ಪೂರ್ವಗ್ರಹವಿಲ್ಲದೆ ಚರ್ಚೆಗೆ ತೆರೆದುಕೊಳ್ಳುವ ವ್ಯಕ್ತಿತ್ವ ಡಾ. ಸಿದ್ಧಲಿಂಗಯ್ಯ ಅವರದ್ದು.

ಕರ್ನಾಟಕದ ದಲಿತ ಚಳುವಳಿಯ ಮೊದಲ ಸಾಲಿನ ನಾಯಕರಾಗಿದ್ದ, ಒಳ್ಳೆಯ ಕವಿ, ಲೇಖಕರಾಗಿದ್ದ ಅದೆಲ್ಲಕ್ಕೂ ಮಿಗಿಲಾಗಿ ಹಲವು ವಿಚಾರಧಾರೆಯ ಸಾವಿರಾರು ಕಾರ್ಯಕರ್ತರಿಗೆ ಆತ್ಮೀಯ ಗೆಳೆಯರಾಗಿದ್ದವರು ಡಾ ಸಿದ್ಧಲಿಂಗಯ್ಯ .

ವಿದ್ಯಾರ್ಥಿ ದೆಸೆಯಲ್ಲೇ ಮಾರ್ಕ್ಸ್ , ಅಂಬೇಡ್ಕರ್ ಪ್ರಭಾವ ಅವರನ್ನು ಆವರಿಸಿತ್ತು. ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನ ಬಂದಾಗ ಅವರಿನ್ನೂ ಕನ್ನಡ ಎಂ.ಎ ವಿದ್ಯಾರ್ಥಿ. ಅವರ ಹಾಡುಗಳೆ ಹೋರಾಟಕ್ಕೆ ಸಾವಿರಾರು ಯುವಜನರನ್ನು ಸೆಳೆದಿದ್ದವು . ಕೇವಲ ದಲಿತ ಹೋರಾಟವಷ್ಟೆ ಅಲ್ಲ, ವಿಧ್ಯಾರ್ಥಿ, ರೈತ, ಕಾರ್ಮಿಕ ಎಲ್ಲ ಹೋರಾಟಗಳಲ್ಲೂ ಧ್ವನಿಸುತ್ತಿದ್ದದ್ದು ಸಿದ್ಧಲಿಂಗಯ್ಯನವರ ಆ ಹಾಡುಗಳೆ.

ತೀರಾ ಇತ್ತೀಚಿಗೆ ಕಾಗಿನೆಲೆ ಕನಕ ಪೀಠದ ಸ್ವಾಮೀಜಿಗಳ ನೇತೃತ್ವದ ಎಸ್ಟಿ ಮೀಸಲಾತಿ ಹೋರಾಟದ ಪಾದಯತ್ರೆಯನ್ನು ನೋಡಲು ಹೋದಾಗ ಅಲ್ಲಿ ಕೇಳಿಬಂದದ್ದೂ ಸಿದ್ಧಲಿಂಗಯ್ಯನವರ ಹೋರಾಟದ ಹಾಡುಗಳೆ. ನಂತರ ಭೇಟಿಯಾದಾಗಲೊಮ್ಮೆ ಪಾದಯಾತ್ರೆಯನ್ನು ಆವರಿಸಿದ್ದ ಹೋರಾಟದ ಹಾಡಿನ ಬಗ್ಗೆ ಮೇಷ್ಟ್ರ ಗಮನಕ್ಕೆ ತಂದೆ . ‘ ಪದ್ಯಗಳು ಏನಾಗ್ತವೋ ಗೊತ್ತಿಲ್ಲ , ಹಾಡುಗಳು ಸಾಯಲ್ಲ ಅಲ್ವಾ ? ‘ ಎಂದಿದ್ದರು . ಹಾಡುಗಳ ಮೂಲಕ ಕವಿಯೂ ಅಜರಾಮರ….

