ನಾಡಿನ ಗಣ್ಯರ ದೃಷ್ಟಿಯಲ್ಲಿ ಮತಾಂತರ

ಇಂದು ಮತಾಂತರ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಕರ್ನಾಟಕ ಸರ್ಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಪ್ರಯತ್ನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚರ್ಚೆ ಪ್ರಾರಂಭವಾಗಿದೆ. ಈ ರೀತಿಯ ಪ್ರಯತ್ನಗಳಾಗಲೀ, ಕಾಯ್ದೆಗಳಾಗಲೀ ಇದೇ ಮೊದಲಲ್ಲ. ಹಿಂದೆ ತಮಿಳುನಾಡಿನಲ್ಲಿ ಶ್ರೀಮತಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ, ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಆಗ, ತಮಿಳುನಾಡಿನ ಚರ್ಚ್ ಸಂಬಂಧಿತ ಸಂಸ್ಥೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದವು. ಅವುಗಳು ಅಲ್ಲಿಗೇ ನಿಲ್ಲದೆ, ತಾವು ನಡೆಸುತ್ತಿರುವ ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಇತ್ಯಾದಿ ಸೇವಾಸಂಸ್ಥೆಗಳನ್ನು ನಿಲ್ಲಿಸಿಬಿಡುವೆ ಬೆದರಿಕೆಯನ್ನೂ ಹಾಕಿದ್ದವು. ತಾವು ಸೇವೆ ಮಾಡುತ್ತಿರುವುದು ಮತಾಂತರಕ್ಕಲ್ಲ ಎಂದು ಅವರೇ ಹೇಳುತ್ತಾರೆ. ಆದರೆ, ಮತಾಂತರ ನಿಷೇಧದ ವಿಷಯ ಬಂದಾಗ, ಸೇವೆ ನಿಲ್ಲಿಸುವ ಮಾತನಾಡುತ್ತಾರೆ! ಸೇವೆಗೂ ಮತಾಂತರಕ್ಕೂ ಯಾವ ಸಂಬಂಧವೂ ಇಲ್ಲದಿದ್ದಲ್ಲಿ, ಅವನ್ನು ನಿಲ್ಲಿಸುವ ಬೆದರಿಕೆ ಏಕೆ?

ಈ ಸಂದರ್ಭದಲ್ಲಿ ಇದೇ ವಿಷಯದ ಕುರಿತಾಗಿ ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದ ಮುಂತಾದ ಮಹಾಪುರುಷರು ಏನು ಹೇಳಿದ್ದರು ಎಂಬುದನ್ನು ತಿಳಿದಾಗ ಈ ಕುರಿತಾಗಿ ಸ್ಪಷ್ಟ ನಿರ್ಧಾರಕ್ಕೆ ಬರಲು ಸಹಾಯವಾದೀತು.

ಮಹಾತ್ಮ ಗಾಂಧೀಜಿ:

ಗಾಂಧೀಜಿಯವರಿಗೆ ಏಸು ಕ್ರಿಸ್ತನ ಬಗ್ಗೆ ಅಪಾರ ಗೌರವವಿತ್ತು. ಮುಖ್ಯವಾಗಿ “ಗುಡ್ಡದ ಮೇಲಿನ ಉಪದೇಶ (Sermons on the mount) ನನ್ನ ಹೃದಯವನ್ನು ನೇರವಾಗಿ ತಟ್ಟಿತು” ಎಂದವರು ಹೇಳಿದ್ದಾರೆ. ಅವರು ಆಗಾಗ ಕ್ರೈಸ್ತರ ಪ್ರಾರ್ಥನಾ ಸಭೆಗಳಲ್ಲಿ ಭಾಗವಹಿಸುತ್ತಿದ್ದರು ಮತ್ತು ಅವರ ಅನೇಕ ಮತಗ್ರಂಥಗಳನ್ನು ಶ್ರದ್ಧೆಯಿಂದ ಅಧ್ಯಯನ ಮಾಡಿದ್ದರು.

ಆದರೆ ಆಧುನಿಕ ಕ್ರೈಸ್ತ ಮತದ ಕಾರ್ಯಚಟುವಟಿಕೆಗಳನ್ನು ಅವರು ಕಟುವಾಗಿ ಟೀಕಿಸುತ್ತಿದ್ದರು. 22.9.1921 ರ ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ಈ ರೀತಿ ಬರೆದಿರುವರು: “ಇಂದು ಚಾಲ್ತಿಯಲ್ಲಿರುವ ಪಾಶ್ಚಿಮಾತ್ಯ ಕ್ರೈಸ್ತಮತವು ಕ್ರಿಸ್ತನ ಮೂಲ ಕ್ರೈಸ್ತಮತದ ನಿರಾಕರಣೆಯೇ ಸರಿ. ಇಂದು ಕ್ರಿಸ್ತನು ನಮ್ಮ ನಡುವೆ ಬದುಕಿರುತ್ತಿದ್ದರೆ, ಆಧುನಿಕ ಕ್ರೈಸ್ತ ಸಂಸ್ಥೆಗಳು, ಅವರ ಸಾರ್ವಜನಿಕ ಪೂಜಾಗೃಹ ಅಥವಾ ಆಧುನಿಕ ಮತ ಗುರುಗಳ ಮಂಡಲಿಯನ್ನು ಒಪ್ಪುತ್ತಿದ್ದ ಎಂದು ನಾನು ಕನಸಿನಲ್ಲೂ ಎಣಿಸಲಾರೆ”.

21.3.1929 ರ ‘ಯಂಗ್ ಇಂಡಿಯಾ’ ಸಂಚಿಕೆಯಲ್ಲಿ: “ದುರದೃಷ್ಟವಶಾತ್ ಭಾರತದಲ್ಲಿ ಕಳೆದ ನೂರೈವತ್ತು ವರ್ಷಗಳಿಂದ ಕ್ರೈಸ್ತ ಮತ್ ಬ್ರಿಟಿಷ್ ಆಳ್ವಿಕೆಯೊಂದಿಗೆ ಹಾಸುಹೊಕ್ಕಾಗಿ ಬೆರೆತು ಹೋಗಿದೆ. ಅದು (ಕ್ರಿಸ್ತ ಧರ್ಮ) ಪ್ರಪಂಚದಲ್ಲಿ ಬಲಿಷ್ಠವಾದ ಬಿಳಿಯ ಜನಾಂಗದವರು, ದುರ್ಬಲ ಜನಾಂಗಗಳ ಮೇಲೆ ನಡೆಸುತ್ತಿರುವ ಸಾಮ್ರಜ್ಯಶಾಹಿ ಶೋಷಣೆಗೆ ಹಾಗೂ ಭೋಗವಾದಿ ನಾಗರೀಕತೆಗೆ ಇನ್ನೊಂದು ಹೆಸರಾಗಿ ನಮಗೆ ತೋರುತ್ತದೆ. ಆದುದರಿಂದ ಭಾರತಕ್ಕೆ ಕ್ರೈಸ್ತಮತದ ಕೊಡುಗೆಯೂ ಬಹುಪಾಲು ವಿರೋಧಾತ್ಮಕ ವಾಗಿಯೇ ಇದೆ”.

