ದೇಶದ 70 ಸಾವಿರ ಸ್ಥಾನಗಳಿಗೆ ವಿಸ್ತರಿಸಿದ ಆರ್ ಎಸ್ ಎಸ್ ಚಟುವಟಿಕೆ – ಭೈಯ್ಯಾಜಿ ಜೋಶಿ 

ತನ್ನ ವಿವಿಧ ಚಟುವಟಿಕೆಗಳ ಮೂಲಕ ಅರೆಸ್ಸೆಸ್ ದೇಶದ 70,000 ಸ್ಥಾನಗಳಿಗೆ ತಲುಪಿದೆ ಎಂದು ಸಂಘದ ಸರಕಾರ್ಯವಾಹರಾದ ಭೈಯಾಜಿ ಜೋಶಿ ತಿಳಿಸಿದ್ದಾರೆ. ಬೆಂಗಳೂರಿನ ಚನ್ನೇನಹಳ್ಳಿಯಲ್ಲಿರುವ ಜನಸೇವಾ ವಿದ್ಯಾಕೇಂದ್ರದಲ್ಲಿ ನಡೆದ ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ಸಭೆಯ ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ದೇಶದಲ್ಲಿ 3000 ಶಾಖೆಗಳು ಹೆಚ್ಚಾಗಿದೆ ಎಂದು ಅವರು ತಿಳಿಸಿದರು. ದೇಶದ 39,000 ಸ್ಥಾನಗಳಲ್ಲಿ, 63,500 ಶಾಖೆಗಳು ಹಾಗೂ 25,000 ಸ್ಥಾನಗಳಲ್ಲಿ 28,500 ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚಟುವಟಿಕೆಗಳು ನಡೆಯುತ್ತಿವೆ ಎಂದು ಹೇಳಿದರು.

1951 ರಿಂದ ಸಂಘದ ಪ್ರತಿನಿಧಿ ಸಭೆಗಳು 1975 -76 ರನ್ನು ಹೊರತುಪಡಿಸಿ ನಿರಂತರವಾಗಿ ಪೂರ್ವನಿಗದಿಯಾದಂತೆ ನಡೆದಿದ್ದಿದೆ. ಆದರೆ, ಪ್ರಸ್ತುತ ಸಂದರ್ಭದ ಸೂಕ್ಷ್ಮತೆಯನ್ನು ಪರಿಗಣಿಸಿ ಈ ಬಾರಿ ಪ್ರತಿನಿಧಿ ಸಭೆ ರದ್ದಾಗಿದೆ. ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಸಭೆ  ಮಾತ್ರ ನಡೆದಿದೆ.

ಸಂಪೂರ್ಣ ದೇಶದಲ್ಲಿ  18-22 ಮತ್ತು 20-35 ರ ವಯಸ್ಸಿನ ಒಂದು ಲಕ್ಷ  ಯುವಕರನ್ನು  ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ  ಮುಂದಿನ 2-3 ವರ್ಷಗಳಲ್ಲಿ ಸೂಕ್ತ ತರಬೇತಿ ನೀಡಿ ನಿಯೋಜಿಸಲು ಸಂಘವು ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಭೈಯ್ಯಾಜಿ ತಿಳಿಸಿದರು.

  • ಗ್ರಾಮ ವಿಕಾಸ- ದೇಶದಲ್ಲಿ ಈಗಾಗಲೇ 1000 ಗ್ರಾಮಗಳನ್ನು ಗುರುತಿಸಲಾಗಿದ್ದು, ಇದರಲ್ಲಿ ಶಿಕ್ಷಣ, ಆರೋಗ್ಯ, ಕೃಷಿ, ಸ್ವಾವಲಂಬನೆ, ಸಾಮಾಜಿಕ ಸಾಮರಸ್ಯಗಳನ್ನೊಳಗೊಂಡ 5 ಆಯಾಮಗಳ ಕೆಲಸವನ್ನು ಸಂಘ ಹಮ್ಮಿಕೊಳ್ಳಲಿದೆ.
  • ಪರಿಸರ ಸಂರಕ್ಷಣೆಯ ದೃಷ್ಟಿಯಿಂದ “ನೀರು ಉಳಿಸಿ, ಮರ ಬೆಳೆಸಿ, ಪ್ಲಾಸ್ಟಿಕ್ ತ್ಯಜಿಸಿ” ಈ ಸೂತ್ರದ ಅಡಿಯಲ್ಲಿ ಕೆಲಸ ಮಾಡಲು ಸಂಘವು ಸಮಾಜದೊಡನೆ ಕೈಜೋಡಿಸಿ ಕೆಲಸ ಮಾಡಲಿದೆ.

ಅಖಿಲ ಭಾರತೀಯ ಕಾರ್ಯಕಾರಿ ಮಂಡಲಿಯ ಪ್ರಸ್ತುತ ಬೈಠಕ್ ನಲ್ಲಿ ಕೆಳಗಿನ 3 ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಭೈಯ್ಯಾಜಿ ಜೋಶಿ ಅದರ ವಿವರಗಳನ್ನು ನೀಡಿದರು.

