ಆಡು ಮುಟ್ಟದ ಸೊಪ್ಪು ನಮಗೇಕೆ?

ಮಳೆಕಾಡು ನುಂಗುತ್ತಿರುವ ಅಕೇಶಿಯಾ
ಅರಣ್ಯ ಸಂವರ್ಧನೆಯ ಆಲಸ್ಯ ಮಾರ್ಗಕ್ಕೆ ತೆರೆ ಬೀಳಲಿ


ರಾಜೀವ ಹೆಗಡೆ, ಪತ್ರಕರ್ತ


ಸುಮಾರು ಮೂರು ವರ್ಷಗಳ ಹಿಂದೆ ನಡೆದ ಘಟನೆ. ವಿಜಯವಾಣಿ ಪತ್ರಿಕೆಯಲ್ಲಿ ನಾನು ಅಕೇಶಿಯಾ, ನೀಲಗಿರಿ ವಿರುದ್ಧ ಸರಣಿ ಲೇಖನ ಬರೆದಿದ್ದೆ. ಅಂದಿನ ಸರ್ಕಾರಕ್ಕೂ ಈ ಬಗ್ಗೆ ಮನವರಿಕೆಯಾಗಿ ನಿಷೇಧಿಸಿ ಕಾನೂನು ಹೊರತಂದಿತ್ತು. ಈ ವಿಚಾರ ಸಾಕಷ್ಟು ಭ್ರಷ್ಟ ಹಾಗೂ ಆಲಸಿ ಅರಣ್ಯಾಧಿಕಾರಿಗಳಿಗೆ ನುಂಗಲಾರದ ತುತ್ತಾಗಿತ್ತು. ಈ ಸಂದರ್ಭದಲ್ಲಿ ಉತ್ತರ ಕನ್ನಡದ ಕೆಲ ಪ್ರಮುಖ ಅರಣ್ಯಾಧಿಕಾರಿಗಳು ಅನೌಪಚಾರಿಕವಾಗಿ ಹೋಟೆಲ್‌ವೊಂದರಲ್ಲಿ ಮಾತನಾಡುತ್ತಿದ್ದರು. “ಈ ರಾಜೀವ ಹೆಗಡೆಗೆ ಅಕೇಶಿಯಾ ವಿರೋಧಿ ಲಾಬಿ ಕಡೆಯವರು ದುಡ್ಡು ಕೊಟ್ಟು ಬರೆಸುತ್ತಿದ್ದಾರೆ. ತಲೆಬುಡವಿಲ್ಲದೇ ದುಡ್ಡಿಗಾಗಿ ಲೇಖನ ಬರೆಯುತ್ತಿದ್ದಾರೆ. ಜನರನ್ನು ದಿಕ್ಕು ತಪ್ಪಿಸುವ ಪ್ರಯತ್ನ ನಡೆಯುತ್ತಿದೆ” ಎಂದು ಹೇಳಿದ್ದರು. ಅಲ್ಲೇ ಪಕ್ಕದಲ್ಲಿ ನನ್ನ ತಂದೆ ಹಾಗೂ ಅವರ ಸ್ನೇಹಿತರು ಕುಳಿತಿದ್ದರು. ಆ ಅಧಿಕಾರಿಯ ಪರಿಚಯವಿದ್ದ ನನ್ನ ತಂದೆಯ ಸ್ನೇಹಿತರು ಅಧಿಕಾರಿಗೆ ತಂದೆಯ ಪರಿಚಯ ಮಾಡಿಕೊಟ್ಟು,  “ನೀವು ಮಾತನಾಡುತ್ತಿರುವ ವ್ಯಕ್ತಿಯ ತಂದೆಯೇ ಇವರು” ಎಂದರು. “ನನ್ನ ಮಗ ದುಡ್ಡು ತೆಗೆದುಕೊಂಡು ಬರೆದಿದ್ದಾನೆ ಎಂದಿಟ್ಟುಕೊಳ್ಳೋಣ.  ಆದರೆ ನಿಮ್ಮ ನಿವೃತ್ತಿ ಬಳಿಕ ನಿಮ್ಮ ಜಾಗದಲ್ಲಿ ಅಕೇಶಿಯಾ ನೆಡುತ್ತೀರಾ” ಎಂದು ನನ್ನ ತಂದೆ ಪ್ರಶ್ನಿಸಿದಾಗ, “ಕ್ಷಮಿಸಿ, ಗೊತ್ತಿಲ್ಲದೇ ಮಾತನಾಡಿಬಿಟ್ಟೆವು. ಖಂಡಿತ ನಮ್ಮನೆಯಲ್ಲಿ ಈ ಗಿಡ ನೆಡುವುದಿಲ್ಲ” ಎಂದು ಅರಣ್ಯಾಧಿಕಾರಿಯೇ ಸಮಜಾಯಿಷಿ ನೀಡಿದ್ದರು.
ಇದೇ ರೀತಿ ಈಗ ಅಕೇಶಿಯಾ ಹಾಗೂ ನೀಲಗಿರಿ ವಿರುದ್ಧ ಧ್ವನಿಯೆತ್ತಿದಾಗ, “ಷಡ್ಯಂತ್ರ, ದುಡ್ಡಿಗಾಗಿ ವಿರೋಧ, ಅಕೇಶಿಯಾ ವಿರೋಧಿ ಲಾಭಿಯ ಭ್ರಷ್ಟಾಚಾರ” ಎನ್ನುವ ವಿವಿಧ ಹೇಳಿಕೆಗಳು ಕೇಳಿಸುತ್ತಿವೆ. ಇದೆಲ್ಲ ಸತ್ಯವೇ ಎನ್ನುವ ಮುನ್ನ ಅಕೇಶಿಯಾ ಹಿನ್ನೆಲೆ, ಉದ್ದೇಶ, ಪರಿಣಾಮದ ಬಗ್ಗೆ ಒಂದಿಷ್ಟು ತಿಳಿದುಕೊಳ್ಳುವ ಅಗತ್ಯವಿದೆ. ಹಾಗೆಯೇ ಲಾಬಿ ಹಾಗೂ ಕಾಳಜಿ ಬಗೆಗಿನ ವ್ಯತ್ಯಾಸವನ್ನೂ ತಿಳಿಯಬೇಕಿದೆ.

ಅಕೇಶಿಯಾ ಹಾಗೂ ಮಲೆನಾಡಿನ ಮಳೆಕಾಡು
ಅಕೇಶಿಯಾ ಈ ನೆಲದ ಸಾಂಪ್ರದಾಯಿಕ ಮರವಲ್ಲ. ನಮ್ಮವರಲ್ಲದ ಅಕ್ರಮ ವಲಸಿಗರನ್ನು ದೇಶದಿಂದ ಹೊರಗಟ್ಟಲು ಕಾನೂನು ತಂದಿರುವ ವೇಳೆಯಲ್ಲಿ ನಮ್ಮೂರಿನ ಸಾಂಪ್ರದಾಯಿಕ ಕಾಡನ್ನು ಹಾಳು ಮಾಡುತ್ತಿರುವ ವಲಸೆ ಅಕೇಶಿಯಾದ ಬಗ್ಗೆ ಒಂದಿಷ್ಟು ತಿಳಿಯುವುದು ಅತ್ಯಗತ್ಯ.

ಭಾರತಕ್ಕೆ 1960-70ರ ದಶಕದಲ್ಲಿ ಅಕೇಶಿಯಾ ಕಾಲಿಟ್ಟಿತು.  ಆದರೆ 1980-90ರ ದಶಕದಲ್ಲಿ ಪಶ್ಚಿಮಘಟ್ಟವನ್ನು ಅತಿಯಾಗಿ ಅಕೇಶಿಯಾ ವ್ಯಾಪಿಸಿಕೊಂಡಿತು. ಇದಕ್ಕೆ ಕಾರಣವಾಗಿದ್ದು ಜಪಾನ್‌ ಹಾಗೂ ವಿಶ್ವಬ್ಯಾಂಕ್‌. ತಾಪಮಾನ ಏರಿಕೆ ನಿಯಂತ್ರಣ ಹಾಗೂ ಕಾಡುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ, ಜಪಾನ್‌ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನೆರವು ನೀಡಿದವು. ಇದರ ಜತೆಗೆ ಆಸ್ಟ್ರೇಲಿಯಾ ಸಂಜಾತ ಅಕೇಶಿಯಾ ಎನ್ನುವ ವಲಸೆ ಸಂತತಿ ಗಿಡವನ್ನು ಕೂಡ ದೊರೆಯಿತು. ಆ ಸಂದರ್ಭದಲ್ಲಿ ನಮ್ಮ ಸರ್ಕಾರ ಹಾಗೂ ಅಧಿಕಾರಿಗಳಿಗೆ ವಿಶ್ವಬ್ಯಾಂಕ್‌ ಹಾಗೂ ಜಪಾನ್‌ ದೇವರ ಸಮಾನವಾಗಿತ್ತು. ದೇವ ನುಡಿಯಂತೆ ಪಶ್ಚಿಮಘಟ್ಟಗಳ ಕಾನನಗಳಿಗೆ ಅಕೇಶಿಯಾ ತುಂಬಿದರು. ಸಾಮಾಜಿಕ ಅರಣ್ಯ ಅಥವಾ ನೆಡುತೋಪು ಹೆಸರಲ್ಲಿ ಖಾಲಿ ಜಾಗ ಕಂಡಲ್ಲೆಲ್ಲ ಅಕೇಶಿಯಾ-ನೀಲಗರಿ ಹಾಕಲಾಯಿತು. ಈ ಅಕೇಶಿಯಾ ನಮ್ಮ ಪಶ್ಚಿಮಘಟ್ಟಕ್ಕೆ ಹೊಂದುತ್ತದೆಯೇ ಎನ್ನುವ ಸಾಮಾನ್ಯ ಅಧ್ಯಯನವನ್ನೂ ಮಾಡದೇ ನೆಡಲಾಯಿತು. ಹೀಗಾಗಿ ಅರಣ್ಯ ಸಂರಕ್ಷಣೆ ನೆಪದಲ್ಲಿ ಬಂದ ಅಕೇಶಿಯಾ ನಂತರ ಕೈಗಾರಿಕೆ ಹಾಗೂ ಟಿಂಬರ್‌ ಉದ್ಯಮದ ಜೀವಾಳವಾಯಿತು. ಅಂತಿಮವಾಗಿ ಪಶ್ಚಮಘಟ್ಟದ ಮಳೆಕಾಡಿಗೆ ಕೊಡಲಿಯಂತೂ ಆಯಿತು.

ಅಕೇಶಿಯಾ ರುಚಿ ಹತ್ತಿಸಿಕೊಂಡವರಿಗೆ ಮಳೆಕಾಡಿನ ಮರಗಳು ಬೇಸರ ಹುಟ್ಟಿಸಿದವು. ಅಕೇಶಿಯಾ ದುಡ್ಡಿನ ಮರದಂತೆ ಕಾಣಿಸತೊಡಗಿತು. ಇದರಿಂದ ಪಶ್ಚಿಮಘಟ್ಟದ ವೈವಿಧ್ಯದ ಮಳೆಕಾಡಿನ ಮರಗಳು ಮಾಯವಾಗತೊಡಗಿದವು. ಈ ಸೂಕ್ಷ್ಮಗಳನ್ನು ವಿವರಿಸಿದವರನ್ನು ಕೆಲ ಜನರು ಹಾಗೂ ಅರಣ್ಯ ಇಲಾಖೆ ಕಣ್ಣಿಗೆ ಹುಚ್ಚರಂತೆ ಕಾಣತೊಡಗಿದರು. ಜನರಿಗೆ ಈ ಪ್ಲ್ಯಾಸ್ಟಿಕ್‌ ಎಲೆಯ ಗಿಡವನ್ನು ದುಡ್ಡಿನ ಕಣಜದಂತೆ ಅರಣ್ಯಾಧಿಕಾರಿಗಳು ಬಿಂಬಿಸಲಾರಂಭಿಸಿದರು.

ಪ್ಲ್ಯಾಸ್ಟಿಕ್‌ ಎಲೆ, ಜೀವಸಂಕುಲ ಹಾಗೂ ಕೃಷಿ
ಹೌದು, ಅಕೇಶಿಯಾ ಎಲೆ ಅಕ್ಷರಶಃ ಹಸಿರು ಪ್ಲ್ಯಾಸ್ಟಿಕ್‌ ಎಲೆಯೇ ಆಗಿದೆ. ಮಣ್ಣಿನಲ್ಲಿ ಮಣ್ಣಾಗದ ಪ್ಲ್ಯಾಸ್ಟಿಕ್‌ ಹಾಗೂ ಅಕೇಶಿಯಾ ಎಲೆಗೂ ದೊಡ್ಡ ವ್ಯತ್ಯಾಸವಿಲ್ಲ. ಇದು ನೇರವಾಗಿ ಕೃಷಿ ಹಾಗೂ ರೈತರ ಮೇಲೂ ಪರಿಣಾಮ ಬೀರುತ್ತಿದೆ. ಮರಗಳ ಹಸಿರು ಎಲೆ ಕೂಡ ಪ್ಲ್ಯಾಸ್ಟಿಕ್‌ಗೆ ಸಮ ಎನ್ನುವುದಕ್ಕೆ ಒಂದೆರಡು ಉದಾಹರಣೆ ಮೂಲಕ ವಿವರಿಸುವುದು ಅನಿವಾರ್ಯ.

೧. ಜೇನು ಸಾಕಾಣಿಕೆ ಹಾಗೂ ಕೃಷಿಗೆ ಅವಿನಾಭಾವ ಸಂಬಂಧವಿದೆ. ಇದರರ್ಥ ನೈಸರ್ಗಿಕ ಪರಾಗ ಸ್ಪರ್ಶ ಮಾಡುವ ಎಲ್ಲ ದುಂಬಿಗಳು ರೈತನ ನಿಜವಾದ ಮಿತ್ರರು. ಹೀಗಾಗಿಯೇ ಹಳೆ ಕಾಲದಲ್ಲಿ ತೋಟ, ಗದ್ದೆಯಲ್ಲಿ ಜೇನು ಗೂಡು ಇಡುತ್ತಿದ್ದರು. ಜೇನುಗಳು ಮಾಡುವ ನೈಸರ್ಗಿಕ ಪರಾಗಸ್ಪರ್ಶದಿಂದ ಕೃಷಿ ಇಳುವರಿ ಅಥವಾ ಫಸಲು ಹೆಚ್ಚಾಗುತ್ತದೆ ಎನ್ನುವುದು ನಂಬಿಕೆ ಹಾಗೂ ಋಜುವಾತಾದ ಕೃಷಿ ವಿಧಾನವಾಗಿದೆ. ವಿಪರ್ಯಾಸವೆಂದರೆ ಈ ವಲಸೆ ಅಕೇಶಿಯಾ ಮರದ ಹೂವಿನ ಮೇಲೆ ಯಾವುದೇ ದುಂಬಿ, ಜೇನು ಕೂರುವುದಿಲ್ಲ. ಇಂತಹ ಮರಗಳು ಕಾಡಿನಲ್ಲಿ ಹೆಚ್ಚಾದರೆ ಜೇನು, ದುಂಬಿಗಳು ಅಲ್ಲಿಂದ ಕಾಲ್ಕೀಳುತ್ತವೆ. ಆಗ ನೇರವಾಗಿ ಅದು ಪರಿಣಾಮ ಬೀರುವುದು ಹತ್ತಿರದಲ್ಲಿನ ಕೃಷಿ ಭೂಮಿ ಮೇಲೆ.

