ಶೌರ್ಯ ಮತ್ತು ತ್ಯಾಗಮಯೀ ಬದುಕು

ಇಂದು ಗುರು ಶ್ರೀ ಶ್ರೀ ತೇಗ್‌ಬಹಾದ್ದೂರ್‌ ಅವರ 400ನೇ ಜನ್ಮದಿನ. ಈ ನಿಮಿತ್ತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಬರೆದ ವಿಶೇಷ ಲೇಖನ

ಭಾರತೀಯ ಇತಿಹಾಸದಲ್ಲಿ ಒಂಭತ್ತನೇ ಗುರು ಶ್ರೀ ತೇಗ್‌ಬಹಾದ್ದೂರರ ವ್ಯಕ್ತಿತ್ವ ಮತ್ತು ಕೃತಿತ್ವ ಒಂದು ಉಜ್ವಲ ನಕ್ಷತ್ರದಂತೇ ದೇದೀಪ್ಯಮಾನವಾಗಿದೆ.  ವೈಶಾಖ ಕೃಷ್ಣ ಪಂಚಮಿಯಂದು ತಂದೆ ಗುರು ಹರಗೋವಿಂದಜೀ ಹಾಗೂ ತಾಯಿ ನಾನಕೀಯವರ ಅಮೃತಸರದ ಮನೆಯಲ್ಲಿ ಅವರು ಜನಿಸಿದರು. ನಾನಕ್‌ಶಾಹೀ ಪಂಚಾಂಗದ ಅನುಸಾರ 2021 ಮೇ 1ಕ್ಕೆ ಅವರು ಜನಿಸಿ 400ನೇ ವ‍ರ್ಷ ಸಂಪನ್ನಗೊಳ್ಳುತ್ತಿದೆ. ಭಾರತದ ಅಧಿಕಾಂಶ ಭೂಭಾಗದ ಮೇಲೆ ಮಧ್ಯ ಏಷ್ಯಾದ ಮೊಗಲರು ಅತಿಕ್ರಮಣ ಮಾಡಿದ್ದ ಕಾಲಖಂಡದಲ್ಲಿ ಯಾವ ಪರಂಪರೆ ಆಕ್ರಾಂತ ಮೊಗಲರಿಗೆ ಸವಾಲು ಒಡ್ಡಿತ್ತೋ  ಆ ಪರಂಪರೆಯ ಪ್ರತಿನಿಧಿಯಾಗಿದ್ದರು ಶ್ರೀ ತೇಗ್‌ಬಹಾದ್ದೂರ್‌ಜೀ. ಅವರ ವ್ಯಕ್ತಿತ್ವ ತಪಸ್ಸು, ತ್ಯಾಗ ಹಾಗೂ ಸಾಧನೆಯ ಪ್ರತೀಕ ಮತ್ತು ಅವರ ಕರ್ತೃತ್ವ ಶಾರೀರಿಕ ಹಾಗೂ ಮಾನಸಿಕ ಶೌರ್ಯದ ಅದ್ಭುತ ಉದಾಹರಣೆಯಾಗಿದೆ. ಶ್ರೀ ತೇಗ್‌ಬಹಾದ್ದೂರರ ಸಂದೇಶಗಳು ಒಂದು ರೀತಿಯಲ್ಲಿ ವ್ಯಕ್ತಿ ನಿರ್ಮಾಣದ ಒಂದು ಬೃಹತ್‌ ಪ್ರಯೋಗವೇ ಆಗಿದೆ. ನಕಾರಾತ್ಮಕ ವೃತ್ತಿಗಳನ್ನು ನಿಯಂತ್ರಿಸುವ ಮೂಲಕ ಸಾಮಾನ್ಯ ಜನರು ಋಜು ಮಾರ್ಗದಲ್ಲಿ ನಡೆಯಬಲ್ಲರು. ನಿಂದಾ-ಸ್ತುತಿ, ಲೋಭ-ಮೋಹ, ಮಾನ-ಅಭಿಮಾನಗಳ ಚಕ್ರವ್ಯೂಹದಲ್ಲಿ ಯಾರು ಸಿಲುಕಿಕೊಂಡಿರುತ್ತಾರೋ, ಅವರು ಸಂಕಟ ಕಾಲದಲ್ಲಿ ವಿಚಲಿತರಾಗದೇ ಇರುವುದು ಸಾಧ್ಯವಿಲ್ಲ. ಜೀವನದಲ್ಲಿ ಒಮ್ಮೊಮ್ಮೆ ಸುಖ ಬರುತ್ತದೆ ಹಾಗೆಯೇ ಒಮ್ಮೊಮ್ಮೆ ದುಃಖ ಎದುರಾಗುತ್ತದೆ, ಅದಕ್ಕನುಸಾರವಾಗಿ ಸಾಮಾನ್ಯ ವ್ಯಕ್ತಿಯ ವ್ಯವಹಾರಗಳೂ ಬದಲಾಗುತ್ತಿರುತ್ತವೆ. ಆದರೆ ಸಿದ್ಧಪುರುಷರು ಇಂತಹ ಸ್ಥಿತಿಗಳನ್ನು ಮೀರಿರುತ್ತಾರೆ. ಈ ಸಾಧನೆಯನ್ನು ಗುರೂಜೀಯವರು ‘ಉಸತತಿ ನಿಂದಿಯಾ ನಾಹಿ ಜಿಹಿ ಕಂಚನ ಲೋಹ ಸಮಾನಿ’ (ಸ್ತುತಿ ಮತ್ತು ನಿಂದೆಯನ್ನು, ಚಿನ್ನ ಮತ್ತು ಕಬ್ಬಿಣವನ್ನು ಸಮನಾಗಿ ಕಾಣಿರಿ) ಮತ್ತು ‘ಸುಖ ದುಖ ಜಿಹ ಪರಸೈ ನಹೀ ಲೋಭು ಮೋಹು ಅಭಿಮಾನು’ (ಸುಖ-ದುಃಖ, ಲೋಭ, ಮೋಹ ಅಭಿಮಾನಗಳಿಗೆ ನಿರ್ಲಿಪ್ತರಾಗಿರಿ)(ಶ್ರೀಗುರುಗ್ರಂಥ ಸಾಹಿಬ್‌ -ಶ್ಲೋಕ ಮೋಹಲಾ 9ರ ಅಂಗ 1426ರ ಮುಂದೆ) ಎಂದು ಹೇಳಿದ್ದಾರೆ.

