ಬಲವಾಗಬೇಕಿದೆ ಭೂಮಿಯನ್ನು ತಾಯಿಯಂತೆ ಪೂಜಿಸಿ, ಕಾಪಾಡಿಕೊಳ್ಳುವ ಸಂಸ್ಕೃತಿ

ವಿಶ್ವದಾದ್ಯಂತ ಭೂಮಿಯ ಕುರಿತಾಗಿ ಒಂದು ಬಗೆಯ ಆತಂಕ ಮನೆಮಾಡಿದೆ. ಒಂದೆಡೆ ಭೂಮಿ ಮಲೀನಗೊಳ್ಳುತ್ತಿದೆ ಎನ್ನುವುದಾದರೆ , ಇನ್ನೊಂದೆಡೆ ಭೂಮಿಯ ತಾಪಮಾನ ಹೆಚ್ಚಾಗುತ್ತಿದೆ ಎನ್ನುವ ಭಯ. ಇವೆಲ್ಲದರ ನಡುವೆ ನಾವು ಭೂಮಿಗೊಂದು ದಿನವನ್ನೂ ಆಚರಿಸುತ್ತಿದ್ದೇವೆ. ಆ ದಿನ ಭೂಮಿಯ ಮಾಲಿನ್ಯಕ್ಕೆ ಕಾರಣವಾದ ಮಾನವ ಚಟುವಟಿಕೆಗಳ ಬಗ್ಗೆ ನಮ್ಮ ನಮ್ಮ ಆತಂಕವನ್ನು ವ್ಯಕ್ತಪಡಿಸುತ್ತಲೇ ಮುಂದಿನ ಪೀಳಿಗೆಗೆ ಈ ಭೂಮಿಯನ್ನು ಉಳಿಸುವ ಸವಾಲಿನ ಬಗ್ಗೆ ಚಿಂತನೆಗಳನ್ನು ಹಂಚಿಕೊಳ್ಳುತ್ತಿದ್ದೇವೆ. ಹೀಗಿದ್ದರೂ ಭೂಮಿಯ ಮಾಲಿನ್ಯ ಕಡಿಮೆ ಆಗಿದೆಯೇ ಎಂದು ನೋಡಿದರೆ ಸಮಾಧಾನಕರವಾದ ಉತ್ತರ ಸಿಗಲಾರದು. ಇದಕ್ಕಿರುವ ಮುಖ್ಯ ಕಾರಣವೆಂದರೆ ಭೂಮಿಯನ್ನು ಇಂದು ನಾವು ತೀರಾ ವ್ಯಾವಹಾರಿಕವಾಗಿ ನೋಡುತ್ತಿರುವುದು. ಅದು ನಮ್ಮ ಪಾಲಿಗೆ ತಾತ್ಕಾಲಿಕ ಆಸ್ತಿ. ಹಾಗಾಗಿ ಭೂಮಿಯನ್ನು ಅದರ ಹಣದಿಂದ ಅಳತೆ ಮಾಡುತ್ತಿದ್ದೇವೆಯೇ ಹೊರತು ಅದಕ್ಕಿರುವ ಸಾಂಸ್ಕೃತಿಕ ಮೌಲ್ಯದಿಂದ ಅದನ್ನು ನೋಡುತ್ತಿಲ್ಲ. ಭೂಮಿ ತಾಯಿ ಆಗಿ ಉಳಿದಿಲ್ಲ, ಸೈಟ್ ಆಗುತ್ತಿದೆಯಷ್ಟೇ. ತಾಯಿಯ ಮೌಲ್ಯ ಮತ್ತು ಸೈಟ್‌ನ ಮೌಲ್ಯ ಒಂದೇ ಆಗಿರಲಾರದು. ಹಾಗಾದರೆ ಪರಿಹಾರದ ದಾರಿ ಯಾವುದು? ನಮ್ಮ ಈ ಭೂಮಿಯನ್ನು ಮುಂದಿನ ತಲೆಮಾರುಗಳಿಗೆ ಕೆಡದಂತೆ ಕಾಪಾಡುವ ಮಾರ್ಗ ಯಾವುದು ಎಂದು ಯೋಚಿಸಿದರೆ ಕಾನೂನು ಮಾತ್ರ ಪರಿಹಾರವಾಗಲಾರದು. ಅದಕ್ಕಿಂತ ಹೆಚ್ಚಾಗಿ ಭೂಮಿಯ ಜತೆಗಿನ ಭಾವನಾತ್ಮಕ ಸಂಬಂಧವನ್ನು ನಾವು ಮರಳಿ ಸ್ಥಾಪಿಸಬೇಕಾಗಿದೆ. ಅಂತಹದ್ದೊಂದು ಭಾವನಾತ್ಮಕ ಸಂಬಂಧ ಈ ಭೂಮಿಯ ಬಗೆಗೆ ನಮ್ಮ ಪೂರ್ವಜರಿಗಿತ್ತು. ಆದರೆ ವ್ಯಾವಹಾರಿಕ ದೃಷ್ಟಿ ಪ್ರವೇಶವಾಗುತ್ತಿದ್ದಂತೆ ಈ ಭಾವನಾತ್ಮಕ ಸಂಗತಿ ದೂರವಾಯಿತು. ಭೂಮಿಯ ಒಡಲು ಬಗೆದೆವು. ಅದನ್ನು ಕೆಡಿಸಿದೆವು. ನಮ್ಮ ಹಿರಿಯರು ಅನಿವಾರ್ಯ ಕಾರಣದಿಂದ ನೆಲದ ಮೆಲೆ ಕಾಲೂರಿ ನಾವು ಓಡಾಡುವಾಗ ಈ ನೆಲವನ್ನು ತುಳಿಯುತ್ತೇವೆ ಎಂಬ ಕಾರಣದಿಂದಲೇ

