ತಾಯ್ನಾಡಿನ ರಕ್ಷಣೆಗಾಗಿ ಬದುಕಿದ ಸೈನಿಕರಿಗೆ ಸಾವಿಲ್ಲ…

ಕೆಲವೊಮ್ಮೆ ನಮ್ಮ ಜೀವನದಲ್ಲಿ ಕಠಿಣಾತಿ ಕಠಿಣ ಸನ್ನಿವೇಶಗಳು ಎದುರಾಗುತ್ತವೆ. ಅವು ಹೇಗಿರುತ್ತವೆಂದರೆ, ಅವುಗಳ ಎದುರು ನಮ್ಮ ಜೀವನದ ದೃಷ್ಟಿಕೋನವೇ ಬದಲಾಗುತ್ತವೆ. ಕಣ್ಣಿದ್ದೂ ಕುರುಡಾದೆವಾ? ಕಿವಿಯಿದ್ದೂ ಕಿವುಡರಾದೆವಾ? ಬಾಯಿಯಿದ್ದೂ ಮೂಕರಾದೆವಾ? ಮನಸ್ಸಿದ್ದೂ ಆಲೋಚನಾಹೀನರಾದೆವಾ? ಎಂಬಂತಾಗುತ್ತದೆ. ಈ ವ್ಯಾಖ್ಯಾನಕ್ಕೆ ಅನ್ವಯವಾಗುವಂತೆ ಮೊನ್ನೆ-ಮೊನ್ನೆ ತಾನೆ (ಡಿಸೆಂಬರ್ 8) ಸಂಭವಿಸಿರುವ ಭಾರತದ ವೀರಸೈನಿಕರ ದುರಂತಕರ ಅಂತ್ಯವು ಭಾರತೀಯರನ್ನು ಸ್ತಬ್ಧವಾಗಿಸಿದೆ.

ಮಿ-17 ಯುದ್ಧವಿಮಾನದಲ್ಲಿ ಭಾರತೀಯ ರಕ್ಷಣಾ ಪಡೆಯ ಮುಖ್ಯಸ್ಥರು ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಸೇರಿದಂತೆ ಸೇನೆಯ ಉನ್ನತ ಹುದ್ದೆಯಲ್ಲಿದ್ದ ಇತರೆ 11 ಮಂದಿ ವೆಲ್ಲಿಂಗ್ಟನ್ ನ ಡಿಫೆನ್ಸ್ ಸರ್ವಿಸಸ್ ಸ್ಟಾಫ್ ಕಾಲೇಜಿನ ಕಾರ್ಯಕ್ರಮಕ್ಕೆ ತೆರಳಿದ್ದಾಗ ಆ ವಿಮಾನದ ಪತನದಿಂದಾಗಿ ವಿಧಿವಶರಾಗಿದ್ದಾರೆ. ಯಾರು ತಮ್ಮ ಒಂದೇ ಒಂದು ಮಾತಿನಿಂದ ಜಗತ್ತಿನ ನಾಲ್ಕನೇ ಅತ್ಯಂತ ದೊಡ್ಡ ಸೈನ್ಯವನ್ನು ನಿಯಂತ್ರಿಸುವ ಅಧಿಕಾರವನ್ನು ಹೊಂದಿದ್ದರೊ, ಯಾರು ತಮ್ಮ ಮನೆತನದ ಮೂರನೆ ತಲೆಮಾರಿನ ಸೈನಿಕನಾಗಿ ದೇಶಭಕ್ತಿಯನ್ನು ಜನ್ಮಸಿದ್ಧ ಹಕ್ಕಾಗಿ ಪಡೆದುಕೊಂಡು ಧರೆಗಿಳಿದರೊ, ಯಾರು ತಮ್ಮ ನಿರ್ಭಯದ ಖಡಕ್ ಮಾತುಗಳಿಂದ ಪಾಕಿಸ್ತಾನ ಮತ್ತು ಚೀನಾ ಎರಡೂ ರಾಷ್ಟ್ರಗಳಿಗೆ ಎಚ್ಚರಿಕೆ ಕೊಡುವ ಸಾಮರ್ಥ್ಯವನ್ನು ಹೊಂದಿದ್ದರೊ, ಯಾರು ತಮ್ಮ ಶೌರ್ಯ ಚರಿತ್ರೆಯ ವೃತ್ತಿಜೀವನದಲ್ಲಿ ಮಯನ್ಮಾರ್ ಸ್ಟ್ರೈಕ್, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಗಳಂತಹ ಯಶಸ್ವೀ ಸೇನಾ ಆಪರೇಷನ್ ಗಳನ್ನು ನಡೆಸಿದರೊ, ಯಾರು 1971ರ ಚೀನಾ ವಿರುದ್ಧದ ಯುದ್ಧದಿಂದಾದ ಆತ್ಮಸಮ್ಮಾನದ ಧಕ್ಕೆಯ ವಿರುದ್ಧ ಭಾರತೀಯ ಯೋಧರನ್ನು ಸಿದ್ಧಗೊಳಿಸಿ ಮುಷ್ಟಿಯುದ್ಧದ ಮೂಲಕ ವಿಜಯದ ಚರಿತ್ರೆಯನ್ನು ಬರೆದರೊ, ಯಾರು ತಮ್ಮ ಅಮೂಲ್ಯ ಜೀವನದ ನಾಲ್ಕು ದಶಕಗಳ ದೀರ್ಘ ಕಾಲವನ್ನು ತಾಯ್ನಾಡಿನ ರಕ್ಷಣೆಗಾಗಿ ಸಮರ್ಪಿಸಿದರೊ ಅಂತಹ ಸಮರಸಿಂಹ, ರಣವಿಕ್ರಮ, ಮಹಾದಂಡನಾಯಕ,ಸಾಹಸವಂತ ಯೋಧ, ಬಹದ್ದೂರ್ ಸೇನಾನಿ, ಶೌರ್ಯವಂತ ಸೇನಾಪತಿ, ಭಾರತಮಾತೆಯ ವೀರಪುತ್ರ ರಕ್ಷಣಾಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಈಗ ನಾವು ಕಳೆದುಕೊಂಡಿರುವುದು!! ಹೌದು, ನಾವು ಕಳೆದುಕೊಂಡಿರುವುದು ನಮ್ಮ ದೇಶದ ಬೃಹತ್ ಆಸ್ತಿಯನ್ನು. ಜೊತೆಗೆ ಅವರ ಪತ್ನಿ, ಇನ್ನಿತರ 11 ಬಲಶಾಲಿ ದೇಶಭಕ್ತ ಸೇನಾನಿಗಳನ್ನೂ ಸಹ ನಾವು ಕಳೆದುಕೊಂಡಿರುವುದು ನಮ್ಮ ದುಃಖವನ್ನು ಅತಿರೇಕಕ್ಕೇರಿಸಿದೆ. 

1978ರಲ್ಲಿ ಗೋರ್ಖಾ ರೈಫೈಲ್ಸ್ ರೆಜಿಮೆಂಟಿನ ಮೂಲಕ ಭಾರತೀಯ ಸೇನೆ ಸೇರಿದ ಜನರಲ್ ಬಿಪಿನ್ ರಾವತ್ ಅವರು ಆ ರೆಜಿಮೆಂಟಿನ ಧ್ಯೇಯವಾಕ್ಯವಾದ ‘ಹೇಡಿಗಳಂತೆ ಬದುಕುವುದಕ್ಕಿಂತ ಸಾಯುವುದು ಮೇಲು’ ಎಂಬುದನ್ನು ಅಕ್ಷರಶಃ ಪಾಲಿಸಿ ಉನ್ನತ ಜವಾಬ್ದಾರಿಯ ಸ್ಥಾನಗಳನ್ನು ಅಲಂಕರಿಸುತ್ತಾ ಬಂದರು. 2016ರಲ್ಲಿ 27ನೆ ಭಾರತೀಯ ಸೇನಾ(ಭೂ ಸೇನಾ) ಮುಖ್ಯಸ್ಥರಾಗಿ, ನಂತರ 2019ರಲ್ಲಿ ಭಾರತದ ಮೊದಲ ರಕ್ಷಣಾ ಪಡೆಗಳ ಮುಖ್ಯಸ್ಥರಾದರು. ಇದುವರೆವಿಗೂ ಭಾರತ ಭೂಮಿ ಕಂಡ ಅತ್ಯಂತ ನಿರ್ಭೀತ, ಸಾಹಸವಂತ, ಬುದ್ಧಿವಂತ, ಸಹೃದಯವಂತ ಸೇನಾನಾಯಕರ ಪಟ್ಟಿಯಲ್ಲಿ ಜನರಲ್ ಬಿಪಿನ್ ರಾವತ್ ಅವರು ಅಗ್ರಶ್ರೇಣಿಯಲ್ಲಿ ನಿಲ್ಲುತ್ತಾರೆಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಸಂಭವತಃ ದೇಶದ ಆಂತರಿಕ ಶತ್ರುಗಳಾದ ದೇಶದ್ರೋಹಿಗಳಿಗೆ ಅಧಿಕೃತವಾಗಿ, ಸ್ಪಷ್ಟವಾಗಿ ಎಚ್ಚರಿಕೆ ನೀಡಿದ ಹಾಗೂ ದೇಶವಾಸಿಗಳಲ್ಲಿ ಅವರ ಬಗೆಗೆ ಜಾಗೃತಿ ಮೂಡಿಸಿದ ಮೊದಲ ಸೇನಾಮುಖ್ಯಸ್ಥ  ಇವರೇ ಇರಬೇಕು.

