ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಎಂದರೆ ಹಳೆಯ ಬೋರ್ಡ್ ತೆಗೆದು ಹೊಸ ಬೋರ್ಡ್ ತೂಗಿಹಾಕುವಷ್ಟು ಸರಳ ಕೆಲಸವಲ್ಲ. ಅನುಷ್ಠಾನದಲ್ಲಿ ಎಚ್ಚರ ತಪ್ಪದಿರಲಿ…

ಹಲವು ದಶಕಗಳ ಬಳಿಕ ನಮ್ಮ ದೇಶದಲ್ಲಿ ಸಮಗ್ರ ಸ್ವರೂಪದ ರಾಷ್ಟ್ರೀಯ ಶಿಕ್ಷಣ ನೀತಿಯೊಂದು ರೂಪುಗೊಂಡಿದೆ.ಈ ನೀತಿಯು ಭಾರತದ ಬಹುದಿನಗಳ ಬೇಡಿಕೆಯೂ ಆಗಿತ್ತು. ಈ ಹಿಂದೆ ಸರ್ಕಾರಗಳು ಅಂತಹ ಆಸಕ್ತಿಯನ್ನು ತೋರದೇ ಹೋದ ಕಾರಣದಿಂದ ನೀತಿಯನ್ನು ರೂಪಿಸಲಾಗಿರಲಿಲ್ಲ. ಆದರೆ ಪ್ರಸ್ತುತ ಕೇಂದ್ರ ಸರ್ಕಾರ ಈ ಕುರಿತು ತೋರಿದ ವಿಶೇಷ ಆಸಕ್ತಿಯಿಂದ ಇಂದು ಸಾಕಾರವಾಗಿದೆ. ಶಿಕ್ಷಣ ತಜ್ಞರು ವಿವಿಧ ಸ್ತರಗಳಲ್ಲಿ ಶಿಕ್ಷಣ ರಂಗದ ಎಲ್ಲಾ ಬಾಧ್ಯಸ್ಥರ ಜತೆಗೆ ನಿರಂತರ ಸಂವಹನ, ಮಾಹಿತಿ ವಿನಿಮಯ, ಚರ್ಚೆಗಳನ್ನು ನಡೆಸಿ ತಯಾರಿಸಿದ ಕರಡಿನ ಆಧಾರದ ಮೇಲೆ ದೇಶಾದ್ಯಂತ ನಡೆದ ಚಿಂತನೆಯ ಫಲಸ್ವರೂಪವಾದ ನೀತಿಯನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಈ ಪ್ರಕ್ರಿಯೆಯ ಮುಂದುವರಿದ ಭಾಗವಾಗಿ ರಾಜ್ಯಗಳು ಶಿಕ್ಷಣ ನೀತಿಯ ಅನುಷ್ಠಾನಕ್ಕಾಗಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿವೆ. ಪೂರಕವಾಗಿ ತಜ್ಞರ ಸಮಿತಿಗಳನ್ನು ಸ್ಥಳೀಯ ಮಟ್ಟದಲ್ಲಿ ರಚಿಸಿ ಕಾರ್ಯರೂಪಕ್ಕೆ ತರುವ ಯೋಜನೆಗಳು ಸಿದ್ಧಗೊಳ್ಳುತ್ತಿದೆ. ಕರ್ನಾಟಕ ಸರ್ಕಾರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನ ತರಲಿದೆ ಎಂದು ಉನ್ನತ ಶಿಕ್ಷಣ ಸಚಿವರು ಹೇಳಿಕೆಯನ್ನು ಕೊಟ್ಟಿದ್ದಾರೆ.

ಸಚಿವರ ಈ ಹೇಳಿಕೆ ಪ್ರಕಟವಾಗುತ್ತಿದ್ದಂತೆ ರಾಜ್ಯಾದ್ಯಂತ ಮತ್ತೊಮ್ಮೆ ಶಿಕ್ಷಣ ನೀತಿಯ ಕುರಿತಾಗಿ ಸಾರ್ವಜನಿಕ ಚರ್ಚೆಯೊಂದು ಆರಂಭವಾಗಿದೆ.