12.6.1937 ರ ‘ಹರಿಜನ’ ಪತ್ರಿಕೆಯಲ್ಲಿ ಮತಾಂತರ ಕುರಿತಾಗಿ ಹೀಗೆ ಹೇಳಿದ್ದಾರೆ: “ಅವರು ಮಾಡಿರುವ ಮತಾಂತರಗಳು – ಅವು ಎಲ್ಲಿಯೇ ನಡೆದಿರಲಿ – ನಿಜವಾದ ಆಧ್ಯಾತ್ಮಿಕ ಅರ್ಥದಲ್ಲಿ ಮತಾಂತರಗಳಲ್ಲ. ಅವು ತಮ್ಮ ಅನುಕೂಲಕ್ಕಾಗಿ ಮಾಡಿದ ಮತಾಂತರಗಳು ಅಷ್ಟೆ”. ಅದೇ ಸಂಚಿಕೆಯಲ್ಲಿ ಮುಂದುವರೆಯುತ್ತಾ, “ಸಾಮಾಜಿಕ ಕಾರ್ಯ ಎನ್ನುವುದು ಗಾಳಕ್ಕೊಡ್ಡಿದ ಹುಳು. ಆದರೆ, ಮೀನನ್ನು ಹಿಡಿಯುವ ಗಾಳವೆಂದರೆ ಮುಕ್ತಿಯ ಆಸೆಯೇ. ಅವರು ಸಮಾಜ ಸೇವೆ ಮಾಡುವುದು ಸೇವೆಗಾಗಿ ಅಲ್ಲ. ಸಮಾಜಸೇವೆಯನ್ನು ಪಡೆದವರಿಗೆ ಮುಕ್ತಿ ದೊರಕಿಸಲು ನೆರವಾಗುವುದಕ್ಕೆ. ಕ್ರೈಸ್ತರು ನಮ್ಮ ನಡುವೆ ಒಂದಾಗಿ ಜೀವನ ಸಾಗಿಸಲೆಂಬ ಉದ್ದೇಶದಿಂದ ಬಂದಿದ್ದಲ್ಲಿ, ಹಾಗೂ ತಮ್ಮ ಜೀವನದಲ್ಲೇನಾದರೂ ಸುವಾಸನೆ ಇದ್ದಿದ್ದಲ್ಲಿ, ಅದನ್ನು ನಮ್ಮಲ್ಲೂ ಪಸರಿಸಿದ್ದಲ್ಲಿ, ಭಾರತದ ಇತಿಹಾಸವೇ ಬೇರೆಯಾಗುತ್ತಿತ್ತು. ಆಗ ಇಬ್ಬರಲ್ಲೂ ಪರಸ್ಪರ ಸೌಹಾರ್ದ ಬೆಳೆಯುತ್ತಿತ್ತು. ಸಂಶಯಕ್ಕೆ ಆಸ್ಪದ ಇರುತ್ತಿರಲಿಲ್ಲ”. 

ಮತಪ್ರಚಾರಕ ಮಿತ್ರರು ಅವರನ್ನು ತಪ್ಪದೆ ಕೇಳುತ್ತಿದ್ದ ಪ್ರಶ್ನೆಯೊಂದಿತ್ತು. ಹಾಗೂ ಗಾಂಧೀಜಿ ಅಷ್ಟೇ ಕಟ್ಟುನಿಟ್ಟಾಗಿ ಉತ್ತರಿಸುತ್ತ ಬಂದಿದ್ದರು – “ಮತಾಂತರ ಮಾಡಲು ಭಾರತಕ್ಕೆ ಬರುವ ಮತಪ್ರಚಾರಕರನ್ನು ನೀವು ಬಯಸುತ್ತೀರಾ?” ಇದಕ್ಕೆ ಗಾಂಧೀಜಿಯವರ ಉತ್ತರ ಹೀಗಿತ್ತು: “…ನನ್ನ ಕೈಯಲ್ಲಿ ಅಧಿಕಾರವಿದ್ದು, ಕಾನೂನು ಮಾಡಲು ಸಾಧ್ಯವಿದ್ದಿದ್ದರೆ, ಎಲ್ಲ ಮತಾಂತರಗಳನ್ನೂ ಖಂಡಿತವಾಗಿ ತಡೆಯುತ್ತಿದ್ದೆ. ಹಿಂದೂ ಮನೆಗಳಲ್ಲಿ ಮತಪ್ರಚಾರಕರು ಪ್ರವೇಶಿಸಿದರೆಂದರೆ ಅವರ ಸಂಸಾರವೇ ಒಡೆದುಹೋಗುತ್ತದೆ. ಅವರ ಉಡುಪುಗಳಲ್ಲಿ, ನಡವಳಿಕೆಯಲ್ಲಿ, ಮಾತಿನಲ್ಲಿ, ಆಹಾರ ಪಾನೀಯಗಳಲ್ಲಿ, ಎಲ್ಲದರಲ್ಲೂ ಬದಲಾವಣೆಯಾಗುತ್ತದೆ”.

23.4.1931 ರ ‘ಯಂಗ್ ಇಂಡಿಯಾ’ ಸಂಚಿಕೆಯಲ್ಲಿ: “ಮಾನವೀಯ ಸೇವಾಕಾರ್ಯದ ಹೆಸರಿನಲ್ಲಿ ಮತಾಂತರ ಮಾಡುವುದು ಸೌಮ್ಯವಾಗಿ ಹೇಳಬೇಕೆಂದರೆ ಅನಾರೋಗ್ಯಕರ … ಈಚಿನ ದಿನಗಳಲ್ಲಿ ಬೇರೆಲ್ಲದರ ಹಾಗೆ ಮತಾಂತರವೂ 1ವ್ಯಾಪಾರವಾಗಿ ಹೋಗಿದೆ. ಒಬ್ಬರನ್ನು ಮತಾಂತರಿಸಲು ಎಷ್ಟು ಖರ್ಚು ತಗುಲುತ್ತದೆಂದೂ, ‘ಮುಂದಿನ ಕೊಯ್ಲಿಗೆ’ ಎಷ್ಟು ಅಂದಾಜು ವೆಚ್ಚ ಬರಲಿದೆಯೆಂದೂ ತಿಳಿಸುವ ಮತಪ್ರಚಾರಕರ ವರದಿಯೊಂದನ್ನ ಓದಿದೆ ನೆನಪಾಗುತ್ತದೆ”.

