ಐರೋಪ್ಯರೇ, ನೀವಿದ್ದುದು ಹಾಗೆ, ನಾವಿದ್ದುದು ಹೀಗೆ !!


 ಫ್ರೆಂಚ್ ಪ್ರವಾಸಿ ಫ್ರಾಂಸ್ವಾ  ಬರ್ನಿಯರ್ (ಸಾಮಾನ್ಯ ಯುಗದ 1625-1688) ನಮ್ಮ ದೇಶದ 17ನೆಯ ಶತಮಾನದ ಕೃಷಿ ಮತ್ತು ವಾಣಿಜ್ಯಗಳ ಚಿತ್ರವನ್ನು ಹೀಗೆ  ಕಟ್ಟಿಕೊಡುತ್ತಾನೆ: “ಎಲ್ಲ ಯುಗಗಳಲ್ಲಿಯೂ ಈಜಿಪ್ಟ್ ದೇಶವನ್ನು ವಿಶ್ವದ ಅತ್ಯಂತ ಸುಭಿಕ್ಷವಾದ ನಾಡು, ಎಂದು ಬಣ್ಣಿಸಲಾಗಿದೆ. ನವಯುಗದ ಬರಹಗಾರರೂ ಅದನ್ನೇ ಅನುಮೋದಿಸಿದ್ದಾರೆ ಮತ್ತು ಈಜಿಪ್ಟ್ ಗಿಂತ ಹೆಚ್ಚು ಸಮೃದ್ಧವಾದ ಮತ್ತು ಪ್ರಕೃತಿವರಪ್ರಸಾದಿತ ನಾಡು ಬೇರೊಂದಿಲ್ಲ ಎಂದೇ ಹೇಳುತ್ತಾರೆ. ಆದರೆ, ಬಂಗಾಳಕ್ಕೆ ಎರಡು ಬಾರಿ ಭೇಟಿ ನೀಡಿದ ನನ್ನನ್ನು ಕೇಳುವುದಾದರೆ, ಈಜಿಪ್ಟ್ ಕುರಿತಾದ ಈ ಪ್ರಶಂಸೆಯು ಅದಕ್ಕಿಂತ ಹೆಚ್ಚು ಬಂಗಾಳಕ್ಕೇ ಸಲ್ಲಬೇಕಿದೆ. ಈ ಬಂಗಾಳವು ಎಷ್ಟು ಭತ್ತವನ್ನು ಬೆಳೆಯುತ್ತದೆ ಎಂದರೆ, ಬರಿಯ ನೆರೆಹೊರೆಯ ಪ್ರಾಂತಗಳಿಗಷ್ಟೇ ಅಲ್ಲ, ದೂರದ ಪ್ರಾಂತಗಳಿಗೂ ಭತ್ತವು ಸರಬರಾಜಾಗುತ್ತದೆ. ಗಂಗಾ ನದಿಯ ಮೂಲಕ ದೂರದ ಪಾಟನಾಗೂ ಭತ್ತವು ಸರಬರಾಜಾಗುತ್ತದೆ ಮತ್ತು ಸಮುದ್ರ ಮಾರ್ಗದಲ್ಲಿ ಕೋರಮಂಡಲದ ಅನೇಕ ಬಂದರುಗಳಿಗೆ ಹಾಗೂ ಮಛಲೀಪಟ್ಟಣಕ್ಕೂ ಸಹ ಸಾಗಿಸಲ್ಪಡುತ್ತದೆ. ವಿದೇಶಗಳಿಗೂ ಸಹ, ಮುಖ್ಯವಾಗಿ ಸಿಲೋನ್ (ಇಂದಿನ ಶ್ರೀಲಂಕಾ) ಮತ್ತು ಮಾಲ್ಡೀವ್ಸ್ ದೇಶಗಳಿಗೆ ರಫ್ತಾಗುತ್ತದೆ. ಸಕ್ಕರೆ ವಿಷಯದಲ್ಲಿಯೂ ಬಂಗಾಳವು ಹೀಗೆಯೇ. ಗೋಲ್ಕೊಂಡಾ ಮತ್ತು ಕರ್ನಾಟಕ ಪ್ರಾಂತಗಳಿಗೂ ಇಲ್ಲಿಂದ ಸಕ್ಕರೆಯ ಸರಬರಾಜಾಗುವುದುಂಟು. ಇಲ್ಲಿನ ಸಾಮಾನ್ಯರ ಮುಖ್ಯ ಆಹಾರ ಎಂದರೆ ಅನ್ನ, ಮೂರ್ನಾಲ್ಕು ಬಗೆಯ ತರಕಾರಿ, ಬೆಣ್ಣೆ, ತುಪ್ಪ, ಇತ್ಯಾದಿ. ಇವೆಲ್ಲಾ ಚಿಕ್ಕಮೊತ್ತದ ಹಣಕ್ಕೂ ಲಭ್ಯವಾಗುವುದು ಇಲ್ಲಿನ ಆಹಾರ ಸಮೃದ್ಧಿಗೆ ಸಾಕ್ಷಿಯಾಗಿದೆ”. 
“ಹತ್ತಿ ಮತ್ತು ರೇಷ್ಮೆಯ ದಾಸ್ತಾನು ಬಂಗಾಳದಲ್ಲಿ ಎಷ್ಟಿದೆಯೆಂದರೆ, ಅದನ್ನು ಹತ್ತಿ-ರೇಷ್ಮೆಗಳ ರಾಜಧಾನಿಯೆಂದೇ ಕರೆಯಬಹುದು. ಬಂಗಾಳವನ್ನು ಬರಿಯ ಹಿಂದೂಸ್ತಾನದ ಮುಖ್ಯ ಪ್ರಾಂತ ಎನ್ನುವುದಿರಲಿ, ನೆರೆಹೊರೆಯ ದೇಶಗಳ ರಾಜಧಾನಿಯೆಂದೇ ಹೇಳಬಹುದು. ಅಷ್ಟೇಕೆ, ಯೂರೋಪಿನ ರಾಜಧಾನಿ ಎಂದು ಹೇಳಿದರೂ ಉತ್ಪ್ರೇಕ್ಷೆಯೆನಿಸದು”. 