೨. ಆಡು ಮುಟ್ಟದ ಸೊಪ್ಪಿಲ್ಲ ಎನ್ನುವುದು ಹಳೆಯ ಗಾದೆ. ಆದರೆ ಈ ಗಾದೆಯನ್ನು ಸುಳ್ಳಾಗಿಸಲು ದೂರದ ಆಸ್ಟ್ರೇಲಿಯಾದಿಂದ ಬಂದ ಮರವೇ ಅಕೇಶಿಯಾ. ಈ ಮರದ ಸೊಪ್ಪು ಆಡಿಗೂ ಇಷ್ಟವಾಗುವುದಿಲ್ಲ. ಹಸಿರು ಪ್ಲ್ಯಾಸ್ಟಿಕ್‌ ತಿಂದು ಆಡಾದರೂ ಏನು ಮಾಡುತ್ತದೆ. ಆದರೆ ಆಡಿಗೆ ಒಲ್ಲದ ಗಿಡ ಮಾನವನಿಗೆ ಬೇಕಾಗಿರುವುದು ಆಶ್ಚರ್ಯದ ವಿಚಾರ.

೩. ಕೆಲ ವರ್ಷಗಳ ಹಿಂದೆ ನಮ್ಮ ಮನೆ ಹಾಗೂ ಅಕ್ಕ ಪಕ್ಕದ ಊರಿನಲ್ಲಿ ದೊಡ್ಡ ಪ್ರಮಾಣದಲ್ಲಿ ವೆನಿಲ್ಲಾ, ಮೆಣಸಿನ ಬಳ್ಳಿ ಬೆಳೆಯುತ್ತಿದ್ದ ಸಮಯವದು. ಮನೆ ಹತ್ತಿರ ಎರಡು ಅಕೇಶಿಯಾ ಮರವಿತ್ತು(ಈಗ ಅದನ್ನು ಕಡಿಯಲಾಗಿದೆ). ಅದರ ಬುಡದಲ್ಲಿ ಸಣ್ಣ ಹುಲ್ಲು ಕೂಡ ಬೆಳೆಯದಿರುವುದನ್ನು ಗಮನಿಸಿದ ನನ್ನ ತಂದೆ, ಅಲ್ಲಿದ್ದ ಅಕೇಶಿಯಾ ಬಿದ್ದ ಸೊಪ್ಪನ್ನು ತಂದು ಅಡಿಕೆ ಮರಕ್ಕೆ ಹಾಕಿದರು. ಬಳಿಕ ಎಂದಿನಂತೆ ಆ ಸೊಪ್ಪಿನ ಮೇಲೆ ಸಗಣಿ ನೀರು ಹಾಕಿ ಪ್ರತಿದಿನ ಹನಿ ನೀರಾವರಿ ಮೂಲಕ ನೀರು ಕುಡಿಸಿದರು. ಸುಮಾರು ಹದಿನೈದು ದಿನಗಳ ಬಳಿಕ  ವೆನಿಲ್ಲಾ ಹಾಗೂ ಮೆಣಸಿನ ಬಳ್ಳಿ ಒಣಗಲು ಆರಂಭಿಸಿತು. ಇದರಿಂದ ಆತಂಕಗೊಂಡ ನನ್ನ ತಂದೆ, ಅಡಿಕೆ ಮರದ ಬುಡ ಕೆದಕಿದಾಗ ದೊಡ್ಡ ಆಶ್ಚರ್ಯ ಕಾದಿತ್ತು. ಅಡಿಕೆ ಮರದ ಬುಡ ಬಿಸಿಯಾಗಿ ಒಣಗಿ ಹೋಗಿತ್ತು. ಮೆಣಸು ಹಾಗೂ ವೆನಿಲ್ಲಾ ಬೇರುಗಳು ಸಾಯತೊಡಗಿದ್ದವು. ವಿಪರ್ಯಾಸವೆಂದರೆ ಸಗಣಿ ನೀರು ಹಾಗೂ ಸಾದಾ ನೀರಿನಿಂದ ಕೊಳೆಯಬೇಕಿದ್ದ ಅಕೇಶಿಯಾ ಎಲೆ ಮಾತ್ರ ಹಾಗೆಯೇ ಗಟ್ಟಿಯಾಗಿತ್ತು. ಹನಿ ನೀರಾವರಿಯ ನೀರು ಕೂಡ ಇಂಗಲು ಅಕೇಶಿಯಾ ಎಲೆ ಬಿಟ್ಟಿರಲಿಲ್ಲ. ಅದೇ ದಿನದಿಂದ ತೋಟಕ್ಕೆ ಒಂದೇ ಒಂದು ಅಕೇಶಿಯಾ ಎಲೆ ಕೂಡ ಪ್ರವೇಶಿಸದಂತೆ ಎಚ್ಚರವಹಿಸಿದರು.

ಈ ಮೂರು ಉದಾಹರಣೆಯಿಂದ ಪ್ರಮುಖವಾಗಿ ಕೃಷಿಕರು ಗಮನಿಸಬೇಕಾದ ವಿಚಾರವೆಂದರೆ ಈ ಅಕೇಶಿಯಾ ಕೃಷಿಗೆ ಮಾರಕವೇ ಹೊರತು, ಎಂದೂ ಕೃಷಿ ನೆರವಿಗೆ ನಿಲ್ಲುವ ಮರವಾಗುವುದಿಲ್ಲ. ಪರಾಗಸ್ಪರ್ಶಕ್ಕೆ ಪೂರಕವಾದ ದುಂಬಿಗಳೊಂದಿಗೆ ಅಕೇಶಿಯಾ ಸ್ನೇಹ ಹೊಂದಿಲ್ಲ, ಹೈನುಗಾರಿಕೆಯ ಯಾವುದೇ ಪ್ರಾಣಿಗಳಿಗೂ ಇದರ ಎಲೆ ಸಹ್ಯವಾಗದು, ಜತೆಗೆ ಅಕೇಶಿಯಾ ಬುಡದಲ್ಲಿ ದನ ಕರುಗಳಿಗೆ ಬೇಕಾದ ಹುಲ್ಲುಗಳು ಕೂಡ ಬೆಳೆಯುವದಿಲ್ಲ. ಕೊನೆಯದಾಗಿ ಕೃಷಿ ಗೊಬ್ಬರಕ್ಕೂ ಇದನ್ನು ಬಳಸಲಾಗದು.
ಇನ್ನೊಂದೆಡೆ ಕಾಡುಗಳಲ್ಲಿ ಇತ್ತೀಚೆಗೆ ಹೊಸದಾಗಿ ಹಣ್ಣು-ಹಂಪಲಿನ ಗಿಡ ನೆಟ್ಟಿಲ್ಲ. ಈ ಅರಣ್ಯ ಇಲಾಖೆ ನೆಟ್ಟಿರುವ ಅಕೇಶಿಯಾಗೆ ಅವಲಂಬಿತ ಜೀವಿಗಳೇ ಇಲ್ಲ. ಹೀಗಾಗಿ ಮಂಗ ಸೇರಿ ಇತರ ಪ್ರಾಣಿ-ಪಕ್ಷಿಗಳಿಗೆ ಹತ್ತಿರದ ಕೃಷಿ ಭೂಮಿಯೇ ನೇರವಾದ ಟಾರ್ಗೆಟ್‌. ಇದನ್ನು ಅರಣ್ಯ ಇಲಾಖೆಗೆ ವಿವರಿಸಿದರೆ, ಕಾಡಿನಲ್ಲಿ ಕೃಷಿ ಭೂಮಿ ಮಾಡಿದ್ದೀರಿ ಎಂದು ಭಾಷಣ ಮಾಡುತ್ತಾರೆ. ಹೀಗಿರುವಾಗ ಅಕೇಶಿಯಾ ನೆಡುತೋಪಿನ ಆದಾಯ ಹಾಗೂ ಅದರ ಪರಿಣಾಮದಿಂಧ ಕೃಷಿ ಮೇಲಾಗುವ ಪರಿಣಾಮದ ಲೆಕ್ಕಾಚಾರ ಮಾಡಿ ನೋಡಿ.

