ಅವರ ರಕ್ತದಿಂದಾಗಿ ತೀರ್ಥಕ್ಷೇತ್ರವಾಯಿತು ಕಾರ್ಗಿಲ್ #21YearsOfKargilVijay

ಲೇಖನ : ಪ್ರಮೋದ್ ನವರತ್ನ

ಸರಿಯಾಗಿ 21 ವರ್ಷಗಳ ಹಿಂದೆ, 1999ರ ಮೇ-ಜುಲೈ ಸಮಯ. ಎಲ್ಲ ಪತ್ರಿಕೆಗಳಲ್ಲಿ, ಟಿ.ವಿ. ನ್ಯೂಸ್ ಚಾನೆಲ್‍ಗಳಲ್ಲಿ ಒಂದೇ headlines. ಭಾರತದ ಒಂದು ‘ಸಣ್ಣ’ ಭೂಭಾಗದ ಕುರಿತಾಗಿ ‘ದೊಡ್ಡ’ ಸುದ್ದಿ. ಹೊರದೇಶದಲ್ಲಿಯೂ ಹಲವೆಡೆ ಅದರದೆ ಚರ್ಚೆ. ಎಲ್ಲ ಭಾರತೀಯರ ಮನಸ್ಸಿನ ಕಳವಳಕ್ಕೆ ಕಾರಣವಾಗಿದ್ದ, ಚರ್ಚೆಗೆ ಗ್ರಾಸವಾಗಿದ್ದ ಆ ಭೂಭಾಗವೇ ಕಾರ್ಗಿಲ್’.

ಕಾರ್ಗಿಲ್- ವರ್ಷದ ಬಹಳಷ್ಟು ಸಮಯ 4-5 ಅಡಿಗಳಷ್ಟು ಹಿಮವೇ ತುಂಬಿರುವ ಪರ್ವತಶ್ರೇಣಿ. ಸೈನಿಕರು ಇರಲು ದುಸ್ಸಾಧ್ಯವಾದಂತಹ ಈ ಸಮಯಗಳಲ್ಲಿ, ಒಂದು ಅಲಿಖಿತ ನಿಯಮದಂತೆ ಭಾರತ-ಪಾಕ್ ಎರಡೂ ಸೈನ್ಯಗಳೂ ಹಿಂದಕ್ಕೆ ಸರಿಯುತ್ತದೆ.ಮತ್ತೆ 4 ತಿಂಗಳ ನಂತರ ವಾಪಸ್ ಬರುತ್ತಾರೆ. ಈ ಸಮಯದ ದುರ್ಲಾಭ ಪಡೆದು ಪಾಕಿಗಳು ಒಳನುಸುಳಿಬಿಟ್ಟರು.

‘ವಿಜಯಾ’ರಂಭ..

ಸುಮಾರು 800-850 ಜನ ಶತ್ರುಗಳು ಗಡಿಯೊಳಗೆ 25 ಕಿ.ಮೀ. ಒಳನುಸುಳಿರುವ ಸುಳಿವು ಸಿಕ್ಕಿತು. ಆರಂಭವಾಯಿತು ಆಪರೇಷನ್ ವಿಜಯ್’.

ಮೇ 14, ಮೇಜರ್ ಸೌರವ್ ಕಾಲಿಯಾ ನೇತೃತ್ವದಲ್ಲಿ 6 ಸೈನಿಕರು ಹೋದವರು, ವಾಪಸ್ ಬರಲೇ ಇಲ್ಲ.ಅವರನ್ನು ಅಮಾನುಷವಾಗಿ ಹಿಂಸಿಸಿ, ಕೊಲ್ಲಲಾಗಿತ್ತು.ಸೆರೆ ಸಿಕ್ಕ ಸೈನಿಕರಿಗೆ ಹಿಂಸಿಸಬಾರದು ಎನ್ನುವ ಎಲ್ಲಾ ಒಪ್ಪಂದಗಳನ್ನು ಗಾಳಿಗೆ ತೂರಿಸಿದ್ದರು ಪಾಕಿಗಳು.

