ರಾಷ್ಟ್ರಕವಿ ಕುವೆಂಪು : ಕನ್ನಡದಲ್ಲಿ ಮೊಳಗಿದ ರಾಷ್ಟ್ರ ಧ್ವನಿ

 ರಾಷ್ಟ್ರಕವಿ ಕುವೆಂಪುಜನ್ಮದಿನದ ಸಂಭ್ರಮದಲ್ಲಿದ್ದೇವೆ . ಕುವೆಂಪು ವೈಚಾರಿಕತೆ, ದಾರ್ಶನಿಕತೆ, ಕನ್ನಡದ ಬಗೆಗಿನ ಚಿಂತನೆಗಳೆಲ್ಲವೂ ಮರು ಚಿಂತನೆಗೊಳಗಾಗುವ, ಅವರ ಚಿಂತನೆಗಳನ್ನು ವರ್ತಮಾನಕ್ಕೆ ಅನ್ವಯಿಸುವ ಕುರಿತಾದ ಮಾತುಗಳೆಲ್ಲವೂ ಕೇಳಿಬರುತ್ತದೆ. ಮತ್ತೊಂದಷ್ಟು ಜನ ಕುವೆಂಪು ಹೇಳಿಲ್ಲದ ವಿಚಾರಗಳನ್ನು ಕುವೆಂಪು ಅವರಿಗೆ ಆರೋಪಿಸುವ ಕುಬ್ಜತನವನ್ನೂ ತೋರುವವರಿದ್ದಾರೆ. ಬಹುಶಃ ಕನ್ನಡ ನಾಡಿನಲ್ಲಿ ತಪ್ಪು ವ್ಯಾಖ್ಯಾನಕ್ಕೆ, ಅಪವ್ಯಾಖ್ಯಾನಕ್ಕೆ ಒಳಗಾದವರಲ್ಲಿ ಕುವೆಂಪು ಅವರೂ ಒಬ್ಬರು. ಕನ್ನಡದ ನೆಲದಲ್ಲಿ ಕನ್ನಡದ ಗುಣಗಾನಕ್ಕೆ, ಕನ್ನಡಕ್ಕೆ ಬಂದಿರುವ ಸಂಕಟಗಳ ಕುರಿತ ಮಾತಿಗೆ ಅನ್ಯಭಾಷಾ ದ್ವೇಷದ, ಕನ್ನಡ ನಾಡಿನ ಪ್ರೀತಿಗೆ ಭಾರತವೆನ್ನುವ ಒಕ್ಕೂಟವನ್ನು ನಿಂದಿಸುವ ಚಿಂತಕರೂ ಇದ್ದಾರೆ.ಇದೇ ಸಂದರ್ಭದಲ್ಲಿ ಕನ್ನಡದ ಹೆಸರಿನಲ್ಲಿ ಒಂದಷ್ಟು ರಂಪಾಟವನ್ನೂ ಮಾಡುವವರಿದ್ದಾರೆ. ಕನ್ನಡದ ಹೆಸರಿನಲ್ಲಿ ಹಿಂದಿಯನ್ನು, ತಮಿಳನ್ನು ನಿಂದಿಸಿ ತಮ್ಮ ತೆವಲು ತೀರಿಸಿಕೊಳ್ಳುವ ಮಂದಿಯೂ ಇದ್ದಾರೆ. ಸುಮಾರು ೨೦೦೦ ವರ್ಷಗಳ ಇತಿಹಾಸವಿರುವ ಒಂದು ಭಾಷೆಯಾದ ಕನ್ನಡವನ್ನು , ಮೂಲಕ ರೂಪುಗೊಂಡ ಕರ್ನಾಟಕವನ್ನು ಗ್ರಹಿಸಬೇಕಾದುದು ಹೇಗೆ? ಸಾವಿರಾರು ಭಾಷೆಗಳಿರುವ ಭಾರತದೊಳಗೆ ಕನ್ನಡವನ್ನು, ಹತ್ತಾರು ಭಾಷಾ ವೈವಿಧ್ಯತೆಯನ್ನು ತನ್ನೊಳಗೆ ಹೊಂದಿರುವ ಕರ್ನಾಟಕವನ್ನು ನೋಡುವ ಬಗೆ ಹೇಗೆ? ಇಲ್ಲಿ ಕನ್ನಡ ಎಂದರೆ ಕನ್ನಡ ಮಾತ್ರವೇ? ಹಾಗಾದರೆ ಉಳಿದುದ್ದೆಲ್ಲವೂ ಅನ್ಯವೇ? ಅನ್ಯವೆಂದಾದರೆ ಅವುಗಳ ಜತೆಗೆ ನಾವು ಸಂಘರ್ಷವನ್ನು ಮಾಡಬೇಕಾಗಿದೆಯೋ? ಅಥವಾ ಸಮನ್ವಯದ ಬದುಕಿಗೆ ದಾರಿಗಳಿವೆಯೇ? ಕುರಿತು ನಡೆದ ಚಿಂತನೆಗಳನ್ನು ಮೆಲುಕು ಹಾಕಿಕೊಳ್ಳುವುದು ಸದ್ಯದ ಅಗತ್ಯವೂ ಹೌದು. ಕನ್ನಡ ಭಾಷೆಯ ಕುರಿತಾದ ಚರ್ಚೆ, ಚಿಂತನೆಗಳು ಪರಭಾಷೆಯ ನಿಂದನೆ, ಆಕ್ರಮಣಗಳಿಂದಲೇ ನಡೆಯಬೇಕಾಗಿಲ್ಲ. ಹಾಗೇ ನೋಡಿದರೆ ಭಾರತದ ಸಂದರ್ಭದಲ್ಲಿ ಪರಭಾಷೆ ಎನ್ನುವ ಚರ್ಚೆಯೇ ಸರಿಯಾದುದಲ್ಲ. ಯಾಕೆಂದರೆ ಇಲ್ಲಿ ಒಂದು ಭಾರತೀಯ ಭಾಷೆ ಇನ್ನೊಂದು ಭಾರತೀಯ ಭಾಷೆಗೆ ಅನ್ಯವಲ್ಲ. ಅವುಗಳ ನಡುವೆ ಸುದೀರ್ಘಕಾಲದ ಕೊಡುಕೊಳ್ಳುವಿಕೆ ನಡೆದುಕೊಂಡುಬಂದಿದೆ. ಹಾಗಾಗಿ ಇದನ್ನು ಸಹಭಾಷೆ ಎನ್ನಬಹುದೇನೋ? ಸಹಭಾಷೆಗಳಿಂದಲೇ ಭಾರತ ವೈವಿಧ್ಯತೆಯ ಆಗರವಾದುದು. ಭಾಷೆಗಳು ಬೇರೆಯಾದರೂ ಧ್ವನಿಯೊಂದೆ ಆದುದು. ಆದರೆ ನಿಧಾನವಾಗಿ ಭಾಷೆಗಳ ಬಗೆಯ ಸಂಬಂಧದ ಚರ್ಚೆಗಳು ದೂರವಾಗಿ ಸಂಘರ್ಷದ ಪರಿಭಾಷೆಗಳು ಮುನ್ನೆಲೆಗೆ ಬರುತ್ತಿರುವಾಗ, ಭಾಷೆಯಿಂದಲೆ ನಾವು ಪ್ರತ್ಯೇಕ ರಾಷ್ಟçವಾಗುತ್ತೇವೆ ಎನ್ನುವ ಪ್ರತ್ಯೇಕತೆಯ ಕೂಗು ಮೊಳಗುತ್ತಿರುವಾಗ ನಮ್ಮದೇ ನೆಲದಲ್ಲಿ ಭಾಷೆಗಳ ನಡುವಿನ ಸೌಹಾರ್ಧತೆಯನ್ನು, ರಾಷ್ಟç ಸಮಗ್ರತೆಯನ್ನು ಭಾಷೆಯ ಮೂಲಕವೆ ಕಟ್ಟಿದ ಹಿರಿಯರ ಚಿಂತನೆಯ ಮೆಲುಕು ಅಗತ್ಯವಾಗಿದೆ. ಸಮನ್ವಯದ ದಾರಿಯನ್ನು ತೋರಿದವರು ಹಲವರು. ಕುವೆಂಪು ನಮಗೆ ಚಿಂತನೆಯ ದಿಕ್ಕನ್ನು ತೋರಬಲ್ಲ ದಾರಿದೀಪವಾಗಿದ್ದಾರೆ. ಅವರು ಕನ್ನಡವನ್ನೇ ಉಸಿರಾಡಿದವರು. ಕನ್ನಡ ಸಾಹಿತ್ಯಲೋಕವನ್ನು ಬೆಳಗಿದವರು. ಆದರೆ ಅವರ ಕನ್ನಡತನ ಭಾರತ ವಿರೋಧಿಯಾಗಿರಲಿಲ್ಲ.     