ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

“ಉನ್ನತ ಶಿಕ್ಷಣ ಪಡೆದು, ನಾನು ಗಳಿಸುವ ಜ್ಞಾನ ಗೂ ಪರಿಣತಿಯನ್ನು ನಾನು ನನ್ನ ಸ್ವಾರ್ಥಕ್ಕೆ ಉಪಯೋಗಿಸುವುದಿಲ್ಲ. ನನ್ನ ಅಸ್ಪೃಶ್ಯ ಜನಾಂಗದ ಕಣ್ಣುತೆರೆಸಲು, ಅವರನ್ನು ಶೋಷಣೆಯಿಂದ ಮುಕ್ತಗೊಳಿಸಲು ನನ್ನ ಜ್ಞಾನ ಸಂಪಾದನೆಯನ್ನು ವಿನಿಯೋಗಿಸುತ್ತೇನೆ. ಅಸೃಶ್ಯರು ಸೇರಿದಂತೆ ಶೋಷಣೆಗೊಳಗಾದ ಎಲ್ಲ ಜನರ ಬಿಡುಗಡೆ ನನ್ನ ಜೀವನದ ಧ್ಯೇಯ – ಎಂದು ಅಂಬೇಡ್ಕರ್ ಹೇಳಿದ್ದು ತಮ್ಮ 22-23 ವರ್ಷದ ಎಳವೆಯಲ್ಲಿಯೇ.

ಸಂದರ್ಭ; ಉನ್ನತ ಶಿಕ್ಷಣ ಪಡೆಯುವ ಅಂಬೇಡ್ಕರ್‌ರ ಕನಸಿಗೆ ನೀರೆರೆದ ಬರೋಡ ಮಹಾರಾಜರ ಗಾಯಕವಾಡರು ಅಮೆರಿಕದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ ನೀಡಲು ನಿರ್ಧರಿಸಿದಾಗ ಯುವಕ ಅಂಬೇಡ್ಕರ್ ಮಹಾರಾಜರಿಗೆ ನೀಡಿದ ಮಾತು. ಅವು ಮಾತುಗಳು ಮಾತ್ರವೇ ಅಲ್ಲವೇ ಅಲ್ಲ. ಅಂಬೇಡ್ಕರ್ ಮಾಡಿದ ಶಪಥ. ಅದಕ್ಕಾಗಿ ಅವರು ತಮ್ಮ ಸಂಪೂರ್ಣ ಜೀವನವನ್ನೇ ಮೀಸಲಿಟ್ಟರು. ಕಠಿಣ ತಪಸ್ಸು ಮಾಡಿ ಜ್ಞಾನ ಸಂಪಾದಿಸಿದರು. ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಅವರು ದಿನಕ್ಕೆ 18 ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಅವರು ಅಮೆರಿಕಕ್ಕೆ ಬಂದಿದ್ದು, 3 ವರ್ಷಗಳ ವಿದ್ಯಾರ್ತಿವೇತನ ಯೋಜನೆಯಡಿಯಲ್ಲಿ. ಆದರೆ ಇನ್ನೂ ಒಂದು ವರ್ಷ ಓದು ಮುಂದುವರಿಸಬೇಕಾಯಿತು. ಒಂದು ವರ್ಷದ ಓದನ್ನು ಮುಂದುವರಿಸಿದರೂ, ಅವರು ಅದಕ್ಕಾಗಿ ಹೆಚ್ಚುವರಿ ವಿದ್ಯಾರ್ಥಿವೇತನ ಕೇಳಲಿಲ್ಲ. ಮೂರು ವರ್ಷದ ವಿದ್ಯಾರ್ಥಿ ವೇತನದಲ್ಲಿ ಅವರು ಉಳಿಸಿದ್ದ ಹಣದಲ್ಲಿ 4ನೇ ವರ್ಷದ ಖರ್ಚು ಮತ್ತು ಮನೆಯ ಖರ್ಚನ್ನು ಸರಿದೂಗಿಸಿದರು.

ಅಂಬೇಡ್ಕರ್‌ರ ಜೀವನ-ಸಾಧನೆ ಎಂತಹದ್ದು ಎನ್ನುವುದನ್ನು ಬಹುಶಃ ಮೇಲಿನ ಘಟನೆ ಎಲ್ಲ ಮುಖಗಳಲ್ಲೂ ಪರಿಚಯಿಸುತ್ತದೆ.