“ ಸಮುದ್ರ ವಸನೇ ದೇವಿ ಪರ್ವತ ಸ್ತನಮಂಡಲೇ,

ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪಶಂ ಕ್ಷಮಸ್ವಮೇ”

ಎನ್ನುತ್ತಾ ನೆಲದ ಮೇಲೆ ಕಾಲೂರುತ್ತಿದ್ದರು. ನಮ್ಮ ಹಳ್ಳಿಯ ರೈತ

“ ಬೆಳಗಾಗ ನಾನೆದ್ದು ಯರ‍್ಯಾರ ನೆನೆಯಲಿ,

ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ

ಎದ್ದೊಂದು ಗಳಿಗೆ ನೆನದೇನಾ”

ಎನ್ನುತ್ತಾ ಈ ತಾಯಿ ಭೂಮಿಗೆ ನಮಿಸುತ್ತಿದ್ದುದು ನೆಲದ ಜತೆಗಿನ ಭಾವನಾತ್ಮಕ ಒಡನಾಟದಿಂದಲೇ ಹೊರತು ವ್ಯಾವಹಾರಿಕ ನೆಲೆಯಿಂದಲ್ಲ. ನಮಗಿಂದು ಈ ಭೂಮಿಯನ್ನು ಉಳಿಸಲು ಇರುವ ಏಕಮಾತ್ರ ದಾರಿ ಎಂದರೆ ಮತ್ತೆ ನಮ್ಮ ಪೂರ್ವಜನರ ಲೋಕದೃಷ್ಟಿಯನ್ನು ನಮ್ಮ ತಲೆಮಾರಿನ ಜನರಿಗೆ ನೀಡಬೇಕಾಗಿದೆ. ನಮ್ಮ ಜನಪದರ ಭಾವನೆಯನ್ನು ವಿದ್ಯಾವಂತರೆಂದು ಬೀಗುತ್ತಿರುವ ಪೀಳಿಗೆಗೆ ವರ್ಗಾಯಿಸಬೇಕಾಗಿದೆ.