ಸರ್ಕಾರ ಬಹಳ ಆಶಾದಾಯಕವಾಗಿ ಈ ನೀತಿಯ ಅನುಷ್ಠಾನದಲ್ಲಿ ಆಸಕ್ತಿಯನ್ನು ವಹಿಸಿರುವುದನ್ನು ಶಿಕ್ಷಣ ಸಂಕುಲ ಅಭಿನಂದಿಸುತ್ತಲೇ ಕೆಲವೊಂದು ಗಂಭೀರ ಸ್ವರೂಪದ ಪ್ರಶ್ನೆಗಳನ್ನು ಕೇಳುತ್ತಿದೆ. ಮುಖ್ಯವಾಗಿ ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಎಂದರೆ ಹಳೆಯ ಬೋರ್ಡ್ ತೆಗೆದು ಹೊಸ ಬೋರ್ಡ್ ತೂಗಿಹಾಕುವಷ್ಟು ಸರಳ ಕೆಲಸವಲ್ಲ. ಅದಕ್ಕೆ ಸಾಕಷ್ಟು ಮೂಲಭೂತ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಒಂದು ವೇಳೆ ಸರ್ಕಾರ ಇಂತಹ ಸಿದ್ಧತೆಗಳನ್ನು ಪೂರ್ಣ ಪ್ರಮಾಣದಲ್ಲಿ ಮಾಡಿಕೊಳ್ಳದೆ ಕಾಲೇಜು ಶಿಕ್ಷಣ ಇಲಾಖೆಗೋ, ವಿಶ್ವವಿದ್ಯಾಲಯಗಳಿಗೋ ಆದೇಶವನ್ನು ಮಾಡಿದ್ದೇ ಆದರೆ ಇಡೀ ಈ ನೀತಿಯ ಹಿಂದಿನ ಪರಿಶ್ರಮ, ಆಶಯಗಳನ್ನು ಮಣ್ಣುಗೂಡಿಸಿದಂತಾಗುತ್ತದೆ. ನಾವೇ ಮೊದಲು ಜಾರಿಗೊಳಿಸಿದ ಕೀರ್ತಿಗೆ ಪಾತ್ರರಾಗುವ ಆಸೆ ತಪ್ಪಲ್ಲ. ಆದರೆ ಅದಕ್ಕಾಗಿ ಮಾಡಿಕೊಂಡ ಪೂರ್ವಭಾವಿ ಸಿದ್ಧತೆಗಳೇನು? ಈಗಾಗಲೇ ಉನ್ನತ ಶಿಕ್ಷಣ ರಂಗವೂ ಸೇರಿದಂತೆ ಇಡೀಯ ಶಿಕ್ಷಣ ವ್ಯವಸ್ಥೆ ಒಂದು ಅಪರಿಹಾರ್ಯವಾದ ಗೊಂದಲದಲ್ಲಿದೆ. ಕೋವಿಡ್ ಕಾರಣದಿಂದ ಅಸ್ತವ್ಯಸ್ತವಾದ ಪಾಠಕ್ರಮಗಳು, ಬದಲಾದ ಪರೀಕ್ಷಾ ಕ್ರಮ, ಮೌಲ್ಯಮಾಪನ ಇವುಗಳು ವಿದ್ಯಾರ್ಥಿಗಳಿಂದ ಹಿಡಿದು ಸಂಬಂಧಿಸಿದ ಎಲ್ಲರನ್ನೂ ಒಂದು ಬಗೆಯ ತಳಮಳಕ್ಕೆ ದೂಡಿದೆ. ಆನ್‍ಲೈನ್ ತರಗತಿಗಳನ್ನು ನಡೆಸಲಾಗಿದೆಯಾದರೂ ಅನೇಕ ಮೂಲಭುತ ಸೌಕರ್ಯಗಳ ಕೊರತೆಯ ಕಾರಣದಿಂದ ಅದೆಷ್ಟು ಪರಿಣಾಮಕಾರಿಯಾಗಿದೆ ಎನ್ನುವುದನ್ನು ತಿಳಿಯಲು ಮತ್ತಷ್ಟು ಸಮಯ ಬೇಕಾಗಿದೆ. ಭೌತಿಕವಾಗಿ ಆಡಳಿತ ವ್ಯವಸ್ಥೆ, ಶಿಕ್ಷಕರು, ವಿದ್ಯಾರ್ಥಿಗಳು ದೂರದೂರವಿರುವ ಇಂತಹ ಸಂದರ್ಭದಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದಲೇ ಈ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ಹೇಳಿಕೆ ಮತ್ತಷ್ಟು ಜನರನ್ನು ಆತಂಕಕ್ಕೊಳಪಡಿಸಿದೆ. ಹೇಳಿಕೆ ಪ್ರಕಟವಾದ ನಂತರ ಸರ್ಕಾರ ವಿಷಯವಾರು ತಜ್ಞರ ಸಮಿತಿಯನ್ನು ರಚಿಸಿ ಸುಮಾರು ಹತ್ತು ದಿನಗಳ ಒಳಗೆ ವರದಿಯನ್ನು ನೀಡುವಂತೆ ಸೂಚಿಸಿದೆ. ಹೀಗಾಗಿ ಈಗ ಈ ವಿಷಯವಾರು