ಅಂಬೇಡ್ಕರ್‌ರನ್ನು ಜಾತಿವ್ಯವಸ್ಥೆಯನ್ನು ವಿರೋಧಿಸಿದವರು, ಸಂವಿಧಾನ ರಚನೆಯಲ್ಲಿ ಮುಖ್ಯಪಾತ್ರ ವಹಿಸಿದವರು- ಎಂಬ ಕೆಲವೇ ಅಂಶಗಳ ಪ್ರಸ್ತಾವದ ಮೂಲಕ ಅವರನ್ನು ಸ್ಮರಿಸುವ ಪ್ರಥೆ ಬೆಳೆದಿರುವುದು ಅವರ ವ್ಯಕ್ತಿತ್ವದ ಬಹುಮುಖತೆಯನ್ನು ಹಾಗೂ ಅವರ ಬೌದ್ಧಿಕ ತೀಕ್ಷ್ಣತೆಯನ್ನು ಅಲಕ್ಷಿಸಿದಂತೆಯೇ ಸರಿ.

ಏಪ್ರಿಲ್ 14, 1891ರಂದು ಈಗಿನ ಮಧ್ಯಪ್ರದೇಶದ ಮ್ಹೋವ್ (Mhow)ನಲ್ಲಿ ರಾಮಜೀ ಮಾಲೋಜೀ ಸಕ್ಪಾಲ್ ಮತ್ತು ಭೀಮಾಬಾ ಮುರ್ಬಾದ್‌ಕರ್ ದಂಪತಿಯ 14ನೇ ಮತ್ತು ಕೊನೆಯ ಮಗನಾಗಿ ಜನಿಸಿದರು. ಇಂದಿನ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಅಂಬಾವಾಡೆ ಪಟ್ಟಣದ ಮೂಲದವರು. ಹಿಂದೂ ಮಹರ್ ಜನಾಂಗಕ್ಕೆ ಸೇರಿದವರಾಗಿದ್ದರು.

ಅಂಬೇಡ್ಕರ್ ಅವರ ಪೂರ್ವಿಕರು ಬಹುಕಾಲದಿಂದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸೇನೆಗೆ ಸೇರಿಕೊಂಡಿದ್ದರು. ಸುಬೇದಾರ್ ಹುದ್ದೆಗೇರಿದ್ದ ಅಂಬೇಡ್ಕರ್ ತಂದೆ ಮರಾಠಿ ಮತ್ತು ಇಂಗ್ಲಿಷ್ ಶಿಕ್ಷಣದಲ್ಲಿ ಪದವಿ ಪಡೆದಿದ್ದರು. ಹಿಂದೂ ಮಹಾಕಾವ್ಯಗಳು, ಮುಖ್ಯವಾಗಿ ರಾಮಾಯಣ, ಮಹಾಭಾರತಗಳನ್ನು ಓದುವಂತೆ ಅವರು ಮಕ್ಕಳಿಗೆ ಉತ್ತೇಜಿಸುತ್ತಿದ್ದರು.

ಪ್ರಾರಂಭದಿಂದಲೂ ತರಗತಿಯ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದ ಭೀಮರಾವ್ ಮುಂಬಯಿಯ ಎಲ್ಫಿನ್‌ಸ್ಟನ್‌ನಲಿ 1907ರಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆ ಮುಗಿಸಿ, ಇಂಟರ್ ಮೀಡಿಯಟನ್ನು ಡಿಸ್ಟಿಂಕ್ಷನ್‌ನಲ್ಲಿ ಪೂರೈಸಿದರು. ಬರೋಡದ ಮಹಾರಾಜರ ನೆರವಿನಿಂದ ಮುಂಬೈ ವಿಶ್ವವಿದ್ಯಾಲಯವನ್ನು ಪ್ರವೇಶಿಸಿ ದೇಶದಲ್ಲೇ ಕಾಲೇಜಿಗೆ ಸೇರ್ಪಡೆಗೊಂಡ ಮೊದಲ ಅಸ್ಪೃಶ್ಯ ವಿದ್ಯಾರ್ಥಿಯಾದರು. ಅಂಬೇಡ್ಕರ್‌ರ ಸಾಧನೆಯನ್ನು ಮೆಚ್ಚಿ ಅವರ ಸಮುದಾಯ ಬಹಳ ಖುಷಿಯಿಂದ ಸಾರ್ವಜನಿಕ ಸಮಾರಂಭಗಳನ್ನು ಏರ್ಪಡಿಸಿ ಗೌರವಿಸಿತು. ಅವರ ಗುರು ಮರಾಠ ಜಾತಿಯ ವಿದ್ವಾಂಸ ಕೃಷ್ಣಾಜೀ ಅರ್ಜುನ್ ಕೇಲೂಸ್ಕರ್(ದಾದಾ ಕೇಲೂಸ್ಕರ್) ಬುದ್ದನ ಜೀವನಚರಿತ್ರೆಯ ಪುಸ್ತಕವನ್ನು ಬಹುಮಾನವಾಗಿ ನೀಡಿದರು. ಇದೇ ಸಂದರ್ಭದಲ್ಲಿ ಅವರು ರಮಾಬಾ (9 ವರ್ಷದ ಬಾಲಕಿ) ಅವರನ್ನು ಹಿಂದೂ ಸಂಪ್ರದಾಯದಂತೆ ಮದುವೆಯಾರು. 1912ರಲ್ಲಿ ಬಿ.ಎ. ಪದವಿ ಪಡೆದರು.