ಕುವೆಂಪು ಅವರ ಕರ್ನಾಟಕ ಪ್ರಜ್ಞೆ ಭಾರತಪ್ರಜ್ಞೆಯೊಳಗೆ ಸೇರಿಕೊಂಡದ್ದೇ ಆಗಿದೆ. “ ಕರ್ನಾಟಕ ಭೌಗೋಳಿಕವಾಗಿ ಭಾರತದ ಇತರ ಪ್ರದೇಶಗಳಿಂದ ಭಿನ್ನವಾಗಿ ಕಂಡರೂ ಸಾಂಸ್ಕೃತಿಕವಾಗಿ ಅಷ್ಟೇನೂ ಭಿನ್ನವಲ್ಲ. ಅಧ್ಯಾತ್ಮಿಕವಾಗಿ  ನೋಡಿದರಂತೂ ಸಂಪೂರ್ಣವಾಗಿ ಅಭಿನ್ನ. ಉಡುಗೆತೊಡುಗೆ, ಉಣಿಸು, ನಡೆನುಡಿಗಳಲ್ಲಿ ಪ್ರಾಂತದಿಂದ ಪ್ರಾಂತಕ್ಕೆ ಸ್ವಲ್ಪ ವ್ಯತ್ಯಾಸ ತೋರಿದರೂ ನಮ್ಮೆಲ್ಲರ ಕನಸು ಒಂದೇನಮ್ಮೆಲ್ಲರ ಮನಸ್ಸು ಒಂದೇ, ನಮ್ಮೆಲ್ಲರ ಗುರಿಯೂ ಒಂದೇ. ನಾವೆಲ್ಲ ಭಾರತೀಯರು.ನಮ್ಮ ಭಾಷೆ ಸಾಹಿತ್ಯಗಳು ಏಕೈಕವಾದ ಭಾರತೀಯ ಸಂಸ್ಕೃತಿಸಮುದ್ರದ ಬೃಹತ್ ತರಂಗಮಾತ್ರಗಳಾಗಿವೆ. ಪೂರ್ವ ಪಶ್ಚಿಮ ದಕ್ಷಿಣ ಸಮುದ್ರಗಳೂ ಹಿಮವತ್ ಪರ್ವತವೂ ನಮ್ಮನ್ನು ಭೌಗೋಳಿಕವಾಗಿ ಒಂದುಗೂಡಿಸಿರಬಹುದು.ಆದರೆ ರಾಜಕೀಯವಾಗಿ ಭಾರತೀಯ ಜನತೆ ಪರಸ್ಪರ ವ್ಶೆರಿಗಳೆಂದು ಪರಿಗಣಿತವಾಗಿದ್ದ ಭಿನ್ನ ಭಿನ್ನ ರಾಜ್ಯಗಳಲ್ಲಿ ಖಂಡ ಖಂಡವಾಗಿ ಹರಿದು ಹಂಚಿ ಹೋಗಿದ್ದಾಗಲೂ ಅವರನ್ನೆಲ್ಲ ಶತ ಶತಮಾನಗಳಿಂದ ಅಖಂಡವಾಗಿಯೆ ಇಟ್ಟಿದ್ದ ಶಕ್ತಿ ಯಾವುದು? ಶಕ್ತಿ ವೇದೋಪನಿಷತ್ತು ಷಡ್ದರ್ಶನಾದಿಗಳಲ್ಲಿ  ಹರಿಯುತ್ತಿರುವ  ಅಧ್ಯಾತ್ಮ ಶಕ್ತಿ; ರಾಮಾಯಣ ಮಹಾಭಾರತ ಭಾಗವತಾದಿಗಳಲ್ಲಿಯೂ  ದೇಶ ದೇಶದ ಕಾಲ ಕಾಲದ ಮಹಾ ಕವೀಂದ್ರರ ಮಹಾಕೃತಿಗಳಲ್ಲಿಯೂ ಹರಿಯುತ್ತಿರುವ ಸಾಹಿತ್ಯಶಕ್ತಿ; ಋಷಿ ಯೋಗಿ ಸಾಧಕ ಸಿದ್ಧ ಸಂತರ ದಿವ್ಯ ಜೀವನದಿಂದ ಆಕರ್ಷಿತವಾಗಿ, ಅವತರಿಸಿ ಅಭಿವ್ಯಕ್ತಗೊಂಡಿರುವ, ಹಾಗೂ ಒಂದಲ್ಲ ಇನ್ನೊಂದು ರೀತಿಯಿಂದ, ಒಬ್ಬರಲ್ಲ ಮತ್ತೊಬ್ಬರಿಂದ ಇಂದಿಗೂ ಆವಿರ್ಭಾವಗೊಳ್ಳುತ್ತಿರುವ ಧಾರ್ಮಿಕ ಶಕ್ತಿ. ಶಕ್ತಿಯೇ ಭಾರತಿ! ನೆಲದಲ್ಲಿ ಅದು ನೆಲೆಗೊಂಡಿರುವ ವಿಭಾಗವೇ ಭಾರತಅಲ್ಲಿ ಹುಟ್ಟಿ ಬೆಳೆದು, ಅದರ ದ್ಯೇಯೋದ್ದೇಶಗಳನ್ನು ಸಾಧಿಸುತ್ತಾ  ಪೂರ್ಣತ್ವದ ಕಡೆಗೆ ಸಾಗುತ್ತಿರುವ ಜನವೇ ಭಾರತೀಯರು. ನಾವೆಲ್ಲ ಭಾರತೀಯರೇ. ಕೇರಳ ಕರ್ನಾಟಕ ಆಂಧ್ರಾದಿ ಪ್ರದೇಶಗಳೆಲ್ಲ ಭಾರತಿಯ ಅಂಗರೂಪಗಳು, ಅಂಶರೂಪಗಳು. ಭಾರತಿ ತಾಯಿ. ಇವರೆಲ್ಲ ತಾಯಿಯ ತನುಜಾತೆಯರು; ತನುವಿನಿಂದ ಜಾತರಾದವರು; ಮಕ್ಕಳು. ಯಾವ ಅಂಗವಾಗಲಿ ಮತ್ತೊಂದು ಅಂಗದೊಡನೆ ಕದನವಾಡಿದರೆ ಅಥವಾ ಸಹಕರಿಸದಿದ್ದರೆ ಇತರ ಅಂಗಗಳಿಗೆ ಹಾನಿಯನ್ನುಂಟು ಮಾಡುವುದರ ಜೊತೆಗೆ ಅಂಗಿಗೂ ಹಾನಿಯನ್ನುಂಟು ಮಾಡಿ ತನ್ನ ಸರ್ವ ನಾಶಕ್ಕೂ ಕಾರಣವಾಗುತ್ತದೆ. ಕೇರಳಾಭಿಮಾನ ಕರ್ನಾಟಕಾಭಿಮಾನ ಆಂದ್ರಾಭಿಮಾನ ಇತ್ಯಾದಿ ದೇಶಭಾಷಾ ಪ್ರೇಮಾಭಿಮಾನಗಳು ದ್ವೇಷಕ್ಕಾಗಲೀ, ಅಸಹನೆ ಅನ್ಯಾಯಕ್ಕಾಗಲೀ ಆಕ್ರಮಣ ಬುದ್ಧಿಗಾಗಲಿ ಎಡೆಗೊಡದೆ ಭಾರತಾಭಿಮಾನದ ಆಶ್ರಯದಲ್ಲಿ ತಮ್ಮ ತಮ್ಮ  ಏಳಿಗೆಯನ್ನು ಸಾಧಿಸಬೇಕುಎನ್ನುತ್ತಾರೆ. ( ಕುವೆಂಪು ಸಮಗ್ರ ಗದ್ಯ ಸಂ., ಪುಟ ೧೪೬೧೪೭)           ಭಾರತದ ಸಮಗ್ರತೆಗಾಗಲಿ, ಐಕ್ಯತೆಗಾಗಲೀ ಯಾವುದೇ ಬಗೆಯಿಂದಲೂ ಹಾನಿಯಿಲ್ಲದ ದೃಷ್ಟಿ ಕುವೆಂಪು ಅವರದ್ದಾಗಿತ್ತು.