ಸಮಿತಿ ತರಾತುರಿಯಲ್ಲಿ ಸಭೆ ನಡೆಸಿ, ವರದಿ ಸಿದ್ಧಪಡಿಸಬೇಕಾಗಿದೆ. ಆ ವರದಿಗೆ ಪೂರಕವಾಗಿ ಮತ್ತೊಮ್ಮೆ ಹೊಸದಾಗಿ ಪಠ್ಯಕ್ರಮಗಳನ್ನು ರಚಿಸುವುದು, ಅವುಗಳನ್ನು ತಜ್ಞರು ಪರೀಲಿಸುವುದು , ಅಂತಿಮವಾಗಿ ವಿದ್ಯಾರ್ಥಿಗಳು ಈ ಪ್ರಕ್ರಿಯೆಯ ಒಳಗೆ ಪ್ರವೇಶ ಪಡೆಯುವಂತಾಗುವ ವ್ಯವಸ್ಥೆಗಳನ್ನು ವಿಶ್ವವಿದ್ಯಾಲಯಗಳು ಮಾಡಬೇಕಾಗುತ್ತದೆ. ವಾಸ್ತವದಲ್ಲಿ ಈ ಪ್ರಕ್ರಿಯೆಗಳು ಗಡಿಬಿಡಿಯಲ್ಲಿ ನಡೆಸಬೇಕಾದುದಲ್ಲ. ಸಾಕಷ್ಟು ಕಾಲಾವಾಕಾಶ ನೀಡದೆ ಸರ್ಕಾರ ಮುಂದುವರಿದದ್ದೇ ಆದರೆ ವಿಶ್ವವಿದ್ಯಾಲಯಗಳಿಂದ ಹಳೆಯ ಪಠ್ಯಗಳೇ ಹೊಸವೇಷದಲ್ಲಿ, ಹೊಸಬಣ್ಣದಲ್ಲಿ ಬರಲಿದೆ. ಆಗ ಏನನ್ನು ಸಾಧಿಸಿದಂತಾಯಿತು? ಹೀಗಾದರೆ ನೀತಿಯ ಅನುಷ್ಠಾನ ಯಶಸ್ವಿಯಾದಂತೆ ಆಗುತ್ತಗದೆಯೆ? ಈ ಪ್ರಶ್ನೆಯನ್ನೊಮ್ಮೆ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳ ಮುಖ್ಯಸ್ಥರು ತಮಗೆ ತಾವೇ ಕೇಳಿಕೊಳ್ಳಬೇಕಾಗಿದೆ.

ಇನ್ನೊಂದೆಡೆ ರಾಷ್ಟ್ರೀಯ ಶಿಕ್ಷಣ ನೀತಿಯ ರಚನೆಯ ಆರಂಭದಿಂದಲೂ ಇದರ ಕುರಿತು ತಪ್ಪು ಅಭಿಪ್ರಾಯಗಳನ್ನು ಮೂಡಿಸುತ್ತಿರುವ, ಅಕಾರಣವಾಗಿ ವಿರೋಧಿಸುತ್ತಿರುವ ಒಂದಷ್ಟು ಗುಂಪುಗಳಿಗೆ ಸರ್ಕಾರದ ಪ್ರಾಯೋಗಿಕ ಅಸಫಲತೆಯೂ ಟೀಕೆಯ ಆಹಾರವಾಗಬಹುದು. ಬಹು ಮುಖ್ಯವಾಗಿ ಈ ನೀತಿಯು ಭಾರತದ ಭವಿಷ್ಯದ ಶಿಕ್ಷಣದ ದಿಕ್ಕನ್ನು ಅಮೂಲಾಗ್ರವಾಗಿ ಬದಲಿಸುವಂತಹದು. ಬ್ರಿಟಿಷರು ಬಿಟ್ಟುಹೋದ ಪಳೆಯುಳಿಕೆಗಳನ್ನು ಕಳೆದು ಭಾರತೀಯತೆಯ ನೆಲೆಗಟ್ಟಿನಲ್ಲಿ ಶಿಕ್ಷಣವನ್ನು ನೀಡುವ ಕನಸಿನದ್ದಾಗಿದೆ. ಈ ಕನಸು ಸಾಕಾರವಾಗಬೇಕಾದರೆ ತಳಮಟ್ಟದಿಂದಲೇ ಸಿದ್ಧತೆಗಳಾಗಬೇಕು. ಸೂಕ್ತ ತರಬೇತಿಗಳಾಗಬೇಕು, ಕಾರ್ಯಾಗಾರಗಳನ್ನು ನಡೆಸಬೇಕು. ಎಷ್ಟು ವಿಶ್ವವಿದ್ಯಾಲಯಗಳು ಈ ಕುರಿತು ತಮ್ಮ ಅಧ್ಯಾಪಕರಿಗೆ ಕಾರ್ಯಾಗಾರಗಳನ್ನು ನಡೆಸಿದೆ? ಹೊಸ ಪಠ್ಯಕ್ರಮಗಳನ್ನು ಕುರಿತು ಎಷ್ಟು ಚಿಂತನೆ ನಡೆದಿದೆ? ವಿಷಯವಾರು ಬೋಧನಾ ಕ್ರಮ ಮತ್ತು ಕಲಿಕಾ ಉದ್ದೇಶಗಳಲ್ಲಿ ಭಿನ್ನತೆಗಳಿರುತ್ತದೆ. ಈ ಭಿನ್ನತೆಗಳಿಗನುಗುಣವಾಗಿ ತರಬೇತಿಗಳು ನಡೆಯಬೇಕಾಗಿದೆ. ಇಲ್ಲವಾದರೆ ಈ ಹಿಂದಿನ ಕ್ರಮಕ್ಕೂ ಹೊಸ ನೀತಿಗೂ ಯಾವ ವ್ಯತ್ಯಾಸಗಳೂ ಇರಲಾರದು.