ಓದುವ ಹಸಿವು ಭೀಮರಾವ್ ನನ್ನು ಕಾಡುತ್ತಲೇ ಇತ್ತು ಹೀಗಾಗಿ ಬರೋಡ ಮಹಾರಾಜರ ಸಹಾಯ ಪಡೆದು 1912ರಲ್ಲಿ ಬಿ.ಎ. ಪದವಿಗೆ ಭಾಜರಾದ ಅವರು 1913ರಲ್ಲಿ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ ನ್ಯೂಯಾರ್ಕ್‌ನ ಜಗತ್ಪ್ರಸಿದ್ಧ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ., ಪಿಎಚ್.ಡಿ ಪಡೆದರು. ದೀರ್ಘಾಲೋಚನೆ ಹೊಂದಿದ್ದ ಅವರು ತಮ್ಮ ಎಂ.ಎ., ಪಿಎಚ್.ಡಿ. ಎರಡರ ಸಂಶೋಧನೆಗೂ ಆರಿಸಿಕೊಂಡಿದ್ದು ಅರ್ಥಶಾಸ್ತ್ರ ಮತ್ತು ರಾಜ್ಯಶಾಸ್ತ್ರವನ್ನು. ಪದವಿ ಮುಗಿಸಿ ಬಂದ ಅವರು ಬರೋಡ ಸಂಸ್ಥಾನದಲ್ಲಿ ಉದ್ಯೋಗಕ್ಕೆ ಸೇರಿದರು.

ಓದಿನಲ್ಲಿ ಅಪ್ರತಿಮನಾಗಿದ್ದ ಭೀಮನಿಗೆ ಇತರ ವಿದ್ಯಾರ್ಥಿಗಳ ಡೆಸ್ಕ್‌ನಿಂದ ದೂರದಲ್ಲಿ ತರಗತಿಯ ಒಂದು ಮೂಲೆಯಲ್ಲಿ ಒರಟುಚಾಪೆಯಲ್ಲಿ ಕುಳಿತುಕೊಳ್ಲುವುದು, ಬಾಯಾರಿದಾಗ ಇತರರಂತೆ ಲೋಟ ಬಳಸದೇ ಬೊಗಸೆಯೊಡ್ಡಿ ಇತರರು ಎರಡದ ನೀರನ್ನು ಕುಡಿಯುವುದು, ಹಣ ನೀಡಿದರೂ ಎತ್ತಿನಗಾಡಿಯ ಒಳಗೆ ಜಾಗವಿಲ್ಲ, ತಲೆ ಕತ್ತರಿಸಲು ಕ್ಷೌರಿಕ ಬರಲಾರ – ಹೀಗೆ ಹತ್ತಾರು ಅವಮಾನಗಳ ನಡುವೆಯೇ ಭೀಮರಾವ್ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರಾಗಿ ಬೆಳೆದು ನಿಂತಿದ್ದರು.

ಅಮೆರಿಕದಲ್ಲಿ ಉನ್ನತ ಮುಗಿಸಿ ಬಂದ ಅಂಬೇಡ್ಕರ್‌ಗೆ ಬರೋಡದ ನಾಗರಿಕ ಸೇವೆಯಲ್ಲಿ ಉತ್ತು ಹುದ್ದೆ ದೊರಕಿತು. ಆದರೆ ಅಲ್ಲಿಯೂ ಅವರಿಗೆ ಜಾತಿಯ ಕರಾಳ ಮುಖಗಳ ಮುಂದುವರಿದೇ ಇದ್ದವು. ಬಾಡಿಗೆ ಕಟ್ಟಡವಿಲ್ಲ, ಅವರ ಕೆಲಸ ಮಾಡುವುದಕ್ಕಾಗಿ ನೇಮಕಗೊಂಡ ಗುಮಾಸ್ತ ಕೂಡಾ ಅವರ ಕೈಗೆ ಕಡತಗಳನ್ನು ನೀಡದೇ ಎಸೆದು ಹೊಗುತ್ತಿದ್ದ! – ಹೀಗೆ ಜಾತಿ ಅವರನ್ನು ದುಃಖ, ಹತಾಶೆಗೆ ತಳ್ಳಿತ್ತು.