ಮತಾಂತರವು ತಮ್ಮ ಮೂಲಭೂತ ಹಕ್ಕು ಎಂದು ಕ್ರೈಸ್ತ ಮಿಷನರಿಗಳು ಹೇಳುತ್ತಿದ್ದಾಗ ಅದಕ್ಕುತ್ತರವಾಗಿ, “ಆಧ್ಯಾತ್ಮಿಕ ಕ್ಷೇತ್ರದಲ್ಲಿ ಹಕ್ಕು ಎಂದು ಹೇಳುವಂತದ್ದೇನೂ ಇಲ್ಲ” ಎಂದು 3.4.1937ರ ‘ಹರಿಜನ’ ಸಂಚಿಕೆಯಲ್ಲಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಒಂದು ಸಲ ಓರ್ವ ಮಿಷನರಿ ಮಹಿಳೆ ಮತಾಂತರಕ್ಕೆ ಬೈಬಲ್ಲಿನಲ್ಲಿರುವ ಧಾರ್ಮಿಕ ಆಧಾರವನ್ನು ಪ್ರಸ್ತಾಪಿಸಿ ಒಂದು ವಾದವನ್ನು ಮಂಡಿಸಿದಳು: “… ಆದರೆ ಗಾಂಧಿಯವರೇ, ಮತಾಂತರವನ್ನು ನೀವೇಕೆ ವಿರೋಧಿಸುವಿರಿ? ಉತ್ತಮವಾಗಿ ಬಾಳುವಂತೆ ಜನರನ್ನು ಆಹ್ವಾನಿಸಲು ಬೈಬಲ್‌ನಲ್ಲಿಯೇ ಸಾಕಷ್ಟು ಅಧಿಕಾರವನ್ನು ನಮಗೆ ನೀಡಲಾಗಿದೆಯಲ್ಲ?”. ಅದಕ್ಕೆ 11.5.1935 ರ ‘ಹರಿಜನ’ದಲ್ಲಿ ಹೀಗೆಂದಿದ್ದಾರೆ: “ಸ್ವಾರ್ಥದ ಲವಲೇಶವೂ ಇಲ್ಲದ ಸೇವೆಯೇ ಅತ್ಯುನ್ನತವಾದ ಧರ್ಮ”.

20.10.1927 ರ ‘ಯಂಗ್ ಇಂಡಿಯಾ’ ಸಂಚಿಕೆಯಲ್ಲಿ: “ಭಾರತಕ್ಕೆ ಕ್ರಿಸ್ತನ ಬಗೆಗೆ ಓದಿಸುವುದನ್ನು ಬಿಟ್ಟು ಪರ್ವತದ ಮೇಲಿನ ಉಪದೇಶಕ್ಕೆ ಒಪ್ಪುವಂತಹ ಬಾಳನ್ನು ಅವರು ಬಾಳಿದ್ದರೆ ಸಾಕಾಗಿತ್ತು. ಭಾರತ ಅವರನ್ನು ಅನುಮಾನಿಸುವುದನ್ನು ಬಿಟ್ಟು, ತಮ್ಮ ಮಕ್ಕಳ ನಡುವೆ ಬದುಕು ನಡೆಸುವ ಅವರನ್ನು ಮೆಚ್ಚಿಕೊಳ್ಳುತ್ತಿತ್ತು. ಅವರ ಸಾನ್ನಿಧ್ಯದಿಂದ ನೇರ ಪ್ರಯೋಜನ ಪಡೆಯುತ್ತಿತ್ತು”.

ಕ್ರೈಸ್ತ ಧರ್ಮದಿಂದ ಮರಳಿ ಬಗ್ಗೆ ಅವರು (25.9.1936) ‘ಹರಿಜನ’ದಲ್ಲಿ ಈ ರೀತಿ ಬರೆದಿದ್ದಾರೆ: “ಭಯದಿಂದಲೋ, ಒತ್ತಾಯದಿಂದಲೋ, ಬಡತನದಿಂದಲೋ, ಆರ್ಥಿಕ ಲಾಭದ ಆಸೆಯಿಂದಲೋ, ಒಬ್ಬ ಮನುಷ್ಯ ಬೇರೆ ಮತಕ್ಕೆ ಸೇರಿದನೆಂದರೆ ಅದನ್ನು ಮತಾಂತರ ಎಂದು ಕರೆಯುವುದೇ ತಪ್ಪು. ಕಳೆದ ಎರಡು ವರ್ಷಗಳಲ್ಲಿ ನಡೆದಿರುವ ಅನೇಕ ಸಾಮೂಹಿಕ ಮತಾಂತರಗಳೂ ಇಂಥ ಕೋಟಾ ನಾಣ್ಯಗಳೇ. ಆದುದರಿಂದ ನಾನು ಅಂಥಹ ಎಲ್ಲ ಪಶ್ಚಾತ್ತಾಪಿಗಳನ್ನೂ ಯಾವುದೇ ಬಗೆಯ ಅಬ್ಬರ ಆಡಂಬರವಿಲ್ಲದೇ, ಶುದ್ಧಿವಿಧಿಯೂ ಇಲ್ಲದೆ – ಹಿಂದೂ ಧರ್ಮಕ್ಕೆ ಮತ್ತೆ ಸೇರಿಸಿಕೊಳ್ಳುತ್ತೇನೆ. ಇಂಥ ಪ್ರಸಂಗಗಳಲ್ಲಿ ಶುದ್ಧಿಯ ಅಗತ್ಯ ಕಾಣುವುದಿಲ್ಲ. ಅವನು ಎಸಗಿದ ತಪ್ಪಿಗಾಗಿ, ಪಶ್ಚಾತಾಪ ಪಟ್ಟು ಮರಳಿ ಸ್ವಧರ್ಮಕ್ಕೆ ಬಂದದ್ದೇ ಸಾಕಷ್ಟು ಪಶ್ಚಾತ್ತಾಪವಾಯಿತವನಿಗೆ”.