2.5 ಫ್ರಂಟ್ ಫೋರ್ಸ್ ಗಳ (ಒಂದು ಫ್ರಂಟ್ ಫೋರ್ಸ್-ಪಾಕಿಸ್ತಾನ, ಮತ್ತೊಂದು ಫ್ರಂಟ್ ಫೋರ್ಸ್- ಚೀನಾ, ಉಳಿದ ಅರ್ಧ ಫ್ರಂಟ್ ಫೋರ್ಸ್- ಆಂತರಿಕ ಶತ್ರುಗಳು) ವಿರುದ್ಧ ಒಟ್ಟಿಗೆ ಹೋರಾಡಲು ಭಾರತ ಸಕ್ಷಮವಾಗಿದೆ, ಸ್ಟೋನ್ ಪೆಲ್ಟರ್ಸ್(ಸೈನಿಕರ ಮೇಲೆ ಕಲ್ಲು ತೂರಾಟ ನಡೆಸುವವರು) ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ನನ್ನ ಸೈನಿಕ ಮಿತ್ರರಿಗೆ, ಅವರ ಕುಟುಂಬಗಳಿಗೆ ಏನೆಂದು ಪ್ರತಿಕ್ರಿಯೆ ನೀಡಬೇಕು? ಎಂಬಂತಹ ಅವರ ದಿಟ್ಟ ಹೇಳಿಕೆಗಳು ಸದಾ ನೆನಪಿನಲ್ಲಿಡಬೇಕಾದ ಸಂಗತಿಗಳು. ಇದನ್ನು ಅವರ ಕೊನೆಯ ಸಂದೇಶವೆಂದೇ ತಿಳಿದುಕೊಳ್ಳಬಹುದು. ಇಂತಹ ಸಿ.ಡಿ.ಎಸ್ ರಾವತ್ ಅವರಿಗೆ ಪರಮ ವಿಶಿಷ್ಟ ಸೇವಾ ಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಯುದ್ಧ ಸೇವಾ ಮೆಡಲ್, ಸೇನಾ ಪದಕ, ವಿಶಿಷ್ಟ ಸೇವಾ ಪದಕ, ಆಪರೇಷನ್ ಪರಾಕ್ರಮ ಪದಕ, ಸೈನ್ಯ ಸೇವಾ ಪದಕ, ಹೈ ಆಲ್ಟಿಟ್ಯೂಡ್ ಸರ್ವೀಸ್ ಮೆಡಲ್, ವಿದೇಶ ಸೇವಾ ಪದಕ, ಸ್ವಾತಂತ್ರ್ಯದ 50ನೇ ವರ್ಷದ ಗೌರವ, 30 ವರ್ಷಗಳ ಸುದೀರ್ಘ ಸೇವಾ ಪದಕ, 20 ವರ್ಷಗಳ ಸುದೀರ್ಘ ಸೇವಾ ಪದಕ, 9 ವರ್ಷಗಳ ಸುದೀರ್ಘ ಸೇವಾ ಪದಕ, MONUSCO, WOUND MEDAL ಮುಂತಾದ ಗೌರವಗಳು ಸಂದಿವೆ.