ವಾಯುಪಡೆಯ ಧಾಳಿ ಆರಂಭವಾಯಿತು. ಮೇ 27, ನಮ್ಮ ಎರಡು MIG ವಿಮಾನಗಳು ನಾಶವಾಯಿತು, ಕ್ಷಿಪಣಿಯಿಂದ ಹೊಡೆದುರುಳಿಸಿದ್ದರು.ಅದರಲ್ಲಿದ್ದ ಲೆ.ನಚಿಕೇತ ಬಂಧಿತನಾದ.ಅವನನ್ನು ಹುಡುಕಲು ಹೋದ ಸ್ಕ್ವಾ.ಲೀಡರ್ ಅಜಯ್ ಅಹುಜಾನನ್ನು ಹಿಡಿದು Point blank range ನಲ್ಲಿ ಕೊಂದರು.  ಕ್ಷಿಪಣಿ ಹೊಂದಿರಬೇಕಾದರೆ ಪಾಕ್ ಸೈನ್ಯದ ‘ಕೈವಾಡ’ ಖಾತ್ರಿಯಾಯಿತು.

ಭೂಸೇನೆ ಮತ್ತು ವಾಯುಸೇನೆಯ ಜೊತೆಗೆ ರಾಜತಾಂತ್ರಿಕ ಒತ್ತಡ ತರುವುದು, ಹೀಗೆ ಮೂರು ರೀತಿಯ ಪ್ರಯತ್ನ ಮುಂದುವರೆಯಿತು.

ಶಕ್ತಿಯ ತುಲನೆ

ಭಾರತ ಮತ್ತು ಪಾಕ್ ಸೈನ್ಯದ ಶಕ್ತಿಯ ತುಲನೆ ಪ್ರಸ್ತುತವಾದೀತು.ಅವರ ಉತ್ಪಾದನೆಯ 7.5% ರಕ್ಷಣೆಗಾದರೆ ನಮ್ಮದು ಕೇವಲ 2.3%.ಅವರ ಬಳಿ ಹಿಮಪ್ರದೇಶಕ್ಕೆಂದೇ ತಯಾರಾದ ‘snow goggles’, ನಮ್ಮ ಬಳಿ 50ರ ದಶಕದ ಸಾಧಾರಣ ಕನ್ನಡಕ.ಚಳಿಯಿಂದ ರಕ್ಷಿಸಲು ಅವರ ಬಳಿ ಉತ್ತಮವಾದ ತೆಳುವಾದ ಜಾಕೆಟ್‍ಗಳಾದರೆ ನಮ್ಮದು ಹಳೇ ಕಾಲದ ಭಾರವಾದ ‘ಪರ್ಕಾ’ ಸ್ವೆಟರ್.ನಾವು INSAS 5.6 ಮಿ.ಮಿ. ಗನ್‍ನಿಂದ ಒಂದು ಸುತ್ತಿಗೆ 3 ಗುಂಡು ಹಾರಿಸಿದರೆ ಅವರು latest G -3 ಗನ್‍ನಿಂದ ಸುತ್ತಿಗೆ 20 ಗುಂಡು ಹಾರಿಸಬಲ್ಲವರಾಗಿದ್ದರು.ಗುಂಡಿನ ಧಾಳಿಯಿಂದ ರಕ್ಷಿಸಲು ಸಾಧಾರಣ ಮರಳು ಮೂಟೆ, ಅವರ ಬಳಿ ಸ್ವಿಸರ್‍ಲಾಂಡ್‍ನ ‘ರಕ್ ಸ್ಯಾಕ್’ ಗಳು.

