ಕೋಮುವಾದದ ಒಣಚರ್ಚೆಗೆ ಕೊನೆಮೊಳೆ

ಪಶ್ಚಿಮ ಬಂಗಾಳದಲ್ಲಿ ಗೆಲುವಿನಿಂದ ದೂರ ಉಳಿದ ಬಿಜೆಪಿ ಅಸ್ಸಾಂನಲ್ಲಿ ಸತತ ಎರಡನೇ ಸಲ ಗೆದ್ದದ್ದು ‘ ಮತ ಧ್ರುವಿಕರಣ’ ದ ಹಿನ್ನೆಲೆಯಲ್ಲಿ ಗಮನ ಸೆಳದಿದೆ . ಪಶ್ಚಿಮ ಬಂಗಾಳದಲ್ಲಿ ಹಿಂದುಗಳ ಜನಸಂಖ್ಯೆ ಪ್ರಮಾಣ ಶೇ 70.54 , ಮುಸ್ಲಿಮರದ್ದು ಶೇ 27.1. ಅದೇ ಅಸ್ಸಾಂನಲ್ಲಿ ಹಿಂದುಗಳು ಶೇ 61.47, ಮುಸ್ಲಿಮರು ಶೇ. 34.22. ಕೇವಲ ಹಿಂದುಗಳನ್ನಷ್ಟೆ ಕೇಂದ್ರೀಕರಿಸುತ್ತದೆ ಎನ್ನಲಾಗುವ ಬಿಜೆಪಿಗೆ ಅಸ್ಸಾಂ ಮತ್ತೂ ಕಠಿಣವಾಗಬೇಕಿತ್ತಲವೇ ? ಆದರೆ ಹಾಗೇಕೆ ಆಗಲಿಲ್ಲ ?

2016ರ ಚುನಾವಣೆಯಲ್ಲಿ ಬಿಜೆಪಿ ಶೇ 41.6 ಮತ ಪಡೆದು 86 ಸ್ಥಾನಗಳಲ್ಲಿ ಗೆದ್ದಿತ್ತು . ಪ್ರತ್ಯೇಕವಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್ ಶೇ 31 ( ಸ್ಥಾನ 28 ) , ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಶೇ 13.2 ( ಸ್ಥಾನ 13 ) ಎಡಪಕ್ಷಗಳು ಶೇ 0.86 ( ಸ್ಥಾನ 0) ಮತ ಪಡೆದಿದ್ದವು . ಆಗ ಬಂದ ವಿಶ್ಲೇಷಣೆ – ‘ ಬಿಜೆಪಿ ಗೆಲ್ಲುವುದು ಸಾಧ್ಯವೇ ಇರಲಿಲ್ಲ , ಮುಸ್ಲಿಂ ಮತಗಳು ಹಂಚಿ ಹೋಗಿದ್ದರಿಂದ ಸೆಕ್ಯುಲರ್ ಪಕ್ಷವಾದ ಕಾಂಗ್ರೆಸ್ ಗೆ ಸೋಲಾಯಿತು . ಕೋಮುವಾದಿ ಬಿಜೆಪಿ ಗೆದ್ದಿತು ‘ . ಆದರೆ ಈ ಸಲದ ಚುನಾವಣೆಯಲ್ಲಿ ಸೆಕ್ಯುಲರ್ ಪಕ್ಷಗಳು ಎಚ್ಚೆತ್ತುಕೊಂಡವು . ಮೂರೂ ಪಕ್ಷಗಳು ಒಂದಾದವು . ಆಷ್ಟೆ ಅಲ್ಲ , 2016ರಲ್ಲಿ ಬಿಜೆಪಿಯ ಜೊತೆಗಿದ್ದ , ಸರಿಸುಮಾರು ಶೇ 5 ರಷ್ಟು ಮತದಾರರ ಮೇಲೆ ಹಿಡಿತವಿರುವ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಸೆಕ್ಯುಲರ್ ಬಳಗ ಸೇರಿಕೊಂಡಿತು . ಹೀಗಿರುವಾಗ ಮತ ಅಂಕಗಣಿತದ ಮಟ್ಟಿಗೆ ಬಿಜೆಪಿ ಗೆಲ್ಲುವುದು ಸಾಧ್ಯವೇ ಇರಲಿಲ್ಲ . ಆದರೂ ಬಿಜೆಪಿ ಗೆದ್ದಿತು . ಬಿಜೆಪಿ ಗೆಲುವಿಗೆ ಕಾರಣವಾಗಿದ್ದು ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳ ಢೋಂಗಿ ಜಾತ್ಯತೀತತೆ !