ಬ್ರಿಟಿಷರ, ಕಾಂಗ್ರೆಸ್ಸಿಗರ, ಕಮ್ಯೂನಿಸ್ಟರ ಆಳ್ವಿಕೆಯಲ್ಲಿ ಬಂಗಾಳವು ಹೇಗಿದ್ದುದು ಹೇಗಾಗಿಹೋಗಿದೆ ಎಂದರೆ, ಇಂತಹ ಮಹತ್ತ್ವದ ಐತಿಹಾಸಿಕ ದಾಖಲೆಗಳನ್ನು ಈಗ ನಂಬುವುದೂ ನಮಗೆ ಕಷ್ಟವಾಗುತ್ತದೆ. ನಮ್ಮದು ದರಿದ್ರದ ದೇಶ ಎನ್ನುವುದನ್ನೇ ಕೇಳಿ ಕೇಳಿ ಹೇಳಿ ಹೇಳಿ, ನಮ್ಮ ಗ್ರಹಿಕೆಗಳ ಶಕ್ತಿಯೇ ದುರ್ಬಲವಾಗಿಹೋಗಿದೆ. 

ಈಗ ಇನ್ನೊಂದು ದಾಖಲೆಯನ್ನು ಗಮನಿಸೋಣ. ಸ್ಕಾಟ್ ಲೆಂಡ್ ದೇಶದ ಅಲೆಕ್ಸಾಂಡರ್ ವಾಕರ್ ಪಶ್ಚಿಮ ಭಾರತದ ಕೃಷಿಯನ್ನು ಗಂಭೀರವಾಗಿ ಅಭ್ಯಸಿಸಿ, ಉದ್ಯಾನವನಗಳಂತೆ ತೋರುವ ಗುಜರಾತಿನ ಹೊಲಗದ್ದೆಗಳನ್ನು ನೋಡಿ ಪ್ರಭಾವಿತನಾಗಿ ಹೀಗೆ ಬರೆದಿದ್ದಾನೆ: 
“ಹೊಲಗದ್ದೆಗಳು ಅಚ್ಚುಕಟ್ಟಾಗಿ ಓರಣವಾಗಿ ಸಿಂಗಾರವಾಗಿ ಕಾಣುತ್ತವೆ ಮತ್ತು ನಡುನಡುವೆ ಗೋಮಾಳಕ್ಕಾಗಿ ದೊಡ್ಡದೊಡ್ಡ ಜಾಗ ಬಿಟ್ಟಿದ್ದಾರೆ. ಇಡೀ ಪ್ರಪಂಚದಲ್ಲಿಯೇ ಈ ಗುಜರಾತ್ ನಲ್ಲಿ ಕಾಣುವುದಕ್ಕಿಂತ ಸುಂದರವಾದ ಮತ್ತು ಮೇಲುದರ್ಜೆಯ ಹೊಲಗದ್ದೆಗಳು ಬೇರೆಲ್ಲೂ ಕಾಣುವುದಿಲ್ಲ. ಭೂಮಿ ಹೊರುವಷ್ಟೂ ಪ್ರಮಾಣದ ಧಾನ್ಯಗಳ ಸಮೃದ್ಧ ಬೆಳೆಯನ್ನು ನಾನು ಭಾರತದಲ್ಲಿ ನೋಡಿದೆ, ಎಂದು ಮತ್ತೆಮತ್ತೆ ಹೇಳಬಯಸುತ್ತೇನೆ. ಸಾಮಾನ್ಯವಾಗಿ ಒಂದೇ ಒಂದು ಕಳೆಯೂ ಕಾಣದಂತೆ ಹೊಲಗದ್ದೆಗಳನ್ನು ಓರಣವಾಗಿ-ಅಚ್ಚುಕಟ್ಟಾಗಿ ಇಡಲಾಗಿದೆ. ಹೀಗೆ ಕಳೆ ಕೀಳುವ ಉಪಕರಣಗಳನ್ನು ದೇಶೀಯವಾಗಿಯೇ, ಸ್ಥಳೀಯವಾಗಿಯೇ ಸಿದ್ಧಪಡಿಸಿಕೊಳ್ಳಲಾಗಿದೆ, ನಿರ್ವಹಿಸಲಾಗುತ್ತಿದೆ  ಮತ್ತು ಶ್ರಮದಿಂದ ಈ ಕೃಷಿಕೆಲಸಗಳನ್ನು ನಿರ್ವಹಿಸಲಾಗುತ್ತಿದೆ” 
ಈ ವಾಕರ್ ದಕ್ಷಿಣ ಭಾರತದ ಪ್ರವಾಸವನ್ನೂ ಮಾಡಿ ಮಲಬಾರ್ ಪ್ರಾಂತದ ಅದ್ಭುತವಾದ ಭತ್ತದ ಕೃಷಿ ಬಗೆಗೆ, ಅನನ್ಯ ತಳಿಗಳ ಬಗೆಗೆ, ವಾರ್ಷಿಕ ಮೂರು ಬೆಳೆಗಳ ಬಗೆಗೆ ಬರೆದಿದ್ದಾನೆ. ಸರಿಸುಮಾರು ಇದೇ ಕಾಲಾವಧಿಯಲ್ಲಿ ಯೂರೋಪ್ ಹೇಗಿತ್ತು ಎನ್ನುವುದನ್ನೂ ಸಹ ನಾವು ತಿಳಿದುಕೊಳ್ಳಬೇಕಾಗಿದೆ. ಇಂದು ಪ್ರವಾಸಿಗಳು ಯೂರೋಪಿನ ಅನೇಕ ಮಹಾನಗರಗಳನ್ನು ನೋಡಿ, ಮೆಚ್ಚಿ ಪ್ರಶಂಸಿಸುವುದನ್ನು ಕೇಳಿದ್ದೇನೆ. ಸೆಲೆಬ್ರಿಟಿಗಳಂತೂ ವಿಹಾರಕ್ಕೆ, ವಿಶ್ರಾಂತಿಗೆ, ಮಧುಚಂದ್ರಕ್ಕೆ ಯೂರೋಪನ್ನೇ ಆರಿಸಿಕೊಳ್ಳುತ್ತಾರೆ. 