ಸ್ವಾಮಿ ವಿವೇಕಾನಂದ:

ಮಹಾತ್ಮಾ ಗಾಂಧೀಜಿಯವರಂತೆಯೇ ವಿವೇಕಾನಂದರೂ ಕ್ರಿಸ್ತನ ಬಗ್ಗೆ ಗೌರವ ಭಾವನೆ ಉಳ್ಳವರಾಗಿದ್ದರು. ಅವರು 4 ವರ್ಷಗಳ ಕಾಲ ಕ್ರೈಸ್ತ ದೇಶಗಳಲ್ಲಿ ಪ್ರವಾಸ ಮಾಡಿದವರಾಗಿದ್ದರು. ಭಾರತದ ಉದ್ದಗಲಕ್ಕೂ ತಿರುಗಾಡಿದ ಅವರು ಕ್ರೈಸ್ತ ಪಾದ್ರಿಗಳ ಅತಿ ಘೋರ ಚಿತ್ರವನ್ನು ಬಟ್ಟಬಯಲುಗೊಳಿಸಿರುವುದನ್ನು ನೋಡಿ: “ಹಣ ಸಂಗ್ರಹಕ್ಕಾಗಿ ಅಮೇರಿಕದಲ್ಲಿ ಅವರು ಕೈಗೊಳ್ಳುತ್ತಿರುವ ಕೆಲವು ವಿಧಾನಗಳ ಬಗ್ಗೆ ನನ್ನ ತೀವ್ರ ವಿರೋಧವಿದೆ. ಅಲ್ಲಿನ ಶಾಲಾ ಮಕ್ಕಳು ಓದುತ್ತಿರುವ ಪುಸ್ತಕಗಳಲ್ಲಿ ಎಂತೆಂತಹ ಚಿತ್ರಗಳಿವೆ ಬಲ್ಲಿರಾ? ಹಿಂದು ತಾಯಿಯೊಬ್ಬಳು ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳನ್ನೇ ಗಂಗಾನದಿಯಲ್ಲಿನ ಮೊಸಳೆಗಳಿಗೆ ಎಸೆಯುತ್ತಿದ್ದಾಳೆ! ಇದರ ಅರ್ಥವೇನು? ಹೆಚ್ಚಿನ ಸಹಾನುಭೂತಿ, ಹೆಚ್ಚಿನ ಹಣ ಕೀಳುವ ಸಲುವಾಗಿ. ತಾಯಿಯ ಬಣ್ಣ ಕಪ್ಪು ಮಗುವಿನ ಬಣ್ಣ ಬಿಳಿ – ಈ ರೀತಿಯಾಗಿ ಚಿತ್ರಿಸಲಾಗಿದೆ. ಪತಿಯೊಬ್ಬ ತನ್ನ ಪತ್ನಿಯನ್ನು ಸುಡುಗಂಬಕ್ಕೆ ಕಟ್ಟಿ, ಸ್ವಂತ ಕೈಗಳಿಂದ ಆಕೆಯನ್ನು ಜೀವಂತ ಸುಡುತ್ತಿದ್ದಾನೆ – ಆಕೆ ಭೂತವಾಗಿ ತನ್ನ ವೈರಿಯನ್ನು ಹಿಂಸಿಸಬೇಕು ಎಂದು ಆತನ ಉದ್ದೇಶವಂತೆ! ದೊಡ್ಡರಥವೊಂದು ತನ್ನ ಚಕ್ರಗಳ ಕೆಳಗೆ ಮನುಷ್ಯರನ್ನು ನಜ್ಜುಗುಜ್ಜಾಗಿಸುತ್ತದೆ! ಇವೆಲ್ಲದರ ಅರ್ಥವೇನು? ಕ್ರೈಸ್ತ ಮಹನೀಯರೊಬ್ಬರು ಮೆಮ್‌ಫೀಸ್‌ ಎಂಬ ಸ್ಥಳದಲ್ಲಿ ಮಾಡಿರುವ ಉಪದೇಶವನ್ನು ನಾನೂ ಕೇಳಿರುವೆ. ಭಾರತದ ಪ್ರತಿಯೊಂದು ಹಳ್ಳಿಯಲ್ಲೂ ಕೆರೆಗಳ ತುಂಬಾ ಸಣ್ಣ ಶಿಶುಗಳ ಎಲುಬುಗಳೇ ತುಂಬಿಕೊಂಡಿರುತ್ತವಂತೆ!!”.

“ಕ್ರಿಸ್ತನ ಶಿಷ್ಯರೆನಿಸಿ ಇವರು ತಮ್ಮ ಮಕ್ಕಳಿಗೆಲ್ಲ ಹಿಂದುಗಳೆಂದರೆ ನೀಚರು, ಪಾಪಿಗಳು, ಜಗತ್ತಿನ ಅತಿ ಭಯಂಕರ ಭೂತಗಳು ಎನಿಸುವಂತೆ ಕಲಿಸುತ್ತಿದ್ದಾರಲ್ಲ, ಹಿಂದುಗಳಿಂದ ಇವರಿಗಾಗಿರುವ ತೊಂದರೆಯೇನು? ತಮ್ಮ ಮಕ್ಕಳಿಗೆ ಇವರು ನೀಡುವ ಭಾನುವಾರದ ಶಾಲಾ ಶಿಕ್ಷಣದ ಒಂದಿಷ್ಟು ಭಾಗ ಎಂದರೆ – ಕ್ರೈಸ್ತನಲ್ಲದಿರುವ ಪ್ರತಿಯೊಬ್ಬನನ್ನು – ಅದರಲ್ಲೂ ವಿಶೇಷವಾಗಿ ಹಿಂದೂವನ್ನು ದ್ವೇಷಿಸಬೇಕು. ಪರಿಣಾಮವಾಗಿ ತಮ್ಮಲ್ಲಿನ ಒಂದೊಂದು ಚಿಕ್ಕಾಸನ್ನೂ ಬಾಲ್ಯದಿಂದಲೇ ಅವರು ತಮ್ಮ ಪ್ರಚಾರ ಸಂಸ್ಥೆಗೆ ನೀಡುವಂತಾಗಬೇಕು”.