ನಮ್ಮ ಸೈನ್ಯದ ಸೌಲಭ್ಯಗಳನ್ನು ಸಾಧಾರಣ ಸ್ಥಿತಿಗೆ ತರಲು ಇದ್ದ ಕೊರತೆ 25,000 ಕೋಟಿ.ಇದಕ್ಕಿಂತ ಮಿಗಿಲಾಗಿ ಅವರು ಪರ್ವತದ ಶಿಖರದಲ್ಲಿದ್ದರೆ ನಾವು ಕೆಳಗಿನಿಂದ ಹೋರಾಡಬೇಕು. ಎಲ್ಲ ರೀತಿಯಲ್ಲೂ ಅವರಿಗೇ ಅನುಕೂಲಕರ.

ಆದರೆ ಈ ಎಲ್ಲಾ ಕೊರತೆಗಳನ್ನು ನಮ್ಮ ಸೈನಿಕರು ತಮ್ಮ ದುರ್ದಮ್ಯ ಮನೋಬಲ, ಅಸದೃಶ ಮಾತೃಪ್ರೇಮ, ಅಸ್ಖಲಿತ ರಾಷ್ಟ್ರನಿಷ್ಠೆ, ಕೆಚ್ಚು, ಕಲಿತನಗಳಿಂದ ನೀಗಿಸಿ ಹೋರಾಡಿದರು.

ಉತ್ಸ್ಫೂರ್ತ ಹೋರಾಟ

ಆಗಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರು ಜೂನ್ 13ರಂದು ಕಾರ್ಗಿಲ್‍ಗೆ ಭೇಟಿ ನೀಡಿ ’ಇಡೀ ದೇಶ ನಿಮ್ಮೊಂದಿಗಿದ್ದೇವೆ’ ಎಂದು ಸೈನಿಕರಿಗಿತ್ತ ಭರವಸೆ ಅವಿಸ್ಮರಣೀಯ.ಇತಿಹಾಸದಲ್ಲೇ ಮೊದಲ ಬಾರಿಗೆ ಸ್ವತ: ಪ್ರಧಾನಿ ಯುದ್ಧರಂಗಕ್ಕೆ ಭೇಟಿ ನೀಡಿದ್ದು ಎಲ್ಲ ಸೈನಿಕರಲ್ಲಿ ನವೋತ್ಸಾಹ ಚಿಮ್ಮಿಸಿತು.

‘ನಾವೆಂದೂ ಬಾಗಿಲ್ಲ, ಮುಂದೆ ಬಾಗುವುದೂ ಇಲ್ಲ’,ಪಾಕಿಸ್ಥಾನದ ಬಗ್ಗೆ ವಾಜಪೇಯಿಯಷ್ಟು ನೇರವಾಗಿ, ಖಾರವಾಗಿ ಯಾವ ಪ್ರಧಾನಿಯೂ ಮಾತಾಡಿರಲಿಲ್ಲ. ಕ್ರಮೇಣ ಅಮೇರಿಕ,ಫ್ರಾನ್ಸ್,ಬ್ರಿಟನ್‍ಗಳೂ ಪಾಕಿಸ್ಥಾನವನ್ನು ಖಂಡಿಸಿತು.

ಹೋರಾಟ ಮಾತ್ರ ಅಹೋರಾತ್ರಿ ಸಾಗುತ್ತಲೇ ಇತ್ತು. ಜೂ.20ರಂದು 17,000 ಅಡಿ ಎತ್ತರದ ‘ಟೋಲೋಲಿಂಗ್’ ಪರ್ವತ ಶತ್ರುವಿನಿಂದ ಮುಕ್ತಿ ಪಡೆಯಿತು. ಜು.1 ದ್ರಾಸ್ ಸೆಕ್ಟಾರ್‍ನ ಮರುವಶ. ಜು.3ರ ಹೋರಾಟ ನಿರ್ಣಾಯಕವಾಗಿದ್ದು,ಅತ್ಯಂತ ಕಡಿದಾದ ಟೈಗರ್ ಹಿಲ್ಸ್ ಮೇಲೆ ಮತ್ತೊಮ್ಮೆ ‘ತ್ರಿವರ್ಣ ಧ್ವಜ’ ರಾರಾಜಿಸಿತು.ಪಾಕಿಗಳ ಪಲಾಯನ ಪ್ರಾರಂಭವಾಯಿತು. ಜು. 16 ಸಂಪೂರ್ಣ ಪ್ರದೇಶ ನಮ್ಮ ಕೈಸೇರಿತು.