ಆದರೆ, ಲಾರೆನ್ಸ್ ಸ್ಟೋನ್ ಎಂಬ ಲೇಖಕನು (1977ರಲ್ಲಿ ಪ್ರಕಟವಾಗಿದೆ, ಪುಟಗಳು 77-78) ತನ್ನ “ದ ಫ್ಯಾಮಿಲಿ, ಸೆಕ್ಸ್ ಅಂಡ್ ಮ್ಯಾರೇಜ್ ಇನ್ ಇಂಗ್ಲೆಂಡ್ (ಅವಧಿ 1500 ರಿಂದ 1800)” ಎಂಬ ಗ್ರಂಥದಲ್ಲಿ ದಾಖಲಿಸಿರುವ ಅಂಶಗಳು ಗಾಬರಿ ಹುಟ್ಟಿಸುತ್ತವೆ. ಸಾಮಾನ್ಯ ಯುಗದ 15ನೆಯ ಶತಮಾನದಲ್ಲಿ ಇಂಗ್ಲೆಂಡೂ ಸೇರಿದಂತೆ, ಅನೇಕ ಕಡೆ ತುಂಬಿ ಚೆಲ್ಲುವ ಸಾರ್ವಜನಿಕ ಪಾಯಿಖಾನೆಗಳು, ನಾರುವ ಚರಂಡಿಗಳಿಂದ ರಸ್ತೆಗಳಿಗೆ ಹರಿಯುವ ಕೊಳಚೆಯಿಂದ ಬಹಳ ದೊಡ್ಡ ಸಮಸ್ಯೆಗಳಾಗಿದ್ದವು. ಈ ಲಾರೆನ್ಸ್ ಚಿತ್ರಿಸಿರುವ ಲಂಡನ್ ನಗರದ ವಿವರಗಳನ್ನು ನಂಬುವುದೇ ಕಷ್ಟವಾಗುತ್ತದೆ. ನೂರಾರು ವರ್ಷಗಳಿಂದ ನಮ್ಮ ಭಾರತೀಯ ಮೆಕಾಲೆ-ವಾದಿಗಳ ಬಾಯಲ್ಲಿ “ಈ ಇಂಗ್ಲೆಂಡ್, ಅಮೆರಿಕಾ, ಯೂರೋಪುಗಳು ಮುನ್ನೂರು ಕೋಟಿ ವರ್ಷಗಳಿಂದಲೂ ಭೂಮಿಯ ಮೇಲಿನ ಸ್ವರ್ಗಗಳಾಗಿಯೇ ಮುಂದುವರಿದುಕೊಂಡು ಬಂದಿವೆ” ಎಂಬುದನ್ನು ಕೇಳಿಕೇಳಿ, ಇಂತಹ ದಾಖಲೆಗಳಿಗೆ – ನೈಜ ಸಾಕ್ಷ್ಯಾಧಾರಗಳಿಗೆ  ನಾವು ಮುಕ್ತ ಮನಸ್ಸಿನಿಂದ  ತೆರೆದುಕೊಳ್ಳಲೂ ಸಾಧ್ಯವಾಗುತ್ತಿಲ್ಲ. 

“ಸತ್ತ, ಸಾಯಿಸಿದ, ಕೊಳೆತ ಪ್ರಾಣಿಗಳು ರಸ್ತೆರಸ್ತೆಗಳಲ್ಲಿ ಕಾಣುತ್ತಿದ್ದವು. ಬಡವರ ಗುಂಡಿಗಳು ಎಂದೇ ಕುಖ್ಯಾತವಾಗಿದ್ದ ದೊಡ್ಡ-ಆಳವಾದ-ತೆರೆದ ಗುಂಡಿಗಳಲ್ಲಿ ಬಡವರ ದೇಹಗಳನ್ನು ಎಸೆಯಲಾಗುತ್ತಿತ್ತು. ಅಂತಹ ಭಯಾನಕ ಗುಂಡಿ ತುಂಬಿದಾಗ ಅದರ ಮೇಲೆ ಮಣ್ಣು ಹಾಕಲಾಗುತ್ತಿತ್ತು. ಅಂತಹ ಗುಂಡಿಗಳಿಂದ ಮಳೆಗಾಲದಲ್ಲಿ ಹೊಮ್ಮುತ್ತಿದ್ದ ದುರ್ವಾಸನೆಯೂ ಸೇರಿ ಬಹಳ ಭೀಭತ್ಸವಾಗಿರುತ್ತಿತ್ತೆಂದು ಲಾರೆನ್ಸನು ಬರೆದಿದ್ದಾನೆ. ಎಷ್ಟೋ ಜನರು ಜೀವಮಾನದಲ್ಲಿ ಒಮ್ಮೆಯೂ ಸ್ನಾನ ಮಾಡುತ್ತಿರಲಿಲ್ಲ. ಸಿಡುಬು, ಅಲ್ಸರ್ ಹುಣ್ಣು, ಎಕ್ಸಿಮಾ, ಕಜ್ಜಿ ಮುಂತಾದ ರೋಗಗಳಿಂದ ವಿಕಲಾಂಗರಾದ, ಕುರುಡರಾದ ಜನರಿಂದ ಯೂರೋಪ್ ಖಂಡವು ತುಂಬಿಹೋಗಿತ್ತು. ಇಂತಹ ಸ್ಥಿತಿಯು ತುಂಬ ವರ್ಷಗಳ ಕಾಲ (ಅದೇ ಗ್ರಂಥದ ಪುಟ 487) ಇದ್ದಿತು”. 