“ ಪ್ರಾದೇಶಿಕ ವೈಶಿಷ್ಟ್ಯದ ರಕ್ಷಣೆಯಿಂದ ಅಖಿಲ ಭಾರತೀಯ ಐಕ್ಯತೆಗೆ ಒಂದಿನಿತೂ ವ್ಯಾಘಾತ ಒದಗುವುದಿಲ್ಲ ಎಂಬುದು ವಿಧಿತವಾಗುತ್ತದೆ. ಏಕೆಂದರೆ ಭಾಷೆಗಳಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸವಿದ್ದರೂ ಬೇರೆ ಬೇರೆಯ ಪ್ರದೇಶ ಮತ್ತು ರಾಜ್ಯಗಳ ಕಲಾ  ಮತ್ತು  ಸಾಹಿತ್ಯಾದಿಗಳ  ವಸ್ತು ಮತ್ತು ದೃಷ್ಟಿಗಳಲ್ಲಿ ಅಖಿಲ  ಭಾರತೀಯವಾದ ಏಕೈಕ ಮೂಲ ಸಂಸ್ಕೃತಿಯೇ ಶೇಕಡಾ ತೊಂಬತ್ತೈದಕ್ಕಿಂತಲೂ ಹೆಚ್ಚಾಗಿ ಸರ್ವಸಾಧಾರಣವಾಗಿದೆ. ಮೂಲ ಸಂಸ್ಕೃತಿಯ ವಜ್ರ ಬೆಸುಗೆ ನಮ್ಮ ಒಗ್ಗಟ್ಟನ್ನು ಎಂದೆAದಿಗೂ ಒಡೆಯಲು ಬಿಡುವುದಿಲ್ಲ. ಅಷ್ಟೇ ಅಲ್ಲ, ನಮಗೀಗ ಒದಗಿರುವ ರಾಜಕೀಯ ಅಖಂಡತೆಗೂ ಐಕ್ಯತೆಗೂ ಮೂಲ ಕಾರಣವೂ ಅಖಿಲ ಭಾರತೀಯವಾಗಿರುವ ಸಂಸ್ಕೃತಿಯ ಮೂಲದಲ್ಲಿಯೇ ಇದೆ”  ಎನ್ನುತ್ತಾರೆ. ಕನ್ನಡ ಭಾಷೆ, ಸಂಸ್ಕೃತಿಯನ್ನು ಕುರಿತು ಚಿಂತಿಸುವುದೆಂದರೆ ಅದು ವಿಶಾಲ ನೆಲೆಯಲ್ಲಿ ಭಾರತೀಯವಾದುದರ ಚಿಂತನೆಯೇ ಆಗಿರುತ್ತದೆ. ಹಾಗಾಗಿ ಕನ್ನಡ ಪ್ರಜ್ಞೆ ಭಾರತ ಪ್ರಜ್ಞೆಯ ಪ್ರತೀಕವೇ. ವಿರುದ್ಧ ಅಲ್ಲಕರ್ನಾಟಕತ್ವ, ಮಹಾರಾಷ್ಟçತ್ವ, ಆಂಧ್ರತ್ವಗಳನ್ನು ಭಾರತೀಯತ್ವ ಬೆಸೆದಿರುವುದರಿಂದ ಬೇರೆ ಬೇರೆಯಾಗಿ ಒಡೆಯಲು ಬಿಡುವುದಿಲ್ಲ . “ನಾನು ಪರಿಭಾವಿಸುವ ಆರಾಧಿಸುವ ಕರ್ನಾಟಕ ಯಾವಾಗಲೂ ಸಂಸ್ಕೃತಿ ಕರ್ನಾಟಕವೇ ಆಗಿದೆ. ‘ಎಲ್ಲಾದರೂ  ಇರು, ಎಂತಾದರು ಇರು, ಎಂದೆದಿಗೂ ನೀ ಕನ್ನಡವಾಗಿರುಎಂಬುದೇ ಅದರ ಅಧಿಷ್ಠಾನ ಸೂತ್ರ’. ‘ಬರಿಯ ಗೆರೆ ಹಾಕಿದ ಭೂಮಿ ಕರ್ನಾಟಕವೆ? ಬರಿಯ ನೆಲ ಭರತಖಂಡವೆ? ಅದು ಅಹುದಾದರೆ ಅರೇಬಿಯಾ ನೆಲಕ್ಕೂ ಭರತ ಖಂಡದ ನೆಲಕ್ಕೂ ಏನೂ ವ್ಯತ್ಯಾಸವಿಲ್ಲ. ಮಂಗಳ ಗ್ರಹಕ್ಕೂ ಭೂಮಂಡಲಕ್ಕೂ ಏನೂ ವ್ಯತ್ಯಾಸವಿಲ್ಲ. . . . . . ಆದ್ದರಿಂದ  ಭೌಗೋಳಿಕ ವಿಸ್ತೀರ್ಣಕ್ಕಿಂತ ಮನೋಮಯ ವಿಸ್ತೀರ್ಣ ಗಮನಾರ್ಹವಾದುದು. ಮನೋಮಯ ಕ್ಷೇತ್ರವೇ ನಿಜವಾದ  ಕರ್ನಾಟಕಎನ್ನುತ್ತಾರೆ. ಅವರಿಗೆ ಭಾರತಕರ್ನಾಟಕ ದ್ವಂದ್ವ ಸಂಬಂಧವಾಗಿ ಕಾಣಲಿಲ್ಲ. ಅವರು ಭಾರತದ ಮೂಲಕವೇ ಕನ್ನಡ ನಾಡಿನ ಅಭಿಮಾನವನ್ನು ಮೂಡಿಸುತ್ತಾರೆ. “ನಾನು ರಾಜ್ಯ ದೃಷ್ಟಿಯಿಂದ ಕರ್ನಾಟಕದವನು, ಭಾಷಾ ದೃಷ್ಟಿಯಿಂದ ಕನ್ನಡಿಗನು, ಆದರೆ ಸಂಸ್ಕೃತಿಯ ದೃಷ್ಟಿಯಿಂದ ಮತ್ತು ರಾಷ್ಟ ದೃಷ್ಟಿಯಿಂದ ಭಾರತೀಯನು. ನನ್ನ ಕರ್ನಾಟಕತ್ವ ಭಾರತೀಯತ್ವಕ್ಕೆ ಎಂದಿಗೂ ಎದುರು ನಿಲ್ಲುವುದಿಲ್ಲ. ಕರ್ನಾಟಕತ್ವ  ಭಾರತೀಯತ್ವಕ್ಕೆ ಎಂದೆಂದಿಗೂ ಅವಿರೋಧಿಯಾಗಿ ಸೇವೆ ಸಲ್ಲಿಸುವುದರಿಂದಲೇ ತನ್ನ ಅಸ್ತಿತ್ವವನ್ನು ರಕ್ಷಿಸಿಕೊಳ್ಳುತ್ತದೆಎನ್ನುತ್ತಾ  “ಕೊಳಲಿಗೆ ಅನೆಕ ಕಣ್ಣುಗಳಿರುವಂತೆ ಭಾರತಿಗೆ ಬಹು ಜಿಹ್ವೆಗಳಿವೆಪೀಪಿ ಊದುವ ಹುಡುಗನಿಗೆ  ಕೊಳಲಿಗೆ ಅನೇಕ ರಂದ್ರಗಳಿರುವುದು ತೊಂದರೆಯ ವಿಷಯವಾಗುತ್ತದೆ; ಆದರೆ ವೇಣುವಾದನ ನಿಪುಣನಿಗೆ ರಂದ್ರಗಳ ಅನೇಕತೆಯೇ ಸಂಗೀತದ ಸ್ವರಮೇಲ ಮಾದುರ್ಯಕ್ಕೆ ಅವಶ್ಯ ಸಾಧನವಾಗುತ್ತದೆಎನ್ನುತ್ತಾ ಭಾರತೀಯ ಭಾಷೆಗಳೆಲ್ಲ ಸೇರಿ ಐಕ್ಯತೆಯ ಆರತಿಯನ್ನೆತ್ತಿ  ಭರತಮಾತೆಗೆ ಪೂಜೆ ಸಲ್ಲಿಸುತ್ತಿವೆ ಎಂದು ಸಂಭ್ರಮಿಸುತ್ತಾರೆ. ‘ಸಾಹಿತ್ಯಸೌಹಾರ್ಧಕ್ಕೆ ಭಂಗ ತಂದರೆ ಅದು ಆಸುರೀ ಸಾಹಿತ್ಯವಾಗುತ್ತದೆ. ನಿಜವಾದಸಾಹಿತ್ಯಐಕ್ಯಕಾರಿ. ಸಾಮರಸ್ಯ,ಸಮನ್ವಯ, ಸಹಾನುಭೂತಿ, ಸರ್ವೋದಯ ಭಾವನೆ  ಇವುಗಳನ್ನು ಪ್ರಚೋದಿಸುವುದು ದೈವೀ ಸಾಹಿತ್ಯದ ಲಕ್ಷಣ ಎಂದು ಸ್ಪಷ್ಟವಾಗಿ ಸಾರಿಹೇಳುತ್ತಾರೆ.     ಕುವೆಂಪು ಕರ್ನಾಟಕವನ್ನು ಕೇವಲ ಒಂದು ಭೌಗೋಳಿಕ ರಚನೆ ಮತ್ತು ಅದು ಅದರ ಹೆಸರು ಎಂದು ಭಾವಿಸದೆ, ಕನ್ನಡಕರ್ನಾಟಕದ ಪರಿಧಿಯನ್ನು ವಿಸ್ತರಿಸುತ್ತಾರೆ.