ಭೂಮಿ ಹೇಗೆ ಸೃಷ್ಟಿಯಾಯಿತು ? ಜೀವ ಜಗತ್ತು ಹೇಗೆ ಹುಟ್ಟಿಕೊಂಡಿತು? ಎನ್ನುವುದನ್ನು ವಿವರಿಸದ ಮತಗ್ರಂಥಗಳಿಲ್ಲ. ಧರ್ಮ ನಂಬಿಕೆಗಳಿಲ್ಲ. ಹಾಗೆಂದು ಇದು ಕೇವಲ ಮತ ಧರ್ಮದ ಕುತೂಹಲವೆಂದಲ್ಲ. ವಿಜ್ಞಾನದ ಕುತೂಹಲವೂ ಹೌದು. ಹಾಗಾಗಿ ವಿಜ್ಞಾನದ ನಾನಾ ಶಾಖೆಗಳು ಭೂಮಿ ಹೇಗೆ ಉಂಟಾಯಿತು? ಜೀವಜಾಲ ಹೇಗೆ ಸೃಷ್ಟಿಯಾಯಿತು? ಹೇಗೆ ಪಸರಿಸಿತು ? ಇವುಗಳ ಇತಿಹಾಸ ಎಷ್ಟು ಪ್ರಾಚೀನ ? ಎನ್ನುವುದನ್ನು ವಿವರಿಸುತ್ತದೆ. ಚರಿತ್ರೆಯೂ ಹೊರತಲ್ಲ. ಯಾಕೆಂದರೆ ಹೊಸ ಹೊಸ ಉತ್ಖನನದಿಂದ ಜೀವಜಗತ್ತಿನ ಮಾತ್ರವಲ್ಲ, ನಾಗರಿಕ ಜಗತ್ತಿನ ಇತಿಹಾಸದ ಪ್ರಾಚೀನತೆ ವಿಸ್ತಾರಗೊಳ್ಳುತ್ತಲೇ ಇದೆ. ಸಾಹಿತ್ಯವಂತೂ ಸಾವಿರಾರು ವರ್ಷಗಳ, ಹಲವು ಮನ್ವಂತರಗಳಷ್ಟು ಪ್ರಾಚೀನಕ್ಕೆ ತೆಗೆದುಕೊಂಡು ಹೋಗಿ ವಿಕಾಸದ ಕ್ರಿಯೆ ಹೇಗಾಯಿತು ? ಎನ್ನುವುದನ್ನು ಕಾವ್ಯಾತ್ಮಕವಾಗಿ ನಿರೂಪಿಸಿದೆ. ಇಂತಹ ಭೂಮಿ ಮತ್ತೆ ಮತ್ತೆ ನಮ್ಮ ಚಿಂತನೆಯ ಕೇಂದ್ರವಾಗುತ್ತಿದೆ. ಮತ್ತೆ ಮತ್ತೆ ನಮ್ಮ ಆತಂಕದ ದಿನಗಳನ್ನು ಎದುರಿಸುತ್ತಿದ್ದೇವೆ. ಈ ಆತಂಕ ಸತ್ಯವೂ ಹೌದು. ಆದರೆ ಈ ಆತಂಕದ ಮೂಲ ಕಾರಣ ಮನುಷ್ಯನೇ ಎನ್ನುವುದು ಪರಮ ಸತ್ಯ.

ನಮ್ಮ ಪೂರ್ವಜರಿಗೆ ಭೂಮಿಯು ಕೇವಲ ಕಲ್ಲು – ಮಣ್ಣಿನ ರಾಶಿಯಾಗದೆ ಅದು ಅವರ ಬದುಕಿನ ಕೇಂದ್ರವಾಗಿತ್ತು. ಈ ಕಾರಣದಿಂದಲೇ ಪ್ರತಿಯೊಂದು ಭಾಷೆಯಲ್ಲೂ ಭೂಮಿಯನ್ನು ಸಂಬೋಧಿಸುವ ಹತ್ತಾರು ಪದಗಳಿವೆ. ಕೇವಲ ಪದಗಳಲ್ಲ. ಅದು ಪದಗಳ ಮೂಲಕ ಬಿಂಬಿತವಾದ ಮನುಕುಲದ ಭಾವಗಳು. ಇಂದು ನಾವು ಅಂಥಹ ಒಂದು ಪದವನ್ನು ಕಳೆದುಕೊಳ್ಳುವುದೆಂದರೆ ಒಂದು ಭಾವಲೋಕವನ್ನು ಕಳೆದುಕೊಂಡಂತೆಯೇ. ನಮ್ಮ ನಿತ್ಯದ ಬಳಕೆಯಲ್ಲಿರುವ ಭೂಮಿಯ ಕುರಿತಾದ ಪದಗಳ ಕಡೆಗೊಮ್ಮೆ ಗಮನ ಹರಿಸಿದರೆ, ಅಲ್ಲಿರುವ ಪದಗಳು ಕೇವಲ ಭಾಷಾ ಸೌಂಧರ್ಯಕ್ಕಾಗಿ ಬಳಕೆಯಾದುಲ್ಲ ಎನ್ನುವುದೂ ಅರಿವಾಗುತ್ತದೆ. ಅವನಿ, ಧರೆ, ಇಳೆ, ತಿರೆ, ದಾರಿಣಿ, ನೆಲ, ಪೃಥ್ವಿ, ಭೂಮಾತೆ, ಪೊಡವಿ, ಭೂದೇವಿ, ಮೇದಿನಿ, ವಸುದೆ, ಭುವಿ,ವಸುಂಧರೆ, ಧರಣಿ . . . ಹೀಗೆ ಇನ್ನೂ ಹತ್ತಾರು ಪದಗಳಿವೆ. ಜನಪದರು ಭೂಮಿಯ ಜತೆಗೆ ಜೀವಜಾಲದ ಸಂಬಂಧವನ್ನು , ಈ ಭೂಮಿಯನ್ನು ಬಿಟ್ಟು ಬದುಕಿಲ್ಲ ಎನ್ನುವ ಸತ್ಯವನ್ನು ಗಾಢವಾಗಿ ಅರ್ಥಮಾಡಿಕೊಂಡಿದ್ದರು. ಭೂಮಿಯ ಅನಿವಾರ್ಯತೆಯನ್ನು ಅವರಷ್ಟು, ನಾಗರಿಕ ಸಮಾಜವೆಂದು ಭಾವಿಸಿದ ಜನ ಅರ್ಥಮಾಡಿಕೊಂಡಿದ್ದರೆ ಇಂದು ಭೂಮಿಗೆ ಇಂತಹ ದುಸ್ಥಿತಿ ಬರುತ್ತಿರಲಿಲ್ಲ.