1996 ರಲ್ಲೇ ಡಾ ಸಿದ್ಧಲಿಂಗಯ್ಯ ಸಾಮರಸ್ಯ ವೇದಿಕೆಯ ಸಾಹಿತ್ಯ ಸಮ್ಮೇಳನಕ್ಕೆ ಬಂದಿದ್ದರು . ಸಮರೋಪ ಭಾಷಣ ಮಾಡಿದ್ದರು . ಅಲ್ಲಿಯೇ ಅವರು ‘ ನಾನು ದಲಿತ ಕವಿಯಲ್ಲ , ಕನ್ನಡದ ಕವಿ ‘ ಎಂದಿದ್ದು .

ತೆಳುವಾದ ವ್ಯಂಗ್ಯ , ಹಾಸ್ಯ ಮಿಶ್ರಿತ ನವಿರು ಧಾಟಿಯಲ್ಲಿ ಸಾಗುವ ಅವರ ಆತ್ಮಕಥೆ ಊರು – ಕೇರಿ ಸರಣಿ ಹೊಸ ಪ್ರಪಂಚವನ್ನೇ ತೆರದಿಡುತ್ತದೆ . ನಗು ನಗಿಸುತ್ತಲೇ ಕಣ್ಣನ್ನು ತೇವಗೊಳಿಸುತ್ತದೆ . ಸಂವೇದನೆಯನ್ನು ಅರಳಿಸುತ್ತದೆ .

ಮೇಷ್ಟ್ರು ಊರು – ಕೇರಿಯ ಬಹುತೇಕ ಅಧ್ಯಾಯಗಳನ್ನು ಬರೆದಿದ್ದು ಬನ್ನೇರುಘಟ್ಟ ಸಮೀಪ ಇರುವ ಪ್ರಶಾಂತಿ ಕುಟೀರ ಎಂಬ ಯೋಗ ಕೇಂದ್ರದಲ್ಲಿ . ವಿಲಕ್ಷಣ ಜೀವನಶೈಲಿಯ ಕಾರಣದಿಂದೇನೋ ಮೇಷ್ಟ್ರಿಗೆ ಮಧ್ಯ ವಯಸ್ಸಿನಲ್ಲೇ ಸಕ್ಕರೆ ಖಾಯಿಲೆ ಬಾಧಿಸುತಿತ್ತು . ಇದರ ಚಿಕಿತ್ಸೆಗೆಂದೇ ಮೇಷ್ಟ್ರು ‘ ಪ್ರಶಾಂತಿ ಕುಟೀರ ‘ ದಲ್ಲಿ ದಾಖಲಾಗುವುದಿತ್ತು . ಅಲ್ಲಿಯೇ ಅವರ ಬರವಣಿಗೆಯೂ ಸಾಗುತ್ತಿತ್ತು . ಅಲ್ಲಿಯೇ ಸಿದ್ಧಲಿಂಗಯ್ಯನವರು ಆರೆಸ್ಸೆಸ್ ನ ಪ್ರಮುಖರಾದ ಹೊ ವೆ ಶೇಷಾದ್ರಿರವರನ್ನು ಭೇಟಿಯಾದದ್ದು . ಲೇಖಕರೂ ಆಗಿದ್ದ ಶೇಷಾದ್ರಿರವರ ಸರಳತೆ , ಅಸ್ಪೃಶ್ಯತೆಯ ಒಳ – ಹೊರಗುಗಳ ಬಗ್ಗೆ ಅವರಿಗಿದ್ದ ಕಾಳಜಿಪೂರ್ಣ ಸ್ಪಷ್ಟತೆ ಸಿದ್ಧಲಿಂಗಯ್ಯನವರನ್ನು ಸೆಳೆಯಿತು . ಶೇಷಾದ್ರಿಯವರು ತೀರಿಕೊಂಡಾಗ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು . ಶೇಷಾದ್ರಿರವರ ಕುರಿತಾಗಿ ಬಂದ ‘ ಧ್ಯೇಯಯಾತ್ರಿ ‘ ಪುಸ್ತಕಕ್ಕೆ ಬೆನ್ನುಡಿಯನ್ನು ಬರೆದರು .

ಹೊ.ವೆ. ಶೇಷಾದ್ರಿ ಜೊತೆಗಿನ ಒಡನಾಟದ ನೆನಪುಗಳನ್ನು ಊರು-ಕೇರಿಯ ಭಾಗ ೩ರಲ್ಲಿ ಸಿದ್ಧಲಿಂಗಯ್ಯ ದಾಖಲಿಸಿದ್ದಾರೆ .