ಗುರೂಜಿ ಹೇಳಿರುವಂತೆ ‘ಭೈ ಕಾಹು ದೇತ ನಹಿ ನಹಿ ಭೈ ಮಾನತ ಆನ’ (ಇನ್ನೊಬ್ಬರನ್ನು ಭಯಗೊಳಿಸಬಾರದು, ಇನ್ನೊಬ್ಬರಿಂದ ಭಯಗೊಳ್ಳಲೂ ಬಾರದು.)  ಆದರೆ ಸಾವಿನ ಭಯ ಎಲ್ಲಕ್ಕಿಂತ ದೊಡ್ಡದು. ಅದೇ ಭಯದಿಂದ ವ್ಯಕ್ತಿ ಮತಾಂತರಗೊಳ್ಳುತ್ತಾನೆ, ಜೀವನ ಮೌಲ್ಯಗಳನ್ನು ತ್ಯಜಿಸುತ್ತಾನೆ ಮತ್ತು ಹೇಡಿಯಾಗಿಬಿಡುತ್ತಾನೆ. ‘ಭೈ ಮರಬೆ ಕೋ ಬಿಸರತ ನಾಹಿನ ತಿಹ ಚಿಂತಾ ತನು ಜಾರಾ’ (ನಾನು ಮೃತ್ಯವಿನ ಭಯವನ್ನು ಮರೆಯಲಾರೆ, ಈ ಚಿಂತೆ ನನ್ನ ಶರೀರವನ್ನು ದಹಿಸುತ್ತಿದೆ.) ತಮ್ಮ ಮಾತು ಮತ್ತು ಕೃತಿಯ ಮೂಲಕ ಗುರೂಜಿ ಎಲ್ಲ ಪ್ರಕಾರದ ಚಿಂತೆ ಮತ್ತು ಭಯಗಳಿಂದ ಮುಕ್ತವಾಗಿ ಧರ್ಮಮಾರ್ಗದಲ್ಲಿ ನಡೆಯಬಲ್ಲಂತಹ ಒಂದು ಸಮಾಜದ ರಚನೆ ಮಾಡುತ್ತಿದ್ದರು. ಶ್ರೀ ಗುರೂಜಿಯವರ ಇಡೀ ಬದುಕು ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥ ಚತುಷ್ಟಯದ ಸರ್ವೋತ್ತಮ ಉದಾಹರಣೆಯಾಗಿದೆ. ಅವರು ತಮ್ಮ ಗೃಹಸ್ಥ ಜೀವನದಲ್ಲಿ ಅರ್ಥ ಮತ್ತು ಕಾಮಗಳ ಸಫಲ ಸಾಧನೆಯ ಮೂಲಕ ತಮ್ಮ ಪರಿವಾರ ಮತ್ತು ಸಮಾಜದಲ್ಲಿ ಉತ್ಕೃಷ್ಟ ಮಾನವೀಯ ಮೌಲ್ಯಗಳನ್ನು ಮುಂದಿಟ್ಟರು. ಧರ್ಮದ ರಕ್ಷಣೆಗಾಗಿ ಅವರು ಪ್ರಾಣಬಲಿದಾನವನ್ನೇ ಮಾಡಿದರು. ಅವರ ದೃಷ್ಟಿಕೋನ ಸಂಕಟ ಕಾಲದಲ್ಲಿಯೂ ಭರವಸೆ ಮತ್ತು ವಿಶ್ವಾಸ ಮೂಡಿಸುವಂಥದ್ದು. ಅವರು ಹೇಳಿದರು ‘ಬಲು ಹೋಅ ಬಂಧನ ಛುಟೆ ಸಭು ಕಿಛು ಹೋತ ಉಪಾಹ’ (ನನ್ನ ಸಾಮರ್ಥ್ಯವನ್ನು ಪುನಃ ಪಡೆದಿದ್ದೇನೆ, ನನ್ನ ಎಲ್ಲ ಬಂಧನಗಳು ಮುರಿದಿವೆ ಹಾಗೂ ನನ್ನ ಮುಂದೆ ಎಲ್ಲ ಆಯ್ಕೆಗಳು ಮುಕ್ತವಾಗಿವೆ.) ಗುರು ತೇಗ್‌ಬಹಾದ್ದೂರರ ಕಾರ್ಯದಿಂದ ಇಡೀ ದೇಶದಲ್ಲಿ ಒಂದು ಶಕ್ತಿಯ ಸಂಚಲನ ನಡೆಯಿತು, ಬಂಧನ ಕಳಚಿತು ಮತ್ತು ಮುಕ್ತಿಯ ಮಾರ್ಗ ತೆರೆಯಿತು. ಬ್ರಜ್‌ ಭಾಷೆಯಲ್ಲಿ ರಚನೆಯಾದ ಅವರ ಸಂದೇಶ ಭಾರತೀಯ ಸಂಸ್ಕೃತಿ, ದರ್ಶನ ಮತ್ತು ಆಧ್ಯಾತ್ಮಿಕತೆಯ ಒಂದು ಅನನ್ಯ ನಿರೂಪಣೆಯಾಗಿದೆ.

