ನೆಹರು ಸುಭಾಷರನ್ನು ಬೆನ್ನಟ್ಟಿದರೇ?

ಇತಿಹಾಸದ ಒಂದು ನಿಗೂಢತೆ

Capture

ರಹಸ್ಯ ಅಥವಾ ನಿಗೂಢತೆ ಎಂಬುದಕ್ಕೆ ಪರ್ಯಾಯಪದವೇನಾದರೂ ಬೇಕಾದರೆ ನೇತಾಜಿ ಸುಭಾಶ್ಚಂದ್ರ ಬೋಸ್ ಎನ್ನಬಹುದು ಎನಿಸುತ್ತದೆ. ಪ್ರಚಂಡವಾದ ಆತ್ಮಬಲ, ಆತ್ಮವಿಶ್ವಾಸಗಳಿದ್ದ ಈ ಮಹಾನ್ ಹೋರಾಟಗಾರನ ದೇಶಪ್ರೇಮ ಎಣೆಯಿಲ್ಲದ್ದು. ಕೇವಲ ಆತ್ಮಬಲ, ಆತ್ಮವಿಶ್ವಾಸಗಳಿಂದ ಅವರು ಬರಿಗೈದಾಸರಾಗಿಯೂ ಸೂರ್ಯ ಮುಳುಗದಿದ್ದ ಬ್ರಿಟಿಷ್ ಸಾಮ್ರಾಜ್ಯವನ್ನು ಎದುರು ಹಾಕಿಕೊಳ್ಳುವ ಧೈರ್ಯಮಾಡಿದ್ದು ಮಾತ್ರವಲ್ಲ; ಸೈನ್ಯ ಕಟ್ಟಿ ಆಂಗ್ಲೋ-ಅಮೆರಿಕನ್ ಸಂಯುಕ್ತ ಸೇನೆಯನ್ನು ಎರಡನೇ ಮಹಾಯುದ್ಧ ಕಾಲದ ರಣಾಂಗಣದಲ್ಲಿ ಎದುರಿಸಿದರು. ನಿಮ್ಮ ರಕ್ತ ಕೊಡಿ; ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ ಎಂದು ತನ್ನ ಪ್ರೀತಿಯ ಭಾರತೀಯರಿಗೆ ಕರೆ ನೀಡಿದ ನೇತಾಜಿ ’ಚಲೋ ದಿಲ್ಲಿ’ ಎನ್ನುವ ತಮ್ಮ ಸೇನಾ ಕಾರ್ಯಾಚರಣೆಗೆ ಅನುಗುಣವಾಗಿ ದಿಲ್ಲಿಗೇ ಲಗ್ಗೆಯಿಟ್ಟು ಬ್ರಿಟಿಷರನ್ನು ಓಡಿಸಿ ಅಧಿಕಾರವನ್ನು ಕೈಗೆ ತೆಗೆದುಕೊಳ್ಳುತ್ತಿದ್ದರೋ ಏನೊ!
ಆದರೆ ಆ ಹೊತ್ತಿಗೆ ಇವರ ಬಳಗದ ಜಪಾನಿಗೆ ಸೋಲು ಎದುರಾಗತೊಡಗಿತ್ತು. ಅಮೆರಿಕದ ಬಲದಿಂದಾಗಿ ಬ್ರಿಟನ್ ಚೇತರಿಸಿಕೊಳ್ಳುತ್ತಿತ್ತು. ಸಾಲದೆಂಬಂತೆ ಹಿರೋಷಿಮ, ನಾಗಸಾಕಿಗಳ ಮೇಲೆ ಅಮೆರಿಕ ಅಣುಬಾಂಬ್ ಎಸೆದಾಗ ಜಪಾನ್ ಒಮ್ಮೆಗೇ ತಣ್ಣಗಾಯಿತು; ಶರಣಾಗಲು ನಿರ್ಧರಿಸಿತು. ಅಲ್ಲಿಯವರೆಗೆ ಸರಿ; ಮತ್ತೆ ಸುಭಾಶ್ಚಂದ್ರ ಬೋಸರ ನಿಗೂಢತೆ ಆರಂಭವಾಗುತ್ತದೆ. ಪ್ರೀತಿ-ವಿಶ್ವಾಸಗಳೇ ಆಧಾರವಾಗಿ ಕಟ್ಟಿದ್ದ ’ಆಜಾದ್ ಹಿಂದ್ ಫೌಜ್ (Indian National Army) ಎನ್ನುವ ಬಳಗವನ್ನು ಬಿಟ್ಟು ಹೊರಡುತ್ತಾರೆ. ತಮ್ಮ ಆಪ್ತರು ಮತ್ತು ಆಪ್ತಸಿಬ್ಬಂದಿಯ ಬಳಗಕ್ಕೆ ಅವರು ವಿದಾಯ ಹೇಳಿ ಹೊರಡುವ ಕ್ಷಣಗಳನ್ನು ನೆನಪಿಸಿಕೊಂಡಾಗ ಮೈ ಜುಮ್ಮೆನ್ನುತ್ತದೆ.
ಸಾಮಾನ್ಯವಾಗಿ ಹೇಳಲಾಗುವಂತೆ ತೈವಾನ್ (ಫಾರ್ಮೋಸಾ)ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಅವರು ಮೃತಪಟ್ಟುದೇ ಹೌದಾದರೆ, ಅದಾದರೂ ಒಂದು ಲೆಕ್ಕವಾಯಿತು ಎನ್ನುಬಹುದು. ಆದರೆ ಅವರು ಅಲ್ಲಿ ಸಾವಿಗೀಡಾಗದಿದ್ದಲ್ಲಿ ಮುಂದೆ ಎಲ್ಲಿಗೆ ಹೋದರು? ಹೇಗೆ ಬದುಕಿದರು? ಎಲ್ಲಿ ಸತ್ತರು? ಹೇಗೆ ಸತ್ತರು? ಯಾವಾಗ ಸತ್ತರು? ತಮ್ಮ ಪತ್ನಿ, ಮಗಳು, ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದ ಬಂಧುಗಳು, ಜೀವಕ್ಕೆ ಜೀವ ಕೊಡಲು ಸಿದ್ಧರಿದ್ದ ಆತ್ಮೀಯರಿಂದ ದೂರವಾಗಿ ಹೇಗೆ ಬದುಕಿದರು? ಆ ಮಹಾನ್ ವ್ಯಕ್ತಿ ಒಂಟಿಜೀವನಕ್ಕೆ ಹೇಗೆ ಒಗ್ಗಿಕೊಂಡಿರಬಹುದು? ಯಾವುದಾದರೂ ಸರ್ವಾಧಿಕಾರಿಯ ಅಥವಾ ದ್ರೋಹಿಗಳ ಚಿತ್ರಹಿಂಸೆಗೆ ಗುರಿಯಾಗಿರಬಹುದೆ – ಎಂಬ ಪ್ರಶ್ನೆಗಳನ್ನು ನೆನಪಿಸಿಕೊಂಡಾಗ ಭಾರತೀಯರಾದ ನಾವು ಆ ಮಹಾನ್ ಚೇತನಕ್ಕೆ ಎ? ಕೃತಘ್ನರು ಎನ್ನಿಸದೆ ಇರಲಾರದು. ಇನ್ನು ಅವರಿಗೆ ಸ್ವತಃ ತೊಂದರೆಕೊಟ್ಟವರು ತಾವೇನೆಂದು ಅವರೇ ಯೋಚಿಸಿಕೊಳ್ಳುವುದೊಳಿತು. 70 ವರ್ಷ ದಾಟಿದರೂ, ನೇತಾಜಿ ಮುಂದೆ ಏನಾದರೆಂದು ತಿಳಿಯಲು ನಮಗೆ ಸಾಧ್ಯವಾಗದಿರುವುದು ಕೃತಘ್ನತೆಯ ಇನ್ನೊಂದು ರೂಪವಲ್ಲದೆ ಬೇರೇನೂ ಅಲ್ಲ. ರಹಸ್ಯ ಅಥವಾ ನಿಗೂಢತೆಗೆ ಅವರೊಂದು ಪರ್ಯಾಯಪದ ಎಂದರೆ ಸಾಕೆ?

‘ಗಾಂಧಿಯವರನ್ನು ಹಿಂದಿಕ್ಕುವರು’
1945ರ ನವೆಂಬರ್ನಲ್ಲಿ ಉತ್ತರಪ್ರದೇಶದ ಗವರ್ನರ್ ಅಂದಿನ ವೈಸರಾಯ್ಗೆ ಬರೆದ ಒಂದು ಪತ್ರದಲ್ಲಿ ಜನಪ್ರಿಯತೆಯಲ್ಲಿ ಗಾಂಧಿಯವರಿಗಿರುವ ಸ್ಥಾನವನ್ನು ಸದ್ಯದಲ್ಲೇ ಸುಭಾಶ್ಚಂದ್ರ ಬೋಸ್ ಸ್ವಾಧೀನ ಪಡಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು. ಇದೊಂದು ಸ್ಯಾಂಪಲ್ ಅಷ್ಟೆ. ದೆಹಲಿ ಕೆಂಪುಕೋಟೆಯಲ್ಲಿ ಐಎನ್ಎ ಯೋಧರ ವಿಚಾರಣೆ ನಡೆಯುತ್ತಿದ್ದಾಗ, ಓರ್ವ ದಂಡನಾಯಕ ಜಿ.ಎಸ್. ಧಿಲ್ಲಾನ್ ನ್ಯಾಯಾಧಿಕಾರಿ (ಜೂರಿ)ಗಳ ಮುಂದೆ ಒಂದು ಹಂತದಲ್ಲಿ ನನ್ನನ್ನು ಗಲ್ಲಿಗೇರಿಸಿ ಎಂದು ಸವಾಲೊಡ್ಡಿದರು. ಗಲ್ಲಿಗೆ ಏರಿಸಿಬಿಡುತ್ತಿದ್ದರೋ ಏನೋ! ಆದರೆ ಬೆಳಗಾಗುವ?ರಲ್ಲಿ ನಗರದ ಗೋಡೆಗಳ ಮೇಲೆ ಹುಶಾರ್! ರಕ್ತಪಾತ ಆದೀತು ಎಂಬ ಭಿತ್ತಿಪತ್ರಗಳು ಪ್ರತ್ಯಕ್ಷವಾಗಿದ್ದವು. ಸುಮ್ಮನಾಗದೆ ಜೂರಿಗಳಿಗೆ ಅನ್ಯಮಾರ್ಗವಿರಲಿಲ್ಲ. ನ್ಯಾಯಪೀಠದ ಮುಂದೆ ಐಎನ್ಎ ಯೋಧರ ಪರವಾಗಿ ವಾದಿಸಲು ಹಿರಿಯ ನ್ಯಾಯವಾದಿ ಭೂಲಾಭಾ ದೇಸಾಯಿ ಅವರೊಂದಿಗೆ ಜವಾಹರಲಾಲ್ ನೆಹರು ಕೂಡ ಹಾಜರಾಗುತ್ತಿದ್ದರು; ಇದಕ್ಕೆ ಬೋಸ್ ಮತ್ತು ಐಎನ್ಎ ಗಳಿಸಿಕೊಂಡ ಜನಪ್ರಿಯತೆಯಿಂದ ಉಂಟಾದ ಭಯವೇ ಕಾರಣ ಎಂದು ಮುಂದೆ ವ್ಯಾಖ್ಯಾನಿಸಲಾಗಿತ್ತು. ಹಿಂದೆಂದೂ ಯಾವುದೇ ವಿಷಯ (ಐಎನ್ಎ ವಿಚಾರಣೆ) ದೇಶದ ಜನರ ಗಮನವನ್ನು ಇಂದು ಸೆಳೆದದ್ದಿಲ್ಲ ಎಂದು ಜಾಗೃತದಳಗಳು ಆಗ ವರದಿ ಮಾಡಿದ್ದವು.
ವಿಮಾನದುರಂತದಲ್ಲಿ ನೇತಾಜಿ ಮೃತಪಟ್ಟರೆಂದು ಹೇಳಿದರೂ ಕೂಡ ಜನ ಅದನ್ನು ನಂಬುವ ಸ್ಥಿತಿ ಇರಲಿಲ್ಲ. ಜೊತೆಗೆ ಅವರ ಪಾರ್ಥಿವ ಶರೀರ ಸಿಕ್ಕಿಲ್ಲ ಎನ್ನುವ ಅಸಲಿ ಮಾಹಿತಿ ಹೊರಬಂದು ದುರಂತ ಸಂಭವಿಸಿದ್ದರೂ ಕೂಡ, ಬೋಸ್ ಬದುಕಿ ಉಳಿದಿರಬೇಕು ಎನ್ನುವ ಅಭಿಪ್ರಾಯ ಮೇಲುಗೈ ಪಡೆಯುತ್ತಿತ್ತು. 1956 ಮತ್ತು 1970ರಲ್ಲಿ ಸರ್ಕಾರ ತನಿಖಾ ಆಯೋಗ ನೇಮಿಸಿ ವರದಿಯನ್ನು ಪಡೆದು ವಿಮಾನ ಅಪಘಾತದಲ್ಲಿ ಬೋಸ್ ಸತ್ತುದು ನಿಜವೆಂದು ಪ್ರಕಟಿಸಿದರೂ ದೇಶದ ಜನತೆ ನಂಬಲಿಲ್ಲ. 1999ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ನೇಮಿಸಿದ ನ್ಯಾ| ಮುಖರ್ಜಿ ಆಯೋಗದ ವರದಿ ಸ್ವಲ್ಪ ಭಿನ್ನವಾಗಿ ತೈವಾನ್ನಲ್ಲಿ ನಡೆದ ದುರಂತದಲ್ಲಿ ಬೋಸ್ ಸತ್ತರೆಂಬುದು ಜಪಾನ್ ಸರ್ಕಾರ ಸೃಷ್ಟಿಸಿದ ಮುಸುಕು; ಅವರು ರಷ್ಯಾಕ್ಕೆ ಪಲಾಯನ ಮಾಡುವುದನ್ನು ಬಚ್ಚಿಡಲು ಹಾಗೆ ಮಾಡಲಾಗಿತ್ತು ಎಂದು ತಿಳಿಸಿತು. ಆದರೂ ಬೋಸ್ ಮುಂದೇನಾದರೆಂದು ಭೇದಿಸಲು ಅದಕ್ಕೆ ಸಾಧ್ಯವಾಗಲಿಲ್ಲ. ವರದಿ ಸಲ್ಲಿಸುವಾಗ (2006) ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಅದನ್ನು ತಿರಸ್ಕರಿಸಿದ್ದೂ ಆಯಿತು.
ಈ ವರದಿಯ ಕೆಲವು ಭಾಗಗಳನ್ನು ಸಂಸತ್ತಿನಲ್ಲಿ ಮಂಡಿಸಿದಾಗ, ಅಂದಿನ ಗೃಹಸಚಿವ ಶಿವರಾಜ ಪಾಟೀಲ್ ಬೋಸ್ ಬದುಕಿದ್ದರೆ ಭಾರತಕ್ಕೆ ಬರುವುದಿಲ್ಲ ಏಕೆ? ಅವರನ್ನು ಯಾರು ತಡೆಯುತ್ತಾರೆ? ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಡಾ|| ಎಂ.ಎಂ. ಜೋಶಿ ಅವರನ್ನು ಯಾವುದಾದರೂ ದೇಶ ಬಂಧಿಸಿ ಇಟ್ಟಿರಬಹುದು. ಅವರು ಮುಕ್ತ ಮುನುಷ್ಯ (Freeman) ಆಗಿಲ್ಲದೆ ಇರಬಹುದು. ಹಾಗಿರುವಾಗ ಅವರು ಬರುವುದು ಹೇಗೆ? ಅವರು ಯಾವ ದೇಶದಲ್ಲಿದ್ದಾರೆಂದು ನೀವು ಕಂಡುಹಿಡಿಯಬೇಕಾಗಿದೆ. ಅದು ಆಗದಿದ್ದರೆ ಏನು ಮಾಡಬೇಕೆಂದು ಜನ ನಿರ್ಧರಿಸುತ್ತಾರೆ ಎಂಬ ಎಚ್ಚರಿಕೆಯನ್ನೂ ನೀಡಿದರು. ಬೋಸ್ರನ್ನು ಯಾವ ರೀತಿ ಹೊರಗೆ ಕಳುಹಿಸುವುದು ಎಂಬ ಬಗ್ಗೆ ಜಪಾನೀಯರು ಚರ್ಚಿಸುತ್ತಿದ್ದರು. ಬೋಸ್ ಹೋಗಬೇಕಾದ್ದು ರಷ್ಯಾ ಕಡೆಗೆ ಎಂಬುದು ಆಗಲೇ ತೀರ್ಮಾನವಾಗಿತ್ತು ಎನ್ನುವ ಒಂದು ಮಾಹಿತಿ ಆಗ ಪ್ರಚಲಿತವಾಗಿತ್ತು. ತಮ್ಮ ಮಿತ್ರ ಚಂದ್ರ ಬೋಸರನ್ನು ಗುಟ್ಟಾಗಿ ರ?ಕ್ಕೆ ಕಳುಹಿಸಲು ಜಪಾನೀಯರು ಬದ್ಧರಾಗಿದ್ದರು ಎಂಬ ಒಂದು ಮಾಹಿತಿ (ದಾಖಲೆ) 1951ರ ಜೂನ್ನಲ್ಲಿ ಪ್ರಧಾನಿ ನೆಹರು ಅವರಿಗೆ ಬಂದಿತ್ತಂತೆ. ಆದರೆ ಅದು ತುಂಬ ಕಾಲ ನಾಪತ್ತೆಯಾಗಿತ್ತು ಅಥವಾ ಸರ್ಕಾರ ಅದನ್ನು ಮುಚ್ಚಿಹಾಕಿತ್ತು. ೨೦೦೬ರ ವೇಳೆಗೆ ಅದು ಬೆಳಕಿಗೆ ಬಂತು. ಬಹಳಷ್ಟು ದಾಖಲೆಗಳು ಗುಟ್ಟಾಗಿಯೇ ನಾಪತ್ತೆ ಆಗಿರಲೂಬಹುದು ಎಂಬ ಕಾರಣದಿಂದ ಈಗ ಕೇಂದ್ರ ಮತ್ತು ಕೆಲವು ರಾಜ್ಯ ಸರ್ಕಾರಗಳು ಬಿಡುಗಡೆ ಮಾಡುತ್ತಿರುವ ಈ ’ರಹಸ್ಯ’ಕಡತಗಳಿಗೆ ಎಷ್ಟು ಪಾವಿತ್ರ್ಯ ಇದೆಯೋ ಗೊತ್ತಿಲ್ಲ.