ಅಲ್ವೆನ್ ಎಚ್.ಹಫ್ಟನ್ ಎಂಬ ಲೇಖಕನು ತನ್ನ “ದ ಪೂರ್ ಆಫ್ ಎಯ್ಟೀನ್ತ್ ಸೆಂಚುರಿ ಫ್ರಾನ್ಸ್” (1750 ರಿಂದ 1789ರ ಕಾಲಾವಧಿ, ಗ್ರಂಥ ಪ್ರಕಟಣೆ 1974, ಪುಟಗಳು 18-20) ಗ್ರಂಥದಲ್ಲಿ ‘ಒಟ್ಟು ಪ್ರಜಾಸಂಖ್ಯೆಯ ಶೇಕಡಾ 90ರಷ್ಟು ಜನರಿಗೆ ಭೂಮಿಯಿರಲಿಲ್ಲ, ಸಾಲದಲ್ಲಿ ಮುಳುಗಿದ್ದರು, ಹಸಿವಿನಿಂದ ಸಾಯುತ್ತಿದ್ದರು, ವಲಸೆ ಹೋಗುತ್ತಿದ್ದರು’ ಎಂದಿದ್ದಾನೆ. ಚಳಿಗಾಲದಲ್ಲಿ ಶೈತ್ಯಾಧಿಕ್ಯದಿಂದ ಸಾಯುವ ಬದಲು ಜನರು ತಮ್ಮನ್ನು ತಾವೇ ಗುಲಾಮರನ್ನಾಗಿ ಮಾರಿಕೊಳ್ಳುತ್ತಿದ್ದರು. ಬೇಸಿಗೆ ಕಾಲದಲ್ಲಿ ಪ್ಲೇಗಿನಂತಹ ಭಯಾನಕ ರೋಗಗಳ ಕಾಟ. ಬ್ರಾಡೆಲ್ ಎಂಬ ಲೇಖಕನು ರೋಮ್ ಸೇರಿದಂತೆ, ಯೂರೋಪಿನ ಬೇರೆಬೇರೆ ನಗರಗಳು ಬೇಸಿಗೆಯಲ್ಲಿ ಪ್ಲೇಗ್ ಜ್ವರದಿಂದ ಸ್ಮಶಾನಗಳಾಗುತ್ತಿದ್ದವು ಎಂದಿದ್ದಾನೆ. ಈ ಅವಧಿಯಲ್ಲಿ ಯೂರೋಪಿನಲ್ಲಿ ಹುಟ್ಟುತ್ತಿದ್ದ ಮಕ್ಕಳಲ್ಲಿ ಅರ್ಧ ಜನ (ಸರಿಯಾಗಿ ಗಮನಿಸಿ) ಶೇಕಡಾ 50ರಷ್ಟು ಮಕ್ಕಳು, 10 ವರ್ಷ ವಯಸ್ಸನ್ನು ತಲಪುವ ಮೊದಲೇ ಅಪೌಷ್ಟಿಕತೆಯಿಂದ – ರೋಗಗಳಿಂದ ಸಾಯುತ್ತಿದ್ದರು.   “ದಿ ಯೂರೋಪಿಯನ್ ಡೆಮೋಗ್ರಾಫಿಕ್ ಸಿಸ್ಟಮ್ 1500-1820” ಎಂಬ ಗ್ರಂಥದಲ್ಲಿ ಮೈಕೆಲ್ ಡಬ್ಲ್ಯು ಫ್ಲಿನ್ ಎಂಬ ಲೇಖಕನು (ಪ್ರಕಟಣೆ 1981, ಪುಟಗಳು 16-17) ಇಂಗ್ಲೆಂಡಿಗಿಂತ ಸ್ಪೇನ್ ದೇಶದಲ್ಲಿ ಶೇಕಡಾ 40ರಷ್ಟು ಅಪ್ರಾಪ್ತ ವಯಸ್ಸಿನ ಮಕ್ಕಳು ಸಾಯುತ್ತಿದ್ದರು, ಎಂದು ದಾಖಲಿಸಿದ್ದಾನೆ. ಸ್ಪೇನ್ ನಲ್ಲಿ ಶೇಕಡಾ 30ರಷ್ಟು ಮಕ್ಕಳು ಒಂದು ವರ್ಷ ಸಹ ಬದುಕುತ್ತಿರಲಿಲ್ಲ. ಸಾವಿರ ಸಾವಿರ ಮಕ್ಕಳು ರಸ್ತೆಬದಿಯ ಗುಂಡಿಗಳಲ್ಲಿ, ತಿಪ್ಪೆಗಳಲ್ಲಿ ನಿರ್ಗತಿಕರಾಗಿ ಸಾಯುತ್ತಿದ್ದರು.  