ರಾಮ ಮಂದಿರದ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಪರಮ ಪೂಜನೀಯ ಸರಸಂಘಚಾಲಕರಾದ ಡಾ. ಮೋಹನ ಭಾಗವತರ ಉದ್ಬೋಧನ

ಶ್ರದ್ಧೇಯ ನೃತ್ಯಗೋಪಾಲ ಜಿ ಮಹಾರಾಜ್ ಸಹಿತ ಸಮಸ್ತ ಸಂತ ಚರಣ, ಭಾರತದ ಆದರಣೀಯ ಮತ್ತು ಜನಪ್ರಿಯ ಪ್ರಧಾನಮಂತ್ರಿಗಳೇ, ಉತ್ತರಪ್ರದೇಶದ ಮಾನ್ಯ ರಾಜ್ಯಪಾಲರೇ, ಉತ್ತರಪ್ರದೇಶದ ಮಾನ್ಯ ಮುಖ್ಯಮಂತ್ರಿಗಳೇ, ಸಮಸ್ತ ನಾಗರೀಕ ಸಜ್ಜನರೇ ಮತ್ತು ಮಾತಾ ಭಗಿನಿಯರೇ,

 

ಇಂದು ಆನಂದದ ಕ್ಷಣ, ಅನೇಕ ರೀತಿಗಳಲ್ಲಿ ಆನಂದವಿದೆ. ನಾವೆಲ್ಲರೂ ಒಂದು ಸಂಕಲ್ಪವನ್ನು ಸ್ವೀಕರಿಸಿದ್ದೆವು. ನನಗಿನ್ನೂ ನೆನಪಿದೆ. ನಾವು ಒಂದು ಹೆಜ್ಜೆಯನ್ನು ಮುಂದಿಡುವಾಗ, ನಮ್ಮ ಅಂದಿನ ಸರಸಂಘಚಾಲಕರಾಗಿದ್ದ ಬಾಳಾ ಸಾಹೇಬ್ ದೇವರಸರು ಒಂದು ಮಾತನ್ನು ಹೇಳಿದ್ದರು – ಅತ್ಯಂತ ಪರಿಶ್ರಮದಿಂದ ಇಪ್ಪತ್ತು ಮೂವತ್ತು ವರ್ಷಗಳ ಕಾಲ ಕೆಲಸ ಮಾಡಬೇಕಾಗುತ್ತದೆ (ರಾಮ ಮಂದಿರದ ವಿಷಯವಾಗಿ). ಆಗ ಕಾರ್ಯ ಸಂಪನ್ನಗೊಳ್ಳುವ ಸಾಧ್ಯತೆ ಇದೆ ಎಂದಿದ್ದರು. ನಾವು ಇಪ್ಪತ್ತು-ಮೂವತ್ತು ವರ್ಷಗಳ ಕಾಲ ಪರಿಶ್ರಮ ಪಟ್ಟೆವು. ಮೂವತ್ತನೇ ವರ್ಷದ ಪ್ರಾರಂಭದಲ್ಲಿ ನಮಗೆ ಸಂಕಲ್ಪಪೂರ್ತಿಯ ಆನಂದ ಸಿಗುತ್ತಿದೆ. ಎಲ್ಲರೂ ಜೀವದ ಹಂಗುತೊರೆದು ಪರಿಶ್ರಮ ಪಟ್ಟೆವು. ಇದರಲ್ಲಿ ಅನೇಕರು ತಮ್ಮ ಪ್ರಾಣವನ್ನೇ ಬಲಿದಾನ ನೀಡಿದರು. ಅವರೆಲ್ಲರೂ ನಮ್ಮೊಂದಿಗಿಂದು ಪರೋಕ್ಷವಾಗಿ ಇಲ್ಲಿ ಉಪಸ್ಥಿತರಿದ್ದಾರೆ. ಇನ್ನೂ ಕೆಲವರು ನಮ್ಮೊಂದಿಗಿದ್ದಾರೆ, ಆದರೆ ಅವರುಗಳಿಗೆ ಪ್ರತ್ಯಕ್ಷ ರೂಪದಲ್ಲಿ ಇಲ್ಲಿ ಉಪಸ್ಥಿತರಾಗಲು ಸಾಧ್ಯವಾಗಿಲ್ಲ. ಇಂದಿನ ಪರಿಸ್ಥಿತಿಯ ಕಾರಣದಿಂದಾಗಿ ಅವರು ಇಲ್ಲಿಗೆ ಬರಲಾಗಲಿಲ್ಲ. ರಥಯಾತ್ರೆಯ ನೇತೃತ್ವ ವಹಿಸಿದ್ದ ಅಡ್ವಾಣಿಯವರು ತಮ್ಮ ನಿವಾಸದಲ್ಲಿ ಕುಳಿತು ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿರಬಹುದು. ಅನೇಕರಿಗೆ ಇಲ್ಲಿಗೆ ಬರಲು ಸಾಧ್ಯವಾಗಿದೆ. ಆದರೆ ವರ್ತಮಾನ ಪರಿಸ್ಥಿತಿ ಹೇಗಿದೆಯೆಂದರೆ, ಅವರನ್ನು ಆಹ್ವಾನಿಸಲು ಸಾಧ್ಯವಿಲ್ಲ. ಅವರುಗಳೂ ಸಹ ತಮ್ಮ ಸ್ಥಾನಗಳಿಂದ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿರಬಹುದು. ನಾನು ನೋಡುತ್ತಿದ್ದೇನೆ: ಸಮಸ್ತ ರಾಷ್ಟ್ರದಲ್ಲಿ ಆನಂದದ ಅಲೆಯಿದೆ, ಶತಮಾನಗಳ ಆಶಯ ಪೂರ್ಣಗೊಳ್ಳುತ್ತಿರುವ ಆನಂದವಿದೆ.

