ಶಿವಾಜಿ ಮತ್ತು ಡಾ.ಜಿ ನಡೆದ ದಾರಿ ಗುರಿ ಹಾಗೂ ಕಾರ್ಯಶೈಲಿಯಲ್ಲಿ ಸಾಮ್ಯತೆ ಇತ್ತೇ?

ಶಿವಾಜಿ ಮಹಾರಾಜರ ಜನನ ಹಾಗೂ ಅವರು ಶೂನ್ಯದಿಂದ ಪ್ರಾರಂಭಿಸಿ ಆಕ್ರಮಣಕಾರಿಗಳ ಅಹಂಕಾರಕ್ಕೆ ಕೊಳ್ಳಿಯಿಟ್ಟು ಹಿಂದವಿ ಸ್ವರಾಜ್ಯ ವನ್ನು ಕಟ್ಟಿ ಬೆಳೆಸಿದ ರೀತಿಯನ್ನು ಇತಿಹಾಸಕಾರರು ‘ಯುಗಾವತಾರ’ ಎಂದೇ ದಾಖಲಿಸಿದರು. ಅವರ ಕಾಲಾನಂತರ ಸುಮಾರು ಇನ್ನೂರ ಹತ್ತು ವರ್ಷಗಳ ನಂತರ ಜನಿಸಿದ ಡಾಕ್ಟರ್ ಕೇಶವ ಬಲಿರಾಮ ಹೆಡಗೆವಾರ್, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಸ್ಥಾಪಕರು. ಇವರನ್ನು ‘ಯುಗಪುರುಷ’ ಅಂತ ಕರೆದರು. ಈ ಇಬ್ಬರು ಮಹಾಪುರುಷರು ನಡೆದ ದಾರಿ, ಅವರಿಬ್ಬರ ಗುರಿ ಮತ್ತು ಕಾರ್ಯಶೈಲಿ ಇವುಗಳಲ್ಲಿ ಸಾಮ್ಯತೆಯಿತ್ತೇ?

ಗುಲಾಮಗಿರಿಗೆ ತಲೆಬಾಗಲಿಲ್ಲ

ಆದಿಲ್ ಶಾಹಿ ಆಸ್ಥಾನ. ಅಲ್ಲಿಗೆ ತಂದೆ ಶಹಾಜಿ ಜೊತೆ ಬಂದ ಪುಟ್ಟ ಹುಡುಗ ಶಿವಾಜಿ. ಪದ್ಧತಿಯಂತೆ ಸುಲ್ತಾನನಿಗೆ ನಡುಬಗ್ಗಿಸಿ ಮುಜುರೆ ಸಲ್ಲಿಸಬೇಕು. ಶಹಾಜಿ ಮುಜುರೆಯನ್ನು ಸಲ್ಲಿಸಿ ಮಗನಿಗೆ ಅದನ್ನು ಅನುಕರಿಸುವಂತೆ ಹೇಳುತ್ತಾರೆ. ಹುಡುಗ ಶಿವಾಜಿ ಆಶ್ಚರ್ಯದಿಂದ ತಂದೆಯನ್ನು ಪ್ರಶ್ನೆ ಮಾಡುತ್ತಾನೆ “ಮುಜುರೆ ಸಲ್ಲಿಸಬೇಕೇ? ಈ ಆಕ್ರಮಣಕಾರಿಗೆ? ಎಲ್ಲಿಂದಲೋ ಬಂದು ನಮ್ಮವರನೆಲ್ಲ ಗುಲಾಮರಂತೆ ನೋಡಿಕೊಳ್ಳುತ್ತಿರುವ ಈತನಿಗೆ ಮುಜುರೆ ಸಲ್ಲಿಸಬೇಕೆ ? ಸಾಧ್ಯವಿಲ್ಲ ಅಪ್ಪಾಜಿ ಎಂದ. ಸುಲ್ತಾನನಿಗೆ ತಲೆಬಾಗದ ಆ ಪುಟ್ಟ ಹುಡುಗನನ್ನು ಕಂಡು ಇಡೀ ಆದಿಲ್ ಶಾಹಿಯ ಆಸ್ಥಾನ ಬೆಕ್ಕಸ ಬೆರಗಾಗಿತ್ತು.ವಿಕ್ಟೋರಿಯಾ ರಾಣಿಯ ರಾಜ್ಯಾರೋಹಣದ ವಜ್ರಮಹೋತ್ಸವ. ದೇಶದ ಎಲ್ಲಾ ಶಾಲೆಯ ಮಕ್ಕಳಿಗೆ ಅವತ್ತು ಸಿಹಿಯನ್ನ ಹಂಚಿದ್ದರು. ಕೇಶವನಿದ್ದ ಶಾಲೆಯಲ್ಲೂ ಎಲ್ಲಾ ಮಕ್ಕಳ ಕೈಗೂ ಲಾಡು ಬಂದಿತ್ತು. ಉಳಿದೆಲ್ಲ ಮಕ್ಕಳು ಬಾಯಲ್ಲಿ ನೀರೂರಿಸಿಕೊಂಡು ಆಸೆಯಿಂದ ಆ ಸಿಹಿಯನ್ನ ತಿನ್ನುತ್ತಿದ್ದರೆ ಕೇಶವನಿಗೆ ಮಾತ್ರ ಆ ಮಿಠಾಯಿಯಲ್ಲಿ ದಾಸ್ಯದ ವಿಷ ಕಂಡಿತ್ತು. ” ನಾನು ಈ ಸಿಹಿಯನ್ನು ತಿಂದ್ರೆ ವಿಕ್ಟೋರಿಯಾ ರಾಣಿಯ ಗುಲಾಮಗಿರಿಯನ್ನು ಸ್ವೀಕಾರ ಮಾಡಿದಂತೆ ಖಂಡಿತವಾಗಿಯೂ ನಾನಿದನ್ನ ತಿನ್ನೋದಿಲ್ಲ” ಅಂತಂದು ಅದನ್ನು ಚರಂಡಿಗೆ ಎಸೆಯುತ್ತಾನೆ. ಸಿಹಿಗೆ ಆಸೆಪಡುವ ವಯಸ್ಸಿನಲ್ಲಿ ಆತ ಆ ಸಿಹಿಯಲ್ಲಿ ದಾಸ್ಯದ ನಂಜನ್ನು ಕಂಡಿದ್ದ. ಕೇಶವ ಬಲಿರಾಮ್ ಹೆಡಗೇವಾರ್ ವಿದ್ಯಾಭ್ಯಾಸಕೆಂದು