ಅವತ್ತೊಂದ್ಸಲ ಸಿದ್ಧಲಿಂಗಯ್ಯನವರನ್ನು ಕಾಣಲು ನಾವು ಕೆಲವರು ಅವರ ರಾಜರಾಜೇಶ್ವರಿ ನಗರದ ಮನೆ ‘ ಬನವಾಸಿ’ ಗೆ ಹೊರಟಿದ್ದೆವು. ದಾರಿಗೊತ್ತಿದ್ದದ್ದು ನನಗಷ್ಟೆ . ಹೀಗಾಗಿ ಕಾರಿನ ಚಾಲನೆ ಮಾಡುತ್ತಿದ್ದವರಿಗೆ ದಾರಿ ಹೇಳುತ್ತಿದ್ದೆ . ‘ ಬನವಾಸಿ’  ಹತ್ತಿರ ಬಂದಾಗ ಸ್ವಲ್ಪ ಮುಂದೆ ಎಡಗಡೆ, ಕೆಂಪುಮನೆ… ಎಂದು ಹೇಳುವಾಗಲೇ ಹಿಂದೆ ಕುಳಿತ್ತಿದ್ದ ಗೆಳೆಯರು ‘ ಈಗಲೂ ಎಡಗಡೆನಾ… ? ‘ ಎಂದು ಕೇಳಿದ್ದರು .

ಈ ಪ್ರಶ್ನೆ ಅನೇಕರಿಗೆ ಬಂದಿದೆ . ಕೆಲವರು ಮೇಷ್ಟ್ರನ್ನ ಆರೆಸ್ಸೆಸ್ , ಬಿಜೆಪಿಗೆ ಸೇರಿಸಿ ಬೈದದ್ದು ಇದೆ . ಬಿಜೆಪಿಯ ಅಮಿತ್ ಶಾ ಮನೆಗೆ ಬಂದು ಭೇಟಿಯಾದಾಗ ಮೇಷ್ಟ್ರಿಗೆ ಬೆದರಿಕೆ ಕರೆಗಳೂ ಬಂದು ಕೆಲದಿನ ಪೋಲೀಸರು ಬನವಾಸಿಯನ್ನು ಕಾಯಬೇಕಾಗಿಯೂ ಬಂದಿತ್ತು . ಜಾತಿ ವೈಷಮ್ಯವನ್ನು ತಿಳಿಗೊಳಿಸುವ ಆರೆಸ್ಸೆಸ್ ಪ್ರಯತ್ನಗಳ ಬಗ್ಗೆ ಮೇಷ್ಟ್ರು ಅನೇಕಸಲ ತಾಸುಗಟ್ಟಲೆ ಚರ್ಚೆ – ಸಂವಾದ ಮಾಡಿದ್ದಾರೆ . ಸಮಸ್ಯೆಯ ಬೇರೆಯದೆ ಮುಖಗಳನ್ನು ಆರೆಸ್ಸೆಸ್ ನವರಿಗೂ ಪರಿಚಯಿಸಿದ್ದಾರೆ. ಪೂರ್ವಗ್ರಹವಿಲ್ಲದೆ ಚರ್ಚೆಗೆ ತೆರೆದುಕೊಳ್ಳುವ ಅಪರೂಪದ ವ್ಯಕ್ತಿತ್ವ ಅವರದ್ದು .