Dr. Mohan Bhagwat addressing, Ayodhya

ಇಂದು ಎಲ್ಲಕ್ಕಿಂತಲೂ ಸಂತೋಷದ ಕ್ಷಣ ಏಕೆಂದರೆ ಭಾರತ ಆತ್ಮನಿರ್ಭರವಾಗಲು ಯಾವ ಆತ್ಮವಿಶ್ವಾಸ ಮತ್ತು ಆತ್ಮಸಾಕ್ಷಾತ್ಕಾರದ ಅವಶ್ಯಕತೆಯಿತ್ತೋ, ಅದು ಸಗುಣ-ಸಾಕಾರ ರೂಪದಲ್ಲಿ ಅಧಿಷ್ಠಾನಗೊಳ್ಳುವ ಶುಭಾರಂಭವಿಂದು ಜರುಗುತ್ತಿದೆ. ‘ಸಮಸ್ತ ಜಗವೇ ಸೀತಾರಾಮಮಯ’ ಎಂಬುದೇ ಈ ಅಧಿಷ್ಠಾನದ ದೃಷ್ಟಿ. ಸಮಸ್ತ ಜಗದಲ್ಲಿ ತನ್ನನ್ನು ಕಾಣುವ ಮತ್ತು ತನ್ನೊಳಗಡೆಯೇ ಸಮಸ್ತ ಜಗತ್ತನ್ನು ಕಾಣುವುದೇ ಭಾರತದ ದೃಷ್ಟಿ. ಇದೇ ಕಾರಣದಿಂದಲೇ ಜಗತ್ತಿನಲ್ಲಿ ಪ್ರತಿಯೊಬ್ಬ ಭಾರತೀಯನ ಆಚರಣೆಯೂ ಹೆಚ್ಚು ಸಜ್ಜನಿಕೆಯದ್ದಾಗಿದೆ. ಹಾಗೆಯೇ, ಈ ದೇಶದ ಸಾಮೂಹಿಕ ಆಚರಣೆ ‘ವಸುಧೈವ ಕುಟುಂಬಕಂ’ ಎಂಬುದಾಗಿದೆ. ಇಂತಹ ಸ್ವಭಾವ, ಇದರೊಂದಿಗೆ ತನ್ನ ಕರ್ತವ್ಯ ನಿರ್ವಹಣೆ, ವ್ಯಾವಹಾರಿಕ ಜಗತ್ತಿನ ಸಮಸ್ತ ಸಂಕಷ್ಟ ಮತ್ತು ಮಾಯೆ, ಜಂಜಡಗಳ ನಡುವಿನಿಂದ ಮಾರ್ಗವನ್ನು ಹುಡುಕಿ, ಎಷ್ಟು ಸಾಧ್ಯವೂ ಅಷ್ಟೂ ಜನರನ್ನು ನಮ್ಮೊಂದಿಗೆ ಕರೆದೊಯ್ಯುವ ವಿಧಿ-ವಿಧಾನದ ಅಧಿಷ್ಠಾನ ಇಂದಿಲ್ಲಿ ನಡೆಯುತ್ತಿದೆ. ಪರಮ ವೈಭವಪೂರ್ಣ ಮತ್ತು ಎಲ್ಲರ ಕಲ್ಯಾಣವನ್ನೇ ಬಯಸುವ ಭಾರತದ ನಿರ್ಮಾಣದ ಶುಭಾರಂಭ ಇಂದು ಎಂಥವರ ಕೈಗಳಿಂದ ನಡೆಯುತ್ತಿದೆಯೆಂದರೆ, ಆ ಕೈಗಳಲ್ಲಿಯೇ ಈ ನಿರ್ಮಾಣದ ವ್ಯವಸ್ಥಾ-ತಂತ್ರದ ನೇತೃತ್ವವೂ ಇದೆ. ಇದು ಮತ್ತೂ ಆನಂದದ ವಿಷಯ.