ವೀರಗಾಥೆ..

ಕಾರ್ಗಿಲ್,ದ್ರಾಸ್,ಬಟಾಲಿಕ್ ಹೋರಾಟಗಳಲ್ಲಿ ನಮ್ಮ ಒಬ್ಬೊಬ್ಬ ಸೈನಿಕನದೂ ವೀರಗಾಥೆ , ಮೈ ನವಿರೇಳಿಸುವಂತಹದು.

  • ಟೋಲೋಲಿಂಗ್ ಶಿಖರದಿಂದ ಹೈದರಾಬಾದಿನ ಪದ್ಮಪಾಣಿ ಆಚಾರ್ಯ ತನ್ನ ತಂದೆಗೆ ಪತ್ರ ಬರೆಯುತ್ತಾನೆ ‘….ಇಷ್ಟು ಎತ್ತರದ, ಕೊರೆಯುವ ಚಳಿಯಲ್ಲಿ ನಿರ್ಭೀತನಾಗಿ ಹೋರಾಡಲು ನನಗೆ ಪ್ರೇರಣೆ, ಚಿಕ್ಕಂದಿನಲ್ಲಿ ನೀನು ಕಲಿಸಿದ ‘ಭಗವದ್ಗೀತೆ’ಯ ಪಾಠ….ಚೊಚ್ಚಲು ಹೆರಿಗೆಗೆ ಸಿದ್ಧಳಾಗುತ್ತಿರುವ ನಿನ್ನ ಸೊಸೆ(ನನ್ನ ಹೆಂಡತಿ)ಗೂ ಕೂಡಿಸಿ ‘ಭಗವದ್ಗೀತೆ’ ಹೇಳು, ಇದೇ ಸಂಸ್ಕಾರದೊಂದಿಗೆ ಆ ನನ್ನ ಮಗುವೂ ರೂಪುಗೊಳ್ಳಲಿ….’ ಈ ಪತ್ರ ತಲುಪುವ ಸ್ವಲ್ಪ ಮುನ್ನ telegram ಬಂದಿತ್ತು ‘ಅವನು ಸಮರರಂಗದಲ್ಲಿ ಮಲಗಿದ್ದ, ‘ವೀರಸ್ವರ್ಗ’’ ಪಡೆದಿದ್ದ’
  • ಕೇವಲ 10 ತಿಂಗಳು ಹಿಂದೆಯೇ ಮದುವೆಯಾಗಿದ್ದ ಮೇ. ರಾಜೇಶ್ ಅಧಿಕಾರಿಗೆ, ಹೆಂಡತಿಯ ಪತ್ರ ಬಂತು ನೈನಿತಾಲ್‍ನಿಂದ.ಒಂದು ಕೈನಲ್ಲಿ Map, ಒಂದು ಕೈನಲ್ಲಿ AK 47 ಹಿಡಿದಿದ್ದ, ಆ ಪತ್ರವನ್ನು ಜೇಬಿನಲ್ಲಿಡುತ್ತ ‘ನಾಳೆ ಓದೋಣ’ ಎಂದ.ಶತ್ರುಗಳ ಬಂಕರ್‍ನ ಧ್ವಂಸ ಅವನ ಗುರಿಯಾಗಿತ್ತು. ಆ ಹೋರಾಟ ಮಾಡುತ್ತಾ ವೀರಮರಣ ಅಪ್ಪಿದ.ಪತ್ರ ಅವನ ಜೇಬಿನಲ್ಲಿ ಸುರಕ್ಷಿತವಾಗಿಯೇ ಇತ್ತು.ಆದರೆ, ಅದನ್ನು ಓದುವ ಆ ‘ನಾಳೆ’ ಮಾತ್ರ ಅವನ ಪಾಲಿಗೆ ಬರಲೇ ಇಲ್ಲ. ನಮ್ಮೆಲ್ಲರ ‘ನಾಳೆ’ಗಾಗಿ ಅವನ ‘ನಾಳೆ’ಯನ್ನು ಬಲಿಕೊಟ್ಟಿದ್ದ.
  • ಹರಿಯಾಣದ ದೇಸಲೂರು ಗ್ರಾಮದ ನಿವೃತ್ತ ಸೈನಿಕ ರಾಣಾಸಿಂಗ್‍ಗೆ 2 ಪ್ಯಾಕೆಟ್‍ಗಳು ತಲುಪಿತು.ಅವನ ಮಗ ಹವಾಲ್ದಾರ್ ಜೈಪ್ರಕಾಶ್ ಸಿಂಗ್‍ನ ‘ಚಿತಾಭಸ್ಮ’ ಅದು. ಜರ್ಜರಿತವಾಗಿದ್ದ ಪಾರ್ಥಿವ ಶರೀರವನ್ನು ತರಲಾರದೆ ಅಲ್ಲೇ ದಹಿಸಿದ್ದರು.ಆಗ, ತಂದೆ ರಾಣಾಸಿಂಗರ ಬಾಯಲ್ಲಿ ಬಂದ ಮಾತು ’ಧೀರರು ಮಾತ್ರ ದೇಶಕ್ಕಾಗಿ ಸಾಯುತ್ತಾರೆ’.
  • ಶತ್ರುಗಳ ಧಾಳಿಯ ಗುಂಡು ಇನ್ನೂ ಎದೆಯಲ್ಲಿದೆ, ಕಿಡಿ ಸಿಡಿದು ಬಲಗಣ್ಣು ಹೋಗಿದೆ, ತುಂಡಾದ ಎಡಗೈ,ಆಸ್ಪತ್ರೆಗೆ ಭೇಟಿಯಿತ್ತ ವಾಜಪೇಯಿಯವರಿಗೆ ಅಂಗ್ರೇಜ್ ಸಿಂಗ್ ಹೇಳುತ್ತಾರೆ ‘ಶತ್ರುಗಳು ಹಾರಿಸಿದ ಗುಂಡು ಸೈನಿಕರ ಎದೆಯಲ್ಲಿದೆ ಹೊರತು ಬೆನ್ನಲ್ಲಲ್ಲ ಅಂತ ದೇಶದ ಜನತೆಗೆ ತಿಳಿಸಿ ಸಾರ್…’

