ಎಬಿಪಿಎಸ್ ಆಶಯದ ಹಿನ್ನೆಲೆಯಲ್ಲಿ ಸಾಮಾಜಿಕ ಪರಿವರ್ತನೆಯ ವೈಚಾರಿಕ ನೆಲೆಗಳು

ಶ್ರೀ. ದತ್ತಾತ್ರೇಯ ಹೊಸಬಾಳೆಯವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ರಾಸ್ವಸಂದ) ಸರಕಾರ್ಯವಾಹರಾಗಿ ಚುನಾಯಿತರಾಗಿದ್ದಾರೆ.  ಸರಕಾರ್ಯವಾಹರೆಂದರೆ ಪ್ರಧಾನ ಕಾರ್ಯದರ್ಶಿ ಎನ್ನಬಹುದು. ಈ ಜವಾಬ್ದಾರಿಯು ಕಾರ್ಯತತ್ಪರ ಮುಖ್ಯಸ್ಥರ ಮಟ್ಟದ್ದಾಗಿದೆ.  ಸರಸಂಘಚಾಲಕರ ನೇತೃತ್ವ-ಮಾರ್ಗದರ್ಶನಗಳಲ್ಲಿ ಈ ಜವಾಬ್ದಾರಿಯುನ್ನು ನಿರ್ವಹಿಸಲಾಗುತ್ತದೆ.  ನೂತನ ಜವಾಬ್ದಾರಿ ಸ್ವೀಕರಿಸಿದ ನಂತರ ನಡೆಸಿದ ಪತ್ರಿಕಾ ಗೋಷ್ಠಿಯಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ (ಅಭಾಪ್ರಸ ಅಥವಾ ಎಬಿಪಿಎಸ್) 2021ರ ಸಾಲಿನ ನಿರ್ಣಯಗಳೆರಡನ್ನೂ ವಿವರಿಸಿದ ನಂತರ, ಮುಂದಿನ ಮೂರು ವರ್ಷಗಳ ಕಾರ್ಯಯೋಜನೆಯು “ಕಾರ್ಯವಿಸ್ತರಣೆ, ಸಾಮಾಜಿಕ ಪರಿವರ್ತನೆ, ಮತ್ತು ವೈಚಾರಿಕ ಪರಿವರ್ತನೆ” ಗಳೆಂಬ ಮೂರು ದಿಕ್ಸೂಚೀ ಅಂಶಗಳ ಆಧಾರದ ಮೇಲೆ ನಡೆಯಲಿದೆ ಎಂದು ಹೇಳಿದರು. ಎಬಿಪಿಎಸ್ ಸಭೆಗೆ ನಡೆಸುವ ವ್ಯವಸ್ಥಿತ ಸಿದ್ಧತೆಗಳನ್ನೂ, ಸಂಘಕ್ಕೆ ತನ್ನ ಗುರಿಯಲ್ಲಿರುವ ಸ್ಪಷ್ಟತೆಯನ್ನೂ ಈ ನಿರೂಪಣೆಯು ಸೂಚಿಸಿತು. 

ಮುಂದಿನ ಮೂರು ವರ್ಷಗಳಲ್ಲಿ ಕಾರ್ಯವಿಸ್ತರಣೆ ಎಂದರೆ, ಮಂಡಲ (ಸ್ಥಳೀಯ ಆಡಳಿತ ಅನ್ವಯಿಸುವ ಪ್ರದೇಶ)ದ ವರೆಗೆ ಸಂಘದ ಕಾರ್ಯ ಮತ್ತು ಅಸ್ತಿತ್ವವನ್ನು ವಿಸ್ತರಿಸುವುದು.   ಹಾಗೆಯೇ ಸಾಮಾಜಿಕ ಪರಿವರ್ತನೆ ಎಂದರೆ, ಕುಟುಂಬ, ಪರಿಸರ, ಸಾಮರಸ್ಯ, ಗ್ರಾಮವಿಕಾಸ ಮತ್ತಿತರ ಸಾಮಾಜಿಕ ಸ್ತರಗಳಲ್ಲಿ ನಡೆಯುವ / ನಡೆಸಬೇಕಾದ ಕಾರ್ಯಗಳು ಮತ್ತು ಗುಣಾತ್ಮಕವಾಗಿ ತಲುಪಬೇಕಾದ ಗುರಿಗಳು ಎನ್ನಬಹುದು. ಸಾಮಾಜಿಕ ಪರಿವರ್ತನೆ ಸಂಘದ ಒಂದು ಹಳೆಯ ಕಾರ್ಯಕ್ರಮವಾಗಿದೆ. ಈ ಪರಿವರ್ತನೆಯು ಸಾಮರಸ್ಯದ ನೆಲೆಯಲ್ಲಿ ನಡೆಯುತ್ತಿತ್ತು.  ಇತ್ತೀಚೆಗೆ, ಪರಿಸರ, ಸ್ವಾಸ್ಥ್ಯ ಕುಟುಂಬಗಳ ಆಯಾಮಗಳನ್ನೂ ಸಹ ಸೇರಿಸಿಕೊಂಡಿದೆ. ಕೊನೆಯದಾದ ವೈಚಾರಿಕ ಪರಿವರ್ತನೆಯು ಭಾರತ ಕೇಂದ್ರಿತ ಮಾಹಿತಿಗಳನ್ನು ಜನರಿಗೆ ತಲುಪಿಸುವ ಮತ್ತು ಭಾರತವು ನೀಡುತ್ತಲೇ ಬಂದಿರುವ ಸಂದೇಶಗಳು (ವೈಯುಕ್ತಿಕತೆಯ ಸಾರ್ಥಕ್ಯದ ಮತ್ತು ಜಗತ್ತಿನ ಹಿತದ ಸಂದೇಶಗಳು) ಅವರ ಮನದೊಳಗೆ ಇಳಿಯುವಂತೆ ಮಾಡುವ ಕ್ರಿಯಾಯೋಜನೆ ಆಗಿರುತ್ತದೆ.

