ಲಾಲ್ ಬಹದ್ದೂರ್ ಶಾಸ್ತ್ರಿ: ಭಾರತೀಯರ ಆತ್ಮಶಕ್ತಿಯನ್ನೇ ಬಡಿದೆಬ್ಬಿಸಿದ ಮಹಾನ್ ನೇತಾರ

ಲಾಲ್ ಬಹದ್ದೂರ್ ಶಾಸ್ತ್ರಿ: ಭಾರತೀಯರ ಆತ್ಮಶಕ್ತಿಯನ್ನೇ ಬಡಿದೆಬ್ಬಿಸಿದ ಮಹಾನ್ ನೇತಾರ
ಲೇಖಕರು: ಎಸ್.ಉಮೇಶ್, ಮೈಸೂರು 9742281766

ಅಕ್ಟೋಬರ್ 2, ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನ. ಅಷ್ಟೇ ಅಲ್ಲ ಅದು ಭಾರತದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನವೂ ಹೌದು. ಶಾಸ್ತ್ರೀಜಿ ಈ ದೇಶ ಕಂಡ ಮಹಾನ್ ನಾಯಕ. ಪ್ರಾಮಾಣಿಕತೆ, ಸರಳತೆ ಮತ್ತು ಸಜ್ಜನಿಕೆಯ ಪ್ರತೀಕ. ಅಂತಹ ಮೇರು ವ್ಯಕ್ತಿತ್ವದ ಶಾಸ್ತ್ರೀಜಿಯವರ ಲಾಲ್ ಬಹದ್ದೂರ್ ಶಾಸ್ತ್ರಿಯವರ ಸಾರ್ಥಕ ಬದುಕು, ಮಹೋನ್ನತ ಆದರ್ಶ ಮತ್ತು ನಿಗೂಢ ಸಾವಿನ ಬಗ್ಗೆ ಬೆಳಕು ಚೆಲ್ಲುವ ವಿಶೇಷ ಲೇಖನ ಇದು.

ಕುಳ್ಳಗಿನ ದೇಹ, ಶಾಂತ ಮುಖಭಾವ, ಮಗುವಿನಂತಹ ನಗು, ಸರಳ, ಸಜ್ಜನಿಕೆಯ ವ್ಯಕ್ತಿತ್ವ. ಹೌದು! ಅವರೇ ದೇಶದ ಹೆಮ್ಮೆಯ ಮಾಜಿ ಪ್ರಧಾನಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ. ಈ ದೇಶದ ಮಹಾನ್ ನೇತಾರ. ದೇಶಕಂಡ ಅತ್ಯಂತ ಪ್ರಾಮಾಣಿಕ ಪ್ರಧಾನಿ, ಧೀಮಂತ ಜನನಾಯಕ ಹಾಗೂ ಸಜ್ಜನ ರಾಜಕಾರಣಿ. ಶಾಸ್ತ್ರೀಜಿಯವರು ಅವರು ಹುಟ್ಟಿ ಬೆಳೆದದ್ದೆಲ್ಲ ಮೊಘಲ್‍ಸರಾಯ್‍ನಲ್ಲಿ. ತಂದೆ ಶಾರದಾ ಪ್ರಸಾದ್. ವೃತ್ತಿಯಲ್ಲಿ ಶಾಲಾ ಮೇಷ್ಟ್ರು. ತಾಯಿ ರಾಮ್ ದುಲಾರಿ. ಶಾಸ್ತ್ರೀಜಿಯವರ ವಿದ್ಯಾಭ್ಯಾಸವೆಲ್ಲ ಮೊಘಲ್‍ಸರಾಯ್‍ನ ಪೂರ್ವ ಕೇಂದ್ರ ರೈಲ್ವೆ ಕಾಲೇಜಿನಲ್ಲಿ. ಪದವಿ ಕಾಶಿ ವಿದ್ಯಾಪೀಠದಲ್ಲಿ. ಶಾಸ್ತ್ರೀಜಿಯವರ ಮೂಲ ಹೆಸರು ಲಾಲ್ ಬಹದ್ದೂರ್ ಶ್ರೀವಾತ್ಸವ. ಆದರೆ ಶ್ರೀವಾತ್ಸವ ಎನ್ನುವುದು ಜಾತಿ ಸೂಚಕ ಎಂದು ಶಾಸ್ತ್ರೀಜಿಯವರು ಅದನ್ನು ತಮ್ಮ ಹೆಸರಿನಿಂದ ತೆಗೆದುಬಿಟ್ಟರು. ಅವರು ಪದವಿ ಮುಗಿಸಿದಾಗ ಕಾಶಿ ವಿದ್ಯಾಪೀಠ ಅವರಿಗೆ ನೀಡಿದ ಬಿರುದು `ಶಾಸ್ತ್ರಿ' ಎಂದು. ಮುಂದೆ ಅದು ಅವರ ಹೆಸರಿನಲ್ಲೇ ಸೇರಿಕೊಂಡಿತು. ಮೊದಲಿಗೆ ಶಾಸ್ತ್ರೀಜಿಯವರು ಗುರುನಾನಕರಿಂದ ಪ್ರಭಾವಿತರಾಗಿದ್ದರು. ಅವರ ಸಂದೇಶಗಳನ್ನು ನಿತ್ಯ ಓದುತ್ತಿದ್ದರು. 1915ರಲ್ಲಿ ವಾರಣಾಸಿಯಲ್ಲಿ ಗಾಂಧೀಜಿಯವರ ಭಾಷಣ ಕೇಳಿ ಆಕರ್ಷಿತರಾದರು. ಅದು ಅವರ ಜೀವನದ ದಿಕ್ಕನ್ನೇ ಬದಲಿಸಿಬಿಟ್ಟಿತು. ದೇಶಸೇವೆಗೆ ಮನಸ್ಸು ಹಾತೊರೆಯಲಾರಂಭಿಸಿತು. 1921ರಲ್ಲಿ ಗಾಂಧೀಜಿ ಅಸಹಕಾರ ಚಳುವಳಿ ಕೈಗೊಂಡಾಗ ಅದರಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. 1927ರಲ್ಲಿ ಶಾಸ್ತ್ರೀಜಿಯವರು ಮಿರ್‍ಜಾಪುರ್‍ನ ಲಲಿತಾದೇವಿಯವರನ್ನು ವಿವಾಹವಾದರು. 

