ವ್ಯಂಗ್ಯ ಹೀಗಿರಲಿ : ಕಾಲು ತುಳಿಸಿಕೊಂಡವನಿಗೆ ಅದು ಗೊತ್ತಾಗಿರುತ್ತದೆ, ಆದರೆ ಉಳುಕಿರುವುದಿಲ್ಲ!

Cartoon by Sajith Kumar in Deccan Herald. 

ಇಂದು ಸಾಂಸಾರಿಕ ಹಾಗೂ ಸಾಮಾಜಿಕ ಜೀವನದಲ್ಲಿ ವ್ಯಂಗ್ಯ ವೆನ್ನುವುದು ಕಾಣೆಯಾಗುತ್ತಿದೆ. ಇದು ಸಂವೇದನಾಶೀಲತೆ ನಷ್ಟವಾಗುತ್ತಿರುವುದರ ದ್ಯೋತಕ. ವ್ಯಂಗ್ಯವಿದ್ದಲ್ಲಿ ವಿರೋಧಿಯೂ ಮೆಚ್ಚುಗೆ ವ್ಯಕ್ತಪಡಿಸಬೇಕು ಆಗ ಮಾತ್ರ ಆತ ಪ್ರಬುದ್ಧ, ಇಲ್ಲದಿದ್ದರೆ ಇನ್ನೂ ಅರ್ಥಮಾಡಿಕೊಳ್ಳುವುದು ಬಹಳ ಇದೆ ಎಂದರ್ಥ.

ಸಾವರ್ಕರ್ ಜೀವನ ಓದಿದವರಿಗೆ ಅವರ ಮಾತುಗಳು ತೀಕ್ಷ್ಣವಾದ ವ್ಯಂಗ್ಯ ವನ್ನು ಹೊಂದಿರುತ್ತಿದ್ದವು ಎಂದು ತಿಳಿಯುತ್ತದೆ. ದಿವಂಗತ ಜಗನ್ನಾಥರಾವ್ ಜೋಶಿ, ಅಟಲ್ ಜಿ, ಪ್ರಮೋದ್ ಮಹಾಜನ್ ರಂತಹ ನಾಯಕರು ಸಹ ವ್ಯಂಗ್ಯದ ಭಾಷೆಯನ್ನು ಸಮರ್ಥವಾಗಿ ಬಳಸಿದವರೆ. ನರೇಂದ್ರಮೋದಿಯವರಲ್ಲೂ ಅತ್ಯಂತ ಪರಿಣಾಮಕಾರಿಯಾಗಿ ಇದನ್ನು ಬಳಸಿಕೊಳ್ಳುವ ಕಲೆ ಇದೆ.

ಆದರೆ ನೆಹರೂವಿನಿಂದ ರಾಹುಲ್‌ ‌ವರೆಗಿನ ಆ ಕುಟುಂಬಕ್ಕೆ ವ್ಯಂಗ್ಯವನ್ನು ಅರ್ಥಮಾಡಿಕೊಳ್ಳುವ, ಅರಗಿಸಿಕೊಳ್ಳುವ ಸ್ವಭಾವ ಇಲ್ಲ. ಈಗಿನ ಯುವನಾಯಕನಂತೂ ತಾನೂ ಪರಿಣಾಮಕಾರಿಯಾಗಿ ಹಾಸ್ಯಮಾಡಲು ಹೋಗಿ ಸ್ವತಃ ಹಾಸ್ಯದ ವಸ್ತುವಾಗುತ್ತಿದ್ದಾನೆ. ಗಬ್ಬರ್ ಸಿಂಗ್ ಟ್ಯಾಕ್ಸ್, ಬಬ್ಬರ್ ಶೇರ್, ಆಲೂ ಸೋನಾ ಮಿಷನ್ ಇತ್ಯಾದಿ ಹೇಳಿಕೆ ನೋಡಿದರೆ ಗೊತ್ತಾದೀತು. ಒಳಗೆ ಮೊಳಕೆಯ ಬೀಜವಿಲ್ಲದಿದ್ದರೆ ಗಿಡ ಬಂದೀತೆ?