ಸತ್ಯಕ್ಕಾಗಿ ಅಲ್ಲದಿದ್ದರೂ ಕನಿಷ್ಠ ನೈತಿಕತೆಗಾದರೂ ಕ್ರೈಸ್ತಪಾದ್ರಿಗಳು ತಮ್ಮ ಸ್ವಂತ ಮಕ್ಕಳಿಗೆ ಇಂತಹ ಸಂಗತಿಗಳನ್ನು ಹೇಳದಿರಲಿ. ಈ ರೀತಿಯಲ್ಲೇ ಬೆಳೆದ ಮಕ್ಕಳು ಮುಂದೆ ಒಂದು ದಿನ ನಿಷ್ಕರುಣಿ, ಕ್ರೂರಿಗಳಲ್ಲದೇ ಇನ್ನೇನು ಆದಾರು? ಮದ್ರಾಸ್‌ನಲ್ಲಿ ಹಿಂದೂ ಧರ್ಮದ ವಿರುದ್ಧ ಅವರು ಪ್ರಕಟಿಸಿರುವ ಪುಸ್ತಕಗಳನ್ನೇ ನೋಡಿ. ಕ್ರೈಸ್ತ ಮತದ ವಿರುದ್ಧ ಹಿಂದುವೊಬ್ಬ ಅಂತಹ ಒಂದು ವಾಕ್ಯ ಬರೆದರೂ ಸಾಕು, ಈ ಪಾದ್ರಿಗಳು ಇಲ್ಲದ ರಂಪಾಟ ಮಾಡುತ್ತಾರೆ” (ಕೃತಿಶ್ರೇಣಿ 4)

ಡೆಟ್ರಾಯಿಟ್‌ನಲ್ಲಿ ಕ್ರೈಸ್ತರದೇ ಒಂದು ಸಭೆಯಲ್ಲಿ ಮಾತನಾಡುತ್ತಾ ಸ್ವಾಮೀಜಿ ಹೇಳಿದರು: “ಕೆಲವರಿಗೆ ನೀವು ವೇತನ, ಬಟ್ಟೆ, ಶಿಕ್ಷಣ, ಇತ್ಯಾದಿ ಕೊಟ್ಟು ತರಬೇತಿ ನೀಡುತ್ತಿದ್ದೀರಲ್ಲಾ, ಯಾತಕ್ಕಾಗಿ? ನನ್ನ ದೇಶಕ್ಕೆ ಬಂದು, ನನ್ನ ಎಲ್ಲ ಪೂರ್ವಜರು, ನನ್ನ ಧರ್ಮ, ಅಷ್ಟೇಕೆ, ಅಲ್ಲಿನವೆಲ್ಲವನ್ನೂ ಅವರು ಧೂಷಣೆ, ನಿಂದನೆ ಮಾಡಲಿ ಎಂದೇನು? ನನ್ನ ದೇವಾಲಯಗಳ ಬಳಿ ಹೋಗಿ ‘ಎಲೈ ವಿಗ್ರಹಾರಾಧಕರೇ ನೀವೆಲ್ಲ ನರಕ ಸೇರುವಿರಿ’ – ಇದು ಅವರ ಉಪದೇಶ. ಭಾರತದಲ್ಲಿನ ಮುಸಲ್ಮಾನರಿಗೆ ಇದನ್ನು ಹೇಳುವಷ್ಟು ಧೈರ್ಯ ಇವರಲ್ಲಿದೆಯೇ? ಮರುಕ್ಷಣವೇ ಅವರು ಕತ್ತಿ ಹೊರಗೆಳೆಯುತ್ತಾರೆ. ನಮ್ಮನ್ನು ಟೀಕಿಸುವ ಇವರೆಲ್ಲರೂ ನೆನಪಿಡಲಿ – ಭಾರತವೇ ಎದ್ದು ನಿಂತು, ಹಿಂದೂ ಮಹಾಸಾಗರದ ತಳದಲ್ಲಿನ ಎಲ್ಲ ಕೆಸರನ್ನೆತ್ತಿ ಪಾಶ್ಚಾತ್ಯ ದೇಶಗಳ ಕಡೆ ರಾಚಿದರೂ, ಅದು ನೀವು ಮಾಡಿರುವುದರ ಎಳ್ಳೀನಷ್ಟು ಸಹ ಆಗಲಾರದು”! (ಕೃತಿಶ್ರೇಣಿ 8)

ಸುಭಾಷ್ ಚಂದ್ರ ಬೋಸ್:

ಸುಭಾಷರು ಸ್ವಾಮಿ ವಿವೇಕಾನಂದರ ವಿಚಾರಧಾರೆಯಿಂದ ಪ್ರಭಾವಿತರಾಗಿದ್ದರು. ಅವರು ಮಂಡಾಲೆ ಜೈಲಿನಲ್ಲಿ ಬಂಧಿಯಾಗಿದ್ದಾಗ, ಬರ್ಮಾ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಈ ರೀತಿ ಬರೆದಿದ್ದರು (ದಿ|| 16.2.1926): “ಇನ್ನಿತರ ಸಂಪ್ರದಾಯದವರ ಧಾರ್ಮಿಕ ಆಚರಣೆಗಳಲ್ಲಿ ಹಸ್ತಕ್ಷೇಪ ಮಾಡಿದಲ್ಲಿ, ಅದು ಸ್ವ-ಇಚ್ಛೆಯಿಂದ ಭಗವಂತನ ಆರಾಧನೆ ಮಾಡುವ ಅವರ ಸ್ವಾತಂತ್ರ್ಯವನ್ನೇ ಅಮಾನ್ಯ ಮಾಡಿದಂತೆ ಎಂದು ಭಾವಿಸುವವರು ನಾವು. ಇಂದು ಪಾಶ್ಚಾತ್ಯ ಜಡವಾದೀ ವಿಚಾರದ ಸಮಾಜವು ಭಾರತದ ಎದೆಯ ಮೇಲೆ ಕುಳಿತು ಸವಾರಿ ನಡೆಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ. ಕ್ರೈಸ್ತ ಮಿಷನರಿಗಳು ನಮ್ಮನ್ನು ಭಾರತೀಯ ಸಂಸ್ಕೃತಿ ಮೌಲ್ಯಗಳಿಂದ ದೂರಕ್ಕೆ ತಳ್ಳಲು ಸರ್ವವಿಧದಲ್ಲೂ ಪ್ರಯತ್ನಿಸುತ್ತಿದ್ದಾರೆ. ಆದರೆ, ಅವೆಲ್ಲ ಪ್ರಯತ್ನಗಳು ವ್ಯರ್ಥವಾದಾವು. ಮಹಾಶಯರೇ, ಯಾವ ರಾಷ್ಟ್ರದ ಇತಿಹಾಸವು ಸತತ ಹೋರಾಟದ ಕಥೆಗಳಿಂದಲೇ ತುಂಬಿದೆಯೋ, ಅದು ತನ್ನ ಧಾರ್ಮಿಕ ಹಕ್ಕುಗಳಲ್ಲಿ ಇತರರು ಅನಗತ್ಯದ ಹಸ್ತಕ್ಷೇಪವನ್ನು ಸಹಿಸಲಾರದು ಎಂಬುದು ನಿಮಗೆ ತಿಳಿಯದೇ?

