ಶಿಕ್ಷಣದೊಳಗೆ ಎರಡು ಭಾಗಗಳಿವೆ – ಜ್ಞಾನ ಪ್ರಸಾರ & ಜ್ಞಾನ ಸೃಷ್ಟಿ : ಗುರುರಾಜ ಕರಜಗಿ

ಭಾಗ-2  ಮಾತೃಭಾಷಾ ಶಿಕ್ಷಣ ಅಗತ್ಯವೇ?

ಶಿಕ್ಷಣದೊಳಗೆ ಎರಡು ಮುಖ್ಯ ಭಾಗಗಳಿವೆ;  ಒಂದು ಜ್ಞಾನಪ್ರಸಾರ. ಅದನ್ನು ಎಲ್ಲ ಸಂಸ್ಥೆಗಳೂ ಒಂದು ಮಟ್ಟಿಗೆ ಮಾಡುತ್ತವೆ. ಕೊಟ್ಟಿರುವ ಪಠ್ಯಕ್ರಮವನ್ನು ಮಕ್ಕಳ ಹೃದಯಕ್ಕೆ ಮುಟ್ಟಿಸುವ ಪ್ರಯತ್ನ; ಅದನ್ನು ಡಿಸ್ಸೆಮಿನೇಟಿಂಗ್ ನಾಲೆಡ್ಜ್ ಎಂದು ಕರೆಯುತ್ತೇವೆ. ಜ್ಞಾನಪ್ರಸಾರ ಮಾಡುವುದು ಪ್ರತಿಯೊಂದು ಶಾಲೆಯ ಮೊದಲ ಕರ್ತವ್ಯ. ಎರಡನೆಯದ್ದು ಬಹುಮುಖ್ಯ ಕಾರ್ಯ. ಅದನ್ನು ನಾವು ಮರೆತಿದ್ದೇವೆ. ಅದು ಜ್ಞಾನವನ್ನು ಸೃಷ್ಟಿ ಮಾಡುವುದು. ಜ್ಞಾನವು ಸೃಷ್ಟಿಯಾಗುವುದು ಹೇಗೆ? ನಾವು ಜ್ಞಾನದ ಸೃಷ್ಟಿಯನ್ನು ಹೇಗೆ ಮಾಡಬೇಕು? ಅದಕ್ಕೆ ಹೊಸಹೊಸ ಪದಗಳನ್ನು ಹುಟ್ಟುಹಾಕಬೇಕು; ಹೊಸ ಹೊಸ ವಿಚಾರಗಳನ್ನು ತರಬೇಕು. ಹೊಸ ವಿಚಾರ, ಹೊಸ ಚಿಂತನೆ ಬರಬೇಕಾದರೆ (ನಾನು ಖಚಿತವಾಗಿ ಎಲ್ಲಿ ಬೇಕಾದರೂ ಹೇಳುತ್ತೇನೆ) ಇರುವಂತಹ ಚಿಂತನೆಯು ಗಟ್ಟಿಯಾಗಿರಬೇಕು. ಯಾರಿಗೆ ತಳಪಾಯ ಗಟ್ಟಿ ಇದೆಯೋ ಅವರು ಮಾತ್ರ ಹೊಸ ಚಿಂತನೆಗಳನ್ನು ಮಾಡುವುದಕ್ಕೆ ಸಾಧ್ಯ.

ನಾವು ದೊಡ್ಡ ದೊಡ್ಡ ಸಾಧನೆ ಮಾಡಿದ ಜಗತ್ತಿನ ಎಷ್ಟೋ ದೇಶಗಳನ್ನು ನೋಡುತ್ತೇವೆ. ಪೋಲಂಡ್‌ನಂತಹ ಸಣ್ಣ ದೇಶದವರು ಪೋಲಿಷ್ ಭಾಷೆಯನ್ನೇ ಕಲಿಯುವುದು. ಕೆಲವರಿಗಷ್ಟೇ ಇಂಗ್ಲಿಷ್ ಬರಬಹುದು. ಆದರೆ ಮುಖ್ಯವಾದ ಚಿಂತನೆ ಇರುವುದು ಅವರ ಭಾಷೆಯಲ್ಲಿ. ನಾನು ಬಹಳ ಸಣ್ಣ ವಯಸ್ಸಿನಲ್ಲೇ ಜಪಾನಿಗೆ ಟೋಕಿಯೋ ವಿಶ್ವವಿದ್ಯಾಲಯದಲ್ಲಿ ಪಾಠ ಮಾಡಲು ಹೋದೆ. ಅಲ್ಲಿ ಯಾರಿಗೂ ಇಂಗ್ಲಿಷ್ ಬರುತ್ತಿರಲಿಲ್ಲ. ನನಗೆ ತುಂಬ ಕಷ್ಟ ಆಗುತ್ತಿತ್ತು. ಆದರೆ ಅವರು ಎಷ್ಟು ಸರಿಯಾಗಿ ಒರಿಜಿನಲ್ ಸಂಶೋಧನೆ ಮಾಡುತ್ತಿದ್ದರು ಗೊತ್ತಾ? ಇಂದಿಗೂ ಜಪಾನಿ ಉಪಕರಣಗಳನ್ನು ನಾವು ಸೋಲಿಸಲು ಸಾಧ್ಯವಿಲ್ಲ. ಯಾಕೆ? ಅವರ ಚಿಂತನೆ ತಮ್ಮ ಆಳದ ಭಾಷೆಯಲ್ಲೇ ಇತ್ತು. ನಮ್ಮಲ್ಲಿ ಯಾಕೆ ಹೊಸದು ವಿಶಿಷ್ಟವಾದುದು ಆಗುತ್ತಿಲ್ಲ?