ರಾಷ್ಟ್ರೋತ್ಥಾನ ಪರಿಷತ್ತಿನ ಸಂಶೋಧನಾ ಕೇಂದ್ರಕ್ಕೆ ಹಿರಿಯ ದಲಿತ ಚಿಂತಕ , ವಿದ್ವಾಂಸ ಡಾ ನರೇಂದ್ರ ಜಾಧವ್ ಬಂದಾಗ ನೆಡೆದ ಚರ್ಚೆಯಲ್ಲಿ ಪಾಲ್ಗೊಳ್ಳಲು ಬರೀ ವಾಟ್ಸಪ್ ಮೆಸೇಜ್ ನೋಡಿ ಬಂದಿದ್ದ ಮೇಷ್ಟ್ರು ನಮ್ಮನ್ನೆಲ್ಲ ಮೂಕರನ್ನಗಿಸಿದ್ದರು . ಸಿದ್ಧಲಿಂಗಯ್ಯ ಸರ್ಕಾರದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದಾಗ ಕನ್ನಡದ ಅನೇಕ ಹಿರಿಯ ಮನಸ್ಸುಗಳನ್ನು ಭೇಟಿಯಾಗಿ ‘ ನಿಜಕ್ಕೂ ಕನ್ನಡಕ್ಕೆ ಏನಾಗಬೇಕು ‘ ಎಂದು ಚರ್ಚಿಸಿದರು . ನಿವೃತ್ತ ನ್ಯಾಯಮೂರ್ತಿ ರಾಮಾಜೋಯಿಸ್ , ಡಾ ಚಿದಾನಂದ ಮೂರ್ತಿ , ಎಲ್ ಎಸ್ ಶೇಷಗಿರಿರಾವ್ , ನಿಘಂಟು ತಜ್ಞ ವೆಂಕಟಸುಬ್ಬಯ್ಯನವರನ್ನು ಭೇಟಿಯಾದಾಗ ಜೊತೆಗೆ ನಾನಿದ್ದೆ . ಜೀವಿ ಮತ್ತು ಚಿಮೂ ರವರ ಮುಂದೆ ಎಷ್ಟು ಹೇಳಿದರು ಕುರ್ಚಿಯಲ್ಲಿ ಕೂಡಲು ಸಿದ್ಧಲಿಂಗಯ್ಯ ಒಪ್ಪಲಿಲ್ಲ . ನೆಲದಲ್ಲಿ ಕುಳಿತೆ ಚರ್ಚಿಸಿದರು , ಸಲಹೆಗಳನ್ನು ಗುರುತು ಹಾಕಿಕೊಂಡರು …. ಹೊರಡುವಾಗ ‘ ಊರು – ಕೇರಿ ಮುಂದಿನಭಾಗ ಬೇಗ ಬರ್ಬೇಕಪ್ಪಾ , ನಾನು ಕಾಯ್ತಾ ಇದ್ದೀನಿ ‘ ಎಂದು ಜೀವಿ ತಬ್ಬಿ ಹೇಳಿದ ದೃಶ್ಯ ಕಣ್ಣಿಗೆ ಕಟ್ಟಿದಂತಿದೆ .