ಜನಪದರು ಈ ಭೂಮಿಯನ್ನು ಭೂಮಾತೆ, ಭೂದೇವಿ ಎಂದುದು ಕೇವಲ ಸೌಂಧರ್ಯಾತ್ಮಕವಾಗಿ ಅಲ್ಲ. ಭೂಮಿಯನ್ನು ಪೂಜನೀಯವಾಗಿ ನೋಡಿದ್ದು ಕೇವಲ ಆಚರಣೆಗಾಗಿ ಅಷ್ಟೇ ಅಲ್ಲ. ಅವರ ಅನುಭವ ಸತ್ಯ ಎಂದರೆ ಈ ನೆಲದ ಮೇಲೆ ಬಿತ್ತಿದ ಬೀಜ ಮೊಳೆತು ಸಸಿಯಾಗಿ ಬೆಳೆದು ಫಲಕೊಟ್ಟು, ಅದೇ ಫಲ ಜೀವ ಜಗತ್ತಿನ ಪೋಷಣೆಗೈಯುವ ಶಕ್ತಿಯಾಗಿರುವುದನ್ನು ಕಂಡು ಇಂತಹ ಭೂಮಿಯನ್ನು ತಾಯಿ ಎಂದರು, ದೇವಿ ಎಂದರು. ಈ ಗ್ರಹಿಕೆಯೇ ಅವರ ಲೋಕದೃಷ್ಟಿಗೆ ನಿದರ್ಶನವೂ ಹೌದು. ‘ಎಳ್ಳು ಜೀರಿಗೆ ಬೆಳೆಯೋಳ ಭೂಮಿತಾಯಿ ಎದ್ದೊಂದು ಗಳಿಗೆ ನೆನೆದೇನಾ’ ಎನ್ನುವುದು ವರ್ಣಣೆಯಲ್ಲ, ಅದು ಹೃದಯದ ಪ್ರಾರ್ಥನೆ. ಭೂಮಿಯೇ ತಮ್ಮ ಬದುಕಿನ ಸರ್ವಸ್ವ. ಆಕೆಯಿಂದಲೇ ಈ ಬದುಕು. ಆಕೆ ಮುನಿದರೆ ಬದುಕು ಲಯವಾಗುತ್ತದೆ ಎಂಬ ಕಾರಣದಿಂದಲೇ ಆ ಭೂಮಿತಾಯಿಗೆ ಮೊದಲ ನಮಸ್ಕಾರ ಎಂದರು. ಇದು ನಮ್ಮ ಜನಪದರ ಗಾಯತ್ರಿ ಮಂತ್ರವೇ ಸರಿ.

ಭೂಮಿಯನ್ನು ಕೇಂದ್ರವಾಗಿರಿಸಿಕೊಂಡು ಬದುಕಿನ ಆಧಾರವಾದ ಸಕಲ ಸಂಗತಿಗಳನ್ನೂ ಕಟ್ಟುತ್ತಾ ಹೋಗುತ್ತಾರೆ. ಫಲ, ಮಳೆ, ಬಿಸಿಲು, ನೀರು ಇವೆಲ್ಲದರ ನಂಟು ಈ ಭೂಮಿಯೊಂದಿಗೆ ಇದೆ. ಹಾಗಾಗಿ ಒಳ್ಳೆಯ ಫಲ, ಒಳ್ಳೆಯ ಮಳೆ, ಒಳ್ಳೆಯ ಬಿಸಿಲು, ಒಳ್ಳೆಯ ನೀರು ಇವೆಲ್ಲವೂ ಈ ಭೂಮಿ ತಾಯಿಯ ವರ. ಭೂಮಿಯನ್ನು ಕೇಂದ್ರವಾಗಿರಿಸಿಕೊಂಡು ಮಳೆಯನ್ನು ನಿರೀಕ್ಞಿಸುತ್ತಾ, ಎಷ್ಟು ಮಳೆಯಾಗಬಹುದೆಮದು ಗುಣಿಸಿದರು, ನೀರಿನ ಲಭ್ಯತೆಯ ಮಾಪನ ಮಾಡಿದರು, ಒರತೆಯನ್ನು ಪತ್ತೆ ಹಚ್ಚಿದರು.