ಮುಸ್ಲಿಂ ಸಗಟು ಮತದ ಆಸೆಗೆ ಬಿದ್ದ ಕಾಂಗ್ರೆಸ್ , ಕಮ್ಯುನಿಸ್ಟ್ ಪಕ್ಷಗಳು ಬದ್ರುದ್ದೀನ್ ಅಜ್ಮಲ್ ನೇತೃತ್ವದ ಎಐಯುಡಿಎಫ್ ಜೊತೆ ಕೈ ಜೋಡಿಸಿತು . ಪಕ್ಕಾ ಮತೀಯವಾದಿಯಾದ 65ವರ್ಷದ ಅಜ್ಮಲ್ 40ಕ್ಕೂ ಮಿಕ್ಕ ದೇಶಗಳಿಗೆ ಸುಗಂಧ ದ್ರವ್ಯ ರಫ್ತು ಮಾಡುವ ದೊಡ್ಡ ಉದ್ಯಮಿ . ಪಕ್ಕದ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿ ಬರುವ ಲಕ್ಷಾಂತರ ಮುಸ್ಲೀಮರಿಗೆ ಆಶ್ರಯದಾತ , 2005ರಲ್ಲಿ ಅಕ್ರಮ ನುಸುಳುಕೋರರ ಬಗ್ಗೆ ಸುಪ್ರೀಂ ಕೋರ್ಟ್ ಕೊಟ್ಟ ತೀರ್ಪಿನ ವಿರುದ್ಧ ಬಂಡೆದ್ದು ಅಜ್ಮಲ್ ತನ್ನದೇ ರಾಜಕೀಯ ಪಕ್ಷ ಹುಟ್ಟು ಹಾಕಿದ್ದರು . ಅಜ್ಮಲ್ ರವರ ಪಕ್ಷ 2006ರಲ್ಲಿ 10 ಸ್ಥಾನ, 2011ರಲ್ಲಿ 18 ಸ್ಥಾನ ಗೆದ್ದದ್ದು ಕಾಂಗ್ರೆಸ್ಸನ್ನು ನಡುಗಿಸಿತು . ಆವರೆಗೂ ಕಾಂಗ್ರೆಸ್ ಬುಟ್ಟಿಯಲ್ಲಿದ್ದ ಮುಸ್ಲಿಂ ಸಗಟು ಮತಗಳು ಕರಗಲಾರಂಭಿಸಿತು . 2016ರಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್ ಹತಾಶೆಗೊಳಗಾಯಿತು . ಹಾಗಾಗಿ ಈ ಸಲ ಕಾಂಗ್ರೆಸ್ ಅಜ್ಮಲ್ಲರ ತೆಕ್ಕೆಗೆ ಸೇರಿಕೊಂಡಿತು . ಶಹಬಾನು ಪ್ರಕರಣದ ಕಾಲದಿಂದಲೇ ಕಾಂಗ್ರೆಸ್ ನ ಜಾತ್ಯತೀತ ತತ್ವ ಎಂದರೆ ಮುಸ್ಲೀಮರನ್ನು ಓಲೈಸುವುದಷ್ಟೆ ಎಂಬಂತಾಗಿದೆ . ಕಾಂಗ್ರೆಸ್ ನ ಹತಾಶೆಯೇನೋ ಸರಿ , ಕಮ್ಯುನಿಸ್ಟ್ ಪಕ್ಷಗಳೇಕೆ ಹಳ್ಳ ಹಿಡಿದಿದ್ದು ?

