ಆಂದೋಲನ ಜೀವಿಯೆಂಬ ಅಪಾಯಕಾರಿ ಕ್ರಿಮಿ

ಕಳೆದ ದಶಕಗಳಿಗೆ ಹೋಲಿಸಿದರೆ ಈಗ ಒಂದಂತೂ ಖುಷಿಯ ಸಂಗತಿ ನಮಗೆ ಕಂಡು ಬರುತ್ತಿದೆ. ಅದೆಂದರೆ ದೇಶದ ಜನರು ಈಗ ಜಾಗೃತರಾಗುತ್ತಿದ್ದಾರೆ. ಸಮಾಜವು ಈಗ ಯಾವುದನ್ನೇ ಆಗಲಿ ಕುರುಡಾಗಿ ಬೆಂಬಲಿಸುತ್ತಿಲ್ಲ. ಈ ಹಿಂದೆ ದೇಶದ ಹಿತಾಸಕ್ತಿಯನ್ನು ಕುರಿತು ತಾವು ಹೇಳುವುದೇ ಅಂತಿಮ ಸತ್ಯ ಮತ್ತು ತಾವು ಮಾತ್ರವೇ ಜನಗಳ ಕುರಿತು ನಿಜವಾದ ಕಾಳಜಿಯುಳ್ಳವರು ಎಂಬುದಾಗಿ ದೇಶದ ಜನತೆ ಒಪ್ಪಿಕೊಳ್ಳಬೇಕು ಎಂಬ ಭಾವನೆಯನ್ನು ಕೆಲವರು ನಿರ್ಮಿಸಿದ್ದರು. ಇಂತಹವರಲ್ಲಿ ಸಹ ಪ್ರಭಾವಲಯಗಳಿದ್ದವು. ತಾಲ್ಲೂಕು ಮಟ್ಟದಿಂದ ಹಿಡಿದು ರಾಷ್ಟ್ರೀಯ ಮಟ್ಟದವರೆಗೆ ಪ್ರಜಾಹಿತವನ್ನು ಗುತ್ತಿಗೆಗೆ ತೆಗೆದುಕೊಂಡವರಿದ್ದರು. ಕೆಲವರು ಭಾಷೆ, ಪರಿಸರ, ರೈತ, ಶಿಕ್ಷಣ ಇತ್ಯಾದಿ ಕ್ಷೇತ್ರಗಳ ಪರಿಧಿಯೊಳಗೆ ಗುರುತಿಸಿಕೊಂಡರೆ, ಬಹುಪಾಲು ಮಂದಿ ಸರ್ವಜ್ಞರಿದ್ದು ಎಲ್ಲ ವಿಷಯಗಳ ಬಗ್ಗೆಯೂ ಆಳವಾದ (ಅ)ಜ್ಞಾನವುಳ್ಳವರಾಗಿ ವಿಷಯಮಂಡನೆಗೆ ಮುಂದಾಗುತ್ತಿದ್ದರು.