ಮಾತು ಮಾತಿನಲ್ಲಿ ಭೂಮಿ ತಾಳ್ಮೆಯ ಸಂಕೇತವಾಗಿ ಕಾಣಿಸುತ್ತದೆ, ಪೂಜ್ಯತೆಯ ಭಾವ ಕಾಣುತ್ತದೆ. ಈ ಭಾವನೆಯ ಕಾರಣದಿಂದಲೇ ಆಕೆನ್ನು ಶುದ್ದೀಯಾಗಿ ಕಾಪಾಡಿಕೊಳ್ಳುವ ಸಂಕಲ್ಪ ಅವರ ಎಲ್ಲಾ ಆಚರಣೆಗಳಲ್ಲಿ ಕಾಣಿಸಿಕೊಳ್ಳುತ್ತದೆ. ಅಕ್ಷಯವಾದ ಈ ನೆಲದ ಒಡಲು ಬರಿದಾಗುವುದಿಲ್ಲ ಎನ್ನುವುದು ಅವರ ಭಾವನೆಯಾದರೂ, ಎಂದೂ ಮಿತಿಗಿಂತ ಹೆಚ್ಚು ನೆಲದ ಒಡಲು ಬಗೆಯುವ ಆಸೆಯೇ ಅವರಿಗೆ ಹುಟ್ಟಲಿಲ್ಲ. ಆ ತಾಯಿಗೆ ಗುಡಿಯನ್ನು ಕಟ್ಟದೇ ದೇವಿಯ ಸ್ವರೂಪದಲ್ಲಿ ಆರಾಧಿಸುತ್ತಾ ಬಂದರು. ಆರಾಧನೆ ಎಂದರೆ ನಿತ್ಯದ ಕರ್ಮಗಳಲ್ಲಿ ತೋರಿದ ಭಾವವೇ ಹೊರತು ದೂಪ ದೀಪದ್ದಲ್ಲ. ಭೂಮಿಯ ಋಣವನ್ನು ತೀರಿಸಲಾಗದು ಎನ್ನುವ ಋಣ ಭಾರದ ಭಾವದಿಂದ ಮತ್ತೆ ಬದುಕಿನ ಅನಿವಾರ್ಯತೆಗಾಗಿ ಈ ನೆಲದ ಮಡಿಲನ್ನು ನೇಗಿಲ ಮೊನೆಯಿಂದ ಸೀಳುತ್ತಿರುವುದಕ್ಕಾಗಿ ನೊಂದುಕೊಂಡು, ಆ ತಾಯಿಯನ್ನು ಕೈಯಿಂದ ಸ್ಪರ್ಶಿಸಿ, ಹಣೆ ಮುಟ್ಟಿ ನಮಸ್ಕರಿಸಿ, ನಮ್ಮ ತಪ್ಪನ್ನು ಮನ್ನಿಸುವಂತೆ ಪ್ರಾರ್ಥನೆ ಮಾಡುವ ಕ್ರಿಯೆಯು ಕೃಷಿಯ ಭಾಗವೇ ಆಗಿತ್ತು. ಆಕೆ ಕ್ಷಮಿಸಬಲ್ಲಳು. ಯಾಕೆಂದರೆ ಆಕೆ ಕ್ಷಮಯಾ ದರಿತ್ರಿ !, ಸಹನಾ ಮೂರ್ತಿ. ಲಂಕೇಶರು ತಮ್ಮ ಕವಿತೆ ಅವ್ವದಲ್ಲಿ ನೆನಪಿಸಿಕೊಂಡದ್ದು ‘ ಸುಟ್ಟಷ್ಟು ಕಸುವು , ನೊಂದಷ್ಟು ಹೂ ಹಣ್ಣು’ ಎಂದು ಕೇವಲ ತಾಯಿಯನ್ನಷ್ಟೇ ಅಲ್ಲ. ಅದು ಭೂಮಿಯ ಗುಣವೂ ಹೌದು.