ಇನ್ನು ಕರ್ನಾಟಕ ರಾಜಕಾರಣಿಗಳ ಮಾತೋ ಪಕ್ಷಾತೀತವಾಗಿ ಸಂವೇದನಾಶೀಲತೆಯನ್ನು ಕಳೆದು ಕೊಂಡಿದೆ. ಸಿದ್ಧರಾಮಯ್ಯನವರು ಉಡಾಫೆಯ ನುಡಿಗಳನ್ನೇ ವ್ಯಂಗ್ಯದ ಟೀಕೆ ಎಂದು ತಿಳಿದಂತಿದೆ. ಅವರು ಮಾತನಾಡುವಾಗ ಸುತ್ತಲೂ ಸೇರಿದವರ ಕೇಕೆ, ಚಪ್ಪಾಳೆ ಅವರ ಮಾತಿನ ಹದ ತಪ್ಪಿಸುತ್ತಿದೆ. ದೇಗೌ, ಕುಮಾರ ಸ್ವಾಮಿಗಳು ಹಾಸ್ಯ ಮತ್ತು ವ್ಯಂಗ್ಯದ ಮನೆ ತಲುಪಲು ಕನಿಷ್ಟ ಹತ್ತು ಜನ್ಮ ದೂರವಿದ್ದಾರೆ. ಯಡಿಯೂರಪ್ಪನವರ ಮುಖದಿಂದ ನಗೆಹನಿ ಎಂದಾದರೂ ಸಿಡಿದೇತೆ?

ಆದರೆ ಕನ್ನಡ ಸಾಹಿತ್ಯದಲ್ಲಿ ಸರ್ವಜ್ಞರಿಂದ ದಿನಕರ ದೇಸಾಯಿಯವರೆಗೆ ನಮ್ಮ ಚುಟುಕು ಪ್ರವೀಣರು ಇದನ್ನು ಪರಿಣಾಮಕಾರಿಯಾಗಿ ಬಳಸಿದವರು. ನನ್ನ ಬಾಲ್ಯದಲ್ಲಿ ಪಾವೆಂರ ಲಾಂಗೂಲಾಚಾರ್ಯ, ಟೆಯೆಸ್ಸಾರ್ ಅವರ ಛೂಬಾಣ, ಹಲಪತ್ರಿಕೆಗಳ ಪುರವಣಿಗಳಲ್ಲಿ ಅಥವಾ ಸಂಪಾದಕೀಯ ಪುಟಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ವಿಡಂಬನೆಗಳು ಬಹು ಮೊನಚಿನದಾಗಿರುತ್ತಿದ್ದವು. ಆದರೆ ಈಗ ಅವು ಕಾಣೆಯಾಗಿವೆ.

ಈಗಿನ ಹಲ ವ್ಯಂಗ್ಯಚಿತ್ರಕಾರರೂ ಸಹ ರೇಖೆಗಳ ಮೇಲೆ ಹಿಡಿತವಿದೆಯೇ ಹೊರತು ವ್ಯಂಗ್ಯವೆಂಬ ರುಚಿಯನ್ನು ಅರಿತವರಲ್ಲ ಎನಿಸುವಷ್ಟು ನೇರ ವಾಕ್ಯಗಳನ್ನುಳ್ಳ ಚಿತ್ರರಚಿಸುತ್ತಿದ್ದಾರೆ. ಹಿಂದೆ ದಿನಪತ್ರಿಕೆಯ ಮುಖಪುಟದಲ್ಲಿ ದೊಡ್ಡವ್ಯಂಗ್ಯಚಿತ್ರ ಖಾಯಂ ಆಗಿರುತ್ತಿತ್ತು, ಈಗ ಬರೇ ಪೋಟೋಗಳು ತುಂಬಿ ರಸಹೀನವಾಗಿದೆ.