ಇಂದು ಎಲ್ಲರ ನೆನಪಾಗುತ್ತಿದೆ ಮತ್ತು ಸ್ವಾಭಾವಿಕವಾಗಿಯೇ ಆಲೋಚನೆ ಬರುತ್ತದೆ, ಅಶೋಕ್ ಜಿ (ಸಿಂಘಲ್) ನಮ್ಮೊಡನಿದ್ದಿದ್ದರೆ ಅದೆಷ್ಟು ಚೆನ್ನಾಗಿರುತ್ತಿತ್ತು. ಪೂಜ್ಯ ಪರಮಹಂಸ ದಾಸರು ನಮ್ಮೊಂದಿಗಿದ್ದರೆ ಅದೆಷ್ಟು ಆನಂದವಾಗುತ್ತಿತ್ತು. ಆದರೆ, ಭಗವಂತನ ಇಚ್ಛೆ ಹೇಗಿರುತ್ತದೋ ಹಾಗೆಯೇ ಎಲ್ಲವೂ ನಡೆಯುತ್ತದೆ. ಆದರೆ, ನನಗೆ ವಿಶ್ವಾಸವಿದೆ. ಯಾರು ಇಲ್ಲಿದ್ದಾರೆಯೋ ಅವರು ತಮ್ಮ ಮನದಿಂದ ಮತ್ತು ಯಾರು ನಮ್ಮೊಂದಿಗಿಲ್ಲವೋ ಅವರೆಲ್ಲರೂ ಪರೋಕ್ಷವಾಗಿ, ಕೇವಲ ಆನಂದಿಸುತ್ತಿಲ್ಲ, ಆ ಆನಂದವನ್ನು ನೂರು ಪಟ್ಟು ಹೆಚ್ಚಿಸುತ್ತಿದ್ದಾರೆ. ಈ ಆನಂದದಲ್ಲಿ ಒಂದು ಸ್ಫುರಣವಿದೆ. ಒಂದು ಉತ್ಸಾಹವಿದೆ – ನಾವು ಸಾಧಿಸಬಹುದು. ನಾವು ಸಾಧಿಸಬೇಕು. ಇದನ್ನೇ ಸಾಧಿಸಬೇಕು.