2

ಶ್ರದ್ಧಾಂಜಲಿ ಬೇಡ
ಸೆಪ್ಟಂಬರ್ 21, 1945ರಂದು ಕಾಂಗ್ರೆಸ್ ಮಹಾಧಿವೇಶನ ನಡೆಯುತ್ತಿತ್ತು. ಶ್ರದ್ಧಾಂಜಲಿ ಸಲ್ಲಿಸುವ ಸಲುವಾಗಿ ಮೃತರ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದು, ಅದಕ್ಕೆ ಸುಭಾಶ್ಚಂದ್ರರ ಹೆಸರು ಸೇರಿಸುವುದಕ್ಕೆ ಕಾಂಗ್ರೆಸ್ ಅಧ್ಯಕ್ಷ ಅಬುಲ್ ಕಲಾಂ ಆಜಾದ್ ನಿರಾಕರಿಸಿದರು; ಏಕೆಂದು ಕೇಳಿದಾಗ ’ಅವರು ಸತ್ತರೆಂದು ಹೇಳಲಾಗದು’ ಎಂದರು. ಕೆಲವು ದಿನಗಳ ಮೊದಲು ನೆಹರು ಬೋಸ್ ಸತ್ತರೆಂದು ನಾನು ನಂಬುವುದಿಲ್ಲ ಎಂದು ಹೇಳಿದ್ದಿದೆ. ಗಾಂಧಿಯವರು 1946ರ ಆರಂಭದವರೆಗೂ ಯಾರಾದರೂ ನನಗೆ ಚಿತಾಭಸ್ಮವನ್ನು ತೋರಿಸಿದರೂ ಕೂಡ ಬೋಸ್ ಸತ್ತರೆಂದು ನಾನು ನಂಬುವುದಿಲ್ಲ; ಅವರು ಸಕಾಲದಲ್ಲಿ ಮರಳಬಹುದು ಎಂದು ಹೇಳುತ್ತಿದ್ದರು. ಮುಂದೊಮ್ಮೆ ಬೋಸ್ ರ?ದಲ್ಲಿ ಇರಬಹುದು ಎಂದು ಕೂಡ ಗಾಂಧಿ ಹೇಳಿದ್ದರು. ಅದೇ ರೀತಿಯಲ್ಲಿ ಜನ ಬೋಸ್ ಅವರು ಎಲ್ಲೋ ಅಡಗಿ ಕುಳಿತಿದ್ದಾರೆ; ದೇಶ ಸ್ವತಂತ್ರವಾದಾಗ ಅವರು ಅಧ್ಯಕ್ಷರಾಗಿ ಮರಳುತ್ತಾರೆ ಎಂದು ಹೇಳುತ್ತಿದ್ದರು.

ಆರಂಭದಿಂದಲೂ ಬೋಸರ ನಿಲವು ತುಂಬ ಸ್ಪಷ್ಟ. ಭಾರತ ಸ್ವತಂತ್ರ ಆಗಬೇಕೆಂದು ಬಯಸುವ ಯಾರಿಂದಲೂ ನೆರವು ಪಡೆಯಲು ಅವರು ಸಿದ್ಧರಿದ್ದರು. ಜಪಾನಿನ ಮೇಲೆ ಬಲವಾದ ಪೆಟ್ಟು ಬಿದ್ದ ಮೇಲೆ ಅವರು ರಷ್ಯಕ್ಕೆ ಸಮೀಪ ಆಗಬಯಸಿದರು. ಏಕೆಂದರೆ ಬರ್ಮಾದ ಮಾರ್ಗವಾಗಿ ಭಾರತವನ್ನು ಪ್ರವೇಶಿಸುವ ಅವರ ಆಶೆ ಕಮರಿತ್ತು ಎಂಬ ಮಾತುಗಳು ಜಪಾನಿನ ಉನ್ನತ ವಲಯದಲ್ಲಿ ಪ್ರಚಲಿತವಿದ್ದವು. ಅದಲ್ಲದೆ ಸದ್ಯವೇ ರಷ್ಯ ಮತ್ತು ಬ್ರಿಟನ್ಗಳ ನಡುವೆ ಜಗಳ ಉಂಟಾಗಬಹುದು; ಅದರ ಲಾಭ ಪಡೆದು ಸ್ವಾತಂತ್ಯ ಹೋರಾಟವನ್ನು ಮುಂದುವರಿಸಬೇಕೆನ್ನುವ ಆಶೆ ಅವರದಾಗಿತ್ತು. ರಷ್ಯನ್ನರು ಒಮ್ಮೆ ತನ್ನನ್ನು ಸ್ವೀಕರಿಸಿದರೆಂದರೆ, ಅಗತ್ಯವಾದ ಎಲ್ಲ ರಕ್ಷಣೆ ನೀಡುತ್ತಾರೆಂದು ಬೋಸ್ ನಂಬಿದ್ದರು. ರ? ಜೊತೆ ಬ್ರಿಟನ್ ಮತ್ತು ಅಮೆರಿಕಗಳಿಗೆ ಒಡಕು ಉಂಟಾದರೆ, ತಾನು ರಷ್ಯನ್ನರಿಗೆ ಬೇಕಾಗಬಹುದು. ಅದರಿಂದ ತನ್ನ ದೇಶದ ಉದ್ದೇಶವೂ ಸಫಲ ಆಗಬಹುದೆಂದು ಅವರು ಭಾವಿಸಿದ್ದರು ಎಂದು ವ್ಯಾಖ್ಯಾನಿಸಲಾಗುತ್ತದೆ. ಹಿಟ್ಲರ್ ಸ್ನೇಹದಿಂದ ಆರಂಭಿಸಿ ಅವರ ಹಿಂದಿನ ನಡೆಗಳು ಅದೇ ರೀತಿ ಇದ್ದುದನ್ನು ಗಮನಿಸಬಹುದು. ಆದರೆ ಈ ಬಾರಿ ಲೆಕ್ಕಾಚಾರ ಎಲ್ಲೋ ವ್ಯತ್ಯಾಸವಾಗಿರಬೇಕು. ’ಯುದ್ಧಾಪರಾಧಿ’ ಎಂಬ ನೆಲೆಯಲ್ಲಿ ಆಂಗ್ಲೋ-ಅಮೆರಿಕನ್ ಪಡೆಗಳು ಅವರ ಹುಡುಕಾಟದಲ್ಲಿ ತೊಡಗಿದ್ದ ಕಾರಣ ಅವುಗಳ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಕೂಡ ಅಗತ್ಯವಿತ್ತು.
ಬೋಸ್ ಜೀವಿಸಿರಬೇಕು; ಸೈಬೀರಿಯದಲ್ಲಿ ಇರಬಹುದು; ದೊಡ್ಡ ರೀತಿಯಲ್ಲಿ ಭಾರತಕ್ಕೆ ಮರಳಲು ಕಾಯುತ್ತಿರಬೇಕು ಎಂದು 1950ರ ನವೆಂಬರ್ನಲ್ಲಿ ಉನ್ನತಮಟ್ಟದ ಏಜೆಂಟರು ಹೇಳಿದ್ದಿದೆ. ಬೋಸ್ ರಷ್ಯದ ನೆರವಿನಿಂದ ಭಾರತಕ್ಕೆ (ದೊಡ್ಡ ರೀತಿಯಲ್ಲಿ) ಬಂದಲ್ಲಿ ದೇಶಕ್ಕೆ ಉತ್ತರ ಹೇಳಲು ಗಾಂಧಿ ಅಥವಾ ಕಾಂಗ್ರೆಸಿಗೆ ಕಷ್ಟವಾಗಬಹುದು ಎಂದು 1946ರ ಜುಲೈನಲ್ಲಿ ಗಾಂಧಿಯವರ ಕಾರ್ಯದರ್ಶಿ ಖುರ್ಷಿದ್ ನವರೋಜಿ ಅವರೇ ಹೇಳಿದ್ದಿದೆ. ಚಿತಾಭಸ್ಮ ಕಂಡರೂ ಬೋಸ್ ಸತ್ತರೆಂದು ಒಪ್ಪಲಾರೆ ಎಂದು ಗಾಂಧಿ ಹೇಳಿದರಲ್ಲವೆ? ಬೋಸ್ ಅವರದೆಂದು ಹೇಳಲಾದ ಚಿತಾಭಸ್ಮ 70 ವರ್ಷಗಳಿಂದ ಟೋಕಿಯೋದ ರೆಂಕೋಜಿ ಬೌದ್ಧ ದೇವಾಲಯದಲ್ಲಿ ಕಾಯುತ್ತಲೇ ಇದೆ. ಒಬ್ಬ ರಾಷ್ಟ್ರನಾಯಕನ ಚಿತಾ ಭಸ್ಮವನ್ನು ಏಳು ದಶಕಗಳಾದರೂ ದೇಶಕ್ಕೆ ತಂದಿಲ್ಲ ಎನ್ನುವುದು ಒಂದು ಬಗೆಯಲ್ಲಿ ಅವಮಾನಕರ; ಭಾರತದ ಕೆಲವು ರಾಷ್ಟ್ರನಾಯಕರು ಅಲ್ಲಿಗೆ ಹೋದಾಗ ಅದಕ್ಕೆ ಗೌರವ ಸಲ್ಲಿಸಿದ್ದೂ ಇದೆ. ಆದರೆ ದೇಶಕ್ಕೆ ತರುವ ಮಾತು ಬಂದಾಗೆಲ್ಲ ದೊಡ್ಡ ವಿವಾದವಾಗಿ ತರುವುದನ್ನು ನಿಲ್ಲಿಸಬೇಕಾಗಿ ಬಂದಿದೆ. ನೇತಾಜಿ ವಿಮಾನ ದುರಂತದಲ್ಲಿ ಮೃತಪಟ್ಟರೆಂದು ಸಾಬೀತುಪಡಿಸಿ ಅನಂತರ ಚಿತಾಭಸ್ಮವನ್ನು ತನ್ನಿ ಎಂದು ಯಾರೇ ಹೇಳಲಿ, ಕಾರ್ಯಕ್ರಮ ಅಲ್ಲಿಗೇ ಬಂದ್! ಹೀಗಿದೆ ಪರಿಸ್ಥಿತಿ 70 ವರ್ಷಗಳಿಂದ.