ಎಲ್ಲಾದರೂ ಇರು, ಎಂತಾದರು ಇರು

ಎಂದೆಂದಿಗು ನೀ ಕನ್ನಡವಾಗಿರು

ಕನ್ನಡ ಗೋವಿನ ಮುದ್ದಿನ ಕರು

ಕನ್ನಡತನವೊಂದಿದ್ದರೆ ನೀನಮ್ಮಗೆ ಕಲ್ಪತರು!

        ನೀ ಮೆಟ್ಟುವ ನೆಲಅದೆ ಕರ್ನಾಟಕ

        ನೀನೇರುವ ಮಲೆ ಸಹ್ಯಾದ್ರಿ

        ನೀ ಮುಟ್ಟುವ ಮರ ಶ್ರೀ ಗಂಧದ ಮರ

        ನೀ ಕುಡಿಯುವ ನೀರ್ ಕಾವೇರಿ.”(ಮೆಟ್ಟುವ ನೆಲ ಕರ್ನಾಟಕ)

    ಕರ್ನಾಟಕದ ಏಕೀಕರಣದ ಚರ್ಚೆ ನಡೆಯುತ್ತಿದ್ದ ಕಾಲದಲ್ಲೇ ,ಎಲ್ಲೇ ಇದ್ದರೂ, ಹೇಗೆ ಇದ್ದರೂ ನೀನು ಕನ್ನಡಿಗನಾಗಿರು ಎಂಬ ಕರೆಯನ್ನು ಕೊಡುತ್ತಾರೆ. ‘ನೀ ಮೆಟ್ಟುವ ನೆಲಅದೆ ಕರ್ನಾಟಕಎಂದು ಹೇಳುತ್ತಾ, ಕನ್ನಡಿಗನು ಜಗತ್ತಿನ ಎಲ್ಲೇ ಇದ್ದರೂ ಆತ ತುಳಿಯುವ ನೆಲ ಅದು ಕರ್ನಾಟಕದ ನೆಲ ಎಂದೇ ಭಾವಿಸಲಿ, ಜಗತ್ತಿನ ಯಾವುದೇ ಬೆಟ್ಟವನ್ನು ಏರಿದರೂ ಅದು ಕರ್ನಾಟಕದ ಸಹ್ಯಾದ್ರಿ ಎಂದೇ ಭಾವಿಸಲಿ, ಮುಟ್ಟುವ ಮರಶ್ರೀಗಂಧ, ಕುಡಿಯುವ ನೀರು ಕಾವೇರಿ ಎಂದೇ ಭಾವಿಸಲಿ ಎಂದು ಹೇಳುವ ಕವಿಯ ಮಾತುಗಳು ಏಕೀಕರಣದ ಅರ್ಥವನ್ನು ವಿಸ್ತ್ತರಿಸುತ್ತದೆ. ಕನ್ನಡಿಗ ತಾನು ಹೋದ ಕಡೆಯೇ ಕರ್ನಾಟಕವನ್ನು ಕಾಣಬೇಕು ಎಂಬ ಆಲೋಚನೆಯೇ ಬಹಳ ವಿಶಿಷ್ಟವಾದುದು. ಕುವೆಂಪು ಪ್ರತಿಪಾದಿಸಿದ ವಿಶ್ವಮಾನವ ಸಂದೇಶದ ಬೀಜರೂಪವು ಇದೇ ಕವಿತೆಯ ಮೂಲಕ ವ್ಯಕ್ತವಾಗಿದೆ ಎಂದು ಹೇಳಬಹುದು. ಕರ್ನಾಟಕವನ್ನು ನೆಲಕ್ಕೆ, ಗಡಿ ಗುರುತುಗಳಿಗೆ ಅತೀತವಾಗಿ ಗ್ರಹಿಸಬಹುದೆಂಬುದರ ಸೂಚನೆಯಿದು. ಕುವೆಂಪು ಅವರೇಕರ್ನಾಟಕದ ಕಾವ್ಯ ಸಂಸ್ಕೃತಿಗಳನ್ನು ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡ ಕನ್ನಡಿಗನು ಭೌಗೋಳಿಕವಾದ ಎಲ್ಲೆಗಳಿಂದ ಹೆದರಬೇಕಾದ್ದಿಲ್ಲ. . . . . ಕನ್ನಡ ಕಾವ್ಯವನ್ನೋದುವಾತನು ಅಮೇರಿಕೆಯಲ್ಲಿದ್ದರೂ ಅದುಕರ್ನಾಟಕವೇ’, ‘ಪಂಪನನೋದುವ ನಾಲಗೆಮಿಸಿಸಿಪಿ ಹೊಳೆಯ ನೀರನ್ನು ಈಂಟಿದರೂ ಅದು ಕಾವೇರಿಯೇ, ‘ಕುಮಾರವ್ಯಾಸನ ನಾಲಿಪ ಕಿವಿಆಂಡಿಸ್ ಪರ್ವತವನ್ನೇರುತ್ತಿದ್ದರೂ ಅದು ಸಹ್ಯಾದ್ರಿಯೇ”  ಎನ್ನುತ್ತಾರೆ.          