ಏತದ್ದೇಶ ಪ್ರಸೂತಸ್ಯ ಸಕಾಶಾದಗ್ರಜನ್ಮನಃ |
ಸ್ವಂ ಸ್ವಂ ಚರಿತ್ರಂ ಶಿಕ್ಷೇರನ್ ಪೃಥಿವ್ಯಾಮ್ ಸರ್ವಮಾನವಾಃ ||

ನಾವು ಪ್ರತಿಯೊಬ್ಬರಿಗೂ ಜೀವನವನ್ನು ಜೀವಿಸುವ ಶಿಕ್ಷಣವನ್ನು ನೀಡಬೇಕಿದೆ. ಇಂದು ಕೊರೋನಾ ತಾಂಡವವಾಡುತ್ತಿದೆ. ಸಮಸ್ತ ವಿಶ್ವವು ಅಂತರ್ಮುಖಿಯಾಗಿದೆ ಮತ್ತು ನಾವೆಲ್ಲಿ ತಪ್ಪಿದೆವು ಮತ್ತು ಮುಂದಿನ ದಾರಿಯೇನು ಎಂಬುದಾಗಿ ಯೋಚಿಸುತ್ತಿದೆ. ಜಗತ್ತು ಎರಡು ದಾರಿಗಳನ್ನಂತೂ ನೋಡಿಯಾಗಿದೆ. ಮೂರನೇ ದಾರಿಯೂ ಇರಬಹುದೇ? ಹೌದು, ಇದೆ! ಈ ಮಾರ್ಗ ನಮ್ಮ ಬಳಿಯಿದೆ. ನಾವು ಈ ದಾರಿಯನ್ನು ನೀಡಬಲ್ಲೆವು ಮತ್ತು ದಾರಿಯನ್ನು ತೋರಿಸುವ ಕೆಲಸವನ್ನೂ ನಾವೇ ಮಾಡಬೇಕಿದೆ. ಇದರ ತಯಾರಿಗೆ ಸಂಕಲ್ಪವನ್ನು ಮಾಡಬೇಕಾದ ದಿನವೂ ಇಂದೇ. ಇದಕ್ಕಾಗಿ ಅವಶ್ಯಕವಾದ ತಪಸ್ಸು ಮತ್ತು ಪ್ರಯತ್ನವನ್ನು ನಾವು ಮಾಡಿದ್ದೇವೆ. ಪ್ರಭು ಶ್ರೀರಾಮನ ಜೀವನದಿಂದ ಇಂದಿನವರೆಗೂ ನಾವು ನೋಡಬಹುದು,ಸಂಪೂರ್ಣ ಪ್ರಯತ್ನಶೀಲತೆ, ಪರಾಕ್ರಮ, ವೀರತ್ವ ನಮ್ಮ ನರನಾಡಿಗಳಲ್ಲಿ ಪ್ರವಹಿಸುತ್ತಿವೆ. ನಾವು ಇವನ್ನೆಲ್ಲ ಕಳೆದುಕೊಂಡಿಲ್ಲ. ಅವು ನಮ್ಮ ಬಳಿಯೇ ಇವೆ. ನಾವು ಪ್ರಾರಂಭಿಸಿದರೆ ಸಾಕು, ಕಾರ್ಯ ಸಂಭವಿಸುತ್ತದೆ. ಈ ರೀತಿಯ ವಿಶ್ವಾಸ ಮತ್ತು ಪ್ರೇರಣೆಯ ಸ್ಫುರಣ ಇಂದಿನ ಈ ದಿನದಿಂದ ನಮಗೆ ಸಿಗುತ್ತದೆ ಮತ್ತು ಸಮಸ್ತ ಭಾರತೀಯರಿಗೂ ಸಿಗುತ್ತದೆ. ಯಾರೂ ಅಪವಾದವಲ್ಲ. ಏಕೆಂದರೆ ಎಲ್ಲರಿಗೂ ರಾಮನಿದ್ದಾನೆ ಮತ್ತು ಎಲ್ಲರಲ್ಲೂ ರಾಮನಿದ್ದಾನೆ.

