ಆದಿಚುಂಚನಗಿರಿ ಮಠದ ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರಿಗೆ ವಿಹಿಂಪ ಆಹ್ವಾನ

ಅಯೋಧ್ಯೆಯಲ್ಲಿ ಆಗಸ್ಟ್ 5 ರಂದು ನಡೆಯಲಿರುವ ಶ್ರೀ ರಾಮಮಂದಿರದ ಭೂಮಿಪೂಜೆ ಕಾರ್ಯಕ್ರಮಕ್ಕೆ ಆದಿಚುಂಚನಗಿರಿ ಪುಣ್ಯಕ್ಷೇತ್ರದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ‌‌ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಆಹ್ವಾನಿಸಲಾಗಿದೆ. ವಿಶ್ವ ಹಿಂದು ಪರಿಷದ್ ನ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಹಾಗೂ ಪದಾಧಿಕಾರಿಗಳಾದ ಕೃಷ್ಣಮೂರ್ತಿ ಮತ್ತು ಮುನಿರಾಜು ಅವರು ಪೂಜ್ಯ ಸ್ವಾಮೀಜಿಯವರನ್ನು ಭೇಟಿ ಮಾಡಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪರವಾಗಿ ಅವರನ್ನು ಅಧಿಕೃತವಾಗಿ ಆಹ್ವಾನಿಸಿದರು. ಪೂಜ್ಯ ಸ್ವಾಮೀಜಿಯವರು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಹರ್ಷದಿಂದ ಒಪ್ಪಿಕೊಂಡಿರುತ್ತಾರೆ.

ಇದೇ ಸಂದರ್ಭದಲ್ಲಿ, ರಾಮಮಂದಿರದ ಶಿಲಾನ್ಯಾಸಕ್ಕಾಗಿ ಪೂಜ್ಯ ಸ್ವಾಮೀಜಿಯವರ ಅಮೃತಹಸ್ತದಿಂದ ಶ್ರೀ ಆದಿಚುಂಚನಗಿರಿ ಕ್ಷೇತ್ರದ ಮೃತ್ತಿಕೆಯನ್ನೂ ಸಂಗ್ರಹಿಸಲಾಯಿತು. ಶಿಲಾನ್ಯಾಸದ ಪ್ರಯುಕ್ತ ದೇಶದ ಎಲ್ಲ ಪುಣ್ಯಕ್ಷೇತ್ರಗಳಿಂದ ಮೃತ್ತಿಕೆ ಸಂಗ್ರಹಿಸಲಾಗುತ್ತಿದ್ದು, ಎಲ್ಲವನ್ನೂ ಅಯೋಧ್ಯೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.