ಈ ರೀತಿ ನೇರಾನೇರವಾದ ಸತ್ಯವಂತಿಕೆಯ ಮಾತುಗಳನ್ನಾಡುತ್ತಿದ್ದ ಸಿ.ಡಿ.ಎಸ್ ರಾವತ್ ಅವರನ್ನು ಶತ್ರುಗಳು ಹತ್ಯೆ ಮಾಡಿದರಾ? ನಾವು ಈ ಸಂಗತಿಯನ್ನು ಮಿಥ್ಯಾರೋಪವೆಂದು ತಳ್ಳಿ ಹಾಕಲು ಸಾಧ್ಯವಿಲ್ಲ. ಈ ದುರಂತದ ಪ್ರಕರಣವನ್ನು ಎರಡು ಆಯಾಮಗಳಲ್ಲಿ ವಿಚಾರಿಸಿ ತನಿಖೆ ಮಾಡಬೇಕಾಗುತ್ತದೆ. ಒಂದು ಶತ್ರುಗಳ ಸಂಚಿನ ಹತ್ಯೆಯ ದೃಷ್ಟಿಕೋನದಲ್ಲಿ. ಮತ್ತೊಂದು ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷಗಳಿಂದಾದ ಸಹಜ ಮರಣವೆಂಬ ದೃಷ್ಟಿಕೋನದಲ್ಲಿ. ಒಂದು ವೇಳೆ ಇದು ಯೋಜನಾಬದ್ಧ ಹತ್ಯೆಯ ಪ್ರಕರಣವಾದರೆ ಶತ್ರುಗಳು ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದಾರೆ ಎಂದರ್ಥ. ಅವರ ವಿರುದ್ಧ ಹೋರಾಡಲು ನಾವು ಮತ್ತಷ್ಟು ಸಕ್ಷಮರಾಗಬೇಕಾಗುತ್ತದೆ ಹಾಗೂ ಜಾಗೃತವಾಗಿರಬೇಕಾಗುತ್ತದೆ. ಇಂದು ನಮ್ಮ ದೇಶದ ರಕ್ಷಣಾ ಪಡೆಗಳ ಮುಖ್ಯಸ್ಥರನ್ನು ಹತ್ಯೆ ಮಾಡುವಲ್ಲಿ ಸಫಲರಾಗಿದ್ದರೆ ಆ ಶತ್ರುಗಳು ನಾಳೆ ಪ್ರಧಾನಮಂತ್ರಿ, ರಾಷ್ಟ್ರಪತಿ ಅವರ ಮೇಲೂ ಆಕ್ರಮಣ ಮಾಡಬಲ್ಲರು.  ಕೊರೊನಾದ ಹಾವಳಿ ಶುರುವಾದಾಗಿನಿಂದಲೂ ಆಂತರಿಕ ಶತ್ರುಗಳು ಹೆಚ್ಚು ಸಕ್ರಿಯರಾಗಿ ದೇಶದ ಕಲ್ಯಾಣಕಾರಿ ಮಾರ್ಗದಲ್ಲಿ ಕಂಟಕವಾಗಿ ಪರಿಣಮಿಸುತ್ತಿದ್ದಾರೆ. ಆದ್ದರಿಂದ ಈ ಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಯವರಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಬೆಂಬಲ ನೀಡಬೇಕಾಗಿದೆ. ಇನ್ನು ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷದ ಕಾರಣವಾದರೂ ಹಲವು ಪ್ರಶ್ನೆಗಳು ಮೂಡುತ್ತವೆ.

ಏಕೆಂದರೆ ಮಿ-17 ಎಂಬ ಅತ್ಯಾಧುನಿಕ ಯುದ್ಧ ವಿಮಾನದ ವಿವರಣೆಯ ಕೈಪಿಡಿಯಲ್ಲಿ ಹವಾಮಾನ ಬದಲಾವಣೆಗಳು ಕಂಡು ಬಂದರೂ, ಎರಡು ಇಂಜಿನ್ ಗಳು ಫೇಲಾದರೂ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಬಹುದಾದ ಅತ್ಯುನ್ನತ ತಂತ್ರಜ್ಞಾನವನ್ನು ಇದು ಹೊಂದಿದೆ ಎಂಬುದಾಗಿ ತಿಳಿಸಲಾಗಿದೆ. ಹಾಗೆಯೇ ಇದನ್ನು ಯುದ್ಧ ಹಾಗೂ ನೈಸರ್ಗಿಕ ವಿಪತ್ತಿನ ಕಾಲದ ರಕ್ಷಣಾತ್ಮಕ ಕಾರ್ಯಗಳಲ್ಲಿ ಕೂಡ ಬಳಸಲಾಗುತ್ತದೆ. ಇದರ ಜೊತೆಗೆ ನಾವು ಗಮನಹರಿಸಬೇಕಾದ ಮತ್ತೊಂದು ಸಂಗತಿಯೇನೆಂದರೆ ಕಳೆದ ಹಲವಾರು ದಶಕಗಳಿಂದ ನಮ್ಮ ದೇಶದಲ್ಲಿ ಸಾಮಾನ್ಯ ಯಾತ್ರಾ ವಿಮಾನಗಳಿಗಿಂತ ಸೇನಾ ಯುದ್ಧವಿಮಾನಗಳೇ ಹೆಚ್ಚು ಪತನಗೊಳ್ಳುತ್ತಿವೆ (ಸ್ವಾತಂತ್ರ್ಯಾನಂತರದಲ್ಲಿ 95 ಯಾತ್ರಾ ವಿಮಾನಗಳು ಹಾಗೂ 1751 ಸೇನಾ ವಿಮಾನಗಳು ಪತನಗೊಂಡಿವೆ ಎಂಬ ದಾಖಲೆಯಿದೆ).

ಆದ್ದರಿಂದ ಈ ಪ್ರಕರಣವನ್ನು ಕೇಂದ್ರ ಸರ್ಕಾರ ಮತ್ತು ಭಾರತೀಯ ಸೇನೆಗಳೆರಡೂ ಗಂಭೀರವಾಗಿ ವಿಶ್ಲೇಷಿಸಿ, ಸೂಕ್ತ ಕಾರ್ಯಾಚರಣೆಯ ಮೂಲಕ ಸತ್ಯವನ್ನು ಶೋಧಿಸಬೇಕಿದೆ. ಈ ರೀತಿಯ ಅನಾಹುತಗಳ ಹಿಂದಿನ ಕಾರಣವನ್ನು ತಿಳಿಯಲು ಟೈಟಾನಿಯಂ ಧಾತುವಿನಿಂದ ಮಾಡಲಾದ ಬ್ಲ್ಯಾಕ್ ಬಾಕ್ಸ್ ಅನ್ನು ವಿಮಾನದಲ್ಲಿರಿಸುತ್ತಾರೆ. ಅದರಿಂದ ಕಳೆದ 24 ಗಂಟೆಗಳ ವಾಯ್ಸ್ ರೆಕಾರ್ಡಿಂಗ್ ಮತ್ತು ಡಿಜಿಟಲ್ ಫ್ಲೈಟ್ ರೆಕಾರ್ಡಿಂಗ್ಸ್ ನ ಮಾಹಿತಿ ದೊರೆಯುತ್ತದೆ. ಇದರಿಂದ ಪೈಲಟ್ ಮತ್ತು ಏರ್ ಟ್ರಾಫಿಕಿಂಗ್ ನ ಆಫಿಸರ್ಸ್ ಗಳ ಮಧ್ಯೆ ನಡೆದಿರುವ ಸಂಭಾಷಣೆಯನ್ನು ತಿಳಿಯಬಹುದು. ಇದರ ಜೊತೆಗೆ ವಾಯುಸೇನೆಯು ಅಗತ್ಯ ತನಿಖೆಯನ್ನು ನಡೆಸಿ ಸತ್ಯವನ್ನು ಪತ್ತೆ ಹಚ್ಚಲಾಗುವುದು ಎಂದು ತಿಳಿಸುವುದರ ಮೂಲಕ ದೇಶದ ಜನರಲ್ಲಿ ಭರವಸೆ ಮೂಡಿಸಿದೆ. ಪ್ರಪಂಚದಲ್ಲಿ ಕೆಲವೇ ಕೆಲವು ದೇಶಗಳು ಕೆಲವೇ ಕೆಲವು ದೌರ್ಭಾಗ್ಯಕರ ಸಂದರ್ಭಗಳಲ್ಲಿ ಈ ರೀತಿಯ ದುರಂತಗಳನ್ನು ಕಂಡಿವೆ. ಆ ದೌರ್ಭಾಗ್ಯವನ್ನು ಈಗ ನಮ್ಮ ದೇಶವೂ ಎದುರಿಸಬೇಕಾಗಿರುವುದು ಅತ್ಯಂತ ವಿಷಾದನೀಯ.

ಅನ್ಯ ದೇಶದ ದುಃಖದಲ್ಲಿ ತಮ್ಮ ಸುಖವನ್ನು ಹುಡುಕುವ ಚೀನಾ ತನ್ನ ಅಧಿಕೃತ ಮಾಧ್ಯಮದವರ ಮೂಲಕ ಹಾಗೂ ಭಾರತ ಮಾಧ್ಯಮದ ಮುಖವಾಡ ಹಿಡಿದು ಅದಕ್ಕೆ ಗುಪ್ತಚರ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನಧಿಕೃತ ಮಾಧ್ಯಮದವರ ಮೂಲಕ ಭಾರತೀಯ ಪ್ರಜೆಗಳ ಮನದಲ್ಲಿ ಅವರ ಸೇನೆಯ ಬಗೆಗೆ ಅನುಮಾನ ಮೂಡುವಂತೆ, ಅಶಂಕಗಳು ಉತ್ಪತ್ತಿಯಾಗುವಂತೆ, ಅವಿಶ್ವಾಸಗಳು ಜನ್ಮತಾಳುವಂತೆ ಮಾಡಲು ಸಕಲ ರೀತಿಗಳಲ್ಲೂ ಪ್ರಯತ್ನ ಮಾಡುತ್ತಿದೆ.