ಇಂತಹ ಮಕ್ಕಳನ್ನು ಪಡೆದ ಭಾರತಮಾತೆ ನಿಜವಾಗಿಯೂ ಧನ್ಯ!!

ಹೀಗೆ ಮೇ 8ರಿಂದ ಜುಲೈ 16ರವರೆಗೆ 74 ದಿನಗಳ ಯುದ್ಧ ನಡೆಯಿತು. ಅದರಲ್ಲಿ ಬಲಿದಾನಗೈದವರು ಕೇರಳದ ವಿಶ್ವನಾಥನ್, ತಮಿಳುನಾಡಿನ ಸರವಣನ್, ಆಂದ್ರದ ಪದ್ಮಪಾಣಿ ಆಚಾರ್ಯ, ಓರಿಸ್ಸಾದ ರಂಜನ್ ಸಾಹು, ರಾಜಸ್ಥಾನದ ಅಜಯ್ ಅಹುಜ, ಪಂಜಾಬಿನ ಜಸವೀಂದರ್ ಸಿಂಗ್, ಹರಿಯಾಣದ ಕ್ಯಾ.ವಿಜಯ್ ಗುಪ್ತ, ನವದೆಹಲಿಯ ಸೌರವ್ ಕಾಲಿಯಾ, ಉ.ಪ್ರ ಯಶವೀರ್ ಸಿಂಗ್,…..ಇನ್ನು ಕರ್ನಾಟಕದವರು ಹಿಂದೆ ಬೀಳಲಿಲ್ಲ ಹಾಸನದ ವೆಂಕಟ್, ಕೊಡಗಿನ ಮೇದಪ್ಪ, ಬೆಳಗಾವಿಯ ಸುಬ್ರಮಣ್ಯಂ, ಅಥಣಿಯ ಶೆಡೋಳೆ, ಚಿಕ್ಕೋಡಿಯ ಸಿದ್ಧಗೌಡ ಬಸವಗೌಡ ಪಾಟೀಲ,ಮುದ್ದೇ ಬಿಹಾಳದ ದಾವಳಸಾಬ್ ಅವಳಸಾಬ್ ಬಲವಠ್ ಹೀಗೆ ಮುಂದುವರೆಯುತ್ತದೆ 523 ಜನರ ಪಟ್ಟಿ.