ರಾಷ್ಟ್ರೀಯ ಶಿಕ್ಷಣ ನೀತಿಯ ಯಶಸ್ಸು ಆಯಾಯ ಹಂತಗಳಲ್ಲಿ ಇದನನ್ನು ಜಾರಿಗೊಳಿಸುವ ವ್ಯವಸ್ಥೆಯ ಮೇಲೆ ಅವಲಂಭಿತವಾಗಿದೆ. ಶಾಲಾ ಹಂತವೇ ಆಗಲಿ, ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ಹಂತವೇ ಆಗಲೀ ಸಮಗ್ರವಾಗಿ ಗ್ರಹಿಸಿಕೊಂಡು ಜಾರಿಗೊಳಿಸಬೇಕು. ಇಂದು ಯಾವುದೋ ತರಾತುರಿಗೆ ಇಡುವ ಒಂದು ತಪ್ಪು ಹೆಜ್ಜೆ ಮತ್ತೆ ದೀರ್ಘಕಾಲದ ಕೆಟ್ಟಪರಿಣಾಮಗಳನ್ನು ಉಂಟು ಮಾಡುವುದರಲ್ಲಿ ಸಂಶಯವಿಲ್ಲ. ಹಾಗಾಗಿ ಜಾರಿಯಾಗುವ ಆರಂಭದಲ್ಲೇ ಕೂಲಂಕಷವಾದ ಮಥನವಾಗಬೇಕು. ಸಾಧ್ಯಾಸಾಧ್ಯತೆಗಳ ಚಿಂತನೆಗಳು ನಡೆಯಬೇಕು. ಇಲ್ಲವಾದರೆ ಇತ್ತೀಚೆಗೆ ಪದವಿ ವಿಭಾಗದಲ್ಲಿ ಕನ್ನಡ ಭಾಷೆಯ ಬೋಧನೆಯನ್ನು ನಾಲ್ಕು ಸೆಮಿಸ್ಟರ್‍ಗಳಿಂದ ಎರಡು ಸೆಮಿಸ್ಟರ್‍ಗಳಿಗೆ ಇಳಿಸಲಾಗುತ್ತದೆ ಎನ್ನುವ ಗೊಂದಲಕಾರಿ ಸುದ್ಧಿಯೊಂದು ಇಡೀ ಶಿಕ್ಷಣ ನೀತಿಯನ್ನೇ ಈ ಗೊಂದಲದ ಜತೆಗೆ ಬೆಸೆದು ಮುಂದೆ ಈ ನೀತಿ ಜಾರಿಯಾದರೆ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ಯಾಗುತ್ತದೆ ಎನ್ನುವ ಸುದ್ದಿಯು ಶಿಕ್ಷಣ ನೀತಿಯ ಕುರಿತಾಗಿ ಉದ್ದೇಶಪೂರ್ವಕವಾಗಿ ನಕಾರಾತ್ಮಕ ಭಾವನೆಯನ್ನು ಮೂಡಿಸಿದಂತಾಗಬಹುದು. ಅಷ್ಟಕ್ಕೂ ಭಾಷಾ ಪಠ್ಯಗಳ ಕಲಿಕೆಯನ್ನು ನಾಲ್ಕು ಸೆಮಿಸ್ಟರ್‍ಗಳಿಂದ ಎರಡು ಸೆಮಿಸ್ಟರ್‍ಗೆ ಇಳಿಸಿದ್ದು ಶಿಕ್ಷಣ ನೀತಿಯಲ್ಲ, ಸರ್ಕಾರವೂ ಅಲ್ಲ. ಸರ್ಕಾರ ರಚಿಸಿದ್ದ ಸಮಿತಿಯೊಂದು ನೀಡಿದ ವರದಿಯಷ್ಟೇ. ಈ ತಪ್ಪು ನಿರ್ಧಾರವನ್ನು ವಿರೋಧಿಸಲೇ ಬೇಕು. ಹಾಗೆಂದು ವಿರೋಧಿಸ ಬೇಕಾದುದು ಶಿಕ್ಷಣ ನೀತಿಯನ್ನಲ್ಲ. ಯಾಕೆಂದರೆ ಇಡೀ ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತೀಯ ಭಾಷೆಗಳಿಗೆ ಶಿಕ್ಷಣ ವ್ಯವಸ್ಥೆಯೊಳಗೆ ಅತಿದೊಡ್ಡ ಅವಕಾಶಗಳನ್ನು ಒದಗಿಸುತ್ತಿದೆ. ಮಾತೃಭಾಷಾ ಶಿಕ್ಷಣದ ಸಾಧ್ಯತೆಯಿಂದ ತೊಡಗಿ ಮಾತೃಭಾಷೆಯಲ್ಲೇ ವೃತ್ತಿಪರ ಶಿಕ್ಷಣ , ಪರಾಮರ್ಶನಾ ಗ್ರಂಥಗಳ ತಯಾರಿಯೂ ಸೇರಿದಂತೆ ದೇಶದ ಯಾವುದೇ ಭಾಗದಲ್ಲಿ ಕನ್ನಡವೂ ಸೇರಿದಂತೆ ಭಾರತೀಯ ಭಾಷೆಗಳನ್ನು ತರಗತಿಯಲ್ಲಿ ಕಲಿಯುವ ವ್ಯವಸ್ಥೆಯ ಅನುಕೂಲನ್ನು ಈ ನೀತಿಯು ಒದಗಿಸಿದೆ. ಹೀಗಿದ್ದರೂ ಕೆಲವು ಪೂರ್ವಾಗ್ರಹ ಪೀಡಿತ ಮನಸ್ಸುಗಳು ಶಿಕ್ಷಣ ನೀತಿಯನ್ನೇ ದುರುದ್ದೇಶದಿಂದ ವಿರೋಧಿಸುತ್ತಿದೆ. ಇಂತಹ ಸಂದರ್ಭದಲ್ಲಿ ರಾಜ್ಯ ಸರ್ಕಾರ ಬಹಳ ಎಚ್ಚರಿಕೆ ಹೆಜ್ಜೆಗಳನ್ನು ಇಡಬೇಕಾಗಿದೆ.

ಸಣ್ಣ ಸಣ್ಣ ಘಟಕಗಳಲ್ಲಿ ಅಂದರೆ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ, ಮತ್ತೆ ವಿಶ್ವವಿದ್ಯಾಲಯ ವ್ಯಾಪ್ತಿಯಿಂದ ಹಲವು ಕಾಲೇಜುಗಳ ಸಂಕುಲ ರೂಪದಲ್ಲಿ , ಅಲ್ಲಿಂದ ಪ್ರತಿಯೊಂದು ಕಾಲೇಜುಗಳಲ್ಲಿ ಈ ಕುರಿತು ಪ್ರಾಯೋಗಿಕ ರೂಪದ ಸಂವಾದ, ಅನುಷ್ಠಾನಕ್ಕೆ ಪೂರಕವಾದ ಕಾರ್ಯಾಗಾರ, ಈ ಕಾರ್ಯಾಗಾರಗಳ ಫಲಸ್ವರೂಪವಾಗಿ ಹೊಸ ಪಠ್ಯಕ್ರಮಗಳು ರಚನೆಯಾಗಬೇಕು. ಆಗ ಮಾತ್ರ ಈ ಪಠ್ಯಗಳು ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯವನ್ನು ಪ್ರತಿಫಲಿಸಲು ಸಾಧ್ಯ. ವಿಶ್ವವಿದ್ಯಾಲಯಗಳ ವ್ಯಾಪ್ತಿಯ ವಿಷಯವಾರು ತಜ್ಞರು ಕೂಡಿ ಈ ಕೆಲಸವನ್ನು ಮಾಡಬೇಕಾಗಿದೆ. ಈ ಕ್ರಿಯೆಯಲ್ಲಿ ಯೋಗ್ಯರ ಯೋಗದಾನ ಸಿಗುವಂತಾಗಬೇಕು.