ಮುಂಬಯಿಗೆ ಹೋದವರು ರಜೆಯಲ್ಲಿ ವಾಪಾಸ್ ನಾಗಪುರಕ್ಕೆ ಬರ್ತಾರೆ. ತನ್ನ ಗೆಳೆಯರಾದ ಗೋವಿಂದರಾವ್ ಅವಧೆ ಹಾಗೂ ಯಾದವ ರಾವ್ ಅಢೆ ಅವರ ಜೊತೆ ಸಿವಿಲಿಯನ್ ರಸ್ತೆಯಲ್ಲಿ ನಡೆಯುತ್ತಿದ್ದಾಗ ಎದುರು ಬ್ರಿಟಿಷ್ ಜಿಲ್ಲಾಧಿಕಾರಿ ಬರುತ್ತಿರುವುದನ್ನು ಕಂಡು ಗೆಳೆಯ ಕೇಶವನಿಗೆ ಹೇಳುತ್ತಾನೆ. “ಬ್ರಿಟಿಷ್ ಜಿಲ್ಲಾಧಿಕಾರಿ ಬರ್ತಾ ಇದಾನೆ. ನಾವು ದಾರಿಯಿಂದ ಪಕ್ಕಕ್ಕೆ ಸರಿದು ನಿಂತು ಅವನಿಗೆ ಸೆಲ್ಯೂಟ್ ಹೊಡೆಯಬೇಕು.” ಅಂದ. ಆದರೆ ಕೇಶವ ಮಾತ್ರ ಅದಾವುದನ್ನೂ ಕಿವಿಗೆಹಾಕಿಕೊಳ್ಳದೆ ಠೀವಿಯಿಂದ ವೇಗವಾಗಿ ಜಿಲ್ಲಾಧಿಕಾರಿಯ ಮುಂದೆ ನಡೆದು ಬಂದ. ಕೇಶವ ಬರುತ್ತಿರುವ ವೇಗವನ್ನು ಕಂಡು ಸ್ವತಃ ಜಿಲ್ಲಾಧಿಕಾರಿಯೇ ಪಕ್ಕಕ್ಕೆ ಸರಿದು ಹೋದ. ಕೆಂಡಾಮಂಡಲವಾದ ಆತ “ನಿನಗೆ ಇಲ್ಲಿನ ಪದ್ದತಿ ಗೊತ್ತಿಲ್ವೆ? ಪಕ್ಕಕ್ಕೆ ಸರಿದು ನಿಂತು ನನಗೆ ಸೆಲ್ಯೂಟ್ ಹೊಡೆಯಬೇಕು” ಅಂದ . ಆಗ ಕೇಶವ “ನಾನು ಈ ಪ್ರಾಂತ್ಯದ ರಾಜಧಾನಿಯಿಂದ ಬಂದಿದ್ದೆನೆ ಅಲ್ಲಿ ಈರೀತಿಯ ಯಾವುದೇ ಪದ್ದತಿಗಳಿಲ್ಲ. ಅಲ್ಲದೆ ನೀನು ಯಾರು ಅನ್ನೋದೇ ನನಗೆ ಗೊತ್ತಿಲ್ಲ. ಅಪರಿಚಿತರಿಗೆ ನಾನ್ಯಾಕೆ ಸೆಲ್ಯೂಟ್ ಹೊಡೆಯಬೇಕು?” ಅಂತಂದು ಮತ್ತದೇ ಠೀವಿಯಲ್ಲಿ ಹಾಗೆ ನಡೆದು ಹೋಗ್ತಾರೆ ಡಾ.ಜಿ. ಏಳನೆಯ ಎಡ್ವರ್ಡ್ ಅವರ ರಾಜ್ಯಾರೋಹಣದ ಸಂದರ್ಭ ಗುಲಾಮ ರಾಷ್ಟ್ರ ಭಾರತದ ಮೇಲೆ ತಮ್ಮ ಆಳ್ವಿಕೆಯ ದರ್ಪದ ಮುದ್ರೆ ಬಲವಾಗಿ ಒತ್ತಬೇಕೆಂದು ಆಂಗ್ಲ ಸರಕಾರದ ಭಾರಿ ಪ್ರಯತ್ನ. ಅದಕ್ಕಾಗಿ ನಾಗಪುರದ ಎಂಪ್ರೆಸ್ ಮಿಲ್ಸ್ ಗಿರಣಿ ಮಾಲೀಕರಿಂದ ದೀಪಾವಳಿಯಂಥ ಹಬ್ಬದ ಏರ್ಪಾಡು . ರಾಜ್ಯಾರೋಹಣದಂದು ರಾತ್ರಿ ಕಣ್ಮನ ಸೆಳೆಯುವಂತಹ ಬಿರುಸು ಬಾಣಗಳ ಕಾರ್ಯಕ್ರಮ. ಕೇಶವನಿಗೆ ಆಗ ಹನ್ನೆರಡರ ವಯಸ್ಸು. ಆತನ ಒಡನಾಡಿಗಳೆಲ್ಲ ಅಂದು ರಾತ್ರಿಯ ಕಾರ್ಯಕ್ರಮ ಕಾಣಲು ತುಂಬ ತವಕದಿಂದ ಗುಂಪುಗೂಡಿ ಹೊರಟಿದ್ದರು. ಕೇಶವನ ಮನೆ ಅಲ್ಲಿಗೆ ಸಮೀಪವೇ, ಆದರೆ ಆತ ಪೂರಾ ನಿರಾಸಕ್ತ . ಮನೆಯಿಂದ ಹೊರಗೆ ಕಾಲಿಡಲಿಲ್ಲ. “ವಿದೇಶಿ ರಾಜನ ರಾಜ್ಯಾರೋಹಣ ನಾವು ಆಚರಿಸುವುದೇ ಛೇ..ತೀರಾ ನಾಚಿಕೆಗೇಡು. ನಾನಂತೂ ಬರಲಾರೆ” ಎಂದು ರಾತ್ರಿ ಮನೆಯಲ್ಲೇ ಉಳಿದ. ದೇಶಭಕ್ತಿ ಎನ್ನುವುದು ಕೇಶವನಿಗೆ ಹುಟ್ಟಿನಿಂದಲೇ ಬೆಳೆದು ಬಂದ ಗುಣ.

