ಕನ್ನಡಿಗರ ದಾರಿದೀಪ ಜಿವಿ

ಕನ್ನಡದ ಅತಿವಿಶಿಷ್ಟ ನಿಘಂಟು-ಶಾಸ್ತ್ರಜ್ಞರಾದ ವೆಂಕಟಸುಬ್ಬಯ್ಯನವರೊಂದಿಗಿನ ಅನುಬಂಧವು ವಿಶೇಷವಾದುದು. 1989ರ ಮಾತು. ಜಿವಿ ಅವರು ಹಿಂದಿನ ವರ್ಷವೇ 75 ವಸಂತಗಳನ್ನು ದಾಟಿದ್ದರು. ನಮ್ಮ ಮೈಸೂರು ಬ್ಯಾಂಕ್ ಕನ್ನಡ ಸಂಘದಿಂದ ಅವರನ್ನು ಸನ್ಮಾನಿಸಲು ಸಂಪರ್ಕಿಸಿದಾಗ ಸಂತೋಷದಿಂದ ಸಮ್ಮತಿಸಿದರು. ಸನ್ಮಾನದ ದಿನ “ನಮ್ಮ ತಾಯಿಯವರನ್ನೂ ಕರೆದುಕೊಂಡು ಬರಲೇ?” ಎಂದು ಕೇಳಿದರು. ನಮಗೆಲ್ಲಾ ಆಶ್ಚರ್ಯ. ಅನಂತರ ಜಿವಿ ಅವರ ತಾಯಿಯವರೂ ನಮ್ಮ ಕಾರ್ಯಕ್ರಮಕ್ಕೆ ಬಂದರು. ಅವರಿಗಾಗ ನೂರರ ಹೊಸ್ತಿಲು. ತುಂಬ ಆರೋಗ್ಯಪೂರ್ಣರಾಗಿದ್ದರು. ನೋಡಿ ನಮ್ಮೆಲ್ಲರಿಗೂ ಸಂತೋಷವಾಯಿತು.

ಮೂರ್ನಾಲ್ಕು ದಶಕಗಳ ಹಿಂದೆ ಇಂಗ್ಲಿಷ್ ಭಾಷೆಯ ತೆಸಾರಸ್ (Thesaurus, ಸಮಾನಾರ್ಥ ಪದಕೋಶ) ನೋಡಿ ಸಂಭ್ರಮವೆನಿಸಿತ್ತು, ರೋಮಾಂಚನವಾಗಿತ್ತು. ಲೇಖಕರಿಗೆ, ಪತ್ರಕರ್ತರಿಗೆ, ಅಧ್ಯಾಪಕರಿಗೆ ಇದು ತುಂಬಾ ಉಪಯುಕ್ತವಾದುದು. ಇಂತಹುದು ಕನ್ನಡದಲ್ಲಿಯೂ ಬಂದರೆ ಎಷ್ಟು ಚೆನ್ನ ಎಂದುಕೊಂಡೆ. ನಾನೇ ಸ್ವತಃ ಪ್ರಯತ್ನಿಸೋಣ ಎಂದುಕೊಂಡರೂ, ವೃತ್ತಿಯಿಂದ ಬ್ಯಾಂಕ್ ಮ್ಯಾನೇಜರ್ ಆದ ನನಗೆ ಅಷ್ಟು ಬಿಡುವು ಇರುತ್ತಿರಲಿಲ್ಲ. ಯಾವುದಾದರೂ ಸಂಸ್ಥೆಯೊಂದಿಗಿನ ಸಹಯೋಗದಲ್ಲಿ ಏಕೆ ಪ್ರಯತ್ನಿಸಬಾರದು ಎನಿಸಿತು. 1990ರ ದಶಕದ ಆ ದಿನಗಳಲ್ಲಿ, ಹೊಸದಾಗಿ ಆರಂಭವಾದ ಕನ್ನಡ ವಿಶ್ವವಿದ್ಯಾಲಯಕ್ಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿಗೆ ಪತ್ರ ಬರೆದು ಇಂತಹ ಯೋಜನೆ ತೆಗೆದುಕೊಳ್ಳಬಹುದು, ಸಹಯೋಗಕ್ಕೆ ನಾನು ಸಿದ್ಧ ಎಂದು ತಿಳಿಸಿದೆ, ಪ್ರಸ್ತಾವನೆ ನೀಡಿದೆ. ನಿರೀಕ್ಷಿಸಿದಂತೆ, ಎರಡೂ ಕಡೆಯಿಂದ ಉತ್ತರ, ಪ್ರತಿಕ್ರಿಯೆ ಏನೂ ಬರಲಿಲ್ಲ.

