ಎಲ್ಲರಿಗೂ ಸೇರಿದ ಸರ್ವಜ್ಞನಿಗೆ ನಾವೂ ಜೀವಂತ ಸ್ಮಾರಕವಾದೇವೆ?

ಸರ್ವಜ್ಞನ ಊರಿಗೊಂದು ಭೇಟಿ

ಎರಡು ದಿನಗಳ ಕಾಲ ಬನವಾಸಿಯ ನರೂರದಲ್ಲಿ ರಘುನಂದನ ಭಟ್ಟರ ಮನೆಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಚಿಂತನಬೈಠಕ್ಕನ್ನು ಮುಗಿಸಿಕೊಂಡು ಮರುದಿನ ಹಿರೇಕೆರೂರಿಗೆ ಪ್ರವಾಸ ಹೋಗುವುದಿತ್ತು. ಹಿರೇಕೆರೂರಿನಲ್ಲಿ ನಮ್ಮ ಎರಡೂ ಗುರುಕುಲಗಳ – ಹರಿಹರಪುರದ ಪ್ರಬೋಧಿನೀ ಗುರುಕುಲ ಮತ್ತು ವಿಟ್ಲ ಮೂರುಕಜೆಯ ಮೈತ್ರೇಯೀ ಗುರುಕುಲ – ಮಕ್ಕಳ ಐದಾರು ಮನೆಗಳಿವೆ. ಈ ಗುರುಕುಲಗಳ ನಂಟಿನ ಹಿನ್ನೆಲೆಯಲ್ಲಿ ಆಯೆಲ್ಲ ಮನೆಗಳಿಗೆ ಭೇಟಿ ಕೊಡುವುದೂ ಪ್ರವಾಸದ ಒಂದು ಭಾಗವಾಗಿ ಆಯೋಜನೆಯಾಗಿತ್ತು. ಪ್ರವಾಸದ ಮುಖ್ಯ ಲಕ್ಷ್ಯವು ಹಿರೇಕೆರೂರಿನಲ್ಲಿ ನಡೆಯುವ ಶಿಕ್ಷಕರ ಸಮ್ಮಿಲನದಲ್ಲಿ ಪಾಲ್ಗೊಳ್ಳುವುದಾಗಿತ್ತು. ಇವೆಲ್ಲವನ್ನೂ ನೆಪವಾಗಿಟ್ಟುಕೊಂಡು ಸರ್ವಜ್ಞನ ಊರು ಅಬಲೂರಿಗೆ ಹೋಗಿಬರುವ ಯೋಜನೆಯೊಂದು ಸಿದ್ಧಗೊಂಡಿತ್ತು.

ನರೂರಿನಿಂದ ಬೆಳಿಗ್ಗೆ ನಾಷ್ಟಾ ಮುಗಿಸಿಕೊಂಡು ಹೊರಟುನಿಂತವನನ್ನು ರಘುನಂದನ ಭಟ್ರು ಬಸ್ ರಸ್ತೆಯ ತನಕ ತಮ್ಮ ಬೈಕಿನಲ್ಲಿ ಬಿಟ್ಟುಕೊಟ್ಟರು. ನರೂರಿನಿಂದ ಸೊರಬ, ಸೊರಬದಿಂದ ಶಿರಾಳಕೊಪ್ಪ, ಶಿರಾಳಕೊಪ್ಪದಿಂದ ಹಿರೇಕೆರೂರು – ಹೀಗೆ ಒಂದೊಂದಾಗಿ ಬಸ್ ಬದಲಾಯಿಸಿಕೊಂಡು ಹಿರೇಕೆರೂರು ತಲಪುವಾಗ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಗುರುಕುಲದ ಪಾಲಕರಾದ ನಿಂಗಾಚಾರರು ಬಸ್ಟಾಂಡಿನಲ್ಲಿ ತಮ್ಮ ಬೈಕ್ ಸಮೇತ ಕಾದು ಕುಳಿತುಕೊಂಡು ದಾರಿನೋಡುತ್ತಿದ್ದರು. ಬಸ್ಸಿನಿಂದ ಇಳಿದ ತಕ್ಷಣವೇ ಎದುರುಗೊಂಡ ಅವರ ಸ್ವಾಗತಿಸುವ ನಗುಮುಖವನ್ನು ನೋಡಿ ಹೊತ್ತುಕೊಂಡ ಚೀಲದ ಅರ್ಧ ಭಾರ ಕಡಮೆಯಾದಂತೆನಿಸಿತು.

ಬೈಕನ್ನೇರಿದ ಬಳಿಕ ಚಲಾಯಿಸುವ ಮುನ್ನ ಒಂದು ಆಗ್ರಹಪೂರ್ವಕವಾದ ಪ್ರಶ್ನೆಯನ್ನು ಕೇಳಿದರು – ಇಲ್ಲೇ ಹತ್ತಿರದಲ್ಲಿ ಊರ ದೇವಸ್ಥಾನವಿದೆ, ಅಲ್ಲಿಗೆ ಹೋಗಿ ಬರೋಣವಲ್ಲವೆ? ಊರಿಗೆ ಬರುವವರು ಮೊದಲು ಊರ ದೇವರ ದರ್ಶನ ಪಡೆಯಬೇಕೆಂಬ ಧ್ವನಿಯಿತ್ತು ಈ ಪ್ರಶ್ನೆಯಲ್ಲಿ. ಅಲ್ಲದೆ, ಸರ್ವಜ್ಞನ ಊರಿಗೆ ಹೋಗುವ ಮುನ್ನ ಊರ ದೇವರ ದರ್ಶನ ಪಡೆಯುವುದು ಅನಿವಾರ್ಯ ಎಂಬ ಮಾಹಿತಿಯೂ ಇದರಲ್ಲೇ ಅಡಕವಾಗಿತ್ತು. ನಿರೀಕ್ಷಿತವಾಗಿಯೇ ಬಾಯಿಂದ ಹ್ಞೂ ಎಂಬ ಧ್ವನಿ ಬಂದಾಕ್ಷಣ ಅವರ ಗಾಡಿ ದೇವಿಗುಡಿಯ ಕಡೆಗೆ ದೌಡಾಯಿಸಿತು.

ಎಲ್ಲರ ದೇವಸ್ಥಾನ

ಅದು ದುರ್ಗಾ ದೇವಿ ಮಂದಿರ. ಹಿರೇಕೆರೂರಿನ ಗ್ರಾಮದೇವತೆ ಈ ದುರ್ಗೆ. ಮಂಗಳವಾರ ಮತ್ತು ಶುಕ್ರವಾರ ಇಲ್ಲಿ ವಿಶೇಷ ಪೂಜೆ ಇರುತ್ತದೆ. ಅಂದು ಬರಿಯ ಸ್ಥಾನೀಯರಷ್ಟೆ ಅಲ್ಲದೆ ಪರವೂರಿಂದಲೂ ಭಾರೀ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಬರುತ್ತಾರೆ. ಅಂದು ಸೋಮವಾರ. ಭಕ್ತರ ಸಂಖ್ಯೆ ಕಡಮೆಯೇ ಇತ್ತು. ಹಾಗಾಗಿ ದೇವಿಯ ದರ್ಶನ ಸರತಿಸಾಲಿನ ಉಸಾಬರಿ ಇಲ್ಲದೇ ಲಭಿಸಿತು.

ಗ್ರಾಮದೇವಸ್ಥಾನ ಎಂಬ ಕಲ್ಪನೆಯೇ ಅದೆಷ್ಟು ಚೆನ್ನ! ಗ್ರಾಮಸ್ಥರೆಲ್ಲರ ದೇವಳವದು. ಗ್ರಾಮಸ್ಥರೆಲ್ಲರಿಗೂ ಪ್ರವೇಶವಿರುವ ದೇವಳವದು. ಒಂದು ನಿರ್ದಿಷ್ಟ ಪಂಗಡ/ಸಮುದಾಯಕ್ಕೆ ಸಂಬಂಧಿಸಿದ ದೇವಳವಲ್ಲವದು. ಭಕ್ತರ ನಡುವೆ ಯಾವುದೇ ರೀತಿಯ ಭೇದವನ್ನು ಗಣಿಸದ ಒಂದು ವ್ಯವಸ್ಥೆ ಅಲ್ಲಿರುತ್ತದೆ. ಎಲ್ಲ ಸಮುದಾಯದವರಿಗೂ ಪ್ರವೇಶವಿರುವಂತೆ ಅವರೆಲ್ಲರ ಸಂಪ್ರದಾಯಗಳಿಗೂ ಅಲ್ಲಿ ಅವಕಾಶ ಇರುತ್ತದೆ. ಇಂಥ ನಿಜಾರ್ಥದ ಗ್ರಾಮದೇವಳವಿದು.