‘ಕಾರ್ಗಿಲ್’ ಉತ್ತರ ಭಾರತದ ಒಂದು ಸಣ್ಣ ಭೂಭಾಗವಾದರೂ ಅದಕ್ಕಾಗಿ ಈ ದೇಶದ ಮೂಲೆಮೂಲೆಗಳಿಂದ ಹೋರಾಡಿದ್ದಾರೆ.ಏಕೆಂದರೆ    ‘ಏಕಾತ್ಮ ಭಾರತದ ಶತಕೋಟಿ ಕಾಯಗಳ ಧಮನಿಯೊಳು ಉಕ್ಕುತಿಹ ನೆತ್ತರೊಂದೇ’.ತಲೆಗೆ ಪೆಟ್ಟು ಬಿದ್ದಾಗ ಕೈ,ಕಾಲು,ಕಣ್ಣು, ಬುದ್ಧಿ ಎಲ್ಲವೂ ಕಾರ್ಯಪ್ರವೃತ್ತವಾಗುತ್ತದೆ . ಕಾಶ್ಮೀರ ಭಾರತದ ಮುಕುಟ.ಅದು ನಮ್ಮದೇ ಅವಿಭಾಜ್ಯ ಅಂಗ.

The Prime Minister Shri Atal Bihari Vajpayee shaking hands with the Army personnel during the function ‘Kargil Vijay Diwas-2001’ organised in honour of Kargil Martyrs, in New Delhi on July 26, 2001.

‘ಖೂನ್ ದಿಯಾ ಹೈ..’

ದೇಶಭಕ್ತಿರಸ ಕವಿ ಅಟಲ್‍ಜಿ ಒಂದು ಹಾಡಿನಲ್ಲಿ ಹೇಳುತ್ತಾರೆ ‘ಖೂನ್ ದಿಯಾ ಹೈ, ಮಗರ್ ನಹೀ ದೀ ಕಭೀ ದೇಶ ಕೀ ಮಾಠೀ ಹೈ. ಯುಗೋ ಯುಗೋಂಸೇ ಯಹೀ ಹಮಾರೀ ಬನೀ ಹುಯೀ ಪರಿಪಾಠೀ ಹೈ’ ರಕ್ತ ಕೊಟ್ಟಿರಬಹುದು, ನೆಲ ಬಿಟ್ಟುಕೊಟ್ಟಿಲ್ಲ, ಹಾಗೆಯೇ ಈ ಬಾರಿಯೂ ಆಯಿತು.

ಕಾರ್ಗಿಲ್ ಯುದ್ಧ ಮುಗಿದು ಇಡೀ ದೇಶ ‘ತಂಪಾಯಿತು’ ಶುಭ್ರ ಧವಳ ಹಿಮಪರ್ವತಗಳು ಸೈನಿಕರ ರಕ್ತದಿಂದ ‘ಕೆಂಪಾಯಿತು’ ಕಾರ್ಗಿಲ್ ಒಂದು ‘ತೀರ್ಥಕ್ಷೇತ್ರವಾಯಿತು’.