ಕನ್ನಡವೂ ಸೇರಿದಂತೆ ಭಾರತೀಯ ಚಲನಚಿತ್ರಗಳಲ್ಲೂ ಕೆಲವರ್ಗ, ಕಸುಬುಗಳನ್ನು ಹಾಸ್ಯ ಮಾಡಿದ್ದಿದೆ ಆದರೆ ಅದು ಈಗಿನಂತೆ ತೀರಾ ಒರಟಾಗಿ, ಕ್ರೂರವಾಗಿ ಪಾತ್ರವನ್ನು ನಡೆಸಿಕೊಂಡು ಅದೇ ಹಾಸ್ಯ ಎನ್ನುವಂತಹದ್ದಲ್ಲ. ಚಲನ ಚಿತ್ರವೊಂದರಲ್ಲಿ ವಿಮಾಏಜೆಂಟ್ ಮಾತನಾಡಲು ಶುರು ಮಾಡುತ್ತಿದ್ದಂತೆ ಆತನ ಧ್ವನಿಗೆ ಬದಲಾಗಿ ಗರಗಸದ ಧ್ವನಿಯನ್ನು ಹಾಕಿದ ದೃಶ್ಯ ವಾಸ್ತವದ ಹಾಸ್ಯ ಚಿತ್ರಣವೇ ಆದರೂ ಅತಿಯಲ್ಲ, ಬಹುಪಾಲು ಪಾಲಿಸಿದಾರರ ಅನುಭವ.

ನಾನೂ ಕೆಲವೊಮ್ಮೆ ಅಷ್ಟೋ ಇಷ್ಟೋ ವ್ಯಂಗ್ಯದ ಗಂಧವುಳ್ಳ ಪೋಸ್ಟ್, ಕಾಮೆಂಟುಗಳನ್ನು ಹಾಕಿದಾಗ ಅದರ ಪದಶಃ ಅರ್ಥದ ಮೇಲೆ ಪ್ರತಿಕ್ರಿಯಿಸುವರನ್ನು ಕಂಡಾಗ ಅಯ್ಯೋ ಎನಿಸುತ್ತದೆ. ಇನ್ನು ಅಂತಹವರು ಮೆಸೆಂಜರ್ ನಲ್ಲಿ ಕಳಿಸುವ ಮೆಸೇಜುಗಳು ದೇವರಿಗೇ ಪ್ರೀತಿ.

ವ್ಯಂಗ್ಯವೆಂದರೆ ಲತ್ತೆ ಕೊಡುವ ಕತ್ತೆ ಎಂದು ಶಿವರಾಮ ಕಾರಂತರು ಬಣ್ಣಿಸಿದ್ದಾರೆ. ಆತ ಒದೆಸಿಕೊಂಡದ್ದು ಹೇಳುವಂತಿಲ್ಲ, ಬಿಡುವಂತಿಲ್ಲ. ಅದು ಮತ್ತೊಬ್ಬರ ನೇರ ಅಣಕಿಸುವುದಲ್ಲ, ಆದರೆ ತಿವಿತ ಅರಿವಿಗೆ ಬರುತ್ತದೆ. ಕಾಲು ತುಳಿಸಿಕೊಂಡವನಿಗೆ ಅದು ಗೊತ್ತಾಗಿರುತ್ತದೆ ಆದರೆ ಉಳುಕಿರುವುದಿಲ್ಲ. ಸರಿಯಾದ ಪ್ರಹಾರವೇ ಆಗಿರುತ್ತದೆ ಆದರೆ ಬೊಬ್ಬಿಡುವಷ್ಟು ಪೆಟ್ಟಾಗಿರುವುದಿಲ್ಲ. ಮೇಲೆ ಶಾಲು ಒಳಗೇನೋ ಹಾಕಿಸಿಕೊಂಡವನಿಗೇ ಗೊತ್ತು.

