ಮಾತೃಭಾಷಾ ಶಿಕ್ಷಣ ಅಗತ್ಯವೇ? : ಗುರುರಾಜ ಕರಜಗಿ

ಭಾಗ-1

ಕುವೆಂಪು ಅವರನ್ನು ಒಬ್ಬರು ’ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಬೇಕೇ ಅಥವಾ ಇಂಗ್ಲಿಷ್ ನಲ್ಲಿ ಇರಬೇಕೇ’ ಎಂದು ಕೇಳಿದರು. ಅದಕ್ಕೆ ಅವರು ಒಂದೇ ಮಾತಿನಲ್ಲಿ ಹೇಳಿಬಿಟ್ಟರು:  ’ಶಿಕ್ಷಣವು ಯಾವ ಭಾಷೆಯಲ್ಲಿ ಇರಬೇಕೆಂಬುದು ಚರ್ಚೆ ಮಾಡುವ ವಿಷಯವೇ ಅಲ್ಲ. ಏಕೆಂದರೆ ಮಕ್ಕಳಿಗೆ ಮಾತೃಭಾಷೆ ಎಂದರೆ ತಾಯಿಯ ಹಾಲು ಇದ್ದ ಹಾಗೆ. ಮಗುವಿಗೆ ತಾಯಿಯ ಹಾಲು ಬೇಕಾ ಅಂತ ನೀವು ಪ್ರಶ್ನೆ ಕೇಳುತ್ತೀರಾ? ಕೇಳುವುದಿಲ್ಲ. ಆದ್ದರಿಂದ ಇದು ಚರ್ಚೆಯ ವಿಷಯ? ಅಲ್ಲ. ಮಕ್ಕಳಿಗೆ ಮಾತೃಭಾಷೆಯಲ್ಲೇ ಕಲಿಸಬೇಕು’.

ಇದನ್ನು ೨-೩ ದೃಷ್ಟಿಯಿಂದ ನೋಡಬೇಕಾಗುತ್ತದೆ. ಭಾಷೆಶಾಸ್ತ್ರದ ಕುರಿತ ಒಂದು ಸಂಶೋಧನಾ ಪ್ರಬಂಧವನ್ನು ನಾನು ನೋಡುತ್ತಿದ್ದೆ. ೧೯೦೦ನೇ ಇಸವಿಯಲ್ಲಿ ನಡೆದ ಭಾಷೆ ಗಣತಿಯ ಪ್ರಕಾರ ಪ್ರಪಂಚದಲ್ಲಿ ಆಗ ಹತ್ತು ಸಾವಿರ ಭಾಷೆಗಳಿದ್ದವು. ಆದರೆ ೨೦೦೦ದ ವೇಳೆಗೆ ೬,೭೦೦ ಭಾಷೆಗಳು ಮಾತ್ರ ಉಳಿದಿದ್ದವು; ಅಂದರೆ ೩,೩೦೦ ಭಾಷೆಗಳು ಅಳಿದುಹೋ?ಗಿವೆ. ಆ ಭಾಷೆಗಳಲ್ಲಿ ಮಾತನಾಡುವವರು ಒಬ್ಬರೂ ಇಲ್ಲ! ೬,೭೦೦ ಭಾಷೆಗಳಲ್ಲಿ ಅರ್ಧದಷ್ಟು, ಅಂದರೆ ಸುಮಾರು ೩,೩೫೦ ಭಾಷೆಗಳನ್ನು ಮಾತ್ರ ಮಾತನಾಡುತ್ತಾ ಬಳಸುತ್ತಾ ಇದ್ದಾರೆ; ಅವು ಕೂಡ ಕಷ್ಟದಲ್ಲಿವೆ. ೨೦೦೧ರ ಜನಗಣತಿ ಪ್ರಕಾರ ಭಾರತದಲ್ಲಿ ಸುಮಾರು ೧೨೨ ಪ್ರಮುಖ ಭಾಷೆಗಳು ಮತ್ತು ೧೫೯೯ ಉಪ ಭಾಷೆಗಳಿದ್ದವು. ಎಷ್ಟು ಶ್ರೀಮಂತ ದೇಶ ನಮ್ಮದು? ಅಷ್ಟೋಂದು ಭಾಷೆಗಳು ಯಾಕೆ ಉಳಿದಿಲ್ಲ? ಯಾವುದಾದರೂ ಒಂದು ಭಾಷೆ ಮತ್ತೊಂದು ಭಾಷೆಯನ್ನು ತಿಂದುಹಾಕಲು ಸಾಧ್ಯವಿದೆಯಾ? ಎಷ್ಟು ಬಾರಿ ಹಾಗೆ ಆಗಿದೆ! ಅಂದರೆ ನಾವು ಭಾಷೆಗಳ ಬಗ್ಗೆ, ನಮ್ಮ ಮಾತೃಭಾಷೆಗಳ ಬಗ್ಗೆ ಪ್ರೀತಿಯನ್ನು ಕಳೆದುಕೊಂಡಿದ್ದೇವೆ. ಅದು ಯಾಕಾಯಿತು, ಹೇಗಾಯಿತು ಎನ್ನುವ ಬಗ್ಗೆ ವಿಚಾರ ಮಾಡೋಣ.

ಪ್ರಪಂಚದಾದ್ಯಂತ ಎಲ್ಲ ಶಿಕ್ಷಣ ತಜ್ಞರು ಏಕಾಭಿಪ್ರಾಯದಿಂದ ಒಪ್ಪಿಕೊಳ್ಳುವ ಒಂದು ವಿಷಯವೆಂದರೆ, ಮಗುವಿನ ಕಲಿಕೆ ತುಂಬ ಹೆಚ್ಚಾಗುವುದು ಮಾತೃಭಾಷೆಯಲ್ಲಿ ಕಲಿತಾಗ ಮಾತ್ರ. ಇದರ ಬಗ್ಗೆ ಎರಡು ಮಾತಿಲ್ಲ. ಮಾತೃಭಾಷೆಯೇ ಮಕ್ಕಳಿಗೆ ಕೊಡಬೇಕಾದದ್ದು. ಶಿಕ್ಷಣ ಇಲಾಖೆ ಕಾರ್ಯದರ್ಶಿಯಾಗಿದ್ದ ನನಗೆ ಪರಿಚಯದ ಐಎಎಸ್ ಅಧಿಕಾರಿಯೊಬ್ಬರು ಒಂದು ಪ್ರಶ್ನೆ ಕೇಳಿದರು: ಮಗುವಿನ ಮಾತೃಭಾಷೆ ಎಂದರೇನು? ನಾನು ಬಂಗಾಳಿ; ನನ್ನ ಹೆಂಡತಿ ಕೇರಳದವಳು. ನನಗೆ ಮಲೆಯಾಳಿ ಬರುವುದಿಲ್ಲ; ಆಕೆಗೆ ಬಂಗಾಳಿ ಬರುವುದಿಲ್ಲ. ನನ್ನ ಮಕ್ಕಳ ಭಾಷೆ ಯಾವುದು? ನಾನು ಹೇಳಿದೆ, ನೋಡಿ, ನೀವೇನೋ ಪುಣ್ಯದ ದೆಸೆಯಿಂದ ಎಜುಕೇಶನ್ ಸೆಕ್ರೆಟರಿ ಆಗಿದ್ದೀರಿ. ಮಾತೃಭಾಷೆ ಎಂದರೆ ತಾಯಿ ಮಾತನಾಡುವ ಭಾಷೆ ಎಂಬ ಒಂದೇ ಅರ್ಥ ಅಲ್ಲ; ಪರಿಸರದ ಭಾಷೆ ಕೂಡ ಮಾತೃಭಾಷೆಯೇ. ನಾವು ಬದುಕುವ ಜಾಗದಲ್ಲಿ ಮಗುವಿಗೆ ಸಿಗುವ ಭಾಷೆ ಯಾವುದು? ನಮ್ಮ ಸುತ್ತಮುತ್ತ ಕನ್ನಡ ಭಾಷೆ ಇದೆ. ನೀವು ತರಕಾರಿ ತರಲು ಹೋದರೆ ಪಂಜಾಬಿ ಭಾಷೆಯಲ್ಲಿ ಮಾತನಾಡುತ್ತೀರಾ? ಅದಕ್ಕಾಗಿ ನಾವು ಇಲ್ಲಿ ಮಾತನಾಡುವ ಕನ್ನಡವನ್ನೇ ಮಾತೃಭಾಷೆ ಅನ್ನುವುದು. ಭೂಮಿಯನ್ನು ಕೂಡ ತಾಯಿ, ಭಾರತಮಾತೆ ಕನ್ನಡಮಾತೆ ಎಂದು ಕರೆಯುವುದು ಅದಕ್ಕಾಗಿಯೇ. ಅದರ ಭಾಷೆ ನನ್ನ ಭಾಷೆ. ಅಂತಹ ಮಾತೃಭಾಷೆಯಲ್ಲಿ ಮಕ್ಕಳು ಚೆನ್ನಾಗಿ ಕಲಿಯುತ್ತಾರೆ.