ಕರ್ನಾಟಕದ ಬಗೆಗೆ, ಕನ್ನಡದ ಬಗೆಗೆ ಹೇಳುತ್ತಿರುವ ಪದ್ಯ ಕನ್ನಡಿಗನನ್ನುಎಂದೆಂದಿಗೂ ನೀ ಕನ್ನಡವಾಗಿರುಎನ್ನುತ್ತಲೇ ಜಗದ್ವ್ಯಾಪಿ ಅನುಭವದ ಜೊತೆಗೆ ಸೇರಿಸುತ್ತದೆ. ಭೌಗೋಳಿಕ ಕರ್ನಾಟಕವನ್ನು ಭಾವವ್ಯಾಪ್ತಿಯ ಕರ್ನಾಟಕದ  ಜೊತೆ ಸಮನ್ವಯಗೊಳಿಸುವ ಬಗೆ ಇಲ್ಲಿ ವಿಶಿಷ್ಟವಾಗಿದೆ. ಕುವೆಂಪು ಅವರು ಕನ್ನಡದ ಮೇಲೆ ತೋರುವ ಪ್ರೀತಿಗೆ ಜಗತ್ತುಅನ್ಯವಾಗುವುದಿಲ್ಲ. ಜಗತ್ತನ್ನು  ಅನ್ಯವಾಗಿಸದೇ  ‘ಸ್ವವನ್ನು, ‘ಸ್ವ ವಿಶಿಷ್ಟತೆಯನ್ನು ಕಾಣುವುದನ್ನು ಇಲ್ಲಿ ನೋಡಬಹುದಾಗಿದೆ. ಇಲ್ಲಿ ಕನ್ನಡಕರ್ನಾಟಕ  ಒಂದಲ್ಲ. ಏಕಕಾಲಕ್ಕೆ  ಹಲವಾಗುತ್ತದೆ.  ‘ನೀ ಮೆಟ್ಟುವ  ನೆಲ  ಕರ್ನಾಟಕಎನ್ನುವಾಗ ಕವಿ ಕರ್ನಾಟಕವನ್ನು ಖಡ್ಗದ ಮೂಲಕ ವಿಸ್ತರಿಸಲು ಬಯಸುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಇದು ಅಧಿಕಾರದ ವಿಸ್ತರಣೆಯಲ್ಲ. ಗುಲಾಮಗಿರಿಯ ವಿಸ್ತರಣೆಯೂ ಅಲ್ಲಕನ್ನಡಿಗ ಕಾಲಿಟ್ಟಲ್ಲಿ ಸ್ಥಳೀಯ ಸಂಸ್ಕೃತಿ, ಭಾಷೆಗೆ ಅಪಾಯವೂ ಇಲ್ಲ. ಆದರೆ ಕನ್ನಡಿಗ ಮಾತ್ರ ತಾನು ಕಾಲಿಟ್ಟ ನೆಲವನ್ನೇ ಕರ್ನಾಟಕ ಎಂದು ಭಾವಿಸಿಕೊಳ್ಳುತ್ತಾ ಕರ್ನಾಟಕವನು  ಕಟ್ಟುವುದಕ್ಕೆ, ಕರ್ನಾಟಕದಲ್ಲಿ ಬದುಕುವುದಕ್ಕೆ  ಪೂರಕವಾಗಿರುವುದನ್ನು  ಒತ್ತಾಯಿಸುತ್ತದೆ. ನಾಡಿನ ಸೀಮೆ, ರಾಷ್ಟç ಸೀಮೆ, ಭಾಷೆಯ ಬೆಳವಣೆಗೆಗೆಅದರ ವಿಸ್ತಾರಕ್ಕೆ ತೊಡಕಾಗಬೇಕಾಗಿಲ್ಲ  ಎಂಬ ಸಮನ್ವಯ ದೃಷ್ಟಿ ಇಲ್ಲಿರುವುದನ್ನು ಗಮನಿಸಬಹುದು.      ಕರ್ನಾಟಕದ ಕಲ್ಪನೆ ಕೇವಲ ಸದ್ಯದ ಸಂದರ್ಭದಲ್ಲಿ ಭಾಷೆಯನ್ನಾಡುವ ಭೂವಲಯದ್ದಲ್ಲ. ಅದು ಕನ್ನಡವನ್ನು ಕಟ್ಟಿದ, ಕರ್ನಾಟಕವನ್ನು ಸಾಂಸ್ಕೃತಿಕವಾಗಿ ರೂಪಿಸಿದ ಐತಿಹಾಸಿಕ ಸಂಗತಿಗಳ ಜೊತೆಗಿನ ಒಂದು ಭಾವನಾತ್ಮಕ ಸಂಬಂಧ. ಮನೋಸ್ತರದ ಕರ್ನಾಟಕವನ್ನು ಆಳುವವರು ಯಾವುದೋ ರಾಜಕೀಯ ನಾಯಕರಲ್ಲ, ಬದಲಾಗಿ ಸಾಂಸ್ಕೃತಿಕ ಕರ್ನಾಟಕವನ್ನು ಶ್ರೀಮಂತಗೊಳಿಸಿದ, ಕರ್ನಾಟಕದ ಸಾಂಸ್ಕೃತಿಕ ನಾಯಕರೇ  ಆಳುವವರು. ‘ನೃಪತುಂಗಚಕ್ರವರ್ತಿಆತನಿಗೆಪಂಪನೇ  ಮುಖ್ಯಮಂತ್ರಿ. ಇನ್ನುಳಿದಂತೆ ರನ್ನ, ಜನ್ನ, ನಾಗವರ್ಮ, ರಾಘವಾಂಕ, ಹರಿಹರ, ಬಸವೇಶ್ವರ, ನಾರಣಪ್ಪ, ಸರ್ವಜ್ಞ, ಷಡಕ್ಷರರೇ ಸಚಿವ ಮಂಡಲದ ಮಂತ್ರಿಗಳು. ಇದು ಶಾಶ್ವತ ಸಚಿವ ಮಂಡಲ. ಶಾಶ್ವತ ಆಡಳಿತ ವ್ಯವಸ್ಥೆ. ಕವಿ ಕಲ್ಪನೆಯ ಸಚಿವ ಮಂಡಲ ಕರ್ನಾಟಕವನ್ನು ನಿಜವಾಗಿ ಆಳಬೇಕಾಗಿರುವ ಸರಸ್ವತಿ  ಪ್ರಣೀತ  ಸಾಂಸ್ಕೃತಿಕ ಜ್ಞಾನ ಸಂಕೇತಗಳು ಕಾರಣದಿಂದಲೇ ಅಖಂಡ ಕರ್ನಾಟಕ ಎನ್ನುವುದು  ಕೇವಲ ನಾಲ್ಕು ದಿನಗಳ ಒಂದು ರಾಜಕೀಯ ನಾಟಕ  ಅಲ್ಲ  ಎನ್ನುವುದನ್ನು  ನೆನಪಿಸುತ್ತಾರೆ.   