ದೇಶ ಕಂಡ ಅತ್ಯಂತ ಸರಳ ಸಜ್ಜನಿಕೆಯ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ. ಎಂತಹ ಕಠಿಣ ಸಂದರ್ಭವನ್ನೂ ಎದುರಿಸುವ ಅದ್ಭುತ ಸಾಮಥ್ರ್ಯ ಶಾಸ್ತ್ರೀಜಿಯವರಿಗಿತ್ತು. ಅವರೆಂದೂ ಅನ್ಯಾಯವನ್ನು ಸಹಿಸಿದವರಲ್ಲ, ಸ್ವಾರ್ಥಕ್ಕೆ ಬಲಿಯಾದವರಲ್ಲ, ತಾವು ನಂಬಿದ್ದ ತತ್ವ ಮತ್ತು ಸಿದ್ಧಾಂತದಿಂದ ದೂರ ಸರಿದವರಲ್ಲ. ಅವರ ಬದುಕಿನ ಒಂದೊಂದು ಘಟನೆಗಳೂ ಅವರ ಉದಾತ್ತ ಚಿಂತನೆಗಳು ಮತ್ತು ಆದರ್ಶಗಳಿಗೆ ಹಿಡಿದ ಕನ್ನಡಿಯಂತೆ ನಮ್ಮ ಮುಂದಿವೆ. 

ವಾಮನಮೂರ್ತಿಯ ವಿರಾಟ ದರ್ಶನ:
ಎರಡು ದಶಕಗಳ ನೆಹರೂ ಆಡಳಿತ ಕೊನೆಗೊಂಡಾಗ ಭಾರತವನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಆ ಸಮಯದಲ್ಲಿ ದೇಶದ ಜನರಿಗೆ ಬೇಕಾಗಿದ್ದದ್ದು ಒಬ್ಬ ದಕ್ಷ, ಪ್ರಾಮಾಣಿಕ ಮತ್ತು ಸಜ್ಜನ ರಾಜಕಾರಣಿ. ದೇಶದ ಆರ್ಥಿಕತೆಗೆ ಶಕ್ತಿ ತುಂಬಬಲ್ಲ ಸಮರ್ಥ ನಾಯಕ. ಭಾರತದ ಜನ ಲಾಲ್ ಬಹದ್ದೂರ್ ಶಾಸ್ತ್ರಿಯವರಲ್ಲಿ ಈ ಎಲ್ಲ ಗುಣಗಳನ್ನು ಕಂಡಿದ್ದರು. ಸಹಜವಾಗಿ ದೇಶ ಪ್ರಧಾನಿ ಹುದ್ದೆಗೆ ಶಾಸ್ತ್ರೀಜಿಯವರನ್ನು ಬಯಸಿತ್ತು. ಶಾಸ್ತ್ರೀಜಿ ಪ್ರಧಾನಿಯಾಗಿ ದೇಶದ ಚುಕ್ಕಾಣಿ ಹಿಡಿದರು. ಶಾಸ್ತ್ರೀಜಿ ಪ್ರಧಾನಿಯಾದ ಸಂದರ್ಭದಲ್ಲಿ ಭಾರತದ ಆರ್ಥಿಕತೆ ಪಾತಾಳಕ್ಕೆ ಕುಸಿದಿತ್ತು. ಕೃಷಿ ಕ್ಷೇತ್ರ ಆತಂಕಕಾರಿಯಾಗಿ ಅವನತಿಯ ಹಾದಿಯತ್ತ ಸಾಗುತ್ತಿತ್ತು. ಎಲ್ಲೆಲ್ಲೂ ಭ್ರಷ್ಟಾಚಾರ, ಸ್ವಜನ ಪಕ್ಷಪಾತ. ಜೊತೆಗೆ ದೇಶಾದ್ಯಂತ ಬರಗಾಲ. ಆದರೆ ಆ ಸಮಯದಲ್ಲಿ ಶಾಸ್ತ್ರೀಜಿಯವರಿಗಿದ್ದ ಗುರಿ ಒಂದೇ. ಭಾರತವನ್ನು ಸ್ವಾವಲಂಭಿ ರಾಷ್ಟ್ರವನ್ನಾಗಿ ಮಾಡಬೇಕು, ನಾವೆಂದೂ ಮತ್ತೊಬ್ಬರ ಮುಂದೆ ಕೈಚಾಚಿ ನಿಲ್ಲಬಾರದು, ಭಾರತ ಸಶಕ್ತ, ಸಮೃದ್ಧ, ಸ್ವಾಭಿಮಾನಿ ರಾಷ್ಟ್ರವಾಗಿ ರೂಪುಗೊಳ್ಳಬೇಕು ಎನ್ನುವುದು.