ಒಂದು ಸ್ಥಾನವು ದೇವಸ್ಥಾನವೆಂದು ಕರೆಸಿಕೊಳ್ಳುತ್ತದಾದರೆ, ದೇವಸಾನ್ನಿಧ್ಯ ಅಲ್ಲಿರುವುದು ಹೌದಾಗಿದ್ದರೆ ಅಲ್ಲಿ ಎಲ್ಲರಿಗೂ ಪ್ರವೇಶ ಇರಲೇಬೇಕಲ್ಲವೆ? ಕೆಲವು ಮಂದಿ ಸೂಚಿಸುವ ಯಾರಿಗೋ ಕೆಲವರಿಗೆ ಪ್ರವೇಶವಿಲ್ಲವೆಂಬ ಸ್ಥಾನದಲ್ಲಿ ದೇವರನ್ನು ಕಲ್ಪಿಸಿಕೊಳ್ಳಲಾದರೂ ಹೇಗೆ ಸಾಧ್ಯವಾದೀತು?

ಪ್ರಸಾದನೀಡುವ ದೇವೀಕೆರೆ:

ಈ ದೇವಸ್ಥಾನದ ಪಕ್ಕದಲ್ಲಿ ಒಂದು ದೊಡ್ಡ ಕೆರೆ ಇದೆ. ದೇವಸ್ಥಾನದ ಪಕ್ಕದಲ್ಲೇ ಇರುವುದರಿಂದ ಇರಬೇಕು, ಅದಕ್ಕೆ “ದೇವೀಕೆರೆ” ಎಂದು ಹೆಸರು. ತುಂಬಾ ವಿಶಾಲ ಪ್ರದೇಶದಲ್ಲಿ ಹಬ್ಬಿ ವಿರಾಜಮಾನವಾಗಿರುವ ಈ ಕೆರೆ ಹೆಸರಿಗೆ ತಕ್ಕಂತೆ ಗ್ರಾಮಕೆರೆಯೇ ಹೌದು. ದೇವಿಯ ಹೆಸರಲ್ಲಿರುವ ಈ ಕೆರೆ ದೇವಿಯ ಪ್ರಸಾದದ ಬಗೆಯಲ್ಲಿ ಭಕ್ತರ ಹೊಲಗಳಿಗೆ ನೀರುಣಿಸುತ್ತಾಳೆ. ಸುಮಾರು ಹನ್ನೆರಡು ಸಾವಿರ ಎಕರೆ ವಿಸ್ತೀರ್ಣದಷ್ಟು ಭತ್ತದ ಹೊಲಗಳಿಗೆ ನೀರುಣಿಸುವ ಸಾಮರ್ಥ್ಯ ಈಕೆಯದು. ಈಕೆಯ ಅಸ್ತಿತ್ವಮಾತ್ರದಿಂದ ಈ ಪ್ರದೇಶದಲ್ಲಿ ಭತ್ತದ ಪೈರು ನಳನಳಿಸುತ್ತದೆ. ಅಷ್ಟೂ ಭತ್ತದ ಗದ್ದೆಗಳಿಗೆ ಯಥೇಚ್ಛವಾಗಿ ನೀರುಣಿಸಿಯೂ ಬತ್ತದ ಒರತೆಯಂತೆ ಈಕೆ ಬಿರು ಬೇಸಿಗೆಯಲ್ಲಿಯೂ ಕಂಗೊಳಿಸುತ್ತಾಳೆ.

ತನ್ನ ಬಹುವಿಸ್ತಾರದ ಹರಹಿನಲ್ಲಿ ನಡುವೆ ಒಂದಷ್ಟು ವಿಸ್ತಾರದಲ್ಲಿ ಒಂದು ಸುಂದರ ನಡುಗಡ್ಡೆಯ ಭೂಮಿಯನ್ನು ಹೊಂದಿ ತನ್ನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿಕೊಂಡಿರುವ ಈಕೆ ಈ ನಿಟ್ಟಿನಲ್ಲಿಯೂ ‘ದೇವೀಕೆರೆ’ಯೇ ಹೌದು.

ಅಹಂಕಾರದ ರಸ್ತೆಯ ಸಾಧ್ಯತೆ

ದೇವೀದೇವಸ್ಥಾನಕ್ಕೆ ಬರಲು ಹಿರೇಕೆರೂರಿನಿಂದ ಎರಡು ರಸ್ತೆಗಳಿವೆ. ಒಂದು, ಮುಖ್ಯ ಪ್ರವೇಶದ್ವಾರದ ಮೂಲಕ ದೇವಸ್ಥಾನದ ಎದುರು ಕೆರೆ ಏರಿಯ ಕೆಳಗೆ ಬಂದು ಕೊನೆಗೊಂಡರೆ ಇನ್ನೊಂದು ಕೆರೆಯ ಏರಿಯ ಮೇಲೆಯೇ ಹೋಗುವ ರಸ್ತೆ. ಕೆರೆ ಏರಿಯ ಮೇಲೆ ಇರುವ ಎರಡನೆಯ ರಸ್ತೆ ದೇವಸ್ಥಾನದ ಪಕ್ಕದಲ್ಲಿ ಹಾದು ಮುಂದಕ್ಕೆ ಬೇರೆ ಬೇರೆ ಊರುಗಳನ್ನು ಸಂಪರ್ಕಿಸುತ್ತದೆ. ಅಂದರೆ; ದೇವಳವೇ ಲಕ್ಷ್ಯವಾಗಿರುವ ರಸ್ತೆಯು ಮಂದಿರದ ಮುಂದೆ ಕೆಳಗೆ ಬಂದು ನಮನೀಯವಾಗಿ ನಿಂತುಬಿಡುತ್ತದೆ. ಅದಕ್ಕೆ ದೇವಿಯನ್ನು ಬಿಟ್ಟರೆ ಅನ್ಯ ಲಕ್ಷ್ಯವಿಲ್ಲ. ದೇವಳಕ್ಕಿಂತ ಸ್ವಲ್ಪ ಎತ್ತರದಲ್ಲೇ ದೇವಳದ ಪಕ್ಕದಲ್ಲಿ ಸಾಗುವ ಎರಡನೆಯ ರಸ್ತೆಯು ತನಗೆ ದೇವಿ – ದೇವಳದ ಹಂಗಿಲ್ಲವೆಂಬಂತೆ ಅಲ್ಲಿ ನಿಂತೂ ನಿಲ್ಲದಂತೆ ಒಂದೇ ಸಮನೆ ಮುಂದೆ ಸಾಗುತ್ತದೆ. ಕೆರೆಯ ಏರಿಯ ಮೇಲಿರುವುದರಿಂದ ಈ ರಸ್ತೆಯು ದೇವಳ ಮತ್ತು ಕೆರೆಯ ನಡುವೆ ಒಂದು ಗಡಿರೇಖೆಯಂತೆಯೂ ಕೆಲವರಿಗೆ ಕಾಣಿಸಿದರೆ ಅಚ್ಚರಿ ಇಲ್ಲ. ದೇವಳದ ನೆಲಮಟ್ಟಕ್ಕಿಂತ ಎತ್ತರದಲ್ಲಿ, ಹಿಂದಿನಿಂದ, ಪಕ್ಕದಿಂದ ಸಾಗುವ ರಸ್ತೆಯ ಅವಸ್ಥೆಯನ್ನು ಇಷ್ಟೆಲ್ಲಾ ಪರಿಯಲ್ಲಿ ನೋಡುವಲ್ಲಿ ಯಾವುದೇ ತಪ್ಪಿಲ್ಲವೆನಿಸುತ್ತದೆ.