ನಾವು ಕಲಿಯುವಾಗ ಇಂಗ್ಲಿಷ್ ಮಾಧ್ಯಮ ಇರಲೇ ಇಲ್ಲ. ಕನ್ನಡ ಮಾಧ್ಯಮ ಮಾತ್ರ ಇತ್ತು. ಅದರಿಂದ ನಮ್ಮ ಕಲಿಕೆಗೆ ಏನೂ ತೊಂದರೆಯಾಗಲಿಲ್ಲ. ಉನ್ನತ ಶಿಕ್ಷಣಕ್ಕೂ ತೊಂದರೆಯಾಗಲಿಲ್ಲ. ನನಗೆ ಕನ್ನಡ ಕಲಿಸಿದ ಮೇಷ್ಟ್ರು ಈವತ್ತಿಗೆ ನನಗೆ ನೆನಪಿದ್ದಾರೆ; ಅವರು ಕಲಿಸಿದ ಒಂದೊಂದು ಮಾತೂ ನೆನಪಿದೆ. ವರದರಾಜ ಹುಯಿಲಗೋಳ ಎಂದು, ನಾರಾಯಣರಾವ್ ಹುಯಿಲಗೋಳ ಅವರ ಅಣ್ಣನ ಮಗ. ಅವರು ನಮಗೆಲ್ಲ ಕನ್ನಡ ಕಲಿಸಿದರು. ಏನು ಖುಷಿಯಿಂದ ಅವರು ಕನ್ನಡ ಕಲಿಸುತ್ತಿದ್ದರು! ಕುಮಾರವ್ಯಾಸ ಭಾರತದ ಪದ್ಯಗಳಿಗೆ ಅವರದೊಂದು ಸ್ಟೈಲ್ ಇತ್ತು. ಕನ್ನಡಕ ತಲೆಯ ಮೇಲೆ ಇರುತ್ತಿತ್ತು. ಅವರು ಕ್ಲಾಸಿಗೆ ಪುಸ್ತಕ ತರುತ್ತಿರಲಿಲ್ಲ. ಏಕೆಂದರೆ ಆ ಎಲ್ಲ ಪದ್ಯಗಳೂ ಅವರಿಗೆ ಬಾಯಿಗೆ, ಕಂಠಪಾಠ ಬರುತ್ತಿತ್ತು. ಏ, ಪುಟಾ ೫೪ ತೆಗೀರೋ ಅನ್ನುವರು, ನಾವು ತೆಗೆಯಬೇಕು.

ಕುಮಾರವ್ಯಾಸ ಭಾರತವನ್ನು ಅತ್ಯಂತ ಸುಲಭವಾಗಿ ಪದವಿಭಜನೆ ಮಾಡಿ ಹೇಳುತ್ತಾ ಕ್ಲಾಸಿನಲ್ಲಿ ತಿರುಗುತ್ತಿದ್ದರು. ಅವರು ಬೆಂಚುಗಳ ನಡುವಿನ ಜಾಗದಲ್ಲೆಲ್ಲಾ ಹೋಗುವರು. ನಾವೆಲ್ಲ ರಾಡಾರ್‌ನಂತೆ ಅವರು ಎಲ್ಲೆಲ್ಲಿ ಹೋಗುತ್ತಾರೋ ಆ ಕಡೆಗೆ ತಿರುಗಿ ನೋಡುತ್ತಿರುತ್ತಿದ್ದೆವು. ಕುಮಾರವ್ಯಾಸ ಭಾರತವನ್ನು ಬಹಳ ಸೊಗಸಾಗಿ ಹೇಳುತ್ತಿದ್ದರು. ಸುಮ್ಮನೆ ಹಳಗನ್ನಡ ಕಷ್ಟ ಎಂದು ನಾವು ಬಡಿದುಕೊಳ್ಳುತ್ತೇವೆ; ನೋಡಿದರೆ ಬೇಸರವಾಗುತ್ತದೆ. ಕಷ್ಟ ಯಾಕೆಂದರೆ ಅದನ್ನು ಹೇಳಲು ನಮಗೆ ಬರುವುದಿಲ್ಲ, ಅದಕ್ಕೆ. ನಮ್ಮ ಗುರುಗಳು ಆ ಪಾಠವನ್ನು ಒಂದು ನೂರು ಬಾರಿ ಮಾಡಿರಬೇಕು. ಆದರೆ ಪ್ರತಿಬಾರಿ ಪಾಠ ಮಾಡುವಾಗ ಅವರ ಕಣ್ಣಲ್ಲಿ ನೀರು ದಳದಳ ಇಳಿಯುತ್ತಿತ್ತು. ನಮಗಿದ್ದ ಕುಮಾರವ್ಯಾಸ ಭಾರತದ ಎಂಟು ಪದ್ಯಗಳು -ಧರ್ಮರಾಯ ದ್ಯೂತ ಆಡಿ ಸೋತ ಸಂದರ್ಭ. ರಾಜ್ಯ, ಕೋಶ, ಸೈನ್ಯ ಸೋತ, ತಮ್ಮಂದಿರನ್ನು ಸೋತ, ತನ್ನನ್ನು ಸೋತ, ಕೊನೆಗೆ ಹೆಂಡತಿಯನ್ನೂ ಸೋತ. ದೇಶಭ್ರಷ್ಟನಾದ; ಕೊನೆಗೆ ರಾಜ್ಯವನ್ನು ಬಿಟ್ಟು ಹೊರಬರಬೇಕಾಯಿತು. ಯಾವಾಗ ದ್ರೌಪದಿಯ ಮೇಲೆ ಅನ್ಯಾಯ ಶುರುವಾಯಿತೋ- ನಮ್ಮಲ್ಲಿ ಮೈದುನ ಎಂದರೆ ಮಗನಿದ್ದ ಹಾಗೆ; ಆದರೆ ಚಂಡಾಲ ಮೈದುನ ದುಶ್ಯಾಸನ ಆ ತಾಯಿಯನ್ನು ಎಳೆದುಕೊಂಡು ಬರುತ್ತಾನೆ. ಸೂರ್ಯನ ಬಿಸಿಲನ್ನು ಕಾಣದಂತಹ ತಾಯಿ ಆಕೆ; ರಾಣಿ, ಚಕ್ರವರ್ತಿನಿ. ಆಕೆಯನ್ನು ಕೂದಲು ಹಿಡಿದು ರಸ್ತೆಯಲ್ಲಿ ಎಳೆದುಕೊಂಡು ಬರುತ್ತಾನೆ; ಕರುಳು ಕಿವುಚುವುದಿಲ್ಲವೇ ಅದನ್ನು ನೋಡಿದಾಗ? ಸಭೆಗೆ ಎಳೆದುಕೊಂಡು ಬರುತ್ತಾನೆ; ಎಷ್ಟು ಕಷ್ಟ ಆಗಿರಬೇಕು ಆ ತಾಯಿಗೆ! ನೋಡುತ್ತಾಳೆ, ಭೀಷ್ಮ, ದ್ರೋಣ, ಅಶ್ವತ್ಥಾಮ, ಕೃಪಾಚಾರ್ಯ ಎಲ್ಲರೂ ಕುಳಿತಿದ್ದಾರೆ. ಗಂಡಂದಿರು ನೋಡುತ್ತಿದ್ದಾರೆ; ಐವರು ಗಂಡಂದಿರು; ಒಬ್ಬರಿಗಿಂತ ಒಬ್ಬರು ಪರಾಕ್ರಮಶಾಲಿಗಳು; ಪೂರಾ ತಲೆತಗ್ಗಿಸಿಕೊಂಡು ಕುಳಿತಿದ್ದಾರೆ. ಆಗ ಆ ತಾಯಿ, ಕೃಷ್ಣನ ಮೊರೆ ಹೋಗುತ್ತಾಳೆ. ಆ ಎಂಟು ಪದ್ಯ, ಆಕೆ ಕೃಷ್ಣನನ್ನು ಬೇಡಿಕೊಳ್ಳುವಂಥದು. ಅದನ್ನು ಅವರು ರಾಗವಾಗಿ ಹೇಳಿಕೊಂಡು ಹೋಗುತ್ತಿರಬೇಕಾದರೆ ಅವರ ಕಣ್ಣಲ್ಲಿ ನೀರು; ನಾವೂ ಅಳುತ್ತಿದ್ದೆವು.

ಎಷ್ಟುರಮಟ್ಟಿಗೆ ಅಳುತ್ತಿದ್ದೆವೆಂದರೆ, ಕ್ಲಾಸ್ ಬಿಟ್ಟು ಹೊರಗೆ ಹೋದ ತಕ್ಷಣ ಬೇರೆ ಮೇ? ಕಂಡರೆ, ಯಾಕೋ, ಗುರುಗಳ ಕ್ಲಾಸು ಇತ್ತೇನೋ? ಎಂದು ಕೇಳುವರು. ನಮ್ಮ ಕಣ್ಣು ನೋಡಿದರೆ ಗೊತ್ತಾಗಿ ಬಿಡುತ್ತಿತ್ತು; ಅಷ್ಟು ಅದ್ಭುತವಾಗಿ ಹೇಳುತ್ತಿದ್ದರು. ಒಂದು ಪದ್ಯವಂತೂ ಉತ್ತುಂಗಕ್ಕೆ ಹೋಗುತ್ತಿತ್ತು. ಅದು ನಾಲ್ಕನೇ ಪದ್ಯ. ದ್ರೌಪದಿ ಕೇಳುತ್ತಾಳೆ: ಕೃ?, ನೂರು ಜನ ಸೇರಿದ ಗುಂಪಿನಲ್ಲಿ ಒಂದು ಹಾವು ಹೋದರೂ ಬದುಕಿಕೊಂಡು ಬಿಡುತ್ತದಲ್ಲವೋ. ಯಾರೋ ’ಹೊಡೀರಿ’ ಅಂದರೆ ಒಬ್ಬನಿಗಾದರೂ ಕರುಣೆ ಇರುತ್ತದೆ ತಾನೆ? ಬ್ಯಾಡ ಬಿಡ್ರಿ, ಹೋಗಲಿ ಹಾವು ಅನ್ನುತ್ತಾನೆ. ಹಾವು ಉಳಿದುಕೊಳ್ಳುತ್ತದೆ; ಒಬ್ಬ ಸಜ್ಜನ ಇರುತ್ತಾನೆ. ಇಂತಹ ದೊಡ್ಡ ಸಭೆಗೆ ಬಂದಿದ್ದೇನೆ. ಇಲ್ಲಿ ನನ್ನನ್ನು ಕಾಪಾಡುವವರು ಒಬ್ಬರೂ ಇಲ್ಲವೇ? ಎಂದು ಒರಲಿದಳು ಲಲಿತಾಂಗಿ. ಎಲ್ಲರ ಜೊತೆ ನಾನೂ ಅಳುತ್ತಿದ್ದೆ.

ಆದರೆ ಅದ್ಯಾಕೋ ಒಂದು ದಿನ ನನಗೆ ಭಾವನೆ ಬಹಳ ಉಕ್ಕಿ ಬಂದುಬಿಟ್ಟಿತ್ತು. ತಡೆದುಕೊಳ್ಳಲಿಕ್ಕಾಗದೆ ಬಿಕ್ಕಿಬಿಟ್ಟೆ. ಮೇ? ಅಲ್ಲಿ ದೂರದಲ್ಲಿದ್ದವರು ನಾನು ಬಿಕ್ಕಿದ ಸಪ್ಪಳ ಕೇಳಿ ತಕ್ಷಣ ಠಕ್ಕಂತ ನನ್ನ ಕಡೆ ತಿರುಗಿ ನೋಡಿದರು. ಅವರ ಮಂಜುಗಟ್ಟಿದ ಕಣ್ಣು ನನ್ನ ಮಂಜುಗಟ್ಟಿದ ಕಣ್ಣಿನೊಳಗೆ ಸಿಕ್ಕಿಹಾಕಿಕೊಂಡು ಬಿಟ್ಟಿತು; ಬಿಡಿಸಿಕೊಳ್ಳುವುದಕ್ಕೇ ಸಾಧ್ಯವಾಗಲಿಲ್ಲ. ಅದು ನನಗೆ ಇನ್ನೂ ನೆನಪಿದೆ. ಯಾಕೆ ಆಯಿತು ಅದು? ಕಾರಣ ಇ?. ಅವರ ಮನಸ್ಸಿನಲ್ಲಿ ಇದ್ದಂತಹ ಭಾವನೆಗಳು ಯಥಾವತ್ತಾಗಿ ನನ್ನ ಮನಸ್ಸಿನಲ್ಲಿ ಇಳಿದಿತ್ತು. ಇದನ್ನು ರೇಡಿಯೋ ಟ್ಯೂನಿಂಗ್ ಎನ್ನುತ್ತೇವೆ. ನೀವು ಯಾವುದೋ ಚಾನೆಲ್ ರೇಡಿಯೋ ಟ್ಯೂನಿಂಗ್

ಮಾಡಬೇಕಾದರೆ ಸರಿಯಾಗಿ ಸಿಗದಿದ್ದರೆ ಕರಕರ ಸಪ್ಪಳ ಬರುತ್ತದೆ. ಕರೆಕ್ಟಾಗಿ ಟ್ಯೂನ್ ಮಾಡಿದರೆ ಒಳ್ಳೆಯ ಸಂಗೀತ ಬರುತ್ತದೆ. ಅದೇ ರೀತಿ ವಿದ್ಯಾರ್ಥಿಯ ಮನಸ್ಸು ಮತ್ತು ಶಿಕ್ಷಕನ ಮನಸ್ಸು ಟ್ಯೂನ್ ಆಗಿಬಿಟ್ಟರೆ ಅವರ ಭಾವನೆಗಳೇ ಇವನ ಭಾವನೆಗಳಾಗುತ್ತವೆ. ಅಲ್ಲಿರುವ ವಿಷಯ ಯಥಾವತ್ತಾಗಿ ಮಕ್ಕಳ ಮನಸ್ಸಿನಲ್ಲಿ ಪ್ರತಿಷ್ಠಾಪನೆಯಾಗುತ್ತದೆ. ಇದಾಗುವುದು ಯಾವಾಗ? ಇಬ್ಬರಲ್ಲೂ ಒಂದೇ ಭಾಷೆಯ ತುಡಿತವಿದ್ದರೆ ಅದು ಸಾಧ್ಯವಾಗುತ್ತದೆ. ಈ ಹುಡುಗನಿಗೆ ಆ ಭಾಷೆ ಗೊತ್ತೇ ಇಲ್ಲವೆಂದರೆ – ಯಾರೋ ಒಬ್ಬರು ಫ್ರೆಂಚ್ ಭಾಷೆ ಮಾತನಾಡುತ್ತಿದ್ದರೆ ನನಗೆ ಅರ್ಥವೇ ಆಗುವುದಿಲ್ಲ. ಆದರೆ ನನ್ನ ಮಾತೃಭಾಷೆಯಲ್ಲಿ ಹೇಳಿದ್ದು ಮನಸ್ಸಿನಲ್ಲಿ ಉಳಿದುಕೊಳ್ಳುತ್ತದೆ. ಅವರು ಕಲಿಸಿದ ಕುಮಾರವ್ಯಾಸ ಭಾರತದ ಪದಗಳು ಈವತ್ತಿಗೂ ನನಗೆ ಬಾಯಿಗೆ ಬರುತ್ತವೆ.

ಅದರಲ್ಲೂ ಫೌಂಡೇಶನ್ ಮುಖ್ಯವಾದದ್ದು. ಮೊದಲಿನ ಐದು ಅಥವಾ ಹತ್ತು ವರ್ಷ ತಪ್ಪಿಸಿಬಿಟ್ಟರೆ ಮಕ್ಕಳಿಗೆ ಮುಂದೆ ಭಾಷೆಯ ಬೇಕು ಎಂದರೂ ಬರುವುದಿಲ್ಲ. ಈಗ ಸರಿಯಾಗಿ ಕಲಿಸಿ; ಮುಂದೆ ಬೇಡ ಎಂದರೂ ಮರೆಯುವುದಿಲ್ಲ. ಅದಕ್ಕೇ ಚಿಕ್ಕಂದಿನ ವಿದ್ಯೆ ’ಚೂಡಾರತ್’ ಎನ್ನುತ್ತಾರೆ. ಈ ಹಂತದಲ್ಲಿ ಮಗು ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯಬೇಕು.

ನಮ್ಮ ತೆನಾಲಿರಾಮ ಅಥವಾ ಬೀರಬಲ್ ಕಥೆಯನ್ನು ನಾವು ಕೇಳಿದ್ದೇವೆ. ರಾಜನ ಕಡೆಗೆ ಒಬ್ಬ ಮಹಾಪಂಡಿತ ಬಂದ. ಅವನಿಗೆ ಹತ್ತಾರು ಭಾಷೆ ಬರುತ್ತಿತ್ತು. ಎಲ್ಲ ಭಾಷೆಗಳನ್ನೂ ಅಷ್ಟು ಸುಲಭವಾಗಿ ಮಾತನಾಡುತ್ತಿದ್ದ. ಇವರಿಗೆಲ್ಲ ಅವನು ಒಂದು ಪ್ರಶ್ನೆ ಹಾಕಿದ. ’ನನ್ನ ನಿಜವಾದ ಭಾಷೆ (ಮಾತೃಭಾಷೆ) ಯಾವುದೆಂದು ಹೇಳಿ; ಹೇಗೆ ಕಂಡುಹಿಡಿಯುತ್ತೀರಿ’ ಎಂದು ಕೇಳಿದ. ಯಾವ ಭಾಷೆಯಲ್ಲಿ ಮಾತನಾಡಿದರೂ ಆತ ಅ? ಅಸ್ಖಲಿತವಾಗಿ ಮಾತನಾಡುತ್ತಿದ್ದ. ಅವನ ನಿಜವಾದ ಭಾಷೆ ಯಾವುದೆಂದು ಗೊತ್ತೇ ಆಗಲಿಲ್ಲ. ಆಗ ಅಲ್ಲಿದ್ದ ತೆನಾಲಿರಾಮ ನಾನು ಕಂಡು ಹಿಡಿಯುತ್ತೇನೆ ಬಿಡಿ ಅಂದ. ಪಂಡಿತ ಮಲಗಿದ್ದಾಗ ಇವನು ರಾತ್ರಿ ಒಂದು ಬಕೆಟ್ ನೀರು ತೆಗೆದುಕೊಂಡು ಹೋಗಿ ಅವನ ತಲೆಯ ಮೇಲೆ ಸುರಿದ. ಅವನು ಠಕ್ಕಂತ ಎದ್ದುಕೂತು, ’ಯಾವನು ಅವನು’ ಅಂತ ಅವನ ಮಾತೃಭಾಷೆಯಲ್ಲಿ ಬೈದನಂತೆ.

ಕಲಿತಭಾಷೆ ಮಾತಿಗೆ ಸರಿ; ಆದರೆ ಹೃದಯದ ಸಂವೇದನೆಗೆ ಮಾತೃಭಾಷೆಯೇ ಸರಿ. ಮಾತೃಭಾಷೆಯಲ್ಲಿ ಶಿಕ್ಷಣ ಯಾಕೆ ಒಳ್ಳೆಯದೆಂದು ನಾನಿಲ್ಲಿ ಒತ್ತಿ ಹೇಳಬೇಕು. ಇದೀಗ ೩೪ ವರ್ಷಗಳ ನಂತರ ಎನ್‌ಇಪಿ, ರಾಷ್ಟ್ರೀಯ ಶಿಕ್ಷಣ ನೀತಿ ಬಂದಿದೆ. ಬಹಳ ಒಳ್ಳೆಯ ಕೆಲಸ. ಈ ಫೌಂಡೇಶನ್ ಹಂತದ ಶಿಕ್ಷಣವನ್ನು ಮಾತೃಭಾಷೆಯಲ್ಲಿ ನೀಡಿ ಎಂದು ಅದರಲ್ಲಿ ಮೊದಲು ಹೇಳಿದ್ದಾರೆ. ಪ್ರೀಕೆಜಿ, ಎಲ್‌ಕೆಜಿ ಮತ್ತು ಯುಕೆಜಿ ಎಂದು ನಾವು ಕರೆಯುವ ಮೂರು ವರ್ಷದ ಶಿಕ್ಷಣವು ಈ ಮೊದಲು ಶಿಕ್ಷಣದ ಭಾಗ ಆಗಿರಲಿಲ್ಲ. ಇನ್‌ಸ್ಪೆಕ್ಷನ್‌ಗೆ ಬಂದವರು ಒದರಿಂದ ಹತ್ತನೇ ಕ್ಲಾಸಿನವರೆಗೆ ನೋಡುತ್ತಿದ್ದರು; ಪ್ರೀ-ಪ್ರೈಮರಿ ತಮಗೇನೂ ಸಂಬಂಧ ಇಲ್ಲ ಎಂಬಂತೆ. ಅದು ಶಿಕ್ಷಣದ ಮೊದಲನೇ ಹೆಜ್ಜೆ; ಅದು ಸರಿ ಇರಬೇಕಲ್ಲವೇ?

ಈಗ ಎನ್‌ಇಪಿ, ಈ ಮೂರು ವರ್ಷಗಳ ಶಿಕ್ಷಣವನ್ನು ಮತ್ತು ಒಂದು, ಎರಡು ಕ್ಲಾಸ್ ಸೇರಿಸಿ ಐದು ವರ್ಷವನ್ನು ಫೌಂಡೇಶನ್ ಎಂದು ಮಾಡಿದೆ. ಫೌಂಡೇಶನ್ ಅಂದರೆ ತಳಹದಿ. ಇಡೀ ಶಿಕ್ಷಣದ ತಳಪಾಯ ಇರುವುದೇ ಈ ಐದು ವರ್ಷಗಳಲ್ಲಿ. ಈ ತಳಪಾಯವನ್ನು ಗಟ್ಟಿಯಾಗಿ ಹಾಕಿದರೆ ಒಳ್ಳೆಯದಲ್ಲವೇ? ಅದಕ್ಕೆ ಏನು ಮಾಡಬೇಕು?

ನಾವು ಕನ್ನಡದಲ್ಲೇ ಕಲಿತದ್ದು; ಇಂಗ್ಲಿಷ್ನ್ನು ಒಂದು ಭಾಷೆಯನ್ನಾಗಿ ಕಲಿಸಿದರು. ಇಂಗ್ಲಿಷ್ ಕಲಿಯಬೇಡಿ ಎಂದು ಯಾರೂ ಹೇಳುತ್ತಿಲ್ಲ. ಇಂಗ್ಲಿಷ್ ಪ್ರಪಂಚಕ್ಕೆ ಒಂದು ಬೆಳಕಿಂಡಿ ಇದ್ದಂತೆ. ಅದು ಬೇಕು. ಬೇಕು ಎಂದಾಕ್ಷಣ ಕನ್ನಡ ಬೇಡ ಎಂದಲ್ಲ. ಯಾರೋ ಹೇಳುತ್ತಿದ್ದರು, ಹೆಂಡತಿ ಬೇಕು ಎಂದರೆ ಅಮ್ಮ ಹೊರಗೆ ಹೋಗಬೇಕು ಅಂತ ಅಲ್ಲ. ಹೆಂಡತಿ ಇರಬೇಕು; ಅಮ್ಮನೂ ಇರಬೇಕು. ಹೊರಗಿನ ಭಾಷೆ, ಜಗತ್ತಿನ ಕೊಂಡಿ ಆಗಿರುವ ಭಾಷೆ ಇಂಗ್ಲಿಷ್ನ್ನು ಕಲಿಯೋಣ. ಒಂದು ಭಾಷೆಯಾಗಿ ಕಲಿಯೋಣ. ನಮ್ಮ ಗುರುಗಳು ನಮಗೆ ಇಂಗ್ಲಿಷ್ ಹೇಗೆ ಕಲಿಸಿದರೆಂದರೆ, ನಾವು ಈವತ್ತು ಪ್ರಪಂಚದ ಯಾವುದೇ ವಿಶ್ವವಿದ್ಯಾಲಯದಲ್ಲಿ ಮಾತನಾಡಿ ಅವರ ಮೆಚ್ಚುಗೆಯನ್ನು ಪಡೆದುಕೊಂಡು ಬರಬಹುದು; ನಮಗೆ ಅ? ಚೆನ್ನಾಗಿ ಇಂಗ್ಲಿಷ್ ಕಲಿಸಿದರು. ಇಂಗ್ಲಿಷ್ ಬರಬೇಕು ಅಂದರೆ ಕನ್ನಡವನ್ನು ಮರೆಯಬೇಕು ಎಂದು ಇಲ್ಲವಲ್ಲ. ನನಗೆ ಣತಿo oಟಿes ಚಿಡಿe ಣತಿo ಅಂತ (ಮಗ್ಗಿ) ಬರುವುದೇ ಇಲ್ಲ; ಎರಡೊಂದ್ಲ ಎರಡು ಎಂದೇ ಬರುವುದು. ಮನಸ್ಸಿನಲ್ಲಿ ಲೆಕ್ಕ ಮಾಡಬೇಕಾದರೆ ಕನ್ನಡದಲ್ಲೇ ಲೆಕ್ಕ ಮಾಡಬೇಕು. ಕನ್ನಡದಲ್ಲಿ ನಮಗೆ ಎಷ್ಟು ಚೆನ್ನಾಗಿ ಕಲಿಸಿದರು- ಗುಣಾಕಾರ ಮಾಡುವುದು, ಮಗ್ಗಿ ಹೇಳುವುದು. ಆ ವ್ಯವಸ್ಥೆ ಎಷ್ಟು ಚೆನ್ನಾಗಿತ್ತು!

ಇನ್ನೊಂದು ವಿಷಯ. ಫಿನ್ಲೆಂಡ್‌ನಲ್ಲಿ ಶಿಕ್ಷಣ ಬಹಳ ಚೆನ್ನಾಗಿದೆ ಎಂದು ಕೆಲವರು ಹೇಳುತ್ತಾರೆ. ಫಿನ್ಲೆಂಡ್‌ನ ಶಿಕ್ಷಣದ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿದ್ದೇನೆ. ಫಿನ್ಲೆಂಡ್ ಶಿಕ್ಷಣ ಎಂದರೇನು ಗೊತ್ತಾ? ನಮ್ಮ ಹಳೆಯ ಕನ್ನಡ ಮಾಧ್ಯಮ ಶಾಲೆ ಇದ್ದಂತೆ, ಅದೇ ಫಿನ್ಲೆಂಡ್ ಶಿಕ್ಷಣ. ಒಬ್ಬ ಶಿಕ್ಷಕರು ಬರುವರು ಏ, ಕನ್ನಡ ತೆಗೀರೋ ಅಂತ ಹೇಳುವರು. ಟೈಂ ಟೇಬಲ್ ನಿನಗೆ ಬೇಡಾ? ನೀನು ಗಣಿತ ಮಾಡಿ ಮುಗಿಸಿಬಿಡು ಎಂದು ಅವರವರಿಗೆ ಆಸಕ್ತಿ ಇರುವ ವಿಷಯವನ್ನು ಕಲಿಸುವುದು. ಅವರ ಮಾತೃಭಾಷೆಯಲ್ಲೇ ಕಲಿಸುವುದು. ಹೀಗೆ ಮಾತೃಭಾಷೆಯಲ್ಲಿ ಕಲಿಸಿದಂತಹ ಶಿಕ್ಷಣವು ಕೊನೆಯವರೆಗೂ ಮನಸ್ಸಿನಲ್ಲಿ ಉಳಿಯುತ್ತದೆ.

ಹಾಗಾದರೆ ಯಾಕೆ ಈ ಇಂಗ್ಲಿಷ್ ಮೀಡಿಯಂ ಬಂತು? ಬಹಳ ಜನಕ್ಕೆ ಒಂಥರಾ ಈ ಸಮೂಹ ಸನ್ನಿ (ಮಾಸ್ ಹಿಪ್ನೋಸಿಸ್). ಎಲ್ಲರೂ ಯಾಕೆ ಇಂಗ್ಲಿಷ್ ಮೀಡಿಯಂ ಕಡೆಗೆ ಹೋಗುತ್ತಿದ್ದಾರೆ? ಅವರು ತಪ್ಪು ಮಾಡುತ್ತಿದ್ದಾರೆಯೇ? ಇದಕ್ಕೊಂದು ಹಿನ್ನೆಲೆಯಿದೆಯೇ? ಇದೆಲ್ಲ ಶುರುವಾದದ್ದು ಹೇಗೆ? ಮೊದಲು ಅಲ್ಲೊಂದು ಇಲ್ಲೊಂದು ಕಾನ್ವೆಂಟ್ ಶಾಲೆ ಇತ್ತು; ಸಣ್ಣ ಸಣ್ಣದು. ಅಲ್ಲಿ ಮಾತ್ರ ಇಂಗ್ಲಿಷ್ ಪಾಠ ಮಾಡುತ್ತಿದ್ದರು. ಅದರಿಂದಾಗಿ ಏನೂ ಬದಲಾವಣೆ ಆಗಲಿಲ್ಲ. ೧೯೮೦ನೇ ಇಸವಿಯಿಂದ ಇದೊಂಥರಾ ರೋಗ ಬಂದ ಹಾಗೆ ಆಗಿಬಿಟ್ಟಿತು; ಯಾಕೆ? ಆಗ ಐಟಿ ಇಂಡಸ್ಟ್ರಿ, ಕಂಪ್ಯೂಟರ್ ಇಂಡಸ್ಟ್ರೀ ಬಂತು. ಈ ಕಂಪ್ಯೂಟರ್ ಕೀಬೋರ್ಡ್ ಗೊತ್ತಿದ್ದವರೆಲ್ಲ ಚಾಂಪಿಯನ್ಸ್ ಆದರು. ಅವರಿಗೆಲ್ಲ ಕೆಲಸ ಸಿಕ್ಕಿಬಿಟ್ಟಿತು. ಕಂಪ್ಯೂಟರ್ ಟೆಕ್ನಾಲಜಿಯವರಿಗೂ ಜನ ಬೇಕಾಗಿದ್ದರು. ಬಿಇ ಕಂಪ್ಯೂಟರ್ ಆದವರನ್ನು ಅವರು ತೆಗೆದುಕೊಂಡರು. ವರ್ಷದೊಳಗೆ ಹುಡುಗನನ್ನು ಅಮೆರಿಕಾಗೆ ಕಳುಹಿಸಿಕೊಟ್ಟರು. ಈ ಮಧ್ಯಮವರ್ಗದ ತಂದೆ-ತಾಯಿಯರಿಗೆ ಮಗ ಅಮೆರಿಕಕ್ಕೆ ಹೋಗುತ್ತಾನೆಂದರೆ ದೊಡ್ಡ ಪವಾಡ. ಅವನು ಅಮೆರಿಕಕ್ಕೆ ಹೋದ; ಅಲ್ಲಿಂದ ಮಾತಾಡ್ತಾನೆ. ಅಲ್ಲಿಂದ ದುಡ್ಡು ಬಂತು! ಸಂಬಳ ಎಷ್ಟು ಬಂತು? ೨೫ ಸಾವಿರ. ಆಗ ಬಿಎ, ಬಿಎಸ್ಸಿ ಆದವರಿಗೆ ಐದು ಸಾವಿರ. ಇವನಿಗೆ ೨೫ ಸಾವಿರ; ಎರಡು ವರ್ಷದಲ್ಲಿ ೫೦ ಸಾವಿರ ಆಯಿತು; ಮತ್ತೆ ೭೫ ಸಾವಿರ. ಜನರಿಗೆ ಆಕಾಶ ಕೊಟ್ಟಂತಾಯಿತು. ಹಾಗಾಗಿ ಅದೇ ಒಳ್ಳೆಯ ಶಿಕ್ಷಣ!

ವಿದೇಶದಲ್ಲಿ ಅವರೇನು ಮಾಡಿದರೆಂದರೆ, ಅದೊಂದು ಗೌರವಸ್ಥ ಕೂಲಿ ಕೆಲಸ. ಅದರಲ್ಲಿ ಮುಲಾಜೇ ಇಲ್ಲ. ಆ ಕಂಪ್ಯೂಟರ್ ಕೆಲಸ ಮಾಡುವುದು, ಬೇರೆ ದೇಶಕ್ಕೆ ಹೋಗುವುದು. ನಾವೇನೂ ಹೊಸ ಸೃಷ್ಟಿ ಮಾಡುವುದಕ್ಕೆ ಹೋಗುವುದಿಲ್ಲ. ಅವರ ವ್ಯವಸ್ಥೆಗಳನ್ನು ನಾವು ಮಾಡಿಕೊಡಬೇಕು; ಕೂಲಿಕೆಲಸ ಅದು. ಇಲ್ಲಿಂದ ಹೋದ ಪ್ರತಿಯೊಬ್ಬ ಕೆಲಸಗಾರನಿಂದ ಕಂಪೆನಿಯವರು ಒಂದಿ? ಗಳಿಸುತ್ತಾರೆ. ಅಲ್ಲಿಗೆ ಹೋದಾಗ ಮಾತಾಡಬೇಕಾಯಿತಲ್ಲಾ; ಅದಕ್ಕೆ ಕಂಪೆನಿಯವರು ಏನು ಮಾಡಿದರು? ’ಇಂಗ್ಲಿಷ್ ಬಂದರೆ ಮಾತ್ರ ನಿಮ್ಮನ್ನು ತೆಗೆದುಕೊಳ್ಳುತ್ತೇವೆ; ಇಲ್ಲದಿದ್ದರೆ ತೆಗೆದುಕೊಳ್ಳುವುದಿಲ್ಲ’ ಎಂದು ಶುರುಮಾಡಿದರು. ಹೀಗೆ ತಳುಕು ಹಾಕಿಕೊಂಡಿತು. ಇಂಗ್ಲಿಷ್ ಬಂದರೆ ಮಾತ್ರ ಕಂಪ್ಯೂಟರ್ ಸಯನ್ಸ್ ಕೆಲಸ ಸಿಗುತ್ತದೆ. ಕೆಲಸ ಸಿಕ್ಕರೆ ದೊಡ್ಡ ದೊಡ್ಡ ಸಂಬಳ ಬರುತ್ತದೆ ಎಂದಾಯಿತು. ಈ ಈಕ್ವೆಶನ್ ಹೇಗಾಯಿತು? ದೊಡ್ಡ ಸಂಬಳ ಬರಬೇಕಾದರೆ ಇಂಗ್ಲೀ? ಬೇಕು ಎಂದು. ಆದರೆ ಈ ಗದ್ದಲದಲ್ಲಿ ನಾವೇನು ಮರೆತೆವೆಂದರೆ, ಕಂಪ್ಯೂಟರ್ ಸ್ಕಿಲ್ ಚೆನ್ನಾಗಿದೆ; ಇಂಗ್ಲಿಷ್ ಬಂದರೆ ಒಳ್ಳೆಯದು. ಆದರೆ ಇಂಗ್ಲಿಷ್ ಬರಬೇಕು ಅಂದರೆ ಕನ್ನಡ ಬರಬಾರದು ಎಂದಲ್ಲ. ಆದರೆ ಹಾಗೆ ಆಗಿಬಿಟ್ಟಿತು. ಎಲ್ಲರೂ ಇಂಗ್ಲಿಷ್ ಮೀಡಿಯಂಗೆ ಹೋಗುವುದಕ್ಕೆ ಶುರುಮಾಡಿದರು. ಕೆಲವು ಕಡೆ ಸಣ್ಣಸಣ್ಣ ಹಳ್ಳಿಗಳಲ್ಲೂ ಇಂಗ್ಲಿಷ್ ಮೀಡಿಯಂ ಶಾಲೆಗಳು ಆರಂಭವಾದವು. ಆದರೆ ಅಲ್ಲಿ ಇಂಗ್ಲಿಷ್ ಮೀಡಿಯಂ ಎಷ್ಟು ಕೆಟ್ಟದಾಗಿತ್ತು ಅಂದರೆ ಅವರಿಗೆ ಕನ್ನಡ ಮರೆತುಹೋಯಿತು; ಇಂಗ್ಲಿಷ್ ಕೂಡಾ ಬರಲಿಲ್ಲ. ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಆದರೂ ಕಾನ್ವೆಂಟ್ ಎಂದು ಬೋರ್ಡ್ ಹಾಕಿಕೊಂಡಿರುತ್ತಾರೆ (ಕಾನ್ವೆಂಟ್ ಎಂದರೆ ಅರ್ಥ ಬೇರೆಯೇ ಆಗಿದೆ). ಇಂಗ್ಲಿಷ್ ಬರಬೇಕು; ಕಂಪ್ಯೂಟರ್ ಸಯನ್ಸ್ ಕೆಲಸ ಆಗಬೇಕು ಎಂದು ಕಾನ್ವೆಂಟ್ ಶಾಲೆಗೆ ಹೋದರು.

ಆಗ ಬಂದ ಇನ್ನೊಂದು ಥಿಯರಿ, ಅನ್ನದ ಭಾಷೆ ಇಂಗ್ಲಿಷ್, ಇಂಗ್ಲಿಷ್ ಕಲಿತರೆ ಮಾತ್ರ ಕೆಲಸ ಸಿಗುತ್ತದೆ; ಇಲ್ಲದಿದ್ದರೆ ಸಿಗುವುದಿಲ್ಲ ಎಂದು. ಇದರಿಂದ ಎಲ್ಲರೂ ಇಂಗ್ಲಿಷ್ ಮೀಡಿಯಂಗೆ ಹೋಗಲು ಆರಂಭಿಸಿದರು. ನಮ್ಮ ಸರ್ಕಾರಿಶಾಲೆಗಳು, ಕನ್ನಡ ಮಾಧ್ಯಮ ಶಾಲೆಗಳು ಮುಚ್ಚುವುದಕ್ಕೆ ಶುರುವಾಯಿತು. ಸಮೂಹ ಸನ್ನಿ, ಮಾಸ್ ಹಿಪ್ನೋಸಿಸ್ ಎಂಬಂತೆ ಎಲ್ಲರೂ ಈ ಕಡೆಗೆ ಹೋಗಲು ಆರಂಭಿಸಿದರು, ಪ್ರವಾಹ ಬಂದಂತೆ.

ಐಟಿ ಉದ್ಯಮದವರು ತಮ್ಮ ಕಡೆಗೆ ಬೇಕಾದಷ್ಟು ಜನ ಬರುತ್ತಾರೆ ಎಂದು ತಿಳಿದುಕೊಂಡು, ಇವರಲ್ಲಿ ಶೇ. ೮೨ರ? ಜನರು ಕೆಲಸಕ್ಕೆ ಪ್ರಯೋಜನವಿಲ್ಲ; ಏಕೆಂದರೆ ಇವರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ ಎಂಬ ಹೇಳಿಕೆಯನ್ನೇ ಕೊಟ್ಟರು. ಹೀಗಾಗಿ ಮತ್ತೆ ಎಲ್ಲ ಕಡೆ ಇಂಗ್ಲಿಷ್ ಕ್ಲಾಸ್ ಮಾಡುವುದಕ್ಕೆ ಪ್ರಾರಂಭಿಸಿದರು. ನನಗೆ ಗೊತ್ತಿರುವಂತೆ ಕರ್ನಾಟಕದಲ್ಲಿರುವ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಬಹುತೇಕ ಕಡೆಗಳಲ್ಲಿ ಸರಿಯಾದ ಇಂಗ್ಲಿಷ್ ಶಿಕ್ಷಕರೇ ಇಲ್ಲ. ಅವರಿಗೆ ಇಂಗ್ಲಿಷ್ ಬರುವುದಿಲ್ಲ. ಹಾಗಾದರೆ ಅವರು ಹೇಗೆ ಕಲಿಸುತ್ತಾರೆ? ಅದರಿಂದ ಗಲಾಟೆಯಾಗಿ ಕೊನೆಗೆ, ಕನ್ನಡ ಮೀಡಿಯಂ ಎಂದು ಹೆಸರು ಹಾಕಿಕೊಂಡು ಇಂಗ್ಲಿಷ್ ಮೀಡಿಯಂ ಪಾಠ ಮಾಡಲು ಪ್ರಾರಂಭ ಮಾಡಿದರು. ಅಡ್ಮಿಶನ್ ತೆಗೆದುಕೊಂಡಿರುವುದು ಕನ್ನಡ ಮೀಡಿಯಂಗೆ; ಆದರೆ ಪಾಠ ಮಾಡುತ್ತಿರುವುದು ಇಂಗ್ಲಿಷ್ ಮಾಧ್ಯಮದಲ್ಲಿ.

ಇದನ್ನು ಗಮನಿಸಿದ ಸರ್ಕಾರ ಹಾಗೆ ಮಾಡಬಾರದೆಂದು ಸುತ್ತೋಲೆ ಹೊರಡಿಸಿತು. ೧೯೯೮ರಲ್ಲಿ ಸರ್ಕಾರ ಒಂದರಿಂದ ನಾಲ್ಕನೇ ಕ್ಲಾಸಿನವರೆಗೆ ಎಲ್ಲರೂ ಕನ್ನಡ ಮಾಧ್ಯಮದಲ್ಲೇ ಕಲಿಯಬೇಕು ಎಂದು ಆದೇಶ ಹೊರಡಿಸಿತು.

ಅದರ ವಿರುದ್ಧ ಖಾಸಗಿ ಶಿಕ್ಷಣ ಸಂಸ್ಥೆಗಳ ಹೈಕೋರ್ಟ್‌ಗೆ ಹೋದರು. ಕರ್ನಾಟಕ ಹೈಕೋರ್ಟ್ ೨೦೦೮ರಲ್ಲಿ ತೀರ್ಪು ನೀಡಿ, ’ಮಕ್ಕಳಿಗೆ ಯಾವ ಮಾಧ್ಯಮದಲ್ಲಿ ಕಲಿಸಬೇಕು ಎನ್ನುವುದು ಪಾಲಕರ ಹಕ್ಕು, ಸರ್ಕಾರಕ್ಕೆ ಏನೂ ಅಧಿಕಾರವಿಲ್ಲ’ ಎಂದಿತು. ಇದರ ವಿರುದ್ಧ ಸರ್ಕಾರ ಸುಪ್ರೀಂಕೋರ್ಟಿಗೆ ಹೋಯಿತು. ಸುಪ್ರೀಂಕೋರ್ಟ್ ತೀರ್ಮಾನವನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ತೀರ್ಪನ್ನು ಒಪ್ಪಿಕೊಂಡರೂ ಚರ್ಚೆ ಮಾಡಬಾರದು ಎಂದಿಲ್ಲ. ಸುಪ್ರೀಂ ಕೋರ್ಟ್, ಹೈಕೋರ್ಟ್ ತೀರ್ಮಾನವನ್ನೇ ಎತ್ತಿಹಿಡಿಯಿತು, ’ಸರ್ಕಾರಕ್ಕೇನೂ ಅಧಿಕಾರವಿಲ್ಲ. ಅದು ಪಾಲಕರ ಜವಾಬ್ದಾರಿ; ಅವರು ಬೇಕಾದ ಮಾಧ್ಯಮವನ್ನು ಆರಿಸಿಕೊಳ್ಳಬಹುದು’ ಎಂದಿತು.

ಯಾವ ಭಾಷೆಯ ಮಾಧ್ಯಮ ಬೇಕು ಎನ್ನುವ ತೀರ್ಮಾನವನ್ನು ಪಾಲಕರು ತೆಗೆದುಕೊಳ್ಳಲಿ ಎಂದಷ್ಟೇ ಕೋರ್ಟ್ ಹೇಳಿತ್ತು. ಅಂದರೆ ಈ ಚೆಂಡು ಪಾಲಕರ ಅಂಗಳದಲ್ಲಿದೆ; ನೀವು ಯಾವ ಭಾಷೆ ಮಾಧ್ಯಮವನ್ನು ಕೂಡ ಆರಿಸಿಕೊಳ್ಳಬಹುದು ಎಂದು.

ಕನ್ನಡ ಮಾಧ್ಯಮವನ್ನು ಯಾಕೆ ಆರಿಸಿಕೊಳ್ಳಬೇಕು? ಒಂದು ಭಾಷೆ ಎಂದರೆ ಸಂವಹನ ಮಾಧ್ಯಮ ಮಾತ್ರ ಅಲ್ಲ. ನಾನು ಇನ್ನೊಬ್ಬರಿಗೆ ಒಂದು ವಿಷಯವನ್ನು ತಿಳಿಸುವುದು ಮತ್ತು ಅವರಿಂದ ಒಂದು ವಿಷಯವನ್ನು ತಿಳಿದುಕೊಳ್ಳುವುದು. ಇ? ಅದರ ಕೆಲಸ ಅಲ್ಲ, ಭಾಷೆ ಎನ್ನುವುದು ಬಹುದೊಡ್ಡ ಜ್ಞಾನಭಂಡಾರಕ್ಕೆ ಕೀಲಿಕೈ ಇದ್ದಹಾಗೆ. ಕಲ್ಪನೆ ಮಾಡಿಕೊಳ್ಳಿ. ನನಗೆ ಕನ್ನಡ ಗೊತ್ತಿಲ್ಲವೆಂದರೆ ಎಷ್ಟು ದೊಡ್ಡ ಜ್ಞಾನವನ್ನು ನಾನು ಕಳೆದುಕೊಳ್ಳುತ್ತೇನೆ!

ನಾನೊಂದು ಘಟನೆಯನ್ನು ಹೇಳಬೇಕು. ಸುಮಾರು ೪೭ವರ್ಷಗಳ ಹಿಂದೆ ನಡೆದದ್ದು. ನನಗೆ ಅತ್ಯಂತ ಪ್ರಿಯರಾಗಿದ್ದವರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು. ನನ್ನಿಂದ ಅವರು ಯಾವುದೋ ಒಂದು ಲೇಖನ ಬರೆಸಿದ್ದರು. ಅವರ ಮನೆಗೆ ಹೋಗಿ ಕುಳಿತುಕೊಂಡಿದ್ದಾಗ ಮೇ?, ಮನೆಯಲ್ಲಿ ಏನಾದರೂ ಕನ್ನಡ ಓದುತ್ತೀರಾ? ಎಂದು ಕೇಳಿದರು. ನಾನು ಓದುತ್ತೇನಲ್ಲ ಸರ್, ಮೇ?ಲ್ವಾ, ಓದುತ್ತೇನೆ ಎಂದೆ. ಅವರು ಮುಂದುವರಿದು ಅಲ್ಲಪ್ಪಾ, ನೀನು ಓದುವುದಲ್ಲ. ಮನೆಯವರೆಲ್ಲ ಒಟ್ಟಿಗೆ ಕುಳಿತು ಓದುತ್ತೀರಾ? ಎಂದು ಕೇಳಿದರು. ಇದು ಬಹಳ ಮುಖ್ಯವಾದ ಮಾತು. ಯಾಕೆ, ಏನು ಮಾಡಬೇಕು ಸರ್ ಎಂದು ಕೇಳಿದೆ. ಅವರು ಮನೆಯಲ್ಲಿ ಎಲ್ಲರೂ ಒಟ್ಟಾಗಿ ಕುಳಿತು ಓದುವುದಕ್ಕೆ ಶುರುಮಾಡಿ ಎಂದರು. ಮನೆಗೆ ಬಂದೆ. ದೊಡ್ಡವರು ಹೇಳಬೇಕಾದರೆ, ಏನಾದರೂ ಅರ್ಥ ಇರಲೇಬೇಕು. ಏನು ಓದುವುದು ಹಾಗಾದರೆ? ನಾವು ಮನೆಯಲ್ಲಿ ಮೂರು ತಲೆಮಾರು ಜೊತೆಗಿದ್ದವರು; ನನ್ನ ತಂದೆ-ತಾಯಿ, ನಾನು, ನನ್ನ ಹೆಂಡತಿ. ನನ್ನ ಇಬ್ಬರು ಮಕ್ಕಳು. ಈ ಮೂರು ತಲೆಮಾರಿಗೆ ಒಪ್ಪಿತ ಆಗುವಂಥದ್ದು ಯಾವುದು ಓದಬಹುದು ನಾನು? ವಿಚಾರ ಮಾಡಿದೆ. ನನಗೆ ಕುಮಾರವ್ಯಾಸ ಭಾರತದ ಹುಚ್ಚು (ನಮ್ಮ ಗುರುಗಳಿಂದ). ಅಂದಿನಿಂದ ದಿನನಿತ್ಯ (ಆದ್ಯತೆ ಕಾರ್ಯಕ್ರಮ) ಒಂದು ಸಂಧಿ ಓದುವುದೆಂದು ತೀರ್ಮಾನ ಮಾಡಿದೆ. ರಾತ್ರಿ ಊಟವಾದ ಮೇಲೆ ಎಲ್ಲರೂ ಒಟ್ಟಾಗಿ ಕುಳಿತುಕೊಳ್ಳುವುದು. ನಾನು ಅದನ್ನು ಓದಬೇಕು. ಅದನ್ನು ಓದುವುದು ನನಗೆ ಇ?ವೇ; ಚೆನ್ನಾಗಿ ಓದುತ್ತೇನೆ ಅಂದುಕೊಂಡಿದ್ದೇನೆ. ಪದ ವಿಭಜನೆ ಮಾಡಿ ಓದಬೇಕು. ಮೊದಲು ನಾಂದೀಪದ ಹೇಳಬೇಕು: ಶ್ರೀ ವನಿತೆಯ ರಸನೆ ವಿಮಲ ರಾಜೀವ ಪೀಠನ ಪಿತನೆ – ಈ ಪದ್ಯದಿಂದ ಆರಂಭಿಸುವುದು. ದಿನಾಲೂ ಹೇಳುತ್ತಾ ಇದ್ದೆವು. ೧೫ ದಿನ ಆಗಬೇಕಾದರೆ ಮನೆಯಲ್ಲಿ ಎಲ್ಲರಿಗೂ ನಾಂದೀಪದ್ಯ ಬಂತು. ನಾಂದೀಪದ್ಯ ಎಲ್ಲವನ್ನೂ ಮನೆಯ ಎಲ್ಲರೂ ಸೇರಿ ಹಾಡಿಕೊಂಡು ಹೋಗುವುದು. ಆಮೇಲೆ ಒಂದು ಸಂಧಿ ಓದುವುದು ತಂದೆ, ತಾಯಿ, ಮಗ ಏನಾದರೂ ಪ್ರಶ್ನೆ ಕೇಳುವರು; ಅದರ ಮೇಲೆ ಚರ್ಚೆ; ಹೀಗೆ ಸುಮಾರು ೩೫ ರಿಂದ ೪೦ ನಿಮಿ? ಆಗುವುದು.

ಇದರಿಂದ ಏನಾಯಿತು ಗೊತ್ತಾ? ಇವತ್ತಿಗೂ ನನ್ನ ಮಗನಿಗೆ (ಇಂದು ಅವನು ಐಟಿಯಲ್ಲಿ ಕೆಲಸ ಮಾಡುತ್ತಾನೆ; ವಿದೇಶದಲ್ಲಿ ಬಹಳ ವರ್ಷ ಇದ್ದ) ಕುಮಾರವ್ಯಾಸ ಭಾರತದ ಎಷ್ಟು ಪದ್ಯಗಳು ಬಾಯಿಗೆ ಬರುತ್ತವೆ. ಅವನು ಯಾವಾಗಾದರೂ ’ಅಪ್ಪಾ, ಕುಮಾರವ್ಯಾಸ ಭಾರತ ಓದು’ ಅನ್ನುತ್ತಾನೆ. ನಾನು ’ಶ್ರೀ ವನಿತೆಯ ರಸನೆ’ ಎಂದು ಶುರು ಮಾಡಿದರೆ ಅವನೂ ಶುರು ಮಾಡುತ್ತಾನೆ. ’ಅಪ್ಪಾ, ಕೃ?ನ ವರ್ಣನೆಯನ್ನು ಹೇಳು’ ಎನ್ನುತ್ತಾನೆ. ’ಯಾವುದೋ’ ಎಂದರೆ ’ಅಪ್ಪಾ, ನೀನೇ ಹೇಳುತ್ತಿದ್ದೆಯಲ್ಲಾ; ವೇದಪುರುಷನ ಸುತನ ಸುತನ’ ಎನ್ನುತ್ತಾನೆ. ಕೃ? ಎಂದು ಹೇಳಬೇಕಿದ್ದರೆ ಇಷ್ಟು (ಇಡೀ ಪದ್ಯ) ಹೇಳುತ್ತಾನಲ್ಲವೇ, ವಾಚಾಳಿ ಕುಮಾರವ್ಯಾಸ! ನನ್ನ ಮಗನಿಗೆ ಪೂರ್ತಿ ಬರುತ್ತಿತ್ತು. ಕುಮಾರವ್ಯಾಸ ಇನ್ನೊಂದು ತಲೆಮಾರಿಗೆ ಬದುಕಿಕೊಂಡ. ಮಂಕುತಿಮ್ಮನ ಕಗ್ಗ ಓದುತ್ತಿದ್ದೆವು. ಕುಮಾರವ್ಯಾಸ, ನಂತರ ಕಗ್ಗ, ಭಗವದ್ಗೀತೆ ಅಥವಾ ಕುವೆಂಪು ಅವರ ಶ್ರೀ ರಾಮಾಯಣದರ್ಶನಂ; – ಹೀಗೆ ಇವೆಲ್ಲವೂ ಬಾಯಿಗೆ ಬರುತ್ತವೆ.

ನನ್ನ ಎರಡನೇ ಮಗ ಅಮೆರಿಕಕ್ಕೆ ಹೋದಾಗ ಅಪ್ಪಾ, ಕಗ್ಗ ಮರೆತು ಹೋಗುತ್ತಿದೆ. ಏನು ಮಾಡುವುದು? ಎಂದ. ಅವನ ಮಾತು ಕೇಳಿ ನನಗೆ ಸಂತೋಷವಾಯಿತು. ಕಗ್ಗ ಬೇಕು ಅಂತ ಅವನಿಗೆ ಅನ್ನಿಸುತ್ತದಲ್ಲವೇ? ನನ್ನ ಧ್ವನಿಯಲ್ಲೇ ನೂರೈವತ್ತೋ ಇನ್ನೂರೋ ಪದ್ಯಗಳನ್ನು ಹೇಳಿ ಅವನಿಗೆ ಕಳುಹಿಸಿ ಕೊಟ್ಟೆ. ಇವತ್ತಿಗೆ ಅವನಿಗೆ ಕಗ್ಗದ ಸುಮಾರು ಒಂದುನೂರು ಪದ್ಯ ಬಾಯಿಗೆ ಬರುತ್ತದೆ. ನಮ್ಮ ಮನೆಯಲ್ಲಿ ಮೊಮ್ಮಗಳಿದ್ದಾಳೆ (ರಾಷ್ಟ್ರೋತ್ಥಾನ ಶಾಲೆಯ ಸ್ಟೂಡೆಂಟ್ ಆಕೆ). ಅವಳು ಇಂದಿಗೂ ’ಅಜ್ಜ, ಕಗ್ಗ ಹೇಳು’ ಎನ್ನುತ್ತಾಳೆ. ನನಗೆ ಅನ್ನಿಸಿದ್ದು, ಗುಂಡಪ್ಪ ಇನ್ನೂ ಎರಡು ತಲೆಮಾರಿಗೆ ಬದುಕಿಕೊಂಡರು- ಎಂದು.

ಕಗ್ಗದಂತಹ ದೊಡ್ಡ ಸಾಹಿತ್ಯ, ದೊಡ್ಡ ಜ್ಞಾನಭಂಡಾರ ನಮಗೆ ಸಿಗುವುದು ನಮಗೆ ಕನ್ನಡ ಬಂದರೆ ಮಾತ್ರ ಅಲ್ಲವೇ? ಇಂಗ್ಲಿಷ್ ಬರಲಿ, ತೊಂದರೆ ಇಲ್ಲ. ಆದರೆ ಇಂಗ್ಲಿಷ್ ಬರುವವರಿಗೆಲ್ಲ ವರ್ಡ್ಸ್‌ವರ್ತ್ ಗೊತ್ತಿದೆ, ಶೇಕ್ಸ್‌ಪಿಯರ್ ಗೊತ್ತಿದೆ ಎಂದಲ್ಲ. ಯಾವಾಗಲೂ ಸಾಹಿತ್ಯದ ಪ್ರಕಾರಗಳನ್ನು ನಮ್ಮ ಹೃದಯದಲ್ಲಿ ಇಟ್ಟುಕೊಳ್ಳಬೇಕಾದರೆ, ಅದು ನಮ್ಮ ಹೃದಯದ ಭಾಷೆ ಆಗಿರಬೇಕು. ನಮ್ಮ ಬೆಳವಣಿಗೆಗೆ ಮತ್ತು ಭಾಷೆಯ ಬೆಳವಣಿಗೆಗೆ ಮಾತೃಭಾಷೆ ಅಗತ್ಯ.

ಹಾಗಾದರೆ ಬಹಳ ಜನ ಕನ್ನಡ ಮಾಧ್ಯಮಕ್ಕೆ ಯಾಕೆ ಬರುತ್ತಿಲ್ಲ? ಇಂಗ್ಲಿಷ್ ಮೀಡಿಯಂ ಕಡೆಗೆ ಹೋಗುತ್ತಿದ್ದಾರೆ? ಅವರ ನಂಬಿಕೆ ಏನಾಗಿದೆಯೆಂದರೆ, ಯಾರು ಅಸ್ಖಲಿತವಾಗಿ ಇಂಗ್ಲಿಷ್ ಮಾತನಾಡುತ್ತಾರೋ ಅವರಿಗೆ ಮಾತ್ರ ಮುಂದೆ ಅವಕಾಶಗಳು ಚೆನ್ನಾಗಿ ಸಿಗುತ್ತವೆ; ಮತ್ತು ಐಐಟಿಗೆಲ್ಲ ಹೋಗಬಹುದು ಎಂದು ತಿಳಿಯುತ್ತಾರೆ; ಇರಲಿ, ನಾನು ಯಾವುದೂ ಬೇಡ ಅನ್ನುವುದಿಲ್ಲ. ಆದರೆ ಕೆಲವು ಶಾಲೆಯಲ್ಲಿ, ರಾ?ತ್ಥಾನದಂತಹ ಶಾಲೆಯಲ್ಲಿ ನಾನಿದನ್ನು ಒತ್ತಿ ಹೇಳಬೇಕು – ಇಂಗ್ಲಿಷ್ನ್ನು ಚೆನ್ನಾಗಿ ಕಲಿಸುತ್ತಾರೆ. ಆದರೆ ಇಂಗ್ಲಿಷ್ ಒಂದು ಭಾಷೆಯಾಗಿ ಇರಬೇಕು ಹೊರತು ಮಾಧ್ಯಮ ಆಗಬಾರದು. ಆ ವ್ಯತ್ಯಾಸ ನಿಮಗೆ ಗೊತ್ತಿದೆ ಅಂದುಕೊಂಡಿದ್ದೇನೆ. ಮಾಧ್ಯಮ ಅಂದರೆ ಅದರೊಳಗೇ ಸಂವಹನ ಮಾಡುವಂಥದ್ದು.

ಮುಂದುವರಿಯುವುದು…

ಗುರುರಾಜ ಕರಜಗಿ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಕೇಸಿಯಾ ಪರ ಒಂದುವಕಾಲತ್ತು

Thu Jan 14 , 2021
ಅರಣ್ಯ ನೆಡುತೋಪುಗಳ ಅಸಲಿಯತ್ತು ———————————————————————————– ಪರಿಸರ, ಅರಣ್ಯ, ಮಲೆನಾಡು, ಪಶ್ಚಿಮ ಘಟ್ಟ… ಮುಂತಾದ ವಿಚಾರಗಳಲ್ಲಿ ಆಸಕ್ತಿ ಇರುವವರೆಲ್ಲರೂ ಗಮನಿಸಿರಬಹುದಾದ ಒಂದು ವಿದ್ಯಮಾನವೆಂದರೆ ಪತ್ರಿಕೆಗಳಲ್ಲಿ ಆಗಾಗ ಬರುವ ಅಕೇಸಿಯಾ ವಿರೋಧಿ ಬರಹಗಳು. ಯಾವಾಗ ಅರಣ್ಯ ಇಲಾಖೆ ಈ ಅಕೇಸಿಯಾ ಸಸ್ಯವನ್ನು (Acacia Auriculiformis/Earpod Wattle) ಭಾರತದಲ್ಲಿ  ನೆಡುತೋಪು ಮಾಡಲು ಪರಿಚಯಿಸಿತೋ ಬಹುಶಃ ಆಗಿಂದಲೇ ಇದಕ್ಕೆ ವಿರೋಧವೂ ಹುಟ್ಟಿಕೊಂಡಿರಬಹುದು. ಆ ವಿರೋಧ ಒಂದು ಮಟ್ಟಿಗೆ ಸಮಂಜಸವೂ ಆಗಿದೆ ಯಾಕೆಂದರೆ ಅರಣ್ಯ ಇಲಾಖೆ ಈ […]