು ತಿಂಗಳ ಸಂಬಳ ಪೂರ್ತಿ ಕೊಟ್ಟರು

ಲೇಖನ ಕೃಪೆ: ವಾದಿರಾಜ

ಬಿಬಿಎಂಪಿ ವ್ಯಾಪ್ತಿಗೆ ಬರುವ ಅರವತ್ತು ರುದ್ರಭೂಮಿ ಹಾಗೂ  ಹತ್ತು ವಿದ್ಯುತ್‌ ಚಿತಾಗಾರಗಳ 148 ನೌಕರರು ತಮ್ಮ ಒಂದು ತಿಂಗಳ ಪೂರ್ತಿ ಸಂಬಳವನ್ನು ಮುಖ್ಯಮಂತ್ರಿಗಳ ಕೊರೊನಾ ಸಂತ್ರಸ್ತರ ಸಹಾಯ ನಿಧಿಗೆ ನೀಡಿದ್ದಾರೆ .

ತಲಾ 14 ರಿಂದ 17 ಸಾವಿರದಷ್ಟು ತಿಂಗಳ ವೇತನವನ್ನು ಪಡೆಯುತ್ತಿದ್ದ ಇವರು ತಮ್ಮ ಪೂರ್ತಿ ವೇತನವನ್ನು ಪಾಲಿಕೆಯ ಆಯುಕ್ತರ ಮೂಲಕ ಸರ್ಕಾರಕ್ಕೆ ತಲುಪಿಸಿದ್ದಾರೆ .

ವರ್ಷದ ಹಿಂದೆ ಈ ನೌಕರರ ತಿಂಗಳ ಸಂಬಳ ಐದಾರು ಸಾವಿರದಷ್ಟು ಇತ್ತು . ಕೇಂದ್ರ ಸರ್ಕಾರದ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರಾಗಿರುವ ಜಗದೀಶ ಹಿರೇಮನಿ ಈ ನೌಕರರ ಸಭೆ ನೆಡಸಿ , ರಾಜ್ಯ ಸರಕಾರ , ಮಹಾನಗರ ಪಾಲಿಕೆ ಅಧಿಕಾರಿಗಳ ಜತೆ ಮಾತುಕತೆ , ಒತ್ತಡ ತಂದು ಕನಿಷ್ಠ ವೇತನ ಸಿಗಲು ಕಾರಣರಾಗಿದ್ದರು .

ತಿಂಗಳ ಸಂಬಳ ನೀಡಿದ ಸುದ್ದಿ ತಿಳಿದ ಜಗದೀಶ ಹಿರೇಮನಿ ಹಾಗು ವಿಧಾನ ಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಅನ್ಯಾನ್ಯ ಸ್ಮಶಾನಗಳಿಗೆ ತೆರಳಿ ನೌಕರರು , ಕುಟುಂಬಸ್ಥರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದರು ಮತ್ತು ದಿನಸಿ ಸಾಮನುಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ನೀಡಿದರು .

ರುದ್ರಭೂಮಿ , ವಿದ್ಯುತ್ ಚಿತಾಗಾರ ನೌಕರರ ಘಟಕದ ಕಾರ್ಯದರ್ಶಿ ಹಾಗು ಬೆಂಗಳೂರಿನ ಕಾಕ್ಸ್ ಟೌನ್ ಸಮೀಪದ ಕಲ್ಪಳ್ಳಿ ರುದ್ರಭೂಮಿಯಲ್ಲಿ ಗುಂಡಿ ತೆಗೆಯುವ ಕಾಯಕ ನೆಡೆಸುವ ಸೌರಿರಾಜು ‘ ನಾವು ನೋಡದೇ ಇರುವ ಸಾವು ಯಾವುದಿದೆ ‘ ಎಂದರು . ಕೆಲ ದಿನಗಳ ಹಿಂದೆಯಷ್ಟೆ ಕೊರಾನಾ ವೈರಸ್ ನಿಂದ ಸಾವು ಕಂಡ ಹಿಂದೂಪುರ ಮೂಲದ ವ್ಯಕಿಯ ಅಂತ್ಯಕ್ರಿಯೆಯನ್ನು ಎಲ್ಲಾ ಮುನ್ನೆಚ್ಚರಿಕೆಯೊಂದಿಗೆ ಇದೇ ಕಲ್ಪಳ್ಲಿ ಮಸಣದಲ್ಲಿ ಸೌರಿರಾಜು ನೇರವೇರಿಸಿದ್ದರು .

ತಿಂಗಳ ವೇತನ ನೀಡಲು ತಮ್ಮವರನ್ನು ಪ್ರೇರೇಪಿಸಿದ ನೌಕರರ ಸಂಘದ ಅಂತೋಣಿ ಡಿ , ಸೌರಿರಾಜು , ರವಿ ಎನ್ , ವೆಂಕಟೇಶ ಎನ್ ರವರಿಗೆ ವಂದನೆಗಳು.