ವರ್ಷದ ಹಿಂದೆ ಬಳ್ಳಾರಿಯ ರಂಗತೋರಣದ ಗೆಳೆಯರು ಪ್ರತಿಷ್ಠಿತ ಜೋಳದರಾಶಿ ದೊಡ್ಡಣ್ಣ ಗೌಡರ ನೆನಪಿನ ವಾರ್ಷಿಕ ಪ್ರಶಸ್ತಿ ವಿತರಿಸಲು ಕರೆದಿದ್ದರು . ಎರಡು ದಿನ ಬಳ್ಳಾರಿಗೆ ಹೋಗಿಬರುವಾಗ ಮೇಷ್ಟ್ರ ಜೊತೆ ಭರಪೂರ ಮಾತುಕಥೆ . ಬಳ್ಳಾರಿಯಲ್ಲಿ ಮೇಷ್ಟ್ರು ಪೌರಾಣಿಕ ನಾಟಕಗಳ ಬಗ್ಗೆ ಮಾತನಾಡಿದರು . ರಾಮಯಾಣ , ಮಹಾಭಾರತ ಗ್ರಾಮೀಣ ಜನರಲ್ಲಿ ಉಂಟು ಮಾಡಿರುವ ಪರಿಣಾಮಗಳ ಬಗ್ಗೆ ಗಮನ ಸೆಳೆದರು . ‘ ರಾಮಂಗೆ , ಸೀತೆಗೆ ಬಂದಿರೋ ಕಷ್ಟಗಳ ಮುಂದೆ ನಮ್ಮದ್ಯಾವ ಲೆಕ್ಕ ? ‘ ಎಂಬ ಆಡುಮಾತುಗಳು ಬೆಳೆಸುವ ಮನೋಸ್ಥೈರ್ಯವನ್ನು ವಿಷ್ಲೇಶಿಸಿದರು . ವಾಪಸ್ ಬರುವಾಗ ಮಧ್ಯಾಹ್ನದ ಊಟಕ್ಕೆ ಎಲ್ಲಿ ನಿಲ್ಲಿಸುವುದು ಎಂಬ ಪ್ರಶ್ನೆ ಬಂತು .’ ಚಳ್ಳಕೆರೆಯಲ್ಲಿ ಆರೆಸ್ಸೆಸ್ ಗೆಳೆಯರಿದ್ದಾರೆ , ಅವರ ಮನೆಗೆ ಹೋಗೋಣ ಸ್ಸಾರ್ ‘ ಎಂದೆ . ‘ ಹೇಳದೆ – ಕೇಳದೆ ಹೋಗೋದಾ , ತೊಂದರೆ ಅಗಲ್ವಾ? ‘ ಮೇಷ್ಟ್ರು ಸಂಕೋಚಪಟ್ಟರು . ನಾವು ಊಟಕ್ಕೆ ಹೋದದ್ದು ರಾಮದಾಸ್ ಎನ್ನುವ ಕಾರ್ಯಕರ್ತರ ಮನೆಗೆ . ಅವರು ಮೇಷ್ಟ್ರ ಗೆಳೆಯ ಸಿಜಿಕೆರವರ ಅಣ್ಣನ ಮಕ್ಕಳು . ರಾಮದಾಸರವರಿಗೆ ಚಿಕ್ಕಪ್ಪನೇ ಮನೆಗೆ ಬಂದಷ್ಟು ಸಂಭ್ರಮ . ಮೇಷ್ಟ್ರಿಗೆ ಆಶ್ಚರ್ಯ ‘ ಈ ಸಿಜಿಕೆ ವಾಲ್ಮೀಕಿ ಸಮುದಾಯದವರು . ಅವರ ಅಣ್ಣನ ಮಕ್ಕಳೆಲ್ಲ ಎಷ್ಟೋಂದು ಆರೆಸ್ಸೆಸ್ ಆಗಿಬಿಟ್ಟಿದ್ದಾರೆ ‘ ಚಳ್ಳಕೆರೆ ಬಿಟ್ಟ ಮೇಲೂ ಸಿಜಿಕೆ ಬಗ್ಗೆ ಮಾತೇಮಾತು . ಸಿಜಿಕೆನೂ ಜೀವರಾಜ್ ಆಳ್ವ ಜೊತೆಗೆ ಬಿಜೆಪಿಗೆ ಹೋಗಿಬಂದಿದ್ದರೆಂಬ ಗುಟ್ಟು ಹೊರಹಾಕಿದ್ದರು…. But ಈ ರಾಮದಾಸ್ ಮನೆಯವರೆಲ್ಲ ಹಾಗಲ್ಲ , ಪಕ್ಕಾ ಆರೆಸ್ಸೆಸ್ ಆಗಿಬಿಟ್ಟಿದ್ದಾರೆ… ‘ ಮೇಷ್ಟ್ರ ಮಾತು ಸಾಗಿತ್ತು .

ನಾಲ್ಕು ತಿಂಗಳ ಹಿಂದೆ ಮೈಸೂರಿನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಮೇಷ್ಟ್ರನ್ನ ಒಪ್ಪಿಸುವ ಜವಾಬ್ದಾರಿ ನನಗೆ ಬಂದಿತ್ತು . ಚಾಮರಾಜನಗರ ಸಂಸದ ಶ್ರೀನಿವಾಸಪ್ರಸಾದರವರ ಅಳಿಯ ಡಾ ಮೋಹನ್ ರವರು ಬರೆದ ಅವರ ಜೀವಾನಾನುಭವದ ಪುಸ್ತಕ . ಮೈಸೂರಿನ ಡಾ ಅನಂದಕುಮಾರ್ , ಲೇಖಕ ಡಾ ಮೋಹನ್ ಜೊತೆ ಮೇಷ್ಟ್ರ ಭೇಟಿ . ಒಂದು ತಾಸಿಗೂ ಮೀರಿದ ಮಾತು . ಯಾವ ಕಾಲೇಜು ಗ್ರಂಥಾಲಯವನ್ನು ಮೀರಿಸುವಷ್ಟು ಪುಸ್ತಕಗಳ ರಾಶಿ . ಹೊಸ ಲೇಖಕರಿಗೆ ಮೇಷ್ಟ್ರ ಉತ್ಸಾಹವೇ ದೊಡ್ಡದೊಂದು ಪಾಠ …. ಮಾತಿನಡುವೆ ಮೇಷ್ಟ್ರು ತಮ್ಮ ಲಿವರ್ ಗೆ ಆಗಿರುವ ಬಾಧೆಯನ್ನು ಹೇಳಿಕೊಂಡರು …. ಡಾಕ್ಟರ್ ಗಳು ಕೈಚೆಲ್ಲುತ್ತಿದ್ದಾರೆ . ಚನ್ನೈಗೆ ಹೋಗಬೇಕಂತೆ ಅನ್ನುವಾಗ ಮನಸ್ಸು ಹಿಂಡಿದಂತೆ ಆಯಿತು .

