ಜಸ್ಟೀಸ್ ರಾಮಾಜೋಯಿಸ್‌: ಸಹೃದಯತೆಯ ಪರಿಪೂರ್ಣ ಜೀವಿಘನತೆ, ಗೌರವ, ಮಾನವೀಯತೆ, ಸಹೃದಯತೆಗಳ ನ್ಯಾಯಮೂರ್ತಿ

ಜಸ್ಟೀಸ್ ರಾಮಾಜೋಯಿಸ್‌: ಸಹೃದಯತೆಯ ಪರಿಪೂರ್ಣ ಜೀವಿಘನತೆ, ಗೌರವ, ಮಾನವೀಯತೆ, ಸಹೃದಯತೆಗಳ ನ್ಯಾಯಮೂರ್ತಿ
ಲೇಖನ : ದು ಗು ಲಕ್ಷ್ಮಣ, ಹಿರಿಯ ಪತ್ರಕರ್ತರು, ಅಂಕಣಕಾರರು

ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾಜೋಯಿಸ್‌ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ ಸಂಪತ್ತು ಅನನ್ಯ. ಅವರ ಬದುಕೇ ಒಂದು ಪಾಠ. ಅವರೇ ಒಂದು ಜ್ಞಾನಕೋಶ. ಅಂಥ ಮೇರುವ್ಯಕ್ತಿ ೨೦೨೧ ಫೆಬ್ರವರಿ ೧೬ರಂದು ಅಗಲಿದ್ದಾರೆ. ರಾಮಾಜೋಯಿಸ್‌ ಅವರನ್ನು ಅನೇಕ ವರ್ಷಗಳ ಕಾಲ ಬಹಳ ಹತ್ತಿರದಿಂದ ಒಡನಾಡಿದ ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣರು ಇಲ್ಲಿ ಸ್ಮರಿಸಿದ್ದಾರೆ.

ಅದು ಐವತ್ತರ ದಶಕದ ಕೊನೆಯ ಚರಣ. ಶಿವಮೊಗ್ಗದ ಬ್ರಾಹ್ಮಣ ವಿದ್ಯಾರ್ಥಿ ನಿಲಯದಲ್ಲಿ ಆರೆಸ್ಸೆಸ್‌ನ ಸಂಘ ಶಿಕ್ಷಾವರ್ಗ ಏರ್ಪಟ್ಟಿತ್ತು. ಮಧ್ಯದಲ್ಲಿ ಒಂದು ದಿನ ಶಿಕ್ಷಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ. ಶಿಬಿರದಲ್ಲಿ ವ್ಯವಸ್ಥೆಯ ದೃಷ್ಟಿಯಿಂದ ಆಗಿರಬಹುದಾದ ತಪ್ಪುಗಳ ಬಗ್ಗೆ ಒಂದು ಅದಾಲತ್‌ ಕಾರ್ಯಕ್ರಮ. ಆ ಅದಾಲತ್‌ ಕಾರ್ಯಕ್ರಮದಲ್ಲಿ ನ್ಯಾಯಾಧೀಶರ ಪಾತ್ರ ವಹಿಸಿದಾತ ಒಬ್ಬ ತರುಣ. ಆಗಿನ್ನೂ ಪದವಿ ಮುಗಿಸಿದ್ದ. ನ್ಯಾಯಾಧೀಶರ ಪಾತ್ರ ವಹಿಸಿ ಆತ ನೀಡುತ್ತಿದ್ದ ಚುರುಕಿನ ತೀರ್ಪುಗಳು ಅಲ್ಲಿದ್ದ ಸಂಘದ ಹಿರಿಯ ಪ್ರಚಾರಕರಾಗಿದ್ದ ಯಾದವ್‌ರಾವ್‌ ಜೋಷಿ ಅವರ ಗಮನ ಸೆಳೆಯಿತು.

ಕಾರ್ಯಕ್ರಮ ಮುಗಿದ ಬಳಿಕ ಆ ತರುಣನನ್ನು ಹತ್ತಿರ ಕರೆದು ʼಜಡ್ಜ್‌ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿರುವೆ. ನೀನೇಕೆ ಕಾನೂನು ಪದವಿ ಓದಿ ನ್ಯಾಯವಾದಿ ಆಗಬಾರದು?ʼ ಎಂದರು. “ಸರ್‌, ಮನೆಯಲ್ಲಿ ಬಡತನ. ಈಗ ಡಿಗ್ರಿ ಮುಗಿಸಿದ್ದೇ ದೊಡ್ಡದು. ಇನ್ನು ಲಾ ಓದಲು ದುಡ್ಡೆಲ್ಲಿ? ನಾನು ಯಾವುದಾದರೂ ಹೈಸ್ಕೂಲ್‌ನಲ್ಲಿ ಶಿಕ್ಷಕನಾಗಿ ದುಡಿಬೇಕೆಂದಿರುವೆ” ಎಂದು ಆ ತರುಣ ವಿನೀತನಾಗಿ ಹೇಳಿದ. ಆದರೆ, ಯಾದವ್‌ರಾವ್ ಜೀ ಬಿಡಲಿಲ್ಲ. “ಇಲ್ಲ. ನೀನು ಬೆಂಗಳೂರಿಗೆ ಬಾ. ನಿನಗೆ ಲಾ ಓದಲು ಎಲ್ಲ ವ್ಯವಸ್ಥೆ ಮಾಡುವೆ” ಎಂದು ಭರವಸೆ ಕೊಟ್ಟರು. ಆ ತರುಣ ಯಾದವ್‌ರಾವ್ ಜೀ ಮಾತಿಗೆ ಕಟ್ಟುಬಿದ್ದು ಬೆಂಗಳೂರಿಗೆ ಹೊರಟ.ʼವಿಕ್ರಮʼದಲ್ಲಿ ಉಪ ಸಂಪಾದಕ ಬೆಂಗಳೂರಿನಲ್ಲಿ ಚಾಮರಾಜಪೇಟೆಯ ʼವಿಕ್ರಮʼ ವಾರಪತ್ರಿಕೆಯಲ್ಲಿ ತಾತ್ಕಾಲಿಕ ಉಪ ಸಂಪಾದಕನ ಕೆಲಸ. ಕೊಡುತ್ತಿದ್ದ ವೇತನ ಅಷ್ಟೋಇಷ್ಟು. ಸಂಜೆಯಾದ ಬಳಿಕ ಲಾ ಕಾಲೇಜಿನಲ್ಲಿ ವ್ಯಾಸಂಗ. ʼವಿಕ್ರಮʼದಲ್ಲಿ ಕೊಡುತ್ತಿದ್ದ ವೇತನ ಕಾಲೇಜಿನ ಫೀಸಿಗೆ ಸರಿ ಹೊಂದುತ್ತಿತ್ತು. ಕೊನೆಗೂ ಆ ತರುಣ ಲಾ ಪದವಿಧರನಾದ. ವಕೀಲ ವೃತ್ತಿ ಆರಂಭಿಸಿದ. ಆತ ಕೈಗೆ ತೆಗೆದುಕೊಂಡ ಒಂದೊಂದು ಮೊಕದ್ದಮೆಗಳಲ್ಲೂ ಗೆಲುವು.

ಜನಪ್ರಿಯ ವಕೀಲನೆನಿಸಿಕೊಂಡ. ಹೈಕೋರ್ಟ್‌ನಲ್ಲಿ ವೃತ್ತಿ ಆರಂಭಿಸಿ ಜನಪ್ರಿಯ ʼರಿಟ್‌ ಪಿಟಿಷನ್‌ ಲಾಯರ್‌ʼ ಎನಿಸಿಕೊಂಡ.ಹೀಗೆ ಹೈಸ್ಕೂಲ್‌ ಶಿಕ್ಷಕನಾಗಿ ಎಲ್ಲೋ ಕಳೆದು ಹೋಗಬೇಕಿದ್ದ ಆ ತರುಣನೆ ಮುಂದೆ ಪ್ರಖ್ಯಾತ ನ್ಯಾಯಾಧೀಶ, ರಾಜ್ಯಪಾಲರೆನಿಸಿಕೊಂಡ. ಫೆಬ್ರವರಿ ೧೬ರಂದು (೨೦೨೧) ನಿಧನರಾದ ಜಸ್ಟೀಸ್‌ ರಾಮಾಜೋಯಿಸ್‌. ನ್ಯಾಯವಾದಿಯಾದ ಬಳಿಕ ರಾಮಾಜೋಯಿಸ್‌ ಮತ್ತೆ ಹಿಂದುರಿಗಿ ನೋಡಲೇ ಇಲ್ಲ. ೧೯೭೫ ತುರ್ತು ಪರಿಸ್ಥಿತಿ ವೇಳೆ ಬಂಧನದಲ್ಲಿದ್ದ ವಾಜಪೇಯಿ, ಆಡ್ವಾಣಿ ಪರ ಕೋರ್ಟಿನಲ್ಲಿ ವಾದಿಸಿ, ಅವರನ್ನು ಬಿಡುಗಡೆಗೊಳಿಸುವಂತೆ ನ್ಯಾಯಾಲಯವನ್ನು ಆಗ್ರಹಿಸಿದ್ದರು. ಅವರ ವಾದ ಎಷ್ಟು ಪರಿಣಾಮಕಾರಿಯಾಗಿತ್ತೆಂದರೆ ಸ್ವತಃ ರಾಮಾಜೋಯಿಸ್‌ ಅವರನ್ನೇ ದೇವರಾಜ ಅರಸು ಸರಕಾರ ʼಮೀಸಾʼ ಕಾಯ್ದೆಯಡಿ ಬಂಧಿಸಿ ೨೧ ತಿಂಗಳ ಕಾಲ ಕಾರಾಗೃಹದಲ್ಲಿರಿಸಿತ್ತು!ರಾಮಾಜೋಯಿಸ್‌ ಅವರ ಅದೃಷ್ಟದ ಬಾಗಿಲು ತೆರೆದಿದ್ದು ಆಗಲೇ ಇರಬಹುದು. ತುರ್ತು ಪರಿಸ್ಥಿತಿ ತೊಲಗಿ ಎಲ್ಲರ ಬಿಡುಗಡೆಯಾಗಿ ಕೇಂದ್ರದಲ್ಲಿ ಜನತಾ ಸರಕಾರದ ಆಡಳಿತ ಬಂದಾಗ ರಾಮಾಜೋಯಿಸ್‌ ನ್ಯಾಯಾಧೀಶರಾಗುವ ಭಾಗ್ಯ ತಾನಾಗಿಯೇ ಒಲಿಯಿತು. ಆ ನಂತರ ಪಂಜಾಬ್-ಹರಿಯಾಣ ಹೈಕೋರ್ಟ್‌ಗೆ ನ್ಯಾಯಮೂರ್ತಿ, ಬಳಿಕ ಮುಖ್ಯ ನ್ಯಾಯಮೂರ್ತಿಯೂ ಆಗಿ ನಿವೃತ್ತರಾದರು.

ಕೇಂದ್ರದಲ್ಲಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೇರಿದಾಗ ರಾಮಾಜೋಯಿಸ್‌ ಬಿಹಾರ, ಆ ನಂತರ ಜಾರ್ಖಂಡ್‌ ರಾಜ್ಯಗಳ ರಾಜ್ಯಪಾಲರಾಗುವ ಅವಕಾಶವೂ ಒದಗಿ ಬಂತು. ಸರಕಾರಿ ಮಟ್ಟದ ಅನೇಕ ಉನ್ನತ ಮಟ್ಟದ ಸಮಿತಿಗಳಿಗೆ ಮಾರ್ಗದರ್ಶಕರಾಗಿ, ಸದಸ್ಯರಾಗಿ, ಅಧ್ಯಕ್ಷರಾಗಿ ಅವರ ಸೇವೆ ಪ್ರಶಂಸನೀಯ. ರಾಜ್ಯಸಭೆ ಸದಸ್ಯರಾಗಿಯೂ ಅವರ ಸೇವೆ ಸ್ಮರಣೀಯ.ಪ್ರಜಾಪ್ರಭುತ್ವದ ದೇಗುಲದಲ್ಲಿದೆಹಲಿಯಲ್ಲಿರುವ ಪ್ರಜಾಪ್ರಭುತ್ವದ ದೇಗುಲ ಪಾರ್ಲಿಮೆಂಟ್‌ ಭವನವನ್ನು ವೀಕ್ಷಿಸಿದಾಗ ಎಂಥವರಿಗೂ ಅದರ ಭವ್ಯತೆ, ಮಹಾನತೆ ನೋಡಿ ಆನಂದವಾಗದೇ ಇರದು. ಭವ್ಯ ಹಾಗೂ ಸುಂದರ ಕಟ್ಟಡವಾಗಿ ಕಾಣುವ ಅದು ಒಳಗೂ ಕೂಡ ತನ್ನ ಸೌಂದರ್ಯವನ್ನು ಕಾಪಾಡಿಕೊಂಡಿದೆ. ಆ ಸೌಂದರ್ಯವನ್ನು ಕಾಣುವ ಒಳಗಣ್ಣು ಅಲ್ಲಿಗೆ ಹೋದವರಿಗೆ ಇರಬೇಕಷ್ಟೇ. ದೆಹಲಿಯ ಸಂಸತ್‌ ಭವನದ ಒಳಗಿನ ಸೌಂದರ್ಯವನ್ನು ಕಣ್ಣಾರೆ ಕಂಡು ಸಂತಸಪಟ್ಟವರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದ ರಾಮಾಜೋಯಿಸ್‌ ಪ್ರಮುಖರು. ಸಂಸತ್‌ ಭವನದ ಒಳನೋಟದ ಸೌಂದರ್ಯವನ್ನು ತಾವೊಬ್ಬರೇ ಸವಿದರೆ ಸಾಲದು, ಅದನ್ನು ಉಳಿದವರು ಸವಿಯುವಂತೆ ಆಗಬೇಕು, ಸವಿದು ಕೃತಾರ್ಥರಾಗಬೇಕು ಎಂಬ ಹಂಬಲದಿಂದ ಅವರು ಸಂಸತ್‌ ಭವನದೊಳಗಿನ ಸೌಂದರ್ಯವನ್ನು ಪುಸ್ತಕರೂಪದಲ್ಲಿ ದಾಖಲಿಸಿದ್ದರು. ʼಭಾರತದ ಸಂಸತ್‌ ಭವನದಲ್ಲಿ ಅಂಕಿತವಾಗಿರುವ ಸಂದೇಶಗಳುʼ ಎಂಬ ಶೀರ್ಷಿಕೆಯಡಿಯಲ್ಲಿ ಆ ಪುಸ್ತಕ ಪ್ರಕಟವಾಗಿದೆ. ಇಂಗ್ಲೀಷ್‌ನಲ್ಲೂ ʼಮೆಸಸಾಗೆ ರೊಮ ಪಾರಲಿಮೆನತ ಹೊಉಸೆ ಬಹಾರಾತಹʼ ಎಂಬ ಹೆಸರಿನಲ್ಲಿ ಪ್ರಕಟವಾಗಿ ದೇಶದ ಗಣ್ಯಾತಿಗಣ್ಯರೆಲ್ಲ ಅದನ್ನು ಪ್ರಶಂಸಿದ್ದಾರೆ.

ಅಸಲಿಗೆ ಆ ಪುಸ್ತಕದಲ್ಲಿ ಇರುವುದಾದರೂ ಏನು? ೨೦೦೮ರ ಜೂನ್‌ ೧೬ರಂದು ರಾಜ್ಯಸಭೆಗೆ ಚುನಾಯಿತರಾದ ರಾಮಾಜೋಯಿಸ್‌ ಪ್ರಮಾಣ ವಚನ ಸ್ವೀಕರಿಸಿದ್ದು ಅಗಸ್ಟ್‌ ೧೨ರಂದು. ಅದೇ ವರ್ಷದ ಅಗಸ್ಟ್‌ ೧೭ರಂದು ಸಂಸತ್‌ ಭವನದಲ್ಲಿ ಅವರಿಗೆ ನಿಗಧಿಯಾಗಿದ್ದ ಸ್ಥಾನದಲ್ಲಿ ಕುಳಿತುಕೊಳ್ಳಲೆಂದು ದ್ವಾರದ ಬಳಿ ಹೋದಾಗ ಅವರು ಮೊದಲು ಗುರುತಿಸಿದ್ದು ಒಳಗೆ ಕುಳಿತಿದ್ದ ಇತರೆ ಸದಸ್ಯರನ್ನಲ್ಲ. ಆದರೆ, ಆ ದ್ವಾರದ ಮೇಲ್ಭಾಗದಲ್ಲಿ ಸಿಮೆಂಟ್‌ನಲ್ಲಿ ದೇವನಾಗರಿ ಲಿಪಿಯಲ್ಲಿ ಬಂಗಾರದ ಬಣ್ಣದಲ್ಲಿ ಕೆತ್ತಲಾಗಿದ್ದ ಭಗವದ್ಗೀತೆಯ ʼಸ್ವೇ ಸ್ವೇ ಕರ್ಮಣ್ಯ ಭಿರತಃ ಸಂಸಿದ್ಧಿಂ ಲಭತೇ ನರಃʼ ಎಂಬ ೧೮ನೇ ಅಧ್ಯಾಯದ ೪೫ನೇ ಶ್ಲೋಕವನ್ನು. ʼಪ್ರತಿಯೊಬ್ಬ ವ್ಯಕ್ತಿಯೂ ತನ್ನ ಪಾಲಿಗೆ ಬಂದ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಸರಿಯಾಗಿ, ಪ್ರಾಮಾಣಿಕವಾಗಿ ನಿರ್ವಹಿಸಿದರೆ ಜೀವನದಲ್ಲಿ ಯಶಸ್ಸು ಖಂಡಿತಾ ಲಭ್ಯʼ ಎಂಬುದೇ ಆ ಶ್ಲೋಕದ ಅರ್ಥ. ಸಂಸತ್‌ ಭವದ ಉಳಿದ ದ್ವಾರಗಳನ್ನು ಗಮನಿಸಿದಾಗ ರಾಮಾಜೋಯಿಸ್‌ ಅವರಿಗೆ ಅಲ್ಲೆಲ್ಲ ಭಗವದ್ಗೀತೆ, ರಾಮಾಯಣ, ಮಹಾಭಾರತ, ಪಂಚತಂತ್ರ, ತೈತ್ತೇರಿಯಾ ಉಪನಿಷತ್‌ ಶಿಕ್ಷಾವಲ್ಲಿ, ಋಗ್ವೇದ, ಮನುಸೃತಿ, ಮುಂಡಕೋಪನಿಷತ್‌, ಕೌಟಿಲ್ಯನ ಅರ್ಥಶಾಸ್ತ್ರ, ಶುಕ್ರನೀತಿಯಲ್ಲಿ ಹೇಳಿದ ರಾಜಧರ್ಮ ಮುಂತಾದವುಗಳಿಂದ ಆಯ್ದ ಶ್ಲೋಕಗಳು ಕಂಡು ಬಂದವು.ಮಾರ್ಗರೇಟ್‌ ಆಳ್ವಾ ನೀಡಿದ ಪ್ರತಿಕ್ರಿಯೆಸಂಸತ್‌ ಭವನದ ದ್ವಾರ ದ್ವಾರಗಳ ಮೇಲೆ, ಗೋಡೆ ಗೋಡೆಗಳ ಮೇಲೆ ಸದಸ್ಯರಿಗೆ ಅದ್ಭುತ ಜ್ಞಾನದ ಝರಿಯನ್ನೇ ಹರಿಸು ಶ್ಲೋಕ, ಸೂಕ್ತಿಗಳನ್ನು ಬರೆದಿದ್ದ ಪುಣ್ಯಾತ್ಮನಾದರೂ ಯಾರು? ಎಂದು ರಾಮಾಜೋಯಿಸ್‌ ತಲೆಕೆಡಿಸಿಕೊಂಡು ಸಂಶೋಧನೆ ಮಾಡಿದಾಗ ಅವರಿಗೆ ಇನ್ನಷ್ಟು ಕುತೂಹಲಕರ ಮಾಹಿತಿಗಳು ದೊರೆತವು. ಲೋಕಸಭೆಯ ಮೊದಲನೇ ಅಧ್ಯಕ್ಷರಾಗಿದ್ದ ಗಣೇಶ್‌ ವಾಸುದೇವ ಮಾವಳಂಕರ್‌ (ಜಿ.ವಿ.ಮಾವಳಂಕರ್‌) ಅವರು ರಚಿಸಿದ್ದ ಇನ್‌ಸ್ಕ್ರಿಪ್ಷನ್‌ ಸಮಿತಿ ಈ ಕೆಲಸ ನಿರ್ವಹಿಸಿದ್ದೆಂದು ತಿಳಿದುಬಂತು. ರಾಮಾಜೋಯಿಸ್‌ ಅವರು ಇದನ್ನೆಲ್ಲ ಸಂಗ್ರಹಿಸಿ ಆ ಪುಸ್ತಕವನ್ನು ಎಲ್ಲ ಪ್ರಮುಖರಿಗೂ ಕಳಿಸಿದರು. ಹಿಂದೆ ಕೇಂದ್ರ ಸಚಿವರಾಗಿದ್ದ, ಅನಂತರ ಉತ್ತರಾಖಂಡದ ರಾಜ್ಯಪಾಲರಾದ ಮಾರ್ಗರೇಟ್‌ ಆಳ್ವಾ ಅವರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ? “I spent 30 years in Parliament. But this is for the first time that I have read and deciphered the messages engraved in the Parliament house building. They are truely inspiring and meaningful.” (೩೦ ವರ್ಷ ಕಾಲ ಪಾರ್ಲಿಮೆಂಟ್‌ನಲ್ಲಿ ಕಳೆದಿದ್ದರೂ ಮೊದಲನೇ ಬಾರಿಗೆ ಈ ಸಂದೇಶಗಳನ್ನು ನಿಮ್ಮ ಪುಸ್ತಕದಲ್ಲಿ ನೋಡುತ್ತಿರುವೆ. ಅವು ನಿಜಕ್ಕೂ ಪ್ರೇರಣಾದಾಯಕ ಹಾಗೂ ಅರ್ಥಪೂರ್ಣ.)ರಾಮಾಜೋಯಿಸ್‌ ನಗರ ರಾಮಾಜೋಯಿಸ್‌ ಅವರು ಇದಲ್ಲದೆ ಇನ್ನೂ ಹಲವು ಉಪಯಕ್ತ ಗ್ರಂಥಗಳನ್ನು ಇಂಗ್ಲಿಷ್‌ ಹಾಗೂ ಕನ್ನಡದಲ್ಲಿ ಬರೆದಿದ್ದಾರೆ. ಸಂವಿಧಾನ, ಕಾನೂನು-ಕಟ್ಟಳೆ ಕುರಿತು ಅವರು ನೀಡಿರುವ ನೀಡಿರುವ ಹಲವು ಮಹತ್ವದ ತೀರ್ಪುಗಳು ಈಗಲೂ reference judgementಗಳಾಗಿ ಬಳಸಲ್ಪಡುತ್ತಿವೆ.

ತುಮಕೂರು ಬಳಿಯ ದಲಿತ ಕೇರಿಯ ನಿವಾಸಿಗಳ ಜಮೀನನ್ನು ಯಾರೋ ಪಟ್ಟಭದ್ರರು ವಶಪಡಿಸಿಕೊಂಡು ತೊಂದರೆ ನೀಡಿದಾಗ, ರಾಮಾಜೋಯಿಸ್‌ ದಲಿತ ಬಂಧುಗಳ ಪರ ವಕಾಲತ್ತು ವಹಿಸಿ, ಅವರಿಗೆ ನ್ಯಾಯ ಸಿಗುವಂತೆ ಮಾಡಿದ ಧೀಮಂತ ನ್ಯಾಯಮೂರ್ತಿ. ಮತ್ತೆ ಭೂಮಿ ಪಡೆದುಕೊಂಡ ಆ ದಲಿತರು ತಮ್ಮ ಕೇರಿಗೆ ʼರಾಮಾಜೋಯಿಸ್‌ ನಗರʼ ಎಂದು ನೂತನ ನಾಮಕರಣ ಮಾಡಿದ್ದು ರಾಮಾಜೋಯಿಸ್‌ ಅವರ ಸಾಮಾಜಿಕ ಸಾಮರಸ್ಯ, ಸಮಾನತೆ, ಮಾನವೀಯ ಅನುಕಂಪಕ್ಕೆ ಸಂಕೇತ.ಹಿಂದಿನಿಂದಲೂ ನನ್ನ ಪರಿಚಯವಿದ್ದ ರಾಮಾಜೋಯಿಸ್‌ ʼಹೊಸದಿಗಂತʼ ಮತ್ತು ʼವಿಕ್ರಮʼ ಪತ್ರಿಕೆಗಳ ಹಲವು ಕಾರ್ಯಕ್ರಮಗಳಿಗೆ ಆಗಮಿಸಿ ಹರಸಿದ್ದರು. ಬೆನ್ನು ತಟ್ಟಿದ್ದರು. ಉತ್ತಮ ಅಂಕಣಗಳನ್ನು ಬರೆದ ದಿನ ತಪ್ಪದೇ ನನಗೆ ಫೋನ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದ ಆ ಹೃದಯವಂತರನ್ನು ನಾನು ಹೇಗೆ ಮರೆಯಲಿ?ಸರಳತೆ, ಶಿಸ್ತು, ಸಜ್ಜನಿಕೆ, ಪ್ರಾಮಾಣಿಕತೆ, ಸಂಸ್ಕಾರಭರಿತ ವ್ಯಕ್ತಿತ್ವದ ಪ್ರತಿರೂಪವೇ ಅವರಾಗಿದ್ದರು ಎಂದರೆ ಖಂಡಿತಾ ಅದು ಅತಿಶಯೋಕ್ತಿ ಅಲ್ಲ. ಸಾದಾರಣಾಗಿ ಗಂಭೀರ ವದನರಾಗಿರುವ ಜಡ್ಜ್‌ಗಳನ್ನು ಮಾತನಾಡಿಸುವುದೇ ಕಷ್ಟ. ಆದರೆ, ರಾಮಾಜೋಯಿಸ್‌ ಅದಕ್ಕೆ ಅಪವಾದ. ಬೇರೆಯವರು ಮಾತನಾಡಿಸುವ ಮುನ್ನವೇ ಅವರೇ ಪ್ರೀತಿಯಿಂದ ಸಲುಗೆಯಿಂದ ಮಾತನಾಡಿಸಿ ಕುಶಲ ವಿಚಾರಿಸುತ್ತಿದ್ದರು. ಆಗೆಲ್ಲ ಅವರು ನಮಗೆ ಜಡ್ಜ್‌ ಅನಿಸುತ್ತಲೇ ಇರಲಿಲ್ಲ. ನಮ್ಮ ಕುಟುಂಬದ ದೊಡ್ಡಪ್ಪನೋ ತಾತನೋ ಅವರಾಗಿದ್ದರು ಅನಿಸುತ್ತಿತ್ತು.

ತೀರ್ಥಹಳ್ಳಿ ತಾಲ್ಲೂಕು ಕುವೆಂಪು, ಹಾ.ಮಾ.ನಾಯಕ್‌, ಎಂ.ಕೆ.ಇಂದಿರಾ, ಅನಂತಮೂರ್ತಿ ಮೊದಲಾದ ಪ್ರಸಿದ್ಧ ಸಾಹಿತಿಗಳನ್ನು ನಾಡಿಗೆ ನೀಡಿದೆ. ಅದೇ ಸಾಲಿನಲ್ಲಿ ರಾಮಾಜೋಯಿಸ್‌ರವರಂಥ ಶ್ರೇಷ್ಠ ನ್ಯಾಯಮೂರ್ತಿಯನ್ನು ನೀಡಿದೆ ಎಂದಬುದು ಇಡೀ ಮಲೆನಾಡಿಗರಿಗೆ ಹೆಮ್ಮಯ ಸಂಗತಿ. ಸಂಘದ ಗರಡಿಯಲ್ಲಿ ಬೆಳೆದ ಅವರೊಬ್ಬ ಆದರ್ಶ ಸ್ವಯಂ ಸೇವಕ.

ದು ಗು ಲಕ್ಷ್ಮಣ, ಹಿರಿಯ ಪತ್ರಕರ್ತರು, ಅಂಕಣಕಾರರು

ದು.ಗು.ಲಕ್ಷ್ಮಣ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

Thu Feb 18 , 2021
ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ ಲೇಖಕರು: ಗಣೇಶ್‌ ವಂದಗದ್ದೆ, ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿಗಳು               ಗೋಪಾಲಕೃಷ್ಣ ಅಡಿಗರು ಜನಿಸಿದ್ದು ದಿನಾಂಕ 18/02/1918ರಂದು ದಕ್ಷಿಣಕನ್ನಡ ಜಿಲ್ಲೆಯ ಮೊಗೇರಿ ಎಂಬ ಸಣ್ಣ ಹಳ್ಳಿಯಲ್ಲಿ. ಅಡಿಗರದ್ದು ಪುರೋಹಿತರ ಮನೆತನ. ತಂದೆ ರಾಮಪ್ಪ ಅಡಿಗರು ಮತ್ತು ತಾಯಿ ಗೌರಮ್ಮ. ಜ್ಯೋತಿಷ್ಯ ಹೇಳುವುದು, ಪೌರೋಹಿತ್ಯ ಮತ್ತು ವ್ಯವಸಾಯ ಈ ಕುಟುಂಬದ ಮುಖ್ಯ ಉದ್ಯೋಗಗಳಾಗಿದ್ದವು. ಜೊತೆಜೊತೆಯಲ್ಲಿ ಅಡಿಗರ ಕುಟುಂಬದವರು ಪಂಚಾಂಗವನ್ನು ಕೂಡಾ ರಚನೆ ಮಾಡುತ್ತಾರೆ. […]