  1. ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ದೇಶದ ಸರ್ವೋಚ್ಚ ನ್ಯಾಯಾಲಯವು ಒಪ್ಪಿಗೆಯನ್ನು ಸೂಚಿಸಿದೆ. ಅ.ಭಾ.ಕಾ.ಮಂ ಈ ನಿರ್ಣಯವನ್ನು ಸ್ವಾಗತಿಸುತ್ತದೆ.
  2. ಜಮ್ಮುಕಾಶ್ಮೀರದಲ್ಲಿ ಜಾರಿಯಲ್ಲಿದ್ದ ೩೭೦ನೇ ವಿಧಿಯನ್ನು ತನ್ನ ಐತಿಹಾಸಿಕ ನಿರ್ಣಯದಲ್ಲಿ ಸರ್ಕಾರ ಸಂಸತ್ತಿನಲ್ಲಿ ರದ್ದು ಗೊಳಿಸಿತು. ಈ ಧೃಡ ನಿರ್ಧಾರಕ್ಕಾಗಿ ಕೇಂದ್ರಸರ್ಕಾರ ಮತ್ತು ಸಂಸತ್ತನ್ನು  ಆರ್ ಎಸ್ ಎಸ್ ಅಭಿನಂದಿಸುತ್ತದೆ.
  3. ಬಾಂಗ್ಲಾದೇಶ, ಪಾಕಿಸ್ತಾನ್ ಮತ್ತು ಆಫ್ಘಾನಿಸ್ತಾನ್ ಗಳಲ್ಲಿನ ಹಿಂದೂ,ಪಾರ್ಸಿ,ಸಿಖ್,ಬೌದ್ಧ, ಜೈನ ಮತ್ತು ಕ್ರೈಸ್ತರ ಮೇಲೆ ಧರ್ಮದ ಆಧಾರದ ಮೇಲೆ ದಮನಕ್ಕೊಳಗಾಗಿದ್ದವರಿಗೆ ಪೌರತ್ವವನ್ನು ಕೊಡುವ CAA ಕಾನೂನನ್ನು ಜಾರಿಗೊಳಿಸಿದ್ದಕ್ಕಾಗಿ ಕೇಂದ್ರಸರ್ಕಾರವನ್ನು ಅ.ಭಾ.ಕಾ.ಮಂ ಅಭಿನಂದಿಸುತ್ತದೆ.

CAA ಕುರಿತಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ದೇಶದ ಗೃಹಮಂತ್ರಿ ಮತ್ತು ಪ್ರಧಾನಿಗಳು ಜನರೊಡನೆ ಮುಕ್ತ ಸಂವಾದಕ್ಕಾಗಿ ಆಹ್ವಾನ ನೀಡಿದ್ದಾರೆ. ದೇಶದ ಅನ್ಯಾನ್ಯ ಸಂಘಟನೆಗಳು ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಪ್ರಯತ್ನಿಸುತ್ತಿವೆ. ಕೆಲ ರಾಜಕೀಯ ಪಕ್ಷಗಳು ರಾಜಕೀಯ ಲಾಭಕ್ಕೋಸ್ಕರ ಗೊಂದಲಗಳನ್ನು ಸೃಷ್ಟಿಸುತ್ತಿವೆ.
ಈ ಗೊಂದಲವನ್ನು ತಿಳಿಗೊಳಿಸುವ ಜವಾಬ್ದಾರಿ ಎಲ್ಲ ರಾಜಕೀಯ ನೇತಾರರ ಮೇಲಿದೆ.

ಕುಟುಂಬ ವ್ಯವಸ್ಥೆಯ ಬಗ್ಗೆ ಪ್ರಶ್ನೆಗೆ ಉತ್ತರಿಸುತ್ತ ಪಾಶ್ಚಾತ್ಯೀಕರಣ ಮತ್ತು ಆಧುನಿಕರಣದಲ್ಲಿ ವ್ಯತ್ಯಾಸವಿದೆ. ಆಧುನಿಕತೆಯ ಹೆಸರಿನಲ್ಲಿ ಪಾಶ್ಚಾತ್ಯೀಕರಣ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ  ಅಖಿಲ ಭಾರತೀಯ ಪ್ರಚಾರ ಪ್ರಮುಖ ಅರುಣ ಕುಮಾರ್, ಸಹ ಪ್ರಚಾರ ಪ್ರಮುಖರಾದ  ನರೇಂದ್ರ ಠಾಕೂರ್ ಹಾಗು ಸುನೀಲ್ ಅಂಬೇಕರ್ ಉಪಸ್ಥಿತರಿದ್ದರು.

RSS Sarkaryavah Suresh Bhaiyyaji Joshi addressed the ABKM Press conference at Bengaluru