ಶರಣಾಗತಿ ನಿರ್ಧಾರ
ಅಮೆರಿಕ ಎರಡು ಅಣುಬಾಂಬ್ಗಳನ್ನು ಹಾಕುತ್ತಲೇ ಜಪಾನ್ ಮಿತ್ರರಾಷ್ಟ್ರಗಳಿಗೆ ಶರಣಾಗುವ ಹಂತಕ್ಕೆ ತಲಪಿ, ಆ ಬಗ್ಗೆ ನಿರ್ಧರಿಸಿತು. ಆಗಸ್ಟ್ 11ರಂದು (1945) ನೇತಾಜಿ ಅವರಿಗೆ ಆ ವಿಷಯದ ಪತ್ರ ಬಂತು. ಜಪಾನ್ ಸೇನೆ ಮತ್ತು ಐಎನ್ಎ ಸೇನೆಗಳು ಸೋತ ಕಾರಣ ಭಾರತ ವಿಮೋಚನೆ ಬಗೆಗಿನ ನೇತಾಜಿ ಕನಸು ಭಗ್ನವಾಗಿತ್ತು. ಕೊನೆಯ ಹಂತದಲ್ಲಿ ಆಗಸ್ಟ್ ೯ರಂದು ರಷ್ಯ ಜಪಾನಿಗೆ ವಿರುದ್ಧವಾಗಿತ್ತು. ಇನ್ನು ಯುದ್ಧದಲ್ಲಿ ಅರ್ಥವಿಲ್ಲ ಎಂದು ತೀರ್ಮಾನಿಸಲಾಯಿತು. ಆದರೆ ಐಎನ್ಎ ಶರಣಾಗತಿ ಹೇಗೆ? ಜಪಾನಿನ ಜೊತೆಗೇ ಅಥವಾ ಪ್ರತ್ಯೇಕವಾಗಿಯೆ? – ಎಂಬ ಪ್ರಶ್ನೆ ಬಂತು. ಸಿಂಗಾಪುರದಿಂದ ಬಂದ ಮಾಹಿತಿ ಪರಿಸ್ಥಿತಿ ಬಿಗಡಾಯಿಸುತ್ತಿದೆ; ನೇತಾಜಿ, ನೀವೆಲ್ಲ ವಾಪಸಾಗಿ. ರಾಣಿ ಝಾನ್ಸಿ ಬ್ರಿಗೇಡಿನ ೫೦೦ ಮಂದಿ ಯುವತಿಯರನ್ನು ಬ್ರಿಟಿಷರು ಆಗಮಿಸುವ ಮುನ್ನ ಸಿಂಗಾಪುರದಿಂದ ಕರೆಸಬೇಕಿತ್ತು ಎಂದು ತಿಳಿಸಿತು. ಆಗಸ್ಟ್ ೧೫ರಂದು ಶರಣಾಗತಿ ಎಂದು ಹಿಂದಿನ ದಿನ ನೇತಾಜಿಗೆ ತಿಳಿಸಿ, ಅವರು ಕೂಡಲೆ ಸಿಂಗಾಪುರ ಬಿಡಬೇಕೆಂದು ಎಲ್ಲರೂ ಸೂಚಿಸಿದರು. ಮಿತ್ರರಾಷ್ಟ್ರ ಸೇನೆ ಭಾರಿ ಸೇಡು ತೀರಿಸಬಹುದು ಎಂದಾಗ ಬೋಸ್ ಏನು? ಹೆಚ್ಚೆಂದರೆ ಅವರು ನನ್ನನ್ನು ನಿಲ್ಲಿಸಿ ಗುಂಡು ಹಾರಿಸಿ ಕೊಲ್ಲಬಹುದಲ್ಲವೆ? ನಾನದಕ್ಕೆ ಸಿದ್ಧ. ಐಎನ್ಎ ಮತ್ತು ನಾಗರಿಕರ ತ್ಯಾಗಗಳು ನಿಷ್ಪಲ ಆಗುವುದಿಲ್ಲ ಎಂದು ಉತ್ತರಿಸಿದರು.
ಶರಣಾಗುವ ಬಗ್ಗೆ ತೀರ್ಮಾನಿಸಿ, ’ಐಎನ್ಎ’ ಮತ್ತು ’ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್ (ಐಐಎಲ್)ನವರಿಗೆ ಮೂರು ತಿಂಗಳ ಸಂಬಳ ವಿತರಿಸಿದರು. ಸತ್ತ ತಮ್ಮ ಯೋಧರಿಗಾಗಿ ಸಿಂಗಾಪುರದಲ್ಲಿ ಸ್ಮಾರಕ ನಿರ್ಮಿಸಲು ಕ್ರಮ ಕೈಗೊಂಡರು. ಆಗಸ್ಟ್ ೧೬ರಂದು ಬೋಸ್, ಪ್ರಚಾರ ಮಂತ್ರಿ ಎಸ್.ಎ. ಅಯ್ಯರ್ ಮತ್ತು ಬೋಸ್ ನಿಕಟವರ್ತಿ ಹಬೀಬುರ್ ರೆಹಮಾನ್ ಬ್ಯಾಂಕಾಕಿಗೆ ಹೊರಟರು. ಜಪಾನೀಯರು ಪ್ರತ್ಯೇಕ ಶರಣಾಗತಿ ಬೇಡವೆಂದು ಜಪಾನ್ಸೇನೆಯ ಪ್ರಧಾನಕೇಂದ್ರ ಸೈಗಾನ್ಗೆ ಹೋಗಲು ಬೋಸ್ಗೆ ಸೂಚಿಸಿದರು. ೧೭ರಂದು ವಿಮಾನದಲ್ಲಿ ಸೈಗಾನಿಗೆ ಹೋದರು. ಜಪಾನ್ಗೆ ಪರವಾಗಿದ್ದ ಭಾರತೀಯರನ್ನು ಬೇಟೆಯಾಡಲು ಮಿತ್ರರಾ? ಸೇನೆ ಸಿದ್ಧವಾಗುತ್ತಿದೆ ಎಂಬ ಸುದ್ದಿ ಸಿಕ್ಕಿತು. ಬೋಸ್ ಏನು ಮಾಡಬೇಕೆಂಬ ಬಗ್ಗೆ ಅಲ್ಲಿ ಚರ್ಚೆ ನಡೆಯಿತು. ಐಎನ್ಎ ಶರಣಾಗತಿಯ ಸಂಬಂಧ ಮಾತನಾಡಲು ಅವರು ಟೋಕಿಯೋಗೆ ಹೋಗಬೇಕಾಗಿದೆ ಎಂಬ ಒಂದು ಸುದ್ದಿಯನ್ನು ತೇಲಿಬಿಡಲಾಯಿತು. ಅಂತೂ ಅವರ ಜೊತೆಗೆ ಹೆಚ್ಚು ಜನರು ಹೋಗುವಂತಿಲ್ಲ. ರೆಹಮಾನ್ಗೆ ಮಾತ್ರ ಅವಕಾಶ ನೀಡಲಾಯಿತು. ವಿಮಾನದಲ್ಲಿ ಜಪಾನಿನ ಸೇನಾ ಕಮಾಂಡರ್ ಶಿಡೈ ಇದ್ದರು. ಬೋಸ್ ತಮ್ಮ ಆಪ್ತ ಸಿಬ್ಬಂದಿಗೆ ಅಶ್ರುಪೂರ್ಣ ವಿದಾಯ ಹೇಳಿ ಹೊರಟರು. ಮತ್ತೆ ಯಾವಾಗ ಬರುವರೆಂದು ಗೊತ್ತಿಲ್ಲ; ವಿಮಾನ ಹಾರಿತು.
ಅಂದು (ಆ. 17) ಸಂಜೆ ವಿಮಾನ ವಿಯೆಟ್ನಾಮ್ ಕರಾವಳಿಯ ಟೊರೇನ್ನಲ್ಲಿ ಇಳಿಯಿತು. ರಾತ್ರಿ ಅಲ್ಲಿ ಉಳಿದರು. ಬೋಸ್ರೊಂದಿಗೆ ನಾಲ್ಕು ಪೆಟ್ಟಿಗೆಗಳಲ್ಲಿ ಬಂಗಾರ, ಆಭರಣ ಇತ್ಯಾದಿ ಇತ್ತು. ಆಗಸ್ಟ್ ೧೮ರಂದು ವಿಮಾನ, ಪ್ರಯಾಣ ಆರಂಭಿಸಿತಾದರೂ ಮೊದಲೇ ಟೋಕಿಯೋದ ಮಾರ್ಗ ಬಿಡಲಾಗಿತ್ತು; ರ?ನರು ಮುಂದುವರಿಯುತ್ತಿದ್ದಾರೆಂಬ ಸುದ್ದಿ ಬಂತು. ನಿಗದಿತ ಸ್ಥಳ ಬೇಡವೆಂದು ಅಪರಾಹ್ನ ತೈವಾನ್ನ ತಾಹೋಕು ವಿಮಾನನಿಲ್ದಾಣದಲ್ಲಿ ವಿಮಾನ ಇಳಿಯಿತು. ವಿಮಾನ ಇಳಿಯುವಾಗಲೇ ಬೆಂಕಿ ಹೊತ್ತಿಕೊಂಡಿತು. ನೇತಾಜಿ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಅವರಿಗೆ ತೀವ್ರ ಸುಟ್ಟಗಾಯಗಳಾದವು. ಅಲ್ಲಿನ ಆಸ್ಪತ್ರೆಯಲ್ಲಿ ಅಂದೇ ಅವರು ತೀರಿಕೊಂಡರು. ಅಪಘಾತದ ವೇಳೆ ಛಾಯಾಚಿತ್ರ ತೆಗೆಯುವುದನ್ನು ರೆಹಮಾನ್ ತಡೆದರು. ಗಾಯಗೊಂಡ ಆತನನ್ನು ಸಿಂಗಾಪುರಕ್ಕೆ ಕಳುಹಿಸಲಾಯಿತು. ಶವಪೆಟ್ಟಿಗೆ ಸಾಗಿಸಲು ಸಾಧ್ಯವಾಗಲಿಲ್ಲವೆಂದು ನೇತಾಜಿ ಶವವನ್ನು (ತಾಪೆ) ತಾಹೋಕುವಿನಲ್ಲೇ ಸುಟ್ಟರು; ಎಲುಬು ಸಹಿತ ಚಿತಾಭಸ್ಮವನ್ನು ತೆಗೆದು ಟೋಕಿಯೋಗೆ ಕಳುಹಿಸಿಕೊಟ್ಟರು. ಎರಡು ದಿನಗಳ ಬಳಿಕ ತಾಪೆ ವಿಮಾನದುರಂತದಲ್ಲಿ ನೇತಾಜಿ ಸುಭಾಶ್ಚಂದ್ರ ಬೋಸ್ ಸತ್ತರೆನ್ನುವ ಸುದ್ದಿ ಜಪಾನಿ ಸುದ್ದಿಸಂಸ್ಥೆಯ ಮೂಲಕ ಜಗತ್ತಿಗೆ ಬಿತ್ತರಗೊಂಡಿತು. ಆ ಸುದ್ದಿಯನ್ನು ಸಿದ್ಧಪಡಿಸಿದವರು ಪ್ರಚಾರಮಂತ್ರಿ ಎಸ್.ಎ. ಅಯ್ಯರ್. ಜೊತೆಗೆ ಜಪಾನಿ ಅಧಿಕಾರಿಗಳೂ ಇದ್ದರು.

3

ರಶೋಮನ್ನಂತೆ?
ಪ್ರಸಿದ್ಧ ಜಪಾನಿ ಚಲನಚಿತ್ರ ನಿರ್ದೇಶಕ ಅಕಿರಾ ಕುರೋಸಾವ ಅವರ ’ರಶೋಮನ್’ ಎಂಬ ಜಗತ್ಪ್ರಸಿದ್ಧ ಸಿನೆಮಾ ಇದೆ. ಒಂದು ಕೊಲೆ ಹೇಗಾಯಿತೆಂಬ ಬಗ್ಗೆ ಅಲ್ಲಿ ಬೇರೆ ಬೇರೆ ವಿವರಣೆಗಳು ಬಂದು, ಸತ್ಯ ಮರೀಚಿಕೆಯಾಗುವ ಚಿತ್ರ ಅದು. ಬೋಸ್ ಅವರ ’ತಥಾಕಥಿತ’ ಸಾವು ಮರೀಚಿಕೆ ಆಗದಿದ್ದರೂ, ವಿಚಾರಣೆಗಳ ಮೇಲೆ ವಿಚಾರಣೆಗಳು ನಡೆದರೂ, ಸತ್ಯ ಹೊರಬರಲಾಗದ ಅಥವಾ ಅಂಗೀಕೃತವಾಗಲಾಗದ ಒಂದು ವಿದ್ಯಮಾನ ಈ ಸಂದರ್ಭದಲ್ಲೂ ಉಂಟಾಯಿತು. ಜಗತ್ತು ಇದನ್ನು ಯಾವ ದೃಷ್ಟಿಯಲ್ಲಿ ನೋಡುತ್ತದೆಯೋ ಗೊತ್ತಿಲ್ಲ. ಭಾರತದಲ್ಲಂತೂ ಈ ಬಗೆಗಿನ ಒಂದು ಸತ್ಯ ಕಳೆದ ಆರೇಳು ದಶಕಗಳಲ್ಲಿ ಹೊರಬರಲಿಲ್ಲ; ಅಥವಾ ಎಲ್ಲರಿಗೂ ಒಪ್ಪಿತವಾಗುವ ರೀತಿಯಲ್ಲಿ ಹೊರಬರಲಿಲ್ಲ. ಇದೇ ವಿಷಯದಲ್ಲಿ ಭಾರತ ಸರ್ಕಾರದ ವತಿಯಿಂದ ಮುಖ್ಯವಾಗಿ ಮೂರು ತನಿಖೆಗಳು ನಡೆದಿವೆ. ಸ್ವತಂತ್ರ ಭಾರತದಲ್ಲಿ ರಾಜಕೀಯವು ಒಂದು ಸತ್ಯವನ್ನು ಹೇಗೆ ಬಗೆಬಗೆಯಾಗಿ ತೋರಿಸಬಲ್ಲದು ಎಂಬುದಕ್ಕೆ ಈ ತನಿಖೆಗಳು ಪುರಾವೆಯಾಗಿ ನಿಲ್ಲುತ್ತವೆ.

೧೯೫೦ರ ಆರಂಭದ ಹೊತ್ತಿಗೆ ದೇಶದಲ್ಲಿ ಬಹುತೇಕ ಎಲ್ಲರೂ ನೇತಾಜಿ ಬೋಸ್ ವಿಮಾನಾಪಘಾತದಲ್ಲಿ ಸತ್ತದ್ದು ನಿಜ ಎಂದು ಒಪ್ಪಿದಂತಿತ್ತು. ಆದರೆ ಬೋಸರ ಕೆಲವು ಅಭಿಮಾನಿಗಳು ವಿಭಿನ್ನ ಅಭಿಪ್ರಾಯ ಹೊಂದಿದ್ದರು. ಅವರಲ್ಲಿ ಒಬ್ಬರಾದ ಸಂವಿಧಾನ ಸಭೆಯ ಸದಸ್ಯ ಮತ್ತು ಬೋಸ್ ಸ್ಥಾಪಿಸಿದ ಫಾರ್ವರ್ಡ್ ಬ್ಲಾಕ್ನ ಪ್ರಧಾನ ಕಾರ್ಯದರ್ಶಿ ಎಚ್.ವಿ. ಕಾಮತ್ ಏಪ್ರಿಲ್ ೧೯, ೧೯೫೧ರಂದು ಸಂಸತ್ತಿನಲ್ಲಿ, ಬೋಸ್ ಮರಣ ಅಥವಾ ಅವರು ಜೀವಿಸಿರುವ ಬಗ್ಗೆ ಸರ್ಕಾರದ ಬಳಿ ಏನೆಲ್ಲ ಮಾಹಿತಿ (ವರದಿ)ಗಳಿವೆ ಎಂದು ಕೇಳಿದರು. ಆಗಸ್ಟ್ ೧೮, ೧೯೪೫ರಂದು ತಾಪೆಯಲ್ಲಿ ಸಂಭವಿಸಿದ ವಿಮಾನದುರಂತದಲ್ಲಿ ಬೋಸ್ ಮೃತಪಟ್ಟರೆಂದು ಪ್ರಧಾನಿ ನೆಹರು ಅಕ್ಟೋಬರ್ ೧೨, ೧೯೪೬ರ? ಹಿಂದೆಯೇ ಪ್ರಕಟಿಸಿದ್ದಾರೆ; ಮತ್ತು ಐಎನ್ಎಯ ಜೆ.ಕೆ. ಬೋನ್ಸ್ಲೆ ನೇತಾಜಿ ಚಿತಾಭಸ್ಮ ಟೋಕಿಯೋದ ರೆಂಕೋಜಿ ಬೌದ್ಧ ದೇವಾಲಯದಲ್ಲಿದೆ ಎಂದು ೧೯೫೧ರ ಮಾರ್ಚ್ನಲ್ಲಿ ತಿಳಿಸಿದ್ದಾರೆ – ಎಂದು ಸಚಿವ ಕೇಸ್ಕರ್ ಉತ್ತರಿಸಿದರು.

ತನಿಖೆಗಾಗಿ ನಿರ್ಣಯ
ಆದರೆ ಕಾಂಗ್ರೆಸ್ ಬಹುಮತದ ಪಶ್ಚಿಮಬಂಗಾಳ ವಿಧಾನಸಭೆ ೧೯೫೨ ಆಗಸ್ಟ್ನಲ್ಲಿ ನಿರ್ಣಯವೊಂದನ್ನು ಅಂಗೀಕರಿಸಿ, ನೇತಾಜಿ ಸಾವಿನ ಬಗ್ಗೆ ತನಿಖೆ ನಡೆಸಬೇಕೆಂದು ಒತ್ತಾಯಿಸಿತು. ಅವರು ತಾಪೆಯಲ್ಲಿ ಮೃತಪಟ್ಟರೆನ್ನುವುದು ಒಂದು ಕಟ್ಟುಕತೆ; ಶತ್ರುಗಳ ದಾರಿ ತಪ್ಪಿಸಲು ಬೋಸರೇ ಹಬ್ಬಿಸಿದ ಕಥೆ; ಅವರು ರ?ದ ಒಂದು ಅಜ್ಞಾತ ಸ್ಥಳಕ್ಕೆ ಹೋಗಿದ್ದಾರೆ. ತಮ್ಮ ರಾಷ್ಟ್ರೀಯ ಹೀರೋವನ್ನು ಈ ರೀತಿ ಸೌಜನ್ಯ, ಸಹಾನುಭೂತಿ ಇಲ್ಲದೆ ಯಾರಾದರೂ ಬದಿಗೊತ್ತಬಹುದೆ? ಇಂತಹ ಹೊಟ್ಟೆಕಿಚ್ಚು, ಸಣ್ಣತನ, ಕೃತಘ್ನತೆ ಬೇರೆ ಎಲ್ಲಾದರೂ ಇರಬಹುದೆ? ಎಂದು ನಿರ್ಣಯ ಮಂಡಿಸಿದ ಹಿಂದಿನ ಕ್ರಾಂತಿಕಾರಿ ಡಾ|| ಅತೀಂದ್ರನಾಥ ಬೋಸ್ ಪ್ರಶ್ನಿಸಿದರು. ಬಂಗಾಳ ವಿಧಾನಸಭೆಯ ನಿರ್ಣಯ ಮತ್ತು ಒತ್ತಾಯಗಳು ಬಂದರೂ ಪ್ರಧಾನಿ ನೆಹರು ತನಿಖೆಗೆ ಸಮ್ಮತಿಸಲಿಲ್ಲ.
ಈ ನಡುವೆ ರೆಹಮಾನ್ ನೀಡಿದ ಒಂದು ಸ್ಫೋಟಕ ಹೇಳಿಕೆ ವಿದೇಶಾಂಗ ಕಾರ್ಯದರ್ಶಿ ಸುಬಿಮಲ್ ದತ್ ಅವರ ಗಮನಕ್ಕೆ ಬಂತು. ಮಂಚೂರಿಯದ ಡಾರೆನ್ (ಆಚಿiಡಿeಟಿ)ನಲ್ಲಿ ವಿಮಾನದಿಂದ ಇಳಿಯುವುದು ಬೋಸ್ ಉದ್ದೇಶವಾಗಿತ್ತು; ಹಾಗೆಯೇ ರ?ದ ವಶದಲ್ಲಿದ್ದ ಪ್ರದೇಶಕ್ಕೆ ಅವರನ್ನು ದಾಟಿಸಲು ಜಪಾನಿ ಅಧಿಕಾರಿಗಳು ಯೋಜನೆಯನ್ನು ರೂಪಿಸಿದ್ದರು ಎಂದಾತ ಹೇಳಿದ್ದರು. ಆಗ ಮುಂಬಯಿ ರಾಜ್ಯದ ಪ್ರಚಾರ ನಿರ್ದೇಶಕರಾಗಿದ್ದ ಎಸ್.ಎ. ಅಯ್ಯರ್ ಪ್ರಧಾನಿ ನೆಹರು ಅವರ ಸೂಚನೆಯ ಮೇರೆಗೆ ಒಂದು ವರದಿಯನ್ನು ನೀಡಿದರು. ರೆಂಕೋಜಿಯಲ್ಲಿರುವ ಚಿತಾಭಸ್ಮ ನೇತಾಜಿಯದ್ದು ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನುವ ಅದರಲ್ಲಿನ ಮಾತಿನಿಂದ ಸಿಟ್ಟಾದ ನೇತಾಜಿ ಬಂಧು ಅರೊಬಿಂದೋ ಚಿಕ್ಕಪ್ಪನ ’ಚಿತಾಭಸ್ಮ’ವನ್ನು ಭಾರತಕ್ಕೆ ತರುವುದಕ್ಕೆ ಇದು ಪೀಠಿಕೆ ಎಂದು ಟೀಕಿಸಿದರು.
‘ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್’ನ ಮಾಜಿ ಪ್ರಧಾನ ಕಾರ್ಯದರ್ಶಿ ದಾಸ್ ಅವರು ನೀಡಿದ ಹೇಳಿಕೆಯಲ್ಲಿ ಜಪಾನಿನ ಎದುರಿಗಿದ್ದ ತುಂಬ ಸೂಕ್ಷ್ಮ ಸನ್ನಿವೇಶವನ್ನು ನಾವು ನೆನಪಿಡಬೇಕು. ಯುದ್ಧಾಪರಾಧಿಗಳ ವಿಚಾರಣೆ, ಇತರ ಅಂತಾರಾಷ್ಟ್ರೀಯ ಜಟಿಲತೆಗಳು, ಮತ್ತು ಭಾರತದಲ್ಲಿ ಅಧಿಕಾರದಲ್ಲಿರುವವರು ನೇತಾಜಿ ಬಗ್ಗೆ ಗುಪ್ತ ದ್ವೇ? ಹೊಂದಿರುವುದು – ಇದೆಲ್ಲ ಇಲ್ಲಿವೆ. ಆದ್ದರಿಂದ ಜಪಾನಿಗೆ ಸ್ವಲ್ಪ ರಿಯಾಯಿತಿ ನೀಡಬೇಕು. ಈ ನಡುವೆ ನಮ್ಮ ಕೆಲವು ಸಹೋದ್ಯೋಗಿಗಳು ಲಾಗ ಹೊಡೆದಿದ್ದಾರೆ ಎಂದರು. ಭಾರತ ಸರ್ಕಾರ ಅಯ್ಯರ್ ಅವರನ್ನು ತನಿಖೆಯ ಬಗ್ಗೆ ನೇಮಿಸಿದ್ದನ್ನು ಮತ್ತು ಆತ ನೀಡಿದ ವರದಿಯನ್ನು ಗುಟ್ಟಾಗಿ ಇಟ್ಟುದನ್ನು ಕೂಡ ದಾಸ್ ಟೀಕಿಸಿದರು. ವಿಮಾನದುರಂತ ಒಂದು ಕಟ್ಟುಕತೆ ಎಂದು ಕೆಲವು ಜಪಾನೀಯರು ತನ್ನಲ್ಲಿ ಹೇಳಿದ್ದರು. ಜಪಾನಿ ಸೇನಾ ಜಾಗೃತದಳದ ಮುಖ್ಯಸ್ಥನೇ ತನ್ನನ್ನು ಭೇಟಿ ಮಾಡಿ, ಈ ವಿಮಾನ ದುರಂತವನ್ನು ನಿಜವಾದ ದುರಂತ ಎಂದು ನಂಬಬೇಡಿ ಎಂದು ಹೇಳಿದ್ದರೆಂದು ವಿವರಿಸಿದರು.