 ಈ ಮೂರೂ ದಿಕ್ಸೂಚೀ ಅಂಶಗಳು ಸಂಘಕ್ಕೆ ಹೊಸದಲ್ಲ.  ಆದರೂ, ಇವುಗಳ ತಾತ್ವಿಕ-ವ್ಯಾವಹಾರಿಕ ವಿವರಗಳೆಲ್ಲವೂ ಪ್ರಸ್ತುತ ಕಾಲಘಟ್ಟದಲ್ಲಿ ಸಿದ್ದರೂಪದಲ್ಲಿ ಲಭ್ಯ ಎಂದು ಹೇಳಲಾಗದು. ಕಳೆದ 96 ವರ್ಷಗಳಲ್ಲಿ ಸಂಘದ ಕಾರ್ಯವಿಸ್ತರಣೆ ಪರಿಣಾಮಕಾರಿಯಾಗಿ ಆಗಿದೆ. ಕಾರ್ಯವಿಸ್ತರಣೆ ಆದಂತೆ, ಹಿಂದೂ ಸಂಘಟನೆಯ ಸಾಮಾಜಿಕ ಹಾಗೂ ವೈಚಾರಿಕ ಪರಿವರ್ತನೆಯ ಸಂದೇಶ ಮತ್ತು ಕಾರ್ಯಯೋಜನೆಗಳ ಪ್ರಭಾವ ಹೆಚ್ಚಾಗುತ್ತಿವೆ.  ಸಾಮಾಜಿಕ ನಿಲುವುಗಳ ಮೂಲಕ ಮತ್ತು ಮತ್ತು ವೈಚಾರಿಕ ಸ್ಪಷ್ಟತೆಯಿಂದ ಸಂಘಟನೆಯ ಬಲವರ್ಧನೆ ಆಗಿರುವುದೂ ಸಹ ಸಂಘದ ಅನುಭವಕ್ಕೆ ಹಲವಾರು ಬಾರಿ ಬಂದಿದೆ.  ಅಂದರೆ, ಈ ಮೂರೂ ದಿಕ್ಸೂಚೀ ಅಂಶಗಳಲ್ಲಿ ಯಾವುದೇ ಒಂದು ಅಂಶದ ಆಧಾರದ ಮೇಲೆ ಮಾಡಲಾದ ಯೋಜನೆಯ ಫಲ ಮೂರೂ ದಿಕ್ಕುಗಳಲ್ಲೂ ಆಗುತ್ತಿದೆ ಎಂದು ಪರಿಗಣಿಸಿದರೆ ತಪ್ಪಾಗಲಾರದು.  ಆದರೆ, ಕೇವಲ ಸಂಘದ ನಿರ್ಧಾರಗಳ ಮೇಲೆಯೇ ಈ ಮೂರೂ ದಿಕ್ಸೂಚೀ ಯೋಜನೆಗಳ ಯಶಸ್ಸು ನಿಂತಿಲ್ಲ. ಏಕೆಂದರೆ, ಬಾಹ್ಯ ಮತ್ತು ವಿದೇಶೀ ಶಕ್ತಿಗಳು ತಾವಾಗಿಯೇ ಅಥವಾ ಆಂತರಿಕವಾದ ಹಲವಾರು ಸಾಮಾಜಿಕ, ರಾಜಕೀಯ ಮತ್ತು ಸರ್ಕಾರೇತರ ಸಂಸ್ಥೆಗಳ ಜೊತೆಗೂಡಿ ತಮ್ಮದೇ ಆದ ಪ್ರಭಾವವನ್ನು ಬೀರುತ್ತಲೇ ಇವೆ. ಸಂಘದ ಕಾರ್ಯಗತಿಯ ಮೇಲೆ ಪ್ರತಿಕೂಲ ವಾತಾವರಣವನ್ನು ನಿರ್ಮಿಸುವ ಸಾಮರ್ಥ್ಯಹೊಂದಿವೆ.  ಪ್ರಚಲಿತ ವಿದ್ಯಮಾನಗಳಲ್ಲಿ ಭಾರತೀಯ ಸಂದೇಶವನ್ನು ಮಸುಕುಗೊಳಿಸುವಲ್ಲಿ ಇಂದಿನವರೆವಿಗೂ ಯಶಸ್ವಿಯಾಗಿವೆ. ಹಿಂದೂ ಸಮಾಜದ ಮೇಲೆ ಸತತ ಅಪಪ್ರಚಾರ ಮಾಡುವ ತಂತ್ರದಿಂದ ಹೊಸ ಪೀಳಿಗೆಗಳನ್ನು ದಾರಿ ತಪ್ಪಿಸುವ ಪ್ರಕ್ರಿಯೆ ತುಂಬಾ ಹಿಂದಿನಿಂದ ನಡೆದು ಬಂದಿದ್ದು ಈಗ ಹಿಂದೂ ಸಂಘಟನೆಗಳ ಮೇಲೆ ಸಹ ಅಪಪ್ರಚಾರವೂ ಪ್ರಬಲವಾಗುತ್ತಿದೆ.  ಸಮಾಜದ ಘಟಕಗಳನ್ನು ಒಡೆಯುವ ಸಾಮರ್ಥ್ಯ ಇರುವ ಅಪಪ್ರಚಾರದ ಅಪಾಯವನ್ನು ಹೆಚ್ಚುತ್ತಿರುವ ಸಾಮಾಜಿಕ ವಿಷಮತೆಯಿಂದ ಗ್ರಹಿಸಬಹುದಾಗಿದೆ.