ಮಾಧ್ಯಮ, ಸಾಹಿತ್ಯ, ಶಿಕ್ಷಣ ಮತ್ತು ಸಂಹವನ ಕ್ಷೇತ್ರಗಳು ಇಂತಹವರಿಂದಲೇ ನಿಯಂತ್ರಿಸಲ್ಪಡುತ್ತಿದ್ದ ಕಾರಣದಿಂದಾಗಿ ಜನರ ನಿಜವಾದ ಧ್ವನಿ ಏನೆಂಬುದೂ ಗೊತ್ತಾಗುತ್ತಿರಲಿಲ್ಲ. ಜನರ ಇಚ್ಛೆ ಬೇರೆಯೇ ಇದ್ದರೂ ತಮಗಿದ್ದ ಅಭಿವ್ಯಕ್ತಿಯ ಶಕ್ತಿಯಿಂದಾಗಿ ಇವರ ಅಭಿಪ್ರಾಯಗಳೇ ಎಲ್ಲರ ಅಭಿಪ್ರಾಯ ಎಂದು ಘಂಟಾಘೋಷವಾಗಿ ಸಾರುವಂತೆ ಮಾಡಿ ನೈಜಕಾಳಜಿಯ ಧ್ವನಿಗಳ ಹುಟ್ಟಡಗಿಸಿಬಿಡುತ್ತಿದ್ದರು. ವಿಚಿತ್ರವೆಂದರೆ ಇವರುಗಳು ಬಹುಬುದ್ಧಿವಂತರಿದ್ದು ಸರ್ಕಾರಿ ವ್ಯವಸ್ಥೆಯ ಭಾಗವಾಗಿ, ಜನರ ತೆರಿಗೆ ತಿಂದೇ ಸರ್ಕಾರದ ನಿಲುವುಗಳ ವಿರುದ್ಧ ಮಾತನಾಡುತ್ತಿದ್ದರು. ಜನಹಿತವನ್ನು ಮೂಲೆಗೆ ಹಾಕುತ್ತಿದ್ದರು. ವಿಶ್ವವಿದ್ಯಾಲಯಗಳಲ್ಲಿ ಆಯಕಟ್ಟಿನ ಜಾಗಗಳಲ್ಲಿ ವರ್ಷಗಟ್ಟಲೇ ಅಂಡೂರಿರುವುದರ ಜೊತೆಗೆ ಪ್ರಾಧಿಕಾರ, ಮಂಡಳಿ, ನಿಗಮ, ಆಯೋಗ, ಅಧ್ಯಯನ ಸಮಿತಿ, ಸತ್ಯಶೋಧನಾ ಸಮಿತಿ, ತಜ್ಞರ ಸಮಿತಿ, ನುರಿತ ತಜ್ಞರ ಸಮಿತಿ, ವಿಷಯ ತಜ್ಞರ ಕಮಿಟಿ, ಅನುಷ್ಠಾನ ಮಂಡಲಿ, ಸಲಹಾ ಮಂಡಲಿ ಇತ್ಯಾದಿಗಳನ್ನೂ ಇವರದೇ ಸಾಮ್ರಾಜ್ಯವನ್ನಾಗಿಸಿಕೊಂಡಿದ್ದರು. ಅವನ್ನು ನಡೆಸಲೂ ಸಹ ಸರ್ಕಾರಿ ಟಿಎ,ಡಿಎ, ಸಿಟ್ಟಿಂಗ್ ಫೀಸುಗಳನ್ನು ಜೇಬಿಗಿಳಿಸುವ ಪ್ರವೀಣರಿವರು.

ಈ ದುಷ್ಟ ಚತುಷ್ಟಯದಲ್ಲಿ ಪತ್ರಿಕಾ ಹೇಳಿಕೆ ನೀಡಿ, ಉದ್ದುದ್ದ ಲೇಖನ ಬರೆದು, ಸೆಮಿನಾರು, ಕಮ್ಮಟ, ವಿಚಾರ ಸಂಕಿರಣ ನಡೆಸಿ ವೇದಿಕೆಯಲ್ಲಿ ಮಿಂಚುವ ಗುಂಪು ಪ್ರಮುಖವಾದದ್ದು. ಬ್ಯಾನರ್ ಹಿಡಿದು ಪ್ರತಿಭಟನೆ, ಮೊಂಬತ್ತಿ ಹಿಡಿದು ಮೆರವಣಿಗೆ, ಮಾನವ ಸರಪಳಿ, ತಮಟೆ ಬಡಿಯುವುದು ಇತ್ಯಾದಿ ಕ್ರಿಯೆಗಳ ಪರಿಣಿತರದು ಮತ್ತೊಂದು ಗುಂಪು. ಗುಂಪು ಸಣ್ಣದಾದರೂ ಗದ್ದಲ ಮಾಡುವುದರಲ್ಲಿ ಎತ್ತಿದ ಕೈ. ವಿಷಯ ಯಾವುದಾದರೂ ಸರಿ ಬೊಬ್ಬೆ ಹೊಡೆಯುವುದಷ್ಟೇ ಇವರ ಕೆಲಸ. ತಮ್ಮ ಘನಕಾರ್ಯವನ್ನು ಒಂದಕ್ಕೆ ಹತ್ತರಷ್ಟು ದೊಡ್ಡದು ಮಾಡಿ ಮಾಧ್ಯಮಗಳಲ್ಲಿ ಮುದ್ರಣ, ಪ್ರಸಾರ ಆಗುವಂತೆ ಮಾಡುವುದರಲ್ಲೂ ಇವರು ಪ್ರವೀಣರು. ಇನ್ನು ಮತ್ತೊಂದು ದಂಗೆಕೋರರು, ಲೂಟಿಕೋರರು, ಬೆಂಕಿಹಚ್ಚುವವರು ಮತ್ತು ಕೊಲೆಗಾರರು. ಇವರು ಸಕಲ ಆಯುಧ ಸಂಪನ್ನರು, ನಿಜಾರ್ಥದಲ್ಲಿ ಭಯೋತ್ಪಾದಕರೇ. ಕಲ್ಲು, ಪೆಟ್ರೋಲ್ ಬಾಂಬಿನಿಂದ ಹಿಡಿದು ಗನ್ನುಗಳವರೆಗೆ ಎಲ್ಲವೂ ಇವರ ಬಳಿ ಲಭ್ಯ. ಪೋಲಿಸರನ್ನೇ ಕ್ರೂರವಾಗಿ ಹತ್ಯೆಗೈಯಲು ಇವರು ಹೇಸುವುದಿಲ್ಲ.