ಶಾಸ್ತ್ರೀಜಿಯವರು ಆಡಳಿತ ನಡೆಸಿದ್ದು ಕೇವಲ 18 ತಿಂಗಳು ಮಾತ್ರ. ಅಷ್ಟು ಸಣ್ಣ ಅವಧಿಯಲ್ಲೇ ಅಗಾಧವಾದ ಸಾಧನೆ ಮಾಡಿದ್ದರು. ಆ ಸಂದರ್ಭದಲ್ಲಿ ದೇಶ ಆಹಾರ ಕೊರತೆಯನ್ನು ಅನುಭವಿಸುತ್ತಿತ್ತು. ಕೂಡಲೆ ಅವರು ಆಹಾರ ಧಾನ್ಯಗಳ ಬೆಲೆ ಇಳಿಸುವ ಕೆಲಸಕ್ಕೆ ಕೈಹಾಕಿದರು. ಉದ್ಯೋಗ ಸೃಷ್ಟಿಗೆ ಹೆಚ್ಚಿನ ಒತ್ತು ನೀಡಿದರು. ಭಾರತ ದೇಶದ ಗ್ರಾಮಗಳು ಅಭಿವೃದ್ಧಿಯಾಗಬೇಕು ಮತ್ತು ಅಲ್ಲಿನ ಜನ ಸ್ವಾವಲಂಭಿಗಳಾಗಬೇಕು ಎನ್ನುವ ದೃಷ್ಟಿಯಿಂದ ಹಸಿರು ಕ್ರಾಂತಿ ಮತ್ತು ಕ್ಷೀರ ಕ್ರಾಂತಿಗೆ ಮುನ್ನುಡಿ ಬರೆದರು. ದೇಶದ ರೈತರ ನೆರವಿಗೆ ನಿಂತರು. ಪರಿಣಾಮ ಕೃಷಿ, ಹೈನುಗಾರಿಕೆ ಮತ್ತು ಹಾಲು ಉತ್ಪಾದನೆಯಲ್ಲಿ ಭಾರತ ಸ್ವಾವಲಂಭಿಯಾಯಿತು. ದೇಶದ ಆರ್ಥಿಕತೆಯನ್ನು ತರ್ಕಬದ್ದ ಮತ್ತು ವೈಜ್ಞಾನಿಕ ರೀತಿಯಲ್ಲಿ ಯೋಜಿಸಿದ ಪರಿಣಾಮ ದೇಶ ಪ್ರಗತಿ ಪಥದತ್ತ ಮುನ್ನಡೆದಿತ್ತು. ಕೈಗಾರಿಕಾ ಕ್ಷೇತ್ರ ಗಣನೀಯ ಚೇತರಿಕೆ ಕಂಡಿತು. ಶಾಸ್ತ್ರೀಜಿಯವರು ಭವಿಷ್ಯದ ಭಾರತವನ್ನು ಮನಸ್ಸಿನಲ್ಲಿಟ್ಟುಕೊಂಡು ಕಾರ್ಯ ನೀತಿಗಳನ್ನು ರೂಪಿಸುತ್ತಿದ್ದರು. ಅವರ `ಜೈ ಜವಾನ್, ಜೈ ಕಿಸಾನ್’ ಕೇವಲ ಘೋಷಣೆಯಷ್ಟೇ ಆಗಿರಲಿಲ್ಲ. ಅದು ಕೋಟ್ಯಾಂತರ ಭಾರತೀಯರ ಮಹತ್ವಾಂಕಾಕ್ಷೆಯ ಪ್ರತಿಬಿಂಬವಾಗಿತ್ತು.
1962ರ ಯುದ್ಧದ ಸೋಲು ಭಾರತಕ್ಕೆ ಮರೆಯಲಾರದ ಪಾಠ ಕಲಿಸಿತ್ತು. ಆ ಸಮಯದಲ್ಲಿ ಭಾರತ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳಬೇಕಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಕುಗ್ಗಿಹೋಗಿದ್ದ ಭಾರತೀಯ ಸೈನ್ಯಕ್ಕೆ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬುವ ಕೆಲಸ ಆಗಬೇಕಾಗಿತ್ತು. ಹಾಗಾಗಿ ಏಪ್ರಿಲ್ 5, 1965ರಂದು ಶಾಸ್ತ್ರೀಜಿ ಭಾರತದ ವಿಜ್ಞಾನಿಗಳಿಗೆ ಪರಮಾಣು ಸ್ಫೋಟಕಗಳನ್ನು ತಯಾರಿಸುವುದಕ್ಕೆ ಅನುಮತಿ ನೀಡಿದರು. ಕೂಡಲೆ ಡಾ.ಹೋಮಿ ಜೆಹಂಗೀರ್ ಬಾಬಾರವರ ನೇತೃತ್ವದಲ್ಲಿ ಪರಮಾಣು ವಿನ್ಯಾಸಗಾರರ ಒಂದು ತಂಡ ಶಾಂತಿಯುತ ಉದ್ದೇಶಕ್ಕಾಗಿ ಪರಮಾಣು ಸ್ಫೋಟಗಳ ಅಧ್ಯಯನಕ್ಕೆ ಮುಂದಾಯಿತು. ನಂತರದ ವರ್ಷಗಳಲ್ಲಿ ಭಾರತ ಪರಮಾಣು ಶಕ್ತಿ ಹೊಂದಿದ ರಾಷ್ಟ್ರವಾಗಲು ಇದು ಸಹಕಾರಿಯಾಯಿತು.