ಶೂನ್ಯದಿಂದ ಅಸಾಮಾನ್ಯ ಸಾಧನೆ

ಶೂನ್ಯದಿಂದ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯ ವನ್ನು ಕಟ್ಟಿದರು, ಅನ್ನುವ ಸಂಗತಿಯನ್ನ ಓದಿದ್ದೇವೆ. ಶಿವಾಜಿಗೆ ಆರಂಭದಲ್ಲಿ ಸಮಾಜದ ಜನ ಬೆಂಬಲ ಕೊಡಲಿಲ್ಲ. ಯಾವುದೇ ವ್ಯಕ್ತಿಯ ಶಕ್ತಿ ಸಾಮರ್ಥ್ಯಗಳ ಅರಿವು ಆಗುವವರೆಗೆ ಯಾರೂ ಆತನಿಗೆ ಬೆಂಬಲವನ್ನು ಕೊಡೋದಿಲ್ಲ. ಇದು ಆವತ್ತಿನ ಕಾಲಕ್ಕೂ, ಇವತ್ತಿಗೂ ಮತ್ತು ಮುಂದೆಯೂ ಮುಂದುವರಿಯುವ ಮಾನಸಿಕತೆ.

ಶಿವಾಜಿ ಮಹಾರಾಜರು ನಾಡಿನಲ್ಲಿ ಬೆಂಬಲ ಸಿಗಲಿಲ್ಲ ಅನ್ನುವ ಕಾರಣಕ್ಕೆ ವಿಚಲಿತರಾಗದೆ ಕಾಡಿಗೆ ಹೋಗಿ ಆ ಕಾಡಿನ ಮಕ್ಕಳು ಮಾವಳಿ ಜನಾಂಗದ ಮಕ್ಕಳಿಗೆ ಸಂಸ್ಕಾರ ನೀಡಿದರು. ತನ್ನ ಹಿಂದವೀ ಸ್ವರಾಜ್ಯದ ಸೇನಾಪತಿಗಳನ್ನು ಆ ಮಾವಳಿಗಳಲ್ಲಿ ಶಿವಾಜಿ ಕಾಣುತ್ತಾರೆ ಮತ್ತು ಅದರ ಪರಿಣಾಮವಾದ ಹಿಂದವಿ ಸ್ವರಾಜ್ಯದ ಯಶಸ್ಸಿನ ಭವ್ಯ ಇತಿಹಾಸ ನಮ್ಮ ಕಣ್ಣಮುಂದೆಯೇ ಇದೆ.ಭಾರತಕ್ಕೆ ಸ್ವಾತಂತ್ರ ಸಿಗುವುದು ಖಂಡಿತ, ಆದರೆ ಸಿಕ್ಕ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವುದಕ್ಕೆ ಈ ಮಣ್ಣಿನ ಸಂಸ್ಕೃತಿ ಪರಂಪರೆಗಳ ಬಗ್ಗೆ ಹೆಮ್ಮೆ, ಗೌರವ ಇರುವ ವ್ಯಕ್ತಿಗಳ ಸದೃಢ ಸಂಘಟನೆಯೊಂದರ ಅವಶ್ಯಕತೆಯನ್ನು ಮನಗಂಡ ಡಾಕ್ಟರ್’ಜಿ, ಸಂಘಟನೆ ಕಟ್ಟುವ ಕಾಯಕಕ್ಕೆ ಮುನ್ನುಡಿಯಿಟ್ಟರು. ಅವರ ಬಳಿ ಆಗ ವೈದ್ಯ ಪದವಿ ಇತ್ತು ಅದನ್ನ ಪಕ್ಕಕ್ಕಿಟ್ಟು ಶಾಖೆಯಲ್ಲಿ ಮಕ್ಕಳ ಜೊತೆ ಆಟ ಆಡಲು ಪ್ರಾರಂಭಿಸಿದರು. ಇವರನ್ನು ನೋಡಿದ ಜನ ‘ಹುಚ್ಚ’ ಅಂದರು. ಹೆಡ್ ಆಫ್ ದಿ ಗವಾರ್ ಅಂದರು. ಡಾ॥ಜಿ ವಿಚಲಿತರಾಗಲಿಲ್ಲ. ತಮ್ಮ ಗುರಿ ಮತ್ತು ದಾರಿ ಅವರಿಗೆ ಸ್ಪಷ್ಟವಾಗಿತ್ತು. ಸಂಘವನ್ನು ಕಟ್ಟಿ ಬೆಳೆಸಿದರು ಆ ಸಂಘ ಸ್ಥಾನದಲ್ಲಿ ಬೆಳೆದ ಅನೇಕ ವ್ಯಕ್ತಿಗಳು ಇಂದು ಇಡೀ ಜಗತ್ತಿಗೆ ಮಾರ್ಗದರ್ಶನ ಮಾಡುವ ಎತ್ತರಕ್ಕೇರಿದ್ದಾರೆ ಅಂದರೆ ಅದು ಡಾ॥ಜಿಯವರ ಪರಿಶ್ರಮದ ಫಲ.