ಅರೆ! ಇಷ್ಟೆಲ್ಲಾ ಅಹಂನಿಂದ ಇರುವ ರಸ್ತೆಯೇ ಸರ್ವಜ್ಞನ ಊರಿಗೂ ಕರಕೊಂಡು ಹೋಗುವ ರಸ್ತೆಯೂ ಹೌದಲ್ಲ!

ನಿಂಗಾಚಾರರು ಕಿವಿಯಲ್ಲಿ ಅರುಹಿದರು: ಸರ್ವಜ್ಞನ ಊರು ಅಂಬಲೂರಿಗೆ ಈ ರಸ್ತೆಯಲ್ಲೇ ಮುಂದೆ ಹೋಗಬೇಕು. ಈಗಲೇ ಹೋಗುವುದಾ, ಹೇಗೆ?

ನಮ್ಮ ಹೊಟ್ಟೆ ಚುರುಚುರು ಹೇಳುವುದಕ್ಕಿಂತ ಮುಖ್ಯವಾಗಿ ಅದನ್ನು ತಂಪುಮಾಡುವ ಮನೆಯವರು ನಮಗಾಗಿ ಕಾಯುತ್ತಿದ್ದಾರೆಂಬ ಅಳುಕು ಅವರ ಈ ಅರುಹುವಿಕೆಯಲ್ಲಿ ಧ್ವನಿಸುತ್ತಿತ್ತು. ‘ಸ್ವಲ್ಪ ತಡವಾಗುತ್ತದೆ ಎಂದು ಅವರಿಗೆ ಹೇಳೋಣ, ತುಂಡು ಬಟ್ಟೆಯ ಗಂಡು ಕವಿ ಸರ್ವಜ್ಞನ ಊರಿಗೆ ಈಗಿತ್ತೀಗಲೇ ಹೋಗೋಣ’ ಎಂಬ ನಿರ್ಣಯ ಆ ಸಂದರ್ಭದಲ್ಲಿ ಹುಟ್ಟಿಬಿಟ್ಟಿತು.

ಸರ್ವಜ್ಞನಿಗೆ ಕೊಡಬಹುದಾದ ‘ಗೌರವ’

ಅಲ್ಲಿಂದ ಅಂಬಲೂರಿಗೆ ಸುಮಾರು ಐದು ಕಿಲೋಮೀಟರಿನಷ್ಟು ದೂರ. ರಸ್ತೆಯು ದೂರವಿಲ್ಲ ಎನ್ನುವ ಖುಷಿಗಿಂತ ಅಷ್ಟೇನೂ ಚೆನ್ನಾಗಿಲ್ಲವೆಂಬ ಕಷ್ಟವು ನಮ್ಮನ್ನು ಕಾಡುತ್ತದೆ. ಸರ್ವಜ್ಞ ಒಬ್ಬ ಸಾಮಾನ್ಯನಂತೆ ಬದುಕಿದವ. ತನಗಾಗಿ ಏನನ್ನೂ ಅಪೇಕ್ಷೆ ಪಡದಿದ್ದವ. ಆತನ ತ್ರಿಪದಿಗಳು ಹೇಳುವ ವಿಚಾರ ಗೊತ್ತಿಲ್ಲದಿದ್ದರೂ ಬದುಕಿನ ಈ ಸಂದೇಶ ಚೆನ್ನಾಗಿ ಗೊತ್ತಾಗಿ ಅಧಿಕಾಸ್ಥರು ಹತ್ತರೊಟ್ಟಿಗೆ ಹನ್ನೊಂದೆಂಬಂತೆ ಈ ರಸ್ತೆಯನ್ನು ‘ಗೌರವದಿಂದ’ ಪರಿಗಣಿಸಿದ್ದಾರೆನಿಸುತ್ತದೆ. ರಸ್ತೆಯೇನೋ ಹೀಗಿದೆ, ಇರಲಿ. ಆತನ ಊರು ಹೇಗಿದೆ ಎಂದು ಒಂದು ಕುತೂಹಲದಿಂದ ಕೇಳಿದಾಗ ಬಂದ ಆಚಾರರ ಉತ್ತರ ನಿರಾಶಾದಾಯಕವಾಗಿತ್ತು: ಮಾಮೂಲಿಯಂತೆ ಇದೆ, ಸರ್ವಜ್ಞನ ಒಂದು ಸಣ್ಣ ಪ್ರತಿಮೆಯನ್ನು ಬಿಟ್ಟರೆ ಮಹಾಪುರುಷನೊಬ್ಬನ ಜನ್ಮಸ್ಥಾನವೆಂದು ಅನಿಸುವ ಯಾವುದೇ ಸ್ವರೂಪ-ಲಕ್ಷಣಗಳಿಲ್ಲ. ಆತನಂತೂ ಸರಕಾರದ ದೃಷ್ಟಿಯಿಂದ ಪ್ರಬಲ ಸಮುದಾಯಕ್ಕೆ ಸೇರಿದವನಲ್ಲವೆಂದು ತೋರುತ್ತದೆ!

ಏನಿದ್ದರೂ ಆತ ಸರ್ವಜ್ಞನಲ್ಲವೆ. ಆತನಿಗೆ ಸಂಬಂಧಿಸಿದ ಊರು ಹೀಗೆಯೆ ಇರುವುದು ಬಹುಶಃ ಆತನಿಗೆ ತೋರುವ “ಗೌರವ”ವೂ ಆದೀತೇನೋ!

ಅವಿನಾದ್ವೈತ – ಸಮನ್ವಯ:

ಹಿಂದೆ ಅಂಬಲೂರೆನಿಸಿದ್ದ ಈಗಿನ ಅಬಲೂರು ಸುಮಾರು ಒಂದೂವರೆ ಸಾವಿರ ಜನರಿರುವ ಒಂದು ಪುಟ್ಟ ಊರು. ಸಣ್ಣದು ಸುಂದರ ಎನ್ನುವಿರಾದರೆ ಈ ಊರನ್ನೂ ಕುರಿತು ಹೇಳಬಹುದು. ಅತ್ಯಂತ ಪ್ರಶಾಂತವಿರುವ ಊರಿದು. ಊರ ಪ್ರವೇಶ ಮಾಡುವಾಗಲೇ ಬಸವೇಶ್ವರ ದೇವಸ್ಥಾನ ಸಿಗುತ್ತದೆ. ಇದೊಂದು ಪ್ರಾಚೀನ ದೇವಸ್ಥಾನ. ಪೂರ್ತಿ ಕಲ್ಲಿನ ರಚನೆಯಿಂದಲೇ ಆಗಿರುವ ಈ ದೇವಸ್ಥಾನವನ್ನು ಶೈಲಿಯ ದೃಷ್ಟಿಯಿಂದ ತ್ರಿಕೂಟ ದೇವಸ್ಥಾನ ಎಂದೂ ಕರೆಯುತ್ತಾರೆ. ಅಂದರೆ; ಮೂರು ಗರ್ಭಗುಡಿಗಳಿರುವ ದೇವಸ್ಥಾನ. ಒಂದೊಂದರಲ್ಲಿಯೂ ಒಂದೊಂದು ದೇವತಾವಿಗ್ರಹಗಳಿರುತ್ತವೆ. ಇಂಥ ದೇವಳವನ್ನು ತ್ರಿಪುರುಷ ದೇವಳವೆಂದೂ ಕರೆಯುತ್ತಾರೆ.