ಜಗತ್ತಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು:
ಶಾಸ್ತ್ರೀಜಿಯವರು ಪ್ರಧಾನಮಂತ್ರಿಯಾದ ಸಂದರ್ಭದಲ್ಲಿ ಪರಿಸ್ಥಿತಿ ತೀರಾ ಸಂಕೀರ್ಣವಾಗಿತ್ತು. ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಒಂದೆಡೆ ದೇಶದಲ್ಲಿ ಆಹಾರ ಸಮಸ್ಯೆ. ಮತ್ತೊಂದೆಡೆ ಗಡಿಯಲ್ಲಿ ಪಾಕಿಸ್ತಾನ ಆಗಾಗ ಕ್ಯಾತೆ ತೆಗೆಯುತ್ತಿತ್ತು. ಆ ಸಮಯದಲ್ಲಿ ಪಾಕಿಸ್ತಾನ ಮಾತ್ರ ಭಾರತದ ಮೇಲೆ ಯುದ್ಧ ಮಾಡಿಯೇ ತೀರಬೇಕೆಂಬ ನಿರ್ಧಾರಕ್ಕೆ ಬಂದಿತ್ತು. ಅದಕ್ಕೆ ಕಾರಣ ಸ್ಪಷ್ಟವಾಗಿತ್ತು. ಚೀನಾ ಯುದ್ಧದಿಂದ ಭಾರತೀಯ ಸೈನಿಕರ ಮನಸ್ಥೈರ್ಯ ಕುಗ್ಗಿತ್ತು. ದೇಶದಲ್ಲಿ ರಾಜಕೀಯ ವಿಪ್ಲವವಿತ್ತು.
ಅದು ಆಗಸ್ಟ್ 31, 1965. ಅಂದು ರಾತ್ರಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು ಊಟಕ್ಕೆ ಕುಳಿತಿದ್ದರು. ಭಾರತೀಯ ಸೈನ್ಯದ ಮೂರು ಪಡೆಯ ಮುಖ್ಯಸ್ತರು ಪ್ರಧಾನಿ ನಿವಾಸಕ್ಕೆ ದೌಡಾಯಿಸಿದರು. ಸಭೆ ಪ್ರಾರಂಭವಾಯಿತು. ಆಶ್ಚರ್ಯವೆಂಬಂತೆ ಕೇವಲ ಏಳೇ ನಿಮಿಷದಲ್ಲಿ ಪ್ರಧಾನಿಗಳು ಸಭೆ ಮುಗಿಸಿ ಹೊರಬಂದರು. ವಾಸ್ತವದಲ್ಲಿ ಸೇನಾಪಡೆಯ ಮುಖ್ಯಸ್ಥರು ಪಾಕಿಸ್ತಾನಿ ಸೈನ್ಯ ಛಾಂಬ್ ಸೆಕ್ಟರ್‍ನಲ್ಲಿ ಅಂತರಾಷ್ಟ್ರೀಯ ಗಡಿಯನ್ನು ದಾಟಿ ಬರುತ್ತಿದೆ. ಈಗ ನಾವು ಅವರನ್ನು ತಡೆಯದಿದ್ದರೆ ಜಮ್ಮು-ಕಾಶ್ಮೀರ ಭಾರತದಿಂದ ಬೇರ್ಪಡುವ ಎಲ್ಲ ಸಾಧ್ಯತೆಗಳೂ ಇವೆ. ಈಗೇನು ಮಾಡುವುದು ಎಂಬ ಪ್ರಶ್ನೆಯನ್ನು ಪ್ರಧಾನಿಗಳ ಮುಂದೆ ಇಟ್ಟಿದ್ದರು. ಅದಕ್ಕೆ ಶಾಸ್ತ್ರಿಜಿಯವರು “ಕೂಡಲೆ ಸೇನಾದಾಳಿ ಮಾಡಿ. ಪಾಕಿಸ್ತಾನಿ ಸೈನ್ಯವನ್ನು ಹಿಮ್ಮೆಟ್ಟಿಸಿ. ವಾಯುಪಡೆಯ ವಿಮಾನಗಳಿಂದಲೂ ದಾಳಿ ನಡೆಸಿ. ಒಮ್ಮೆ ಆಕ್ರಮಣ ಪ್ರಾರಂಭಗೊಂಡರೆ ಲಾಹೋರ್‍ವರೆಗೂ ಮುನ್ನುಗ್ಗಿ. ಛಾಂಬ್ ಕೈಜಾರುವ ಮೊದಲು ಲಾಹೋರ್‍ನನ್ನು ವಶಪಡಿಸಿಕೊಳ್ಳಿ. ಜಗತ್ತಿಗೆ ಉತ್ತರ ಕೊಡುವ ಜವಾಬ್ದಾರಿ ನನ್ನದು. ಹೋರಾಟ ನಿಮ್ಮದು” ಎಂಬ ಖಡಕ್ ಆದೇಶ ನೀಡಿದ್ದರು. ಪ್ರಧಾನಿಗೆ ಆ ಸಮಯದಲ್ಲಿ ಭಾರತದ ರಕ್ಷಣೆಯಷ್ಟೇ ಮುಖ್ಯವಾಗಿತ್ತು. ಹಾಗಾಗಿ ಸಂಪುಟ ಸಭೆ ಕರೆಯಲಿಲ್ಲ, ಯಾರನ್ನೂ ಕೇಳಲಿಲ್ಲ. ವಿಶ್ವಸಂಸ್ಥೆಯ ಕದ ತಟ್ಟಲಿಲ್ಲ. ಅಂತರಾಷ್ಟ್ರೀಯ ಒತ್ತಡಗಳ ಬಗ್ಗೆಯೂ ಚಿಂತಿಸಲಿಲ್ಲ. ವಿಶ್ವದ ನಾಯಕರು ಏನನ್ನುತ್ತಾರೋ ಎಂದು ಯೋಚಿಸಲಿಲ್ಲ. ಏಳು ನಿಮಿಷದಲ್ಲಿ ಎದೆ ಝಲ್ಲೆನೆಸುವ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡರು. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿಯವರು ಸೈನಿಕರನ್ನು ಹುರಿದುಂಬಿಸಿ ಆಡುತ್ತಿದ್ದ ಮಾತುಗಳು, ಭಾಷಣಗಳು, ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳು ಸೈನ್ಯಕ್ಕೆ ಭೀಮಬಲವನ್ನು ತಂದುಕೊಟ್ಟಿದ್ದವು.
ಶಾಸ್ತ್ರೀಜಿಯವರ ದಿಟ್ಟ ನಿರ್ಧಾರ ಮತ್ತು ಸೈನ್ಯಕ್ಕೆ ನೀಡಿದ ಪರಮಾಧಿಕಾರದ ಪರಿಣಾಮ ಭಾರತ ಪಾಕಿಸ್ತಾನವನ್ನು ಬಗ್ಗು ಬಡಿದಿತ್ತು. ಭಾರತೀಯ ಸೈನ್ಯ ಲಾಹೋರ್‍ನ ಹೆಬ್ಬಾಗಿಲಿಗೆ ಬಂದು ನಿಂತಿತ್ತು. ಮುಂದಿನ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳು ಭಾರತದ ಕೈವಶವಾಗುವುದರಲ್ಲಿತ್ತು. ಅಷ್ಟರಲ್ಲಿ ಪಾಕಿಸ್ತಾನ ಲಜ್ಜೆಬಿಟ್ಟು ಅಮೆರಿಕಾ, ರಷ್ಯಾ ಮತ್ತು ವಿಶ್ವಸಂಸ್ಥೆಯ ಮುಂದೆ ಮಂಡಿಯೂರಿ ಕುಳಿತು ಯುದ್ಧ ನಿಲ್ಲಿಸಲು ಭಾರತಕ್ಕೆ ಸೂಚಿಸುವಂತೆ ಗೋಗರೆಯಲಾರಂಭಿಸಿತು. ಹಾಗಾಗಿ ವಿಶ್ವಸಂಸ್ಥೆ ಮಧ್ಯ ಪ್ರವೇಶಿಸಿತು. ಶಾಸ್ತ್ರೀಜಿ ಶಾಂತಿ ಮಾತುಕತೆಗೆ ತಾಷ್ಕೆಂಟ್‍ಗೆ ಹೊರಟರು. ತಾಷ್ಕೆಂಟ್‍ನಲ್ಲಿ ಸತತ ಏಳು ದಿನಗಳ ಕಾಲ ಶೃಂಗಸಭೆ ನಡೆಯಿತು. ಅಂತಿಮವಾಗಿ ಶೃಂಗಸಭೆಯಲ್ಲಿ ಶಾಂತಿ ಸಂಧಾನಕ್ಕೆ ಉಭಯ ನಾಯಕರಿಂದ ಸಹಿ ಬಿತ್ತು. ಆದರೆ ಆ ಸಹಿಯ ಶಾಯಿ ಆರುವ ಮುನ್ನವೇ ಶಾಸ್ತ್ರೀಜಿ ಸಾವಿನ ಸುದ್ದಿ ಬರಸಿಡಿಲಿನಂತೆ ಭಾರತಕ್ಕೆ ಬಡಿದಿತ್ತು.