ಜಾತೀಯ ಸಾಮರಸ್ಯದ ಹರಿಕಾರರು

ಕಾಡಿನ ಮಾವಳಿಗಳ ಜತೆ ವಿಶ್ವಾಸ ಗಳಿಸುವುದು ಕಷ್ಟಸಾಧ್ಯ ಮನಪೂರ್ವಕವಾಗಿ ಅವರೊಂದಿಗೆ ಬೆರೆತರೆ ಮಾತ್ರ ಸಾಧ್ಯ. ಶಿವಾಜಿ ಮಹಾರಾಜರು, ತಾನು, ತನ್ನ ಅಂತಸ್ತು, ತನ್ನ ಕುಲ ಇವೆಲ್ಲವನ್ನೂ ಮರೆತು ಆ ಮಾವಳಿ ವೀರರ ಒಡನಾಟದಲ್ಲಿದ್ದರು. ಅವರಲ್ಲಿದ್ದ ಕೀಳರಿಮೆಯನ್ನು ಹೋಗಲಾಡಿಸಿ ಧೈರ್ಯ ಸಾಹಸಗಳನ್ನು ತುಂಬಿದ ಕಾರಣದಿಂದ ತಾನಾಜಿಯಂತಹ ಅನೇಕ ಮಾವಳಿ ವೀರರು ಅಲ್ಲಿ ಎದ್ದು ನಿಂತರು.ಜಾತಿಯ ಸಾಮರಸ್ಯ ಅಸ್ಪೃಶ್ಯತೆ ನಿವಾರಣೆ ವಿಚಾರದಲ್ಲಿ ಶಿವಾಜಿ ಮಹಾರಾಜರು ಮೇಲ್ಪಂಕ್ತಿಯಾಗುತ್ತಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಂಘಸ್ಥಾನ ಆ ಸಾಮರಸ್ಯಕ್ಕೆ ಒಂದು ಉಚ್ಚ ಉದಾಹರಣೆ. ಸಂಘಸ್ಥಾನದಲ್ಲಿ ಎಲ್ಲರೂ ಸಮಾನರು ಮಾತ್ರವಲ್ಲ ಕೀಳರಿಮೆಯಿಂದ ಬೇಯುತ್ತಿದ್ದವರ ಭುಜದ ಮೇಲೆ ಕೈಯಿಟ್ಟು ನಿನ್ನಲ್ಲೂ ಶಕ್ತಿಯಿದೆ ಎಂದು ಹೆಜ್ಜೆಹೆಜ್ಜೆಗೆ ಧೈರ್ಯ ಹುಮ್ಮಸ್ಸು ತುಂಬುವ ಕಾರಣದಿಂದ ಒಬ್ಬ ವ್ಯಕ್ತಿ ಎಷ್ಟು ಎತ್ತರಕ್ಕೆ ಬೆಳೆಯಬಹುದು ಅನ್ನೋದಕ್ಕೆ ಇವತ್ತಿನ ನಮ್ಮ ರಾಷ್ಟ್ರಪತಿಯವರೂ ಒಂದು ಉತ್ತಮ ಉದಾಹರಣೆ.

