’ಮಠ ಪರಂಪರೆ’ಯ ಆದರ್ಶ ಕೊಂಡಿ ಶ್ರೀ ಶಿವಕುಮಾರಸ್ವಾಮಿಜೀ

ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆ ಏರಿದೆ

ಕಾಯಕವೆ ಕೈಲಾಸ ಎನ್ನುವ ಮಾತು ಕೃತಿಯೊಳು ಮೂಡಿದೆ

ಕಾವಿಯುಡುಗೆಯನುಟ್ಟು ನಭವೇ ಕಿರಣಹಸ್ತವ ಚಾಚಿದೆ

ಎಲ್ಲ ನನ್ನವರೆನುವ ಭಾವದ ಕರುಣೆಯೇ ಕಣ್ತೆರೆದಿದೆ

– ಕವಿ ಜಿ.ಎಸ್. ಶಿವರುದ್ರಪ್ಪ

ಹಿಂದುತ್ವದ ಪರಮಗುಣವಾದ ಸರ್ವಭೂತಗಳಲ್ಲೂ ತನ್ನನ್ನೇ ಕಾಣುವ, ಎಲ್ಲರೂ ತನ್ನವರೇ ಎನ್ನುವ ಐಕ್ಯಭಾವವೇ ಮೂರ್ತಿವೆತ್ತಂತೆ ಇದ್ದು ಮೆರೆದ ಸಿದ್ಧಗಂಗೆಯ ಪೀಠಾಧ್ಯಕ್ಷರಾದ ಶಿವೈಕ್ಯ ಪರಮಪೂಜ್ಯ ಶ್ರೀಶ್ರೀ ಶಿವಕುಮಾರ ಸ್ವಾಮಿಜೀ (ಏಪ್ರಿಲ್ 1, 1908 – ಜನವರಿ 21, 2019) ಅವರ ಜನ್ಮ ದಿನ ಇಂದು. ಅಸಂಖ್ಯಾತ ಭಕ್ತರ ಪಾಲಿಗೆ ’ನಡೆದಾಡುವ ದೇವರು’ ಆಗಿದ್ದವರು ಅವರು. ಲಕ್ಷಾಂತರ ಮಂದಿಗೆ ಆಶ್ರಯ-ಅಕ್ಷರ-ಅಶನವನ್ನಿತ್ತು ಸುಖೀ ಬದುಕನ್ನು ಕಟ್ಟಿಕೊಳ್ಳಲು ನೆರವಾದವರು ಅವರು.

ಮಾರ್ಚ್ ೩, ೧೯೩೦ರಂದು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದಲ್ಲಿಂದ ಆರಂಭವಾದ ಅವರ ಸಂನ್ಯಾಸಜೀವನ ಕಠಿಣತಮ ಅಧ್ಯಾತ್ಮಸಾಧನೆಗಳಿಗಷ್ಟೇ ಸೀಮಿತವಾಗದೆ ಮಠದ ಅನುಯಾಯಿಗಳನ್ನೂ ಮೀರಿ ಸಮಾಜಮುಖಿಯಾಗಿ ಪ್ರವಹಿಸಿದ್ದು ನಾಡಿನ ಭಾಗ್ಯವೇ ಸರಿ. ಶ್ರೀ ಸ್ವಾಮಿಜೀ ಇಹದ ಸಾಮಾಜಿಕ ನೆಲೆಯೊಳಗೇ ನಿಂತು ಶಿವಯೋಗವನ್ನು ಸಾಧಿಸುತ್ತ ಶಿವಾರ್ಪಿತ ಮನೋಭಾವದಿಂದ ನಡೆಸಿದ ಸಮಾಜಸೇವೆಯ ಕಾಯಕಗಳಿಂದಾಗಿಯೆ ಭಕ್ತಜನರ ಹೃದಯದಲ್ಲಿ ಅಮರರಾದವರು.

ಶ್ರೀಶ್ರೀ ಶಿವಕುಮಾರ ಸ್ವಾಮಿಜೀ ನಮ್ಮ ನಡುವೆಯೇ ಇದ್ದು ಹೋದ ಮಹಾನ್ ಕರ್ಮಯೋಗಿ. ಧರ್ಮ- ಕರ್ಮಗಳನ್ನು ಅರ್ಥಪೂರ್ಣವಾಗಿ ಸಮನ್ವಯಗೊಳಿಸಿದ ವಿರಳಾತಿವಿರಳರಲ್ಲಿ ಒಬ್ಬರು. ಸುಸಂಸ್ಕೃತ ಹಾಗೂ ಆರೋಗ್ಯಕರ ಸಮಾಜವನ್ನು ರೂಪಿಸುವುದಕ್ಕಾಗಿ ಅವರು ಕೈಗೊಂಡ ಕಾರ್ಯಕ್ರಮಗಳು ಸದಾ ಸರ್ವತ್ರ ಅನುಕರಣೀಯವಾದವು.