ಜನವರಿ 10, 1965.
ತಾಷ್ಕೆಂಟ್ ಶೃಂಗಸಭೆಯ ಯಶಸ್ಸಿನ ಹಿನ್ನೆಲೆಯಲ್ಲಿ ಸೋವಿಯತ್ ಒಕ್ಕೂಟ ಅಂದು ಸಂಜೆ ಭಾರಿ ಪಾರ್ಟಿಯೊಂದನ್ನು ಏರ್ಪಡಿಸಿತ್ತು. ಪಾರ್ಟಿಯಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು. ಪಾರ್ಟಿಯಲ್ಲಿ ವಿಸ್ಕಿ ನೀರಿನ ಹೊಳೆಯಂತೆ ಹರಿದಿತ್ತು. ಮೋಜು ಮಸ್ತಿ ಜೋರಾಗಿತ್ತು. ಶಾಸ್ತ್ರೀಜಿಯವರು ಸ್ವಲ್ಪ ಹೊತ್ತಷ್ಟೇ ಅಲ್ಲಿದ್ದು ನಂತರ ಅಲ್ಲಿಂದ ತಮ್ಮ ಹೋಟೆಲ್‍ಗೆ ಹೊರಟರು. ಜೊತೆಯಲ್ಲಿ ಭಾರತೀಯ ಅಧಿಕಾರಿಗಳಿದ್ದರು. ಅವರ್ಯಾರಿಗೂ ಮುಂದೇನು ನಡೆಯುತ್ತದೆ ಎನ್ನುವ ಸಣ್ಣ ಸುಳಿವೂ ಇರಲಿಲ್ಲ.
ರಾತ್ರಿ ಹತ್ತು ಗಂಟೆಯ ವೇಳೆಗೆ ಪ್ರಧಾನಿಗಳು ಒಂದಷ್ಟು ಬೇಯಿಸಿದ ಪಾಲಕ್ ಮತ್ತು ಆಲೂಗಡ್ಡೆ ಪಲ್ಯ ತಿಂದರು. ನಂತರ ತಮ್ಮ ಕಾರ್ಯದರ್ಶಿ ಸಹಾಯ್‍ರೊಂದಿಗೆ ನಾಳಿನ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಿದರು. ಭಾರತಕ್ಕೆ ಹೋದ ನಂತರ ಮಾಡಬೇಕಾದ ಕೆಲಸಗಳ ಬಗ್ಗೆಯೂ ದೆಹಲಿಯಲ್ಲಿದ್ದ ತಮ್ಮ ಸಹಾಯಕರೊಂದಿಗೆ ಚರ್ಚಿಸಿದರು. ನಂತರ ನವದೆಹಲಿಯ ತಮ್ಮ ನಿವಾಸಕ್ಕೆ ಕರೆಮಾಡಿ ಕುಟುಂಬದವರೊಂದಿಗೆ ಮಾತನಾಡಿದರು. ಆ ನಂತರ ರೂಮಿನಲ್ಲಿ ಒಬ್ಬರೇ ಒಂದಷ್ಟು ಹೊತ್ತು ಅತ್ತಿತ್ತ ಓಡಾಡುತ್ತಿದ್ದರು. ಅದಾಗಲೇ ಮಧ್ಯರಾತ್ರಿಯಾಗಿತ್ತು.

 ಅಂದು ಜನವರಿ 11, 1966 ಬೆಳಗಿನ ಜಾವ 1:20. ಶಾಸ್ತ್ರೀಜಿಯವರ ಅಧಿಕಾರಿಗಳು ತಂಗಿದ್ದ ಕೋಣೆಯ ಹೊರಗೆ ಅಸ್ಪಷ್ಟ ಆಕೃತಿಯೊಂದು ಚಲಿಸಿದಂತಾಯಿತು. ನಂತರ ಯಾರೋ ಬಾಗಿಲು ಬಡಿದಂತಾಯಿತು. ಅಧಿಕಾರಿಗಳು ಬಾಗಿಲು ತೆರೆದು ನೋಡಿದರೆ ರಾತ್ರಿ ಉಡುಪಿನಲ್ಲಿದ್ದ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರು. ತಮ್ಮ ರೂಮಿನಿಂದ ತೀರಾ ಕಷ್ಟಪಟ್ಟು ಒಂದೊಂದೇ ಹೆಜ್ಜೆಯನ್ನಿಟ್ಟುಕೊಂಡು ಅಲ್ಲಿ ಬಂದು ನಿಂತಿದ್ದರು. ಸಣ್ಣ ಧ್ವನಿಯಲ್ಲಿ ವೈದ್ಯರನ್ನು ಕರೆಯುತ್ತಿದ್ದರು. ಆ ದೃಶ್ಯವನ್ನು ನೋಡುತ್ತಿದ್ದಂತೆ ಅವರೆಲ್ಲರೂ ಗಾಬರಿಗೊಂಡರು. ಪ್ರಧಾನಿಗಳಿಗೆ ಏನೋ ತೊಂದರೆ ಆಗಿದೆ. ಅವರ ದೇಹಸ್ಥಿತಿ ಎಂದಿನಂತಿಲ್ಲ ಎನ್ನುವುದು ಅವರಿಗೆ ಖಚಿತವಾಯಿತು. ಶಾಸ್ತ್ರೀಜಿಯವರು ಆ ಸಮಯದಲ್ಲಿ ವಿಪರೀತ ಬೆವರುತ್ತಿದ್ದರು, ಕೆಮ್ಮುತ್ತಿದ್ದರು. ಬಹಳ ಕಷ್ಟಪಟ್ಟು ಅವರನ್ನು ಹಾಸಿಗೆಯ ಮೇಲೆ ಮಲಗಿಸಲಾಯಿತು. ಕ್ಷಣ ಕ್ಷಣಕ್ಕೂ ಪ್ರಧಾನಿ ಕೆಮ್ಮುತ್ತಾ ಏದುಸಿರು ಬಿಡಲಾರಂಭಿಸಿದರು. ಮುಖವನ್ನು ಹಿಂಡಿಕೊಳ್ಳುತ್ತಿದ್ದರು. ಒಂದೆರಡು ಕ್ಷಣಗಳ ನಂತರ ಎದೆಯನ್ನು ಹಿಡಿದುಕೊಳ್ಳುತ್ತಲೇ ಎದ್ದು ಕುಳಿತರು. ನಂತರ ಹಾಸಿಗೆಯಿಂದ ತುಸು ದೂರದಲ್ಲಿದ್ದ ನೀರಿನ ಫ್ಲಾಸ್ಕಿನತ್ತ ಬೊಟ್ಟು ಮಾಡಿ ಏನನ್ನೋ ಹೇಳಲು ಹೊರಟಿದ್ದರು. ಆದರೆ ಅವರಿಂದ ಅದನ್ನು ಹೇಳಲಾಗಲಿಲ್ಲ. ಕೂಡಲೆ ವೈದ್ಯರಾದ ಡಾ.ಛುಗ್ ಓಡೋಡಿ ಬಂದರು. ನಾಡಿ ಹಿಡಿದು ಪರೀಕ್ಷಿಸಿದರು. ಅಷ್ಟರಲ್ಲಾಗಲೇ ಶಾಸ್ತ್ರೀಜಿಯವರ ನಾಡಿ ಮಿಡಿತ ಕ್ಷೀಣಿಸುತ್ತಾ ಬಂದಿತ್ತು. ರಕ್ತದ ಒತ್ತಡ ತೀರಾ ಕಡಿಮೆಯಾಗಿತ್ತು. ಹೃದಯದ ಬಡಿತ ಸಣ್ಣಗೆ ಕೇಳಿಸುತ್ತಿತ್ತು.  ನೋಡು ನೋಡುತ್ತಿದ್ದಂತೆ ಮುಂದಿನ ಕೆಲವೇ ಕ್ಷಣಗಳಲ್ಲಿ ಶಾಸ್ತ್ರೀಜಿಯವರು ಪ್ರಜ್ಞೆ ತಪ್ಪಿದರು. ನಾಡಿ ಮಿಡಿತ ಸಂಪೂರ್ಣ ಕ್ಷೀಣಿಸಿತು. ಅದಾಗಲೇ ಶಾಸ್ತ್ರಿಜಿಯವರ ಪ್ರಾಣಪಕ್ಷಿ ಹಾರಿಹೋಗಿತ್ತು. 