(ಆಧಾರ: ಸಮಗ್ರ ರತ್ನಾವಳಿ (ಆನಂದ್ ಪಬ್ಲಿಷರ್ಸ್) ತೃತೀಯ ಖಂಡ ಪುಟ 89-91)


ಡಾ|| ಬಿ.ಆರ್.ಅಂಬೇಡ್ಕರ್:

ಹಿಂದುಳಿದ ಜಾತಿಯಲ್ಲಿ ಹುಟ್ಟಿ ಮೇಲೆ ಬಂದು, ಹಿಂದುಳಿದವರ ಏಳ್ಗೆಗಾಗಿ ಜೀವನಪೂರ್ತಿ ದುಡಿದವರು ಅಂಬೇಡ್ಕರ್. ಜಾತೀಯತೆ, ಅಸ್ಪೃಷ್ಯತೆಯಂತಹ ಅಮಾನವೀಯ ರೂಢಿಗಳಿಂದಾಗಿ ಹಿಂದೂ ಸಮಾಜದ ಮೇಲೆ ರೋಸಿಹೋದ ಅಂಬೇಡ್ಕರ್, ಧರ್ಮಾಂತರದ ಘೋಷಣೆ ಮಾಡಿದರು. “ನಾನು ಹಿಂದುವಾಗಿ ಹುಟ್ಟಿರುವುದು ನಿಜ. ಆದರೆ ಸಾಯುವುದಂತೂ ಹಿಂದುವಾಗಿ ಅಲ್ಲ” ಎಂದು ಅವರು ಹೇಳಿದುದು 1935 ರ ಅಕ್ಟೋಬರ್‌ನಲ್ಲಿ. ಹಿಂದೂ ಸಮಾಜದ ನರನಾಡಿಗಳಲ್ಲಿ ಆಳವಾಗಿ ಬೇರುಬಿಟ್ಟಿದ್ದ ಕುರೂಢಿಯ ಕಾಯಿಲೆಯೊಂದಕ್ಕೆ ಆಘಾತ ಚಿಕಿತ್ಸೆ ನೀಡಬೇಕು ಎನ್ನುವುದಷ್ಟೇ ಆಗ ಅವರಿಗಿದ್ದ ಯೋಜನೆ. ಆದರೆ, 1956ರವರೆಗೆ ನಿರ್ಧಾರ ಕೈಗೊಳ್ಳಲು ಕಾದರು. ಆಗಲೂ ಕ್ರೈಸ್ತರಾಗಲಿಲ್ಲ, ಮುಸಲ್ಮಾನರಾಗಲಿಲ್ಲ, ಬೌದ್ಧರಾದರು! ತಾವು ಮಾಡಿದ ಘೋಷಣೆಯ ನಂತರವೂ, ಹಿಂದುತ್ವದ ಮೇಲಿನ ಅವರ ಮೂಲ ನಿಷ್ಠೆ ಕುಂದಿರಲಿಲ್ಲ. ಅದೇ ದಿನಗಳಲ್ಲಿ, ಬಡತನದ ಕಾರಣದಿಂದಾಗಿ, ಓರ್ವ ಚಮ್ಮಾರ ಹೆಂಗಸು ಇಸ್ಲಾಂಮತ ಸ್ವೀಕರಿಸಿದ ಸುದ್ದಿ ಕೇಳಿ ಅವರು ಪರಿತಪಿಸಿದ್ದರು! ನಾಸಿಕದ ಸಮೀಪದ ಗ್ರಾಮವೊಂದರಲ್ಲಿನ ಅಸ್ಪೃಶ್ಯರ ಗುಂಪೊಂದು ಸಾಮೂಹಿಕವಾಗಿ ಇಸ್ಲಾಂಗೆ ಮತಾಂತರಗೊಳ್ಳುವ ಉತ್ಸಾಹದಲ್ಲಿದ್ದಾಗ ಅವರನ್ನು ಅಂಬೇಡ್ಕರ್ ತಡೆದರು. ಅದೇ ದಿನಗಳಲ್ಲಿ, ಗೋವಾ ಸರಕಾರವು ಹಿಂದೂ ವಿಷನರಿಯೊಬ್ಬನನ್ನು ಬಂಧಿಸಿತ್ತು. ಕ್ರೈಸ್ತರಾಗಿ ಮತಾಂತರಗೊಂಡ ಹಿಂದೂ ಬಾಂಧವರನ್ನು ಮರಳಿ ಮಾತೃಧರ್ಮಕ್ಕೆ ಕರೆತರುವ ಚಳುವಳಿಯೊಂದನ್ನು ಅವರು ನಡೆಸುತ್ತಿದ್ದುದೇ ಇದಕ್ಕೆ ಕಾರಣ. ಅವರನ್ನು ಬಿಡುಗಡೆಗೊಳಿಸಲು ಕಳುಹಿಸಲಾದ ಮನವಿಪತ್ರಕ್ಕೆ ಡಾ||ಅಂಬೇಡ್ಕರ್ ಕೂಡ ತಮ್ಮ ಸಹಿ ಹಾಕಿದ್ದರು. ಆ ದಿನಗಳಲ್ಲಿ, ಕ್ರೈಸ್ತರು ಹಾಗೂ ಮುಸಲ್ಮಾನರು ಅವರನ್ನು ತಮ್ಮ ಮತಕ್ಕೆ ಸೇರಿಸಿಕೊಳ್ಳಲು ಅನೇಕ ರೀತಿಯ ಪ್ರಯತ್ನ ಮಾಡಿದರು, ಕೋಟ್ಯಂತರ ರೂಪಾಯಿಗಳ ಆಮಿಷ ಒಡ್ಡಿದರು!! ಆದರೆ, ಡಾ||ಅಂಬೇಡ್ಕರ್ ತಮ್ಮನ್ನು ಮಾರಿಕೊಳ್ಳಲು ಒಪ್ಪಲಿಲ್ಲ, ಮಾತ್ರವಲ್ಲ ತನ್ನ ಇಡೀ ಸಮುದಾಯವನ್ನು ಭ್ರಷ್ಟಗೊಳ್ಳಲು ಅವಕಾಶ ಕೊಡಲಿಲ್ಲ.