ಗುರೂಜೀಯವರ ನಿವಾಸ ಆನಂದಪುರ ಸಾಹಿಬ್‌ ಮೊಗಲರ ಅನ್ಯಾಯ ಅತ್ಯಾಚಾರಗಳ ವಿರುದ್ಧ ಎದ್ದ ಜನಸಂಘರ್ಷದ ಕೇಂದ್ರವಾಗಿ ಮೇಲೇಳತೊಡಗಿತು. ಔರಂಗ್‌ಜೇಬ್‌ ಭಾರತವನ್ನು ದಾರ್‌-ಉಲ್‌-ಇಸ್ಲಾಂ ಮಾಡಬೇಕೆಂದು ಬಯಸುತ್ತಿದ್ದ. ಬೌದ್ಧಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದ್ದ ಕಾರಣದಿಂದ  ಕಾಶ್ಮೀರ ಮೊಗಲರ ಗುರಿಯಾಗಿತ್ತು.  ಈ ಎಲ್ಲ ವಿಷಯಗಳ ಕುರಿತು ಮಾರ್ಗದರ್ಶನ ಪಡೆಯುವ ಸಲುವಾಗಿ ಕಾಶ್ಮೀರದ ಜನರು ಶ್ರೀ ಗುರೂಜೀಯವರ ಬಳಿ ಬಂದರು. ಗುರೂಜೀ ಗಹನವಾಗಿ ವಿಚಾರ ವಿಮರ್ಶೆ ನಡೆಸಿದರು. ಕಾಶ್ಮೀರವೂ ಸೇರಿದಂತೆ ಇಡೀ ದೇಶದ ಪರಿಸ್ಥಿತಿ ಗಂಭೀರವಾಗಿತ್ತು. ಆದರೆ ಮೊಗಲರ ದಾರ್‌-ಉಲ್‌-ಇಸ್ಲಾಂ ಜಾರಿಯ ಈ ಕ್ರೂರ ಕೃತ್ಯವನ್ನು ತಡೆಯುವ ಮಾರ್ಗ ಯಾವುದಿತ್ತು? ಒಂದೇ ಮಾರ್ಗ, ದೇಶ ಮತ್ತು ಧರ್ಮದ ರಕ್ಷಣೆಗಾಗಿ ಓರ್ವ ಮಹಾಪುರುಷ ಆತ್ಮ ಬಲಿದಾನಗೈಯಬೇಕಿತ್ತು. ಆ ಬಲಿದಾನದಿಂದ ಇಡೀ ದೇಶದ ಜನಚೇತನ ಜಾಗೃತವಾಗುತ್ತದೆ, ಅದರಿಂದ ವಿದೇಶೀ ಮೊಗಲ ಸಾಮ್ರಾಜ್ಯ ಗೋಡೆಗಳು ನಲುಗಿ ಹೋಗುತ್ತವೆ. ಆದರೆ ಪ್ರಶ್ನೆ ಇದ್ದಿದ್ದು ಬಲಿದಾನ ನೀಡುವವರು ಯಾರು? ಈ ಪ್ರಶ್ನೆಗೆ ಉತ್ತರವನ್ನು ಶ್ರೀ ಗುರು ತೇಗ್‌ಬಹಾದ್ದೂರರ ಸುಪುತ್ರ ಶ್ರೀ ಗೋವಿಂದರಾಯ್‌ಜೀ ನೀಡಿದರು. ಅವರು ತಂದೆಯನ್ನು ಕೇಳಿದರು, ‘ಈ ಸಮಯದಲ್ಲಿ ದೇಶದಲ್ಲಿ ನಿಮ್ಮನ್ನು ಮೀರಬಲ್ಲ ಮಹಾಪುರುಷ ಯಾರಿದ್ದಾರೆ?’