ಶಾಸ್ತ್ರೀಜಿಯವರ ಬದುಕಿನ ಕೃತಿ ತಾಷ್ಕೆಂಟ್ ಡೈರಿ':
ಇತ್ತೀಚೆಗಷ್ಟೇ ಶಾಸ್ತ್ರೀಜಿಯವರ ಕುರಿತ ಅಪರೂಪದ ಕೃತಿಯೊಂದು ಬಿಡುಗಡೆಗೊಂಡಿದೆ.ತಾಷ್ಕೆಂಟ್ ಡೈರಿ’ ಹೆಸರಿನ ಈ ಕೃತಿಯಲ್ಲಿ ಶಾಸ್ತ್ರೀಜಿಯವರ ಸಾರ್ವಜನಿಕ ಬದುಕಿನ ಹತ್ತಾರು ಮನಕಲಕುವ ಘಟನೆಗಳಿವೆ. ಪ್ರಧಾನಮಂತ್ರಿಯಾಗಿ ಅವರು ದೇಶವನ್ನು ಮುನ್ನಡೆಸಿದ ವರ್ಣನೆಯಿದೆ. 1965ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಭಯಾನಕ ಯುದ್ಧದ ಕಥನವಿದೆ. ಯುದ್ಧದ ಸಮಯದಲ್ಲಿ ಶಾಸ್ತ್ರೀಜಿ ತೆಗೆದುಕೊಂಡ ದಿಟ್ಟ ನಿರ್ಧಾರಗಳ ವಿವರಣೆ ಇದೆ. ಶಾಂತಿದೂತನಂತೆ ತಾಷ್ಕೆಂಟಿಗೆ ತೆರಳಿ ಹೆಣವಾಗಿ ಭಾರತಕ್ಕೆ ಮರಳಿದ ಕಣ್ಣೀರ ಕಥೆಯಿದೆ. ಜಗತ್ತಿನ ಬಹುದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ಭಾರತದ ಪ್ರಧಾನಮಂತ್ರಿ ದೂರದ ದೇಶಕ್ಕೆ ಹೋದಾಗ ಅಲ್ಲಿ ಅವರಿಗೆ ಕನಿಷ್ಟ ಸೌಕರ್ಯಗಳಾಗಲಿ ಕನಿಷ್ಟ ಭದ್ರತೆಯನ್ನಾಗಲಿ ನೀಡದೆ ಬೇಜವಾಬ್ದಾರಿತನ ಮೆರೆದ ಭಾರತ ಸರ್ಕಾರ ಮತ್ತು ಅಲ್ಲಿನ ಮಂತ್ರಿಗಳ ಬಗ್ಗೆ ಆಕ್ರೋಶವಿದೆ. ಸ್ವಾರ್ಥ, ದುರಾಸೆ ಮತ್ತು ಅಧಿಕಾರ ದಾಹದಿಂದ ದೇಶದ ಹಿತಾಸಕ್ತಿಯನ್ನೆ ಬಲಿಕೊಟ್ಟ ನಮ್ಮ ನಾಯಕರ ಅಸಲಿ ಮುಖ ಅನಾವರಣಗೊಂಡಿದೆ. ಶಾಸ್ತ್ರೀಜಿಯರ ಸಾವಿನ ಸುತ್ತ ಹೆಣೆದುಕೊಂಡ ಅನುಮಾನದ ವಿಶ್ಲೇಷಣೆಯಿದೆ.
ಅದೇನೇ ಇರಲಿ ಶಾಸ್ತ್ರೀಜಿಯವರಿಗೆ ಇಂತಹ ಸಾವು ಬರಬಾರದಿತ್ತು. ಅವರು ಇನ್ನಷ್ಟು ವರ್ಷ ಬದುಕಿದ್ದರೆ ನಮ್ಮ ದೇಶದ ಕತೆಯೇ ಬೇರೆಯಾಗಿರುತ್ತಿತ್ತು. ಆದರೆ ಒಂದಂತೂ ಸತ್ಯ. ಶತ ಶತಮಾನಗಳು ಕಳೆದರೂ ಶಾಸ್ತ್ರೀಜಿಯವರ ನೆನಪು ಮಾತ್ರ ಭಾರತೀಯರ ಹೃದಯದಲ್ಲಿ ಸದಾ ಜೀವಂತವಾಗಿರುತ್ತದೆ.