4

ಪ್ರಾಣರಕ್ಷಣೆ ಭರವಸೆ
ಕೊನೆಯ ಹಾರಾಟವನ್ನು ನಿರ್ವಹಿಸಿದವರ ಬಗ್ಗೆ ದಾಸ್ಗೆ ಕೋಪವಿತ್ತು. ಸೈಗಾನ್ ತಲಪಿದಾಗ ಜಪಾನಿ ಸೇನಾಧಿಕಾರಿಗಳು ವಿಮಾನದಲ್ಲಿ ಜಾಗವಿಲ್ಲವೆಂದು ನಮ್ಮನ್ನು ಪ್ರತ್ಯೇಕಿಸಿದರು. ಮಾತ್ರವಲ್ಲ, ನೇತಾಜಿಯನ್ನು ಟೋಕಿಯೋಗೆ ಕರೆದೊಯ್ಯಬೇಕು ಎಂದರು. ಅವರು ಯೋಜನೆಯನ್ನು ಬದಲಿಸುತ್ತಾ ಇದ್ದರು. ಏಕೆಂದು ಗೊತ್ತಿಲ್ಲ. ಮತ್ತೆ ಜ| ಇಸೋಡ ನನ್ನಲ್ಲಿ ’ನಾನು ಬದುಕಿರುವವರೆಗೆ ಅವರನ್ನು (ಬೋಸರನ್ನು) ಸುರಕ್ಷಿತವಾಗಿ ನೋಡಿಕೊಳ್ಳುವೆ’ ಎಂದು ಹೇಳಿ ಸಮಾಧಾನಪಡಿಸಿದರು ಎಂದವರು ಹೇಳಿದ್ದರು.
ಅಯ್ಯರ್ ವರದಿಯನ್ನು ನೆಹರು ಸರ್ಕಾರ ಸಂಸತ್ತಿನಲ್ಲಿ ಹಾಗೇ ಮಂಡಿಸಲಿಲ್ಲ. ನೇತಾಜಿ ಮತ್ತು ಜ| ಶಿಡೈ ಅವರನ್ನು ಮಂಚೂರಿಯದ ಡಾರೆನ್ನಲ್ಲಿ ಇಳಿಸುವುದು ಜಪಾನಿನ ಉನ್ನತಮಟ್ಟದ ರಹಸ್ಯ ಯೋಜನೆಯಾಗಿತ್ತು ಎಂಬುದನ್ನು ಸಂಸತ್ತಿಗೆ ತಿಳಿಸಲೇ ಇಲ್ಲ. ಡಾರೆನ್ನಲ್ಲಿ ಇರುವ ತನಕ ರ?ನ್ ಭಾ?ಯನ್ನೂ ಬಲ್ಲ ಜ| ಶಿಡೈ ನೇತಾಜಿಯವರನ್ನು ನೋಡಿಕೊಳ್ಳಬೇಕು; ಬಳಿಕ ನೇತಾಜಿ ರ?-ನಿಯಂತ್ರಿತ ಪ್ರದೇಶಕ್ಕೆ ನುಸುಳಬೇಕು; ಮತ್ತೆ ಜಪಾನ್ ನೇತಾಜಿ ಇಲ್ಲವಾದರೆಂದು ಜಗತ್ತಿಗೆ ಘೋಷಿಸಬೇಕು; ಇದು ಯೋಜನೆ. ಜಪಾನಿ ಸೇನಾಧಿಕಾರಿ ಕ| ಟ್ರಾಡಾ ಇದನ್ನು ಅಯ್ಯರ್ಗೆ ಹೇಳಿ, ಬರೆದು ಕೂಡ ಕೊಟ್ಟಿದ್ದರು. ಪ್ರಧಾನಿ ಅದನ್ನು ಪೂರ್ತಿ ಬಚ್ಚಿಟ್ಟರು ಎಂಬುದು ಆರೋಪ. ನೇತಾಜಿಯನ್ನು ರ?ನರ ಬಳಿ ಕಳುಹಿಸುವುದು ಜಪಾನಿನ ಏಕೈಕ ಉದ್ದೇಶವಾಗಿದ್ದು, ಜ| ಟಾಡಾ ಅಯ್ಯರ್ಗೆ ನೀಡಿದ ರಹಸ್ಯ ಟಿಪ್ಪಣಿಯಲ್ಲಿ ಅದಿತ್ತು. ಮಂಚೂರಿಯಕ್ಕೆ ಹೋಗಿ ಅಲ್ಲಿಂದ ಮಾಸ್ಕೋ ತಲಪುವುದು ನೇತಾಜಿ ಉದ್ದೇಶವಾಗಿದ್ದು, ಜರ್ಮನಿ ಪತನದ ಬಳಿಕ ಮಾರ್ಚ್ ಅಥವಾ ಏಪ್ರಿಲ್(೧೯೪೫)ನಿಂದಲೇ ಕೇಳುತ್ತಿದ್ದರು. ಜಪಾನಿ ದಂಡನಾಯಕ ಫೀ| ಮಾ| ತೇರೌಚಿಗೆ ನೇತಾಜಿ ಬಗ್ಗೆ ತುಂಬ ಗೌರವವಿದ್ದು, ಅವರ ಇ?ದಂತೆ ಏನು ಬೇಕಾದರೂ ಮಾಡಲಿ ಎಂದು ಜ| ಶಿಡೈಗೆ ಹೇಳಿದ್ದರು. ಮುಖ್ಯವಾಗಿ ರಹಸ್ಯ ಕಾಪಾಡುವ ಉದ್ದೇಶದಿಂದ ವಿಮಾನದಲ್ಲಿ ನೇತಾಜಿಗೆ ಒಂದು ಸೀಟು ಮಾತ್ರ ನೀಡಲಾಗಿತ್ತು. ಮತ್ತೆ ಅವರು ರ?ನರನ್ನು ಸ್ವತಃ ಸಂಪರ್ಕಿಸಿ ತನ್ನ ಕೆಲಸ ಮಾಡಿಕೊಳ್ಳಬೇಕೆಂಬುದು ತೀರ್ಮಾನ. ಮೊದಲಿಗೆ ನೇತಾಜಿ ಡಾರೆನ್ನಲ್ಲಿ ನಾಪತ್ತೆ ಆದರೆಂದು ಜಪಾನ್ ಜಗತ್ತಿಗೆ ತಿಳಿಸಬೇಕು. ಆಗ ಮಿತ್ರರಾಷ್ಟ್ರಗಳ ದೃಷ್ಟಿಯಲ್ಲಿ ನೇತಾಜಿಯವರ ರಕ್ಷಣೆಯ ಹೊಣೆ ಜಪಾನಿಗೆ ಇರುವುದಿಲ್ಲವೆಂದು ಭಾವಿಸಲಾಗಿತ್ತು. ಮತ್ತೆ ಅದನ್ನು ಬದಲಿಸಿ ತೈವಾನ್ ದ್ವೀಪವನ್ನು ಆರಿಸಿಕೊಂಡರು.

ಎಸ್.ಎ. ಅಯ್ಯರ್ ನೆಹರು ಅವರ ಕೈಯಳತೆಯಲ್ಲೇ ಇದ್ದರು. ತನ್ನ ಪುಸ್ತಕದಲ್ಲಿ ಅಯ್ಯರ್ ನೇತಾಜಿ ಮೃತರಾಗಿರಬೇಕು; ಇಲ್ಲವಾದರೆ ತಮ್ಮ ಅಣ್ಣ ಶರಚ್ಚಂದ್ರ ಬೋಸರನ್ನು ಸಂಪರ್ಕಿಸದೆ ಇರುತ್ತಿರಲಿಲ್ಲ ಮುಂತಾಗಿ ಬರೆದರು. ಆದರೂ ಸಂಶಯಗಳು ಬೆಳೆದವು. ಬಂಗಾಳದ ಮಾಜಿ ಮಂತ್ರಿ ನೀಹಾರೇಂದು ದತ್ ಮಜುಂದಾರ್ ಅವರು ಪ್ರಧಾನಿ ನೆಹರು ಅವರಿಗೆ ಪತ್ರ ಬರೆದು, ವಿಶೇ? ಸತ್ಯಶೋಧಕ ಆಯೋಗವನ್ನು ರಚಿಸಬೇಕೆಂದು ಒತ್ತಾಯಿಸಿದರು. ಆಗ ನೀಡಿದ ಒಂದು ಹೇಳಿಕೆಯಲ್ಲಿ (ಜನವರಿ, ೧೯೫೪) ನೆಹರು, ನೇತಾಜಿ ಬೋಸ್ ಬಗ್ಗೆ ಸತ್ಯವನ್ನು ಪತ್ತೆಮಾಡಲು ಭಾರತ ಸರ್ಕಾರ ಇನ್ನೇನು ಮಾಡಬಹುದೆಂದು ನನಗೆ ತಿಳಿಯುತ್ತಿಲ್ಲ. ನಾವು ಸಾಧ್ಯವಾದ ಎಲ್ಲವನ್ನೂ ಮಾಡಿದೆವು; ಮತ್ತು ಲಭ್ಯವಿರುವ ಎಲ್ಲ ಸತ್ಯಾಂಶಗಳನ್ನು ಸಂಗ್ರಹಿಸಿದ್ದೇವೆ. ಅವುಗಳ ಬಗ್ಗೆ ನನಗೆ ಯಾವುದೇ ಸಂಶಯವಿಲ್ಲ ಎಂದು ತೋಡಿಕೊಂಡರು.
ಆರು ತಿಂಗಳಾಗುವಾಗ ವಿ?ಯ ಮತ್ತೆ ಮೇಲೆ ಬಂತು. ಬರ್ಹಾಂಪುರ ನಗರಸಭೆ ನಿರ್ಣಯವೊಂದರ ಮೂಲಕ ತನಿಖಾ ಆಯೋಗ ನೇಮಿಸಬೇಕೆಂದು ಕೇಂದ್ರಸರ್ಕಾರವನ್ನು ಆಗ್ರಹಿಸಿತು. ಅದಕ್ಕೆ ಪ್ರಧಾನಿಯ ಆಪ್ತಕಾರ್ಯದರ್ಶಿ ಉತ್ತರಿಸಿದರು: ನಡೆಸಬಹುದಾದ ಎಲ್ಲ ತನಿಖೆಗಳನ್ನೂ ಭಾರತ ಸರ್ಕಾರ ನಡೆಸಿದೆ. ನೇತಾಜಿ ವಿಮಾನ ದುರಂತದಲ್ಲಿ ಸತ್ತರೆಂಬುದು ಫಲಿತಾಂಶ. ಇನ್ನು ತನಿಖೆ ಅಗತ್ಯ ಎನಿಸುವುದಿಲ್ಲ ಎಂದವರು ಹೇಳಿದರು.