ಕಳೆದ ತಿಂಗಳು , ಎಪ್ರಿಲ್ ಮೂವತ್ತರ ರಾತ್ರಿ ಹತ್ತುವರೆ ಇರಬೇಕು . ಮೇಷ್ಟ್ರ ಫೋನು . ನನಗೆ ಕೊರೊನಾ ಪಾಸಿಟಿವ್ ಬಂದಿದೆ ಎನ್ಮಾಡಬೇಕೊ ಗೊತ್ತಾಗ್ತಾ ಇಲ್ಲ . … ಮನೆಯಲ್ಲಿ ಚಿಕ್ಕ ಮೊಮ್ಮಕ್ಕಳು ಇದ್ದಾರೆ . ಅಸ್ಪತ್ರೆ ಬೆಡ್ಗೆ ಏನಾದರು ಮಾಡಬೇಕಲ್ಲ ‘ ಅಂದರು .

ಮರುದಿನ ಬೆಳಗ್ಗೆ ಶಂಕರಪುರದ ರಂಗದೊರೈ ಆಸ್ಪತ್ರೆಗೆ ದಾಖಲಾದರು . ಅಸ್ಪತ್ರೆಯಿಂದಲೂ ಮೇಷ್ಟ್ರು ಫೋನ್ ಮಾಡಿದ್ದರು… ಕೊರೊನಾ ಬೇರೆ , ಜೊತೆಗೆ ಅವರಿಗೆ ಮೊದಲೇ ಇದ್ದ ಖಾಯಿಲೆಗಳು .ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು . ಸರ್ಕಾರದ ತುರ್ತು ಸಹಾಯವೂ ಲಭಿಸಿತು . ಮಣಿಪಾಲ್ ಆಸ್ಪತ್ರೆಯ ಐಸಿಯೂಗೆ ವರ್ಗಾವಣೆ … ಆಗಾಗ ಚೇತರಿಕೆಯ ಸುದ್ದಿಗಳು ಬಂದವಾದರೂ ಕೊನೆಗೂ ಅವರು ಉಳಿಯಲಿಲ್ಲ .

* * * * *

ಊರು ಕೇರಿಯಲ್ಲೊಂದು ಪ್ರಸಂಗ ಓದಿದ ನೆನಪು .

ಮಾಗಡಿ ತಾಲೂಕಿನ ಹಳ್ಳಿಯಲ್ಲಿ ಸವರ್ಣೀಯರಿಂದ ದಲಿತ ಹುಡುಗನೊಬ್ಬ ಹಿಗ್ಗಾಮಗ್ಗ ಏಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದ . ಆಗ ಸಿದ್ದಲಿಂಗಯ್ಯ ಡಿಎಸ್ಸೆಸ್ ನ ಪ್ರಮುಖರು . ಸುದ್ದಿಕೇಳಿ ದೌಡಾಯಿಸಿದರು . ಆಸ್ಪತ್ರೆಗೆ ಹೋಗಿ ನೋಡಿದರು . ಇಷ್ಟು ಹೊಡೆತ ಬಿದ್ದಿದೆ .ಆದರೆ ಪೊಲೀಸ್ ಕಂಪ್ಲೇಟು ಆಗಿಲ್ಲ . ಎಸ್ಸೈ ಕಂಪ್ಲೇಟ್ ತಗೊತಾ ಇಲ್ಲ , ಏಟು ತಿಂದಿರೊ ಹುಡುಗನ ಫೋಟೊ ತನ್ನಿ ಅಂತ ಷರತ್ತು . ಹೊಡೆತ ತಿಂದ ದಲಿತನ ಫೋಟೊ ತೆಗೆಯೋಕೆ ಯಾರು ಒಪ್ತಾ ಇಲ್ಲ . ಹೇಗೊ ಯಾರನ್ನೋ ಹಿಡಿದು ಫೋಟೊ ತೆಗೆದುಕೊಂಡು ಠಾಣೆಗೆ ಹೊದರೆ ಎಸೈ ‘ಎನ್ರೀ ಇದು ಏಟು ತಿಂದಿದಾನೆ ಅಂತೀರಾ , ನೋಡಿದರೆ ವಿಕ್ಟಿಮ್ ನಗ್ತಾವನಲ್ರಿ….’