ಈ ಯೂರೋಪಿಯನ್ ಶ್ವೇತವರ್ಣೀಯ ಕ್ರೈಸ್ತರು ಉತ್ತರ ಅಮೆರಿಕಾ, ದಕ್ಷಿಣ ಅಮೆರಿಕಾ, ಭಾರತ ಮತ್ತು  ಆಫ್ರಿಕಾಗಳನ್ನು ತಮ್ಮ ವಸಾಹತುಗಳನ್ನಾಗಿ ಮಾಡಿಕೊಂಡು ಅಲ್ಲಿದ್ದ ಸಂಸ್ಕೃತಿ, ಸಮೃದ್ಧಿಗಳನ್ನು ನಾಶಮಾಡಿ, ಬರೀ ರೋಗರುಜಿನಗಳನ್ನು ಹರಡಿದರು ಮತ್ತು ಅಲ್ಲಿನ ಚೆಂದದ ಸಾಮಾಜಿಕ ವ್ಯವಸ್ಥೆಯನ್ನೇ ನಾಶ ಮಾಡಿದರು. ಆದರೆ, ತಮ್ಮ ತಮ್ಮ ದೇಶಗಳನ್ನು, ಮುಗ್ಧ ಗುಲಾಮರ ರಕ್ತ-ಬೆವರು ಹರಿಸಿ, ಚೆಲ್ಲಿ ಅಚ್ಚುಕಟ್ಟು ಮಾಡಿಕೊಂಡರು; ಭಾರತದಂತಹ ದೇಶಗಳಿಗೆ ಬೌದ್ಧಿಕ ಆಘಾತವನ್ನೂ ನೀಡಿದರು. ಡೊಮಿನಿಕ್ ಲೇಪಿಯರ್ ಮತ್ತು ಲ್ಯಾರಿ ಕಾಲಿನ್ಸ್ ಎಂಬ ಈರ್ವರು ದುಷ್ಟ ಲೇಖಕರು ‘ಫ್ರೀಡಂ ಅಟ್ ಮಿಡ್ ನೈಟ್’ ಎಂಬ ಪುಸ್ತಕ ಬರೆದಿದ್ದಾರೆ. ನಾವೆಲ್ಲಾ ಓದಲೇಬೇಕಾದ ಪುಸ್ತಕವಿದು. ಮೊದಲ ಅಧ್ಯಾಯ ‘ಎ ರೇಸ್ ಡೆಸ್ಟೈನಡ್ ಟು ಗವರ್ನ್ ಅಂಡ್ ಸಬ್ ಡ್ಯೂ’ (A Race Destined to Govern and subdue) ಅಂತೂ ಗಮನಿಸಬೇಕಾದ ಮಹತ್ತ್ವದ ಅಧ್ಯಾಯ. ತಾವಿರುವುದೇ ಉಳಿದವರ ಉದ್ಧಾರಕ್ಕೆ ಎಂಬ ದುರಹಂಕಾರವು  ಇಲ್ಲಿ ಎಲ್ಲ ಮಿತಿಗಳನ್ನೂ ಮೀರಿದೆ. ಎಂತಹ ದೇಶ ನಮ್ಮದು, ರೋಗರುಜಿನ-ದಾರಿದ್ರ್ಯಗಳನ್ನು ತಂದಿಟ್ಟವರು ನಮ್ಮನ್ನು ಉದ್ಧಾರಮಾಡಲೆಂದೇ ಜನ್ಮತಾಳಿದ್ದೇವೆಂದು ಹೇಳಿಕೊಂಡಿರುವುದನ್ನು ಮರುಮಾತನಾಡದೆ ನುಂಗಿಕೊಳ್ಳುವ ಪರಿಸ್ಥಿತಿ ಬಂದಿತಲ್ಲಾ, ಎಂದು ವ್ಯಥೆಯಾಗುತ್ತದೆ. 

ನಮ್ಮ ವಿಜಯನಗರ ಸಾಮ್ರಾಜ್ಯದ ಬಗೆಗಿನ ವಿವರಗಳು, ಸಾಕ್ಷ್ಯಾಧಾರಗಳು ತುಂಬ ಸಂತೋಷ ತರುತ್ತವೆ, ಹೆಮ್ಮೆಯುಂಟುಮಾಡುತ್ತವೆ. ಪೂರ್ವ-ಪಶ್ಚಿಮಗಳ ಎರಡೂ ಸಮುದ್ರಗಳನ್ನು ವ್ಯಾಪಿಸಿದ, ಅನೇಕ ದೇಶಗಳೊಂದಿಗಿನ ಬೃಹತ್-ವ್ಯಾಪಾರ ವ್ಯವಸ್ಥೆ, ಹನ್ನೊಂದು ಲಕ್ಷ ಸೈನಿಕರ ಭಾರೀ ಪಡೆ, ಮುಖ್ಯವಾಗಿ ಸಾಹಿತ್ಯ-ಸಂಗೀತ-ಶಿಲ್ಪಕಲೆ-ನೃತ್ಯಗಳ ಅದ್ಭುತ ಪಾರಂಪರಿಕ ಸಂಪತ್ತು, ಎಲ್ಲವೂ ಅದ್ಭುತವೇ. ಆ ಅವಧಿಯ ಕಾಲಖಂಡದಲ್ಲಿ ಇಡೀ ವಿಶ್ವದಲ್ಲಿಯೇ ವಿಜಯನಗರವನ್ನು ಮೀರಿಸುವ ಬಹು-ಆಯಾಮಗಳ ಮಹಾನ್ ಸಾಮ್ರಾಜ್ಯವೇ ಇರಲಿಲ್ಲ. ಕಾಫಿರರ ಕಲೆ, ಸಂಸ್ಕೃತಿಗಳನ್ನು ನಾಶಮಾಡುವುದೇ ತಮ್ಮ ಗುರಿಯೆಂದು, ತಾವೇ ಸಾರಿಸಾರಿ ಹೇಳುವ ಇಸ್ಲಾಮೀ ಆಕ್ರಮಣಕಾರಿಗಳು ಎಲ್ಲವನ್ನೂ ನಾಶ ಮಾಡಿಬಿಟ್ಟರು. ಇದಕ್ಕೆಲ್ಲಾ ನಮ್ಮ  ಮೂರ್ಖತನ, ಅನಗತ್ಯ ಔದಾರ್ಯ ಮತ್ತು ಪರಮತಗಳ ಬಗೆಗಿನ ಅಸೀಮ ಅಜ್ಞಾನಗಳೇ ಕಾರಣವಾಗಿಬಿಟ್ಟವು. 