ದಾನಗುಣ ಬಿತ್ತಿ ಬೆಳೆಸಿದ ಕಾಯಕಯೋಗಿ

ಹಗಲು-ರಾತ್ರಿಯೆನ್ನದೆ ಬಂದುಹೋಗುವ ಭಕ್ತಾದಿಗಳಿಗೆ ಹಾಗೂ ಮಠಾಶ್ರಿತ ವಿದ್ಯಾರ್ಥಿಗಳಿಗೆ ’ಒಲೆಯಾರದಂತೆ’ ನಿರಂತರ ಊಟದ ವ್ಯವಸ್ಥೆ ಮಾಡುವುದೆಂದರೆ ಮಹದಾಶ್ಚರ್ಯದ ಸಂಗತಿ. ಇದು ಸಾಧ್ಯವಾಗುವಂತೆ ಸಾರ್ವಜನಿಕರನ್ನು ಪ್ರೇರೇಪಿಸಿ ಅವರಲ್ಲಿ ದಾನಗುಣವನ್ನು ಬಿತ್ತಿ ಬೆಳೆಸಿದ ಕಾಯಕಯೋಗಿ – ಶ್ರೀಶ್ರೀ ಶಿವಕುಮಾರಸ್ವಾಮಿಜೀ. ’ದುಡಿಯಬೇಕು, ದುಡಿದುದನ್ನು ಹಂಚಿಕೊಂಡು ತಿನ್ನಬೇಕು’ – ಎಂಬುದು ಸ್ವಾಮಿಜೀಯವರು ತೋರಿದ ಆದರ್ಶ. ಸ್ವಾಮಿಜೀ ನಡೆಸುವ ನಿತ್ಯದಾಸೋಹ ಮತ್ತು ಶಿಕ್ಷಣಕಾರ್ಯಗಳನ್ನು ಕಂಡು ಕೊಂಡಾಡುವ ಜನ ತಾವಾಗಿಯೇ ಮುಂದೆಬಂದು ತಮ್ಮ ಪಾಲಿನ ಕಾಣಿಕೆಗಳನ್ನು ನೀಡುತ್ತಾರೆ. ಗಾಡಿಗಾಡಿಗಳಲ್ಲಿ ಅಕ್ಕಿ ರಾಗಿ ಮುಂತಾಗಿ ದವಸ-ಧಾನ್ಯಗಳನ್ನೂ, ಕಾಯಿ-ಪಲ್ಲೆಗಳನ್ನೂ ತಂದು ಶ್ರೀಮಠದ ಉಗ್ರಾಣವನ್ನು ತುಂಬಿ ಅಕ್ಷಯವನ್ನಾಗಿಸುತ್ತಾರೆ.