ತಾಷ್ಕೆಂಟ್ ಡೈರಿ‘ ಲೇಖಕರು: ಎಸ್.ಉಮೇಶ್, ಮೈಸೂರು 9742281766

ನಿಜಕ್ಕೂ ಅಂದು ಏನಾಯಿತು?
ಇದಿಷ್ಟೂ ಸರ್ಕಾರಿ ಕಡತಗಳಲ್ಲಿ ಶಾಸ್ತ್ರೀಜಿಯವರ ಅಂತಿಮ ಕ್ಷಣಗಳ ಬಗ್ಗೆ ದಾಖಲಾಗಿರುವ ವಿವರಗಳು. ಆದರೆ ನಿಜಕ್ಕೂ ಅಂದು ರಾತ್ರಿ ಏನಾಯಿತು. ಶಾಸ್ತ್ರೀಜಿಯವರು ಹಾಗೆ ಹಠಾತ್ತನೆ ಕುಸಿದು ಬೀಳಲು ಕಾರಣವೇನು. ಉಹೂಂ! ಆ ಎಲ್ಲವೂ ನಿಗೂಢ. ಅಷ್ಟಕ್ಕೂ ಈ ಅಜಾತಶತ್ರು ಇನ್ನಷ್ಟು ವರ್ಷ ಬದುಕಿದ್ದಿದ್ದರೆ ದೇಶದ ಭವಿಷ್ಯವನ್ನೇ ಬದಲಿಸಿಬಿಡುತ್ತಿದ್ದರು. ಅಂತಹ ವ್ಯಕ್ತಿಯ ಸಾವಿನಿಂದ ಲಾಭವಾದದ್ದು ಯಾರಿಗೆ? ಅತ್ಯಂತ ಗಹನವಾದ ಈ ಪ್ರಶ್ನೆಗೆ ಈವರೆಗೆ ಯಾರಿಂದಲೂ ಉತ್ತರಿಸಲು ಸಾಧ್ಯವಾಗಿಲ್ಲ. ಆದರೆ ಈ ಬಗ್ಗೆ ಸಾಲು ಸಾಲು ಅನುಮಾನಗಳು ಮತ್ತು ಸಿದ್ದಾಂತಗಳು ಹುಟ್ಟಿಕೊಂಡಿವೆ. ಶಾಸ್ತ್ರೀಜಿಯವರ ಸಾವನ್ನು ಭಿನ್ನ ದೃಷ್ಟಿಕೋನಗಳಲ್ಲಿ ನೋಡಿದಾಗ ಅನೇಕರ ಮೇಲೆ ಅನುಮಾನ ಮೂಡುತ್ತದೆ. ಅಂತರಾಷ್ಟ್ರೀಯ ಕೈವಾಡವಿರುವ ಬಗ್ಗೆ ಶಂಕೆ ಮೂಡುತ್ತದೆ.
ಶಾಸ್ತ್ರೀಜಿಯವರು ತಾಷ್ಕೆಂಟಿಗೆ ಹೋದಾಗ ಸರಿಯಾದ ರಕ್ಷಣೆ ಇರಲಿಲ್ಲ, ಉಳಿದುಕೊಂಡಿದ್ದ ಕೋಣೆಯಲ್ಲಿ ಟೆಲಿಫೋನ್‍ಗಳು, ಬಝóರ್‍ಗಳು ಮತ್ತು ಟೆಲಿಪ್ರಿಂಟರ್‍ಗಳು ಇರಲಿಲ್ಲ, ಸರಿಯಾದ ವೈದ್ಯಕೀಯ ಸೇವೆ ಇರಲಿಲ್ಲ. ಅವರ ಭದ್ರತೆಯ ವಿಚಾರದಲ್ಲಿ ಸರ್ಕಾರ ರಾಜಿಮಾಡಿಕೊಂಡಿತ್ತು. ಇನ್ನು ರಷ್ಯಾದ ಬಾಣಸಿಗರು ಶಾಸ್ತ್ರೀಜಿಯವರಿಗೆ ವಿಷಹಾಕಿರಬಹುದು ಎಂಬ ಅನುಮಾನವಿತ್ತು. ಆದರೆ ಭಾರತ ಸರ್ಕಾರ ಆ ಬಗ್ಗೆ ತನಿಖೆಯನ್ನೇ ಮಾಡಲಿಲ್ಲ. ದೇಶದ ಪ್ರಧಾನಿಯೊಬ್ಬರು ಹೊರದೇಶದಲ್ಲಿ ನಿಗೂಢವಾಗಿ ಸಾವನ್ನಪ್ಪಿದರೂ ಭಾರತ ಸರ್ಕಾರ ಮರಣೋತ್ತರ ಪರೀಕ್ಷೆಯನ್ನೂ ಮಾಡಲಿಲ್ಲ. ಅಷ್ಟೇ ಅಲ್ಲ ಶಾಸ್ತ್ರೀಜಿಯವರ ದೇಹ ಭಾರತಕ್ಕೆ ಬಂದಾಗ ಅದು ನೀಲಿಬಣ್ಣಕ್ಕೆ ತಿರುಗಿತ್ತು. ದೇಹದಲ್ಲಿ ಗಾಯದ ಗುರುತುಗಳಿತ್ತು. ಶಾಸ್ತ್ರೀಜಿಯವರ ನಿತ್ಯ ಬರೆಯುತ್ತಿದ್ದ ಕೆಂಪು ಡೈರಿ ಕಾಣೆಯಾಗಿತ್ತು. ಶಾಸ್ತ್ರೀಜಿಯವರ ಮರಣ ಪತ್ರದ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ತುಂಬ ಆಶ್ಚರ್ಯಕರ ವಿಚಾರವೆಂದರೆ ಸತ್ಯವನ್ನು ಹೊರಗೆಳೆಯುವ ಎಲ್ಲ ಅವಕಾಶಗಳನ್ನೂ ಆಗಿನ ಕೇಂದ್ರ ಸರ್ಕಾರ ಕೈಚೆಲ್ಲಿಬಿಟ್ಟಿತು. ರಾಜನಾರಾಯಣ್ ಸಮಿತಿ ನಡೆಸಿದ ತನಿಖೆಯ ವರದಿಯನ್ನೇ ಇಲ್ಲವಾಗಿಸಿಬಿಟ್ಟಿತು. ಶಾಸ್ತ್ರೀಜಿಯವರ ಸಾವಿನಲ್ಲಿ ಅಂತರಾಷ್ಟ್ರೀಯ ಪಿತೂರಿಯನ್ನು ತಳ್ಳಿಹಾಕುವಂತಿರಲಿಲ್ಲ. ಅಮೆರಿಕ ಮತ್ತು ರಷ್ಯಾದ ಕೈವಾಡವಿತ್ತು ಎಂದು ಅನೇಕರು ಆ ಕಾಲದಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ಪೂರಕವಾದ ಒಂದಷ್ಟು ದಾಖಲೆಗಳೂ ಸಾರ್ವಜನಿಕರ ಕೈಸೇರಿತ್ತು.
ಒಟ್ಟಾರೆ ಈ ಎಲ್ಲ ಸಂಗತಿಗಳಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂದು ನಿರ್ಧರಿಸುವುದು ಯಾರಿಂದಲೂ ಸಾಧ್ಯವಾಗಿಲ್ಲ. ಹಾಗಾಗಿಯೇ ಶಾಸ್ತ್ರೀಜಿಯವರ ಸಾವು ಭಾರತೀಯ ಇತಿಹಾಸದಲ್ಲಿ ಇಂದಿಗೂ ನಿಗೂಢವಾಗಿಯೇ ಉಳಿದುಬಿಟ್ಟಿದೆ. ಶಾಸ್ತ್ರೀಜಿಯವರ ಆತ್ಮ ಕಳೆದ ಐದು ದಶಕಗಳಿಂದ ನ್ಯಾಯಕ್ಕಾಗಿ ಹಾತೊರೆಯುತ್ತಿದೆ. ಅವರು ಮರಣ ಹೊಂದಿದ ದಿನ ಧರಿಸಿದ್ದ ರಕ್ತ ಸಿಕ್ತ ಬಟ್ಟೆಗಳು ಈಗಲೂ ಅವರ ಮನೆಯಲ್ಲೇ ಇದೆ. ಪ್ರಧಾನಿಗಳು ಹೃದಯಾಘಾತದಿಂದ ಮೃತಪಟ್ಟಿದ್ದರೆ ಅವರ ಬಟ್ಟೆಗಳಲ್ಲೇಕೆ ರಕ್ತದ ಕಲೆಗಳಿವೆ ಎಂದು ಅವರ ಕುಟುಂಬ ಕೇಳುತ್ತಿದೆ. ಈ ಕ್ಷಣದವರೆಗೂ ಸರ್ಕಾರ ಶಾಸ್ತ್ರೀಜಿಯವರ ಮರಣ ಪತ್ರವನ್ನು ಅವರ ಕುಟುಂಬಕ್ಕೆ ತಲುಪಿಸಿಲ್ಲ. ಶಾಸ್ತ್ರೀಜಿಯವರ ಇಬ್ಬರು ಮಕ್ಕಳು ಎಂದಾದರೂ ಒಂದು ದಿನ ತಮ್ಮ ತಂದೆಯ ಸಾವಿನ ರಹಸ್ಯ ಬಹಿರಂಗಗೊಳ್ಳುತ್ತದೆ ಎಂಬ ಭರವಸೆಯಲ್ಲೇ ಇದ್ದಾರೆ. ತಮ್ಮ ತಂದೆಯ ಸಾವಿನ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸುತ್ತಿದ್ದಾರೆ. ಎಲ್ಲ ದಾಖಲೆಗಳನ್ನೂ ಬಹಿರಂಗಪಡಿಸುವಂತೆ ಆಗ್ರಹಿಸುತ್ತಿದ್ದಾರೆ. ಆದರೆ ಅದ್ಯಾವುದೂ ಈವರೆಗೆ ಸಾಧ್ಯವಾಗಿಲ್ಲ. ಈಗಲಾದರೂ ಕೇಂದ್ರ ಸರ್ಕಾರ ನೇತಾಜಿಯವರ ಕುರಿತು ಬಿಡುಗಡೆ ಮಾಡಿದ ದಾಖಲೆಗಳಂತೆ ಶಾಸ್ತ್ರೀಜಿ ಸಾವಿನ ಕುರಿತ ಅಳಿದುಳಿದ ದಾಖಲೆಗಳನ್ನಾದರೂ ಬಿಡುಗಡೆ ಮಾಡಲಿ. ಆಗಲಾದರೂ ಭಾರತೀಯರ ಮನಸ್ಸಿನಲ್ಲಿ ಆಳವಾಗಿ ಬೇರೂರಿರುವ ಒಂದಷ್ಟು ಅನುಮಾನಗಳು ದೂರವಾದೀತು.