ವಿಜಯನಗರದಂತೆ ಭಾರತದ ಇನ್ನಿತರ ಅನೇಕ ಭೂಭಾಗಗಳೂ ಕೃಷಿ-ಸಮೃದ್ಧಿಗೆ, ವಸ್ತ್ರ-ಸಮೃದ್ಧಿಗೆ ಖ್ಯಾತಿ ಪಡೆದಿದ್ದವು. ಅದಕ್ಕೆ ಸಾವಿರಾರು ವರ್ಷಗಳ ಪರಂಪರೆಯೇ ಇತ್ತು. ಕುತಂತ್ರಿಗಳಾದ ಬ್ರಿಟಿಷರು ನಾಶಮಾಡುವ ಮೊದಲು, ಭಾರತ ಹೇಗಿತ್ತು ಎನ್ನುವ ವಿವರಗಳನ್ನು ಓದಿದಾಗ ಹರ್ಷಭಾವವುಂಟಾಗುತ್ತದೆ. ಕಳೆದ ಒಂದೆರಡು ಶತಮಾನಗಳ ದಾರಿದ್ರ್ಯ, ಕ್ಷಾಮ, ಅನಕ್ಷರತೆ, ಅಜ್ಞಾನಗಳ ಮಹಾಪೂರದ ಪರಿಪ್ರೇಕ್ಷ್ಯದಲ್ಲಿ, ನಮ್ಮದೇ ದೇಶದ ಕೃಷಿ-ಸಮೃದ್ಧಿ ನಿಜವೇ, ನಂಬಬಹುದೇ ಎಂಬ ವಿಸ್ಮಯಭಾವವನ್ನುಂಟುಮಾಡುತ್ತದೆ. 