7

‘ದುರಂತ’ಕ್ಕೆ ೧೦ ವರ್ಷ
ಈ ನಡುವೆ ವಿಮಾನದುರಂತಕ್ಕೆ ಹತ್ತು ವ? ಆಯಿತು. ರೆಂಕೋಜಿ ಬೌದ್ಧ ದೇವಳದ ಅರ್ಚಕ ತಮ್ಮ ಕ್ರಮದಂತೆ ಆಗಸ್ಟ್ ೧೮, ೧೯೫೫ರಂದು ಸ್ಮಾರಕಸೇವೆಯನ್ನು ನಡೆಸಲಿದ್ದಾರೆ, ಅದರಲ್ಲಿ ಭಾರತದ ರಾಯಭಾರಿ ಭಾಗವಹಿಸಬೇಕು ಎಂಬ ಪ್ರಸ್ತಾವ ಬಂತು. ಅದಕ್ಕೆ ರಾಯಭಾರಿ ಈ ವಿ?ಯದಲ್ಲಿ ಅಭಿಪ್ರಾಯ ವಿಭಜಿತವಾಗಿದೆ. ಭಾಗವಹಿಸಿದರೆ ವಿವಾದ ಉಂಟಾದೀತು. ಒಟ್ಟಾರೆಯಾಗಿ ದೇಶ ಒಪ್ಪಿಕೊಳ್ಳಬಹುದು. ಆದರೆ ಬಂಗಾಳದ ಜನ ನೇತಾಜಿ ಸತ್ತಿದ್ದಾರೆಂದು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಆದ್ದರಿಂದ ಚಿತಾಭಸ್ಮ ಸಾಚಾ ಎನಿಸುವುದಿಲ್ಲ. ಬಂಗಾಳದವರು ನೇತಾಜಿ ಮರಣವನ್ನು ಒಪ್ಪಿಕೊಳ್ಳುವ ತನಕ ವಿ?ಯದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವುದು ಉತ್ತಮ ಎಂದು ಬರೆದು ತಿಳಿಸಿದರು.
ತಿಂಗಳಾಗುವಾಗ ಆ ವಿ?ಯ ಮತ್ತೆ ಬಿಸಿಯಾಯಿತು. ಸೆಪ್ಟೆಂಬರ್ ೧೮ರಂದು ಸಂಪ್ರದಾಯದಂತೆ ಇನ್ನೊಂದು ಪೂಜೆ ನಡೆಯಬೇಕು ಮತ್ತು ಚಿತಾಭಸ್ಮವನ್ನು ಭಾರತಕ್ಕೆ ಕಳುಹಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕೆನ್ನುವ ಒತ್ತಾಯ ಬಂತು. ಆದರೆ ಅದಕ್ಕೆದುರಾಗಿ ನೇತಾಜಿ ಸಾವನ್ನು ದೃಢಪಡಿಸಬೇಕು; ಜೊತೆಗೆ ನಾಪತ್ತೆಯಾದ ಐಎನ್ಎ ಖಜಾನೆ ಬಗ್ಗೆ ತನಿಖೆ ನಡೆಸಬೇಕು ಎನ್ನುವ ಬೇಡಿಕೆ ಸೇರಿಕೊಂಡಿತು. ಏ?ದ ಭಾರತೀಯರು ಐಎನ್ಎಗೆ ನೀಡಿದ ಬಂಗಾರ ಮತ್ತು ಆಭರಣಗಳ ನಾಲ್ಕು ಪೆಟ್ಟಿಗೆ ಬೋಸ್ ಜೊತೆ ವಿಮಾನದಲ್ಲಿ ಇದ್ದವಲ್ಲವೆ? ದುರಂತ ಸಂಭವಿಸುವಾಗ ಅದಕ್ಕೆ ಏನಾಯಿತು? ಎಲ್ಲಿಗೆ ಹೋಯಿತು? ಎಂಬ ಪ್ರಶ್ನೆ ಬಂತು. ಆಗ ಜಪಾನಿ ಸುದ್ದಿಸಂಸ್ಥೆ ಕ್ಯೊಡೊ ನೇತಾಜಿ ಇನ್ನೂ ಬದುಕಿದ್ದಾರೆಂದು ಹಲವರು ಹೇಳುತ್ತಾರೆ; ಅಥವಾ ಬಂಗಾರಕ್ಕಾಗಿ ಅವರನ್ನು ಯಾರಾದರೂ ಕೊಂದಿರಬಹುದೆ? ಎನ್ನುವ ಒಂದು ಪ್ರಶ್ನೆಯನ್ನು ಹಾಕಿತು; ಬಂಗಾರದ ಪೆಟ್ಟಿಗೆಗಳನ್ನು ನೇತಾಜಿ ಸಾಗಿಸಿರಬಹುದು; ಆದರೆ ಐಎನ್ಎಗೆ ಸೇರಿದ ಇತರ ಆಸ್ತಿಗಳನ್ನು ಅವರ ಕೆಲವು ನಿಕಟವರ್ತಿಗಳು ಕಬಳಿಸಿದರೆನ್ನುವ ಆರೋಪ ಕೂಡ ಕೇಳಿಬಂತು. ಜಪಾನಿಗೆ ಚಿತಾಭಸ್ಮವನ್ನು ಭಾರತಕ್ಕೆ ಕಳುಹಿಸಬೇಕು ಮತ್ತು ನೇತಾಜಿ ಜೀವರಕ್ಷಣೆ ಹಾಗೂ ಐಎನ್ಎ ಆಸ್ತಿ-ಸೊತ್ತುಗಳ ಬಗೆಗಿನ ಸಂಶಯಗಳಿಗೆ ಮಂಗಳ ಹಾಡಬೇಕು ಎನಿಸಿತ್ತು.

ಸೆಪ್ಟೆಂಬರ್ ೬, ೧೯೫೫ರಂದು ಕಲ್ಕತ್ತಾದಲ್ಲಿ ಜರಗಿದ ನೇತಾಜಿ ಸ್ಮಾರಕ ಸಭೆಯಲ್ಲಿ ಐಎನ್ಎ ಮುಂದಾಳು ?ನವಾಜ್ ಭಾಗವಹಿಸಿದ್ದರು. ಆ ಹೊತ್ತಿಗೆ ಕಾಂಗ್ರೆಸ್ ನಾಯಕನಾಗಿದ್ದ ಅವರು ಸಭೆಯಲ್ಲಿ ವಿಮಾನ ದುರಂತದ ಬಗ್ಗೆ ಅಧಿಕೃತ ತನಿಖೆ ನಡೆಸಲು ಪ್ರಧಾನಿ ನೆಹರು ಸಿದ್ಧರಿಲ್ಲ ಎಂದು ತಿಳಿಸಿದಾಗ ಸಭೆಯಲ್ಲಿ ಭಾರೀ ಗದ್ದಲವಾಯಿತು. ಜನರ ಹಣದಿಂದಲೇ ತನಿಖೆ ನಡೆಸೋಣ ಎಂಬ ನಿರ್ಣಯ ಸಭೆಯಲ್ಲಿ ಅಂಗೀಕಾರವಾಯಿತು. ನೇತಾಜಿ ಅಣ್ಣ ಶರಚ್ಚಂದ್ರ ಬೋಸ್ ೧೯೫೦ರಲ್ಲಿ ನಿಧನ ಹೊಂದಿದ್ದರು. ಅವರು ನಡೆಸುತ್ತಿದ್ದ ಹೋರಾಟವನ್ನು ಇನ್ನೋರ್ವ ಅಣ್ಣ ಸುರೇಶ್ಚಂದ್ರ ಬೋಸ್ ಎತ್ತಿಕೊಂಡರು. ನೇತಾಜಿ ಸುರಕ್ಷಿತವಾಗಿ ರ? ಕಡೆಗೆ ಹೋಗಿದ್ದಾರೆ ಎಂದು ಹಲವು ಸಲ ಹೇಳಿದ್ದ ?ನವಾಜ್ ಕ್ರಮೇಣ ವಿಮಾನದುರಂತ ಸಂಭವಿಸಿಲ್ಲ ಎಂಬವರನ್ನು ದೂರ ಇಡುತ್ತಿದ್ದರು. ಇಂತಹ ?ನವಾಜ್ಖಾನ್ ಮಹತ್ತ್ವ ನೆಹರು ಸರ್ಕಾರಕ್ಕೆ ಗೊತ್ತಾಯಿತು; ಮತ್ತು ತನಿಖೆಯ ಬಗೆಗಿನ ಅದರ ನಿಲವು ಕೂಡ ಬದಲಾಯಿತು.

ಮೂವರ ಸಮಿತಿ ನೇಮಕ
ಅಕ್ಟೋಬರ್ ೧೩, ೧೯೫೫ರಂದು ಕೇಂದ್ರಸರ್ಕಾರ ತಾಪೆ ವಿಮಾನದುರಂತ ಮತ್ತು ನೇತಾಜಿ ಸಾವಿನ ತನಿಖೆ ನಡೆಸಲು ಮೂವರ ತಂಡದ ರಚನೆ ಬಗ್ಗೆ ಕ್ರಮ ಕೈಗೊಂಡಿತು. ಸರ್ಕಾರ, ಐಎನ್ಎ ಮತ್ತು ಬೋಸ್ ಕುಟುಂಬವನ್ನು ಪ್ರತಿನಿಧಿಸುವ ಮೂವರು ಸದಸ್ಯರು. ಬೋಸ್ ಕುಟುಂಬದ ಪರವಾಗಿ ಮೊದಲಿಗೆ ಶರಚ್ಚಂದ್ರರ ಪುತ್ರ ಅಮಿಯನಾಥ ಬೋಸ್ ಆಯ್ಕೆಯಾಗಿದ್ದರು; ಅನಂತರ ಅವರು ಹಿಂದೆಸರಿದು ಸುರೇಶ್ಚಂದ್ರ ಬೋಸ್ ಸೇರಿಕೊಂಡರು. ?ನವಾಜ್ ಸಮಿತಿಯ ಅಧ್ಯಕ್ಷರು; ಸಂಸದೀಯ ಸಮಿತಿ ಕಾರ್ಯದರ್ಶಿ ಶಂಕರ್ ಮೈತ್ರ ಇನ್ನೋರ್ವ ಸದಸ್ಯರು. ಸುಭಾಶ್ ಬೋಸ್ ಸಾವಿನ ಸನ್ನಿವೇಶದ ಬಗ್ಗೆ ಮತ್ತು ಅವರ ಚಿತಾಭಸ್ಮದ ಕುರಿತು ಭಾರತದಲ್ಲಿ ತುಂಬ ಆಸಕ್ತಿ ಇದೆ. ಆದ್ದರಿಂದ ಆ ಕುರಿತು ತನಿಖೆ ನಡೆಸಿ ಜನರ ಮನಸ್ಸಿನ ಸಂಶಯವನ್ನು ದೂರ ಮಾಡಬೇಕು ಎಂದು ಸಮಿತಿಯ ಕಾರ್ಯವ್ಯಾಪ್ತಿಯನ್ನು ಸೂಚಿಸಲಾಯಿತು. ’ನೇತಾಜಿ ತನಿಖಾ ಸಮಿತಿ’ (ಓಚಿಣಚಿರಿi Iಟಿquiಡಿಥಿ ಅommiಣಣee – ಓIಅ) ಎಂದು ಅದಕ್ಕೆ ಹೆಸರು.
ಸಮಿತಿಯ ಆರಂಭದಿಂದಲೂ ವಿದೇಶಾಂಗ ಇಲಾಖೆ ಕಾಣದ ಕೈಯಾಗಿ ಕೆಲಸ ಮಾಡುತ್ತಾ ಬಂತು. ಅದರಲ್ಲಿ ಟಿ.ಎನ್. ಕೌಲ್ ಮತ್ತು ಎ.ಕೆ.ಧರ್ ಪ್ರಮುಖರು. ಜಪಾನಿನಲ್ಲಿದ್ದ ಭಾರತ ರಾಯಭಾರಿ ಸೇನ್ ಅವರಿಗೆ ಕೌಲ್ ಪತ್ರ ಬರೆದು, ಸಮಿತಿ ಎಲ್ಲೆಲ್ಲಿಗೆ ಹೋಗಬೇಕೆಂದು ಧರ್ ತಿಳಿಸುತ್ತಾರೆ ಎಂದು ಗಮನ ಸೆಳೆದರು. ಧರ್ ಜಪಾನ್ ಸರ್ಕಾರದೊಂದಿಗೆ ರಹಸ್ಯಸಭೆ ನಡೆಸಿದರು. ತಮ್ಮಿಂದಾಗಿ ಬೋಸ್ ಸತ್ತರೆಂಬ ಪಾಪಪ್ರಜ್ಞೆ ಜಪಾನೀಯರನ್ನು ಕಾಡುತ್ತಿದ್ದಿರಬೇಕು; ಅದರ ಅಧಿಕಾರಿಗಳು ಬಹುತೇಕ ಮೌನವಾಗಿದ್ದರು. ತನಿಖೆಗೆ ಬೇರೆ ಅಂಶ ಸೇರುವುದಿಲ್ಲ ಎಂದು ಖಾತ್ರಿಪಡಿಸಿಕೊಳ್ಳಲಾಯಿತು. ಈವರೆಗೆ ಬೋಸರ ಸಾವು ಎಂಬ ಪದವನ್ನು ಬಳಸಿದ್ದು, ಇನ್ನು ’ನಾಪತ್ತೆ’ ಎಂಬ ಪದವನ್ನು ಬಳಸೋಣ ಎಂದು ಸಮಿತಿಯ ಸದಸ್ಯರು ಹೇಳಿದಾಗ ಕೌಲ್, ’ಅದು ಬೇಡ; ’ಸಾವು ಎನ್ನಲಾದ’ (ಸಾವೆಂದು ಹೇಳಲಾದ) ಎಂದು ಬಳಸಿ’ ಎಂದು ಸಲಹೆ ನೀಡಿದರು.
೭೮ ಪುಟಗಳ ವರದಿ ಬಳಸಿಕೊಂಡ ಛಾಯಾಚಿತ್ರಗಳಲ್ಲಿ ವಿಮಾನದ ಅವಶೇ?, ಸುತ್ತಿ ಇಟ್ಟ ಒಂದು ಶರೀರ, ಬ್ಯಾಂಡೇಜ್ ಹಾಕಿದ ರೆಹಮಾನ್, ಚಿತಾಭಸ್ಮದ ಕರಂಡಕ, ರೆಂಕೋಜಿ ದೇವಾಲಯ – ಇವು ಸೇರಿವೆ. ಒಂದನೇ ಅಧ್ಯಾಯ ನೇತಾಜಿ ಹೊಂದಿದ ರ? ಸಂಬಂಧ, ಅಲ್ಲಿಗೆ ಹೋಗುವ ಬಗೆಗಿನ ಅವರ ಯೋಜನೆಯನ್ನು ಹೇಳುವ ಬದಲು ಅದು ಕೊನೆಕ್ಷಣದ ಯೋಜನೆ ಎನ್ನುತ್ತದೆ. ನಿಜವೆಂದರೆ, ಬೋಸ್ ಸಾವಿನ ಬಗ್ಗೆ ಹೇಳಿದ ವೈದ್ಯ ಡಾ|| ಯೋಶಿಮಿ ಅವರಿಗೆ ಬೋಸ್ ಬಗ್ಗೆ ಗೊತ್ತೇ ಇಲ್ಲ. ಆ ಕೊರತೆಯನ್ನು ಅವರು ಸಾಕ್ಷ್ಯ ಹೇಳುವಾಗ ಸಿಕ್ಕಾಪಟ್ಟೆ ಅಳುವ ಮೂಲಕ ತುಂಬಿಕೊಟ್ಟರು. ಪಾಕಿಸ್ತಾನದ ಪ್ರಜೆಯಾಗಿ ಅಲ್ಲಿ ಸರ್ಕಾರಿ ಅಧಿಕಾರಿಯಾಗಿದ್ದ ರೆಹಮಾನ್ ದೆಹಲಿಗೆ ಬಂದು ಸಾಕ್ಷ್ಯ ನುಡಿದರಾದರೂ, ಅದನ್ನು ರಹಸ್ಯವೆಂದು ಗುರುತಿಸಿದ ಕಾರಣ, ಅದು ಎಲ್ಲೂ ಸಿಗುವುದಿಲ್ಲ. ವಿಮಾನ ಬಿದ್ದ ಬಗೆಗಿನ ಆತನ ಹೇಳಿಕೆ, ಇನ್ನೊಬ್ಬರ ಹೇಳಿಕೆ ಹಾಗೂ ಇಂಜಿನಿಯರ್ ಹೇಳಿಕೆಗಳು ಪರಸ್ಪರ ತಾಳೆ ಆಗಲಿಲ್ಲ. ರೆಹಮಾನ್ ರನ್ವೇ ಮೇಲೇ ಬಿತ್ತು ಎಂದರೆ ಇನ್ನೊಬ್ಬರು ಒಂದೂವರೆ ಮೈಲು ದೂರ ಎಂದರು; ಇಂಜಿನಿಯರ್ ರನ್ವೇಯಿಂದ ನೂರು ಮೀಟರ್ ದೂರದಲ್ಲಿ ಎಂದು ತಿಳಿಸಿದರು. ಒಬ್ಬನೇ ಸಾಕ್ಷಿ ಎರಡು ರೀತಿ ಹೇಳಿದ್ದೂ ಇದೆ. ಹೀಗೆ ಪರಸ್ಪರ ವಿರೋಧ ಕಂಡುಬಂದಾಗ ?ನವಾಜ್ ಸತ್ಯವನ್ನು ತಿಳಿಯಲು ಪ್ರಯತ್ನಿಸುವ ಬದಲು ತಮಗೆ ಬೇಕಾದುದನ್ನು ಎತ್ತಿಕೊಂಡರು. ಸಮಿತಿ ಕಂಡುಕೊಂಡ ಮುಖ್ಯಾಂಶಗಳು ಹೀಗಿವೆ:

