67 ಸಾವಿರ ಸ್ಥಳ, 3.42 ಸ್ವಯಂಸೇವಕರು, 50.5 ಲಕ್ಷ ರೇಷನ್‌ ಕಿಟ್‌: ಇದು ಆರೆಸ್ಸೆಸ್  ಸೇವಾ ಸಾಧನೆ

ಕೃಪೆ: ನ್ಯೂಸ್13

ಕೊರೋನಾ ಬಿಕ್ಕಟ್ಟಿನ ನಡುವೆ ಜಗತ್ತು ನಿರಾಳವಾಗಿ ಉಸಿರಾಡುವುದನ್ನೇ ಮರೆತು ಬಿಟ್ಟಿದೆ. ಭಾರತವೂ ಸೇರಿದಂತೆ ಇಡೀ ವಿಶ್ವವೇ ಕೊರೋನಾ ಗೆಲ್ಲಲು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಇಂತಹ ದುರಂತ ಪರಿಸ್ಥಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಹಲವಾರು ನಿಯಂತ್ರಣ ನಿಯಮಗಳನ್ನು ಜಾರಿಗೊಳಿಸಿದ್ದರೂ, ಕಣ್ಣಿಗೆ ಕಾಣದ ವೈರಸ್ ಮಾತ್ರ ಎಗ್ಗಿಲ್ಲದೆ ತನ್ನ ಆಟ ಮುಂದುವರೆಸಿದೆ. ಒಂದು ಕಡೆಯಲ್ಲಿ ರೋಗದ ಭೀತಿ ಜನರನ್ನಾವರಿಸಿದ್ದರೆ, ಇನ್ನೊಂದು ಕಡೆ ದುಡಿಯಲು ಕೆಲಸವಿಲ್ಲದೆ, ಹೊಟ್ಟೆ ತುಂಬಿಸಿಕೊಳ್ಳಲು ಆಹಾರ ಒದಗಿಸಿಕೊಳ್ಳಲಾಗದೆ ಬಡಜನರು ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಧಾವಿಸಿದ್ದು ಆರೆಸ್ಸೆಸ್.


ಹೌದು, ದೇಶದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾಗಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರು ತಮ್ಮ ವೈಯಕ್ತಿಕತೆ, ಜೀವದ ಹಂಗು ತೊರೆದು ಜನಸೇವೆಗೆ ತೊಡಗುತ್ತಾರೆ. ಕೊರೋನಾ ಸಂದರ್ಭದಲ್ಲಿಯೂ ಆರೆಸ್ಸೆಸ್ ದೇಶಕ್ಕೆ, ದೇಶದ ಜನತೆಗೆ ನೀಡಿರುವ ಸೇವೆ ಅಷ್ಟಿಷ್ಟಲ್ಲ. ಬಡವರಿಗೆ ವಸತಿ, ಆಹಾರ ಒದಗಿಸುವ ಜೊತೆಗೆ ಅವರ ಆರೋಗ್ಯ ಕಾಳಜಿ ವಹಿಸುವಲ್ಲಿಯೂ ಅನೇಕ ಮಾದರಿ ಕೆಲಸಗಳನ್ನು ಮಾಡಿದೆ.

ದೇಶದಾದ್ಯಂತ ಸುಮಾರು 3,42,000 ಕ್ಕೂ ಹೆಚ್ಚು ಸ್ವಯಂಸೇವಕರು ಹಳ್ಳಿ ಹಳ್ಳಿಗಳಲ್ಲಿ ಜನರ ಅವಶ್ಯಕತೆಗಳನ್ನು ಪೂರೈಕೆ ಮಾಡಲು ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಈ ಸಂಕಷ್ಟದ ಸಂದರ್ಭದಲ್ಲಿ ಅಗತ್ಯವುಳ್ಳವರಿಗೆ ರಕ್ತದಾನ ಮಾಡುವ ಮೂಲಕವೂ ಜನರ ಜೀವ ಉಳಿಸುವತ್ತ ಸಂಘದ ಕಾರ್ಯಕರ್ತರು ಸಮಾಜಮುಖಿಯಾಗಿ ದುಡಿಯುತ್ತಿದ್ದಾರೆ.