ವಿನಾಶಕಾರಿ ಆಕ್ರಮಣಗಳ ಕಾರಣದಿಂದ ನಮ್ಮ ದೇಶದ ಬಹಳಷ್ಟು ಸಾಕ್ಷ್ಯಾಧಾರಗಳು, ದಾಖಲೆಗಳು ನಾಶವಾಗಿಹೋಗಿವೆ. ತಕ್ಷಶಿಲೆ, ನಳಂದಾಗಳಿಂದ ಮೊದಲುಗೊಂಡು ನಮ್ಮ ಸೋಮನಾಥಪುರದವರೆಗೆ ಚಾಚಿದ ವಿಧ್ವಂಸಗಳ ನಡುವೆ ಅಳಿದುಳಿದ ಸಾಹಿತ್ಯ, ಸಂಪ್ರದಾಯಗಳಲ್ಲಿ ಗತಿಸಿದ ಇತಿಹಾಸದ ಎಳೆಗಳನ್ನು ಹುಡುಕುವುದೇ ದುಸ್ತರ. ಅನೇಕ ಬಾರಿ ವಿದೇಶೀ ಪ್ರವಾಸಿಗಳ ಬರಹಗಳನ್ನು ಆಧರಿಸಿ ನಮ್ಮ ನಿಜ-ಇತಿಹಾಸದ ಹೆಜ್ಜೆಗುರುತುಗಳನ್ನು ಎಚ್ಚರಿಕೆಯಿಂದ ಅರಸಬೇಕಾಗುತ್ತದೆ.  

ಓದಬೇಕಾದುದು ಹೀಗೆ ಬಹಳವಿದೆ. ಜಡತ್ವದಿಂದ ಮಲಗಿಬಿಟ್ಟರೆ “ಬ್ರಿಟಿಷರು ಬರುವ ಮೊದಲು ಇಲ್ಲಿ ಬರೀ ಅಜ್ಞಾನ, ಅಂಧಕಾರಗಳಿದ್ದವು” ಎಂದು ಭಜನೆ ಮಾಡುತ್ತಾ, ಏಕತಾರಿ ಬಾರಿಸುತ್ತಾ  ಭಿಕ್ಷೆ ಬೇಡಬೇಕಾಗುತ್ತದೆ. 

ಲೇಖಕರು: ಮಂಜುನಾಥ ಅಜ್ಜಂಪುರ,

ಕೃಪೆ: ವಿಜಯ ಕರ್ನಾಟಕ

ಮಂಜುನಾಥ ಅಜ್ಜಂಪುರ,

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜ. 21 ಇನ್ನು 'ದಾಸೋಹ ದಿನ'

Fri Jan 22 , 2021
ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಜನವರಿ 21ನ್ನು ‘ದಾಸೋಹ ದಿನ’ವೆಂದು ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು. ತುಮಕೂರಿನ ಸಿದ್ಧಗಂಗಾ ಮಠದಲ್ಲಿ ನಡೆದ ಶಿವಕುಮಾರ ಸ್ವಾಮೀಜಿ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ  ಜ. 21 ಇನ್ನು ಪ್ರತೀ ವರ್ಷ ದಾಸೋಹ ದಿನ’ವನ್ನಾಗಿ ಆಚರಿಸಲಾಗುವುದು ಎಂದರು. ಸ್ವಾಮೀಜಿ ಹುಟ್ಟೂರು ಮಾಗಡಿ ತಾಲ್ಲೂಕಿನ ವೀರಾಪುರದ ಅಭಿವೃದ್ಧಿಗೆ ₹ 80 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಈಗಾಗಲೇ ₹ 25 […]