ಗಾವೋ ವಿಶ್ವಸ್ಯ ಮಾತರಃ

ಶಿವಾಜಿ ಮಹಾರಾಜರು ವಿಜಾಪುರಕ್ಕೆ ಬಂದಿದ್ದ ಸಮಯದಲ್ಲಿ ವ್ಯಕ್ತಿಯೊಬ್ಬ ಗೋವು ಕಡಿಯಲು ಮುಂದಾಗುತ್ತಿರುವುದನ್ನು ನೋಡಿ, ತಕ್ಷಣಕ್ಕೆ ಕುದುರೆಯಿಂದ ಇಳಿದು ಆ ವ್ಯಕ್ತಿಯ ಕೈಯನ್ನೇ ಕಡಿದಂತಹ ಉದಾಹರಣೆ ನಮ್ಮೆಲ್ಲರಿಗೂ ತಿಳಿದೇ ಇದೆ. ಡಾಕ್ಟರ್ ಜೀಯವರ ಜೀವನದಲ್ಲೂ ಇಂಥದೇ ಒಂದು ಘಟನೆ. ಜಂಗಲ್ ಸತ್ಯಾಗ್ರಹಕ್ಕೆಂದು ಯವತಮಾಳಕ್ಕೆ ಹೋಗಿದ್ದರು ಡಾಕ್ಟರ್ ಜಿ. ಅಲ್ಲಿ ಪುಸದ್ ಅನ್ನುವ ಗ್ರಾಮ.. ನದಿಯಲ್ಲಿ ಸ್ನಾನ ಮುಗಿಸಿ ಬರುತ್ತಾ ಇರುವಾಗ ಇಬ್ಬರು ಮುಸ್ಲಿಂ ಯುವಕರು ದನವೊಂದನ್ನು ಎಳೆದುಕೊಂಡು ಹೋಗುತ್ತಿದ್ದರು. ಹಸುವನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗ್ತಾ ಇದಾರೆ ಅನ್ನೋದನ್ನು ತಿಳಿದ ಡಾಕ್ಟರ್ಜಿರವರು “ನೀವು ಈ ಹಸುವನ್ನು ಎಷ್ಟು ಮೊತ್ತಕ್ಕೆ ಖರೀದಿಸಿದ್ದೀರೋ ಆ ದುಡ್ಡನ್ನು ನಾನು ನಿಮಗೆ ಕೊಡುತ್ತೇನೆ. ಈ ಹಸುವನ್ನು ಬಿಟ್ಟು ಬಿಡಿ” ಅಂದರು. ಆಗ ಆ ಯುವಕರು “ನಾವು ಈ ದನಕ್ಕೆ ಹನ್ನೆರಡು ರುಪಾಯಿಗಳನ್ನು ಕೊಟ್ಟಿದ್ದೇವೆ. ಇದರ ಮಾಂಸದಿಂದ ಮೂವತ್ತೈದು ರುಪಾಯಿ ಪಡೆಯುತ್ತೇವೆ. ಹಾಗಂತ ನೀವು ಐವತ್ತು ರುಪಾಯಿಗಳನ್ನು ಕೊಟ್ಟರೂ ನಾವಿದನ್ನು ಬಿಡುವುದಿಲ್ಲ ಇದು ನಮ್ಮ ಕುಲಕಸುಬು” ಅನ್ನುತ್ತಾ ಬಹಳ ದರ್ಪದಿಂದ ಮಾತನಾಡಿದ. ಆ ಯುವಕನ ಮಾತು ಕೇಳಿ ಕೋಪಾವಿಷ್ಠರಾದ ಡಾಕ್ಟರ್ಜಿ ಒಮ್ಮೆಲೆ ಹಾರಿ ಆ ಯುವಕನ ಕೈಯಿಂದ ಹಸುವಿನ ಹಗ್ಗವನ್ನು ಕಸಿದುಕೊಂಡು “ನಾನು ಕೇಶವ ಬಲಿರಾಮ್ ಹೆಡಗೇವಾರ್, ನಾನು ಜೀವಂತ ಇರುವವರೆಗೂ ಈ ಹಸುವನ್ನು ಕೊಂಡು ಹೋಗಲು ಬಿಡುವುದಿಲ್ಲ.”ಎಂದು ಅಕ್ಷರಶಃ ಅಬ್ಬರಿಸುತ್ತಾರೆ. ಹೆದರಿದ ಯುವಕರು ಕೊನೆಗೆ ಮೂವತ್ತೈದು ರುಪಾಯಿಗಳನ್ನು ಪಡೆದು ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಒಂದು ಧ್ಯೇಯಕ್ಕೆ ಬದ್ಧರಾದ ನಂತರ ಯಾವುದೇ ಹಂತದಲ್ಲಿ ಅದರ ಅನುಷ್ಠಾನಕ್ಕೆ ಸಿದ್ಧರಾಗುವ ಮಾನಸಿಕತೆ ಈ ಘಟನೆಯಲ್ಲಿ ನಮಗೆ ಕಾಣಸಿಗುತ್ತದೆ .

*ಶುದ್ಧ ಶೀಲ, ನಿಷ್ಕಳಂಕ ಚಾರಿತ್ರ್ಯ

ಶಿವಾಜಿ ಮಹಾರಾಜರ ಹದಿನೈದನೇ ವಯಸ್ಸಿನಲ್ಲಿ ನಡೆದ ಘಟನೆಯಿದು. ರಾಂಝ್ಯ ಗ್ರಾಮದ ಪಟೇಲನೊಬ್ಬ ತನ್ನ ಜಹಗೀರಿನಲ್ಲಿ ಓರ್ವ ಬಡ ವಿಧವೆಯ ಮಾನಭಂಗ ಮಾಡುತ್ತಾನೆ. ವಿಚಾರ ತಿಳಿದ ಶಿವಾಜಿ ಅವನ ಕೈಕಾಲು ಕತ್ತರಿಸುವಂತೆ ಆಜ್ಞೆಮಾಡುತ್ತಾನೆ. “ಪರಸ್ತ್ರೀ ತಾಯಿಗೆ ಸಮಾನ. ಮಾತೃತ್ವ ಈ ಮಣ್ಣಿನ ಮಾನಬಿಂದು” ಎಂದಿದ್ದರು ಶಿವಾಜಿ. ‘ಯುದ್ಧ ಮತ್ತು ಇನ್ನಿತರ ಸಮಯದಲ್ಲಿ ಯಾವುದೇ ಮಹಿಳೆ ಸೆರೆ ಸಿಕ್ಕಿದರೆ ಅವಳ ಮೈಯನ್ನು ಸ್ಪರ್ಶಿಸುವಂತಿಲ್ಲ . ಯುದ್ಧಕ್ಕೆ ಹೋಗುವಾಗ ಹೆಂಡತಿಯನ್ನು ಸೇವಕಿಯರನ್ನು ಕರೆದೊಯ್ಯುವಂತಿರಲಿಲ್ಲ. ಮಹಿಳೆಯರನ್ನು ದಾಸಿಯರನ್ನಾಗಿ ಇಟ್ಟುಕೊಳ್ಳುವಂತಿಲ್ಲ’ ಎಂಬ ಹುಕುಂ ಶಿವಾಜಿಯ ಸ್ವರಾಜ್ಯದಲ್ಲಿ ಜಾರಿಯಲ್ಲಿತ್ತು .1648ರಲ್ಲಿ ನಡೆದ ಘಟನೆ. ಕಲ್ಯಾಣದ ಸುಬೇದಾರ ಮೌಲಾನಾ ಅಹ್ಮದ್ ನವಾಯತ ನ ಸಂಪತ್ತನ್ನು, ಆಬಾಜಿ ಸೋಮದೇವನ ನೇತೃತ್ವದಲ್ಲಿ ಸೈನಿಕರು ಲೂಟಿ ಮಾಡಿ ಅವನ ಸುಂದರ ಸೊಸೆಯನ್ನು ಸೆರೆ ಹಿಡಿದು ಶಿವಾಜಿಯ ಮುಂದೆ ನಿಲ್ಲಿಸಿದಾಗ “ನಿನ್ನಂತೆ ನನ್ನ ತಾಯಿ ಸುಂದರಿಯಾಗಿದಿದ್ದರೆ ನಾನೂ ಸ್ಫುರದ್ರೂಪಿಯಾಗಿರುತ್ತಿದ್ದೆ” ಎನ್ನುತ್ತಾ ಒಡವೆ ಬಹುಮಾನ ಮತ್ತು ಕಾವಲಿನೊಂದಿಗೆ ಬಿಜಾಪುರದಲ್ಲಿರುವ ಅವಳ ತಂದೆಯ ಮನೆಗೆ ಶಿವಾಜಿ ಕಳುಹಿಸಿಕೊಡುತ್ತಾನೆ.