ಕೆಲ ವರ್ಷಗಳ ಅನಂತರ ವೆಂಕಟಸುಬ್ಬಯ್ಯನವರು ಶಿವಮೊಗ್ಗದಲ್ಲಿ ಸಿಕ್ಕರು. ಅಲ್ಲಿನ ಕರ್ನಾಟಕ ಸಂಘದ ಕಾರ್ಯಕ್ರಮವೊಂದಕ್ಕೆ ಬಂದಿದ್ದರು. ಎಂಬತ್ನಾಲ್ಕರ “ಇಳಿ” ವಯಸ್ಸಿನಲ್ಲಿಯೂ ಮಿರಮಿರ ಮಿಂಚುತ್ತಿದ್ದರು. ಶ್ವೇತವಸ್ತ್ರಧಾರಿಗಳಾಗಿ ಅಕ್ಷರಶಃ ಹೊಳೆಯುತ್ತಿದ್ದರು. ಅದೆಷ್ಟು ಬಗೆಯ ನಿಘಂಟುಗಳಿಗೆ – ಕೋಶಗಳಿಗೆ ಅವರು ಕೊಡುಗೆ ನೀಡಿದ್ದಾರೆಂದರೆ ವಿಸ್ಮಯವಾಗುವಷ್ಟು. ಕಥೆ, ಕವನ, ಕಾದಂಬರಿಗಳಂತಹ “ಜನಪ್ರಿಯ” ಸಾಮಗ್ರಿ ನೀಡುವವರಿಗೆ fanfare ತುಂಬಾ ಇರುತ್ತದೆ. ಆದರೆ ಶಬ್ದಕೋಶ, ಪದಕೋಶ, ಭಾಷಾಂತರ, ಇತ್ಯಾದಿ ಕ್ಷೇತ್ರಗಳ ಸಾಧಕರನ್ನು ಕೇಳುವವರೇ ಇರುವುದಿಲ್ಲ. ವೆಂಕಟಸುಬ್ಬಯ್ಯನವರ ವಿಶೇಷವೆಂದರೆ, ಇಂತಹ dry ಕ್ಷೇತ್ರ ಆರಿಸಿಕೊಂಡರೂ ಅಪಾರ ಜನಮನ್ನಣೆ ಗಳಿಸಿದ ವೈಶಿಷ್ಟ್ಯ ಅವರದ್ದು. ಅವರು ನಿಘಂಟು ಕ್ಷೇತ್ರದ ಅಪರೂಪದ ಗ್ಲಾಮರ್ ಬಾಯ್ ಆಗಿದ್ದರು. ಅವರೊಂದಿಗೆ ಮಾತನಾಡುವಾಗ “ಸರ್, ಕನ್ನಡದಲ್ಲಿ ಎಷ್ಟೆಲ್ಲಾ ಕೋಶಗಳು, ನಿಘಂಟುಗಳು ಬಂದಿವೆ. ತೆಸಾರಸ್ ಸಹ ಬಂದಿದ್ದರೆ ಚೆನ್ನಾಗಿತ್ತು, ಅಲ್ಲವೇ? ಅದೊಂದು ಕೊರತೆಯಿದೆ” ಎಂದೆ. “ನಾನೀಗ ಪ್ರಾರಂಭ ಮಾಡಿದ್ದೀನಪ್ಪಾ, ತುಂಬಾ ಕೆಲಸವಾಗುತ್ತದೆ” ಎಂದರು. ನಾನು ಅಕ್ಷರಶಃ ದಂಗಾಗಿಹೋದೆ. ೮೪ ವರ್ಷಗಳ ವೆಂಕಟಸುಬ್ಬಯ್ಯನವರು ಆ ವಯಸ್ಸಿನಲ್ಲಿ ಹೊಸ ಯೋಜನೆಯೊಂದನ್ನು ಕೈಗೆತ್ತಿಕೊಂಡಿದ್ದರು (ಕಾರಣಾಂತರಗಳಿಂದ ಸಾಧ್ಯವಾಗಲಿಲ್ಲ. ಬೇರೆಯವರು ಮಾಡಿದರು. ಆ ಮಾತು ಬೇರೆ). ಅವರೊಂದಿಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದೆ.