    ಕರ್ನಾಟಕ ಎಂಬುದೇನು

    ಹೆಸರೆ ಬರಿಯ ಮಣ್ಣಿಗೆ ?

ಮಂತ್ರ ಕಣಾ! ಶಕ್ತಿ ಕಣಾ!

ತಾಯಿ ಕಣಾ ! ದೇವಿ ಕಣಾ!

 ಬೆಂಕಿ ಕಣಾ ! ಸಿಡಿಲು ಕಣಾ!

ಕಾವ ಕೊಲುವ ಒಲವ ಬಲವ

ಪಡೆದ ಚಲದ ಚಂಡಿ ಕಣಾ !

ಖುಷಿಯ ಕಾಣ್ಬ ಕಣ್ಣಿಗೆ!    ( ಅಖಂಡ ಕರ್ನಾಟಕ)

ಕವಿಯೇ ಹೇಳುವಂತೆ, ಕರ್ನಾಟಕ ನಮ್ಮ ಮಂತ್ರ, ನಮ್ಮ ಶಕ್ತಿ, ನಮ್ಮ ತಾಯಿ, ದೇವಿ, ಬೆಂಕಿ, ಸಿಡಿಲು. ಇದಕ್ಕೆ ಕಾಯುವ ಮತ್ತು ಕೊಲ್ಲುವ ಎರಡೂ ಶಕ್ತಿಯೂ ಇದೆ. ಹೊಟ್ಟೆಬಟ್ಟೆಯ, ಪಕ್ಷಜಾತಿಯ, ಅಹಂಕಾರಸ್ವಾರ್ಥಗಳಾಚೆಗಿನ ಒಂದು ಸಮೃದ್ಧ  ಕರ್ನಾಟಕದ ಆಶಯವನ್ನು ಕವಿ ಮುಂದಿಡುತ್ತಾರೆ.     ಏಕೀಕರಣದ ಕರ್ನಾಟಕದ ಕನಸು ಸಾಕಾರಗೊಂಡಾಗ ಕುವೆಂಪು ಬರೆದಕರ್ನಾಟಕ ರಾಜ್ಯೋದಯ ಶ್ರೀಗೀತೆಕವಿತೆ ಭಾರತ ಮತ್ತು ಕರ್ನಾಟಕದ ಸಂಬಂಧವನ್ನು ಬಲಗೊಳಿಸುವ, ಬಾಂಧವ್ಯವನ್ನು ಸುಮಧುರ ಗೊಳಿಸುವ ಸ್ವರೂಪದಲ್ಲಿದೆ. ನಾಡಿನ ಸಾಂಸ್ಕೃತಿಕ ಹಿರಿಮೆಯು ರಾಜ್ಯೋದಯದೊಂದಿಗೆ ಹೊಸ ಗೌರವವನ್ನು ಪಡೆದ ಸಂದರ್ಭದಲ್ಲಿ ನಾಡಿನ ಜನಗಳಿಗೆ ಕರ್ನಾಟಕವನ್ನು ಕಟ್ಟಿಕೊಡುವ ಬಗೆ ವಿಶಿಷ್ಟವಾದುದು.

    “ ಬರಿಯ ಚದರ ಮೈಲಿಗಳಲ್ತು ಕರ್ನಾಟಕದ ದೇಶ ವಿಸ್ತೀರ್ಣಂ;

    ನೆನೆ, ನೆನೆ, ಮನೋಮಯದ ಸಂಸ್ಕೃತಿಯ ಕೋಶ ವಿಸ್ತೀರ್ಣಮಂ

    ಮರೆಯದಿರು ಚದರ ಸಂವತ್ಸರದ ಶತಮಾನಗಳ ಕಾಲ ವಿಸ್ತೀರ್ಣಮಂ,

    ಪ್ರಾಣಮಯ ಭಾವಪ್ರದೇಶ ವಿಸ್ತೀರ್ಣಮಂ,

    ಚಿದಾಕಾಶ ವಿಜ್ಞಾನ ವಿಸ್ತೀರ್ಣಮಂ! ”    (ಕರ್ನಾಟಕ ರಾಜ್ಯೋದಯ ಶ್ರೀ ಗೀತೆ)