2016ರಲ್ಲಿ 41 ಕಡೆ ಸ್ಪರ್ಧಿಸಿ ಎಲ್ಲ ಕಡೆ ಠೇವಣಿ ಕಳೆದುಕೊಂಡಿದ್ದ ಕಮ್ಯುನಿಸ್ಟ್ ಪಕ್ಷಗಳು ಪುನಶ್ಚೇತನದ ಅಮ್ಲಜನಕ ಹುಡುಕಿಕೊಂಡಿದ್ದು ಅಜ್ಮಲ್ಲರ ಪದತಳದಲ್ಲಿ . ಕಾಂಗ್ರೆಸ್ ಗೆ ಹೋಲಿಸಿದರೆ ವೈಚಾರಿಕವಾಗಿ ಗಟ್ಟಿಗರು ಎನ್ನಲಾದ ಎಡಪಕ್ಷಗಳು ಹೀಗೆ ದಾರಿಬಿಟ್ಟು ಕೋಮುರಾಜಕಾರಣ ಮಾಡುತ್ತಿರುವುದು ಅಸ್ಸಾಂಗಷ್ಟೆ ಸೀಮಿತವಾಗಿಲ್ಲ, ಪಶ್ಚಿಮ ಬಂಗಾಳದಲ್ಲಿ ಪ್ರಖ್ಯಾತ ಮಸೀದಿಯೊಂದರ ಪಾರುಪತ್ತೇದಾರ ಅಬ್ಬಾಸ್ ಸಿದ್ಧಿಕಿ ಸ್ಥಾಪಿಸಿದ ಇಂಡಿಯನ್ ಸೆಕ್ಯುಲರ್ ಫ್ರಂಟ್ ಜೊತೆ ಕಮ್ಯುನಿಸ್ಟ್ ಪಕ್ಷಗಳದ್ದು ಒಡಂಬಡಿಕೆ , ಅದಕ್ಕೆ ಕಾಂಗ್ರೆಸ್ ಬೆಂಬಲ ಕೊಟ್ಟಿತು . ಅಸ್ಸಾಂನಲ್ಲಿ ಅಜ್ಮಲ್ ಜೊತೆ ವ್ಯವಹಾರ ಕುದುರಿಸಿದ್ದು ಕಾಂಗ್ರೆಸ್ಸಾದರೆ , ಬಂಗಾಳದ ಅಬ್ಬಾಸ್ ಸಿದ್ಧಿಕಿ ಜೊತೆ ಕಮ್ಯುನಿಸ್ಟರ ಪೌರಹಿತ್ಯ . ತಮಿಳುನಾಡಿನಲ್ಲಿ ಡಿಎಮ್ಕೆ , ಕಾಂಗ್ರೆಸ್ , ಕಮ್ಯುನಿಸ್ಟ್ ಪಕ್ಷಗಳು ಮುಸ್ಲಿಂಲೀಗ್ ನೊಂದಿಗೆ ಬಹುಕಾಲದಿಂದ ಸಂಸಾರ ನೆಡೆಸುತ್ತಿದ್ದಾರೆ . ಮಹಾರಾಷ್ಟ್ರದಲ್ಲಿನ ಶಿವಸೇನೆಯೊಂದಿಗಿನ ಕಾಂಗ್ರೆಸ್‌ ಸಖ್ಯ ಚುನಾವಣೆಯ ನಂತರದ್ದು . ಆದರಿಲ್ಲಿ ಮತ್ತೂ ಮುಂದೆ ಹೋಗಿರುವುದು ಸ್ಪಷ್ಟವಾಗಿದೆ . ಈಗ ಹೇಳಿ ಬಿಜೆಪಿ ಮಾತ್ರ ಕೋಮುವಾದಿ ಪಕ್ಷವೇ ?