ಶಿವಾಜಿಗೆ ಆಗ ಕೇವಲ ಹದಿನೆಂಟು ವರ್ಷ ಈ ಘಟನೆಯನ್ನ ಖಾಫಿಖಾನ್ ಎಂಬ ವಿಮರ್ಶಕನು ಆಗಿದ್ದ ಚರಿತ್ರಕಾರನೊಬ್ಬ ಉಲ್ಲೇಖಿಸುತ್ತಾ ಸ್ತ್ರೀಯರ ಬಗ್ಗೆ ಶಿವಾಜಿ ತೋರಿದ ಗೌರವವನ್ನು ಹಾಡಿ ಹೊಗಳಿದ್ದಾನೆ..ಸಂಘದ ಕಾರ್ಯಕರ್ತರೊಬ್ಬರು ತಮ್ಮ ಭಾಷಣದಲ್ಲಿ ರಾಣಿ ಪದ್ಮಾವತಿ ದೇವಿಯ ಬಗ್ಗೆ ಮಾತನಾಡುವಾಗ ‘ರಜಪೂತ ರಮಣಿ’ ಎಂಬ ಶಬ್ದದ ಪ್ರಯೋಗ ಮಾಡುತ್ತಾರೆ. ಡಾಕ್ಟರ್ ಜೀಯವರಿಗೆ ಅದು ಕಿವಿಯಲ್ಲಿ ಮುಳ್ಳು ಚುಚ್ಚಿದ ಅನುಭವ ನೀಡಿತ್ತು ತಮ್ಮ ಧರ್ಮದ ಮತ್ತು ಶೀಲದ ರಕ್ಷಣೆಗಾಗಿ ಯಾರು ಜೌಹರದ ಉರಿವ ಜ್ವಾಲೆಯಲ್ಲಿ ತಮ್ಮ ಪ್ರಾಣವನ್ನು ಸಮರ್ಪಿಸಿದರೋ ಅಂಥವರ ಬಗ್ಗೆ ಆ ಪದ ತೀರಾ ಅನುಚಿತ ವೆನಿಸಿತು. ಭಾಷಣದ ನಂತರ ಆ ಕಾರ್ಯಕರ್ತ ತನ್ನ ಸಮೀಪ ಬಂದಾಗ “ತನ್ನ ಶೀಲದ ರಕ್ಷಣೆಗಾಗಿ ನಗುನಗುತ್ತ ಪ್ರಾಣದ ಆಹುತಿ ನೀಡಿದ ಅವರ ಬಗ್ಗೆ ಉಲ್ಲೇಖಿಸುವಾಗ ಅವರ ಜ್ವಲಂತ ಚಾರಿತ್ರ್ಯವನ್ನು ಸರಿಯಾಗಿ ಬಿಂಬಿಸುವಂತೆ ‘ರಜಪೂತ ದೇವಿ’ ಎಂದಲ್ಲಿ ಸೂಕ್ತವಾಗುತ್ತಿತ್ತು. ತಮ್ಮ ಆದರ್ಶದಿಂದ ದೈವತ್ವದ ಹಂತಕ್ಕೆ ತಲುಪಿದವರು ಅವರು” ಎಂದು ತಿಳಿಸಿದ್ದರು ಡಾ॥ಜಿ. ಬ್ಯಾರಿಸ್ಟರ್ ಶ್ರೀ ಅಭ್ಯಂಕರ್ ಮತ್ತು ಡಾಕ್ಟರ್ ಮೂಂಜೆ ಇವರಿಬ್ಬರ ನಾಯಕತ್ವದ ಎರಡು ಬಣಗಳಲ್ಲಿ ನಾಗಪುರದ ಕಾಂಗ್ರೆಸ್ ಒಡೆದು ಹೋಳಾಗಿದ್ದ ಸಂದರ್ಭ. ಒಂದು ಚುನಾವಣೆಯಲ್ಲಿ ಇವರಿಬ್ಬರೂ ಪರಸ್ಪರ ಎದುರಾಳಿಗಳಾಗಿ ಸ್ಪರ್ಧಿಸಿದ್ದರು. ಆಗ ಇನ್ನೂ ಕಾಂಗ್ರೆಸ್ ನಲ್ಲಿದ್ದ ಡಾ॥ಜಿ ಮೂಂಜೆಯವರ ಬೆಂಬಲಿಗರಾಗಿ ಎಲ್ಲರಿಗೂ ಪರಿಚಿತರಾಗಿದ್ದರು. ಬ್ಯಾರಿಸ್ಟರ್ ಅಭ್ಯಂಕರರು ಓರ್ವ ಪ್ರಭಾವಿ ಭಾಷಣಕಾರರು. ತಮ್ಮ ಭಾಷಣಗಳಲ್ಲಿ ಅವರು ಡಾಕ್ಟರ್ ಮೂಂಜೆಯವರ ವೈಯಕ್ತಿಕ ಬದುಕಿನ ಹುಳುಕುಗಳನ್ನು ಎತ್ತಿ ಎತ್ತಿ ಟೀಕಿಸುವುದರಲ್ಲಿ ನಿಸ್ಸೀಮರು. ಚುನಾವಣೆಯ ಸಂದರ್ಭವಂತೂ ಅವರಿಗೆ ಈ ನಿಟ್ಟಿನಲ್ಲಿ ತಮ್ಮ ಮನದ ಕೋಪ ದ್ವೇಷಗಳು ಪ್ರವಾಹೋಪಾದಿಯಲ್ಲಿ ಇತಿಮಿತಿಯಿಲ್ಲದೆ ಹರಿಸಲು ಮುಕ್ತ ಅವಕಾಶವೇ. ಒಂದು ಸಭೆಯಲ್ಲಿ ಅವರ ಈ ವಿಧದ ಭಾಷಣ ನಿರರ್ಗಳವಾಗಿ ನಡೆಯುತ್ತಿತ್ತು. ಅವರ ಅನುಯಾಯಿಗಳು ಅದನ್ನು ಚಪ್ಪರಿಸಿ ಕೇಳುತ್ತಿದ್ದರು. ಆದರೆ ಭಾಷಣದ ನಡುವೆಯೇ ಅವರ ಧ್ವನಿ ಇದ್ದಕ್ಕಿದ್ದಂತೆ ಬದಲಾಯ್ತು. “ಏನು ಮಾಡಲಿ ಈ ವ್ಯಕ್ತಿಗೆ ಬೆಂಬಲಿಗರಾಗಿ ಇರುವವರು ಡಾಕ್ಟರ್ ಹೆಡಗೆವಾರರು, ಅವರ ವಿರುದ್ಧ ಹೇಳಲು ನನ್ನ ಬಳಿ ಒಂದು ಶಬ್ದವೂ ಇಲ್ಲ. ಅವರಂತಹ ನಿಷ್ಕಳಂಕ ಚಾರಿತ್ರ್ಯವಂತರ ಬಗ್ಗೆ ನಾನು ಏನೂ ಹೇಳಲಾರೆ” ಎಂದರು. ಎದುರಾಳಿಯ ದೂಷಣೆಯ ಅತ್ಯುಚ್ಚ ಹಂತದಲ್ಲೂ ಅದನ್ನು ಬೆಂಬಲಿಸುತ್ತಿದ್ದ ಡಾ॥ಜಿಯವರ ಸ್ಪಟಿಕದಂತ ಶೀಲದ ಉಲ್ಲೇಖ ಮಾಡದೆ ಅವರಿಗೆ ಇರಲಾಗಲಿಲ್ಲ.