ಕರ್ನಾಟಕ ರಾಜ್ಯ ೧೯೫೬ರಲ್ಲಿ ರಚನೆಗೊಂಡಾಗ ಕವಿ ಕುವೆಂಪು ರಚಿಸಿದ ಕವಿತೆಯ ಸಾಲಿದು. ಕರ್ನಾಟಕ ಉದಯಗೊಂಡಾಗಲೇ ಕವಿ ಕರ್ನಾಟಕ ಅಂದರೆ ಏನು ಎನ್ನುವುದನ್ನು ನಿರೂಪಿಸಿರುವುದು ಇಲ್ಲಿನ ವೈಶಿಷ್ಟ್ಯತೆ. ಕರ್ನಾಟಕವನ್ನು, ಅದರ ವಿಸ್ತೀರ್ಣವನ್ನು ಕೇವಲ ಅದರ ಭೌಗೋಳಿಕ ವಿಸ್ತಾರದಿಂದ ನೋಡುವುದಲ್ಲ, ಎಷ್ಟು ಚದರ ಮೈಲಿಗಳಲ್ಲಿ ಕರ್ನಾಟಕ ವಿಸ್ತರಿಸಿದೆ ಎನ್ನುವುದರಿಂದ ಕರ್ನಾಟಕದ ಮಹತ್ತನ್ನು ಅಳೆಯಲಾಗದು. ಅದು ಅಳೆಯಲಾಗದಷ್ಟು ವಿಸ್ತಾರವನ್ನು ಬೇರೆ ಬೇರೆ ಸ್ವರೂಪಗಳಲ್ಲಿ ಹೊಂದಿದೆ. ಭೂ ವಿಸ್ತೀರ್ಣ ಒಂದು ನೆಲೆಯಾದರೆ ಅದಕ್ಕಿಂತಲೂ ವಿಸ್ತಾರವಾದಮನೋಮಯ ಸಂಸ್ಕೃತಿಯ ಕೋಶಇದೆ. ಶತಮಾನಗಳ ಕಾಲ ವಿಸ್ತೀರ್ಣ ಇದೆ; ಪ್ರಾಣಮಯ ಭಾವ ಪ್ರದೇಶದ ವಿಸ್ತೀರ್ಣ ಇದೆ. ಮೂಲಕ ಕರ್ನಾಟಕ ಎಂಬ ರಚನೆಯ ಹಿಂದಿನ ಕಲ್ಪನೆಯ ಅಗಾಧತೆ, ಪ್ರಾಚೀನತೆ, ಭಾವ ಸ್ವರೂಪ ಏನು ಎನ್ನುವುದನ್ನು ತೋರಿಸುವ ಪ್ರಯತ್ನ ಇಲ್ಲಿದೆ. ಕರ್ನಾಟಕದ ಮನೋಮಯ ಸಂಸ್ಕೃತಿ ಕೋಶ ವಿಸ್ತೀರ್ಣ, ಅದರ ಕಾಲ ವಿಸ್ತೀರ್ಣ, ಪ್ರಾಣಮಯ ಭಾವ ಪ್ರದೇಶ ವಿಸ್ತೀರ್ಣದ ಎದುರು ಭೂ ಪ್ರದೇಶದ ವಿಸ್ತೀರ್ಣ ನಗಣ್ಯವಾದುದು. ಕನ್ನಡಿಗರು ಕರ್ನಾಟಕವನ್ನು ಅದರ ಭೌಗೋಳಿಕ ಸ್ವರೂಪ, ವಿಸ್ತೀರ್ಣಗಳಿಂದ ಗ್ರಹಿಸಬೇಕಾಗಿಲ್ಲ. ಹಾಗೆಯೇ ಅನ್ಯರೂ ಕೂಡ ಕರ್ನಾಟಕವನ್ನು ಗ್ರಹಿಸಬೇಕಾದ ಬಗೆ ಯಾವುದು ಎಂಬುದನ್ನು ಇಲ್ಲಿ ತೋರಿಸುತ್ತಾರೆ.    ಕುವೆಂಪು ಕಟ್ಟಿದ ಕನಾಟಕದ ದರ್ಶನವನ್ನು ಮಾಡಿಸುವ ಅವರ ಪ್ರಸಿದ್ಧ ಗೀತೆ,

    “ಜಯ್ ಭಾರತ ಜನನಿಯ ತನುಜಾತೆ

    ಜಯಹೇ ಕರ್ನಾಟಕ ಮಾತೆ!

    ಜಯ್ ಸುಂದರ ನದಿವನಗಳ ನಾಡೆ

    ಜಯ ಹೇ ರಸಋಷಿಗಳ ಬೀಡೆ !

    ಭೂ ದೇವಿಯ ಮಕುಟದ ನವಮಣಿಯೆ

    ಗಂಧದ ಚಂದದ ಹೊನ್ನಿನ ಗಣಿಯೆ

    ರಾಘವ ಮಧುಸೂದನರವ ತರಿಸಿದ

    ಭಾರತ ಜನನಿಯ ತನುಜಾತೆ

    ಜಯ ಹೇ ಕರ್ನಾಟಕ ಮಾತೆ ! ” (ಜಯ ಹೇ ಕರ್ನಾಟಕ ಮಾತೆ)