ಆಲಸ್ಯದ ಅರಣ್ಯ ಸಂವರ್ಧನೆ
ಹಾಗಿದ್ದರೆ ಯಾರಿಗೂ ಬೇಡದ ಈ ಅಕೇಶಿಯಾ ಎಂದರೆ ಅರಣ್ಯ ಇಲಾಖೆಯವರು ಬಾಯಿ ಬಿಡುವುದು ಏಕೆಂದರೆ, ಸಿಗುವ ನೇರ ಉತ್ತರವೇ “ಆಲಸ್ಯ”. ಹೌದು, ಅರಣ್ಯ ಇಲಾಖೆಯ ಆಲಸ್ಯದ ಪ್ರಸಾದವೇ ಅಕೇಶಿಯಾ. ಇದರ ನೈಜತೆ ತಿಳಿಯಲು ನಮ್ಮ ದೇಶದ ಅರಣ್ಯ ಸಂವರ್ಧನೆ ಹಾಗೂ ಅದರ ಲೆಕ್ಕಾಚಾರದ ಬುಡಕ್ಕೆ ಕೈ ಹಾಕಬೇಕು. ಭಾರತದಲ್ಲಿ ಅರಣ್ಯ ಸಂವರ್ಧನೆಯ ಲೆಕ್ಕಾಚಾರ ಉಪಗ್ರಹದ ಮೂಲಕವಾಗುತ್ತದೆ. ಈ ಉಪಗ್ರಹಕ್ಕೆ ಭೂಮಿ ಹಸಿರು ಕಂಡಲ್ಲೆಲ್ಲ ಕಾಡು ಎಂದು ಗುರುತಿಸುವ ಖಯಾಲಿಯಿದೆ. ಇದೇ ಕಾರಣಕ್ಕೆ ಕಸ್ತೂರಿ ರಂಗನ್‌ ವರದಿಯಲ್ಲಿ ಕೃಷಿ ಭೂಮಿಗಳು ಕೂಡ ಅಭಯರಾಣ್ಯವಾಗಿದ್ದವು. ವರ್ಷ ತುಂಬೆಲ್ಲ ಅಥವಾ ಉಪಗ್ರಹ ಸಮೀಕ್ಷೆ ಮಾಡುವಾಗಲೆಲ್ಲ ಭೂಮಿ ಹಸಿರು ಕಾಣುವಂತೆ ಮಾಡುವ ಮರ ಅಕೇಶಿಯಾ. ಹಾಗೆಯೇ ಕಡಿಮೆ ಅವಧಿಯಲ್ಲಿ ಬಹು ಬೇಗ ಕಾಡನ್ನು ವಕ್ಕರಿಸಿಕೊಳ್ಳುವ ಕೆಟ್ಟ ಜಾತಿಯ ಮರವೂ ಇದಾಗಿದೆ.
ಈ ಗಿಡ ಅಥವಾ ಮರದ ಎಲೆಗಳಿಗೆ ನಮ್ಮ ದೇಶದಲ್ಲಿ ಹುಳವಿಲ್ಲ. ಗಿಡ ನೆಟ್ಟಿದಾಗ ಹುಳ-ಹುಪ್ಪಟಿಯ ಕಾಟವಿಲ್ಲ. ಬೆಳೆಯುವಾಗ ದನ-ಕರು ಅಥವಾ ಆಡು ಸೇರಿದಂತೆ ಯಾವುದೇ ಪ್ರಾಣಿಗಳು ತಿನ್ನುವ ಸಾಧ್ಯತೇಯೇ ಇಲ್ಲ. ನಾಡು ಹಾಗೂ ಕಾಡಿನಲ್ಲಿ ಯಾವೊಂದು ಪ್ರಾಣಿ ಪಕ್ಷಿಯೂ ಈ ಗಿಡದತ್ತ ಮೂಸಿಯೂ ನೋಡುವುದಿಲ್ಲ. ಹೀಗಾಗಿ ಅರಣ್ಯ ಇಲಾಖೆ ನೆಟ್ಟ ಗಿಡವೆಲ್ಲ ಬುದುಕುವುದು ಖಾತ್ರಿ. ಅಂದರೆ ಯಾವುದೇ ಮುತುವರ್ಜಿಯಿಲ್ಲದೇ ದುಡ್ಡು ಖರ್ಚು ಹಾಕಿಕೊಂಡು ಈ ಗಿಡ ನೆಡಬಹುದು. ಒಂದು ಸಣ್ಣ ಗುಂಡಿ ತೋಡಿ ಬೇಲಿ ಕೂಡ ಕಟ್ಟದೇ ಈ ಗಿಡವನ್ನು ಎಸೆದು ಹೋದರೆ ಬದುಕಿಕೊಳ್ಳುತ್ತದೆ. ಪಕ್ಕಾ ಕಳೆಯಿದು. ಕಳೆ ಸಾಮಾನ್ಯವಾಗಿ ಗಿಡ ಹಾಗೂ ಹುಲ್ಲಿನ ರೂಪದಲ್ಲಿದ್ದರೆ, ಮರವಾಗಿ ಆವರಿಸುವ ಪಶ್ಚಿಮಘಟ್ಟದ ಕಳೆಯಿದು. ಈ ಗಿಡದ ನಿರ್ವಹಣೆಗೆ ಹಣ ವ್ಯಯಿಸದೇ ಖರ್ಚು ಹಾಕಬಹುದು. ಆದರೆ ಮಳೆಕಾಡಿನ ಗಿಡಗಳು ಅಥವಾ ಹಣ್ಣು-ಹಂಪಲಿನ ಗಿಡ ನೆಟ್ಟರೇ ಶೇ.೪೦ಕ್ಕೂ ಕಡಿಮೆ ಪ್ರಮಾಣದಲ್ಲಿ ಬದುಕುತ್ತದೆ. ಅದೇ ಅಕೇಶಿಯಾ ಗಿಡ ಬದುಕುವ ಪ್ರಮಾಣ ಶೇ.೯೦ಕ್ಕೂ ಅಧಿಕ. ಹಾಗೆಯೇ ಸಾಂಪ್ರದಾಯಿಕ ಗಿಡಗಳನ್ನು ಬದುಕಿಸಿಕೊಳ್ಳಲು ನಿಜವಾಗಿಯೂ ಖರ್ಚು ಮಾಡಬೇಕು. ಕಾಗದದಲ್ಲಿ ಖರ್ಚು ಮಾಡಿದರೆ ಸಾಲುವುದಿಲ್ಲ. ಇಷ್ಟೊಂದು ಕಷ್ಟಪಟ್ಟು ಅರಣ್ಯೀಕರಣ ಮಾಡೋಕೆ ಅದೇನು ಸ್ವಂತ ಭೂಮಿಯೇ? ಸರ್ಕಾರದ ಅರಣ್ಯವನ್ನು ಉದ್ದಾರ ಮಾಡಲು ಅಷ್ಟೊಂದು ಬೆವರು ಹರಿಸುವ ಬದಲು ಅಕೇಶಿಯಾ ಆಲಸ್ಯದ ಮಾರ್ಗವಾಗಿ ರೂಪುಗೊಂಡಿದೆ.