ಸತಿಪತಿಗಳಲ್ಲಿಯಂತೂ ಒಬ್ಬರ ವ್ಯಂಗ್ಯ ಮತ್ತೊಬ್ಬರಿಗೆ ಅರ್ಥವಾಗದಿದ್ದರೆ ಪ್ರತಿನಿತ್ಯ ಮನೆಯಲ್ಲಿ ತಿಥಿ. ಹುಟ್ಟು ಸ್ವಭಾವ ಬದಲಾಗುವುದು ಕಷ್ಟ. ಮನಸಿನಲ್ಲಿ ತೋಚಿದ್ದನ್ನು ಹೇಳದೇ ಬಾಯ್ಮುಚ್ಚಿಕೊಂಡಿರಲು ಸಾಧ್ಯವೇ ಇಲ್ಲ. ಉಕ್ಕಿ ಬಂದ ವ್ಯಂಗ್ಯದ ಮಾತನ್ನು ಬಾಯ್ಬಿಟ್ಟು ಹೇಳದಿದ್ದರೆ ತಿಂದನ್ನ ಜೀರ್ಣವಾಗದು. ಆದರೆ ಮಾತಿನ ಒಳಚಾಟಿ ಸಂಗಾತಿಗೆ ಅರ್ಥವಾಗದಿದ್ದರೆ ನಿತ್ಯ ಸಂಗ್ರಾಮವೇ. ನನ್ನ ಸಾಧಾರಣ ಮಾತಿಗೆ ಇಷ್ಟು ವಿಪರೀತ ಪ್ರತಿಕ್ರಿಯೆ ಏಕೆ ನಾನೇನು ಅಂತಹ ತಪ್ಪು ಮಾತು ಹೇಳಿದೆ ಎಂದೇ ವ್ಯಂಗ್ಯ ಜೀವಿ ಪೇಚಾಡಬೇಕಾಗುತ್ತದೆ.

ಒಂದುವೇಳೆ ದಂಪತಿಗಳಲ್ಲಿ ಒಬ್ಬರ ವ್ಯಂಗ್ಯ ಮತ್ತೊಬ್ಬರಿಗೆ ಅರ್ಥವಾಗಿ ಪ್ರತ್ಯಸ್ತ್ರಗಳು ಬಂದರೆ ಅಡ್ಡಿಯಿಲ್ಲ, ಹಿತಮಿತವಾಗಿ ಮಾತಿನ ಕದನ ನಡೆಸುತ್ತಾ ಜೀವನವನ್ನು ರಸಮಯವಾಗಿ ಸಾಗಿಸಿಬಿಡಬಹುದು.

ಸಂತೋಷ್ ಜಿ.ಆರ್.

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಶ್ರೀಕೃ​ಷ್ಣ​ದೇ​ವ​ರಾ​ಯ ನಿಧನವಾದ ದಿನವನ್ನು ಸ್ಪಷ್ಟ​ವಾಗಿ ತಿಳಿ​ಸು​ವ ಶಾಸನ ತುಮಕೂರಿನಲ್ಲಿ ಪತ್ತೆ

Wed Mar 3 , 2021
ಕರ್ನಾಟಕದ ಹೆಮ್ಮೆಯ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯನ ಕಾಲವಾದ ದಿನದ ಕುರಿತು ಸ್ಪಷ್ಟವಾದ ಉಲ್ಲೇಖವಿರುವ ಶಾಸನವೊಂದು ತುಮಕೂರು ಸಮೀಪದ ಹೊನ್ನೇನಹಳ್ಳಿಯಲ್ಲಿ ಶಾಸನವೊಂದು ಪತ್ತೆಯಾಗಿದೆ. ಈ ಮೂಲಕ ಈವರೆಗೆ ಶ್ರೀಕೃಷ್ಣದೇವರಾಯನ ಕಾಲಮಾನದ ಕುರಿತ ಅಸ್ಪಷ್ಟತೆ ದೂರವಾಗಿದೆ. ಈ ಶಾಸನದಲ್ಲಿ ಕ್ರಿಸ್ತಶಕ 1529ರ ಅಕ್ಟೋಬರ್‌ 17ರಂದು ಶ್ರೀಕೃಷ್ಣದೇವರಾಯ ಕಾಲ​ವಾ​ದರು ಎಂಬ ಉಲ್ಲೇಖವಿದೆ. ಕ್ರಿಸ್ತ ಶಕ 1336ರಲ್ಲಿ ಹಕ್ಕ, ಬುಕ್ಕರಿಂದ ಆರಂಭವಾದ ವಿಜಯನಗರ ಸಾಮ್ರಾಜ್ಯದ ಶ್ರೀಕೃಷ್ಣ ದೇವರಾಯನ ಸಾವಿನ ಕುರಿತಾದ ನಿಖರತೆ ಈವರೆಗೂ ಇತಿಹಾಸಕಾರರಿಗೆ ಲಭ್ಯವಾಗಿರಲಿಲ್ಲ. […]