ಈಗ 10 -12 ವರ್ಷಗಳ ಹಿಂದೆ, ಬೆಂಗಳೂರಿನ ಮೈಸೂರು ಬ್ಯಾಂಕ್ ಕಾಲೋನಿಯಲ್ಲಿ ಕೆ.ಶ್ರೀನಿವಾಸ್ ಅವರಿಂದ ಮೂಲ ಸಂಸ್ಕೃತ ವಾಲ್ಮೀಕಿ ರಾಮಾಯಣದ ಪ್ರವಚನವು, ಕೆ.ಎಸ್.ನರಸಿಂಹ ಸ್ವಾಮಿ ಅವರ ಮಗಳು ವೀಣಾ ಅವರ ಮನೆಯಲ್ಲಿ ನಡೆಯುತ್ತಿತ್ತು. ಅಲ್ಲಿಗೆ ಜಿವಿ ಅವರ ಹಿರಿಯ ಮಗ ಅನಂತಸ್ವಾಮಿ ಬರುತ್ತಿದ್ದರು. ಎಲ್.ಅಂಡ್ ಟಿ. ಸಂಸ್ಥೆಯಲ್ಲಿ ಅವರು ದೊಡ್ಡ ಅಧಿಕಾರಿಯಾಗಿ ನಿವೃತ್ತರಾಗಿದ್ದರು. ಜ್ಞಾನಿ. ಅವರ ವೈಜ್ಞಾನಿಕ ದೃಷ್ಟಿಕೋನ, ಗ್ರಹಿಕೆ, ಮಾತುಗಳು ವಿಶಿಷ್ಟವಾಗಿರುತ್ತಿದ್ದವು. ಕಾರ್ಯಕ್ರಮಕ್ಕೆ ಕೆಲವೊಮ್ಮೆ ತೀ.ನಂ.ಶ್ರೀ. ಅವರ ಮಗ ಸಹ ಬರುತ್ತಿದ್ದರು. ನನಗೆ ಸಂಭ್ರಮವೋ ಸಂಭ್ರಮ. ಪ್ರತಿ ವಾರ ಕನ್ನಡದ ಮೂವರು ವಿಭೂತಿಗಳ (ಕೆ.ಎಸ್.ನ., ಜಿ.ವಿ. ಮತ್ತು ತೀ.ನಂ.ಶ್ರೀ.) ಮಕ್ಕಳ ದರ್ಶನವಾಗುತ್ತಿತ್ತು.

ಒಮ್ಮೆ ಅನಂತಸ್ವಾಮಿ ಅವರ ಬಳಿ 1989ರ ನಮ್ಮ ಕನ್ನಡ ಸಂಘದ ಸನ್ಮಾನದ ವಿಷಯ ಹಂಚಿಕೊಂಡೆ. ಅವರು ಇನ್ನಷ್ಟು ಆಶ್ಚರ್ಯ ಪಡಿಸಿದರು. “ನಮ್ಮ ಅಜ್ಜಿ (ಜಿವಿ ಅವರ ತಾಯಿ) 106 ವರ್ಷ ಬದುಕಿದ್ದರು, ತುಂಬಾ ಆರೋಗ್ಯವಾಗಿದ್ದರು. ಅವರದ್ದೇ ಅರೋಗ್ಯಭಾಗ್ಯ ನಮ್ಮ ತಂದೆಯವರಿಗೂ ಬಂದಿದೆ”. ಈ ಮಾತು ಆಡುವಾಗ ಜಿವಿ ಅವರಾಗಲೇ ನೂರರ ಹೊಸ್ತಿಲಲ್ಲಿದ್ದರು.