ಹೀಗಾಗಿ ಅರಣ್ಯ ಇಲಾಖೆಯ ಈ ಫಾಸ್ಟ್‌ಫುಡ್‌ ರೀತಿಯ ಅರಣ್ಯೀಕರಣ ಸರ್ಕಾರದ ವ್ಯವಸ್ಥೆ ಬಿಟ್ಟು ಎಲ್ಲರಿಗೂ ಸಮಸ್ಯೆ ಸೃಷ್ಟಿಸುತ್ತಿದೆ. ಆದರೆ ಫಾಸ್ಟ್‌ಫುಡ್‌ನಂತೆ ಅಧಿಕಾರಿಗಳಿಗೆ ಮಾತ್ರ ಇದು ಬಲು ರುಚಿ.

ಸಾಮಾಜಿಕ ಅರಣ್ಯ
ಈ ಆಲಸ್ಯದ ಅರಣ್ಯೀಕರಣದ ಮುಂದುವರಿದ ಭಾಗ ನೆಡುತೋಪು ಅಥವಾ ಸಾಮಾಜಿಕ ಅರಣ್ಯ. ಸಾಮಾಜಿಕ ಅರಣ್ಯವು ಸುತ್ತಲಿನ ಪರಿಸರಕ್ಕೆ ಹಾನಿಕಾರಕ ಎನ್ನುವುದು ವೈದ್ಯಕೀಯ ಹಾಗೂ ವಿಜ್ಞಾನ ಕ್ಷೇತ್ರದಲ್ಲಿ ಸಾಬೀತಾಗಿರುವ ಅಂಶ. ಸಾಮಾಜಿಕ ಅರಣ್ಯದ ದೊಡ್ಡ ಕೊಡುಗೆಯೇ ಅಸ್ತಮಾ ಹಾಗೂ ಉಸಿರಾಟದ ಸಮಸ್ಯೆ. ವಿಶೇಷವಾಗಿ ಅಕೇಶಿಯಾ ಹೂವು ಬಿಟ್ಟಾಗ ಪರಿಸರದಲ್ಲಿ ಅದರ ಹೂವಿನ ಪರಾಗಗಳು ತುಂಬಿಕೊಳ್ಳುತ್ತವೆ. ಇದನ್ನು ಪೋಲನ್‌ ಎಕ್ಟ್ರಾಕ್ಟ್‌ ಎಫೆಕ್ಟ್‌ ಎನ್ನುತ್ತಾರೆ. ಇದು ಅಕೇಶಿಯಾ ಹೂವಿಗೆ ಮಾತ್ರ ಸೀಮಿತವಲ್ಲ. ಏಕಜಾತಿಯ ಮರವಾದರೆ ಯಾವುದೇ ಇದ್ದರೂ ಸಮಸ್ಯೆಯೇ ಆಗಲಿದೆ. ಏಕಜಾತಿಯ ಸಾಮಾಜಿಕ ಆರಣ್ಯೀಕರಣ ಅಥವಾ ನೆಡುತೋಪು ಎಂದಿಗೂ ಪರಿಸರ,ಆರೋಗ್ಯ ಹಾಗೂ ಕೃಷಿಗೆ ಮಾರಕ.

ಇಂತಹದೊಂದು ಆಲಸ್ಯದ ಅರಣ್ಯೀಕರಣಕ್ಕೆ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆ ದೊಡ್ಡ ಪ್ರಮಾಣದಲ್ಲಿ ಬಲಿಯಾಗಿದೆ. ಸಾಂಪ್ರದಾಯಿಕ ಅರಣ್ಯದ ಗಂಧಗಾಳಿಯಿಲ್ಲದ ಅಧಿಕಾರಿಗಳಿಗೆ ಹುಚ್ಚಾಟಕ್ಕೆ ಈ ಜಿಲ್ಲೆಗಳ ಅದೆಷ್ಟೋ ಔಷಧಿ ವನ, ಗೋಮಾಳ(ಬೇಣ) ಹಾಗೂ ಮಳೆಕಾಡುಗಳು ನಾಶವಾಗಿವೆ. ಗೋಮಾಳದಲ್ಲಿ ಹುಲ್ಲು ಬೆಳೆಯುತ್ತಿದೆ. ಬೇಸಿಗೆಯಲ್ಲಿ ಬೋಳಾಗಿ ಕಾಣಿಸುತ್ತದೆ. ಅಲ್ಲಿ ಕಾಡು ಬೆಳೆಯಬೇಕು ಎಂದು ಅಕೇಶಿಯಾವನ್ನು ಸಾವಿರಾರು ಎಕರೆ ಜಾಗದಲ್ಲಿ ಅರಣ್ಯ ಇಲಾಖೆ ತುಂಬಿದೆ. ಗೋಮಾಳ ಅಥವಾ ಬೇಣದ ವೈಜ್ಞಾನಿಕ ಹಿನ್ನೆಲೆ ಕೂಡ ಈ ಅಧಿಕಾರಿಗಳಿಗೆ ಗೊತ್ತಿಲ್ಲದಿರುವುದು ಆಶ್ಚರ್ಯ ಮೂಡಿಸುತ್ತದೆ. ಗೋಮಾಳ ಹಾಗೂ ಬೇಣದಲ್ಲಿ ಈ ವಲಸೆ ಗಿಡವನ್ನು ತಂದು ನೆಟ್ಟರೆ ಆ ಊರಿನ ಕೃಷಿ ಆರ್ಥಿಕತೆ ಹಾಗೂ ಪರಿಸರದ ಮೇಲೆ ಎಂತಹ ದುಷ್ಪರಿಣಾಮ ಬೀರುತ್ತದೆ ಎನ್ನುವ ಸಾಮಾನ್ಯ ಜ್ಞಾನ ಕೂಡ ಇಲ್ಲದಿರುವುದು ಬೇಸರ ಮೂಡಿಸುತ್ತದೆ. ಆ ಹುಲ್ಲುಗಾವಲನ್ನು ಅವಲಂಬಿಸಿರುವ ಜೀವಿಗಳು ಮುಂದೆ ಕೃಷಿ ಭೂಮಿ ಮೇಲೆ ದಾಳಿ ಮಾಡಿದರೆ, ರೈತರು ಎಲ್ಲಿಗೆ ಹೋಗಬೇಕು. ಅಷ್ಟಕ್ಕೂ ಈ ದರಿದ್ರ ಅಕೇಶಿಯಾ ಮರದ ಬುಡದಲ್ಲಿ ಹುಲ್ಲು ಕೂಡ ಬೆಳೆಯುವುದಿಲ್ಲ.