ಇಷ್ಟೊಂದು ಬೆಲೆಯ ಬಲಿದಾನಗಳು ಯಾಕಾಗಿ? ಕಾಶ್ಮೀರದಲ್ಲಿ ಏಕೆ ಈ ಬೂದಿ ಮುಚ್ಚಿದ ಕೆಂಡದ ಸ್ಥಿತಿ? ಈ ಸಮಸ್ಯೆಗಳ ಬೀಜ ಯಾವುದು? ಅದಕ್ಕೆ ಪರಿಹಾರ ಯಾವಾಗ? ಉತ್ತರಿಸುವರಾರು.

ಏನೇ ಆಗಲಿ ಮಹರ್ಷಿ ಕಶ್ಯಪರ ತಾಣ, ಆದಿ ಶಂಕರರ ತಪೋಭೂಮಿ, ಸಿಂಧು, ಝೇಲಂ, ಸಟ್ಲೆಜ್ ನದಿಗಳು ಹರಿವ ನಾಡು ‘ಕಾಶ್ಮೀರ’ ಎಂದೆಂದಿಗೂ ಭಾರತದ್ದೇ ಭಾಗ.

ಮಡಿದವರಿಗಾಗಿ..

ಸೈನಿಕರು ದೇಶಕ್ಕಾಗಿ ಮಡಿದರು, ಇಡೀ ಜನತೆ ಅವರಿಗಾಗಿ ಮಿಡಿದರು. ಸೈನಿಕರಿಗೆ ನೈತಿಕ ಬೆಂಬಲ, ವಿಶ್ವಾಸ, ಸತ್ತವರ ಮನೆಯವರಿಗೆ ಸಾಂತ್ವನ, ಹಣದ ಇತ್ಯಾದಿ ಸಹಾಯಗಳು ಹರಿದು ಬಂತು. ಜನರಲ್ಲಿದ್ದ ಸುಪ್ತ ‘ದೇಶಭಕ್ತಿ‘ ಎದ್ದಿತ್ತು. ಪ್ರವಾಹ, ಬರ,ಸುನಾಮಿ ಇತ್ಯಾದಿ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲೂ ದೇಶಭಕ್ತಿ ಜಾಗೃತವಾಗುವುದು . ದೇಶಭಕ್ತಿ ಎಂಬುದು ಕೇವಲ ಆಪತ್ಕಾಲಿನ ಭಾವೋದ್ವೇಗವಾಗಿರದೇ ನಮ್ಮ ನಿತ್ಯ ಜೀವನದಲ್ಲಿ ಸಹಜವಾಗಿ ಅಭಿವ್ಯಕ್ತವಾಗಲಿ.

ಕಾರ್ಗಿಲ್ ಯುದ್ಧ ಮುಗಿದಾಗ ನಿವೃತ್ತ ಜನರಲ್ ಕಾರ್ಯಪ್ಪನವರು ಒಂದು ಇಂಗ್ಲೀಷ್ ಪದ್ಯವನ್ನು ನೆನೆಪಿಸಿದರು

‘ಯುದ್ಧ ಬಂದೆರಗಿದಾಗ ಮಾತ್ರ ದೇಶ ಮತ್ತು ಸೈನಿಕರನ್ನು ನೆನೆಯುತ್ತಾರೆ, ಕೀರ್ತಿಸಿ ಅಟ್ಟಕ್ಕೇರಿಸುತ್ತಾರೆ. ಯುದ್ಧ ಮುಗಿದು ಶಾಂತವಾದೊಡನೆ ದೇಶವನ್ನೂ ಮರೆಯುತ್ತಾರೆ, ಸೈನಿಕರನ್ನೂ ಕಡೆಗಣಿಸುತ್ತಾರೆ’

ಹಾಗಾಗದಿರಲಿ, ಅಷ್ಟೆ!!

ಜೈ ಜವಾನ್, ಜೈ ಭಾರತ್ ಮಾತಾ

ಪ್ರಮೋದ್.ಎನ್.ಜಿ

pramoda.ng@gmail.com