ತನ್ನ ಕಾರ್ಯವೈಖರಿಯಿಂದಲೇ ತನ್ನ ಮೇಲೆ ನಡೆಯುತ್ತಿರುವ ಅಪಪ್ರಚಾರವನ್ನು ನಿಷ್ಕ್ರಿಯಗೊಳಿಸುವ ಹಿಂದೂ ವಿಧಾನವನ್ನು ಸಂಘವು ಅಳವಡಿಸಿಕೊಂಡಿದೆ.  ಸಮಾಜ ಸುಧಾರಣೆಯ ನೆಲೆಯಲ್ಲಿ ಸಾಮಾಜಿಕ ಸಾಮರಸ್ಯವನ್ನು ಸಾಧಿಸುವ ಗುರಿಯಿಂದ ಮುನ್ನಡೆಯುತ್ತಿದೆ. ಮೀಸಲಾತಿಯನ್ನು ಮುಂದುವರೆಸುವ ಅಗತ್ಯತೆಯನ್ನು ಪ್ರತಿಪಾದಿಸುವ ಸಂಘಕ್ಕೆ ಸಾಮಾಜಿಕ ಸಾಮರಸ್ಯದ ಇತರ ಅಯಾಮಗಳ ಆಳವಾದ ಅರಿವಿದೆ.  ಕಾನೂನಾತ್ಮಕವಾಗಿ ಅಸ್ಪೃಷ್ಯತೆಯನ್ನು ನಿಷೇಧಿಸಲಾಗಿದ್ದು, ಸಂಘವು ಅದನ್ನು ಭಾವನಾತ್ಮಕವಾಗಿ ವಿವರಿಸಲು ಪ್ರಯತ್ನಿಸುತ್ತಿದೆ. ರಾಷ್ಡ್ರೀಯತೆಯ ಭಾವನೆಗಳು ಜನಮಾನಸದಲ್ಲಿ ಪ್ರಕಟೀಕೃತಗೊಳಿಸುತ್ತಾ, ಸಾಮಾಜಿಕ ಸಾಮರಸ್ಯವನ್ನು ಸಂಘವು ಬಲಗೊಳಿಸುತ್ತಿದೆ.