ಶಿವಾಜಿ ತನ್ನ ಸೈನ್ಯಕಟ್ಟುವ ಸಮಯದಲ್ಲಿ ಆ ಮಾವಳಿಗಳಿಗೆ ಆಡಿಸಿದ್ದು ಮಣ್ಣಿನ ಆಟ, ಡಾ॥ಜಿಯವರು ಸಂಘಸ್ಥಾನದಲ್ಲಿ ಆಡಿಸಿದ್ದು ಮಣ್ಣಿನ ಆಟ. ತನ್ನ 14 ನೇ ವಯಸ್ಸಿನಲ್ಲಿ ಶಿವಾಜಿ ಮೊದಲ ಕೋಟೆ ಗೆದ್ದರೆ ಡಾ॥ಜಿ ಬಾಲಕನಿರುವಾಗಲೇ ಸೀತಾಬರಡಿ ಕೋಟೆಯ ಮೇಲಿರುವ ಬ್ರಿಟೀಷರ ಧ್ವಜ ತೆಗೆಯಲು ವಝೆ ಮಾಸ್ತರ್ ಮನೆಯೊಳಗಿಂದ ಸುರಂಗ ತೋಡಿದ್ದರು. ಶಿವಾಜಿ ತಾನು ಬೆಳೆಯುತ್ತಿರುವಂತೆ ತನ್ನ ಸಹಚರರನ್ನೂ ಅಷ್ಟೇ ಎತ್ತರಕ್ಕೆ ಬೆಳೆಸಿದ, ಡಾ॥ ಜಿ ತನ್ನ ಜೊತೆಗಿದ್ದ ಯಾವ ಸ್ವಯಂಸೇವಕನಿಗೂ ‘ದೂರವಿದ್ದರು’ ಅನ್ನುವ ಹಾಗೆ ಇರಲೇ ಇಲ್ಲ. “ನಾವು ಸ್ವಲ್ಪವೇಗವಾಗಿ ಹೆಜ್ಜೆ ಹಾಕಿದರೆ ಡಾ॥ಜಿ ಜೊತೆಗೇ ನಡೆದು ಬಿಡಬಹುದು” ಅನ್ನುವ ಹಾಗೆ ಜೊತೆಗಿದ್ದೇ ಕಾರ್ಯಕರ್ತರನ್ನು ಬೆಳೆಸಿದರು.. ಹೀಗೆ ಶಿವಾಜಿ ಮಹಾರಾಜರನ್ನು ಡಾ॥ಜಿ ಹೆಜ್ಜೆಹೆಜ್ಜೆಗೂ ಅನುಕರಿಸಿದರೇ ಎಂಬ ನಮ್ಮ ಮನಸ್ಸಿನ ಪ್ರಶ್ನೆಗೆ ಈ ಘಟನೆ ಉತ್ತರ ನೀಡುತ್ತದೆ.. *