ಶೈಕ್ಷಣಿಕ ಕ್ರಾಂತಿಪುರುಷ

ಹೊಟ್ಟೆಯ ಹಸಿವಿಗೆ ಅನ್ನದಾಸೋಹವಾದರೆ, ಬೌದ್ಧಿಕ ಹಸಿವಿಗೆ ಹಾಗೂ ಸುಸಂಸ್ಕೃತ ಸಮಾಜದ ನಿರ್ಮಾಣಕ್ಕಾಗಿ ಸ್ವಾಮಿಜೀ ಕೈಗೊಂಡಿದ್ದು ಅಕ್ಷರದಾಸೋಹ. ವ್ಯಕ್ತಿತ್ವವನ್ನು ಸಶಕ್ತಗೊಳಿಸುವಂತಹ ವಿದ್ಯೆಯನ್ನು ಸಮೂಹಕ್ಕೆ ದೊರಕಿಸಿಕೊಡುವುದಕ್ಕಾಗಿ ಅವರು ತಮ್ಮ ಜೀವನದುದ್ದಕ್ಕೂ ಶ್ರಮಿಸಿದರು. ಸ್ವಾಮಿಜೀ ಶ್ರೀಮಠದ ಉತ್ತರಾಧಿಕಾರಿಯಾಗಿ ಆಯ್ಕೆಯಾದ ನಂತರ ಅದುವರೆಗೆ ಶ್ರೀಮಠದ ವತಿಯಿಂದ ನಡೆದುಕೊಂಡು ಬರುತ್ತಿದ್ದ ಸಂಸ್ಕೃತ ಪಾಠಶಾಲೆಯು ಕಾಲೇಜಾಗಿ ಪರಿವರ್ತಿತವಾಯಿತು. ಸದ್ಯಃ ಶ್ರೀಮಠದ ಶಿಕ್ಷಣಸಾಮ್ರಾಜ್ಯದ ವ್ಯಾಪ್ತಿ ಎ? ವಿಶಾಲವೆಂದರೆ – ಎಲ್‌ಕೆಜಿಯಿಂದ ಎಂ.ಟೆಕ್ ವರೆಗಿನ ವಿದ್ಯಾಭ್ಯಾಸ ನೀಡುವ ಮಹಾವಿಶ್ವವಿದ್ಯಾಲಯದ ವರೆಗೆ. ಈ ವ್ಯಾಪ್ತಿಯು ಕೇವಲ ತುಮಕೂರು ಜಿಲ್ಲೆಗಷ್ಟೇ ಸೀಮಿತವಾದದ್ದಲ್ಲ; ನಾಡಿನಾದ್ಯಂತ ವ್ಯಾಪಿಸಿದೆ. ಶ್ರೀಮಠದ ೧೨೫ಕ್ಕೂ ಹೆಚ್ಚು ಶಿಕ್ಷಣಸಂಸ್ಥೆಗಳಲ್ಲಿ ಜಾತಿ ಮತ ಧರ್ಮ ಭೇದವಿಲ್ಲದೆ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಜ್ಞಾನದಾಹವನ್ನು ತೀರಿಸಿಕೊಳ್ಳುತ್ತಿದ್ದಾರೆ. ಅಧ್ಯಾತ್ಮ, ವಿಜ್ಞಾನ, ಸಾಹಿತ್ಯ, ಸಂಸ್ಕೃತಿ, ಕಲೆಗಳನ್ನು ಪಸರಿಸುವುದರಲ್ಲಿ ಶ್ರೀಮಠದ ವಿದ್ಯಾಸಂಸ್ಥೆಗಳ ಕೊಡುಗೆ ಗಣನೀಯವಾದದ್ದು.

ನಾಡಿನ ಎಲ್ಲ ಭಾಗಗಳ ಎಲ್ಲ ವರ್ಗಗಳ ಮಕ್ಕಳು ಶ್ರೀಮಠದ ಆಶ್ರಯದಲ್ಲಿ ವಿದ್ಯೆ ಹಾಗೂ ಅನ್ನವನ್ನು ಕಂಡುಕೊಂಡಿದ್ದಾರೆ; ತಮ್ಮ ಬದುಕಿನ ಬುತ್ತಿಯನ್ನು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಸಂದರ್ಭದಲ್ಲಿ ಸರ್ಕಾರೇತರ ಸಂಸ್ಥೆಯೊಂದು ಇ? ಬೃಹತ್‌ಪ್ರಮಾಣದಲ್ಲಿ ಉನ್ನತಮಟ್ಟದ ಶಿಕ್ಷಣವನ್ನು ಅತ್ಯಂತ ವ್ಯವಸ್ಥಿತವಾಗಿ ನೀಡುತ್ತಿರುವುದು ಅತಿ ವಿರಳ ಉದಾಹರಣೆಯೇ ಸರಿ.

ರೈತಹಿತಾಕಾಂಕ್ಷಿ

ಶ್ರೀಶ್ರೀ ಶಿವಕುಮಾರಸ್ವಾಮಿಜೀ ರೈತಹಿತಾಕಾಂಕ್ಷಿಗಳಾಗಿದ್ದವರು. ಶ್ರೀಮಠದ ಬಾಗಿಲನ್ನು ಅವರು ಯಾವತ್ತೂ ರೈತಾಪಿಜನರಿಗೆ ಮುಕ್ತವಾಗಿ ತೆರೆದಿಟ್ಟಿದ್ದರು. ಸಿದ್ಧಗಂಗೆಯ ವರ್ಷಾವಧಿ ಜಾತ್ರೆಯಲ್ಲಿ ನಡೆಯುವ ’ಕೃಷಿ ಮತ್ತು ಕೈಗಾರಿಕಾ ವಸ್ತುಪ್ರದರ್ಶನ’ ಅನ್ನದಾತನಿಗೆ ಸಮಸಾಮಯಿಕ ಬೇಸಾಯಕ್ರಮಗಳನ್ನು ಪರಿಚಯಿಸಿಕೊಳ್ಳಲು ನೆರವಾಗುತ್ತಿತ್ತು. ಜಾತ್ರೆಗೆ ಮುನ್ನ ರಾಜ್ಯದ ಎಲ್ಲೆಡೆಯಿಂದ ಬಂದು ಸೇರುವ ದನಗಳ ನೆರವಿಯು ಕೂಡ ಕೃಷಿಕಾರ್ಯಗಳಿಗೆ ಪೋಷಕವಾದದ್ದು. ಒಟ್ಟಾರೆಯಾಗಿ ಸಿದ್ಧಗಂಗಾ ಜಾತ್ರೆಯನ್ನು ಕೇವಲ ಜನಜಂಗುಲಿಯ ಜಾತ್ರೆಯಾಗದೆ ನಿಜಾರ್ಥದಲ್ಲಿ ’ರೈತರ ಜಾತ್ರೆ’ಯಾಗುವಂತೆ ಪರಿವರ್ತಿಸುವುದರಲ್ಲಿ ಸ್ವಾಮಿಜೀ ಯಶಸ್ವಿಯಾಗಿದ್ದಾರೆ.