ಈ ವರೆಗೆ ಸಂಘದ ಸದಸ್ಯರು ದೇಶದ 67,000 ಕ್ಕೂ ಅಧಿಕ ಸ್ಥಳಗಳಲ್ಲಿನ ಜನರಿಗೆ ಸೇವೆಯನ್ನು ಒದಗಿಸಿದ್ದಾರೆ. 50 ಲಕ್ಷಕ್ಕೂ ಅಧಿಕ ಬಡ, ನಿರ್ಗತಿಕ ಕುಟುಂಬಗಳಿಗೆ ಆಹಾರ ಧಾನ್ಯಗಳ ಕಿಟ್ ಗಳನ್ನು ಒದಗಿಸುವ ಕೆಲಸವನ್ನು ಸಂಘ ಮಾಡಿದೆ. ಮೂರು ಲಕ್ಷಕ್ಕೂ ಹೆಚ್ಚು ಜನರಿಗೆ ಆಹಾರ ಪೊಟ್ಟಣಗಳನ್ನು ಒದಗಿಸುವ ಮೂಲಕ ಜನರ ಹಸಿವಿನ ನೋವಿಗೆ ಸಾಂತ್ವನ ನೀಡುವ ಕೆಲಸವನ್ನೂ ಮಾಡಿದೆ. ಜೊತೆಗೆ 44 ಲಕ್ಷಕ್ಕೂ ಹೆಚ್ಚು ಜನರಿಗೆ ಫೇಸ್ ಮಾಸ್ಕ್ ವಿತರಿಸುವ ಮೂಲಕ ಕೊರೋನಾ ದಿಂದ ಕಾಪಾಡಿಕೊಳ್ಳುವುದಕ್ಕೆ ಸಹಾಯ ಮಾಡಿದ್ದಾರೆ. 4,89,824 ವಲಸೆ ಕಾರ್ಮಿಕರಿಗೂ ಸಂಘ ನೆರವನ್ನು ನೀಡುವ ಮೂಲಕವೂ ಸಮಾಜಮುಖಿ ಕೆಲಸಗಳನ್ನು ಯಾವುದೇ ಸ್ವಾರ್ಥವಿಲ್ಲದೆ ಮಾಡಿದೆ.

22,446 ರಷ್ಟು ರಕ್ತದಾನ ಶಿಬಿರಗಳನ್ನು ನಡೆಸಿ ಇಂತಹ ಆರೋಗ್ಯ ಬಿಕ್ಕಟ್ಟಿನ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸುವ, ರಕ್ತದ ತುರ್ತು ಅಗತ್ಯವುಳ್ಳ ರೋಗಿಗಳಿಗೆ ನೆರವಾಗುವ ಕೆಲಸವನ್ನು ಕೊರೋನಾ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ ದೇಶದಾದ್ಯಂತ ಮಾಡಿದೆ. ಕೊರೋನಾ ಬಿಕ್ಕಟ್ಟಿನ ಸಮಯದಲ್ಲಿ ಜನರು ರಕ್ತ ನೀಡುವುದಕ್ಕೂ ಹಿಂದೆ ಮುಂದೆ ನೋಡುತ್ತಿರುವ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಧೈರ್ಯದಿಂದ ಸ್ವಯಂ ಆಸಕ್ತಿ ತೆಗೆದುಕೊಂಡು ರಕ್ತ ನೀಡುವ ಮೂಲಕ ಅದೆಷ್ಟೋ ಜನರ ಜೀವ ಉಳಿಸುವ ಮಹತ್ಕಾರ್ಯ ಮಾಡಿದ್ದಾರೆ. ಆ ಮೂಲಕ ಕೊರೋನಾ ರೋಗಿಗಳ ಜೊತೆಗೆ ಇತರ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸೂಕ್ತ ಸಮಯಕ್ಕೆ ಸಿಗುವಂತೆ ಪ್ರಯತ್ನ ನಡೆಸಿದವರ ಸಾಲಿನಲ್ಲಿ ಆರೆಸ್ಸೆಸ್ ಮುಂಚೂಣಿಯಲ್ಲಿದೆ ಎಂದರೂ ತಪ್ಪಾಗಲಾರದು.