ನಾಮಕಾವಸ್ಥೆಯ ಹಿರಿತನ ಉಳ್ಳವರನ್ನು ಈ ಸಮಿತಿಗಳಿಗೆ ನೇಮಿಸುವ ಬದಲು ವಿಷಯಗಳಿಗೆ ನ್ಯಾಯ ಒದಗಿಸಬಲ್ಲ ಹಿರಿ-ಕಿರಿಯ ಬೇಧವಿಲ್ಲದ ತಜ್ಞರ ಸಮಿತಿಗಳು ರಚನೆಯಾಗಬೇಕು. ಯಾವ ಯಾವ ವಿಷಯಗಳಿಗೆ ಪಠ್ಯಪುಸ್ತಕಗಳು ರಚನೆಯಾಗಬೇಕೋ ಅವುಗಳನ್ನು ಇನ್ನಷ್ಟು ವಿಶೇಷ ಕಾಳಜಿಯಿಂದ ರಚಿಸದೇ ಹೋದರೆ ಮತ್ತೆ ಸಮಾಜವನ್ನು , ದೇಶವನ್ನು ಒಡೆಯುವ ಕ್ಷುಲ್ಲಕ ಮನಸ್ಥಿಯ ಬಾಲಿಶ ವಸ್ತುಗಳನ್ನು ಪಠ್ಯದ ರೂಪದಲ್ಲಿ ವಿದ್ಯಾರ್ಥಿಗಳ ಮೆದುಳಿಗೆ ತುಂಬುವ ಕೆಲಸವನ್ನು ಮುಂದುವರಿಸಬಹುದು. ಶಾಲಾ ಹಂತದಲ್ಲಿ ಈ ನೀತಿಯು ಅನುಷ್ಠಾನಕ್ಕೆ ಬರಬೇಕಾದರೆ ನೂತನ ಪಠ್ಯಪುಸ್ತಕ ರಚನಾ ಸಮಿತಿ ರಚನೆಯಾಗಬೇಕು. ಇದು ಈ ಪ್ರಾಥಮಿಕ ಹಂತದ ಕೆಲಸ.ಬಹುಶಃ ಸರ್ಕಾರ ಇನ್ನೂ ನೂತನ ಪಠ್ಯ ಪುಸ್ತಕ ರಚನಾ ಸಮಿತಿಯನ್ನು ರಚಿಸುವ ಚಿಂತನೆಯನ್ನೂ ನಡೆಸಿದಂತಿಲ್ಲ. ವಿಶ್ವವಿದ್ಯಾಲಯ, ಕಾಲೇಜುಗಳ ಹಂತದಲ್ಲಿ ಪ್ರತಿಯೊಂದು ವಿಷಯಕ್ಕೂ ಪ್ರತ್ಯೇಕ ಪ್ರತ್ಯೇಕವಾಗಿ ಬೋರ್ಡ್ ಆಫ್ ಸ್ಟಡೀಸ್‍ಗಳನ್ನು ರಚಿಸಬೇಕು. ಈ ಪಠ್ಯ ಪುಸ್ತಕ ರಚನಾ ಸಮಿತಿಯಾಗಲೀ, ಬೋರ್ಡ್ ಆಫ್ ಸ್ಟಡೀಸ್ ಆಗಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯಕ್ಕೆ ಅನುಗುಣವಾಗಿ ಪಠ್ಯ ತಯಾರು ಮಾಡಬೇಕಾದರೆ ಹಲವು ಹಂತದ ತರಬೇತಿಗಳು ಬೇಕಾಗುತ್ತದೆ. ಯಾಕೆಂದರೆ ಪ್ರತಿಯೊಂದು ವಿಶ್ವವಿದ್ಯಾಲಗಳೂ, ಪ್ರತಿಯೊಂದು ವಿಷಯಕ್ಕೂ ಬೇರೆ ಬೇರೆ ಬೋರ್ಡ್ ಆಫ್ ಸ್ಟಡೀಸ್ ಹೋಂದಿರುವುದರಿಂದ ಅಷ್ಟೂ ಜನ ಸದಸ್ಯರಿಗೂ ತರಬೇತಿಯಾಗಬೇಡವೇ?