ಜನಪದರ ಜೀವನದೃಷ್ಟಿ ಭೂಮಿಗೆ ಭಾರವಾಗದಂತೆ ಬದುಕಬೇಕು ಎನ್ನುವುದಾಗಿತ್ತು. ಭೂಮಿಗೇ ಭಾರವಾಗುವುದೆಂದರೆ ಮನುಷ್ಯನ ಪಾಪದ ಭಾರ ಹೆಚ್ಚಾಗುವುದು. ಹಾಗೇ ಪಾಪದ ಭಾರ ಹೆಚ್ಚಾದಾಗ ಭೂಮಿತಾಯಿ ತಾನೇ ಈ ಭಾರವನ್ನು ನಿವಾರಿಸಿಕೊಳ್ಳುತ್ತಾಳೆ ಎನ್ನುವ ನಂಬಿಕೆಯೂ ಇತ್ತು. ಮಣ್ಣಿಗೆ ಭಾರವಾಗದಂತೆ ಬದುಕುವ ಒಂದು ಆಶಯ ತಲೆಮಾರು ತಲೆಮಾರುಗಳಿಗೆ ವರ್ಗಾವಣೆಯಾಗುತ್ತಿತ್ತು. ಬಹುಶಃ ಪಾಪಿಗಳ ಅಂತ್ಯವಾದಾಗ ಜನ ಭೂಮಿತಾಯಿ ತನ್ನ ಮೈಭಾರ ಇಳಿಸಿಕೊಂಡಳೆನ್ನುವ ಉದ್ಘಾರ ಸಹಜವಾಗಿತ್ತು. ನಮ್ಮ ಕೃಷಿ ಸಂಬಂಧಿತವಾದ ಎಲ್ಲಾ ಆಚರಣೆಗಳೂ, ಕುಣಿತಗಳೂ ಭೂಮಿ ತಾಯಿಯನ್ನು ನಮಿಸುವ , ಆಕೆಯನ್ನು ಸಂತೃಪ್ತಗೊಳಿಸುವ ಆಚರಣೆಗಳೇ ಆಗಿತ್ತು. ಅಂತಹ ಆಚರಣೆಗಳಲ್ಲಿ ಭೂಮಿಯನ್ನು ಗೌರವದಿಂದ ನಮಿಸಲಾಗುತ್ತಿತ್ತು. ತಮ್ಮ ಬದುಕಿನ ಉನ್ನತಿ, ಶ್ರೇಯಸ್ಸಿಗೆ ಈ ಭೂಮಿ ತಾಯಿಯೇ ಕಾರಣ ಎಂಬ ಕೃತಜ್ಞತಾ ಭಾವನೆಯನ್ನು ಪ್ರಕಟಿಸುತ್ತಾರೆ. ಎಲ್ಲಿಯವರೆಗೆ ಭೂಮಿ ತಮ್ಮನ್ನು ಪೋಷಿಸುವ ತಾಯಿ ಎಂಬ ಭಾವನೆ ಬಲವಾಗಿತ್ತೋ ಅಲ್ಲಿಯವರೆಗೆ ಈ ತಾಯಿಯನ್ನು ಪಾಲಿಸುವ, ಆಕೆಯ ಫಲವಂತಿಕೆಯ ಶಕ್ತಿ ಕಡಿಮೆಯಾಗದಂತೆ ನೋಡುವ ಹೊಣೆಗಾರಿಕೆಯನ್ನೂ ಹೊತ್ತಿದ್ದರು. ಭೂಮಿಯನ್ನು ಯಾಂತ್ರಿಕ ಭಾವದಿಂದ ನೋಡಲಾರಂಭಿಸಿದ ದಿನವೇ ಪತನಕ್ಕೆ ನಾಂದಿಹಾಡಿದಂತಾಯಿತು.