ಗರ್ಭಗುಡಿಯಲ್ಲಿರುವ ದೇವತಾಮೂರ್ತಿಗಳೆಂದರೆ ಬ್ರಹ್ಮೇಶ್ವರ, ಆದಿನಾರಾಯಣ ಮತ್ತು ಸೂರ್ಯನಾರಾಯಣ. ಮಧ್ಯದಲ್ಲಿ ಬಸವನ ದೊಡ್ಡ ಕಲ್ಲಿನ ವಿಗ್ರಹವಿದೆ. ಬಸವನಿರುವುದು ಶಿವನೆದುರು ತಾನೆ. ಇಲ್ಲಿಯೂ ಅದೇ ರೀತಿ ಇದೆ. ಆದರೆ ಈ ದೇವಳವನ್ನು ಗುರುತಿಸುವುದು ಬಸವನ ಹೆಸರಿನಿಂದ, ಶಿವನ ಹೆಸರಿನಿಂದಲ್ಲ. ಶಾಸನಗಳಲ್ಲಿ ಇದು ಬ್ರಹ್ಮೇಶ್ವರ ದೇವಸ್ಥಾನವೆಂದೇ ಉಲ್ಲೇಖವಿದ್ದರೂ ಈಗ ಬಸವೇಶ್ವರ ದೇವಸ್ಥಾನವೆಂದೇ ಖ್ಯಾತವಾಗಿದೆ. ತಾನು ಭಕ್ತಾಧೀನ ಎನ್ನುವ ಶ್ರೀಹರಿಯ ಅಂಬೋಣವು ಇಲ್ಲಿ ಇನ್ನೊಂದು ಬಗೆಯಲ್ಲಿ ಹರ ಮತ್ತು ನಂದಿಗೆ ಸಂಬಂಧಿಸಿದಂತೆ ಪ್ರಕಟಗೊಂಡಿದೆ. ಹರಿಯು ಭಕ್ತಾಧೀನನಾದರೆ ಶಿವನನ್ನು ಆರಾಧಿಸುವವ ಶಿವನೇ ಆಗುವ ಪರಿಕಲ್ಪನೆ ನಮ್ಮ ಪರಂಪರೆಯದು. ಈ ಎರಡರಲ್ಲಿಯೂ ದೇವ-ಭಕ್ತರ ನಡುವಿನ ಅವಿನಾದ್ವೈತ ಸಂಬಂಧವು ಪ್ರತಿಪಾದಿತವಾಗಿದೆ. ಮೂರು ಗರ್ಭಗುಡಿಗಳ ನಡುವೆ ಪ್ರತಿಷ್ಠಾಪಿಸಲ್ಪಟ್ಟ ಬಸವನು ಸ್ಥಾನ ದೃಷ್ಟಿಯಿಂದಲೂ ಕೇಂದ್ರದಲ್ಲಿದ್ದು, ಖ್ಯಾತಿಯ ದೃಷ್ಟಿಯಿಂದಲೂ ಕೇಂದ್ರಸ್ಥಾನದಲ್ಲಿರುವುದು ವಿಶಿಷ್ಟವಾಗಿದೆ.

ಈ ದೇವಳದ ಇನ್ನೊಂದು ವೈಶಿಷ್ಟ್ಯವೆಂದರೆ ಮೂರೂ ಗರ್ಭಗುಡಿಯಲ್ಲಿರುವ ದೇವತಾಮೂರ್ತಿಗಳು ಬೇರೆ ಬೇರೆ. ಒಂದೆಡೆ ಏಕಕಾಲದಲ್ಲಿ ಈಶ್ವರ, ನಾರಾಯಣ ಮತ್ತು ಸೂರ್ಯ – ಹೀಗೆ ವಿಭಿನ್ನ ದೇವಾರಾಧನೆಯ ಸಾಧ್ಯತೆಯನ್ನು ನಾವಿಲ್ಲಿ ಕಾಣಬಹುದು. ಶಂಕರಾಚಾರ್ಯರು ಪರಿಕಲ್ಪಿಸಿದ ಪಂಚಾಯತನ ಪೂಜೆಯ ಹ್ರಸ್ವರೂಪವು ಇಲ್ಲಿದೆ. ಅವರು ಸೂಚಿಸಿದ ಪಂಚಾಯತನ ಕಲ್ಪನೆಯಲ್ಲಿಯ ಇನ್ನೆರಡು ದೇವತೆಗಳೆಂದರೆ ದೇವಿ ಮತ್ತು ಗಣಪತಿ. ಪ್ರಾಚೀನದಲ್ಲೇ ಹೀಗೆ ಇಲ್ಲೊಂದು ದೇವಸಮನ್ವಯವು ದೇವಳವೊಂದರಲ್ಲಿ ಸಾಧ್ಯಗೊಂಡ ಪರಿಯನ್ನು ನಾವಿಲ್ಲಿ ಪ್ರತ್ಯಕ್ಷ ಕಾಣಬಹುದು.

ನಂಬಿದವರ ರಥ!:

ಹೊರಗಡೆ ರಸ್ತೆಯ ಬದಿಯಲ್ಲಿ ರಥವೊಂದು ನಿಂತಿತ್ತು. ದೇವಳದ ರಥವದು. ಜಾತ್ರೆಗಾಗಿ ಸಿದ್ಧಗೊಂಡಿದ್ದ ರಥವಾಗಿತ್ತದು. ಜಾತ್ರೆಯ ರಥವನ್ನು ನೋಡಿದಾಕ್ಷಣ ಬಾಲ್ಯದ ದಿನಗಳು, ಅದರಲ್ಲಿ ಹುದುಗಿರುವ ಜಾತ್ರೆಯ ನೆನಪುಗಳು ಪುಂಖಾನುಪುಂಖವಾಗಿ ಹಾದುಹೋದವು.

ಕಳೆದ ಬಾರಿಯ ಜಾತ್ರೆಯ ಸಂದರ್ಭದಲ್ಲಿ ಈ ರಥವನ್ನು ಎಲ್ಲರೂ ಸೇರಿ ಎಳೆದ ಒಂದು ರೋಮಾಂಚಕಾರಿ ಸನ್ನಿವೇಶವನ್ನು ನಿಂಗಾಚಾರರು ವಿವರಿಸಿದರು. ಅದನ್ನವರು ಕಣ್ಣಾರೆ ಕಂಡನುಭವಿಸಿದವರು. ಅದೇನೆಂದರೆ:

ರಥದಲ್ಲಿ ಉತ್ಸವಮೂರ್ತಿಯನ್ನಿಟ್ಟು ಪೂಜೆಯೆಲ್ಲ ಆದ ಬಳಿಕ ಎಲ್ಲರೂ ಸೇರಿ ರಥವನ್ನು ಎಳೆಯಲು ಆರಂಭಿಸಿದರು. ಎಲ್ಲರೂ ಒಟ್ಟಿಗೆ ಎಳೆಯಿರಿ, ಶಕ್ತಿಹಾಕಿ ಎಳೆಯಿರಿ ಇತ್ಯಾದಿ ಹಲವು ಸೂಚನೆಗಳನ್ನೂ ಸಲಹೆಗಳನ್ನೂ ನೀಡಿದಂತೆ ರಥವನ್ನೆಲ್ಲರೂ ಎಳೆದರೂ ರಥ ಮಾತ್ರ ಸ್ವಲ್ಪವೂ ಮಿಸುಕಾಡಲಿಲ್ಲ. ಆಗ ಒಬ್ಬರು ಬಂದು ಎಲ್ಲರೂ ಚಪ್ಪಲಿಯನ್ನು ಬಿಟ್ಟುಬಂದು ಎಳೆಯಿರಿ ಎಂದು ಸೂಚಿಸಿದರು. ಅದರಂತೆ ಚಪ್ಪಲಿ ಹಾಕಿಕೊಂಡಿದ್ದವರೆಲ್ಲ ಅವುಗಳನ್ನು ದೂರದಲ್ಲಿ ಬಿಟ್ಟುಬಂದು ಮತ್ತೆ ರಥವೆಳೆಯಲು ತೊಡಗಿದರು. ರಥ ನಿಧಾನವಾಗಿ ಮುಂದಕ್ಕೆ ಚಲಿಸಿತು! ಇದೊಂದು ಕಾಕತಾಳೀಯ ಎಂಬ ಘಟನೆಯೇ ಇರಬಹುದು. ಅಥವಾ ಚಪ್ಪಲಿ ಹಾಕಿದಾಗ ಇಲ್ಲದ ಶಕ್ತಿ ಬರಿಗಾಲಿಗೆ ಬಂದಿರಬಹುದು. ಆದರೆ ಶ್ರದ್ಧೆಯು ಪ್ರದಾನಿಸುವ ಶಕ್ತಿಯನ್ನು ಅಲ್ಲಗಳೆಯಲಾಗದಷ್ಟೆ.