ಔರಂಗಜೇಬನ ಸೇನೆ ಗುರೂಜಿಯವರನ್ನು ಮತ್ತು ಅವರ ಮೂವರ ಜೊತೆಗಾರರನ್ನು ಸೆರೆಹಿಡಿಯಿತು. ಎಲ್ಲರನ್ನು ಸೆರೆಯಲ್ಲಿ ದೆಹಲಿಗೆ ಕರೆತರಲಾಯಿತು. ಅಲ್ಲಿ ಅವರ ಮೇಲೆ ಅಮಾನುಷ ದೌರ್ಜನ್ಯ ನಡೆಸಲಾಯಿತು. ಇಸ್ಲಾಮಿಗೆ ಮತಾಂತರವಾಗಲು ಅವರ ಮತ್ತು ಅವರ ಶಿಷ್ಯರ ಮೇಲೆ ವಿಧವಿಧದ ಒತ್ತಡಗಳನ್ನು ಹೇರಲಾಯಿತು. ಅವರನ್ನು ಧರ್ಮಗುರುವನ್ನಾಗಿ ನಿಯೋಜಿಸುವ, ಸುಖ ಸಂಪತ್ತುಗಳನ್ನು ಕೊಡುವ ಆಶ್ವಾಸನೆಗಳನ್ನೂ ಕೊಡಲಾಯಿತು. ಆದರೆ ಅವರು ಧರ್ಮಮಾರ್ಗದಲ್ಲಿ ಅವಿಚಲಿತರಾಗಿ ನಿಂತರು. ದೆಹಲಿಯ ಚಾಂದನೀಚೌಕ್‌ದಲ್ಲಿ ಗುರು ತೇಗಬಹಾದ್ದೂರರ ಕಣ್ಣೆದುರಿನಲ್ಲೇ ಭಾಯಿ ಮತಿ ದಾಸರನ್ನು ಗರಗಸದಲ್ಲಿ ಸೀಳಿಬಿಡಲಾಯಿತು, ಭಾಯಿ ದಿಯಾಲ ಅವರನ್ನು ಕುದಿಯುವ ಎಣ್ಣೆಯಲ್ಲಿ ಮುಳುಗಿಸಲಾಯಿತು, ಭಾಯಿ ಸತೀದಾಸ್‌ ಅವರನ್ನು ಹತ್ತಿಯ ರಾಶಿಯಲ್ಲಿ ಬಿಗಿದು ಸುಡಲಾಯಿತು. ತಮ್ಮ ಜೊತೆಗಾರರಿಗಾದ ದುರ್ಗತಿ ಗುರೂಜೀಯವರನ್ನು ಭಯಭೀತನನ್ನಾಗಿಸುವುದು ಎಂದು ಬಹುಶಃ ಮೊಗಲ ಸಾಮ್ರಾಜ್ಯ ಅಂದುಕೊಂಡಿತ್ತು. ಅನ್ಯಾಯ ಮತ್ತು ಅತ್ಯಾಚಾರದ ವಿರುದ್ಧ ಹೋರಾಡುವುದೇ ಧರ್ಮ ಎಂದು ಗುರೂಜೀಯವರಿಗೆ ಸ್ಪಷ್ಟವಾಗಿ ತಿಳಿದಿತ್ತು. ಅವರು ದೃಢವಾಗಿ ನಿಂತರು. ಖಾಜಿ ಆದೇಶ ನೀಡಿದ, ವಧಾಕಾರ ಗುರೂಜೀಯವರ ಶಿರವನ್ನು ಶರೀರದಿಂದ ಬೇರ್ಪಡಿಸಿಬಿಟ್ಟ!  ಅವರ ಈ ಆತ್ಮಬಲಿದಾನ ಇಡೀ ದೇಶದಲ್ಲಿ ಒಂದು ಹೊಸ ಚೈತನ್ಯವನ್ನು ಬಡಿದೆಬ್ಬಿಸಿತು. ಹತ್ತನೇ ಗುರು ಶ್ರೀ ಗೋವಿಂದಸಿಂಹರು ತಂದೆಯ ಬಲಿದಾನದ ಕುರಿತು ಹೀಗೆ ಹೇಳಿದರು:

ತಿಲಕ ಜಂಜೂ ರಾಖಾ ಪ್ರಭ ತಾಕಾ| ಕೀನೋ ಬಡೋ ಕಲೂ ಮಾಹಿ ಸಾಕಾ|

ಸಾಧನಿ ಹೋತಿ ಇತಿ ಜಿನಿ ಕರೀ| ಸೀಸ ದೀಆ ಪರ ಸೀ ನ ಉಚರೀ|

(ಅವರು ತಿಲಕ ಮತ್ತು ಜನಿವಾರವನ್ನು ರಕ್ಷಿಸಿದರು, ಅವರ ಬಲಿದಾನ ಕಲಿಯುಗ ಒಂದು ಪ್ರಮುಖ ಘಟನೆ, ಒಂದು ನಿಟ್ಟುಸಿರನ್ನೂ ಬಿಡದೇ ಸಂತರ ಸಲುವಾಗಿ ತನ್ನ ಶಿರವನ್ನೇ ಅರ್ಪಿಸಿದರು)

ಇಂದು ಇಡೀ ದೇಶ ಶ್ರೀ ಗುರೂಜೀಯವರು ಅವತರಿಸಿದ ನಾಲ್ಕು ನೂರನೇ ವರ್ಷವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅವರು ಕಲಿಸಿದ ಮಾರ್ಗದಲ್ಲಿ ನಡೆಯುವುದೇ ನಿಜವಾಗಿ ಅವರ ಪುಣ್ಯಸ್ಮೃತಿಗೆ ಅರ್ಪಿಸುವ ಗೌರವವಾಗಿದೆ. ಇಂದು ಎಲ್ಲೆಡೆ ಭೋಗ ಮತ್ತು ಭೌತಿಕ ಸುಖ ಅತಿಯಾಗಿ ಆವರಿಸಿಬಿಟ್ಟಿದೆ. ಆದರೆ ಗುರೂಜೀ ತ್ಯಾಗ ಮತ್ತು ಸಂಯಮದ ಮಾರ್ಗವನ್ನು ತೋರಿಸಿದ್ದರು. ನಾಲ್ಕೂ ದಿಕ್ಕುಗಳಲ್ಲಿ ಈರ್ಷ್ಯೆ, ದ್ವೇಷ, ಸ್ವಾರ್ಥ ಮತ್ತು ಭೇದಭಾವಗಳು ಮೆರೆಯುತ್ತಿವೆ. ಗುರೂಜೀಯವರು ಸೃಜನಶೀಲತೆ, ಸಮರಸತೆ ಮತ್ತು ಮನೋವಿಕಾರಗಳ ಮೇಲೆ ವಿಜಯಗಳಿಸುವ ಸಾಧನೆಯನ್ನು ಭೋದಿಸಿದ್ದರು. ಗುರೂಜೀಯವರ ಸಾಧನಾಮಯ ಆಚರಣೆಗಳ ಪ್ರಭಾವದ ಕಾರಣದಿಂದಲೇ ದೆಹಲಿಗೆ ಪ್ರಯಾಣಿಸುವಾಗ ಯಾವಯಾವ ಗ್ರಾಮಗಳ ಮೂಲಕ ಅವರು ಸಾಗಿದರೋ ಅಲ್ಲಿನ ಜನರು ಇಂದಿಗೂ ತಂಬಾಕಿನಂತಹ ಅಮಲು ವಸ್ತುಗಳ ಕೃಷಿ ಮಾಡುವುದನ್ನು ತ್ಯಜಿಸಿಬಿಟ್ಟಿದ್ದು. ಕಟ್ಟರವಾದಿ ಮತ್ತು ಮತಾಂಧ ಶಕ್ತಿಗಳು ಇಂದು ಮತ್ತೊಮ್ಮೆ ವಿಶ್ವದಲ್ಲಿ ತಲೆ ಎತ್ತುತ್ತಿವೆ. ಶ್ರೀ ಗುರೂಜೀ ತ್ಯಾಗ, ಶೌರ್ಯ ಮತ್ತು ಬಲಿದಾನದ ಮಾರ್ಗವನ್ನು ತೋರಿಸಿದ್ದರು. ಮಾನವಜನಾಂಗ ಹೊಸ ಪರಿವರ್ತನಶೀಲ ಹಂತವನ್ನು ಪ್ರವೇಶಿಸುತ್ತಿರುವ ಈ ಸಂದರ್ಭದಲ್ಲಿ ಶ್ರೀ ಗುರೂಜೀಯವರು ತೋರಿಸಿದ ಮಾರ್ಗದಲ್ಲಿ ನಡೆದು ತನ್ನ ಮಣ್ಣಿನಲ್ಲೇ ತನ್ನ ಬೇರುಗಳು ಇಳಿದಿರುವ ನವಭಾರತದ ನಿರ್ಮಾಣ ಮಾಡುವುದೇ ಅವರ ಪುಣ್ಯ ಸ್ಮರಣೆಯಾಗಿದೆ.