 ಸಿ.ಡಿ.ಎಸ್ ರಾವತ್ ಅವರು ಹೇಳಿರುವಂತೆ ಈ ಸಂದರ್ಭದಲ್ಲಿ ಅರ್ಧ ಫ್ರಂಟ್ ಫೋರ್ಸ್ ನ ಆಂತರಿಕ ಶತ್ರುಗಳು ತುಂಬಾ ಸಂತೋಷ ಪಡುತ್ತಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಮೃಷ್ಟಾನ್ನ ಭೋಜನಗಳ, ಕರ್ಮಫಲದ ಬೋಧನೆಗಳ, ಖುಷಿ-ಖುಷಿಯಾದ ಚಿಹ್ನೆಗಳ ಪೋಸ್ಟ್ ಗಳನ್ನು ಹಾಕಿಕೊಂಡಿದ್ದಾರೆ. ಉರಿ ದಾಳಿ, ಪುಲ್ವಾಮಾ ದಾಳಿ, ಪಾಲ್ಘರ್ ಸಾಧುಗಳ ಮೇಲಾದ ದಾಳಿ, ರಿಂಕುಶರ್ಮಾ ಮೇಲಾದ ದಾಳಿ, ಕ್ರಿಕೆಟ್ ಮ್ಯಾಚ್ ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತಕ್ಕಾದ ಸೋಲು ಇಂತಹ ಘಟನೆಗಳನ್ನೆಲ್ಲಾ ಸಂಭ್ರಮಿಸುತ್ತಾ ಬಂದಿರುವ ಈ ಆಂತರಿಕ ಶತ್ರುಗಳು ತಮ್ಮ ಹಳೆ ಛಾಳಿಯನ್ನೇ ಮುಂದುವರಿಸುತ್ತಿದ್ದಾರೆ. ಆದರೆ ಇವರು ಏನೇ ಮಾಡಿದರೂ, ಎಷ್ಟೇ ಪ್ರಯತ್ನಿಸಿದರೂ ನಮ್ಮ ದೇಶದ ಪ್ರಜೆಗಳ ರಕ್ತದಲ್ಲಿರುವ ದೇಶಭಕ್ತಿಯನ್ನು ಹೋಗಲಾಡಿಸಲು ಸಾಧ್ಯವೇ ಇಲ್ಲ. ದುರ್ಘಟನೆಯಲ್ಲಿ ಮರಣ ಹೊಂದಿದ ಸೈನಿಕರ ಶವಗಳನ್ನು ಸಾಗಿಸುತ್ತಿದ್ದ ಸೇನಾ ವಾಹನಗಳು ರಸ್ತೆಯಲ್ಲಿ ತೆರಳುತ್ತಿದ್ದಾಗ ತಮಿಳುನಾಡಿನ ಜನರು ಮೊಳಗಿಸಿದ ‘ಭಾರತ್ ಮಾತಾ ಕೀ ಜೈ’, ‘ವೀರ ಒಣಕ್ಕಂ’ ಎಂಬ ಜಯದ್ಘೋಷಗಳು ಹಾಗೂ ದೆಹಲಿಯಲ್ಲಿ ಈ ವೀರ ಸೈನಿಕರ ಅಂತಿಮಯಾತ್ರೆಯ ಮೆರವಣಿಗೆಯಲ್ಲಿ ಕಿಕ್ಕಿರಿದ ಜನಸ್ತೋಮದ ‘ವಂದೇ ಮಾತರಂ’, ‘ಜೈ ಹಿಂದ್’ ಜೈಕಾರಗಳು ಒಟ್ಟಾರೆ ಹಿಂದೆಂದಿಗಿಂತಲೂ ಅಭೂತಪೂರ್ವವಾಗಿ ಸೇನಾನಿಗಳನ್ನು ಬೀಳ್ಕೊಟ್ಟಿರುವ ನಮ್ಮ ಪ್ರಜೆಗಳ ರಾಷ್ಟ್ರೀಯತೆಯ ಝೇಂಕಾರವು ದೇಶದ್ರೋಹಿಗಳ ಎದೆಯಲ್ಲಿ ನಡುಕ ಹುಟ್ಟಿಸಿರಲು ಸಾಕು. ಅದರ ಜೊತೆಗೆ ಹಲವಾರು ಮಿತ್ರ ದೇಶಗಳಿಂದ ಆಗಮಿಸಿದ್ದ ಸೇನಾ ಮುಖ್ಯಸ್ಥರು, ಸೇನಾ ರಾಯಭಾರಿಗಳು, ನಮ್ಮದೇ ಸೇನೆಯ ಭಾರಿ ಸಂಖ್ಯೆಯ ಸೇನಾಧಿಕಾರಿಗಳು ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದ್ದಾರೆ.