ಉದ್ಯೋಗ ತೊರೆದು ೧೯೧೮ರಲ್ಲಿ ಮುಂಬಯಿಯ ಸೈಡನ್‌ಹಮ್ ಕಾಲೇಜಿನಲ್ಲಿ ಉಪನ್ಯಾಸಕರಾದರು. ಅದೇ ಸಂದರ್ಭದಲ್ಲಿ ಅಸ್ಪೃಶ್ಯರ ಸಮಸ್ಯೆಗಳ್ನನು ಪರಿಹರಿಸುವ ಉದ್ದೇಶದಿಂದ ’ಮೂಕನಾಯಕ’ ಎನನುವ ಮರಾಠಿ ವರ್ತಮಾನವನ್ನು ಆರಂಬಿಸಿದರು. ಸಮ್ಮೇಳನಗಳನ್ನು ಸಂಘಟಿಸಲು ಮತ್ತು ಅವುಗಳಲ್ಲಿ ಭಾಗವಹಿಸಲು ಆರಂಭಿಸಿದರು. ದಲಿತರು ಅನುಭವಿಸುತ್ತಿರುವ ಅವಮಾನಗಳನ್ನು ಬೆಳಕಿಗೆ ತಂದು ಅವುಗಳಿಗೆ ಪ್ರಚಾರ ನೀಡುವುದು ಮತ್ತು ಸಮಾನ ಹ್ಕಕುಗಳಿಗಾಗಿ ಹೋರಾಟ ನಡೆಸುವುದು ಅನಿವಾರ್ಯ ಎಂದು ತೀರ್ಮಾನಿಸಿದರು.

 ಪುನಃ ಸ್ನೇಹಿತರ ಸಹಾಯದೊಂದಿಗೆ ೧೯೨೦ರಲ್ಲಿ ಲಂಡನ್‌ಗೆ ತೆರಳಿ ಗ್ರೇಸ್ ಇನ್‌ನಲ್ಲಿ ೧೯೨೩ರಲ್ಲಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸಂಸ್ಥೆಯಲ್ಲಿ ಅರ್ಥಸಾಸ್ತ್ರದ ಡಾಕ್ಟರೇಟ್ ಪಡೆದು ಭಾರತಕ್ಕೆ ಮರಳಿದರು. ಜಗತ್ಪ್ರಸಿದ್ಧ ಸಂಸ್ಥೆಯಿಂದ ಡಾಕ್ಟರೇಟ್ ಪಡೆದ ಭಾರತದ ಮೊದಲಿಗರಾಗಿದ್ದ ಡಾ. ಬಾಬಾಸಾಹೇಬ ಅಂಬೇಡ್ಕರ್ ತಮ್ಮ ಜೀವನವನ್ನು ದಲಿತೋದ್ಧಾರದ ಕೆಲಸಕ್ಕೆ ಮುಡಿಪಾಗಿಟ್ಟರು. 1924ರಲ್ಲಿ ’ಬಹಿಷ್ಕೃತ ಹಿತಕಾರಿಣಿ ಸಭಾ’ ಎಂಬ ಸಂಸ್ಥೆಯನ್ನು ಸ್ಥಾಪಿಸಿ ದಲಿತರ ಉದ್ಧಾರಕ್ಕಾಗಿ ಶಿಕ್ಷಣ ಪ್ರತಿಯೊಬ್ಬರಿಗೂ ತಲಪಬೇಕು.ಇದಕ್ಕಾಗಿ ಹಾಸ್ಟೆಲ್, ಶಾಲೆ ಮತ್ತು ಉಚಿತ ಗ್ರಂಥಾಲಯಗಳನ್ನು ಆರಂಭಿಸಿದರು.