ಈ ಎಲ್ಲಾ ಹಂತದವರಿಗೆ ಅದರಲ್ಲೂ ಪ್ರಮುಖವಾಗಿ ಗಲಭೆಕೋರರಿಗೆ ರಕ್ಷಣೆ ಒದಗಿಸಲು ಬಿಳಿಟೋಪಿ, ಕರಿಕೋಟು, ಖಾದಿ ಜುಬ್ಬಾ, ಬಗಲಲಿ ಚೀಲ ಧರಿಸಿದ ಮೊದಲ ಗುಂಪಿನವರು ಸಿದ್ಧಾಂತ, ಮಾನವ ಹಕ್ಕು, ಅಭಿವ್ಯಕ್ತಿ ಸ್ವಾತಂತ್ರ್ಯ ಇತ್ಯಾದಿ ಹೆಸರಿನ ಗುರಾಣಿಗಳನ್ನು ಹಿಡಿದು ಸದಾ ಸಿದ್ದರಾಗಿರುತ್ತಾರೆ. ಇದಕ್ಕಾಗಿ ಕೋಟಿಗಟ್ಟಲೇ ಹಣ ಇವರುಗಳ ಬೇನಾಮಿ ಖಾತೆಗೆ ಬಂದು ಬೀಳುತ್ತಿರುತ್ತದೆ. ಇನ್ನು ಸ್ವಾರ್ಥವೇ ಮೈವೆತ್ತ ಕೆಲ ರಾಜಕೀಯ ಪಕ್ಷಗಳೂ ಇವರಿಗೆ ಇಡುಗಂಟನ್ನು ಆಗಾಗ ನೀಡುತ್ತಿರುತ್ತವೆ. ಹೀಗಾಗಿ ಇವರಿಗೆಂದೂ ಅಭಾವದ ಅರಿವಿಲ್ಲ. ಗಾಯಕರು, ನಟರು ಇತ್ಯಾದಿಯವರನ್ನು ಅವರು ಕೇಳಿದಷ್ಟು ಹಣಕೊಟ್ಟು ಕೊಂಡುಕೊಳ್ಳಬಲ್ಲರು ಮತ್ತು ಅವರಿಂದ ಹೇಳಿಕೆ ಕೊಡಿಸಿ, ಪ್ರತಿಭಟನೆ ಸ್ಥಳಕ್ಕೆ ಕರೆಯಿಸಿ ಅದೆಷ್ಟೇ ಕಳಪೆಯವರಾದರೂ ಸರಿ, ಸಂವೇದನಾಶೀಲ ಸೆಲೆಬ್ರಿಟಿ ಎಂದು ಬಿಂಬಿಸಿ ಮೈಲೇಜು ತೆಗೆದುಕೊಳ್ಳುವ ವ್ಯವಹಾರಸ್ಥರುಗಳು.