ಅಸ್ಸಾಂನಲ್ಲಿ ಬಿಜೆಪಿ ಮೈತ್ರಿಕೂಟ ಶೇ 61 ರಷ್ಟಿರುವ ಹಿಂದು ಮತಗಳಲ್ಲಿ ಶೇ68 ರಷ್ಟನ್ನು ಕ್ರೋಢಿಕರಿಸಿದೆ . 2006ರಲ್ಲಿ ಕಾಂಗ್ರೆಸ್ ಗಿದ್ದ ಶೇ 32ರ ಹಿಂದುಗಳ ಬೆಂಬಲ ಈಗ ಶೇ19ಕ್ಕೆ ಇಳಿದಿದೆ . ಹಾಗೆ ನೋಡಿದರೆ ಅಸ್ಸಾಂ ತುಂಬಾ ಸಂಕೀರ್ಣವಾದ ರಾಜ್ಯ . ಅಲ್ಲಿಯ ಶೇ 61ರಷ್ಟಿರುವ ಹಿಂದುಗಳಲ್ಲಿ ಅಗಾಧವಾದ ವೈವಿದ್ಯತೆ. ಒಂದೇ ರಾಜ್ಯದಲ್ಲಿ ನೂರಾರು ಬುಡಕಟ್ಟುಗಳು . 45ಕ್ಕೂ ಹೆಚ್ಚು ಸ್ಥಳೀಯ ಭಾಷೆಗಳು . ಸಾಂಸ್ಕೃತಿಕ ಸಿರಿವಂತಿಕೆಯೂ ಆಳವಾದದ್ದು . ಇಂತಹ ಅಪ್ಪಟ ಬಹುತ್ವದ ರಾಜ್ಯದಲ್ಲಿ ಬಿಜೆಪಿ ಎರಡನೇ ಬಾರಿ ಗೆದ್ದದ್ದು ಮಾತ್ರವಲ್ಲ 8 ಎಸ್ಸಿ ಮೀಸಲು ಕ್ಷೇತ್ರಗಳಲ್ಲಿ 4, 16 ಎಸ್ಟಿ ಮೀಸಲು ಕ್ಷೇತ್ರಗಳಲ್ಲಿ 14ನ್ನು ತನ್ನದಾಗಿಸಿಕೊಂಡಿದೆ. ಸ್ಥಳೀಯ ಬೋಡೊಲ್ಯಾಂಡ್ ಪೀಪಲ್ಸ್ ಫ್ರಂಟ್ ಬಿಜೆಪಿಯೊಂದಿಗೆ ಮುನಿಸಿಕೊಂಡು ಹೊರ ಹೋದರೂ ಬುಡಕಟ್ಟು ಜನಜಾತಿಗಳ ನಡುವಿನ ಬಿಜೆಪಿಯ ಹಿಡಿತ ಬಲವಾಗಿಯೇ ಉಳಿದಿದೆ .

ಅಸ್ಸಾಂ ರಾಜ್ಯ ಪಕ್ಕದ ಬಾಂಗ್ಲಾದೇಶದಿಂದ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ತೀವ್ರವಾಗಿ ಎದುರಿಸುತ್ತಿದೆ . ಅಸ್ಸಾಂನಲ್ಲಿರುವ 1.3ಕೋಟಿ ಮುಸ್ಲೀಮರಲ್ಲಿ 90ಲಕ್ಷ ಮಂದಿ ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿದವರೆಂದು ಅಸ್ಸಾಂನ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ದಾಖಲೆ ಬಿಡುಗಡೆ ಮಾಡಿದೆ . 30 ಜಿಲ್ಲೆಗಳ ಪೈಕಿ ಬಾಂಗ್ಲಾಗೆ ತಾಗಿಕೊಂಡಿರುವ 9ಜಿಲ್ಲೆಗಳಲ್ಲಿ ಮುಸ್ಲೀಮರೆ ಬಹುಸಂಖ್ಯಾತರು. ಈ ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆಯ ಪ್ರಮಾಣ ಶೇ 24 ರಷ್ಟಿದ್ದರೆ , ಉಳಿದ ಹಿಂದು ಬಹುಸಂಖ್ಯಾತ 21 ಜಿಲ್ಲೆಗಳಲ್ಲಿ ಜನಸಂಖ್ಯೆಯ ಏರಿಕೆ ಪ್ರಮಾಣ ಶೇ9 . ಇಂತಹ ವಾಸ್ತವಗಳನ್ನು ಮುಚ್ಚಿಟ್ಟ ಜಾತ್ಯತೀತತೆಯ ಸೋಗನ್ನು ಯಾರು ತಾನೆ ಒಪ್ಪುತ್ತಾರೆ ? ಅಸ್ಸಾಂನ ಮಟ್ಟಿಗೆ ಹಿಂದುತ್ವವೇ ಬಹುತ್ವ ಎಂಬುದೂ ಸತ್ಯ .

ವಾದಿರಾಜ್

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Samarpaka's Holistic Approach to Covid Relief in Karnataka

Thu Jun 3 , 2021
SAMARPAKA’S HOLISTIC APPRAOCH TO COVID RELIEF IN KARNATAKA Bangalore, June 3,2021: Samarpaka Seva Trust, today gave an overview of its holistic approach to Covid Relief through various initiatives, by bringing together Corporates, NGOs and volunteers, touching different areas of social need arising from the pandemic. Samarpaka gave an account of […]