ಮುಂದೆ ಅವರು ಬೌದ್ಧಮತ ಸ್ವೀಕರಿಸಿದಾಗ ಆಡಿದ ಮಾತುಗಳಿವು: “ಅಸ್ಪೃಶ್ಯತೆಯ ವಿಷಯದಲ್ಲಿ ಮಹಾತ್ಮಾ ಗಾಂಧೀಜಿಯವರ ಜೊತೆ ನನಗೆ ತೀವ್ರ ಭಿನ್ನಾಭಿಪ್ರಾಯಗಳಿದ್ದುದು ನಿಜ. ಆದರೆ ಹಿಂದೊಮ್ಮೆ ನಾನು ಅವರಿಗೆ ಮಾತು ಕೊಟ್ಟಿದ್ದೆ – ಸಮಯ ಬಂದಾಗ ಈ ದೇಶಕ್ಕೆ ಕನಿಷ್ಠತಮ ಹಾನಿಕರ ಎನಿಸುವಂತಹ ಮಾರ್ಗವನ್ನು ಆರಿಸಿಕೊಳ್ಳುವೆ, ಎಂಬುದಾಗಿ. ಈಗ ಬೌದ್ಧ ಮತವನ್ನು ಸ್ವೀಕರಿಸಿ ನನ್ನ ಮಾತನ್ನು ಉಳಿಸಿಕೊಂಡಿರುವೆ. ಮತಾಂತರಗೊಳ್ಳುವುದರಿಂದ ಈ ದೇಶದ ಸಂಸ್ಕೃತಿ, ಚರಿತ್ರೆ ಹಾಗೂ ಪರಂಪರೆಗಳಿಗೆ ಯಾವುದೇ ಹಾನಿ ತಟ್ಟದಂತೆ ಸರ್ವವಿಧ ಎಚ್ಚರಿಕೆ ನಾನು ವಹಿಸಿರುವೆ”. ಇಸ್ಲಾಂ ಮತ್ತು ಕ್ರೈಸ್ತ ಮತಾಂತರದ ಬಗ್ಗೆ ಅವರ ಅಭಿಪ್ರಾಯ ಇಲ್ಲಿ ಸ್ಪಷ್ಟವಾಗುತ್ತದೆ.

ಕ್ರೈಸ್ತಮತ ಪ್ರಚಾರಕರು ಮಾಡುತ್ತಿರುವ ಮತಾಂತರ ಕಾರ್ಯಕ್ಕೂ ಆಧ್ಯಾತ್ಮಿಕತೆಗೂ ಏನೇನೂ ಸಂಬಂಧವಿಲ್ಲ ಎನ್ನುವುದನ್ನು ಅನೇಕರು ಸ್ಪಷ್ಟಗೊಳಿಸುತ್ತಾರೆ. ಸ್ವತಃ ಓರ್ವ ಕ್ರೈಸ್ತರಾಗಿದ್ದ ರಾಜಕುಮಾರಿ ಅಮೃತ‌ಕೌರ್ ಅವರು ಗಾಂಧೀಜಿಯವರಿಗೆ ಬರೆದಿರುವ ಒಂದು ಪತ್ರದಲ್ಲಿ ಹೇಳಿರುವುದನ್ನು ನೋಡಿ: “ತನ್ನೊಳಗಿನ ಅಸ್ಪೃಶ್ಯತೆಯ ಕಳಂಕವನ್ನು ತೊಲಗಿಸಲು ಸ್ವತಃ ಗಮನಪೂರ್ವಕ ಏನೂ ಮಾಡದ ಭಾರತೀಯ ಚರ್ಚ್, ಹಿಂದುಗಳಲ್ಲಿನ ಅಸ್ಪೃಶ್ಯತೆಯನ್ನು ದುರುಪಯೋಗಪಡಿಸಿಕೊಂಡು, ದಲಿತ ವರ್ಗದವರನ್ನು ‘ಕ್ರೈಸ್ತರೆಂದು ಹೇಳಲಾಗುವ’ ಮತಕ್ಕೆ ಸಾಮೂಹಿಕವಾಗಿ ಮತ್ತು ಸಾರಾಸಗಟು ಮತಾಂತರಿಸುವ ಪ್ರಯತ್ನದಲ್ಲಿ ತೊಡಗಿದೆ. ‘ಕ್ರೈಸ್ತರೆಂದು ಹೇಳಲಾಗುವ’ – ಈ ಶಬ್ದಗಳನ್ನು ಉದ್ದೇಶಪೂರ್ವಕವಾಗಿ ನಾನು ಬಳಸಲು ಕಾರಣವಿದೆ. ಮತಾಂತರಗೊಂಡಿರುವ ತುಂಬ ಮಂದಿ ಬಡವರನ್ನು ನಾನು ಮಾತನಾಡಿಸಿರುವೆ. ಮತಪರಿವರ್ತನೆಯ ಆಧ್ಯಾತ್ಮಿಕ ಅರ್ಥವಾಗಲಿ, ಪರಿಣಾಮವಾಗಲಿ ಯಾವುದನ್ನೂ ಹೇಳಲು ಅವರು ಶಕ್ತರಿರಲಿಲ್ಲ. ಇಂದಿನ ಸಾಂಸ್ಥಿಕ ಕ್ರೈಸ್ತ ಪಂಥದಲ್ಲಿ ಕಾಣುವಂತಹ ಅನೇಕ ದೋಷಗಳನ್ನು ತೊಲಗಿಸಿ, ತಮಗಾಗಿ ಪ್ರತ್ಯೇಕ ಮತವೊಂದನ್ನು ವಿಕಾಸಗೊಳಿಸಬೇಕೆಂದು ಹೇಳುವಂತಹ ಆಧ್ಯಾತ್ಮಿಕ ಪ್ರವೃತ್ತಿಯುಳ್ಳ ಭಾರತೀಯ ಕ್ರೈಸ್ತರಲ್ಲಿ ನಾನೂ ಒಬ್ಬಾಕೆ. ಕ್ರೈಸ್ತೇತರರಿಗೆ ಮುಕ್ತಿಯೇ ಇಲ್ಲ ಎನ್ನುವಂತಹ ಉದ್ದಟ ನಂಬಿಕೆಯನ್ನು ಬಿಟ್ಟು, ತಮ್ಮ ಹೃದಯಗಳನ್ನೇ ಅವರು ಸ್ವಚ್ಛಗೊಳಿಸಿಕೊಳ್ಳಬೇಕು (‘ಹರಿಜನ’ – 30.1.1937)