1927ರಲ್ಲಿ ಬಾಬಾಸಾಹೇಬರು ಕೊಲಾಬಾ ಜಿಲ್ಲೆಯ ಮಹಾದ್‌ನಲ್ಲಿ ಜರಗಿದ ಸಮ್ಮೇಳದ ಅಧ್ಯಕ್ಷತೆ ವಹಿಸಿದ್ದ ಅವರು, ನಾವೀಗ ಮೇಲು-ಕೀಳು ಎಂಬುದನ್ನು ನಮ್ಮ ಮನಸ್ಸುಗಳಿಂದ ಕಿತ್ತುಹಾಕಬೇಕಾಗಿದೆ.

ಸ್ವಾವಲಂಬನೆಯನ್ನು ಕಲಿತು ಆತ್ಮಗೌರವವನ್ನು ಗಳಿಸಿಕೊಂಡಲ್ಲಿ ನಮ್ಮ ಉದ್ಧಾರವನ್ನು ಸಾಧಿಸಬಹುದು ಎಂದು ದಲಿತ ಸಮುದಾಯಕ್ಕೆ ಕರೆ ನೀಡಿದರು. ಸಮ್ಮೇಳನ ಸ್ಥಳದಿಂದ ಮೆರವಣಿಗೆಯ ಮೂಲಕ ಸ್ಥಳೀಯ ಚೌದಾರ್ ಕೆರೆಗೆ ತೆರಳಿ ಅಲ್ಲಿಯ ನೀರನ್ನು ಕುಡಿದರು. ಕೆರೆಯ ನೀರನ್ನು ಕುಡಿಯುವ ಮೂಲಕ ಅವರು ಇತಿಹಾಸವನ್ನೇ ನಿರ್ಮಿಸಿದರು. ಸಾರ್ವಜನಿಕ ಕೆರೆ-ಬಾವಿಗಳ ನೀರನ್ನು ಕುಡಿಯುವಂತಿಲ್ಲ ಎಂಬ ಪರಂಪರೆಯನ್ನು ಅಳಿಸಿ ಹಾಕಿದರು. ಸಾವಿರಾರು ಜನರಿಗೆ ಪ್ರೇರಣೆಯಾದರು. ಯಾವುದೇ ಕಾರಣಕ್ಕೂ ಹೋರಾಟ ಹಿಂಸೆಗೆ ತಿರುಗದಂತೆ ಮಾರ್ಗದರ್ಶನ ಮಾಡಿದರು. ಅದೇ ವೇಳೆ ’ಬಹಿಷ್ಕೃತ ಭಾರತ್’ ಎನ್ನುವ ಪತ್ರಿಕೆಯನ್ನು ಆರಂಭಿಸಿ, ನಾಸಿಕದ ಕಾಲಾರಾಮ್ ದೇವಾಲಯ ಪ್ರವೇಶದ ಹಕ್ಕಿಗಾಗಿ ಅಹಿಂಸಾತ್ಮಕ ಚಳವಳಿ ನಡೆಸುವಂತೆ ದಲಿತರನ್ನು ಒತ್ತಾಯಿಸಿದರು.

ಭಾರತದ ಭವಿಷ್ಯವನ್ನು ನಿರ್ಧರಿಸಲು ಬ್ರಿಟಿಷ್ ಸರ್ಕಾರ ಆಯೋಜಿಸಿದ ಪ್ರಥಮ ಹಾಗೂ ದ್ವಿತೀಯ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಿದರು. ಮೊದಲ ಸಮ್ಮೇಳನದಲ್ಲಿ ’ಬ್ರಿಟಿಷ್ ಸರ್ಕಾಋದ ಬದಲಿಗೆ ಭಾರತದ ಜನರು ನಡೆಸುವ ಜನರ ಸರ್ಕಾರ ಬರಬೇಕೆನ್ನುವ ಬೇಡಿಕೆಯನ್ನು ದಮನಕ್ಕೊಳಗಾದ ವರ್ಗಗಳು ಬೆಂಬಲಿಸುತ್ತವೆ. ೧೫೦ ವರ್ಷಗಳ ಆಳ್ವಿಕೆಯ ನಂತರವೂ ಬ್ರಿಟಿಷ್ ಆಳ್ವಿಕೆಗೆ ಅವುಗಳನ್ನು ಸರಿಪಡಿಸಲಾಗಿಲ್ಲ. ಇಂತಹ ಸರ್ಕಾರದಿಂದ ಯಾರಿಗಾದರೂ ಏನು ಪ್ರಯೋಜನವಾಗಲು ಸಾಧ್ಯವಿಲ್ಲ’ ಎಂದ ಅಂಬೇಡ್ಕರ್ ದಮನಕ್ಕೋಳಗಾದ ವರ್ಗಗಳಿಗೆ ಪ್ರತ್ಯೇಕ ಮತಕ್ಷೇತ್ರಗಳು ಬೇಕೆಂದು ಒತ್ತಾಯಿಸಿದರು. ಎರಡನೇ ಸಭೆಯಲ್ಲಿಯೂ ಇದನ್ನೇ ಪ್ರತಿಪಾದಿಸಿದರು. ಗಾಂಧಿ ಉಪವಾಸಕ್ಕೆ ಕುಳಿತರೂ ತಮ್ಮ ವಾದದಿಂದ ಹಿಂದೆ ಸರಿಯದೇ ಅಚಲವಾಗಿ ನಿಂತರು. ಕೊನೆಗೆ ದಮನಿತ ವರ್ಗಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡುವ ಒಪ್ಪಂದದ ಮೇರೆಗೆ ೧೯೩೨ರಲ್ಲಿ ಪೂನಾ ಒಪ್ಪಂದಕ್ಕೆ ಸಹಿ ಹಾಕಿದರು.