ಶಿವರಾದ ಶಿವಶರಣರು:

ರಥ ನಿಂತಿದ್ದ ಸ್ಥಳದಿಂದ ಎಡಕ್ಕೆ ನೂರು ಮೀಟರಿನಷ್ಟು ದೂರದಲ್ಲಿ ಸೋಮೇಶ್ವರ ದೇವಸ್ಥಾನವಿದೆ. ಇದೂ ಕೂಡ ಪ್ರಾಚೀನ ಶೈಲಿಯ, ಕಲ್ಲಿನಿಂದಲೇ ನಿರ್ಮಾಣಮಾಡಿದ ತ್ರಿಕೂಟಶೈಲಿಯ ದೇವಸ್ಥಾನವೇ. ಇದರೊಳಗಿರುವ ದೇವತಾಮೂರ್ತಿಗಳೆಂದರೆ: ಸೋಮೇಶ್ವರ, ಅಗ್ನಿ ಹೊನ್ನಯ್ಯ ಮತ್ತು ಏಕಾಂತ ರಾಮಯ್ಯ. ಹೆಸರೇ ಸೂಚಿಸುವಂತೆ ಹೊನ್ನಯ್ಯ ಮತ್ತು ರಾಮಯ್ಯರು ಜಾನಪದೀಯ ದೇವರುಗಳೇ. ರಾಮಯ್ಯನು ಒಬ್ಬ ಶಿವಶರಣನಿದ್ದನೆಂಬ ಮಾಹಿತಿಯಿದೆ. ಆತ ಮೂಲತಃ ಕಲ್ಬುರ್ಗಿ ಜಿಲ್ಲೆಯ ಆಳಂದಿಯವನು. ವಚನಕಾರರ ಪ್ರಭಾವವೂ ಆತನ ಮೇಲೆ ಆಗಿದೆ. ಆ ಕಾಲದಲ್ಲಿ ಅಂಬಲೂರಿನಲ್ಲಿ ಜೈನಪಂಥದ ಪ್ರಭಾವ ಗಾಢವಾಗಿತ್ತು. ಅಲ್ಲಿಗೆ ಬಂದು ಶೈವಪಂಥದ ಪ್ರಚಾರದಲ್ಲಿ ತೊಡಗುವ ಲಕ್ಷ್ಯವನ್ನಿಟ್ಟುಕೊಂಡು ಹೊರಟ ರಾಮಯ್ಯ ಇದಕ್ಕಾಗಿ ಹೊನ್ನಯ್ಯನ ಸಹಕಾರವನ್ನು ಯಾಚಿಸಿದ. ದೇವಳವೊಂದರ ಪೂಜೆಯನ್ನು ಮಾಡಿಕೊಂಡಿದ್ದ ಹೊನ್ನಯ್ಯ ಪುಲಿಗೇರಿಯವನು. ಅಲ್ಲಿಗೆ ಬಂದು ಹೊನ್ನಯ್ಯನನ್ನು ಜತೆಯಾಗಿಸಿಕೊಂಡು ಅಂಬಲೂರಿನತ್ತ ನಡೆದ ರಾಮಯ್ಯ ಅಲ್ಲಿ ಬ್ರಹ್ಮೇಶ್ವರ ದೇವಸ್ಥಾನವನ್ನು ಈಗಿನ ಸ್ವರೂಪದಲ್ಲಿ ನಿರ್ಮಾಣಮಾಡಿದ. ಅದೇರೀತಿ ಸೋಮೇಶ್ವರ ದೇವಸ್ಥಾನದ ನಿರ್ಮಾಣಕಾರ್ಯವೂ ನೆರವೇರಿತು. ಇವೆಲ್ಲವೂ ಜರಗಿದ್ದು 1161-62ರ ಆಸುಪಾಸಿನಲ್ಲಿ ಎಂದು ಶಾಸನತಜ್ಞರು ವಿವರಿಸುತ್ತಾರೆ.

ಶಿವಶರಣರಿಬ್ಬರು ಶೈವಪಂಥದ ಪ್ರಚಾರ ಮಾಡಿಮಾಡಿ ಕೊನೆಗೆ ಗರ್ಭಗುಡಿಯ ದೇವತೆಗಳೇ ಆಗಿ ಆರಾಧನೀಯರಾಗಿದ್ದಾರೆ. ಇದು ಇನ್ನೊಂದು ಬಗೆಯಲ್ಲಿ ಮತ್ತೆ ‘ಶಿವೋ ಭೂತ್ವಾ ಶಿವಂ ಯಜೇತ್’ ಮಾತನ್ನು ನೆನಪಿಸಿಕೊಡುತ್ತದೆ.

ಸಂಸ್ಕೃತಿಯ ಸ್ಥಾನ:

ಸೋಮೇಶ್ವರ ದೇವಳವನ್ನು ಪ್ರವೇಶಿಸುತ್ತಲೇ ಅಲ್ಲಿ ಗರ್ಭಗುಡಿಗೆ ಹೋಗುವ ದಾರಿಯ ಇಕ್ಕೆಲಗಳಲ್ಲೂ ಭಕ್ತರ ಒಂದು ತಂಡ ತಾನು ಸಿದ್ಧಮಾಡಿ ತಂದುಕೊಂಡಿದ್ದ ಭೋಜನವನ್ನು ಬಡಿಸಿಕೊಂಡು ಊಟಮಾಡುತ್ತಿತ್ತು. ಹಳ್ಳಿಯ ಮುಗ್ಧತೆಯನ್ನು ಮೈವೆತ್ತುಕೊಂಡಿದ್ದ ಆ ತಂಡದಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯರ ತನಕ ಎಲ್ಲ ವಯೋಮಾನದವರೂ ಇದ್ದರು. ಹೇಳುವವರು ಕೇಳುವವರು ಇಲ್ಲದಂತಿದ್ದ ಆ ದೇವಳದಲ್ಲಿ ಗರ್ಭಗುಡಿಗೆ ಹೋಗುವ ಪ್ರಧಾನ ದಾರಿಯಲ್ಲಿ ಹೋಗುವವವರಿಗೆ ಅನನುಕೂಲವಾಗುವಂತೆ ತಮ್ಮ ಭೋಜನಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದ ಆ ಗುಂಪನ್ನು ನೋಡಿ ಒಮ್ಮೆ ಒಂದು ಅಸಹನೆಯ ಭಾವವು ನಮ್ಮೊಳಗೆ ಸುಳಿಯಿತು. ಆದರದು ಮೌನವಾಗಿ ಪ್ರಕಟವಾಯಿತೇ ವಿನಾ ಮಾತಾಗಿ ರೂಪಪಡೆಯಲಿಲ್ಲ. ಎರಡು ಸಾಲಿನಲ್ಲಿ ಊಟಮಾಡುತ್ತಿದ್ದವರ ನಡುವೆಯೇ ನಡೆದು ಗರ್ಭಗುಡಿಯ ಬಳಿಗೆ ಹೋಗಿ ದರ್ಶನಪಡೆದು ಒಂದು ಪ್ರದಕ್ಷಿಣೆಗೈದು ಸ್ವಲ್ಪ ಸಮಯದ ಬಳಿಕ ವಾಪಸ್ ಹೋಗಲು ಮತ್ತೆ ಅದೇ ಸಾಲಿನ ನಡುವೆ ನಡಕೊಂಡು ಬರಲು ಅನುವಾದಾಗ ಆ ಗುಂಪಿನಲ್ಲಿದ್ದ ಕೆಲವು ತಾಯಂದಿರು ನಮ್ಮನ್ನುದ್ದೇಶಿಸಿ ಬನ್ನಿ, ಊಟಕ್ಕೆ ಕುಳಿತುಕೊಳ್ಳಿ ಎಂದರು. ಇಲ್ಲ, ಬೇಡ ಎಂದಾಗ ಇನ್ನಿಲ್ಲದ ಒತ್ತಾಯಮಾಡಿದರು. ಹಾಗೆ ಒತ್ತಾಯಿಸುತ್ತಿದ್ದ ತಾಯಂದಿರ ಸಹಾಯಕ್ಕೆ ಇನ್ನು ಕೆಲವು ಹಿರಿಯರೂ ಅಜ್ಜ-ಅಜ್ಜಿಯರೂ ಬಂದರು. ಒಂದು ಮನೆಯ ಮಂದಿ ಭೋಜನಕ್ಕಾಗಿ ನಮ್ಮ ನಿರೀಕ್ಷೆಯನ್ನು ಮಾಡುತ್ತಿರಲಾಗಿ ನಾವು ಈ ಗುಂಪಿನ ಜತೆಗೆ ಊಟಮಾಡುವ ಹಾಗಿರಲಿಲ್ಲ. ಹೊಟ್ಟೆ ಚುರುಚುರು ಎನ್ನುತ್ತಿದ್ದ ಆ ಸಂದರ್ಭದಲ್ಲಿ ಇದೊಂದು ಕಾರಣವನ್ನು ಬಿಟ್ಟರೆ ಅವರ ಜತೆಗೆ ಊಟಮಾಡದಿರಲು ಇನ್ನಾವ ತೊಡಕೂ ಇರಲಿಲ್ಲ. ಆದರೆ ಈ ಕಾರಣವೊಂದೇ ಅವರ ಒತ್ತಾಯದ ಆಮಂತ್ರಣವನ್ನು ನಯವಾಗಿ ನಿರಾಕರಿಸುವಲ್ಲಿ ಸಫಲವಾಯಿತು. ತಾಯ್ತನದ ವಾತ್ಸಲ್ಯವನ್ನು ತೋರಿದ ಆ ಗುಂಪಿನ ಜತೆಗಿನ ಸಹಭೋಜನದಿಂದ ನಾವು ವಂಚಿತರಾಗಬೇಕಾಯಿತು.