ಕೊರೋನಾ ಹಾಟ್ಸ್ಪಾಟ್ ಎಂದೇ ಪರಿಗಣಿತವಾಗಿರುವ ಮಹಾರಾಷ್ಟ್ರದ ಮುಂಬೈ ನಲ್ಲಿಯೂ ಆರೆಸ್ಸೆಸ್ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಮುಂಬೈನಲ್ಲಿ ಕೊರೋನಾ ದಿಂದ ಜನರನ್ನು ರಕ್ಷಿಸುವ ನಿಟ್ಟಿನಲ್ಲಿ ಯೂ ಅನೇಕ ಪರಿಹಾರ ಕ್ರಮಗಳನ್ನು ಸಂಘ ಕೈಗೊಂಡಿದೆ. ಎಪ್ರಿಲ್ ತಿಂಗಳಿನಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಜನರಿಗೆ ಪ್ರತಿ ನಿತ್ಯ ಅನ್ನ ದಾಸೋಹ ನೀಡುವ ಮೂಲಕ ಹಸಿವಿನಿಂದ ಬಳಲುತ್ತಿದ್ದ ಜನರ ಕಣ್ಣೀರೊರೆಸುವ ಕೆಲಸವನ್ನು ಆರೆಸ್ಸೆಸ್ ಮಾಡಿದೆ. ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ನ 24 ವಾರ್ಡ್ ಗಳಲ್ಲಿ ಆರೆಸ್ಸೆಸ್ ಅನ್ನಪೂರ್ಣ ಯೋಜನೆಯನ್ನೂ ಜಾರಿಗೊಳಿಸಿ, ಆ ಮೂಲಕವು ಹಸಿದವರ ಹೊಟ್ಟೆ ತುಂಬಿಸುವ ಕಾಯಕದಲ್ಲಿ ಆರೆಸ್ಸೆಸ್ ತೊಡಗಿಕೊಂಡಿದೆ. 17 ಕಮ್ಯೂನಿಟಿ ಕಿಚನ್ ಮೂಲಕ 17 ಲಕ್ಷ ಕ್ಕೂ ಅಧಿಕ ಬಡ ಮುಂಬೈ ನಿವಾಸಿಗಳಿಗೆ ಪ್ರತಿನಿತ್ಯ 2 ಹೊತ್ತು ಆಹಾರ ಒದಗಿಸುವ ಕೆಲಸವನ್ನು ಸಂಘದ ಸ್ವಯಂಸೇವಕರು ಮಾಡುತ್ತಿದ್ದಾರೆ. ಸುಮಾರು 40000 ಸಾವಿರ ಆಹಾರ ಪೊಟ್ಟಣವನ್ನು ಕೊರೋನಾ ನಿಯಂತ್ರಣಕ್ಕೆ ಶ್ರಮ ವಹಿಸಿ , ಜೀವ ಪಣಕ್ಕಿಟ್ಟು ದುಡಿಯುವ ಆರೋಗ್ಯ ರಕ್ಷಕ ಸಿಬ್ಬಂದಿಗಳಿಗೆ ಪ್ರತಿದಿನವೂ ನೀಡಲಾಗುತ್ತಿದೆ.
ಜೊತೆಗೆ ಅಗತ್ಯ ಉಳ್ಳವರಿಗೆ ಔಷಧಗಳನ್ನು ಕ್ಲಪ್ತ ಸಮಯಕ್ಕೆ ತಲುಪಿಸುವ ಕೆಲಸವನ್ನು ಆರೆಸ್ಸೆಸ್ ಮಾಡುತ್ತಿದೆ. ಕೇವಲ ಮುಂಬೈನಲ್ಲಿ ಮಾತ್ರವಲ್ಲದೆ ರಾಷ್ಟ್ರ ರಾಜಧಾನಿಯಲ್ಲಿಯೂ ಅನೇಕ ಸ್ವಯಂಸೇವಾ ಕಾರ್ಯಗಳ ಮೂಲಕವೇ ಆರೆಸ್ಸೆಸ್ ದೇಶಸೇವೆ ಮಾಡುತ್ತಿದೆ. ಕೊರೋನಾ ಸಂದರ್ಭದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಅಂದರೆ ದೇಶದ ಉದ್ದಗಲಕ್ಕೂ ಆರೆಸ್ಸೆಸ್ ಜೀವದ ಹಂಗು ತೊರೆದು ಸೇವೆ ಸಲ್ಲಿಸುವ ಮೂಲಕ ಮಾದರಿ ಕೆಲಸವನ್ನು ಇಂದಿಗೂ ಸದ್ದಿಲ್ಲದೆ ಮಾಡುತ್ತಿದೆ.

‘ಎದ್ದು ನಿಲ್ಲು ವೀರ ದೇಶ ಕರೆದಿದೆ, ಪಡೆಯ ಕಟ್ಟು ಧೀರ ಸಮರ ಕಾದಿದೆ’ ಎಂಬ ಹಾಡಿನ ಸಾಲಿನಂತೆ, ದೇಶ ಎದುರಿಸುತ್ತಿರುವ ಕೊರೋನಾ ಎಂಬ ಕಣ್ಣಿಗೆ ಕಾಣದ ವೈರಿಯ ವಿರುದ್ಧ ಆರೆಸ್ಸೆಸ್ ಸಮರ್ಥವಾಗಿ ಹೋರಾಟ ನಡೆಸುತ್ತಿದೆ. ಆ ಮೂಲಕ ದೇಶಕ್ಕೆ ಯಾವಾಗ ತನ್ನ ಅವಶ್ಯಕತೆ ಇದೆಯೋ ಆ ಸಂದರ್ಭದಲ್ಲಿ ತಮ್ಮ ಜೀವವನ್ನೂ ಲೆಕ್ಕಿಸದೆ ಆರೆಸ್ಸೆಸ್ ಸ್ವಯಂಸೇವಕರ ತಂಡ ಕಾರ್ಯೋನ್ಮುಖವಾಗುತ್ತದೆ. ಜೊತೆಗೆ ಯಾವುದೇ ಪ್ರಚಾರದ ತೆವಲಿಗೆ ಒಳಗಾಗದೆ ಸದ್ದಿಲ್ಲದೆಯೇ ದೇಶವನ್ನು, ದೇಶವಾಸಿಗಳ ಹಿತವನ್ನು ಕಾಯುವ ಕೆಲಸದಲ್ಲಿ ಆರೆಸ್ಸೆಸ್ ಮುಂಚೂಣಿಯಲ್ಲಿದ್ದು, ಆ ಮೂಲಕ ಸೇವೆಯ ನಿಜವಾದ ಅರ್ಥವನ್ನು ಜಗತ್ತಿಗೆ ತಿಳಿಸುವ ಕೆಲಸವನ್ನು ಸಂಘದ ಸಸಿಗಳು ಮಾಡುತ್ತಿವೆ ಎಂದರೂ ಅತಿಶಯವಾಗಲಾರದು.