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವ್ಯವಸ್ಥೆಯ ಕೊನೆಯ ಹಂತದ ಶಾಲಾ – ಕಾಲೇಜು- ವಿಶ್ವವಿದ್ಯಾಲಯಗಳ ಬೋಧಕರನ್ನು ತಲುಪಿಸುವುದಕ್ಕಾಗಿ ಸರಿಯಾದ ಸಿದ್ಧತೆಗಳನ್ನು ಮಾಡಿಕೊಳ್ಳದೆ ಕೇವಲ ಜಾರಿಗೊಳಿಸುವ ಉತ್ಸಾಹದಿಂದ ಸತ್ಪರಿಣಾಮಕ್ಕಿಂತ ದುಷ್ಪರಿಣಾಮವೇ ಹೆಚ್ಚಾಗಬಹುದು. ಕೇವಲ ಕಾಲೇಜು-ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ಮಾತ್ರವಲ್ಲ, ಪೂರ್ವಪ್ರಾಥಮಿಕ ಹಂತದ ಕಲಿಕಾ ವ್ಯವಸ್ಥೆಯಿಂದಲೇ ಈ ಅನುಷ್ಠಾನದ ಪ್ರಕ್ರಿಯೆಯನ್ನು ಆರಂಭಿಸಬೆಕು. ಜತೆಗೆ ಶಿಕ್ಷಣ ನೀತಿಯು ಶಿಕ್ಷಣಕ್ಕೆ ಪೂರಕವಾಗಿ ಅನುವಾದವೂ ಸೇರಿದಂತೆ ನಡೆಸಬೇಕಾದ ಚಟುವಟಿಕೆಗಳನ್ನು ಸೂಚಿಸಿದೆ. ಪರಾಮರ್ಶನ ಕೃತಿಗಳ ನಿರ್ಮಾಣದ ಬಗೆಗೆ ಹೇಳಿದೆ.ಅವೆಲ್ಲವೂ ಜಾರಿಯ ಪೂರ್ವದಲ್ಲಿ ನಡೆಯಬೇಕಾದ ಕೆಲಸಗಳು. ಸರ್ಕಾರ ಈ ಕೆಲಸಗಳನ್ನು ಈ ಕೂಡಲೇ ಆರಂಭಿಸಬೇಕು.

ವಿದ್ಯಾರ್ಥಿ ಸಮುದಾಯಕ್ಕೆ ನಾಲ್ಕು ವರ್ಷಗಳ ಪದವಿ ಎಂದರೇನು? ಮೂರನೇ ವರ್ಷದಲ್ಲಿ ಪದವಿಯನ್ನು ಮುಗಿಸಿ ಹೊರ ಹೋಗಬಹುದಾದ ಅವಕಾಶ ಎಂದರೇನು? ಪದವಿಯ ನಡುವೆ ಒಮ್ಮೆ ಹೊರ ಹೋಗಿ ಮತ್ತೆ ವರ್ಷಗಳ ಬಳಿಕವೂ ಮತ್ತೆ ಸೇರಿ ಪದವಿ ಮುಂದುವರಿಸು ಅವಕಾಶ ಹೇಗೆ ಉಪಯುಕ್ತವಾಗುತ್ತದೆ? ಬಹುಶಾಸ್ತ್ರೀಯ ಕಲಿಕೆಗೆ ಇರುವ ಅವಕಾಶಗಳಿಂದ ವಿದ್ಯಾರ್ಥಿಗಳು ತಮ್ಮ ಆಸಕ್ತಿಗೆ ಅನುಸಾರವಾದ ವಿಷಯಗಳನ್ನು ಸೇರಿ ಕಲಿಯುವ ರೀತಿಯ ಪ್ರಯೋಜನವೇನು? ಈ ವಿಷಯಗಳ ನಿರ್ವಹಣೆಯನ್ನು ಕಾಲೇಜುಗಳು, ವಿಶ್ವವಿದ್ಯಾಲಯಗಳು ಹೇಗೆ ಮಾಡುತ್ತದೆ ಎನ್ನುವ ಮಾಹಿತಿಯೇ ಇಲ್ಲದೆ ಇರುವ ಹೊತ್ತಿನಲ್ಲಿ ವಿದ್ಯಾರ್ಥಿಗಳ ಆತಂಕವನ್ನು ಸರ್ಕಾರ ದೂರಮಾಡುವ ನಿಟ್ಟಿನಲ್ಲಿ ಸೂಕ್ತ ಮಾಹಿತಿಯನ್ನು ನೀಡುವ ವ್ಯವಸ್ಥೆಯನ್ನು ಮಾಡಬೇಕಾಗಿದೆ. ಆನ್‍ಲೈನ್ ಕಲಿಕೆಯ ಕಾರಣದಿಂದ ಈಗಾಗಲೇ ಸಾವಿರಾರು ವಿದ್ಯಾರ್ಥಿಗಳು ಕಲಿಕಾ ಪ್ರಕ್ರಿಯೆಯಿಂದಲೇ ದೂರವಾಗಿದ್ದಾರೆ. ಕಾಲೇಜುಗಳಿಗೆ ಸೇರ್ಪಡೆಯೇ ಆಗದೆ ಅನಿವಾರ್ಯವಾದ ದುಡಿಮೆಗೆ ತಳ್ಳಲ್ಪಟ್ಟಿದ್ದಾರೆ. ಇಂತಹ ವಿದ್ಯಾರ್ಥಿಗಳು ಮರಳಿ ಕಾಲೇಜುಗಳ ಕಡೆಗೆ ಬರುವಂತಾಗದಿದ್ದರೆ ದೀರ್ಘಕಾಲದಲ್ಲಿ ದೇಶಕ್ಕೆ ಬಹುದೊಡ್ಡ ನಷ್ಟವಾಗಲಿದೆ. ಲಭ್ಯ ತಂತ್ರಜ್ಞಾನ, ರೇಡಿಯೋ, ದೂರದರ್ಶನ, ಪತ್ರಿಕೆಗಳನ್ನೂ ಸೇರಿದಂತೆ ಎಲ್ಲಾ ಮಾಧ್ಯಮಗಳನ್ನೂ ಬಳಸಿಕೊಂಡು, ಕೆಳಹಂತದ ಶಾಲೆ, ಕಾಲೇಜುಗಳ ಶಿಕ್ಷಕರು, ಅಲ್ಲಿನ ಶಿಕ್ಷಕ-ರಕ್ಷಕ ಸಂಘಗಳೂ ಸೇರಿಕೊಂಡು ವಿದ್ಯಾರ್ಥಿಗಳಿಗೆ ಸೂಕ್ತಮಾಹಿತಿಯನ್ನು ನೀಡುವಂತಾಗಬೇಕು.