ಭಕ್ತಾದಿಗಳು ಸಾಗುವ ದಾರಿಯಲ್ಲೇ ಊಟಕ್ಕೆ ಕುಳಿತು ಅನಾಗರಿಕರಂತೆ ತೋರುತ್ತಿದ್ದ ಮಂದಿಯೇ ನಾಗರಿಕರಂತೆ ತೋರುತ್ತಿದ್ದವರನ್ನು ಊಟಕ್ಕೆ ಕರೆದರಲ್ಲ! ಅಥವಾ; ಇಷ್ಟೊಂದು ಶ್ರೀಮಂತ ಸಭ್ಯತೆಯನ್ನು ತಮ್ಮೊಳಗಿರಿಸಿಕೊಂಡಿದ್ದ ಮಂದಿಯನ್ನು ದುಡುಕಿ ಶಿಸ್ತಿಲ್ಲದವರೆಂದು ಅಂದುಕೊಂಡೆವಲ್ಲ! ಸಂಸ್ಕೃತಿಯನ್ನು ಹಳ್ಳಿಯ ಅನಾಗರಿಕರೆಂದು ಅನಿಸಿಕೊಂಡವರಲ್ಲಿಯೇ ಹುಡುಕಬೇಕೇನೋ!

ಇಲ್ಲದ ವಿದ್ಯಾ-ಶಕ್ತ್ಯುಪಾಸನೆ:

ಬಸವೇಶ್ವರ ದೇವಳದ ಎದುರು ಸರಸ್ವತೀ ಮಂದಿರವಿದೆ. ಸರ್ವಜ್ಞನ ಊರಲ್ಲಿ ಒಂದು ಸರಸ್ವತೀ ಮಂದಿರವಿಲ್ಲದಿದ್ದರೆ ಹೇಗೆ! ಆದರೆ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಕಡಮೆ. ಸರ್ವಜ್ಞನಂಥವರ ಸಂಖ್ಯೆಯೂ ಕಡಮೆಯೇ ಎನ್ನಿ.

ಇನ್ನೊಂದೆಡೆ ಬಿಲ್ಲೇಶ್ವರ ದೇವಳವಿದೆ. ಇದು ಒಂದು ಕಾಲದಲ್ಲಿ ಬಿಲ್ಲುಗಾರರ ಆರಾಧ್ಯ ಸ್ಥಾನವಾಗಿತ್ತು. ಇಲ್ಲಿ ಸೈನ್ಯಕ್ಕೆ ಸಂಬಂಧಪಟ್ಟ ಚಟುವಟಿಕೆಗಳು ನಡೆಯುತ್ತಿದ್ದವು. ಈಗ ಇಲ್ಲಿಗೂ ಹೋಗುವವರ ಸಂಖ್ಯೆ ಕಡಮೆಯೇ. ಬಹುಶಃ ಬಿಲ್ಲೇಶ್ವರನನ್ನು ಆರಾಧಿಸಲೂ ಒಂದು ಎದೆಗಾರಿಕೆ ಬೇಕೆನಿಸುತ್ತದೆ.

ಸಮಾಜವೊಂದು ಸ್ವಾವಲಂಬಿಯಾಗಿ ಸಾಮರ್ಥ್ಯಶಾಲಿಯಾಗಿ ವಿವೇಕಪೂರ್ಣವಾಗಿ ಬದುಕಿ ಬಾಳಲು ಅದು ವಿದ್ಯೆ-ಶಕ್ತಿಗಳ ಉಪಾಸನೆಯನ್ನು ಮಾಡಬೇಕು. ವಿದ್ಯೋಪಾಸನೆಯನ್ನಾಗಲೀ ಶಕ್ತ್ಯುಪಾಸನೆಯನ್ನಾಗಲೀ ನಿರ್ಲಕ್ಷಿಸಿದ ಸಮಾಜದ ಭವಿಷ್ಯದ ಬಗ್ಗೆ ಮಾಡಬೇಕಾದ ಸಾಹಸ ಬೆಟ್ಟದೋಪಾದಿಯದು.

ಊರಿನಲ್ಲಿರುವ ಇನ್ನಿತರ ದೇವಳವೆಂದರೆ ಉಡಚಲಮ್ಮನ ಗುಡಿ, ಹನುಮಂತ ಗುಡಿ ಇತ್ಯಾದಿ.

ಬಸವೇಶ್ವರ ದೇವಳದ ಆವರಣದಲ್ಲಿರುವ ಕೆಲವು ಪ್ರಮುಖ ಶಾಸನಗಳೂ ಸೇರಿದಂತೆ ಅಬಲೂರಿನಲ್ಲಿ ಈಗ ಲಭ್ಯವಾದ ಶಾಸನಗಳ ಸಂಖ್ಯೆ – 22. ಇವುಗಳಲ್ಲಿ 19 ಶಾಸನಗಳು ಪ್ರಕಟವಾಗಿವೆ. ಇವುಗಳಲ್ಲಿ ಕೆಲವು ಕಲ್ಯಾಣ ಚಾಲುಕ್ಯರ ಕುರಿತು ಇವೆ. ಕೆಲವು ಬಿಜ್ಜಳನ ಕುರಿತು ಉಲ್ಲೇಖ ನೀಡುತ್ತವೆ.

ಸರ್ವಜ್ಞ ನಮ್ಮವ..

ಸೋಮೇಶ್ವರ ದೇವಳದ ಎದುರುಗಡೆ ಪಕ್ಕದಲ್ಲಿ ಸರ್ವಜ್ಞನ ಮನೆಯಿತ್ತೆನ್ನಲಾದ ಜಾಗವಿದೆ. ಸುಮಾರು ಐದು ಸೆಂಟ್ಸಿನಷ್ಟಗಲದ ಸ್ಥಳವದು. ಯಾರದೋ ಅಧೀನದಲ್ಲಿದ್ದ ಆ ಜಾಗವನ್ನು ಸರಕಾರ ಅವರಿಗೆ ಪರಿಹಾರ ನೀಡಿ ಸ್ವಾಧೀನಪಡಿಸಿಕೊಂಡು ರಕ್ಷಿಸಿಟ್ಟಿದೆ. ಅಲ್ಲಿ ಸರ್ವಜ್ಞನಿಗೆ ಸಂಬಂಧಿಸಿದಂತೆ ಕೆಲಸವನ್ನು ಮಾಡಬೇಕಿದೆ.