ವಿಭೂತಿಸದೃಶರಾಗಿ ಶ್ರೀಶ್ರೀ ಶಿವಕುಮಾರ ಸ್ವಾಮಿಜೀ ನಡೆಸಿದ್ದು 111 ವಸಂತಗಳನ್ನು ಕಂಡ ಬೆರಗುಹುಟ್ಟಿಸುವ ಜೀವನ. ಅದರಲ್ಲಿ ಸಂನ್ಯಾಸಜೀವನ 88 ವರ್ಷಗಳು; ಮಠಾಧ್ಯಕ್ಷರಾಗಿ ಕಾಯಕ ನಿರ್ವಹಿಸಿದ್ದು 77 ವರ್ಷಗಳು. ಸ್ವಾಮಿಜೀಯವರ ಬದುಕು ಸಂನ್ಯಾಸಧರ್ಮವನ್ನು ಅತ್ಯಲ್ಪವೂ ಲೋಪಬಾರದಂತೆ ಕಟ್ಟುನಿಟ್ಟಾಗಿ ಪಾಲಿಸುವುದರ ಜೊತೆಜೊತೆಗೆ ಅಸದೃಶ ಸಾಮಾಜಿಕ ಕಾಳಜಿಯನ್ನೂ ಹೊಂದಿತ್ತು. ಅವರ ಹೃದಯ ಮಾನವೀಯ ಮೌಲ್ಯಗಳ ರಕ್ಷಣೆ-ಪೋಷಣೆಗಳ ಕಡೆಗೆ ಸದಾ ತುಡಿಯುತ್ತಿತ್ತು.

ಶ್ರೀ ಶ್ರೀ ಶಿವಕುಮಾರಸ್ವಾಮಿಜೀ ಅನುಸರಿಸಿದ ಮೌಲ್ಯಗಳು ’ಮಠ ಪರಂಪರೆ’ಗೆ ಆದರ್ಶವಾಗಿತ್ತು. ಜನವರಿ 21, 2019ರಂದು ಅವರ ಭೌತಿಕ ನಿರ್ಗಮನದಿಂದ ಅಧ್ಯಾತ್ಮ ಹಾಗೂ ಸಮಾಜಮುಖೀ ಜೀವನದ ಮಾರ್ಗದರ್ಶಿ ಕೊಂಡಿಯೊಂದು ಕಳಚಿದಂತಾಗಿತ್ತು.

ಕೃಪೆ: ಉತ್ಥಾನ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಿದ್ದಣ್ಣಗೌಡ ಗಡಿಗುಡಾಳರ ನಿಧನಕ್ಕೆ ಆರೆಸ್ಸೆಸ್ ಸಂತಾಪ

Thu Apr 1 , 2021
ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಸಿದ್ದಣ್ಣಗೌಡ ಗಡಿಗುಡಾಳರ (92) ನಿಧನಕ್ಕೆ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕ ಶ್ರೀ ವಿ. ನಾಗರಾಜ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಅಗಲಿರುವ ಹಿರಿಯ ಚೇತನ ಶ್ರೀ ಸಿದ್ದಣ್ಣಗೌಡ ಗಡಿಗುಡಾಳರು ಕರ್ನಾಟಕ ಉತ್ತರ ಪ್ರಾಂತದಲ್ಲಿ ಸಂಘಕಾರ್ಯ ಬೆಳಸುವಲ್ಲಿಪ್ರಮುಖ ಪಾತ್ರ ವಹಿಸಿದವರು.ಅವರ ಆತ್ಮೀಯತೆ, ಕಾರ್ಯದಲ್ಲಿನ ಕಳಕಳಿಅವರ, ಮನೆಯಲ್ಲಿನ ಆತಿಥ್ಯಸದಾ ಸ್ಮರಣೀಯ.ಅವರ ಚೇತನಕ್ಕೆ ಸಂಘದ ಶ್ರದ್ಧೆಯ ನಮನಗಳು. ವಿ. ನಾಗರಾಜ್, ಕ್ಷೇತ್ರೀಯ ಸಂಘಚಾಲಕ್, ಆರೆಸೆಸ್ಸ್ ನ ಹಿರಿಯ ಸ್ವಯಂಸೇವಕರು, […]