Dr. Mohan Bhagwat at Ayodhya Ram Mandir Bhoomi Puja

ಇನ್ನು ಇಲ್ಲಿ ಭವ್ಯ ಮಂದಿರ ನಿರ್ಮಾಣವಾಗುತ್ತದೆ. ಎಲ್ಲ ಪ್ರಕ್ರಿಯೆಗಳೂ ಪ್ರಾರಂಭವಾಗಿವೆ ಮತ್ತು ಜವಾಬ್ದಾರಿಗಳೂ ಹಂಚಿಕೆಯಾಗಿವೆ. ತಮ್ಮ ತಮ್ಮ ಜವಾಬ್ದಾರಿಯನ್ನು ಅವರವರು ನಿಭಾಯಿಸುತ್ತಾರೆ. ಈ ಸಂದರ್ಭದಲ್ಲಿ ನಮ್ಮೆಲ್ಲರ ಕೆಲಸವೇನು? ನಾವೆಲ್ಲರೂ ನಮ್ಮ ಮನದ ಅಯೋಧ್ಯೆಯನ್ನು ಸಜ್ಜುಗೊಳಿಸಿ ಸನ್ನದ್ಧಗೊಳಿಸಿಕೊಳ್ಳಬೇಕಿದೆ. ಈ ಭವ್ಯ ಕಾರ್ಯಕ್ಕಾಗಿ ಶ್ರೀ ರಾಮಚಂದ್ರ ಯಾವ “ಧರ್ಮ” ದ ವಿಗ್ರಹವೆನ್ನಲಾಗುತ್ತದೋ ಆ ಒಂದುಗೂಡಿಸುವ, ಧಾರಣೆಮಾಡುವ, ಔನ್ಯತ್ಯಕ್ಕೇರಿಸುವ, ಎಲ್ಲರ ಉನ್ನತಿಯನ್ನೂ ಸಾಧಿಸುವ ಮತ್ತು ಎಲ್ಲರನ್ನೂ ತನ್ನವರನ್ನಾಗಿಸಿಕೊಳ್ಳುವ ಆ ಧರ್ಮದ ಧ್ವಜವನ್ನು ತನ್ನ ಭುಜದ ಮೇಲೆ ಹೊತ್ತು ಸಂಪೂರ್ಣ ಜಗತ್ತಿಗೆ ಸುಖ-ಶಾಂತಿ ನೀಡುವ ಭಾರತವನ್ನು ನಿರ್ಮಾಣಗೊಳಿಸಲೊಸುಗ ನಮ್ಮ ಮನದ ಅಯೋಧ್ಯೆಯನ್ನು ನಿರ್ಮಿಸಬೇಕಿದೆ. ಇಲ್ಲಿ ಹೇಗೆ ಮಂದಿರ ನಿರ್ಮಾಣಗೊಳ್ಳುತ್ತ ಸಾಗುತ್ತದೋ ನಮ್ಮ ನಮ್ಮ ಮನಗಳ ಅಯೋಧ್ಯೆಯೂ ಹಾಗೆಯೇ ನಿರ್ಮಾಣಗೊಳ್ಳುತ್ತ ಸಾಗಬೇಕು. ಮತ್ತು ಈ ಮಂದಿರ ನಿರ್ಮಾಣವಾಗುವ ಮೊದಲು ನಮ್ಮ ಮನಮಂದಿರ ತಯಾರಾಗಿ ನಿಲ್ಲಬೇಕು, ಇದರ ಅವಶ್ಯಕತೆಯಿದೆ. ಈ ಮನಮಂದಿರ ಹೇಗಿರಬೇಕು ಎಂಬುದನ್ನು ತುಳಸೀದಾಸರ ರಾಮಾಯಣದಲ್ಲಿ ಹೇಳಲಾಗಿದೆ.

ಕಾಮ ಕೋಹ ಮಾನ ನ ಮೋಹಾ । ಲೋಭ ನ ಚೋಭ ನ ರಾಗ ನ ದ್ರೋಹಾ ।।
ಜಿನ್ಹ ಕೆ ಕಪಟ ದಂಭ ನಹಿ ಮಾಯಾ । ತಿನ್ಹ ಕೆ ಹೃದಯ ಬಸಹು ರಘುರಾಯಾ ।।
ಜಾತಿ ಪಾಂಟಿ ಧನು ಧಾರಾಮು ಬಢಾಯಿ । ಪ್ರಿಯ ಪರಿವಾರ ಸದನ ಸುಖದಾಯೀ ।।
ಸಬ ತಜಿ ತುಮ್ಹಾಹಿ ರಹಯಿ ಊರ ಲಾಯಿ । ತೇಹಿ ಹೇ ಹೃದಯ ರಾಹುಹು ರಾಘುರಾಯೀ ।।