ಈ ಎಲ್ಲಾ ಪ್ರಕ್ರಿಯೆಗಳು ಒಂದನ್ನು ಹೊರತುಪಡಿಸಿ ಇನ್ನೊಂದಿಲ್ಲ. ಜತೆಜತೆಗೆ ನಡೆಯಬೇಕಾಗಿದೆ. ಈ ಕಾರಣದಿಂದ ರಾಜ್ಯ ಸರ್ಕಾರ ದೊಡ್ಡ ಪ್ರಮಾಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ಆಶಯ ಮತ್ತು ಅದು ಅನುಷ್ಠಾನಗೊಳ್ಳುವ ಬಗೆಯನ್ನು ವ್ಯಾಪಕವಾದ ಪ್ರಚಾರ ನಡೆಸಬೇಕಾಗಿದೆ.ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶಗಳಲ್ಲಿ ಈ ಕೆಲಸ ದೊಡ್ಡ ಅಭಿಯಾನದ ರೂಪದಲ್ಲಿ ನಡೆಯಬೇಕಾಗಿದೆ. ಆ ಮೂಲಕ ಎಲ್ಲರ ಗೊಂದಲಗಳೂ ಪರಿಹಾರವಾಗಬೇಕು. ಆಗ ಮಾತ್ರ ಶಿಕ್ಷಣ ನೀತಿಯನ್ನು ನಿರೂಪಿಸಿದ ತಜ್ಞರ ಕನಸು ನನಸಾಗಬಹುದು. ಅದಕ್ಕಾಗಿ ವಿನಿಯೋಗಿಸಿದ ಶ್ರಮ ಸಾರ್ಥಕವಾಗುತ್ತದೆ.

ಡಾ.ರೋಹಿಣಾಕ್ಷ ಶಿರ್ಲಾಲು

ಸಹಾಯಕ ಪ್ರಾಧ್ಯಾಪಕರು

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರ್ಗಿ

ಡಾ.ರೋಹಿಣಾಕ್ಷ ಶಿರ್ಲಾಲು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸೇವಾ ಸಪ್ತಾಹ: ಬೆಂಗಳೂರು ಮಹಾನಗರದಲ್ಲಿ ಬಜರಂಗದಳವು 10,000 ಗಿಡಗಳನ್ನು ನೆಡುವ ಗುರಿ

Sun Jun 27 , 2021
ಬೆಂಗಳೂರು: ದಿನಾಂಕ :-23 ಜೂನ್ ನಿಂದ 30 ಜೂನ್ ರ ವರೆಗೆ ವಿಶ್ವ ಹಿಂದೂ ಪರಿಷತ್ – ಬಜರಂಗದಳ ಸೇವಾ ಸಪ್ತಾಹ’ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಕಾರ್ಯಕ್ರಮದಡಿಯಲ್ಲಿ ಬೆಂಗಳೂರು ಮಹಾನಗರದಲ್ಲಿ ಬಜರಂಗದಳವು 10000 ಗಿಡಗಳನ್ನು ನೆಡುವ ಗುರಿಯನ್ನು ಹೊಂದಿದ್ದು ಇಂದು ಸಾಂಕೇತಿಕವಾಗಿ ಯಲಹಂಕ ಕೆರೆಯ ಸುತ್ತ, ಗಿಡಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ ಎಂದು ಬಜರಂಗದಳ ಯಲಹಂಕ ಸಂಯೋಜಕರಾದ ಶ್ರೀ ಶಿವಕುಮಾರ್ ರವರು ವಿಶ್ವ ಸಂವಾದ ಕೇಂದ್ರಕ್ಕೆ ತಿಳಿಸಿದ್ದಾರೆ. […]