ಫೋಟೊ ಗ್ರಾಫರ್ ಕೊನೆಕ್ಷಣದಲ್ಲಿ ಸ್ಮೈಲ್ ಪ್ಲೀಸ್ ಅಂದದ್ದು ಕೈಕೊಟ್ಟಿತ್ತು . ವಿಕ್ಟಿಮ್ ಕಷ್ಟದಲ್ಲಿ ನಕ್ಕಿದ್ದ.

ನೋವು ನುಂಗಿಕೊಂಡೆ ನಗುತ್ತಿರುವವರು ನಾವು ದಲಿತರು.

ಮೇಷ್ಟ್ರು ಸಾಯುವುದಿಲ್ಲ , ಇಂತಹ ನೋವು ನುಂಗಿಕೊಂಡು ನಗುವ ಅಸಂಖ್ಯ ದಲಿತರಲ್ಲಿ ಮೇಷ್ಟ್ರು ಇದ್ದೇ ಇರುತ್ತಾರೆ.

ವಾದಿರಾಜ್

ಚಿಂತಕ, ಸಾಮಾಜಿಕ ಕಾರ್ಯಕರ್ತ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಯೋಗದಿನಾಚರಣೆ ಪ್ರಯುಕ್ತ ರಾಷ್ಟ್ರೋತ್ಥಾನ ಪರಿಷತ್ ನಿಂದ ಜೂನ್ 15ರಿಂದ ಅಂತರ್ಜಾಲ ಉಪನ್ಯಾಸ ಸರಣಿ

Mon Jun 14 , 2021
ಬೆಂಗಳೂರು, ಜೂನ್ 14: ರಾಷ್ಟ್ರೋತ್ಥಾನ ಪರಿಷತ್ ಅಂತಾರಾಷ್ಟ್ರೀಯ ಯೋಗದಿನಾಚರಣೆಯ ಪ್ರಯುಕ್ತ ಜೂನ್ 15ರಿಂದ 20ರ ತನಕ ಅಂತರ್ಜಾಲ  ಉಪನ್ಯಾಸ  ಸರಣಿಯನ್ನು ಆಯೋಜಿಸಿದೆ  ಎಂದು ರಾಷ್ಟ್ರೋತ್ಥಾನ ಯೋಗ ವಿಭಾಗದ ನಿರ್ದೇಶಕರಾದ ಎ. ನಾಗೇಂದ್ರ ಕಾಮತ್ ಅವರು ತಿಳಿಸಿದರು. ಅಂತಾರಾಷ್ಟ್ರೀಯ ಯೋಗ ದಿನವನ್ನು ರಾಷ್ಟ್ರೋತ್ಥಾನ ಯೋಗವಿಜ್ಞಾನ ಮತ್ತು ಸಂಶೋಧನ ಸಂಸ್ಥೆಯ ವತಿಯಿಂದ ಪ್ರತಿ ವರ್ಷ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತಿದೆ. ಈ ವರ್ಷ ಕೊರೋನಾ ಕಾರಣದಿಂದ ಆನ್‌ಲೈನ್ ಮೂಲಕ ಆಚರಿಸಲು ನಿರ್ಧರಿಸಲಾಗಿದೆ. ಈ ಬಾರಿಯ […]