ಸೈನಿಕರಾಗಲಿ ಅಥವಾ ಮತ್ತ್ಯಾವುದೇ ವೃತ್ತಿಪರರಾಗಲಿ ಒಟ್ಟಾರೆ ಎಲ್ಲಾ ಜೀವಿಗಳಿಗೂ ಸಾವು ಖಚಿತ. ಆದರೆ ಸೈನಿಕರು ಅವರ ಸಾವಿನ ಬಗ್ಗೆ ಹೆಚ್ಚು ಜಾಗೃತಿಯಿಂದಿರುತ್ತಾರೆ. ಯಾವ ಕ್ಷಣದಲ್ಲಾದರೂ ತಮಗೆ ಸಾವು ಸನ್ನಿಹಿತವಾಗಬಹುದೆಂಬ ಅರಿವಿದ್ದರೂ ಭಾರತಮಾತೆಯ ರಕ್ಷಣೆಗಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಳ್ಳುವ ಸೈನಿಕರ ಆದರ್ಶದ ಬದುಕಿಗೆ ಅಂತ್ಯವಿರಲು ಸಾಧ್ಯವಿಲ್ಲ! ಆದ್ದರಿಂದಲೇ ವೀರಪುತ್ರರು ಎಂದೆಂದಿಗೂ ಅಮರ. ಸೈನಿಕರು ತಮ್ಮ ಪ್ರಾಣ ಹೋಗುವುದಾದರೆ ರಣಭೂಮಿಯಲ್ಲೇ ಅರ್ಥಾತ್ ಮಾತೃಭೂಮಿಯ ಸಮ್ಮಾನಕ್ಕಾಗಿ ಸಂಘರ್ಷ ಮಾಡುವಾಗಲೇ ಹೋಗಬೇಕು ಎಂಬ ಮಹದಿಚ್ಛೆಯನ್ನು ಹೊಂದಿರುತ್ತಾರೆ. ಆದರೆ ಈ ದುರಂತಕರ ಘಟನೆಗಳಲ್ಲೋ ಅಥವಾ ಭಯೋತ್ಪಾದಕರ ಹೇಡಿತನದ ಕೃತ್ಯಗಳಲ್ಲೋ ಅವರ ಬಲಿದಾನವಾದರೆ ಆ ಜೀವಕ್ಕೆ ಎಷ್ಟು ಘಾಸಿಯಾಗುವುದೋ ಏನೊ! ಸಿ.ಡಿ.ಎಸ್ ರಾವತ್ ಅವರು ಇದೇ ಮುಂದಿನ ವರ್ಷ ಜನವರಿಯಲ್ಲಿ ನಿವೃತ್ತಿ ಹೊಂದಬೇಕಾಗಿತ್ತು ಎಂದು ಮೂಲಗಳು ತಿಳಿಸಿವೆ. ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ಆ ಉತ್ಕೃಷ್ಟ ಜೀವನಕ್ಕೆ ನಿವೃತ್ತಿಯೇ ಬೇಡವಾಯಿತೇನೊ! ಜೀವಂತವಾಗಿದ್ದಾಗ ಎರಡು ಫ್ರಂಟ್ ಫೋರ್ಸ್ ಗಳ ವಿರುದ್ಧ ಹೋರಾಡಿ ಜಯಶಾಲಿಯಾಗಿದ್ದ ಸಿ.ಡಿ.ಎಸ್ ರಾವತ್ ಅವರು ತಮ್ಮ ಮರಣದಲ್ಲೂ ಅರ್ಧ ಫ್ರಂಟ್ ಫೋರ್ಸ್ ನ ವಿರುದ್ಧ ಜಯಗಳಿಸಿ ಯಶಸ್ವಿಯಾಗಿದ್ದಾರೆ.

“ಇಂದು ನಮ್ಮ ರಾಷ್ಟ್ರಧ್ವಜ ಹಾರಾಡುತ್ತಿರುವುದು ಗಾಳಿಯಿಂದಲ್ಲ, ಪ್ರತಿಯೊಬ್ಬ ಹುತಾತ್ಮ ಸೈನಿಕನ ಕೊನೆಯ ಉಸಿರಿನಿಂದ”, ಹೌದು. ಇದರ ಜೊತೆಗೆ ಆ ಹುತಾತ್ಮ ಸೈನಿಕನ ಪರಿವಾರದವರ ತ್ಯಾಗದಿಂದ! ಆ ಪರಿವಾರದವರಿಗೆ ನಾವೇನೆಂದು ಸಾಂತ್ವನ ಹೇಳಲು ಸಾಧ್ಯ? ಈ ದೇಶದ ದೇಶಭಕ್ತ ಪ್ರಜೆಗಳಾದ ನಾವು ಅವರಿಗೆ ಭಗತ್ ಸಿಂಗ್ ತನ್ನ ತಾಯಿಗೆ ಆತನ ಮರಣಾನಂತರ ಈ ದೇಶದ ಎಲ್ಲಾ ಮಕ್ಕಳನ್ನು ನಿನ್ನ ಮಕ್ಕಳೆಂದೇ ತಿಳಿ, ಅವರಲ್ಲೇ ತನ್ನನ್ನು ಕಾಣು ಎಂದು ಹೇಳಿದ್ದ ಸಕಾರಾತ್ಮಕ ಮಾತುಗಳನ್ನಷ್ಟೇ ಹೇಳಬಹುದು. ಸೈನಿಕರು ನಮ್ಮ ಕುಟುಂಬದವರು, ನಾವೂ ಕೂಡ ಸೈನಿಕರ ಕುಟುಂಬದವರು ಎಂಬಂತೆ ಬದುಕುವ ಸಂಕಲ್ಪ ನಮ್ಮದಾಗಲಿ.