ಅಂಬೇಡ್ಕರ್ ಚಿಂತನೆಯ ಹೊಳಹುಗಳು

1.   ನಾವು ದೇವಾಲಯ ಪ್ರವೇಶಮಾಡಬೇಕೆನ್ನುವುದು ಆ ವಿಗ್ರಹಾರಾಧನೆಯಿಂದ ಸಂತೃಪ್ತಿ ಹೊಂದುವುದಕ್ಕಲ್ಲ; ನಮ್ಮ ಪ್ರವೇಶದಿಂದ ದೇವಾಲಯ ಕಳಂಕಿತವಾಗುವುದಿಲ್ಲ ಎಂಬುದನ್ನು ಸವರ್ಣೀಯರಲ್ಲಿ ಬಿಂಬಿಸುವುದಕ್ಕಾಗಿ ಮಾತ್ರ.

2.   ಏಕರಾಷ್ಟ್ರೀಯತೆಯ ಭಾವನೆಯನ್ನು ಮೂಡಿಸುವುದು ಈ ದಿನಗಳಲ್ಲಿ ಅಗತ್ಯವಾಗಿದೆ. ನಾವು ಮೊದಲು ಭಾರತೀಯರು, ಅನಂತರ ಹಿಂದೂಗಳು, ಮುಸ್ಲಿಮರು ಅಥವಾ ಕನ್ನಡಿಗರು ಎಂಬುದಕ್ಕಿಂತ ನಾವು ಮೊದಲು ಭಾರತೀಯರೇ, ಕೊನೆಗೂ ಭಾರತೀಯರೇ ಎಂಬ ಭಾವನೆ ನಮ್ಮಲ್ಲಿ ಪ್ರಜ್ಜ್ವಲವಾಗಬೇಕು.

3.   ಧರ್ಮ ಮತ್ತು ಗುಲಾಮಗಿರಿ ಒಂದೇ ಕಡೆ ಇರಲು ಸಾಧ್ಯವಿಲ್ಲ. ಹಿಂದೂಧರ್ಮ ಧರ್ಮವೇ ಆಗಿದ್ದಲ್ಲಿ ಅಲ್ಲಿ ಗುಲಾಮಗಿರಿ ಇರಕೂಡದು. ಅಲ್ಲಿ ಗುಲಾಮಗಿರಿ ಇರುವುದೇ ಆದಲ್ಲಿ ಅದು ಧರ್ಮ ಆಗದು.

4.   ಅಸ್ಪೃಶ್ಯತೆಯು ಮೊದಲು ಅಸ್ಪೃಶ್ಯರನ್ನು ನಾಶಮಾಡಿದೆ. ಅನಂತರ ಹಿಂದೂ ಸವರ್ಣೀಯರನ್ನು ನಾಶಮಾಡಿದೆ. ಅಂತಿಮವಾಗಿ ಅದು ಇಡೀ ದೇಶವನ್ನೇ ನಾಶಮಾಡಿದೆ.

5.  ಸವರ್ಣ ಹಿಂದೂಗಳ ಮೇಲಿನ ದ್ವೇಷದಿಂದ ಪರಿಶಿಷ್ಟ ಜಾತಿಗಳವರು ಇಸ್ಲಾಮಿನತ್ತ ಹೊರಳಿದರೆ, ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗುತ್ತದೆ.