ಮೂಲ ಇಂಗ್ಲಿಷ್ ಲೇಖನವನ್ನು ( 1 ಮೇ 2021, ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯಲ್ಲಿ ಪ್ರಕಟಿತ)ಅನುವಾದ ಮಾಡಿದವರು ಶ್ರೀ ಸತ್ಯನಾರಾಯಣ ಶಾನಭಾಗ

— 

ದತ್ತಾತ್ರೇಯ ಹೊಸಬಾಳೆ

ಸರಕಾರ್ಯವಾಹ, ರಾಷ್ಟ್ರೀಯ ಸ್ವಯಂಸೇವಕ ಸಂಘ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ನಮ್ಮಲ್ಲೇ ನೈಜ ಕಾರ್ಮಿಕ ನಾಯಕನಿರುವಾಗ ಆಮದು ನಾಯಕರನ್ನೇಕೆ ಹುಡುಕುವಿರಿ?!

Sat May 1 , 2021
ಕಾರ್ಮಿಕ ದಿನಾಚರಣೆಯಂದು ಭಾರತದ ಕಾರ್ಮಿಕರು ತಮ್ಮ ಕಲ್ಯಾಣದ ಕನಸಿನ ಸಾಕಾರದ ಹಿನ್ನೆಲೆಯಲ್ಲಿ ಯಾರನ್ನು ನೆನಪು ಮಾಡಿಕೊಳ್ಳಬೇಕು? ಕಾರ್ಲ್ ಮಾರ್ಕ್ಸ್ ರನ್ನೋ? ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೋ? ಈ ಪ್ರಶ್ನೆಯು ಕೆಲವರಿಗೆ ಆಶ್ಚರ್ಯವನ್ನುಂಟುಮಾಡಬಹುದು. ಕಾರ್ಮಿಕ ಕಲ್ಯಾಣಕ್ಕೂ ಅಂಬೇಡ್ಕರ್ ಗೂ ಏನು ಸಂಬಂಧ? ಕಾರ್ಮಿಕ ಸಂಘಟನೆ, ಚಳವಳಿ, ಹಕ್ಕುಗಳ ಕುರಿತಾದ ಮಾತುಗಳೆಲ್ಲಾ ಕಾರ್ಲ್ ಮಾರ್ಕ್ಸ್ ನ ಕಡೆಗೆ ಹೆಚ್ಚಾಗಿ ಹೊರಳಿಕೊಳ್ಳುತ್ತದೆ. ಆದರೆ ಭಾರತದ ಕಾರ್ಮಿಕರು ಮಾರ್ಕ್ಸ್ ಗಿಂತ ಹೆಚ್ಚು ಸ್ಮರಿಸಬೇಕಾದ ಪ್ರಾಥಃಸ್ಮರಣೀಯ ವ್ಯಕ್ತಿ ಎಂದರೆ […]