        ಕುವೆಂಪು ಅವರೇ ಹೇಳುವಂತೆಕರ್ನಾಟಕದ ಕವಿ ತನ್ನ ಗಾಥೆಯ ಒಂದೊಂದು ಪದ್ಯದ ಕೊನೆಯ ಚರಣವನ್ನೂ; ಭಾರತದ ಏಕತ್ವ ರಕ್ಷಣೆಯ ಮಂತ್ರವನ್ನಾಗಿ ಘೋಷಿಸಿದ್ದಾನೆ. ರಾಘವ ಮಧುಸೂದನರವತರಿಸಿದ ಭಾರತ ಜನನಿಯ ತನುಜಾತೆ; ಜಯಹೇ ಕರ್ನಾಟಕ ಮಾತೆ !’ ‘ಕಪಿಲ ಪತಂಜಲಿ ಗೌತಮ ಜಿನನುತ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ ……..’ ಇಲ್ಲಿ ಕರ್ನಾಟಕ ಮಾತೆಗೆ ತನ್ನದೇ ಆಗಿರುವ ಪ್ರತ್ಯೇಕ ಅಸ್ತಿತ್ವ ಇಲ್ಲ; ಸರ್ವದಾ ತಾಯಿ ಭಾರತಿಯ  ಮಗಳಾಗಿಯೇ ಇರುವುದರಿಂದ ಮಾತ್ರ ಆಕೆಯ ಅಸ್ತಿತ್ವಕ್ಕೆ ರಕ್ಷೆ ಒದಗುತ್ತದೆ. ಅದರ ಪೋಷಣೆಗೆ ಅಮೃತ ಸಹಾಯ ಲಭಿಸುತ್ತದೆಎನ್ನುತ್ತಾರೆ. “ಕರ್ನಾಟಕ ಮಾತೆಗೆ ಸಲ್ಲುವ ಜಯಕಾರ ಆಕೆ ಭಾರತ ಜನನಿಯ ತನುಜಾತೆಯಾಗಿರುವುದರಿಂದಲೇ. ಭಾರತಮಾತೆಯ ಅಂಗೋದ್ಭವೆಯಾಗಿ ವಿನಾ ಕರ್ನಾಟಕಕ್ಕೆ ಬೇರೆಯ ಅಸ್ತಿತ್ವವೆಲ್ಲಿ? ಈಕೆ ಶ್ರೀರಾಮ ಶ್ರೀ ಕೃಷ್ಣರು ಅವತಾರ ಮಾಡಿದ ಭಾರತಾಂಬೆಯ ಮಗಳು; ಕಪಿಲ, ಪತಂಜಲ, ಗೌತಮ, ಜಿನ ಇವರೆಲ್ಲರಿಂದ ರೂಪಿತೆಯಾದ  ಭಾರತಾಂಬೆಯ ಕನ್ಯೆ; ನಾನಕ, ರಾಮಾನಂದ, ಕಬೀರ, ಶ್ರೀ ಕೃಷ್ಣ ಚೈತನ್ಯ, ರಾಮಕೃಷ್ಣ ಪರಮಹಂಸರೆ ಮೊದಲಾದ  ಮಹಾಪುರುಷರನ್ನು ಹಡೆದೂ  ಅವರೆಲ್ಲರ ದಿವ್ಯ ತಪಸ್ಸಿನಿಂದಲೆ  ಸಂಭೂತೆಯಾಗಿರುವ  ಭಾರತಮಾತೆಯ ತನುಜಾತೆ. ಮಗಳ ಮೈಯಲ್ಲಿ ಹರಿವ ನೆತ್ತರು ತಾಯಿಯದು. ಇವಳ ಉಸಿರು ಅವಳು.ಇಬ್ಬರಿಗೂ ಇರುವ ಸಂಬಂಧ ಹೊಕ್ಕುಳ ಬಳ್ಳಿಯ ಸಂಬಂಧ. ಆದ್ದರಿಂದಲೇ  ಅವಳು ತಿಂದರೆ ಇವಳಿಗೆ  ಪುಷ್ಟಿ. ಮಗಳ ಪುಷ್ಟಿ ತಾಯಿಗೆ ತುಷ್ಟಿಎನ್ನುವಲ್ಲಿ ಕಾಣುವುದು ಐಕ್ಯತೆಯ ಲೋಕದೃಷ್ಟಿಯೇ.         ‘ಜಯ್ ಭಾರತ ಜನನಿಯ ತನುಜಾತೆ,         ಜಯ್ ಹೇ ಕರ್ನಾಟಕ ಮಾತೆಎಂಬ ಸಾಲನ್ನು ಗಮನಿಸಿದರೆ, ಕುವೆಂಪು ಕಲ್ಪಿಸುವ, ಕಟ್ಟುವ ಕರ್ನಾಟಕದ ಚಿತ್ರಣದ ದರ್ಶನವಾಗುತ್ತದೆ. ಕವಿ ಕರ್ನಾಟಕವನ್ನುಭಾರತ ಜನನಿಯ ತನುಜಾತೆಎನ್ನುವಾಗಲೇ ಕವಿಯ ಮುಂದಿರುವ ಧೋರಣೆ ಸ್ಪಷ್ಟವಾಗಿರುವುದನ್ನು ನೋಡಬಹುದು. ಕರ್ನಾಟಕಕ್ಕೆ ಸಿಗುವ ಅಸ್ತಿತ್ವಆತ್ಮಗೌರವ ಎಲ್ಲದಕ್ಕೂ ಭಾರತ ಎಂಬ ಒಂದು ದೊಡ್ಡ ಭಿತ್ತಿ ಕಾರಣ ಎನ್ನುತ್ತಾರೆ. ಇಲ್ಲಿ ಭಾರತ ಜನನಿಯಾಗುತ್ತಾಳೆ. ಕನ್ನಡ ಮಾತೆ ಮಗಳಾಗುತ್ತಾಳೆ. ತಾಯಿಮಗಳು ಎನ್ನುವ ಸಂಬಂಧವೇ ಸಮನ್ವಯ  ಮಾರ್ಗವೂ ಹೌದು. ಕುವೆಂಪು ಅವರ ರಾಷ್ಟಿಯತೆಗೆ ಒಂದು ಬಗೆಯ ದಾರ್ಶನಿಕ ಸ್ವರೂಪವಿತ್ತು. ನಾಡು ಕೂಡ ಗಡಿಯನ್ನು ಮೀರಿದ ಕಲ್ಪನೆಯೇ ಆಗಿತ್ತು. ಅವರು ಬಹುತ್ವದ ಕಲ್ಪನೆಯನ್ನು ಒಪ್ಪಿಕೊಂಡೆ ಕರ್ನಾಟಕದ ಹಾಗೂ ಭಾರತದ ಕಲ್ಪನೆಯನ್ನು ಮುಂದಿಡುತ್ತಾರೆ. ಕನ್ನಡ ಮತ್ತು ಭಾರತದ ನಡುವಿನ ಹೊಕ್ಕುಳು ಬಳ್ಳಿ ಸಂಬಂಧವನ್ನು ಮರೆತವರಿಂದ ಇಂದು ವಿಭಜನೆಯ ಧ್ವನಿ ಕೇಳುತ್ತಿರುವುದು. ಕನ್ನಡ ಮೊದಲೇ? ಭಾರತ ಮೊದಲೇ? ಎನ್ನುವ ಪ್ರಶ್ನೆಯಲ್ಲೇ ಒಡಕಿನ ವಾಸನೆಯಿದೆ. ಒಡಕಿನ ಭಾವ ಬ್ರಿಟಿಷರು ಬಿತ್ತಿದ ಒಡೆದು ಆಳಿದ ನೀತಿಗಿಂತ ಭಿನ್ನವೇನಲ್ಲ. ಕುವೆಂಪು ಭಾರತವನ್ನು ಕಂಡದ್ದು ಬಹುಜಿಹ್ವಾ ಭಾರತಿಯಾಗಿ.ಕನ್ನಡವೂ ಸೇರಿದಂತೆ ಎಲ್ಲಾ ದೇಶ ಭಾಷೆಗಳು ತಾಯಿಗೆ ಬೆಳಗಿದ್ದು ಐಕ್ಯತೆಯ ಆರತಿಯನ್ನು ಎನ್ನುವುದನ್ನು ತಮ್ಮ ಮಾತು ಬರವಣಿಗೆಗಳಲ್ಲಿ ಸ್ಪಷ್ಟಪಡಿಸುತ್ತಾರೆ. ‘ಭಾರತಿ ಮಗಳಾಗಿ ಉಳಿಯಬೇಕಾದ ರಾಜ್ಯಗಳು ಸಂಘರ್ಷವನ್ನು ಬಿತ್ತಬಾರದು. ಸೌಹಾರ್ಧತೆಯನ್ನೇ ಮಂತ್ರವಾಗಿಸಿಕೊಂಡು  ಮುನ್ನಡೆಯಬೇಕಾಗಿದೆ ಎಚ್ಚರವನ್ನು ನಾವಿಂದು ಹೊಂದಬೇಕಾಗಿದೆ. ಕುವೆಂಪು ಅವರ ಸಾಹಿತ್ಯ ನಮಗೆ ತೋರುವುದು ಎಚ್ಚರವನ್ನು. ಅದನ್ನು ಮರೆತು ನಾವು ಕುವೆಂಪು ಅವರನ್ನು ಆರಾಧಿಸಿದರೆ ಅದು ತೋರಿಕೆಯ ನಡವಳಿಕೆಯಾಗುತ್ತದೆಯೇ ಹೊರತು ನಿಜವಾದ ಕಾಳಜಿಯಾಗುವುದಿಲ್ಲ.

ಡಾ. ರೋಹಿಣಾಕ್ಷ ಶಿರ್ಲಾಲು

ಸಹಾಯಕ ಪ್ರಾಧ್ಯಾಪಕರು,ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನಾಡಿನ ಗಣ್ಯರ ದೃಷ್ಟಿಯಲ್ಲಿ ಮತಾಂತರ

Fri Dec 31 , 2021
ಇಂದು ಮತಾಂತರ ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ. ಕರ್ನಾಟಕ ಸರ್ಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರುವ ಪ್ರಯತ್ನದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಚರ್ಚೆ ಪ್ರಾರಂಭವಾಗಿದೆ. ಈ ರೀತಿಯ ಪ್ರಯತ್ನಗಳಾಗಲೀ, ಕಾಯ್ದೆಗಳಾಗಲೀ ಇದೇ ಮೊದಲಲ್ಲ. ಹಿಂದೆ ತಮಿಳುನಾಡಿನಲ್ಲಿ ಶ್ರೀಮತಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದಾಗ, ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಆಗ, ತಮಿಳುನಾಡಿನ ಚರ್ಚ್ ಸಂಬಂಧಿತ ಸಂಸ್ಥೆಗಳು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದವು. ಅವುಗಳು ಅಲ್ಲಿಗೇ ನಿಲ್ಲದೆ, ತಾವು ನಡೆಸುತ್ತಿರುವ ಶಾಲೆ-ಕಾಲೇಜುಗಳು, ಆಸ್ಪತ್ರೆಗಳು, ಇತ್ಯಾದಿ […]