ಆದರೆ, ಅಪಪ್ರಚಾರವನ್ನು ಸೃಷ್ಟಿಸುವ ಮತ್ತು ಪೋಷಿಸುವವರನ್ನು ಗುರುತಿಸುವ ಮತ್ತು ಅವರ ಪ್ರಭಾವವನ್ನು ಕುಗ್ಗಿಸುವ ಆಯಾಮವನ್ನೂ ಕೂಡ ಒಳಗೊಳ್ಳದೇ ಸಾಮಾಜಿಕ ಸಾಮರಸ್ಯದ ಸಾಧನೆ ಅಸಾಧ್ಯ. ಸಾಮಾಜಿಕ ಸಾಮರಸ್ಯದ ಮುಂದಿನ ಮಜಲುಗಳನ್ನು ತಲುಪುವುದು ಹೇಗೆ ಎನ್ನುವುದು ಇಂದಿನ ಒಂದು ಮುಖ್ಯ ಪ್ರಶ್ನೆ.  ಸಾಮಾಜಿಕ ಪರಿವರ್ತನೆಯನ್ನು ಕಾರ್ಯವಿಸ್ತಾರದ ಮೂಲಕ ಸಾಧಿಸಬಹುದು ಎಂಬುದು ಸಾಮಾನ್ಯ ಉತ್ತರ.  ನೂತನ ಸರಕಾರ್ಯವಾಹರ ಕಾರ್ಯಯೋಜನೆಯಲ್ಲಿರುವ ವೈಚಾರಿಕ ಪರಿವರ್ತನೆ ಹೊಸ ಸಾಧ್ಯತೆಗಳತ್ತ ನಮ್ಮ ಗಮನ ಸೆಳೆಯುತ್ತದೆ.  ಸಾಮಾಜಿಕ ಸಾಮರಸ್ಯಕ್ಕೆ ವೈಚಾರಿಕ ನೆಲೆಯಲ್ಲಿ ಭಾರತೀಯ ಸಂದೇಶ ಯಾವುದು?  ಭಾರತೀಯ ವಿಚಾರಧಾರೆಗಳಲ್ಲಿ ನಮಗೆ ಹಲವು ಉತ್ತರಗಳು ಸಿಗುತ್ತವೆಯೇ? ಅವುಗಳ ಮಧ್ಯೆ ತಾರ್ಕಿಕ ತಾಕಲಾಟ ಇರಬಹುದೇ? ಈ ಪ್ರಶ್ನೆಗಳ ವಿಶ್ಲೇಷಣೆ ನಮಗೆ ಒಂದು ಸ್ಪಷ್ಟತೆ ನೀಡುತ್ತದೆ. ಅದೆಂದರೆ, ಭಾರತೀಯ ವಿಚಾರಧಾರೆಗಳಲ್ಲಿ ವೈಚಾರಿಕ ಸಾಮರಸ್ಯವನ್ನು ಸ್ಪಷ್ಟವಾಗಿ ಅರಿಯುವ ಪ್ರಕ್ರಿಯೆ ವೈಚಾರಿಕ ಪರಿವರ್ತನೆಯ ಪೂರ್ವಭಾವೀ ಅಗತ್ಯತೆಗಳಲ್ಲಿ ಒಂದಾಗಿದೆ ಎಂಬುದಾಗಿದೆ.   

ಶ್ರೀಧರನ್ ಎಂ.ಕೆ.

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನಿರಂಜನ್ ಮುಕುಂದನ್ ಗೆ 4 ಚಿನ್ನದ ಪದಕ

Tue Mar 23 , 2021
ಕರ್ನಾಟಕದ ಹೆಮ್ಮೆಯ ವಿಕಲಚೇತನ ಈಜು ಪಟು ನಿರಂಜನ್ ಮುಕುಂದನ್ ಅವರು ಮಾರ್ಚ್ 21, 2021ರಂದು ಮುಕ್ತಾಯಗೊಂಡ ರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಪದಕಗಳನ್ನು ಗಳಿಸಿ ಸಾಧನೆ ಮೆರೆದಿದ್ದಾರೆ. ಈ ಸ್ಪರ್ಧೆಯಲ್ಲಿ ಕರ್ನಾಟಕ ತಂಡ 92 ಪದಕ ಗಳಿಸಿ ಸಮಗ್ರ ಚಾಂಪಿಯನ್ ಪಟ್ಟ ಅಲಂಕರಿಸಿತು. ಮುಕುಂದನ್ ಅವರು ಈಗಾಗಲೇ ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಕಲಚೇತನ ಈಜು ಸ್ಪರ್ಧೆಯಲ್ಲಿ ನೂರಕ್ಕೂ ಹೆಚ್ಚು ಪದಕಗಳನ್ನು ಗಳಿಸಿದ್ಧಾರೆ. email facebook twitter […]