ಲೇಖಕರು: ಎಸ್.ಉಮೇಶ್, ಮೈಸೂರು

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಮರಾಜ್ಯದಲ್ಲಿ ಅಸ್ಪೃಶ್ಯತೆ ಸಲ್ಲದು : ಶ್ರೀ ಮ ವೆಂಕಟರಾಮು

Fri Oct 2 , 2020
ರಾಮರಾಜ್ಯದಲ್ಲಿ ಅಸ್ಪೃಶ್ಯತೆ ಸಲ್ಲದು : ಲೇಖಕರು : ಶ್ರೀ ಮ ವೆಂಕಟರಾಮು, ಪ್ರಾಂತ ಸಂಘಚಾಲಕರು, ಆರ್‌ಎಸ್‌ಎಸ್ ಕರ್ನಾಟಕ ದಕ್ಷಿಣ ಭಾರತದ ಸ್ವಾತಂತ್ರ್ಯ ಆಂದೋಲನ ಕೇವಲ ಬ್ರಿಟಿಷರಿಂದ ಮುಕ್ತಿ ಪಡೆಯುವುದಕ್ಕೆ ಸೀಮಿತವಾಗಿರಲಿಲ್ಲ. ಭಾರತದ ಮಾನವೀಯ ವಿಕಾಸಕ್ಕೆ ಒತ್ತು ನೀಡಿತ್ತು. ಗಾಂಧೀಜಿಯವರ ಕನಸಿನಲ್ಲಿ ರಾಮರಾಜ್ಯವಿತ್ತು. ಅದಕ್ಕಾಗಿ ಇಡೀ ಭಾರತದ ಜನಮಾನಸವನ್ನು ಸಿದ್ಧಗೊಳಿಸಬೇಕಿತ್ತು. ಮರ್ಯಾದಾಪುರುಷೋತ್ತಮ ಶ್ರೀರಾಮ ಬೆಸ್ತರ ಮುಖಂಡನಾದ ಗುಹನಿಗೆ ಆಪ್ತನಾದವನು ಪಕ್ಷಿ ಪ್ರಮುಖನಾದ ಜಟಾಯುವಿಗೆ ಸಂಸ್ಕಾರ ಕರ್ಮವನ್ನು ಮಾಡಿದವನು, ಶಬರಿ ತಾನು ಕಚ್ಚಿ […]