 ಸೈನಿಕರ ಬಲಿದಾನವು ಮೃತ್ಯುವಿನ ಕಾರಣದ ಮಹತ್ವವನ್ನು ಸೂಚಿಸುತ್ತದೆ. ಹೇಗಿದ್ದರೂ ಸಾವು ಎಂಬುದು ಖಾತ್ರಿಯಾಗಿರುವಾಗ ಮನುಷ್ಯರು ತಾವು ಯಾವ ಆದರ್ಶಕ್ಕಾಗಿ ಸಾಯಲು ಸಿದ್ಧರಿದ್ದೇವೆ ಎಂಬುದನ್ನು ತೀರ್ಮಾನಿಸಿ, ಅದರಂತೆ ಬದುಕಲು ಆರಂಭಿಸಿದರೆ ಅದಕ್ಕಿಂತ ಮಹತ್ತರವಾದ ಬದುಕು ಮತ್ತೊಂದಿರಲು ಸಾಧ್ಯವಿಲ್ಲ! ಇಂದು ನಾವು ಮಹಾನ್ ದೇಶಭಕ್ತರನ್ನು ಕಳೆದುಕೊಂಡಿರುವುದು ಬಹು ದೊಡ್ಡ ನಷ್ಟವೆಂಬುದು ನಿಜ! ಆದರೆ ವ್ಯಕ್ತಿಗೆ ಸಾವಿರಬಹುದು, ಅವರ ವ್ಯಕ್ತಿತ್ವ-ಆದರ್ಶಗಳಿಗಲ್ಲ ಎಂಬುದನ್ನು ಮರೆಯದಿರೋಣ‌. ಅವರ ದೇಶಭಕ್ತಿ, ಕ್ಷಾತ್ರಗುಣ, ನಿಷ್ಠಾವಂತಿಕೆಯಂತಹ ಮಹಾನ್ ಆದರ್ಶಗಳು ಸೂಕ್ತ ವ್ಯಕ್ತಿಗಳ ಮೂಲಕ ಮತ್ತಷ್ಟು ಮಗದಷ್ಟು ನಿರಂತರವಾಗಿ ಬೆಳಗುತ್ತಾ ಮುಂದುವರಿಯುವುದು.

ಸಿಂಚನ.ಎಂ.ಕೆ , ಮಂಡ್ಯ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಐಎಎಸ್, ಐಪಿಎಸ್ ಪರೀಕ್ಷೆಗಳಿಗೆ 'ಸಮುತ್ಕರ್ಷ' ದಿಂದ ತರಬೇತಿ

Thu Dec 23 , 2021
ಹುಬ್ಬಳ್ಳಿ :ಸಮುತ್ಕರ್ಷ ಐಎಎಸ್ ಕರ್ನಾಟಕ ವತಿಯಿಂದ ರಾಜ್ಯದ ವಿದ್ಯಾರ್ಥಿಗಳಿಗಾಗಿ ಜನವರಿ ೧ ರಿಂದ ಹುಬ್ಬಳ್ಳಿಯಲ್ಲಿ ನಾಗರಿಕ ಸೇವಾ ಪರೀಕ್ಷೆಗಳಿಗೆ ತರಬೇತಿಯನ್ನು ವಿದ್ಯಾನಗರದ ಕೆಎಲ್ಇ ಟೆಕ್ ಯೂನಿವರ್ಸಿಟಿ ಕ್ಯಾಂಪಸ್ ನಲ್ಲಿ ಆರಂಭಿಸುತ್ತಿದ್ದೇವೆ ಎಂದು ಸಮುತ್ಕರ್ಷ ಟ್ರಸ್ಟ್ ಕಾರ್ಯದರ್ಶಿ ಜಿತೇಂದ್ರ ನಾಯಕ ತಿಳಿಸಿದರು. ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಐಎಎಸ್, ಐಪಿಎಸ್, ಕೆಎಎಸ್ ಪರೀಕ್ಷೆಗಳಿಗೆ ತರಬೇತಿ ನಡೆಯಲಿದೆ. ದೆಹಲಿಯ ನುರಿತ ತರಬೇತಿದಾರರಿಂದ ಮತ್ತು ಹಿರಿಯ ಅಧಿಕಾರಗಳ ವಿಶೇಷ ತರಗತಿಗಳು ಹಾಗೂ ಸಂವಾದ ಕಾರ್ಯಕ್ರಮವನ್ನು […]