6.   ಕಮ್ಯುನಿಸಂ ಮತ್ತು ಪ್ರಜಾಪ್ರಭುತ್ವ ಜೊತೆಜೊತೆಯಾಗಿರಲು ಸಾಧ್ಯವಿಲ್ಲ. ಕಮ್ಯುನಿಸಂ ಕಾಡಿನ ಬೆಂಕಿಯಂತೆ, ಎದುರಾದವರನ್ನೆಲ್ಲ ಅದು ನುಂಗಿಹಾಕುತ್ತದೆ.

7.   ಭಯಂಕರ ರೋಗಕ್ಕೆ ಭಯಂಕರವಾದ ಚುಚ್ಚುಮದ್ದನೇ ಕೊಡಬೇಕಾಗುವಂತೆ, ಕಿವುಡುಸಮಾಜದ ಗಮನ ಸೆಳೆಯಲು ಬಾಂಬ್ ಸ್ಫೋಟಿಸಬೇಕಾಗುವಂತೆ ಸನಾತನವಾದಿ ಹಿಂದೂಸಮಾಜದ  ಹೃದಯವನ್ನು ಚುಚ್ಚಲು ಮನುಸ್ಮೃತಿದಹನ ಕಾರ್ಯಕ್ರಮ ಹಮ್ಮಿಕೊಂಡೆನು.

8.   ಪಾಪ ಮತ್ತು ಅನೀತಿಗೆ ಬಹುಜನಾಭಿಪ್ರಾಯದ ಬೆಂಬಲ ಇದೆ ಎಂದಾಕ್ಷಣ ಅವುಗಳನ್ನು ಎತ್ತಿಹಿಡಿಯಲು ಸಾಧ್ಯವೇ? ಅಸ್ಪೃಶ್ಯತೆ ಆಚರಣೆ ಎಂಬುದು ಘೋರ ಪಾಪ. ಅದೊಂದು ನೀತಿಹೀನ ಸಂಪ್ರದಾಯ. ಅದನ್ನು ತೊಡೆದುಹಾಕಲೇಬೇಕು. ನೂರಕ್ಕೆ ತೊಂಬತ್ತೊಂಬತ್ತು ಜನರ ಬೆಂಬಲ ಅದಕ್ಕೆ ಇದ್ದಾಗ ಕೂಡ ಅದನ್ನು ಸಮರ್ಥಿಸಲು ಸಾಧ್ಯವಿಲ್ಲ. ಅದನ್ನು ಸಹಿಸಲು ಸಾಧ್ಯವಿಲ್ಲ.

ಸ್ವತಂತ್ರ ಭಾರತದ ಅಸ್ಥಿತ್ವಕ್ಕಾಗಿ ಸುಭದ್ರ ಸಂವಿಧಾನ ರಚನೆಯಲ್ಲಿಯೂ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದರು. ಸ್ವತಂತ್ರ ಭಾರತದ ಮೊದಲ ಕಾನೂನು ಮಂತ್ರಿಯಾದರು.

1935ರಲ್ಲಿ ಯೋಲಾದಲ್ಲಿ ನಡೆದ ದಲಿತ ಸಮಾವೇಶದಲ್ಲಿ ನಾನು ಹಿಂದುವಾಗಿ ಜನಿಸಿದ್ಧೇನೆ. ಅದನ್ನು ತಪ್ಪಿಸುವುದು ನನಗೆ ಸಾಧ್ಯವಿರಲಿಲ್ಲ. ಆದರೆ ನಾನು ಹಿಂದುವಾಗಿ ಸಾಯುವುದಿಲ್ಲ’ ಎಂದು ಘೋಷಿದರು. ನಂತರ ಮುಸಲ್ಮಾನ್ ಹಾಗೂ ಕ್ರಿಶ್ಚಿಯನ್ ಸಮುದಾಯದ ಆಮಿಷಗಳನ್ನು ತಿರಸ್ಕರಿಸಿ ಅಕ್ಟೋಬರ್ 14, 1956ರಲ್ಲಿ ನಾಗಪುರದಲ್ಲಿ ನಡೆದ ಬೃಹತ್ ಸಮಾರಂಭದಲ್ಲಿ ಪತ್ನಿಯೊಂದಿಗೆ ಬೌದ್ಧಮತವನ್ನು ಸ್ವೀಕರಿಸಿದರು.