ಏಪ್ರಿಲ್ 18ರ ಭಾನುವಾರ ಶ್ರೀ ರಾಮಾನುಜರ ಜಯಂತಿ. ಇತ್ತೀಚೆಗೆ ರಾಮಾನುಜರ ಬಗೆಗಿನ, ಡಾ।। ಬಾಬು ಕೃಷ್ಣಮೂರ್ತಿ ಅವರ “ವಿಶಿಷ್ಟ” ಕಾದಂಬರಿಯನ್ನು ವೆಂಕಟಸುಬ್ಬಯ್ಯನವರು ಓದುವ ಛಾಯಾಚಿತ್ರ ನೋಡಿ ಸಂಭ್ರಮಿಸಿದ್ದೆ. ರಾಮಾನುಜರ ಜಯಂತಿಯಂದೇ ಜಿವಿ ಅವರು ಇನ್ನಿಲ್ಲವಾಗಿರುವುದು ತಿಳಿದು ವಿಚಿತ್ರವೆನಿಸಿತು.

ವೆಂಕಟಸುಬ್ಬಯ್ಯನವರು ಭೌತಿಕವಾಗಿ ಇಲ್ಲದಿದ್ದರೂ ಅವರ ಸಾಲುಸಾಲು ನಿಘಂಟುಗಳು, ಕೋಶಗಳು ನಮಗೆ ದಾರಿದೀಪಗಳಾಗಿವೆ, ಚಿರಕಾಲ ಕನ್ನಡಿಗರನ್ನು ಮುನ್ನಡೆಸಲಿವೆ.

******************

ಮಂಜುನಾಥ ಅಜ್ಜಂಪುರ

ಲೇಖಕರು, ಅಂಕಣಕಾರರು ಹಾಗೂ ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ.

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಮೆರಿಕದ ಮೂರನೇ ಅತಿ ದೊಡ್ಡ ನ್ಯಾಯಾಂಗ ಹುದ್ದೆಗೆ ಏರಿದ ಭಾರತ ಮೂಲದ ವನಿತಾ ಗುಪ್ತ

Thu Apr 22 , 2021
ಅಮೆರಿಕ : ಭಾರತೀಯ ಮೂಲದ ವನಿತಾ ಗುಪ್ತ (46) ಅವರು ಅಮೆರಿಕದ ಮೂರನೇ ಅತಿ ದೊಡ್ಡ ನ್ಯಾಯಾಂಗ ಹುದ್ದೆಯಾಗಿರುವ ಸಹ ಅಟಾರ್ನಿ ಜನರಲ್‌ ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಟಾರ್ನಿ ಜನರಲ್‌ ಹುದ್ದೆ ಬಹಳ ಪ್ರತಿಷ್ಠಿತವಾದುದಾಗಿದೆ. ಸಹ ಅಟಾರ್ನಿ ಜನರಲ್‌ ಹುದ್ದೆ ದೇಶದ ನ್ಯಾಯಾಂಗ ವ್ಯವಸ್ಥೆಯ ಮೂರನೇ ಅತಿ ಪ್ರಮುಖ ಹುದ್ದೆಯಾಗಿದೆ. ಅಮೆರಿಕದ ಸೆನೆಟ್ ನಲ್ಲಿನಡೆದ ಮತದಾನದ ಸಂಧರ್ಭದಲ್ಲಿ ಉಭಯ ಪಕ್ಷಗಳೂ ತಲಾ […]