ಇದಕ್ಕೆ ಇನ್ನೊಂದು ಸ್ಪಷ್ಟ ಉದಾಹರಣೆ ಶಿವಮೊಗ್ಗ ಜಿಲ್ಲೆಯ ಶರಾವತಿ ಹಿನ್ನೀರು ಪ್ರದೇಶಗಳು. ಶರಾವತಿ ನದಿಗೆ ಅಣೆಕಟ್ಟು ಕಟ್ಟಿದಾಗ ಸಾವಿರಾರು ಹೆಕ್ಟೇರ್‌ ಅರಣ್ಯ ಭೂಮಿ ನಾಶವಾಯಿತು. ಅದಕ್ಕೆ ಪ್ರತಿಯಾಗಿ ಅರಣ್ಯ ಬೆಳೆಸಬೇಕು ಎಂದು ಕೆಪಿಸಿಗೆ ತಾಕೀತು ಮಾಡಲಾಗಿತ್ತು. ಆದರೆ ಕೆಪಿಸಿ ಅಧಿಕಾರಿಗಳು ಅರಣ್ಯ ಇಲಾಖೆ ಜತೆ ಶಾಮೀಲಾಗಿ ಅಮೂಲ್ಯವಾದ ಪಶ್ಚಿಮಘಟ್ಟದ ಮರಗಳ ಜಾಗದಲ್ಲಿ ವಿದೇಶಿ ಅಕ್ರಮ ತಳಿ ಅಕೇಶಿಯಾವನ್ನು ನೆಟ್ಟಿದರು. ಸಹ್ಯಾದ್ರಿ ತಾಣ ಎಂದು ಹೇಳಲಾಗುತ್ತಿದ್ದ ಶಿವಮೊಗ್ಗ ಇಂದು ಬರಡಾಗಿ ಕಾಣಿಸಲು ಇದೇ ಹೊಲಸು ಅರಣ್ಯೀಕರಣ ಕಾರಣವಾಗಿದೆ. ಈ ಅರಣ್ಯೀಕರಣದಿಂದ ಜಿಲ್ಲೆಯ ಹವಾಮಾನವೇ ಸಂಪೂರ್ಣ ಬದಲಾಗಿದೆ.

ಅಕೇಶಿಯಾ ಎನ್ನುವ ಕೊಟ್ಟಿ ಆರ್ಥಿಕತೆ
ಮಲೆನಾಡಿನ ಯಾವ ಊರಿಗೆ ಹೋದರು ಅಕೇಶಿಯಾ ಬಗ್ಗೆ ಇಂತಹ ಕೆಟ್ಟ ಉದಾಹರಣೆಗಳು ಸಿಗುತ್ತವೆ. ಆದರೂ ಹಳ್ಳಿ-ಹಳ್ಳಿಗೆ ಅಕೇಶಿಯಾ ವಕ್ಕರಿಸಿಕೊಳ್ಳುತ್ತಿದೆ. ನಿಷೇಧವಾದ ಸಂದರ್ಭದಲ್ಲಿಯೂ ಅಕೇಶಿಯಾ ನೆಡಲಾಗಿದೆ. ಹಾಗಿದ್ದರೆ ಇದಕ್ಕೆ ಕಾರಣವೇನು ಎಂದು ಹುಡುಕಿದರೆ ಭ್ರಷ್ಟ ಗ್ರಾಮ ಅರಣ್ಯ ಸಮಿತಿ ಹಾಗೂ ಅರಣ್ಯ ಇಲಾಖೆಯ ಕೊಟ್ಟಿ ಆರ್ಥಿಕತೆ ಕಾರಣ. ಸಾಮಾನ್ಯ ಜನರಿಗೆ ಅಕೇಶಿಯಾದಿಂದ ದುಡ್ಡು ಮಾಡುವ ಹೊಲಸು ವಿಧಾನವನ್ನು ಸುಲಭವಾಗಿ ಈ ಅರಣ್ಯ ಇಲಾಖೆ ಪ್ರಚೋದಿತ ಗ್ರಾಮ ಅರಣ್ಯ ಸಮಿತಿ ಮಾಡುತ್ತದೆ. ಹತ್ತು ವರ್ಷದೊಳಗೆ ಲಕ್ಷಗಟ್ಟಲೇ ಹಣ ಮಾಡಬಹುದು. ಬೆಂಗಳೂರಿನಲ್ಲಿ ನಕಲಿ ಸಾಗವಾನಿಯಾಗಿ ಈ ಅಕೇಶಿಯಾ ಬಳಕೆಯಾಗುತ್ತದೆ. ನಯಾಪೈಸೆ ಖರ್ಚಿಲ್ಲದೇ ಲಕ್ಷಗಟ್ಟಲೇ ದುಡ್ಡು ಮಾಡಬಹುದು ಎಂದು ಅಧಿಕಾರಿಗಳು ಆಸೆ ತೋರಿಸಿ ಖಾಸಗಿ ಭೂಮಿಯಲ್ಲೂ ಅಕೇಶಿಯಾ ನಡೆಸಿದ್ದಾರೆ. ಅರಣ್ಯ ಭೂಮಿಯಲ್ಲಿ ಹೇಳಿ ಕೇಳುವರಿಲ್ಲದಂತಾಗಿದೆ. ಆದರೆ ಇದೇ ದುಡ್ಡಿನ ಆಸೆಗೆ ಕೃಷಿ ಭೂಮಿಯಲ್ಲಿ ಆಗುವ ನಷ್ಟ, ಪರಿಸರದ ಮೇಲಾಗುವ ಹಾನಿ ಹಾಗೂ ಜೀವಸಂಕುಲದ ನಾಶದ ಬಗ್ಗೆ ಆಲೋಚಿಸಿದರೆ ಆರ್ಥಿಕತೆಯ ನೈಜತೆ ಬಯಲಾಗುತ್ತದೆ. ಆದರೆ ನಮ್ಮ ದೇಶದಲ್ಲಿ ಸಾಮಾನ್ಯವಾಗಿ ನಾವು ನೇರ ಗಳಿಕೆಯ ಬಗ್ಗೆ ಮಾತ್ರ ಆಲೋಚಿಸುತ್ತೇವೆ. ಸುತ್ತಿಬಳಸಿ ಕಳೆದುಕೊಳ್ಳುವುದರ ಲೆಕ್ಕಾಚಾರ ಮಾಡುವುದೇ ಇಲ್ಲ. ಹೀಗಾಗಿಯೇ ಕೃಷಿಯಲ್ಲಿ ನಾವು ಪೆಟ್ಟು ತಿನ್ನಲೂ ಕಾರಣವಾಗಿದೆ.