ಒಟ್ಟಿನಲ್ಲಿ ದೇಶದ ಹಿತಕ್ಕೆ ಸದಾ ಮಾರಕ ನಿಲುವು ತೆಗೆದುಕೊಳ್ಳುವ ಆದರೂ ದೇಶದ ಹಿತರಕ್ಷಕರಂತೆ ಬೊಬ್ಬೆ ಹೊಡೆಯುವ ಇವರ ನಿಜಸ್ವರೂಪವನ್ನು ಅರಿಯುವ ಬಗೆ ತೀರಾ ಇತ್ತೀಚಿನವರೆಗೂ ಅಂದರೆ ಸಾಮಾಜಿಕ ಮಾಧ್ಯಮಗಳೆಂಬ ಅಭಿವ್ಯಕ್ತಿ ಜನಸಾಮಾನ್ಯನ ಕೈಗೆಟುಕುವವರೆಗೂ ಸಾಧ್ಯವಿರಲಿಲ್ಲ. ಅಲ್ಲದೇ ಇವರ ಬಣ್ಣ ಬಯಲು ಮಾಡುವಂತಹ ಕೆಲ ಪತ್ರಿಕೆಗಳು, ಚಾನೆಲ್ ಗಳೂ ಸುದೈವವಶಾತ್ ಇದೇ ಹಂತದಲ್ಲಿ ಆರಂಭಗೊಂಡವು. ಹೀಗಾಗಿ ಸ್ಥಾಪಿತ ಅಭಿಪ್ರಾಯಕ್ಕೆ ಭಿನ್ನವಾದ ದೇಶದ ನಿಜವಾದ ಅಂತರಂಗದ ಧ್ವನಿಯೂ ಈಗ ಕೇಳಿ ಬರುತ್ತಿದೆ. ಇದೇ ಇವರ ಆತಂಕಕ್ಕೆ ಕಾರಣವಾಗಿ ತಳಕುಸಿದಂತಾಡುತ್ತಿದ್ದಾರೆ.

ಬಹುಪಾಲು ಹಿಂದೂ ವಿರೋಧವನ್ನೇ ಉಸಿರನ್ನಾಗಿ ಮಾಡಿಕೊಂಡ ಈ ಪರೋಪಜೀವಿಗಳು ತಮ್ಮನ್ನು ತಾವು ಪ್ರಗತಿಪರರು, ಬುದ್ಧಿಜೀವಿಗಳು, ವಿಚಾರವಾದಿ ಮತ್ತು ಸಾಹಿತಿಗಳೆಂದು ಕರೆದುಕೊಂಡದ್ದನ್ನು ಈಗಲೂ ಯಾರೂ ವಿಮರ್ಶಿಸದೇ ಅದೇ ಶೀರ್ಷಿಕೆ ಹಚ್ಚಿ ಕರೆಯುತ್ತಿದ್ದಾರೆ. ಆದರೆ ಎಚ್ಚರಗೊಳ್ಳಿ ಈಗ ಇಂತಹವರನ್ನು ಗುರುತಿಸಲು ಅನೇಕ ಶಬ್ದಗಳನ್ನು ದೇಶಭಕ್ತರು, ಸಮಾಜದ ನಿಜವಾದ ಹಿತವನ್ನು ಬಯಸುವವರು ಕಂಡುಹಿಡಿದಿದ್ದಾರೆ. ಗಂಜಿಗಿರಾಕಿ, ಪೇಮೆಂಟ್ ಹೋರಾಟಗಾರರು, ನಗರನಕ್ಸಲ, ವಿಚಾರವ್ಯಾಧಿ, ತುಕ್ಡೆಗ್ಯಾಂಗ್, (ಸ್ವಲ್ಪ ಮುಜುಗರದ ಶಬ್ದ ಎನಿಸಿದರೂ ʼಪ್ರೆಸ್ಟಿಟ್ಯೂಟ್ʼ ಎಂದು ಸಹ ಕೆಲವರು ಹೇಳುವುದಿದೆ), ಇತ್ಯಾದಿಗಳ ಜೊತೆ ಮೊನ್ನೆ ಸಂಸತ್ತಿನಲ್ಲಿ ಪ್ರಧಾನಮಂತ್ರಿಗಳು ‘ಆಂದೋಲನ ಜೀವಿ’ಯೆಂಬ ಹೊಸ ಟ್ಯಾಗ್ ಅನ್ನು ನೀಡಿದ್ದಾರೆ. ಆಂದೋಲನಗಳ ಮೂಲಕ ಹೊಟ್ಟೆ ಹೊರೆಯುವಿಕೆಯೇ ಇವರ ಜೀವನವೆಂದರ್ಥ.

ಆದರೂ ಏಕೋ ಪ್ರಧಾನಿಯವರು ಠಂಕಿಸಿದ ಶಬ್ದ ತುಂಬಾ ಸಾಫ್ಟ್ ಎನಿಸುತ್ತಿದೆ. ಬಹುಶಃ ಇನ್ನೂ ಕಠಿಣ ಶಬ್ದ ಇವರನ್ನು ಗುರುತಿಸಲು, ಮತ್ತು ಕಠಿಣ ಕ್ರಮಗಳು ಇವರನ್ನು ಮಟ್ಟ ಹಾಕಲು ಬೇಕಾಗಿದೆ.

ಸಂತೋಷ್ ಜಿ ಆರ್

ಸಂತೋಷ್ ಜಿ ಆರ್

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಇಸ್ರೇಲ್ ಅನ್ನು ಮಾನವತಾ ವಿರೋಧಿ ಎನ್ನುವ ಬದಲು ಆವಿಷ್ಕಾರದ ಹರಿಕಾರ ಎಂದು ಗುರುತಿಸುವವರ ಸಂಖ್ಯೆ ಹೆಚ್ಚಾಗಲಿ!

Tue Feb 9 , 2021
ಆವಿಷ್ಕಾರದ ಹರಿಕಾರಬುದ್ಧಿಶಾಲಿ ಇಸ್ರೇಲಿಗಳು ವಿಶ್ವವನ್ನು ಬದಲಿಸಿದ ಪರಿಪುಸ್ತಕ ಪರಿಚಯ : ಪ್ರವೀಣ್ ಪಟವರ್ಧನ್ ಎಲಿಜರ್ ಬೆನ್ ಯಹುದಾ ಹೀಬ್ರೂ ಭಾಷೆಯನ್ನು ಇಸ್ರೇಲಿಗರ ಜನಭಾಷೆಯನ್ನಾಗಿ ಮಾಡಿದ ಕತೆಯನ್ನು ಡಾ. ಎಚ್ ಆರ್ ವಿಶ್ವಾಸ ‘ಮತ್ತೆ ಹೊತ್ತಿತು ಹೀಬ್ರೂ ಹಣತೆ’ ಪುಸ್ತಕದಲ್ಲಿ ಅತ್ಯದ್ಭುತವಾಗಿ, ಸವಿಸ್ತಾರವಾಗಿ ವಿವರಿಸಿದ್ದಾರೆ. ದೇವ ಭಾಷೆ ಎಂದು ಮೂದಲಿಸಲ್ಪಟ್ಟ ಹೀಬ್ರೂವನ್ನು ಜನಸಾಮಾನ್ಯರು ಬಳಸುವಂತಾಗಿ ಇಂದು ಆ ದೇಶದ ರಾಷ್ಟ್ರಭಾಷೆಯಾಗಿ ಪರಿವರ್ತಿತವಾಗಬೇಕೆಂದರೆ ಬೆನ್ ಯಹುದಾ ಸಾಧನೆಯನ್ನು, ಪರಿಶ್ರಮವನ್ನು ಆ ಪುಸ್ತಕದಿಂದ ಓದಿ […]