ಸಂಘ ಕಾರ್ಯವೆಂದರೆ ಶಿವಾಜಿಯ ಕಾರ್ಯ

ಒಮ್ಮೆ ಡಾಕ್ಟರ್ ಜಿ ತಮ್ಮ ಹಳೆಯ ಮಿತ್ರ ಸಮಾಜವಾದಿ ಮುಖಂಡ ಶ್ರೀರಾಮಭಾವು ರುಯಿಕರ್ ಅವರ ಮನೆಗೆ ಹೋಗಿದ್ದರು . ಚಹಾ ಹೀರುವ ಸಂದರ್ಭದಲ್ಲಿ ಮಾತುಕತೆಯ ನಡುವೆ ಡಾಕ್ಟರ್ಜಿ ಸ್ವಾಭಾವಿಕವಾಗಿ “ರಾಂಭಾವು ಒಂದು ಪ್ರಶ್ನೆ, ಪ್ರಾಮಾಣಿಕವಾಗಿ ಉತ್ತರಿಸುವಿರಾ?”” ಸಂಶಯವೇಕೆ”ರಾಂಭಾವು ಅಂದರು. ಕ್ಷಣಕಾಲ ಯೋಚಿಸಿದ ಡಾ.॥ಜಿ ” ಅಕಸ್ಮಾತ್ ನಾಳೆ ಏನಾದ್ರೂ ಛತ್ರಪತಿ ಶಿವಾಜಿ ಮಹಾರಾಜರು ಸಮಾಧಿಯಿಂದ ಎದ್ದು ಬಂದು ತಮ್ಮ ಸಾಮ್ರಾಜ್ಯವನ್ನು ಪುನಃ ನಡೆಸಿದ್ದೇ ಆದಲ್ಲಿ ನಿಮಗೆ ಹೇಗನಿಸಿತು?”ರಾಮಭಾವು ಕೂಡಲೇ ಉತ್ತರಿಸಿದರು. “ಇದೆಂಥ ಪ್ರಶ್ನೆ! ನನಗೆ ಆನಂದವಾಗದೇನು? ಖುಷಿಯಿಂದ ಎಲ್ಲರಿಗೂ ಲಾಡು ಹಂಚುವೆ.” ಅಂದರು. ಆಗ ಡಾ॥ಜಿ “ಹಾಗಿದ್ದಲ್ಲಿ ನಮ್ಮನ್ನೇಕೆ ನೀವು ಸುಮ್ಮನೆ ವಿರೋಧಿಸುತ್ತಿರುವಿರಿ? ಸಂಘ ಮಾಡುವಂಥ ಕೆಲಸ ಅದು ಶಿವಾಜಿ ಮಹಾರಾಜರ ಕಾರ್ಯವೇ ಆಗಿದೆ. ನಿಮಗೂ ಅದರಲ್ಲಿ ಖುಷಿಯಿದೆ. ವ್ಯತ್ಯಾಸವಿಷ್ಟೆ ನಮಗದನ್ನು ಎದೆತಟ್ಟಿ ಹೇಳುವ ಧೈರ್ಯವಿದೆ, ನಿಮಗಿಲ್ಲ ಅಷ್ಟೆ ತಾನೆ ಅದರರ್ಥ” ಎಂದಿದ್ದರು. *

ಜೇಷ್ಠ ಶುದ್ಧ ತ್ರಯೋದಶಿ..

ಇವತ್ತು ಆ ಛತ್ರಪತಿಗೆ ಪಟ್ಟಾಭಿಷೇಕವಾದ ದಿನ. ಸಂಘ ತನ್ನ ಆರು ಅಧಿಕೃತ ಉತ್ಸವಗಳಲ್ಲಿ ಒಂದಾಗಿ ಈ ದಿನವನ್ನು “ಹಿಂದೂ ಸಾಮ್ರಾಜ್ಯ ದಿನೋತ್ಸವ” ಎಂದು ಆಚರಿಸುತ್ತದೆ. ಯುಗಾವತಾರಿಯನ್ನು ಅನುಸರಿಸಿದ ಯುಗಪುರುಷ.. ಆ ಇಬ್ಬರು ಮಹಾಪುರುಷರೂ ನಮಗೆ ಪ್ರೇರಣೆಯಾಗಲಿ.

ಶ್ರೀ ಪ್ರಕಾಶ್ ಮಲ್ಪೆ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಜಗತ್ತಿನ ಶತಮಾನದ ಮಹಾದಾನಿ 'ಜೆಮ್‌ಶೆಡ್‌ಜಿ ಟಾಟಾ’

Thu Jun 24 , 2021
ಭಾರತದ ಖ್ಯಾತ ಉದ್ಯಮಿಗಳಲ್ಲೊಬ್ಬರಾಗಿದ್ದ ಜೆಮ್‌ಶೆಡ್‌ಜಿ ಟಾಟಾ ಅವರು ಕಳೆದ ಶತಮಾನದಲ್ಲಿ ಜಗತ್ತು ಕಂಡ ಅತಿದೊಡ್ಡ ದಾನಿ ಎಂದು ಹರೂನ್ ಮತ್ತು ಎಡೆಲ್‌ಗಿವ್ ಪ್ರತಿಷ್ಠಾನಗಳು ತಿಳಿಸಿವೆ. ಈ ಎರಡು ಸಂಸ್ಥೆಗಳು ಜೊತೆಗೂಡಿ ಜಗತ್ತಿನ ಐವತ್ತು ಜನ ಅತಿ ದೊಡ್ಡ ದಾನಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದವು. ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಹರೂನ್‌ ಸಂಸ್ಥೆಯ ಮುಖ್ಯ ಸಂಶೋಧಕ ಹಾಗೂ ಅಧ್ಯಕ್ಷ ರುಪರ್ಟ್ ಹೂಗ್‌ವರ್ಫ್ ಅವರು “‘ಹಣವನ್ನು ದಾನವಾಗಿ ನೀಡುವ ವಿಚಾರದಲ್ಲಿ ಅಮೆರಿಕ ಹಾಗೂ ಯುರೋಪಿನ […]