‘ಅಸ್ಪೃಶ್ಯತೆಯು ಜಾತೀಯತೆಯ ಒಂದು ಶಾಖೆ. ಜಾತಿಪದ್ಧತಿ ತೊಲಗುವವರೆಗೆ ಅಸ್ಪೃಶ್ಯತೆ ಇದ್ದೇ ಇರುತ್ತದೆ’ – ಎಂಬುದು ಅಂಬೇಡ್ಕರ್ ಅವರ ನಂಬಿಕೆಯಾಗಿತ್ತು. ಜಾತೀಯತೆಯನ್ನು ನಿರ್ಮೂಲಗೊಳಿಸಲು ರಾಜಕೀಯ ಅಧಿಕಾರ ಅತ್ಯವಶ್ಯ ಎಂದ ಅಂಬೇಡ್ಕರ್ ಮನುಷ್ಯರಿಗೆ ಧರ್ಮ ಬೇಕು ಎಂದು ನಂಬಿದ್ದರು. ಆದರೆ ಧರ್ಮದ ಹೆಸರಿನಲ್ಲಿ ಕೆಲವರು ತಮ್ಮ ಸಹಜೀವಿಗಳನ್ನು ಪ್ರಾಣಿಗಳಂತೆ ನೋಡುವುದರ ವಿರುದ್ಧ ಅವರು ಪ್ರತಿಭಟಿಸಿದರು. ಅಂಬೇಡ್ಕರ್ ಅವರನ್ನು ಹಲವರು ಟೀಕಿಸಿದರು. ಕೆಲವು ಪತ್ರಿಕೆಗಳು ಅವರ ವಿರುದ್ಧ ಬರೆದವು. ಹಲವು ಸಲ ಅವರ ಜೀವಕ್ಕೆ ಅಪಾಯ ಎದುರಾಗಿತ್ತು ಆದರೂ ಅಂಬೇಡ್ಕರ್ ಅಚಲವಾಗಿ ನಿಂತಿದ್ದರು.

ಇದರ ಜೊತೆಗೆ ಅವರು ಕಾನೂನು, ಭಾರತದ ಸಮಾಜಶಾಸ್ತ್ರ, ರಾಜಕೀಯ ಹಾಗೂ ಆರ್ಥಶಾಸ್ತ್ರದಲ್ಲಿ ಅವರ ಕೊಡುಗೆ ವ್ಯಾಪಕವಾದುದು. ಭಾರತದ ಆರ್ಥಿಕತೆಯ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಅಂಬೇಡ್ಕರ್ ಅವರ ಅಭಿಪ್ರಾಯಗಳು ಹಾಗೂ  ಕೃಷಿ ಮತ್ತು ರೈತ, ಕಾರ್ಮಿಕರು, ನೀರಾವರಿ ಮುಂತಾದ ವಿಷಯಗಳಿಗೆ ಸಂಬಂಧಿಸಿದ ಅವರ ಚಿಂತನೆಗಳು ಇಂದಿಗೂ ಗಂಭೀರ ಚರ್ಚೆಗೆ ಅರ್ಹವಾಗಿದೆ ಎಂದರೆ ತಪ್ಪಾಗದು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಾಷ್ಟ್ರೋತ್ಥಾನ ಪರಿಷತ್ತಿನಿಂದ ವಿಶಿಷ್ಟ ರೀತಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Wed Apr 14 , 2021
ಬೆಂಗಳೂರು, ಏಪ್ರಿಲ್ 14: ಹಲವು ರೀತಿಯ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್ ಈ ಬಾರಿಯ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆ. ಬೆಂಗಳೂರಿನ ಸಿದ್ದಾಪುರ ಬಳಿಯ ಹೊಂಬೇಗೌಡ ಸೇವಾಬಸ್ತಿ(ಸ್ಲಂ) ಯಲ್ಲಿ ರಾಷ್ಟ್ರೋತ್ಥಾನ ಪರಿಷತ್ತಿನ ಜಾಗರಣ ಪ್ರಕಲ್ಪವು ಅಂಬೇಡ್ಕರ್ ಜಯಂತಿಯನ್ನು ಆಚರಿಸಿತು. ಈ ನಿಮಿತ್ತ ಸೇವಾಬಸ್ತಿಯ 100ಕ್ಕೂ ಅಧಿಕ ಮಕ್ಕಳಿಗೆ ಉಚಿತವಾಗಿ 300 ನೋಟ್ ಬುಕ್ ಗಳನ್ನು ವಿತರಿಸಲಾಯಿತು. ಜಾಗರಣ ಪ್ರಕಲ್ಪದ ವೀರೇಶ್ ಅವರು ನೋಟ್ ಬುಕ್ […]