ಕೃಷಿಯನ್ನು ಬದುಕಿನ ಆಧಾರವಾಗಿರಿಕೊಂಡ ಕಾಲಕ್ಕೆ ರೈತ ಮಣ್ಣನ್ನು ಹದಮಾಡುವ ಕ್ರಿಯೆಯಲ್ಲಿ ಆತನ ಬದುಕೂ ಹದಗೊಳ್ಳುತ್ತಿತ್ತು. ಕೃಷಿ ಮಾತ್ರವಲ್ಲಾ ಅದರ ಸುತ್ತಾ ಬೆಸೆದ ಎಲ್ಲಾ ವೃತ್ತಿಗಳಲ್ಲಿ ಮಣ್ಣಿನ ನಂಟಿತ್ತು. ಈ ಭೂಮಿ ಹೆಣ್ಣು ಎಂದು ಭಾವಿಸಿದ್ದ ರೈತರು ತಮ್ಮೆಲ್ಲಾ ಆಚರಣೆಗಳಲ್ಲಿ ಭೂಮಿಯನ್ನು ಹೆಣ್ಣಿನಂತೆ ಸಿಂಗರಿಸುವ, ಆ ಮೂಲಕ ಲೋಕ ಬದುಕಿನ ಹೆಣ್ಣಿಗೆ ಯಾವೆಲ್ಲ ಕ್ರಿಯೆಗಳು ಸಂಭ್ರಮವನ್ನು ಉಂಟು ಮಾಡುತ್ತಿತ್ತೋ ಅಂತಹ ಎಲ್ಲಾ ಆಚರಣೆಗಳನ್ನು ಭೂಮಿ ತಾಯಿಗೂ ಮಾಡುತ್ತಿದ್ದರು. ಈ ಆಚರಣೆಯ ಭಾಗವೇ ಆಕೆಗೆ ಮುಟ್ಟಾದ ಮೂರು ದಿನಗಳ ಮೈಲಿಗೆ ಕಳೆಯುವ ‘ ಕೆಡ್ಡಸ’ ಹಬ್ಬ ಆಚರಿಸುವ, ಭೂಮಿ ತಾಯಿಯು ಗರ್ಭಿಣಿಯಾದಳೆಂದು ‘ ಸಿಮಂತ’ದ ಆಚರಣೆ ಮಾಡುವ ವಿಧಿಗಳನ್ನು ಬೇರೆ ಬೇರೆ ಭಾಗದ ರೈತ ಸಮುದಾಯಗಳಲ್ಲಿ ಇಂದಿಗೂ ಕಾಣಬಹುದು. ಸೀಗಿ ಹುಣ್ಣಿಮೆ, ಭೂಮಿ ಹುಣ್ಣಿಮೆ, ಕೊಂತಿ ಹಬ್ಬ, ಕೆಡ್ಡಸ ಮೊದಲಾದ ಆಚರಣೆಗಳು ಭೂಮಿತಾಯಿಗಾಗಿಯೇ ಮಾಡುತ್ತಾರೆ. ಈ ಎಲ್ಲಾ ಆಚರಣೆಗಳಲ್ಲಿ ಭೂಮಿಯ ಜತೆಗೆ ಕೃಷಿ ಸಲಕರಣೆಗಳಾದ ನೊಗ, ನೇಗಿಲು, ಎತ್ತು, ಪೈರು ಹೀಗೆ ಎಲ್ಲವೂ ಪೂಜೆಗೊಳ್ಳುತ್ತದೆ. ಆ ಮೂಲಕ ಈ ಎಲ್ಲವೂ ಕೂಡ ಪೂಜನೀಯವೇ ಎನ್ನುವ ಭಾವನೆಯನ್ನು ಪಸರಿಸುತ್ತಾ ಬಂದಿದ್ದರು. ಭೂಮಿಯನ್ನು ಮೊದಲ ಬಾರಿಗೆ ಉಳುಮೆ ಮಾಡುವ ದಿನದಿಂದ ತೊಡಗಿ ತೆನೆ ಕೊಯ್ಲುಮಾಡಿ, ರಾಶಿ ಹಾಕುವವರೆಗೂ ಭೂಮಿಯನ್ನು ಸ್ಮರಿಸುವ ಹಬ್ಬಗಳೇ ನಮ್ಮ ಪರಂಪರೆಯಲ್ಲಿ ತುಂಬಿಕೊಂಡಿದೆ. ದುರಂತವೆಂದರೆ ಕಾಲ ಕ್ರಮೇಣ ಈ ಎಲ್ಲಾ ಆಚರಣೆಗಳ ಹಿಂದಿನ ಭಾವನೆಗಳು ನಿಧಾನವಾಗಿ ಮರೆಯಾಗುತ್ತಾ ಕೇವಲ ಯಾಂತ್ರಿಕ ಆಚರಣೆಗಳು ಉಳಿದಿದೆ . ಪರಿಣಾಮವಾಗಿ ಭೂಮಿಯ ಒಡಲು ವಿಷದಿಂದ ತುಂಬುತ್ತಿದೆ. ತಾಯಿ ಎಂಬ ಭಾವ ಮರೆಯಾಗುತ್ತಾ ಆಚರಣೆಗಳು ಮಾತ್ರ ಉಳಿದರೆ ಯಾವ ಪ್ರಯೋಜನ ತಾನೇ ಇದೆ? ಹೀಗಾಗಿ ಇಂದಿನ ತುರ್ತು ಎಂದರೆ ಕೃಷಿಕರೂ ಸೇರಿದಂತೆ ಕೃಷಿಯನ್ನೇ ಬೇರೆ ಬೇರೆ ರೂಪದಲ್ಲಿ ಅವಲಂಭಿಸಿರುವ ಜನರ ಮನಸಿನಲ್ಲಿ ಈ ಭೂಮಿ ನಮ್ಮ ತಾಯಿ ಎಂಬ ಭಾವನೆಯನ್ನು ಬಲವಾಗಿಸಿ, ಆಕೆಯ ಒಡಲಿಗೆ ವಿಷ ತುಂಬದಂತೆ, ಆಕೆಯನ್ನು ಮಲೀನ ಗೊಳಿಸದಂತೆ ಎಚ್ಚರವನ್ನು ಮೂಡಿಸಬೇಕಾಗಿದೆ.