6

ವರದಿ ಮುಖ್ಯಾಂಶಗಳು
1.ತಾಹೋಕು ವಿಮಾನನಿಲ್ದಾಣದಲ್ಲಿ ವಿಮಾನ ನಿಂತ ಸಮಯ ಅರ್ಧ ಗಂಟೆಯಿಂದ ಎರಡು ಗಂಟೆ ತನಕ ವಿಸ್ತರಿಸಿದೆ.
2.ವಿಮಾನ ಹಾರಿದ ಎತ್ತರದ ಬಗ್ಗೆ ಬೇರೆಬೇರೆ ಲೆಕ್ಕಗಳಿವೆ.
3.ರೆಹಮಾನ್ ವಿಮಾನವು ಮುಂಭಾಗದಲ್ಲಿ ಒಡೆಯಿತು. ಎಂದರೆ ಕ್ಯಾ| ನಕಾಮುರಾ ಪ್ರಕಾರ ವಿಮಾನ ಒಡೆಯಲೇ ಇಲ್ಲ ಎಂದರು. ಇನ್ನು ಲೆ|ಕ| ನೋನೇಗಾಕಿ ವಿಮಾನ ಎರಡು ತುಂಡಾಗಿ ಬೇರೆಬೇರೆ ಕಡೆ ಬಿದ್ದಿತ್ತು ಎಂದರು.
4.ಮೇ| ತಕಾಹಕಿ ಹೇಳಿದ್ದು ಬೇರೆಯೇ ಕಥೆ; ಬಿದ್ದ ವಿಮಾನದ ಎಡ ಮುಂಭಾಗದಿಂದ ನೇತಾಜಿ ಬಂದರು. ಅವರ ಬಟ್ಟೆಗೆ ಬೆಂಕಿ ಹಿಡಿದಿತ್ತು. ಕೋಟ್ ತೆಗೆಯಲು ಯತ್ನಿಸುತ್ತಿದ್ದರು. ತಾನು ಅವರ ಬಳಿಗೆ ಹೋಗಿ ನೆಲದ ಮೇಲೆ ಉರುಳಾಡಿಸಿದೆ. ಬಟ್ಟೆಯ ಬೆಂಕಿ ಆರಿತು; ರೆಹಮಾನ್ ಅಲ್ಲಿದ್ದರೂ ಕೂಡ ಏನೂ ಮಾಡಲಿಲ್ಲ ಎಂದಾತ ಹೇಳಿದರು.
5.ಕ್ಯಾ| ನಕಾಮುರಾ ಹೇಳಿಕೆ ನೀಡಿ, ಎರಡು ಪೈಲಟ್ಗಳು ಜ| ಶಿಡೈ ಜೊತೆಗೇ ಮೃತಪಟ್ಟರು, ಅವರ ಚಿತಾಭಸ್ಮವನ್ನು ಮೂರು ಪೆಟ್ಟಿಗೆಗಳಿಗೆ ಹಾಕಿತ್ತು ಎಂದರೆ ಡಾಕ್ಟರ್ ತಾನು ಒಬ್ಬ ಪೈಲಟ್ಗೆ ಚಿಕಿತ್ಸೆ ನೀಡಿದ್ದಾಗಿ ಹೇಳಿದ್ದಾರೆ.
6.ನೇತಾಜಿಯನ್ನು ಆಪರೇ?ನ್ ಥಿಯೇಟರಿಗೆ ಒಯ್ದು ಚಿಕಿತ್ಸೆ ನೀಡಲಾಯಿತೆಂದು ರೆಹಮಾನ್ ಹೇಳಿದರೆ ಜಪಾನಿ ಡಾಕ್ಟರ್ ಆ ಬಗ್ಗೆ ಹೇಳುವುದಿಲ್ಲ.
7.ತೀವ್ರ ಸುಟ್ಟಗಾಯವಾದಾಗ ರಕ್ತ ದಪ್ಪವಾಗಿ ಹೃದಯಕ್ಕೆ ಒತ್ತಡ ಹೆಚ್ಚುತ್ತದೆ. ಅದನ್ನು ತಡೆಯಲು ದಪ್ಪ ರಕ್ತವನ್ನು ಹೊರಗೆ ಬಿಟ್ಟು, ದೇಹಕ್ಕೆ ಹೊಸ ರಕ್ತವನ್ನು ನೀಡಲಾಗುತ್ತದೆ. ನೇತಾಜಿಯ ೨೦೦ ಸಿಸಿ ರಕ್ತವನ್ನು ಹೊರಗೆಬಿಟ್ಟು ೪೦೦ ಸಿಸಿ ರಕ್ತವನ್ನು ನೀಡಲಾಯಿತೆಂದು ಡಾ| ಯೋಶಿಮಿ ಹೇಳಿದರೆ, ಚಿಕಿತ್ಸೆ ನೀಡಿದ ಡಾ| ಸುರುಟ ರಕ್ತ ನೀಡಲಿಲ್ಲ ಎಂದರು; ರೆಹಮಾನ್ಗೆ ಆ ಬಗ್ಗೆ ನೆನಪಿಲ್ಲ.
8.ರೆಹಮಾನ್ ನೇತಾಜಿ ತಲೆಯಲ್ಲಿ ನಾಲ್ಕು ಇಂಚು ಉದ್ದದ ಗಾಯವಾಗಿತ್ತು ಎಂದರೆ ಅದಕ್ಕೆ ದಾಖಲೆ ಇಲ್ಲ.
9.ನೇತಾಜಿ ವಾರ್ಡಿನಲ್ಲಿ ಆಗ ಇದ್ದವರ ಹೆಸರುಗಳು ಬದಲಾಗಿವೆ.
10.ಇತರ ಗಾಯಾಳುಗಳ ಹೇಳಿಕೆಯಲ್ಲಿ ವ್ಯತ್ಯಾಸವಾದ ಕಾರಣ ನೇತಾಜಿ ಮೃತಪಟ್ಟ ಸಮಯ ಖಚಿತವಾಗಲಿಲ್ಲ. ಆಗಸ್ಟ್ ೧೮ರಂದು ರಾತ್ರಿ ೮ರಿಂದ ೧೨ ಗಂಟೆವರೆಗೂ ಅದು ಹೋಗುತ್ತದೆ.
11.ಪ್ರಧಾನ ಕಛೇರಿಗೆ ತಿಳಿಸಿದಾಗ ಸಿಬ್ಬಂದಿ ಬಂದರು; ಬರುವಾಗ ನೇತಾಜಿ ಬದುಕಿದ್ದರೆಂದು ಲೆ| ಕ| ನೋನೇಗಾಕಿ ಹೇಳಿದರೆ, ಬಂದರೆನ್ನಲಾದ ಸಿಬ್ಬಂದಿ ನೇತಾಜಿ ಸತ್ತಿದ್ದರು ಎಂದು ಸಾಕ್ಷ್ಯ ನೀಡಿದರು.
12.ಇದರಿಂದ ತಿಳಿಯುವ ಅಂಶವೆಂದರೆ, ನೇತಾಜಿ ಶರೀರವನ್ನು ಸ್ಥಳೀಯ ಸೇನೆಯವರು ಕಂಡಂತಿಲ್ಲ.
13.ದುರಂತದ ಬಗ್ಗೆ ಔಪಚಾರಿಕ ತನಿಖೆ ನಡೆಸುವುದು ಮಾಮೂಲು ಕ್ರಮ. ನೇತಾಜಿ, ಜ| ಶಿಡೈ ಅಂಥವರು ಇರುವಾಗ ಮಾಡಲೇ ಬೇಕಿತ್ತು; ಆದರೆ ಮಾಡಲಿಲ್ಲ.
14.ಜಪಾನಿ ಅಧಿಕಾರಿಗಳು ತುಂಬ ಗುಟ್ಟು ಮಾಡಿದ್ದಾರೆ; ಅದರ ಕಾರಣ ಸ್ಪಷ್ಟವಿಲ್ಲ.
15.ನೇತಾಜಿ ಸಾವಿನ ಸುದ್ದಿಯನ್ನು ಆಗ ಗುಟ್ಟಾಗಿ ಇಡಲಾಯಿತು; ಉನ್ನತ ಮಿಲಿಟರಿ ಅಧಿಕಾರಿಗಳಿಗೆ ಮಾತ್ರ ಗೊತ್ತಿತ್ತು ಎಂದು ನಕಾಮುರಾ ಹೇಳಿದರು.
’ಚೀನಾದಲ್ಲಿ ಕಂಡಿದ್ದೆ’
ಈ ನಡುವೆ ನೇತಾಜಿ ಗೆಳೆಯ, ಫಾರ್ವರ್ಡ್ ಬ್ಲಾಕ್ ನಾಯಕ ಮುತ್ತುರಾಮಲಿಂಗಂ ತೇವರ್ ಅವರು, ಬೋಸ್ ಸತ್ತಿದ್ದಾರೆನ್ನುವ ಗ್ರಹಿಕೆಯೊಂದಿಗೆ ತನಿಖೆ ನಡೆಯುತ್ತಿದೆ ಎಂದು ಆಕ್ಷೇಪಿಸಿದರು. ಆತ ಪತ್ರಿಕಾಗೋಷ್ಠಿ ಕರೆದು, ಬೋಸರನ್ನು ನಾನು ಈಚೆಗೆ ಚೀನಾದಲ್ಲಿ ಭೇಟಿ ಮಾಡಿದೆ. ತನಿಖಾ ಸಮಿತಿಯ ಪುನಾರಚನೆ ಮಾಡಿದರೆ ನಾನು ಆ ಬಗ್ಗೆ ದಾಖಲೆ ನೀಡುವೆ ಎಂದರು. ಮುಂದುವರಿದು, ಡಾ| ರಾಧಾಬಿನೋದ್ ಪಾಲ್ ಈ ಸಮಿತಿಯ ಅಧ್ಯಕ್ಷರಾಗಬೇಕೆಂದು ಸೂಚಿಸಿದರು. ಅದನ್ನು ಬೆಂಬಲಿಸಿದ ಸುರೇಶ್ ಬೋಸ್ ಪ್ರಧಾನಿಗೆ ಪತ್ರ ಬರೆದು, ?ನವಾಜರಿಗೆ ಗೌರವ ಸೂಚಿಸುತ್ತಾ ಹೇಳುವುದೆಂದರೆ ಇದು ನ್ಯಾಯಾಂಗದ ಕೆಲಸದಂತಿರುವ ಕಾರಣ ಇದಕ್ಕೆ ಪಕ್ವ ಕಲಾಪ ನಡೆದು ಯೋಗ್ಯ ತೀರ್ಪು ಬರಬೇಕು. ಆದ್ದರಿಂದ ಡಾ| ಪಾಲ್ ಸಮಿತಿಗೆ ಸೇರಿ ಇದರ ನೇತೃತ್ವ ವಹಿಸಬೇಕೆಂದು ಒತ್ತಾಯಿಸಿದರು; ಮಾತ್ರವಲ್ಲ, ಈ ಸಂಬಂಧ ಪ್ರಧಾನಿಯನ್ನು ಭೇಟಿಮಾಡಿ ದೂರು, ಮನವಿ ಸಲ್ಲಿಸಿದರು.
ಮೌನವಾಗಿ ಕೇಳಿಸಿಕೊಂಡ ಪ್ರಧಾನಿ ನೆಹರು ನಮ್ಮ ಉದ್ದೇಶ ನೇತಾಜಿ ಕೊನೆಯ ದಿನಗಳ ವಿವರ ಸಂಗ್ರಹಿಸುವುದಾಗಿದೆ. ನನಗೆ ನೇತಾಜಿ ಬದುಕಿದ್ದಾರೆ ಎನಿಸುವುದಿಲ್ಲ. ವಿಮಾನದುರಂತ ಸಂಭವಿಸಿ ಹತ್ತು ವ? ದಾಟಿದೆ. ಅವರು ಅಂದು ಪಲಾಯನ ಮಾಡಿದ್ದರೂ ಕೂಡ ಇ? ವ? ಸುಮ್ಮನೆ ಇರುತ್ತಿದ್ದರಾ? ಭಾರತವನ್ನು ಸಂಪರ್ಕಿಸಲು ಅವರಿಗೆ ಅವಕಾಶ ಇತ್ತಲ್ಲವೆ? ಎಂದರು; ಡಾ| ಪಾಲ್ ಯುದ್ಧಾಪರಾಧಿಗಳ ವಿಚಾರಣೆಯಲ್ಲಿ ಭಾಗಿಯಾದ ಕಾರಣ ಇದಕ್ಕೆ ಅವರು ಬೇಡ ಎಂದು ತಿಳಿಸಿದರು. ಡಾ| ಪಾಲ್ ಅವರನ್ನು ಸಮಿತಿಗೆ ತರಲು ವಿಫಲವಾದ ಸುರೇಶ್ಚಂದ್ರ ಬೋಸ್ ?ನವಾಜ್ ಪತ್ರಿಕೆಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿದ್ದಾರೆಂದು ಆರೋಪಿಸಿ ಪ್ರಧಾನಿಗೆ ಪತ್ರ ಬರೆದರು. ಪ್ರಧಾನಿ ಕೂಡಲೆ ಮಾಧ್ಯಮಕ್ಕೆ ಹೋಗಬೇಡಿ ಎಂದರು. ಆದರೆ ?ನವಾಜ್ ತನ್ನ ಚಾಳಿ ಮುಂದುವರಿಸಿದರು.
೧೯೫೬ರ ಮಧ್ಯದ ಹೊತ್ತಿಗೆ ?ನವಾಜ್ ಎನ್ಐಸಿ ವರದಿಯನ್ನು ಪೂರ್ಣಗೊಳಿಸಲು ನಿರ್ಧರಿಸಿ ಸುರೇಶ್ ಅವರಲ್ಲಿ ’ನಿಮ್ಮ ಶೋಧ ಏನು?’ ಎಂದು ಕೇಳಿದರು. ಅದಕ್ಕೆ ಅವರು ’ಇದು ಗಾಡಿಯನ್ನು ಕುದುರೆಯ ಮುಂದೆ ಹಾಕಿದಂತೆ ಎಂದು ಉತ್ತರಿಸಿದರು. ಸಮಿತಿಯ ಒಂದು ಸಭೆಯಲ್ಲಿ ?ನ್ವಾಜ್, ಇಲ್ಲಿ ನೇತಾಜಿ ಸಾವು, ಅವರ ಅಂತ್ಯಕ್ರಿಯೆ ಮತ್ತು ಚಿತಾಭಸ್ಮಗಳು ಮುಖ್ಯವಿ?ಯ; ಅನಂತರದ ಎರಡರಿಂದ ಮೊದಲಿನದು ಸಾಬೀತಾಗುತ್ತದೆ ಎಂದಾಗ ಸುರೇಶ್ ಬೋಸ್, ಚಿತಾಭಸ್ಮವನ್ನು ಗುರುತಿಸಲಾಗದು; ಅದು ಬೇರೆ ಯಾರದ್ದೋ ಇರಲೂಬಹುದು; ಮಂಚೂರಿಯಕ್ಕೆ ಹೋಗುವ ಅವರ ಯೋಜನೆಯನ್ನು ಮರೆಯಬಾರದು ಎಂದು ಸ್ಪ?ಪಡಿಸಿದರು.

ಭಿನ್ನಾಭಿಪ್ರಾಯ
ಇವರ ಪಾಂಟ್ ತೆಗೆದುಕೊಂಡು ಟೈಪ್ ಮಾಡಿಸಿ, ಎಲ್ಲರದೂ ಒಂದೇ ಎಂದು ಬಿಂಬಿಸಲು ?ನವಾಜ್ ಯತ್ನಿಸಿದಾಗ ಸುರೇಶ್, ಬೋಸ್ ಇನ್ನೂ ಜೀವಂತ ಇದ್ದಾರೆ; ಮತ್ತು ಸರ್ಕಾರಕ್ಕೆ ಅದು ಗೊತ್ತು ಎಂದು ಸ್ಪ?ಪಡಿಸಿದರು. ಈ ನಡುವೆ ಸುರೇಶ್ ಬೋಸ್ ವರದಿಗೆ ಸಹಿ ಹಾಕದಿರಬಹುದು ಅಥವಾ ಬೇರೆಯೆ ವರದಿ ಬರೆಯಬಹುದು ಎಂಬ ಸುಳಿವು ಸಿಕ್ಕಿರಬೇಕು; ಭಿನ್ನಾಭಿಪ್ರಾಯದ ಟಿಪ್ಪಣೆಯನ್ನು ಬರೆಯಿರಿ ಎಂದು ?ನವಾಜ್ ಸುರೇಶ್ ಅವರಿಗೆ ಹೇಳಿದಾಗ ದಾಖಲೆಗಳ ಪ್ರತಿ ಕೊಡಿ ಎಂದು ಕೇಳಿದರು; ಅಧ್ಯಕ್ಷ ?ನವಾಜ್ ಯಾವುದೇ ದಾಖಲೆ ನೀಡಲಿಲ್ಲ ಮತ್ತು ವರದಿಯನ್ನು ಎರಡು ದಿನದೊಳಗೆ ಕೊಡಿ ಎಂದು ಒತ್ತಡ ಹಾಕಿದರು. ಕೆಲವು ದಿನಗಳಲ್ಲಿ ಇಬ್ಬರ ವರದಿ ಕಲ್ಕತ್ತಾದ ಒಂದು ದಿನಪತ್ರಿಕೆಗೆ ಸೋರಿಕೆಯಾಯಿತು. ಸುರೇಶ್ ಅದನ್ನು ಟೀಕಿಸಿ ಪ್ರಧಾನಿ ಮತ್ತು ಸಮಿತಿ ಅಧ್ಯಕ್ಷರಿಗೆ ಪತ್ರ ಬರೆದರು.
“ದಾಖಲೆ ಪತ್ರ ಕೊಡಿ ಅಂದಾಗ ತಿರಸ್ಕರಿಸಬೇಕಿದ್ದರೆ ಮೇಲಿನವರ ಕುಮ್ಮಕ್ಕು ಇರಬೇಕೆಂದು ಭಾವಿಸಿದ್ದೆ; ನನ್ನ ಊಹೆ ದೃಢವಾಯಿತು ಎಂದು ಸುರೇಶ್ ಬೋಸ್ ಸಿಟ್ಟಿನಲ್ಲಿ ಬರೆದ ಪತ್ರಕ್ಕೆ ನೆಹರು ಉತ್ತರಿಸಲಿಲ್ಲ. ಕೆಲವು ಸಮಯದ ಬಳಿಕ ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಮಂತ್ರಿ ಡಾ| ಬಿ.ಸಿ. ರಾಯ್ ಹಿಂಬಾಗಿಲ ಪ್ರಯತ್ನ ನಡೆಸಿದರು. ?ನವಾಜ್ ವರದಿಗೆ ಚಿಕ್ಕಪ್ಪನ ಸಹಿ ಪಡೆದು ಕೊಡು; ನಿನಗೆ ಬಿಸಿನೆಸ್ ಕೊಡಿಸುತ್ತೇನೆ ಎಂದು ಡಾ| ರಾಯ್, ಸತೀಶ್ಚಂದ್ರ ಬೋಸ್ ಪುತ್ರ ದ್ವಿಜೇಂದ್ರನಲ್ಲಿ ಹೇಳಿದರು. ಆತ ಒಪ್ಪಲಿಲ್ಲ. ಮತ್ತೆ ಸುರೇಶರನ್ನು ಕರೆಸಿದ ರಾಯ್, ’ರಾಜ್ಯಪಾಲರಾಗುತ್ತೀರಾ?’ ಎಂದು ಆಮಿ? ಒಡ್ಡಿದರು. ಆಗಸ್ಟ್ ೩, ೧೯೫೬ರಂದು ?ನವಾಜ್ ಪ್ರಧಾನಿಗೆ ತನ್ನ ವರದಿಯನ್ನು ಸಲ್ಲಿಸಿದರು. ಸುಭಾಸ್ ವಿಮಾನ ದುರಂತದಲ್ಲಿ ಸತ್ತಿದ್ದಾರೆ. ರೆಂಕೋಜಿ ದೇವಾಲಯದಲ್ಲಿ ಅವರ ಚಿತಾಭಸ್ಮವಿದೆ. ಅದನ್ನು ತಂದು ದೇಶದ ಸೂಕ್ತ ಸ್ಥಳದಲ್ಲಿ ಸ್ಮಾರಕ ನಿರ್ಮಿಸಬೇಕು ಎಂದು ಅದರಲ್ಲಿ ಶಿಫಾರಸು ಮಾಡಿದ್ದರು. ಕೇಂದ್ರ ಸಚಿವ ಸಂಪುಟ ಸೆಪ್ಟೆಂಬರ್ ೯ರಂದು ವರದಿಯನ್ನು ಅಂಗೀಕರಿಸಿ ಎರಡೇ ದಿನದಲ್ಲಿ ಸಂಸತ್ತಿನಲ್ಲಿ ಮಂಡಿಸಿತು; ಚಿತಾಭಸ್ಮ ತರುವ ವಿ?ಯವನ್ನು ಮುಂದೆ ಪರಿಶೀಲಿಸಬಹುದೆಂದು ನಿರ್ಧರಿಸಲಾಯಿತು.
ಪ್ರಧಾನಿ ನೆಹರು ಅವರು ಸಂಸತ್ತಿನಲ್ಲಿ ಮಾತನಾಡುತ್ತಾ, ವರದಿಯಲ್ಲಿ ಬಂದಿರುವ ಸಾಕ್ಷ್ಯಗಳು ಸಾಕೆಂದು ಸರ್ಕಾರ ಭಾವಿಸುತ್ತದೆ. ಇದನ್ನು ಓದಿದ ವಿಚಾರವಂತರು ಬೇರೆ ತೀರ್ಮಾನಕ್ಕೆ ಬರುವುದು ಅಸಾಧ್ಯ. ವಿಚಾರಹೀನ ಮನಸ್ಸಿನವರೊಂದಿಗೆ ವಿವೇಕದ ಮಾತನಾಡುವುದು ಕ? ಎಂದು ಹೇಳಿದರು. ಸ್ಥಳದ ತನಿಖೆ ಮಾಡಲು ಸಮಿತಿ ತೈವಾನಿಗೆ ಹೋಗಲಿಲ್ಲ ಎಂಬ ಟೀಕೆಯನ್ನು ಸರ್ಕಾರ ಬದಿಗೊತ್ತಿತು. ಆ ಬಗ್ಗೆ ?ನವಾಜ್ ಅವರು ಸದಸ್ಯರು ಆ ಬಗ್ಗೆ ಚರ್ಚಿಸಿ, ಹೋಗುವುದು ಬೇಡವೆಂದು ತೀರ್ಮಾನಿಸಿದೆವು. ಅದಕ್ಕೆ ಕಾರಣ ಸರ್ಕಾರದ ಒತ್ತಡ ಅಲ್ಲ… ಇ?ಕಾಲದ ಮೇಲೆ ಅಲ್ಲಿಗೆ ಹೋದರೆ ಯಾವುದೇ ಪ್ರಯೋಜನ ಆಗದೆಂದು ಹೋಗಲಿಲ್ಲ ಎನ್ನುವ ವಿವರಣೆ ನೀಡಿದರು. ಇದು ನಮ್ಮ ಪಾರದರ್ಶಕತೆ!

ಸ್ಥಳಕ್ಕೆ ಹೋಗಲಿಲ್ಲ
ನಿಜವೆಂದರೆ ನವಾಜ್ ಅಲ್ಲಿಗೆ ಹೋಗುವ ಇಚ್ಛೆಯನ್ನು ಪ್ರಕಟಿಸಿದಾಗ ವಿದೇಶಾಂಗ ಕಾರ್ಯದರ್ಶಿ ಸುಬಿಮಲ್ದತ್ ಫಾರ್ಮೋಸಾ ಸರ್ಕಾರದ ಜೊತೆ ನಮಗೆ ರಾಜತಾಂತ್ರಿಕ ಸಂಬಂಧವಿಲ್ಲ. ನಾವು ಆ ದೇಶಕ್ಕೆ ಮಾನ್ಯತೆ ನೀಡಿಲ್ಲ. ಅವರು ಸಮಿತಿಗೆ ಯಾವುದೇ ಸಹಕಾರ ನೀಡಲಾರರು; ತಡೆಯುಂಟುಮಾಡಬಹುದು. ಅದರಿಂದ ಸಮಿತಿಗೆ ಕ?ವಾಗಬಹುದು. ಆದ್ದರಿಂದ ಬೇಡ ಎಂದು ತಡೆದರು. ಇದು ಪ್ರಧಾನಿಯವರ ನೇರ ಹಸ್ತಕ್ಷೇಪವಾಗಿತ್ತು. ಟಿ.ಎನ್. ಕೌಲ್ ರಾಯಭಾರಿ ಸೇನ್ ಅವರಿಗೆ ಬರೆದ ಪತ್ರದಲ್ಲಿ ಸಮಿತಿ ಜಪಾನಿಗೆ ಬರಲಿದೆ. ಫಾರ್ಮೋಸಾಕ್ಕೆ ಹೋಗಬೇಕೆಂದು ಸಮಿತಿ ಹೇಳಿದ್ದನ್ನು ಪ್ರಧಾನಿಗೆ ತಿಳಿಸಿದಾಗ ಅವರು ’ಅದು ಕಾರ್ಯಯೋಗ್ಯವಲ್ಲ, ಉಚಿತವೂ ಅಲ್ಲ. ಏಕೆಂದರೆ ಆ ಸರ್ಕಾರಕ್ಕೆ ನಾವು ಮಾನ್ಯತೆ ನೀಡಿಲ್ಲ, ಅವರು ತೊಂದರೆ ಉಂಟುಮಾಡಬಹುದು’ ಎಂದಿದ್ದರು. ಜಪಾನ್ನ ಪ್ರಭಾವ ಬಳಸಿಕೊಂಡು ಫಾರ್ಮೋಸಾಕ್ಕೆ ಹೋಗಬಹುದೆಂದು ?ನವಾಜ್ ಸೂಚಿಸಿದಾಗ ರಾಯಭಾರಿ ಸೇನ್ ದತ್ ಅವರಿಗೆ ಪತ್ರ ಬರೆದರು. ಅದಕ್ಕೆ ಟಿ.ಎನ್. ಕೌಲ್ ಉತ್ತರಿಸಿ, ವಿ?ಯವನ್ನು ಪ್ರಧಾನಿಗೆ ತಿಳಿಸಿದೆವು. ’ಅದು ಕಾರ್ಯಯೋಗ್ಯವಲ್ಲ. ಆಸ್ಪತ್ರೆ ದಾಖಲಾತಿಯನ್ನು ನೋಡಬಹುದ?. ಜಪಾನ್ ನೆರವಿನಿಂದ ಅಲ್ಲಿಗೆ ಹೋದರೂ ಅವರು ಸಹಕಾರ ನೀಡಲಾರರು. ರಾಜಕೀಯ ಸಮಸ್ಯೆ ಉಂಟಾದೀತು’ ಎಂದು ಪುನರುಚ್ಚರಿಸಿದರು ಎಂದು ತಿಳಿಸಿದರು.
ಒಟ್ಟಿನಲ್ಲಿ ತನಿಖೆಯಲ್ಲಿ ಮಾಡಲೇಬೇಕಾದ್ದನ್ನು ಕೈಬಿಟ್ಟು ಬ್ರಿಟಿ? ರಾಯಭಾರಿ ಕಛೇರಿ, ಜಪಾನ್ ವಿದೇಶಾಂಗ ಕಛೇರಿ ಮುಂತಾದ ಕಡೆ ಹುಡುಕಾಡಿದರು. ಆಸ್ಪತ್ರೆ ದಾಖಲಾತಿ, ಅಂತ್ಯಕ್ರಿಯೆ ಪರವಾನಿಗೆ ಇತ್ಯಾದಿಗೆ ಹುಡುಕಾಡಿದಾಗ ಸರಿಯಾದ ದಾಖಲೆ ಸಿಗಲಿಲ್ಲ. ಏನೋ ಸಿಕ್ಕಿದರೂ, ಅದರಲ್ಲಿ ನೇತಾಜಿ ಬೋಸ್ ಬಗ್ಗೆ ಏನೂ ಇರಲಿಲ್ಲ. ಮೃತರ ಹೆಸರು ಬೇರೇನೋ ಇತ್ತು. ಸಾವಿಗೂ ವಿಮಾನದುರಂತಕ್ಕೂ ಸಂಬಂಧವಿರಲಿಲ್ಲ. ಇ?ಲ್ಲ ಆಗುವಾಗ ?ನವಾಜ್ ಸಮಿತಿ ಪ್ರಧಾನಿಗೆ ವರದಿಯನ್ನು ಸಲ್ಲಿಸಿಯೂ ಆಯಿತು. ಭಾರತದ ಅಧಿಕಾರಿಗಳು ಕೇಳಿದ ಸಾಕ್ಷಿಗಳು ಸತ್ತಿದ್ದಾರೆ, ನಾಪತ್ತೆ ಆಗಿದ್ದಾರೆ ಅಥವಾ ಅವರಿಗೆ ಏನೂ ಗೊತ್ತಿಲ್ಲ ಎಂಬ ಒಂದು ಉತ್ತರವೂ ಬಂದಿತ್ತು. ಟಿ.ಎನ್. ಕೌಲ್ ಅವರಿಗೆ ಸಾಕುಬೇಕಾಯಿತು. ನೇತಾಜಿ ಸಾವನ್ನು ದೃಢಪಡಿಸುವ ಬದಲು ದೊಡ್ಡ ಪ್ರಶ್ನಾರ್ಥಕ ಚಿಹ್ನೆ ಸೃಷ್ಟಿಯಾಯಿತು.

ಸುರೇಶ್ ಬೋಸ್ ವರದಿ
ಅದೇ ನವೆಂಬರ್(೧೯೫೬)ನಲ್ಲಿ ಸುರೇಶ್ಚಂದ್ರ ಬೋಸ್ ತನ್ನ ಭಿನ್ನಮತ ವರದಿಯನ್ನು ಪ್ರಕಟಿಸಿದರು. ಸರ್ಕಾರ ಅಥವಾ ಯಾವುದೇ ಖಾಸಗಿ ಪ್ರಕಾಶಕರು ಅದನ್ನು ಪ್ರಕಟಿಸಲು ಒಪ್ಪಲಿಲ್ಲ. ತಾನೇ ಪ್ರಕಟಿಸಿದರು; ಅದು ಹೆಚ್ಚು ಜನರಿಗೆ ತಲಪಲಿಲ್ಲ. ಭಿನ್ನಮತ ವರದಿಯ ಮುಖ್ಯಾಂಶಗಳು ಹೀಗಿವೆ:
1.ನವಾಜ್ ಸಾಕ್ಷಿಗಳನ್ನು ಕರೆಸುತ್ತಲೇ ಇದ್ದರು; ಆದರೆ ಅದರ ಉದ್ದೇಶ ಸತ್ಯವನ್ನು ತಿಳಿಯುವುದು ಆಗಿರಲಿಲ್ಲ. ಬದಲಾಗಿ ವಿಮಾನ ದುರಂತ ಮತ್ತು ನೇತಾಜಿ ಸಾವಿನ ತೀರ್ಮಾನಕ್ಕೆ ಅಡ್ಡಿಯಾಗುವ ಅಂಶಗಳ ಬಗ್ಗೆ ಗೊಂದಲ ಸೃಷ್ಟಿಸುವುದಾಗಿತ್ತು.
2.ವಿಮಾನದುರಂತ ಮತ್ತು ನೇತಾಜಿ ಸಾವುಗಳು ಸಾಬೀತಾಗಿಲ್ಲ.
3.ಆಗ್ನೇಯ ಏ?ದಲ್ಲಿ ಆಂಗ್ಲೋ-ಅಮೆರಿಕನ್ ಸೇನೆಯ ವಿರುದ್ಧ ಸೋತ ಬಳಿಕ ಮಂಚೂರಿಯ ಮಾರ್ಗವಾಗಿ ರ?ಕ್ಕೆ ಹೋಗುವ ನೇತಾಜಿ ಯೋಜನೆ ಹಠಾತ್ ನಿರ್ಣಯವಲ್ಲ. ಚಿಂತಿಸಿ ಸ್ವೀಕರಿಸಿದ ಪಕ್ವ ಯೋಜನೆ. ಶರಣಾಗಲು ಇ?ಪಡದ ಅವರಿಗೆ ಅನ್ಯಮಾರ್ಗ ಇರಲಿಲ್ಲ. ಶರಣಾದರೆ ತನ್ನ ಅಂತ್ಯವಾಗುವುದಲ್ಲದೆ, ಆತನ ಏಕೈಕ ಗುರಿ ಮಾತೃಭೂಮಿಯ ಸ್ವಾತಂತ್ರ್ಯ ಕೈಗೂಡುತ್ತಿರಲಿಲ್ಲ.
4.ಜಪಾನ್ ಬೋಸರನ್ನು ಬ್ರಿಟಿ?ರಿಗೆ ಒಪ್ಪಿಸಿದ್ದರೆ ಅದು ತೀರಾ ಸಣ್ಣತನ ಮತ್ತು ದ್ರೋಹವಾಗುತ್ತಿತ್ತು. ಆದ್ದರಿಂದ ಆತ ದೇಶದಿಂದ ಹೊರಟುಹೋದ ಅನಂತರ ಅವರು ಸಾವಿನ ಸುದ್ದಿಯನ್ನು ಬಿತ್ತರಿಸಿದರು; ಸಾಕ್ಷ್ಯವನ್ನು ಸೃಷ್ಟಿಸಿ ಅದನ್ನು ಬೆಂಬಲಿಸಿದರು. ನೇತಾಜಿ ಅಜ್ಞಾತಸ್ಥಳಕ್ಕೆ ಪರಾರಿಯಾದರೆಂದು ಹೇಳಲು ಅವರಿಗೆ ಸಾಧ್ಯವಿರಲಿಲ್ಲ. ಅದರಿಂದ ಅವರು ಪಲಾಯನಕ್ಕೆ ನೆರವಾದರೆನ್ನುವ ಆರೋಪ ಬರುತ್ತದೆ; ಏಕೆಂದರೆ ಬೋಸ್ ’ಯುದ್ಧಾಪರಾಧಿ’.
5.ವಿಮಾನದಲ್ಲಿ ನೇತಾಜಿ ಒಬ್ಬರಿಗೆ ಮಾತ್ರ ಸೀಟು ಕೊಟ್ಟಿದ್ದು ಏಕೆಂದರೆ ಆದ? ಗುಟ್ಟಾಗಿ ಅವರನ್ನು ಕಳುಹಿಸಬೇಕು ಎನ್ನುವುದು. ತಾವು ಶರಣಾದ ಆಂಗ್ಲೋ-ಅಮೆರಿಕನರಿಗೆ ವಿಷಯ ತಿಳಿದರೆ ಅಪಾಯವಿತ್ತು.
6.ದುರಂತದ ಸ್ಥಳ ತಾಹೋಕು ಡಾರೆನ್ಗೆ ತೀರಾ ಸಮೀಪ ಇದೆ. ಸೈಗಾನ್ನಿಂದ ತುಂಬ ದೂರ. ನೇತಾಜಿ ಪ್ರಯಾಣಿಸಿದ ವಿಮಾನ ಮಂಚೂರಿಯದಲ್ಲಿ ಅಪಘಾತವಾಯಿತೆಂದು ಘೋಷಿಸಲು ಸಾಧ್ಯವಿರಲಿಲ್ಲ. ಅದಕ್ಕಾಗಿ ತಾಹೋಕುವನ್ನೇ ಆರಿಸಿಕೊಂಡರು.
7.ನೇತಾಜಿಗೆ ಗಾಯ ಅಥವಾ ಸುಟ್ಟಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದರೆ, ಅವರು ಅಲ್ಲೇ ಮೃತಪಟ್ಟಿದ್ದರೆ ಅಥವಾ ಅಂತ್ಯಕ್ರಿಯೆ ಅಲ್ಲೇ ನಡೆದಿದ್ದರೆ, ಜಪಾನ್ ಸರ್ಕಾರ ಛಾಯಾಗ್ರಹಣ ಸಹಿತ ಸರಿಯಾದ ದಾಖಲೆ ಇಡುತ್ತಿತ್ತು; ನೇತಾಜಿ ಸಾಯದಿರುವ ಕಾರಣ ಛಾಯಾಚಿತ್ರ ತೆಗೆಯಲು ಸಾಧ್ಯವಾಗಲಿಲ್ಲ.
8.ನೇತಾಜಿಗೆ ಸುಟ್ಟಗಾಯವಾದದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಹಾಗೂ ಅವರ ಸಾವಿನ ಬಗೆಗೆ ನೀಡಲಾದ ಸಾಕ್ಷ್ಯಗಳು ಎಂದು ಪರಸ್ಪರ ವಿರುದ್ಧವಾಗಿದ್ದವೆಂದರೆ ಅವುಗಳನ್ನು ನಂಬುವಂತೆಯೇ ಇರಲಿಲ್ಲ. ಘಟನೆ ನಿಜವಾಗಿದ್ದರೆ ಹತ್ತು ವ? ದಾಟಿದರೂ ಈ ರೀತಿ ಪರಸ್ಪರ ವಿರುದ್ಧ ಮಾತುಗಳು ಬರುತ್ತಿರಲಿಲ್ಲ. ಇ? ಕೆಟ್ಟ ಸಾಕ್ಷ್ಯಗಳಿಂದ ಸಾಬೀತಾಗುವ ಅಂಶವೆಂದರೆ, ಅಂತಹ ಘಟನೆ ನಡೆಯಲಿಲ್ಲ ಮತ್ತು ಒಂದು ರಹಸ್ಯಯೋಜನೆ ಇದ್ದ ಕಾರಣ ಜಪಾನೀಯರು ಕಥೆ ಕಟ್ಟಿ ನೇತಾಜಿ ಮೃತಪಟ್ಟರೆಂದು ಹೇಳಿದರು.
9.ನೇತಾಜಿ ಹೇಳಿದಂತೆ, ಅವರು ಜಪಾನ್ನ ಗಡಿ ದಾಟಿ ರ?-ನಿಯಂತ್ರಿತ ಪ್ರದೇಶವನ್ನು ಪ್ರವೇಶಿಸಿದ ಬಳಿಕವೇ ಜಪಾನ್ ಅವರ ಮರಣವಾರ್ತೆಯನ್ನು ಪ್ರಕಟಿಸಿತು.
10.ತನ್ನ ಕೊನೆಯ ಆರು ಮಂದಿ ವಿಶ್ವಾಸಿಗರಲ್ಲಿ ಅತ್ಯಂತ ವಿಶ್ವಾಸಾರ್ಹನೆಂದು ಬೋಸ್ ರೆಹಮಾನ್ನನ್ನು ಆರಿಸಿದ್ದರು. ಎಂತಹ ಸ್ಥಿತಿಯಲ್ಲೂ ಆತ ಗುಟ್ಟು ಬಿಡುವುದಿಲ್ಲವೆಂದು ನಂಬಿದ್ದರು (ವಿಮಾನ ದುರಂತದ ಘಟನೆಯಲ್ಲಿ ಇದ್ದವ ಆತ). ಆತನ ಹೇಳಿಕೆಗಳು ನೇತಾಜಿ ಸೂಚನೆ ಪ್ರಕಾರವೇ ಇದ್ದವು; ಆಂಗ್ಲೋ- ಅಮೆರಿಕನರ ಕೈಗೆ ಸಿಗಬಾರದೆಂಬುದು ಅವರ ಉದ್ದೇಶ.
11.ಸಮಿತಿ ಮುಂದೆ ಹೇಳಿಕೆ ನೀಡಿದ ಇತರ ಸಾಕ್ಷಿಗಳು ಜಪಾನೀಯರು; ದೇಶಪ್ರೇಮದಲ್ಲಿ ಅಗ್ರಗಣ್ಯರು. ತಮ್ಮ ಸರ್ಕಾರದ ಯೋಜನೆಗೆ ಪೂರಕವಾಗಿ ಅವರು ಬೇರೆಬೇರೆ ಜನರ ಮುಂದೆ ಬೇರೆಬೇರೆ ರೀತಿಯ ಹೇಳಿಕೆ ನೀಡಿದರು. ಅದಕ್ಕಾಗಿ ಅವರು ವಿಮಾನ ದುರಂತವನ್ನೇ ಬೆಂಬಲಿಸುತ್ತಾ ಬಂದರು. ಇದು ಅವರ ಬೃಹತ್ ಕಾರ್ಯಾಚರಣೆ; ತಮ್ಮ ಗೆಳೆಯ ಚಂದ್ರಬೋಸ್ ಪರವಾಗಿ ಮಾಡಿದ್ದು.
ದೇಶಬಾಂಧವರಿಗೆ ಸತ್ಯವನ್ನು ತಿಳಿಸದೆ ಅನ್ಯಾಯ ಎಸಗಿದವರನ್ನು ಬಹಿರಂಗ ವಿಚಾರಣೆ (ಇಂಪೀಚ್ಮೆಂಟ್) ಗೆ ಒಳಪಡಿಸಬೇಕೆಂದು ಸುರೇಶ್ಚಂದ್ರ ಬೋಸ್ ದೇಶಬಾಂಧವರನ್ನು ಉದ್ದೇಶಿಸಿ ಮನವಿ ಮಾಡಿದರು. ಸರ್ಕಾರದ ಕೆಲಸವನ್ನು ಸಾಂಗವಾಗಿ ನೆರವೇರಿಸಿದ ?ನವಾಜ್ ಮತ್ತು ಶಂಕರ್ ಮೈತ್ರ ಅವರಿಗೆ ಸರ್ಕಾರದಿಂದ ಸೂಕ್ತ ಬಹುಮಾನ, ಸ್ಥಾನಮಾನಗಳನ್ನು ನೀಡಲಾಯಿತು. ಒಬ್ಬರು ಉಪಮಂತ್ರಿಯಾದರೆ ಇನ್ನೊಬ್ಬರು ರಾಯಭಾರಿಯಾದರು. ’ಕ್ಯಾ ಭಾಯಿಜಾನ್, ಡೆಪ್ಯುಟಿ ಮಿನಿಸ್ಟರ್ಶಿಪ್ ಕೇ ಲಿಯೇ ಆಪ್ನೇ ನೇತಾಜಿ ಕೋ ಮಾರ್ದಿಯಾ?’ (ಅಣ್ಣಾ, ಉಪಮಂತ್ರಿ ಹುದ್ದೆಗಾಗಿ ನೇತಾಜಿಯನ್ನು ಕೊಂದಿರಾ?) ಎಂದು ಯಾರೋ ?ನವಾಜ್ರಲ್ಲಿ ಕೇಳಿದರು. ಕೊಲೆ ನಡೆದಾಗ ಪೊಲೀಸರು ಸ್ಥಳಕ್ಕೇನೇ ಹೋಗದೆ ತನಿಖೆ ನಡೆಸಿದರೆ ಅದು ಎ? ವಿಶ್ವಾಸಾರ್ಹ? ಎಂದು ಎಚ್.ವಿ. ಕಾಮತ್ ಪ್ರಶ್ನಿಸಿದರು. ಟಿ.ಎನ್. ಕೌಲ್, ಎ.ಕೆ. ಧರ್ ಅವರಿಗೂ ಸೂಕ್ತ ಬಹುಮಾನಗಳು ಸಿಕ್ಕಿದವು.

ಕೊನೆತನಕ ಬೇಟೆ
ನೆಹರು ಅವರ ಈ ನಿಟ್ಟಿನ ಕೆಲಸ ಮತ್ತೆ ಕೂಡ ಮುಂದುವರಿದಿತ್ತು. ಜಪಾನ್ನಲ್ಲಿದ್ದ ನೇತಾಜಿ ಬಂಧು ಅಮಿಯನಾಥ್ ಬೋಸ್ ಮೇಲೆ ನಿಗಾ ಇರಿಸಿದ್ದರು. ನೇತಾಜಿ ಏನಾದರೆಂಬ ಬಗ್ಗೆ ಯೋಗ್ಯ ತನಿಖೆ ನಡೆಯಬೇಕೆಂಬ ಆಗ್ರಹ ಬರುತ್ತಲೇ ಇತ್ತು. ಜನವರಿ ೭, ೧೯೬೨ರಂದು ನೆಹರು ಅವರು ಸಂಸತ್ತಿನಲ್ಲಿ (?ನವಾಜ್) ಸಮಿತಿಯ ಮೂಲಭೂತ ತೀರ್ಮಾನಗಳನ್ನು ಎಂದೂ ಗಂಭೀರವಾಗಿ ಪ್ರಶ್ನಿಸಲಾಗಿಲ್ಲ. ಲಭ್ಯ ನಿಜಾಂಶಗಳನ್ನು ಆಧರಿಸಿ ಇನ್ನು ತನಿಖೆ ನಡೆಸುವುದರಲ್ಲಿ ಅರ್ಥವಿಲ್ಲ ಎಂದು ಹೇಳಿಕೆ ನೀಡಿದರು. ಅದನ್ನು ವಿರೋಧಿಸಿ ಪತ್ರ ಬರೆದ ಸುರೇಶ್ ಬೋಸ್ ’ಸುಭಾಸ್ ಸಾವಿಗೆ ದಾಖಲೆ ಕೊಡಿ’ ಎಂದು ಕೇಳಿದರು. ಅದಕ್ಕೆ ನೆಹರು ’ಸಾಂದರ್ಭಿಕ ಸಾಕ್ಷ್ಯವಿದೆ; ನೇರ ಅಲ್ಲ ಎಂದು ಉತ್ತರಿಸಿದರು. ಆಗ ಸುರೇಶ್ ಬೋಸ್ ನಿಮಗೆ ಸಮಾಧಾನ ತಂದ ಆ ಸಾಂದರ್ಭಿಕ ಸಾಕ್ಷ್ಯವನ್ನು ತಿಳಿಸಿ. ನೇತಾಜಿ ಸಾವಿನ ಬಗ್ಗೆ ಬೇರೆ ದಾಖಲೆ ಇದ್ದರೂ ತಿಳಿಸಿ. ಇದು ಕುಟುಂಬಿಕರಾದ ನಮಗೆ ಬೇಕು ಎಂದು ಒತ್ತಾಯಿಸಿದರು. ಜೂನ್ ೨೬ರಂದು (೧೯೬೨) ಪ್ರಧಾನಿ ?ನವಾಜ್ ವರದಿಯಲ್ಲಿ ತುಂಬ ನಿಜಾಂಶಗಳಿವೆ ಎಂದು ತೀಳಿಸಿದರು. ಸುರೇಶ್ ಬೋಸ್ ಪತ್ರ ಬರೆದು ರ?ದಿಂದ ಸುಭಾಸ್ ನಿಮಗೆ ಪತ್ರ ಬರೆದಿದ್ದಾನಾ? ಎಂದು ಕೇಳಿದರು; ಮತ್ತು ೧೯೪೬ರ ಜಾಗೃತದಳದ ರಹಸ್ಯ ವರದಿಯನ್ನು ಬಚ್ಚಿಟ್ಟದ್ದೇಕೆ? – ಎಂದು ಪ್ರಶ್ನಿಸಿದರು. ಪ್ರಧಾನಿ ಅದಕ್ಕೆ ಅವರಿಂದಲಾಗಲಿ ಅಥವಾ ನೀವು ಹೇಳುವ ರೀತಿಯಲ್ಲಿ ಬೇರೆಯವರಿಂದಾಗಲಿ ಪತ್ರ ಬಂದಿಲ್ಲ. ನೀವು ಹೇಳುವ ರಹಸ್ಯ ವರದಿ ನನಗೆ ಗೊತ್ತಿಲ್ಲ ಎಂದು ಬಿರುಸಾದ ಉತ್ತರ ಬರೆದರು. ೧೯೬೪ ಏಪ್ರಿಲ್ನಲ್ಲಿ ಅಮಿಯ ಬೋಸ್ ನೆಹರು ಅವರಿಗೊಂದು ಪತ್ರ ಬರೆದು ಜನ ?ನವಾಜ್ ವರದಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಏಕೆಂದರೆ ಅದರಲ್ಲಿ ನ್ಯಾಯಾಂಗದ ಉನ್ನತ ವ್ಯಕ್ತಿ ಇಲ್ಲ ಎಂದು ತಿಳಿಸಿದರು. ನೆಹರು ಅದಕ್ಕೆ ಉತ್ತರಿಸುತ್ತಿದ್ದರೋ ಏನೋ. ಅ?ರಲ್ಲೆ ಅನಾರೋಗ್ಯ ಎದುರಾಯಿತು; ಮುಂದಿನ ತಿಂಗಳು ಅವರು ನಿಧನ ಹೊಂದಿದರು.
ಈಗ ಒಂದು ಮಿಲಿಯನ್ ಡಾಲರ್ ಪ್ರಶ್ನೆ: ನೆಹರು ಅವರು ಸುಭಾಶ್ಚಂದ್ರ ಬೋಸರ ವಿಷಯದಲ್ಲಿ ಅಂದು ಜಿದ್ದಿನಿಂದೆಂಬಂತೆ ಏಕೆ ನಡೆದುಕೊಂಡರು? – ಎಂಬುದು. ಬಹುಶಃ ದೊಡ್ಡವರ ಕೆಲವು ಸಣ್ಣತನಗಳು ಅರ್ಥವಾಗುವುದು ಕಷ್ಟವಿರಬೇಕು!
(ಸಶೇಷ)

ಕೃಪೆ: ಉತ್ಥಾನ

ಎಚ್. ಮಂಜುನಾಥ್ ಭಟ್ಟ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ನಾಯಕ ಶ್ರೀ ಬಾಬುರಾವ್ ದೇಸಾಯಿ ನಿಧನ

Sat Jan 23 , 2021
ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರು ಹಾಗೂ ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ನಾಯಕರಾಗಿದ್ದ ಶ್ರೀಯುತ ಬಾಬುರಾವ್ ದೇಸಾಯಿ (96) ಅವರು ನಿನ್ನೆ (ಜನವರಿ 22) ರಾತ್ರಿ 10ಕ್ಕೆ ನಿಧನರಾಗಿದ್ದಾರೆ. ಇಂದು ಬೆಳಿಗ್ಗೆ 10ರಿಂದ ವಿಶ್ವ ಹಿಂದು ಪರಿಷತ್ ನ ರಾಜ್ಯ ಕೇಂದ್ರ ಕಾರ್ಯಾಲಯ ಧರ್ಮಶ್ರೀಯಲ್ಲಿ ಅವರ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. #ಓಂಶಾಂತಿ ಅವರು 1949 ರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದರು. Veteran RSS Pracharak, Former National […]