ನಮ್ಮ ಹೃದಯವೂ ಶ್ರೀರಾಮನ ನೆಲೆಯಾಗಬೇಕು. ಸರ್ವ ದೋಷ, ವಿಕಾರ, ದ್ವೇಷ ಮತ್ತು ಶತ್ರುತ್ವಗಳಿಂದ ಮುಕ್ತವಾಗಿರಬೇಕು. ಜಗತ್ತಿನ ಮಾಯೆ ಹೇಗಾದರೂ ಇರಲಿ, ನಮ್ಮ ಆಚರಣೆ ಮಾತ್ರ ಶುದ್ಧವಾಗಿರಬೇಕು. ನಮ್ಮ ಹೃದಯದಿಂದ ಎಲ್ಲ ಪ್ರಕಾರದ ಭೇದಗಳಿಗೂ ತಿಲಾಂಜಲಿತ್ತು, ಕೇವಲ ನಮ್ಮ ದೇಶವಾಸಿಗಳ ಬಗ್ಗೆ ಮಾತ್ರವಲ್ಲ ಸಮಸ್ತ ಜಗತ್ತನ್ನೇ ಅಪ್ಪಿಕೊಳ್ಳುವ ಸಾಮರ್ಥ್ಯವಿರುವ ಈ ದೇಶದ ವ್ಯಕ್ತಿ ಮತ್ತು ಸಮಾಜವನ್ನು ನಿರ್ಮಿಸುವ ಕೆಲಸವಿದು. ಈ ಸಮಾಜ ನಿರ್ಮಾಣದ ಕಾರ್ಯದ ಓರ್ವ ಸಗುಣ-ಸಾಕಾರ ಸ್ವರೂಪ ಇಲ್ಲಿ ನೆಲೆನಿಲ್ಲುತ್ತಾನೆ. ಈ ಪ್ರತೀಕ ನಮ್ಮೆಲ್ಲರಿಗೂ ಸದೈವ ಪ್ರೇರಣೆ ನೀಡುತ್ತಿರುತ್ತಾನೆ. ಭವ್ಯ ರಾಮಮಂದಿರ ನಿರ್ಮಾಣದ ಕಾರ್ಯ ಭಾರತದ ಲಕ್ಷಾಂತರ ಮಂದಿರಗಳ ಪೈಕಿ ಇನ್ನೊಂದನ್ನು ನಿರ್ಮಿಸುವ ಕಾರ್ಯವಲ್ಲ. ದೇಶದ ಎಲ್ಲಾ ಮಂದಿರಗಳಲ್ಲಿ ಸ್ಥಾಪಿತ ಮೂರ್ತಿಗಳ ಆಶಯವೇನಿದೆಯೋ, ಆ ಆಶಯವನ್ನೇ ಪುನರುಚ್ಚರಿಸುವ ಮತ್ತು ಪುನರ್ಸ್ಥಾಪಿಸುವ ಕಾರ್ಯದ ಶುಭಾರಂಭ ಇಂದು ಅತ್ಯಂತ ಸಮರ್ಥ ಹಸ್ತಗಳಿಂದ ನೆರವೇರಿದೆ. ಈ ಶುಭ ಸಂದರ್ಭದಲ್ಲಿ, ಆನಂದದ ಈ ಕ್ಷಣದಲ್ಲಿ, ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುವೆ ಮತ್ತು ನನ್ನ ಮನದಲ್ಲಿ ಏನೆಲ್ಲಾ ವಿಚಾರಗಳು ಮೂಡಿದವೋ, ಅವೆಲ್ಲವನ್ನೂ ನಿಮ್ಮ ಚಿಂತನೆಗೆ ಸಮರ್ಪಿಸಿ ನಿಮ್ಮೆಲ್ಲರಿಂದ ವಿದಾಯ ಕೋರುತ್ತೇನೆ.

ಅನಂತ ಧನ್ಯವಾದಗಳು.