ಜೋಸೆಫ಼್ ಕಾರ್ನಿಲಿಯನ್ ಕುಮಾರಪ್ಪ, ಓರ್ವ ಗಾಂಧಿವಾದಿ. ಅವರ ಪ್ರಕಾರ, “ಪಾಶ್ಚಾತ್ಯ ರಾಷ್ಟ್ರಗಳಿಗೆ ನಾಲ್ಕು ವಿಧ ಪಡೆಗಳಿವೆ: ಭೂಸೇನೆ, ಜಲಸೇನೆ, ವಾಯುಸೇನೆ ಮತ್ತು ಚರ್ಚ್”! ಆಫ್ರಿಕಾದ ನಾಯಕ ಜೋಮೋ ಕೆನ್ಸಾಟ್ಟಾರವರ ಪ್ರಕಾರ: “ಯೂರೋಪಿಯನ್ನರು ಇಲ್ಲಿಗೆ ಬಂದಾಗ ಅವರ ಬಳಿ ಬೈಬಲ್ ಹಾಗೂ ನಮ್ಮ ಬಳಿ ನೆಲವಿತ್ತು. ಭಗವಂತನ ಪುಸ್ತಕವನ್ನು ಕೈಗಿತ್ತು ಕಣ್ಮುಚ್ಚಿ ಧ್ಯಾನಿಸಲು ಅವರು ತಿಳಿಸಿದರು. ನಾವು ಕಣ್ಣು ತೆರೆಗಾಗ ಬೈಬಲ್ ನಮ್ಮ ಕೈಯ್ಯಲ್ಲಿತ್ತು, ನೆಲ ಅವರದಾಗಿತ್ತು”!!

ಭಾರತದಲ್ಲಿ ಇಂದು ಕೂಡಾ ಕ್ರೈಸ್ತ ಮಿಷನರಿಗಳು, ‘ಮತಾಂತರಿಸಲು ಇರುವ ನ್ಯಾಯಬದ್ಧ ಹಕ್ಕು’ ಅನಿರ್ಬಂಧಿತವಾಗಿರಬೇಕೆಂದು ನಿರಂತರವಾಗಿ ಹೋರಾಡುತ್ತಲೇ ಬಂದಿದ್ದಾರೆ. 1968 ರಲ್ಲಿ ಮಧ್ಯಪ್ರದೇಶ ಮತ್ತು ಒರಿಸ್ಸಾಗಳಲ್ಲಿ ನಡೆಯುತ್ತಿದ್ದ ಕೆಲವು ಆಕ್ಷೇಪಾರ್ಹ ಮತಾಂತರ ವಿಧಾನಗಳನ್ನು ತಡೆಗಟ್ಟಲು ‘ಧರ್ಮ ಸ್ವಾತಂತ್ರ್ಯ ಶಾಸನ’ ತಂದಾಗ ಮಿಷನರಿಗಳು ಅವುಗಳ ವಿರುದ್ಧವಾಗಿ ನ್ಯಾಯಾಲಯದಲ್ಲಿ ದಾವೆ ಹೂಡಿದರು. ಉಚ್ಚನ್ಯಾಯಾಲಯದಲ್ಲಿ ಸೋತಾಗ ಅವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೊಕ್ಕರು. ಸರ್ವೋಚ್ಚ ನ್ಯಾಯಾಲಯ ಎರಡೂ ಕಾನೂನುಗಳನ್ನು ಸಂವಿಧಾನ ಬದ್ಧವೆಂದು ಎತ್ತಿ ಹಿಡಿಯಿತು. ಮಿಷನರಿಗಳು ಮುಂದಿಟ್ಟಿದ್ದ ವಾದವನ್ನು ಸಂವಿಧಾನದಲ್ಲಿ ನೀಡಲಾಗಿರುವ ಧರ್ಮಪ್ರಸಾರ ಹಕ್ಕಿನಲ್ಲಿ ಮತಾಂತರದ ಹಕ್ಕು ಸಹ ಒಳಗೊಂಡಿದೆ – ಎನ್ನುವ ವಾದವನ್ನು ದು ತಳ್ಳಿಹಾಕಿತು.

ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಶ್ರೀಯುತ ಎ.ಎಸ್.ರೇ ಅವರ ಪ್ರಕಾರ: “ನಮ್ಮ ಸಂವಿಧಾನವು ಜೊತೆಯವರನ್ನು ತನ್ನ ಮತಕ್ಕೆ ಮತಾಂತರಿಸುವ ಮೂಲಭೂತ ಹಕ್ಕಿಗೆ ಆಶ್ವಾಸನೆಯನ್ನು ನೀಡಿಲ್ಲ”.

ಎಸ್.ಎಸ್.ನರೇಂದ್ರಕುಮಾರ್

ಲೇಖಕರು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಣಧುರಂದರ - ಚಿಮಾಜಿ ಅಪ್ಪ

Sat Jan 1 , 2022
ಪೇಶ್ವ ಬಾಜಿರಾವ್ – ಈ ಹೆಸರು ಕೇಳದವರ್ಯಾರು? ಛತ್ರಪತಿ ಶಿವಾಜಿ ಮಹಾರಾಜರ ನಂತರ ಮರಾಠ ಸಾಮ್ರಾಜ್ಯವನ್ನು ದೆಹಲಿಯವರೆಗೆ ಕೊಂಡೊಯ್ದು, ಮೊಘಲರು ಹಾಗೂ ಇತರ ಮುಸ್ಲಿಂ ದೊರೆಗಳನ್ನು ಹುಟ್ಟಡಗಿಸಿದ ಧೀರ ಮರಾಠ ಅವನು. 1700-1740 ರವರೆಗೆ ಜೀವಿಸಿದ್ದ ಬಾಜಿರಾವ್ ಸುಮಾರು 44 ಯುದ್ಧಗಳನ್ನು ಸಾರಿ, ಪ್ರತಿಯೊಂದರಲ್ಲೂ ವಿಜಯಿಯಾಗಿ ಅಜೇಯನಾದವನು. ಇಂತಹ ವೀರನ ನೆರಳಾಗಿ ಇದ್ದು ಅವನ ಪ್ರತಿಯೊಂದು ಜೈತ್ರ ಯಾತ್ರೆಯಲ್ಲಿ ಶ್ರೀರಾಮನಿಗೆ ಲಕ್ಷ್ಮಣನಿದ್ದಂತೆ ಇದ್ದವನೇ ಬಾಲಾಜಿ ವಿಶ್ವನಾಥರ ಎರಡನೇ ಮಗ ಹಾಗೂ ಬಾಜಿರಾವ್ ತಮ್ಮ […]