ಸರ್ವಜ್ಞನಿಗೆ ಸಂಬಂಧಿಸಿದ ಒಂದು ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಬೇಕೆಂಬ ಪ್ರಸ್ತಾಪವಿನ್ನೂ ಹಾಗೆಯೇ ಉಳಿದಿದೆ. ಅದು ಇನ್ನೂ ಆಗದೆ ಇರಲಿಕ್ಕೇನು ಕಾರಣವೆಂದು ಸ್ಥಳೀಯರನ್ನು ವಿಚಾರಿಸಿದಾಗ ಬಂದ ಉತ್ತರವೇನೆಂದರೆ: ಸರ್ವಜ್ಞ ತಮ್ಮೂರಿನವ, ತಮ್ಮೂರಿನಲ್ಲೇ ಆತನ ಕುರಿತ ಪ್ರಾಧಿಕಾರವೂ ಸ್ಮಾರಕ ಇತ್ಯಾದಿ ಅಭಿವೃದ್ಧಿ ಕಾರ್ಯಗಳೂ ಆಗಬೇಕೆಂದು ಎರಡು ಊರುಗಳ ನಡುವೆ ಜಗಳವಿದೆ, ಹಾಗಾಗಿ ಪ್ರಾಧಿಕಾರ ರಚನೆ ಮುಂದೆ ಹೋಗಿದೆ. ಸರ್ವಜ್ಞನ ಊರು ಅಬಲೂರು ಅನ್ನುವುದೇ ಸಾಮಾನ್ಯವಾಗಿರುವ ಗ್ರಹಿಕೆ. ಆದರೆ ಆತ ಪಕ್ಕದ ಮಾಸೂರಿಗೂ ಸಂಬಂಧಪಟ್ಟವನೆಂಬ ಪ್ರತೀತಿ ಅಲ್ಲಿದೆ. ತನ್ನನ್ನು ಮಾಳ – ಮಾಳೆಯರ ಮಗನೆಂದು ಸ್ವವಿವರವನ್ನು ಬಿಚ್ಚಿಟ್ಟ ಸರ್ವಜ್ಞನ ತಂದೆಯು ಮಾಸೂರಿಗೆ ಸೇರಿದ ಬಸವರಸ ಎಂಬ ಮಾಹಿತಿಯೂ ಇರಲಾಗಿ ಆತನಿಗೆ ಮಾಸೂರಿನ ಸಂಬಂಧವೂ ಅಂಟಿಕೊಂಡಿದೆ. ಎಂತಿದ್ದರೂ ಆತ ನಮ್ಮ ಸರ್ವಜ್ಞನಲ್ಲವೆ. ಆತ ನಿಜಕ್ಕಾದರೆ ಎಲ್ಲ ಊರಿಗೂ ಎಲ್ಲರಿಗೂ ಸಂಬಂಧಪಟ್ಟವನೇ ಹೌದು.

ಇವ ನಮ್ಮವ ಇವ ನಮ್ಮವ ಎಂಬ ಮಹಾಪುರುಷನೊಬ್ಬನ ಕುರಿತ ಆತ್ಮೀಯಭಾವವು ಆತನ ಕುರಿತ ಸ್ಮಾರಕನಿರ್ಮಾಣಕ್ಕೋ ಅಭಿವೃದ್ಧಿ ಕಾರ್ಯಕ್ಕೋ ಒಂದು ವೇಗವನ್ನು ಕೊಡಬೇಕಿತ್ತು; ಆದರದು ಒಂದು ಜಗಳದ ರೂಪವನ್ನು ತಾಳಿ ಅದಕ್ಕೆ ಅಡ್ಡಿಯನ್ನೇ ಉಂಟುಮಾಡಿರುವುದು ಅದೆಂಥ ವಿಪರ್ಯಾಸ!

ಬಡವರ ರಾಜಕಾರಣಿ:

ಬಸವೇಶ್ವರ ದೇವಳದ ಮುಂಭಾಗದಲ್ಲಿ ರೂಪಾ ಆಡೂರು ಎನ್ನುವವರ ಮನೆಯಿದೆ. ಅವರ ಪರಿಚಯ ಮಾಡಿಕೊಂಡು ಬರೋಣ ಎಂದು ನಿಂಗಾಚಾರರು ಹೇಳಿದಂತೆ ಸರಿ ಎಂದು ಹೋದೆವು. ಹಳೆಯ ಕಾಲದ ಒಂದು ಸಾಧಾರಣ ಮನೆ. ಯಾವುದೇ ರೀತಿಯಲ್ಲಿಯೂ ಎಲ್ಲಿಯೂ ಸಿಮೆಂಟನ್ನಾಗಲೀ ಕಬ್ಬಿಣವನ್ನಾಗಲೀ ಹತ್ತಿರಕ್ಕೂ ಬಿಟ್ಟುಕೊಡದ ಮಣ್ಣಿನ ಮನೆಯದು. ಮನೆಯೆದರು ನಮ್ಮ ಬೈಕ್ ನಿಂತಾಕ್ಷಣ ಬನ್ನಿ ಬನ್ನಿ ಎಂಬ ಯಜಮಾನರ ಆತ್ಮೀಯ ಧ್ವನಿ ಎದುರ್ಗೊಂಡಿತು. ಬಿರುಬಿಸಿಲಿಗೆ ತಂಪಾದ ಪುನಾರ್ಪುಳಿ ಪಾನೀಯವನ್ನು ಮಾಡಿಕೊಂಡು ಬಂದು ನಮ್ಮ ಹೊಟ್ಟೆ ತಂಪಾಗಿಸಿದ ಮನೆಯೊಡತಿ ರೂಪಾ ಅವರೂ ಜತೆಗೆ ಉಭಯಕುಶಲೋಪರಿ ಹರಟೆಗೆ ಸೇರಿಕೊಂಡರು. ಮಾತುಕತೆಯ ಬಳಿಕ ಎದ್ದುಹೊರಡುತ್ತಿದ್ದಂತೆ ಊಟಮಾಡಿಕೊಂಡು ಹೋಗಲು ಇನ್ನಿಲ್ಲದಂತೆ ಆಗ್ರಹಿಸಿದರು. ಅವರ ಒತ್ತಾಯದ ಬಂಧದಿಂದ ಅಂತೂ ಬಿಡಿಸಿಕೊಂಡು ಹೊರಬಂದೆವೆನ್ನಿ.

ರೂಪಾ ಅವರ ಬಗೆಗೆ ಮತ್ತೆ ತಿಳಿದುದೇನೆಂದರೆ: ಉಳಿದ ರಾಜಕಾರಣಿಗಳಂತಲ್ಲ, ಊರ ಜನರ ನಿಜವಾದ ಒತ್ತಾಯದ ಮೇರೆಗೆ ಅವರು ತಾಲೂಕು ಪಂಚಾಯತ್ ಚುನಾವಣೆಗೆ ನಿಂತು ಗೆದ್ದು ಒಂದು ಅವಧಿಗೆ ಉಪಾಧ್ಯಕ್ಷರೂ ಆದವರು. ತಮ್ಮ ಆಡಳಿತದ ವ್ಯಾಪ್ತಿಯಲ್ಲಿ ನಿಸ್ಪೃಹವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದವರು. ಅವರ ನಿಸ್ಸ್ವಾರ್ಥತೆಯನ್ನು ನೋಡಿ ಮರುಕಗೊಂಡು ಒಬ್ಬ ಕಟ್ಟಡ ಗುತ್ತಿಗೆದಾರರು; ಎರಡು ಲೋಡು ಸಿಮೆಂಟ್ ಮತ್ತು ಮರಳನ್ನು ತಂದು ಹಾಕುವೆ, ಮನೆಯನ್ನು ಸ್ವಲ್ಪ ಗಟ್ಟಿಮುಟ್ಟುಗೊಳಿಸಿ ಎಂದರಂತೆ. ದಯವಿಟ್ಟು ಬೇಡ ಎಂದ ರೂಪಾ ಅವರು, ಹಾಗೆ ಒಂದುವೇಳೆ ನಿಮಗೆ ಕೊಡಲೇಬೇಕೆಂದಿದ್ದರೆ ಇಲ್ಲೇ ಇರುವ ಆಶ್ರಮಕ್ಕೆ ಕೊಡಿ ಎಂದು ಸೂಚಿಸಿದರು. ಬಡತನವನ್ನೇ ಹೊದ್ದುಕೊಂಡು ಬದುಕುವ ಅವರ ಬಾಳಪಯಣ ಅತ್ಯಂತ ತೃಪ್ತಿಕರವಾಗಿ ಮುಂದುವರಿದಿದೆ.