ಅಧ್ಯಯನ ಮತ್ತು ಅರಣ್ಯ ಇಲಾಖೆ
ಅಕೇಶಿಯಾದ ಬಗ್ಗೆ ಹೀಗೆ ಸರಣಿ ಆರೋಪ ಪಟ್ಟಿ ಹೊರಿಸಿದರೆ ಅರಣ್ಯ ಇಲಾಖೆ ಸುಲಭವಾಗಿ ಒಂದು ಪ್ರಶ್ನೆ ಕೇಳುತ್ತದೆ. “ಅಕೇಶಿಯಾದಿಂದ ಪಶ್ಚಿಮಘಟ್ಟದ ಮೇಲೆ ಕೆಟ್ಟ ಪರಿಣಾಮವಾಗಿದೆ. ನೈಸರ್ಗಿಕ ಸಮತೋಲನ ಕೆಡಿಸಿದೆ ಎನ್ನುವುದಕ್ಕೆ ಯಾವ ವೈಜ್ಞಾನಿಕ ಸಾಕ್ಷಿಯಿದೆ” ಎಂದು ಕೇಳುತ್ತಾರೆ. ಇದೇ ಪ್ರಶ್ನೆಯನ್ನು ನಮ್ಮ ತೆರಿಗೆ ಹಣದಿಂದ ಸಂಬಳ ಪಡೆದು ಅರಣ್ಯ ಸಂರಕ್ಷಣೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳು ಖಾಸಗಿ ಕಂಪನಿಗಳ ಮೂಲಕ ಕೋರ್ಟ್‌ನಲ್ಲೂ ಕೇಳಿಸುತ್ತಾರೆ. ಒಟ್ಟಿನಲ್ಲಿ ಅರಣ್ಯ ಹಾಳು ಮಾಡುವ ಕಂಪನಿಗಳು ಹಾಗೂ ಅಧಿಕಾರಿಗಳ ಸ್ವರ ಒಂದೇ ರೀತಿ ಇರುತ್ತದೆ.
ಅಕೇಶಿಯಾಕ್ಕೆ ಸಂಬಂಧಿಸಿದ ಎಲ್ಲ ಆರೋಪಗಳಿಗೆ ಅಧ್ಯಯನ ರೂಪದ ವೈಜ್ಞಾನಿಕ ಸಾಕ್ಷಿ ಇಲ್ಲದಿರಬಹುದು. ಆದರೆ ಆಡು ಮುಟ್ಟದ ಸೊಪ್ಪು, ಹುಳ-ದುಂಬಿ ಇಷ್ಟ ಪಡದ ಮರ, ಹುಲ್ಲು ಬೆಳೆಯಲು ಅವಕಾಶ ಕೊಡದ ಸಂತತಿ, ನೀರು ಇಂಗಲು ಬಿಡದ ವಲಸೆ ಮರ ಎನ್ನುವದಕೆ ವೈಜ್ಞಾನಿಕ ಸಾಕ್ಷಿಗಳು ಬೇಕಿಲ್ಲ. ಕಣ್ಣು, ಮೂಗು, ಕಿವಿ ಸರಿ ಇರುವ ಪ್ರತಿಯೊಬ್ಬ ಸ್ಥಿತ ಪ್ರಜ್ಞ ಮನುಷ್ಯನಿಗೂ ಇದು ಗೊತ್ತಾಗುತ್ತದೆ.
ಅಕೇಶಿಯಾ ವಿರುದ್ಧ ಧ್ವನಿ ಎತ್ತಿದವರಿಗೆ ಇಂತಹ ಪ್ರಶ್ನೆ ಕೇಳುವ ಅಧಿಕಾರಿಗಳು ಒಮ್ಮೆ ತಮ್ಮ ನೈಜ ಜವಾಬ್ದಾರಿ ಅರಿತುಕೊಳ್ಳುವುದು ಒಳಿತು. ಸಾಮಾನ್ಯವಾಗಿ ಒಂದು ವ್ಯವಸ್ಥೆಗೆ ಹೊಸ ಪ್ರವೇಶವಾದಾಗ ಅದರ ಪರಿಣಾಮವೇನು ಎಂದು ಅಧ್ಯಯನ ಮಾಡುವುದು ಕರೆದುಕೊಂಡು ಬಂದ ಮಹಾನುಭಾವರ ಕೆಲಸವಾಗಿರುತ್ತದೆ. ಅಕೇಶಿಯಾ ನೆಡುತೋಪು ಮಾಡಿದ ಬಳಿಕ ಅದರ ಪರಿಣಾಮದ ಬಗ್ಗೆ ವೈಜ್ಞಾನಿಕ ಅಧ್ಯಯನ ಮಾಡದೆ ಮತ್ತಷ್ಟು ಬೆಳೆಸಿದ್ದು ಜನರಿಗೆ ಮಾಡಿದ ಮೋಸವಲ್ಲವೇ?

ಲಾಬಿ, ಷಡ್ಯಂತ್ರ ಯಾರದ್ದು?
ಅಕೇಶಿಯಾ ವಿರುದ್ಧ ಹೋರಾಟದ ಹಿಂದೆ ಯಾವ ಲಾಬಿ ಅಥವಾ ಷಡ್ಯಂತ್ರ ಇರಲು ಸಾಧ್ಯ. ಹೆಚ್ಚೆಂದರೆ ಅಕೇಶಿಯಾ ಮರ ಇರುವ ಜಾಗದಲ್ಲಿ ಸಾಂಪ್ರದಾಯಿಕ ಗಿಡಗಳು ಆವರಿಸಿಕೊಳ್ಳಲಿ ಎಂದು ಷಡ್ಯಂತ್ರ ರೂಪಿಸಬಹುದು. ಈ ಲಾಭ ಪಡೆಯುವ ಕಾಡು ಪ್ರಾಣಿಗಳ ಸಂಘದಿಂದ ಲಂಚ ನೀಡಲು ಮಾತ್ರ ಸಾಧ್ಯ. ಆದರೆ ಇಂತಹ ಹೋರಾಟದ ದಿಕ್ಕು ತಪ್ಪಿಸಲು ನಿಜವಾದ ಲಾಬಿ ನಡೆಸುತ್ತಿರುವವರು ಇಂತಹ ಆರೋಪ ಹೊರಿಸುತ್ತಾರೆ. ಆದರೆ ನಿಜವಾದ ಲಾಬಿ ಇರುವುದು ಅರಣ್ಯ ಇಲಾಖೆ ಹಾಗೂ ಅಕೇಶಿಯಾ ಬೆಂಬಲಿಗರ ಹಿಂದೆ. ಟಿಂಬರ್‌, ಕಾಗದ ಕೈಗಾರಿಕೆ ಲಾಬಿಗಳು ಇಲ್ಲಿ ಕೆಲಸ ಮಾಡಲು ಸಾಧ್ಯವಿದೆ. ಹೀಗಾಗಿ ಇಂತಹ ವ್ಯರ್ಥ ಅಪಪ್ರಚಾರ ಮಾಡಿ ಅಕೇಶಿಯಾಕ್ಕಿರುವ ಅಲ್ಪಸ್ವಲ್ಪ ಮರ್ಯಾದೆಯನ್ನು ಕಳೆಯಬೇಡಿ!

ಪರ್ಯಾಯ ಬದುಕು ಕಲ್ಪಿಸಿ!
ಅಕೇಶಿಯಾದ ಬಗ್ಗೆ ಇಷ್ಟೆಲ್ಲ ವಿರೋಧಗಳು ಬಂದಾಗ, ಸಮರ್ಥಿಸಿಕೊಳ್ಳಲು ಕಾರಣವಿಲ್ಲದೇ ಕಾಗದ ಕಾರ್ಖಾನೆಗಳನ್ನು ಅವಲಂಬಿಸಿರುವ ಸಾವಿರಾರು ಕಾರ್ಮಿಕರ ಕುಟುಂಬ ತೋರಿಸಿ ಮಾತನಾಡಲಾಗುತ್ತದೆ. ನೊಂದ ಕಾರ್ಮಿಕರ ಜೀವನದ ಕಥೆ ಏನು ಎಂದು ಮೊಸಳೆ ಕಣ್ಣೀರು ಹಾಕುವರಿದ್ದಾರೆ. ಆದರೆ ಸಾವಿರ ಕಾರ್ಮಿಕರಿಗಾಗಿ ಲಕ್ಷಾಂತರ ಜನರ ಜೀವನ ಬಲಿ ಹಾಕಲಾಗದು. ಕೋಟ್ಯಂತರ ಜೀವ ಸಂಕುಲಗಳನ್ನು ಕಳೆದುಕೊಳ್ಳಲಾಗದು. ಇಂತಹ ಅನಿಷ್ಟವನ್ನು ಕಾಡಿಗೆ ಹೊಕ್ಕಿಸಿ ತಪ್ಪು ಮಾಡಿದ ಅರಣ್ಯ ಇಲಾಖೆಯೇ ಈ ಕಾರ್ಮಿಕರಿಗೆ ಪರ್ಯಾಯ ಬುದುಕು ಕಟ್ಟಿಕೊಡಬೇಕು. ಆದರೆ ಬಡ ಕಾರ್ಮಿಕರ ಕೈಗೆ ಕೊಳ್ಳಿಯಿಟ್ಟು ಕಾಡಿಗೆ ಬೆಂಕಿ ಹಾಕುವ ಕೆಲಸ ಮಾಡಲಾಗದು. ಗ್ರಾಮ ಅರಣ್ಯ ಸಮಿತಿ ಮೂಲಕ ಲಕ್ಷಾಮತರ ಗಿಡ ನಡೆಸಬಹುದು. ಆ ಗಿಡಗಳ ನಿರ್ವಹಣೆಗೆ ಉದ್ಯೋಗ ಸೃಷ್ಟಿಯಾಗುತ್ತದೆ. ನಿರ್ವಹಣೆಗೆ ಕೋಟ್ಯಂತರ ರೂಪಾಯಿ ಕಾಗದದ ಮೇಲೆ ಖರ್ಚು ಹಾಕುತ್ತಿರುವುದನ್ನು ಅರಣ್ಯ ಇಲಾಖೆ ಮರೆಯಬಾರದು. ಕಾರ್ಮಿಕರ ಮೇಲೆ ಕನಿಕರ ತೋರುವರು ಈ ಹಣವನ್ನು ನಿಜವಾಗಿ ಕಾರ್ಮಿಕರ ಮೂಲಕ ಖರ್ಚು ಮಾಡಿಸಿ.

——–

ಒಟ್ಟಾರೆಯಾಗಿ ಹುಳ-ಹುಪ್ಪಳಿ, ಪ್ರಾಣಿ, ಕೃಷಿಕ ಸೇರಿ ಈ ಪಶ್ಚಿಮಘಟ್ಟ ವ್ಯವಸ್ಥೆಯ ಅವಿಭಾಜ್ಯ ಅಂಗವಾದ ಯಾವುದೇ ಜೀವಿ ಅಥವಾ ಪರಿಸರಕ್ಕೆ ಬೇಡವಾದದ್ದು ಅರಣ್ಯ ಇಲಾಖೆಗೆ ಮಾತ್ರ ಬೇಕಾಗಿದೆ ಎಂದರೆ, ಆ ಇಲಾಖೆಯಲ್ಲಿ ಅರಣ್ಯಕ್ಕೆ ಬೇಡವಾದ ಜಂತುಗಳಿವೆ ಎಂಬ ಸಂದೇಶ ಹೊರಬರುತ್ತದೆ. ಅಧಿಕಾರಿಗಳಿಗೆ ಬೇಕಾಗಿದ್ದನ್ನು ನೆಡಲು ಕಾಡಿಲ್ಲ. ಕಾಡಿನ ವ್ಯವಸ್ಥೆಗೆ ಬೇಕಾಗಿದ್ದನ್ನು ನಾವು ನೀಡಬೇಕು. ಈ ಅರಣ್ಯ ಇಲಾಖೆ ಹುಟ್ಟುವ ಮೊದಲೇ ಕಾಡಿದೆ. ಹೀಗಾಗಿ ಕಾಡು ಹೇಳಿದಂತೆ ಇಲಾಖೆ ಕೇಳಬೇಕು. ಅರಣ್ಯ ಇಲಾಖೆ ಇರುವುದು ವ್ಯವಸ್ಥೆಯ ಜೇಬು ತುಂಬಲಲ್ಲ, ಅರಣ್ಯವನ್ನು ನೈಜರ್ಥದಲ್ಲಿ ಸಂವರ್ಧನೆ ಮಾಡಲು. ಅರಣ್ಯ ಸಂವರ್ಧನೆಯನ್ನು ಬೆಂಗಳೂರಿನ ಎಸಿ ರೂಮಿನಲ್ಲಿ ಮಾಡಲು ಆಗುವುದಿಲ್ಲ. ತಾಕತ್ತಿದ್ದರೆ ಅಕೇಶಿಯಾ ಮರದ ಕೆಳಗೆ ಒಂದು ಹಗಲು ಮಲಗಿ ತೋರಿಸಿ. ಹಾಗೆಯೇ ಅಕೇಶಿಯಾ ಮರದಿಂದ ಅರಣ್ಯ ಭವನದಲ್ಲಿನ ಖುರ್ಚಿ ಮಾಡಿ. ಅಧಿಕಾರಿಗಳ ಮನೆಯ ಕೈ ತೋಟಕ್ಕೆ ಅದರ ಸೊಪ್ಪು ಹಾಕಿ. ಇವೆಲ್ಲ ಕೆಲಸ ಮಾಡಿದ ಬಳಿಕ ಪಶ್ಚಿಮಘಟ್ಟದ ಜನರಿಗೆ ಅಕೇಶಿಯಾ ಬಗ್ಗೆ ಭಾಷಣ ಮಾಡಲು ಬಂದರೆ ನಮಗೂ ಖುಷಿ. ಯಾರದೋ ಜೇಬು ತುಂಬಿಸಲು ನಮ್ಮೂರಿ ಕಾಡನ್ನು ಬಲಿ ಹಾಕಬೇಡಿ.

ರಾಜೀವ ಹೆಗಡೆ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನೇತಾಜಿ 125ನೇ ಜನ್ಮದಿನಾಚರಣೆಗೆ ಉನ್ನತಮಟ್ಟದ ಸಮಿತಿ ರಚಿಸಿದ ಕೇಂದ್ರ ಸರ್ಕಾರ !

Sun Jan 10 , 2021
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ದಿನಾಚರಣೆಗಾಗಿ ಕೇಂದ್ರ ಸರ್ಕಾರ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಈ ಸಮಿತಿಯಲ್ಲಿ ಗೃಹ ಸಚಿವ ಅಮಿತ್ ಷಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಮಾಜಿ ಪ್ರಧಾನಿಗಳಾದ ಎಚ್.ಡಿ. ದೇವೇಗೌಡ, ಮನಮೋಹನ್ ಸಿಂಗ್ ಸೇರಿದಂತೆ ಹಲವು ಕೇಂದ್ರ ಸಚಿವರು, ಲೋಕಸಭಾ ಸ್ಪೀಕರ್ ಸದಸ್ಯರುಗಳಾಗಿರುತ್ತಾರೆ.  ಈ ಸಮಿತಿಯು 2021ರ ಜನವರಿ 23 ರಿಂದ ಒಂದು ವರ್ಷಗಳ ಕಾಲ […]