ವಿಶ್ವದ ಎಲ್ಲಾ ದೇಶಗಳೂ ಇಂದು ಈ ಸವಾಲನ್ನು ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯರು ಭೂಮಿಯನ್ನು ಕುರಿತಾಗಿ ಹೊಂದಿದ್ದ ಪೂಜ್ಯ ಭಾವವು ಪರಿಹಾರದ ದಾರಿಯಾಗಬಹುದು. ನಮ್ಮ ರೈತರನ್ನು ರಾಸಾಯನಿಕ ಮುಕ್ತವಾಗಿ ಕೃಷಿ ಚಟುವಟಿಕೆಗಳನ್ನು ನಡೆಸಲು ಪೂರಕವಾದ ವಾತಾವರಣವನ್ನು ಮೂಡಿಸಬೇಕಾಗಿದೆ. ಸಮುದಾಯಗಳು ಮತ್ತು ಸರ್ಕಾರ ಎರಡೂ ಕೂಡಿಕೊಂಡಾಗ ಮಾತ್ರ ಇದು ಸಾಧ್ಯವಾಗುತ್ತದೆ. ಈಗಾಗಲೇ ನಾವು ಹಿಂತಿರುಗಿ ನೋಡಲಾರದಷ್ಟು ನಾವು ಮುಂದೆ ಹೋಗಿದ್ದರೂ ಮರಳಿ ಬಾರದಿದ್ದರೆ ಮನುಕುಲ ಮಾತ್ರವಲ್ಲ ಸಮಸ್ತ ಜೀವ ಜಗತ್ತಿಗೂ ಆಪಾಯವಿದೆ. ನಮ್ಮ ನಂಬಿಕೆಯ ಸರ್ವೋಚ್ಛ ಪ್ರಮಾಣವಾಗಿ ಭೂಮಿ ತಾಯಿಯ ಮೇಲೆ ಆಣೆ ಮಾಡುತ್ತಿದ್ದೆವು. ಅಂತಹ ಭೂಮಿಯನ್ನು ನಾವು ತುಚ್ಛವಾಗಿ ಕಂಡರೆ ಈ ತಾಯಿ ನಮ್ಮನ್ನು ಕ್ಷಮಿಸಬಹುದೇ? ಅಥವಾ ಪಾಪದ ಭಾರ ಹೆಚ್ಚಾದಾಗ ಭೂಮಿ ತಾಯಿ ಬಾಯ್ದೆರೆದು ಎಲ್ಲವನ್ನೂ ಆಪೋ಼ಷಣ ತೆಗೆದುಕೊಳ್ಳುವವರೆಗೂ ಮೌನವಾಗಿರುವುದೇ? ಇಂದು ನಾವಿದನ್ನು ತೀರ್ಮಾನಿಸಬೇಕಾದ ಅಗತ್ಯವಿದೆ.

ಕೃಪೆ: ವಿಜಯಕರ್ನಾಟಕ

ಡಾ. ರೋಹಿಣಾಕ್ಷ ಶಿರ್ಲಾಲು

ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ

Mon Apr 19 , 2021
ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನಗಲಿದ್ದಾರೆ. ಆರೆಸ್ಸೆಸ್ ಸರಕಾರ್ಯವಾಹರ ಶ್ರದ್ಧಾಂಜಲಿ ಸಂದೇಶ ॐ ಶಾಂತಿಃಪರಮ ಗತಿ ಪಡೆದ ಮಹಾನ್ ಜೀವಿ ಗೆ ಅಂತಿಮ ನಮನಗಳು.ಪೂರ್ಣಬದುಕು, ಸಾರ್ಥಕ ಬದುಕು, ಆನಂದದ ಬದುಕು ಇವುಗಳಿಗೆ ಶ್ರೇಷ್ಠ ಉದಾಹರಣೆಯಾಗಿದ್ದ ಪ್ರೊ। ಜಿ.ವಿ. ಕನ್ನಡ ನಾಡು-ನುಡಿಗಳ ಸಾಧಕ, ಸೇವಕ, ಪೋಷಕ, ರಕ್ಷಕನಾಗಿ ಜೀವತೇಯ್ದರು.ಆದರ್ಶ ಶಿಕ್ಷಕನಾಗಿ, ಹೆಮ್ಮೆಯ ರಾಷ್ಟ್ರಕನಾಗಿ ಸಂಸ್ಕೃತಿಯ ದೀಪಸ್ತಂಭವಾಗಿದ್ದ ಅವರು ಚಿರಂ’ಜೀವಿ’. ಇಹಯಾತ್ರೆ ಮುಗಿಸಿದ ಜಿವಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳು. –ದತ್ತಾತ್ರೇಯ ಹೊಸಬಾಳೆ,ಸರಕಾರ್ಯವಾಹ, ಆರೆಸ್ಸೆಸ್. email facebook […]