ಜೀವಂತ ಸ್ನಾರಕ:

ಅವರು ಸೂಚಿಸಿದ ಆಶ್ರಮದ ಕುರಿತು ಕುತೂಹಲ ಹುಟ್ಟಿ ವಿಚಾರಿಸಿದಾಗ ಅಲ್ಲಿ ಸಂನ್ಯಾಸಾಶ್ರಮ ಸ್ವೀಕರಿಸಿದವರೊಬ್ಬರು ಇದ್ದಾರೆಂದು ತಿಳಿಯಿತು. ರೂಪಕ್ಕನ ಮನೆಯದೇ ರೀತಿಯಲ್ಲಿ ಇರುವ ಇನ್ನೊಂದು ಸಾಧಾರಣ ಮನೆಯಲ್ಲಿ ಭಿಕ್ಷೆಗೆಂದು ಅಂದು ಬಂದಿದ್ದ ಅವರ ಭೇಟಿಯೂ ಆಯಿತು. ಮೂಲತಃ ಮಹಾರಾಷ್ಟ್ರದವರಾದ ಅವರು, ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದ ಬಳಿಕ ಕಾಂಚಿಯ ಜಯೇಂದ್ರ ಸರಸ್ವತೀ ಸ್ವಾಮೀಜಿಯವರಿಂದ ದೀಕ್ಷೆಯನ್ನು ಪಡಕೊಂಡು ಇಲ್ಲಿ ಬಂದು ಒಂದು ಜೋಪಡಿಯಲ್ಲಿದ್ದುಕೊಂಡು ಸಾಧನೆಯನ್ನು ಮಾಡುತ್ತಿದ್ದಾರೆ. ಯಾವುದೇ ನಿರ್ದಿಷ್ಟ ಸಮುದಾಯ/ಸಂಪ್ರದಾಯದ ಆಶ್ರಮ ತಮ್ಮದಾಗಕೂಡದು, ಸಮಾಜದ ಎಲ್ಲರನ್ನೂ ಎಲ್ಲ ಸಂಪ್ರದಾಯವನ್ನೂ ಒಳಗೊಂಡ ಬಗೆಯ ಒಂದು ವ್ಯವಸ್ಥೆ ತಮ್ಮ ಪುಟ್ಟ ಆಶ್ರಮದಲ್ಲಿರಬೇಕೆಂಬುದು ಅವರ ಲಕ್ಷ್ಯ. ಮತಾಂತರವನ್ನು ತಡೆಗಟ್ಟಬೇಕು, ಜನರಲ್ಲಿ ತಮ್ಮ ಸಂಸ್ಕೃತಿ-ಪರಂಪರೆಯ ಕುರಿತು ಜಾಗೃತಿ ಮೂಡಿಸಬೇಕು ಇತ್ಯಾದಿ ಉದ್ದೇಶಗಳೂ ಅವರ ಆಶ್ರಮಸ್ವೀಕಾರದ ಹಿಂದಿದೆ.

ಸರ್ವಜ್ಞ ಆ ಊರಿನವನಾದರೂ ಅದನ್ನೇ ಗಟ್ಟಿಮಾಡಿಕೊಳ್ಳದೆ ಊರೂರು ಸುತ್ತಿ ಸರಳಾತಿಸರಳವಾಗಿ ಬದುಕಿ, ನೀತಿ-ಮೌಲ್ಯಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿ ಜನರ ಬದುಕನ್ನು ಎತ್ತರಿಸುವ ಪ್ರಯತ್ನವನ್ನು ಮಾಡಿದವನು. ಇವರಾದರೋ ದೂರದ ಮಹಾರಾಷ್ಟ್ರದಲ್ಲಿ ಹುಟ್ಟಿ ಕಾಂಚಿಯ ಶಂಕರಾಚಾರ್ಯರಿಂದ ದೀಕ್ಷೆಯನ್ನು ಪಡೆದು ಸರ್ವಜ್ಞನ ಊರಿನಲ್ಲಿ ನೆಲೆಯಾಗಿ ಇನ್ನೊಂದು ಬಗೆಯಲ್ಲಿ ಅವನದೇ ರೀತಿಯಲ್ಲಿ ತೊಡಗಲು ಮುಂದಡಿಯಿಟ್ಟಿದ್ದಾರೆ.

ಸರ್ವಜ್ಞನ ಪ್ರತಿಮೆಯೂ ಇರಲಿ, ಸ್ಮಾರಕ ಇತ್ಯಾದಿಗಳೂ ನಿರ್ಮಾಣಗೊಳ್ಳಲಿ. ಆತನ ಕುರಿತಾಗಿ ಒಂದು ಭಾವವನ್ನು ತುಂಬಿಕೊಳ್ಳಲು ಕೆಲವರಿಗದು ಬೇಕು. ಆದರೆ ಆತನ ಊರಿನಲ್ಲಿ ಮೇಲೆ ಉಲ್ಲೇಖಿಸಿದಂಥ ವ್ಯಕ್ತಿತ್ವಗಳು ಇರುವುದು ನಿಜಕ್ಕೂ ಆತನಿಗೆ ಜೀವಂತ ಸ್ಮಾರಕವಿದ್ದಂತೆ ಅಂತನಿಸುತ್ತದೆ.

ಎಲ್ಲರಿಗೂ ಸೇರಿದ ಸರ್ವಜ್ಞನಿಗೆ ನಾವೂ ಜೀವಂತ ಸ್ಮಾರಕವಾದೇವೆ?

ನಾರಾಯಣ ಶೇವಿರೆ

ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಕರ್ನಾಟಕದ ಸಂಘಟನಾ ಕಾರ್ಯದರ್ಶಿ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಕಿರುಕುಳ ಪ್ರಕರಣ: ಸಿಬಿಐ ತನಿಖೆಗೆ ಸುಪ್ರೀಂ ಆದೇಶ

Thu Apr 15 , 2021
ಇಸ್ರೋ ವಿಜ್ಞಾನಿ ಡಾ. ನಂಬಿ ನಾರಾಯಣನ್  ಕಿರುಕುಳ ಪ್ರಕರಣ: ಸಿಬಿಐ ತನಿಖೆ ಹಾಗೂ ತಪ್ಪಿತಸ್ಥರನ್ನು ಗುರುತಿಸಿ ಕಾನೂನು ಕ್ರಮ ಜರಗಿಸುವಂತೆ ಸುಪ್ರೀಂ ಆದೇಶ 1994ರ ಬೇಹುಗಾರಿಗೆ ಪ್ರಕರಣ ಸಂಬಂಧ ಕಾನೂನು ಬಾಹಿರವಾಗಿ ಬಂಧನಕ್ಕೊಳಗಾಗಿದ್ದ ಇಸ್ರೋ ವಿಜ್ಞಾನಿ ಡಾ.ನಂಬಿ ನಾರಾಯಣನ್ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ಸುಪ್ರೀ ಕೋರ್ಟ್ ಆದೇಶ ನೀಡಿದೆ. ಜೊತೆಗೆ ಡಾ.ನಂಬಿ ನಾರಾಯಣನ್ ಅವರಿಗೆ ಕಿರುಕುಳ ನೀಡಿದವರನ್ನು ಗುರುತಿಸಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಸಿಬಿಐಗೆ […]