‘ನೇತಾಜಿ’ ನಿಗೂಢತೆಯಿಂದ ಹೊರಬರಲಿ !

Photo: scroll

ದೇಶದಲ್ಲಿ ಈಗ ಒಂದು ಮಹತ್ವದ ಘೋಷಣೆಯಾಗಿದೆ. ತಡವಾಗಿಯಾದರೂ ಮೆಚ್ಚಬೇಕಾದ ಕಾರ್ಯ. ಎಲ್ಲ ದೇಶಭಕ್ತರ ಎದೆಯನ್ನುಬ್ಬಿಸುವ ವಿಚಾರ.  ಮಹಾನ್ ಸ್ವಾತಂತ್ರ್ಯ ಹೋರಾಟಗಾರ ಮತ್ತು ಆಜಾದ್ ಹಿಂದ್ ಫೌಜ್ ಸಂಸ್ಥಾಪಕ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ಇನ್ನು ಮುಂದೆ “ಪರಾಕ್ರಮ ದಿನ”ವನ್ನಾಗಿ ಆಚರಿಸಲು ಭಾರತ ಸರ್ಕಾರ ನಿರ್ಧರಿಸಿದೆ. ಈ ಮೂಲಕ ನೇತಾಜಿಯ ಜನ್ಮದಿನ-ಜನವರಿ 23 ರಂದು ಶೌರ್ಯದ ದಿನವಾಗಿ ಆಚರಿಸಲು ತೀರ್ಮಾನಿಸಿರುವುದಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯವು  ಪ್ರಕಟಣೆಯಲ್ಲಿ ತಿಳಿಸಿದೆ.

“ರಾಷ್ಟ್ರಕ್ಕೆ ನೇತಾಜಿಯ ಅದಮ್ಯ ಮನೋಭಾವ ಮತ್ತು ನಿಸ್ವಾರ್ಥ ಸೇವೆಯನ್ನು ಗೌರವಿಸುವ ಮತ್ತು ನೆನಪಿಸುವ ಸಲುವಾಗಿ, ವಿಶೇಷವಾಗಿ ಯುವಕರಿಗೆ ಸ್ಫೂರ್ತಿ ನೀಡುವ ಸಲುವಾಗಿಯೇ ಈ ಆಚರಣೆಯನ್ನು ನಿರ್ಧರಿಸಿದೆ. ನೇತಾಜಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಧೈರ್ಯದಿಂದ ವರ್ತಿಸಿದ್ದು ಅವರ ಮಾದರಿಯಲ್ಲೇ ದೇಶಭಕ್ತಿಯ ಉತ್ಸಾಹವನ್ನು ತುಂಬುವ ಉದ್ದೇಶ ಇದರ ಹಿಂದಿದೆ” ಎಂದು ಪ್ರಕಟಣೆ ಹೇಳಿದೆ.

ಮಾತೃಭೂಮಿಗಾಗಿ ಬಲಿದಾನ ಗೈದ ವೀರರನ್ನು ದೇಶ ಸದಾ ನೆನಪಿಸಿಕೊಳ್ಳಬೇಕು, ಅದು ನಮ್ಮ ಕರ್ತವ್ಯವೇ ಆಗಿದೆ. ಸ್ವಾತಂತ್ರ್ಯ ಗಳಿಕೆಯ ಹೋರಾಟದ ಶ್ರೇಯಸ್ಸನ್ನು ಕೆಲವೇ ವ್ಯಕ್ತಿ, ಕುಟುಂಬದ ಕೈಗೊಪ್ಪಿಸುವ ಇಲ್ಲಿಯವರೆಗಿನ ಪ್ರಯತ್ನವು ನೈಜ ಹಾಗೂ ಸ್ವಾಭಿಮಾನದ ಇತಿಹಾಸವನ್ನು ನಮ್ಮಿಂದ ಮರೆಮಾಡಿತ್ತು. ಆ ಮರೆವಿನ ತೆರೆಯನ್ನು ಸರಿಸುವಲ್ಲಿ ‘ಪರಾಕ್ರಮ ದಿನ’ದಂತಹ ಆಚರಣೆಗಳು ಪ್ರಮುಖವೆನಿಸುತ್ತವೆ.

ಈ ಸಂದರ್ಭದಲ್ಲಿಯೇ ಮತ್ತೊಂದು ಪ್ರಮುಖ ಸತ್ಯದ ಅನಾವರಣವೂ ಆಗಬೇಕಿದೆ. ಅದೇ ನೇತಾಜಿಯವರ ಸಾವಿನ ನಿಗೂಢತೆಯ ಕುರಿತ ವಿಷಯಗಳು. ಚತುರಾಗಿದ್ದ ಸುಭಾಷರ ಸಾವೆಂಬ ಸುದ್ದಿ ಅವರು ಗುಪ್ತವಾಗಿ ಯುದ್ಧ ಮುಂದುವರೆಸುವುದಕ್ಕಾಗಿ ಮಾಡಿಕೊಂಡ ಒಂದು ವ್ಯವಸ್ಥೆ ಆಗಿತ್ತು ಎಂಬ ಬಲವಾದ ಗುಮಾನಿಗಳಿವೆ. ಆದರೆ ಅದಕ್ಕೆ ಸಂಬಂಧಿಸಿದ ಸತ್ಯ ಇನ್ನೂ ಹೊರಬಂದಿಲ್ಲ. ನೇಮಕಗೊಂಡ ಆಯೋಗಗಳು, ನಡೆಸಿದ ತನಿಖೆ, ವರದಿಗಳ ಜೊತೆಗೆ ವಶಪಡಿಸಿಕೊಂಡಿರುವ ಕಾಗದ ಪತ್ರಗಳು, ಸಂಗ್ರಹಿಸಿರುವ ಮಾಹಿತಿಗಳು ಎಲ್ಲವೂ ಬಹಿರಂಗಗೊಳ್ಳಬೇಕಿದೆ.

ಸುಭಾಷರು ವಿಮಾನಾಪಘಾತದಲ್ಲಿ ಮರಣಿಸಲಿಲ್ಲ, ಬದಲಾಗಿ ಅದೊಂದು ಬ್ರಿಟೀಷರ ಕಣ್ಣಿಗೆ ಮಣ್ಣೆರಚುವ ಸಾಧನ ಮಾತ್ರವಾಗಿತ್ತು. ಸ್ವಾತಂತ್ರ ಪ್ರಾಪ್ತಿಯ ನಂತರವೂ ಉತ್ತರಪ್ರದೇಶದ ಫೈಜಾಬಾದ್‌ನಲ್ಲಿ ಗುಮ್ನಾಮಿ ಬಾಬ ಹೆಸರಿನಲ್ಲಿ ಜೀವಿಸಿದ್ದ ನಿಗೂಢ ಸಂತರು ಸುಭಾಷರೇ ಆಗಿದ್ದರು ಎಂದು ಹೇಳಲಾಗುತ್ತಿದೆ. ಆ ಬಾಬಾ ಅಲ್ಲಿ ಅಚಾನಕವಾಗಿ ಕಾಣಿಸಿಕೊಂಡದ್ದು. ಅವರು ದೇಶದ ಅನೇಕ ಪ್ರಮುಖ ನೇತಾರರೊಡನೆ ಪತ್ರ ವ್ಯವಹಾರ, ಸಂಪರ್ಕ ಇಟ್ಟುಕೊಂಡದ್ದು ಮಾತ್ರವಲ್ಲದೇ ಅವರ ಮುಖಚರ್ಯೆಯ ಹೋಲಿಕೆಯೂ ಸುಭಾಷರೇ ಎನ್ನುವಂತಿತ್ತು. ಅಕ್ಷರ ಬರವಣಿಗೆಯ ಶೈಲಿಯೂ ಒಂದೇ ಆಗಿತ್ತು. 

ಇದಕ್ಕೆ ಪೂರಕವೆಂಬಂತೆ 1985ರಲ್ಲಿ ಅವರು ತೀರಿಕೊಂಡಾಗ ಅವರ ದೇಹವನ್ನು ತ್ರಿವರ್ಣಧ್ವಜದಲ್ಲಿ ಸುತ್ತಿ ಶವಸಂಸ್ಕಾರಕ್ಕೆ ತಗೆದುಕೊಂಡೊಯ್ಯಲಾಯಿತು. ಅಂತಿಮ ಸಂಸ್ಕಾರದಲ್ಲಿ ಭಾಗವಹಿಸಿದ್ದ ಅವರ ಅಂತ್ಯಕಾಲದ ಒಡನಾಡಿ ರಾಮ್‌ಕಿಶೋರ್ ಪಾಂಡೆ ‘ನಿಮ್ಮ ಅಂತಿಮ ಯಾತ್ರೆ ನೋಡಲು ನಾವಿಲ್ಲಿ ಹದಿಮೂರು ಮಂದಿ ಮಾತ್ರ ಇದ್ದೇವೆ. ಹದಿಮೂರು ಲಕ್ಷ ಜನರಾದರೂ ನಿಮ್ಮನ್ನು ಇಂದು ಬೀಳ್ಕೊಡಬೇಕಿತ್ತು’ ಎಂದು ದುಃಖಿಸಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾರಕರಾಗಿದ್ದ ದಿವಂಗತ ಕು.ಸೀ. ಸುದರ್ಶನ್ ಜಿರವರು ಸಹ ಗುಮ್ನಾಮಿ ಬಾಬಾ ಮತ್ತು ಸುಭಾಷ್ಚಂದ್ರ ಬೋಸ್ ಬೇರೆಯಲ್ಲ, ಒಬ್ಬರೇ ಎಂದು ಸ್ಪಷ್ಟವಾಗಿ ಹೇಳಿದ್ದರು. ಅಂತಹ ಜವಾಬ್ದಾರಿಯುತ ವ್ಯಕ್ತಿ ಸುಮ್ಮನೆ ಹೇಳಿಕೆ ನೀಡುವುದಿಲ್ಲ ಎಂಬುದನ್ನು ಗಮನಿಸಲೇ ಬೇಕು.

ಹಿಂದಿನ ಸರ್ಕಾರಗಳು ಸುಭಾಷರ ಬಗ್ಗೆ ಮಾಹಿತಿಗಳನ್ನು ಮುಚ್ಚಿಡಲು ಪ್ರಯತ್ನಿಸಿದ್ದು ಅವರ ವಿಚಾರಕ್ಕೆ ತಕ್ಕಂತೆಯೇ ಇತ್ತು. ಆದರೆ ಇದೀಗ ಮೋದಿಯವರ ಸರ್ಕಾರದ ಬಗ್ಗೆ, ಹಾಗೆಯೇ ಉತ್ತರ ಪ್ರದೇಶದ ಯೋಗಿಯವರ ನೇತೃತ್ವದ ಬಗ್ಗೆ ಜನರಿಗೆ ನಂಬಿಕೆ ಇದೆ. ಇವರಿಂದಲಾದರೂ ಆ ಮಹಾಪುರುಷನ ಜೀವನದ ಬಗ್ಗೆ ಬೆಳಕು ಮೂಡಬಹುದೆಂಬ ವಿಶ್ವಾಸವಿದೆ. 

ಇಲ್ಲಿಯವರೆಗೂ ಕೇಂದ್ರ ಸರ್ಕಾರ ಸುಭಾಷರ ಕುರಿತ ಕೆಲ ದಾಖಲೆಗಳನ್ನು ಬಿಡುಗಡೆಗೊಳಿಸಿದೆಯಾದರೂ ಅವುಗಳಲ್ಲಿ ಅಂತಹ ಮಹತ್ವದ ಸುಳಿವು ಲಭ್ಯವಾಗಿಲ್ಲ. ಆದರೆ ಗುಮ್ನಾಮಿ ಬಾಬಾರ ಅಸ್ಥಿಗಳ ಡಿ ಎನ್ ಎ ಪರೀಕ್ಷೆ ಮಾಡಬೇಕು, ಅದನ್ನು ನೇತಾಜಿಯವರ ಸಂಬಂಧಿಕರ ಡಿ ಎನ್ ಯೊಂದಿಗೆ ಹೋಲಿಸಿದರೆ ಸತ್ಯ ಬಹಿರಂಗವಾಗುತ್ತದೆ ಎಂದು ‘ಕೆನನ್ಡ್ರಮ್ –  ನೇತಾಜಿಸ್ ಲೈಫ್ ಆಫ್ಟರ್ ಡೆತ್’ ಪುಸ್ತಕದ ಲೇಖಕ ಶ್ರೀ ಅನುಜ್ ಧರ್ ಹೇಳುತ್ತಾರೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಇದು ಖಂಡಿತ ಸಾಧ್ಯವಿದೆ.

ಹಾಗೆಯೇ ಉತ್ತರ ಪ್ರದೇಶದ ಸರ್ಕಾರವೂ ಗುಮ್ನಾಮಿ ಬಾಬಾರ ಸಂಗ್ರಹಾಗಾರವನ್ನು ಮುಕ್ತಗೊಳಿಸಬೇಕು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ನಿಶ್ಚಯಿಸಿದರೆ ಇದು ಸಾಧ್ಯ. ಬಾಬಾ ಬಗ್ಗೆ ಇರುವ ಗೊಂದಲಗಳು ದೂರವಾಗುವುದರ ಜೊತೆಗೆ ದೇಶಕ್ಕಾಗಿ ಪ್ರಾಣ ತೆತ್ತ  ಆ ಮಹಾನ್ ನೇತಾರನ ಜೀವನದ ಕುರಿತು, ಅನುಭವಿಸಿದ ಕಷ್ಟಕೋಟಲೆಗಳು, ಗುಪ್ತವಾಗಿ ಜೀವಿಸಿರ ಬೇಕಾದ ಅನಿವಾರ್ಯತೆಯ ಕುರಿತು ರಾಷ್ಟ್ರದ ಜನತೆ ತಿಳಿದು ಕೊಳ್ಳಲು ಸಾಧ್ಯವಾಗುತ್ತದೆ.

ಬಹುಶಃ ಇಂದು ಈ ನಿರ್ಧಾರ ಮಾಡದಿದ್ದರೆ ಮುಂದೆ ಸುಭಾಷರ ಅಂತ್ಯದ ಇತಿಹಾಸ ನಿಗೂಢವಾಗಿಯೇ ಉಳಿದು ಬಿಡುತ್ತದೆ.

ಸಂತೋಷ್ ಜಿ ಆರ್

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Modus operandi behind violent protests in Bharat? 3 questions to the Lutyens Lobby.

Sat Jan 30 , 2021
Modus operandi behind violent protests in Bharat?3 questions to the Lutyens Lobby. –Harish Kulkarni, Social Media Enthusiast. We have seen the #FarmersProtest for last few months which got more fierce in the last two months with farmers shifting their protest site to Delhi borders. Any person or section of people […]