ಅಮೆರಿದ ಅಧ್ಯಕ್ಷ ಒಬಾಮಾ ತಮ್ಮ ಮೊದಲ ಭಾಷಣದಲ್ಲಿ ನಿಮಗೆ ಯಾವ ದೇಶ ವಿಂಡೋಸ್ ಕೊಟ್ಟಿದೆಯೋ, ಯಾವ ದೇಶ ಇಂಟೆಲ್ ಕೊಟ್ಟಿದೆಯೋ, ಯಾವ ದೇಶ ಫೇಸ್ಬುಕ್ ಕೊಟ್ಟಿದೆಯೋ ಆ ದೇಶದ ಅಧ್ಯಕ್ಷ ನಾನು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು. ನಾವು ಕೂಡ ಹಾಗೆ ಹೇಳಿಕೊಳ್ಳಬೇಕಲ್ಲವೇ? ವಿಂಡೋಸ್, ಮೈಕ್ರೋಸಾಫ್ಟ್, ಫೇಸ್ಬುಕ್‌ನಲ್ಲಿ ಸಾಕಷ್ಟು ಜನ ಭಾರತೀಯರಿದ್ದಾರೆ. ಅಲ್ಲಿ ಕೆಲಸ ಮಾಡುತ್ತಾರೆ. ಆದರೆ ನಾವೆಲ್ಲ ಕೆಲಸಗಾರರಾದೆವೇ ಹೊರತು ನಿರ್ಮಾತೃಗಳಾಗಲಿಲ್ಲ. ನಿರ್ಮಾತೃಗಳಾಗಬೇಕಾದರೆ, ಅಂದರೆ ಸೃಷ್ಟಿ ಮಾಡಬೇಕಾದರೆ ಆ ಭಾಷೆಯಲ್ಲೇ ಚಿಂತನೆ ಮಾಡಬೇಕಾಗುತ್ತದೆ.

ಒಂದು ಘಟನೆ. ನಾನು ಅಂತಾರಾಷ್ಟ್ರೀಯ ಶಾಲೆಯ ಪ್ರಿನ್ಸಿಪಾಲ್ ಆಗಿದ್ದೆ. ಅಲ್ಲಿ ಸುಮಾರು ೧೫ ದೇಶಗಳ ಮಕ್ಕಳು ಕಲಿಯುತ್ತಿದ್ದರು. ಯಾವಾಗಲಾದರೂ ಏನು ಬೇಕಾದರೂ ಪ್ರಶ್ನೆ ಕೇಳಬಹುದು ಎಂದು ನಾನು ಹೇಳಿದ್ದೆ. ವಸತಿ ಶಾಲೆಯಾದ್ದರಿಂದ ಮಕ್ಕಳು ಅಲ್ಲೇ ಇರುತ್ತಿದ್ದರು. ಒಮ್ಮೆ ಮೂವರು ಮಕ್ಕಳು ನನ್ನ ಹತ್ತಿರ ಬಂದು ’ಸರ್, ಒಂದು ಪ್ರಶ್ನೆ ಇದೆ’ ಎಂದರು. ಕೇಳಿ ಅಂದೆ. ಒಬ್ಬ ಹುಡುಗ ಇರುವೆ ಹೇಗೆ ಮಲಗುತ್ತದೆ ಸರ್? ಎಂದ. ನಾನೇ ಹೇಗೆ ಮಲಗಿಕೊಳ್ಳುತ್ತೇನೆ ಎಂಬುದು ನನಗೆ ಗೊತ್ತಿಲ್ಲ. ಇನ್ನು ಇರುವೆ ಹೇಗೆ ಮಲಗುತ್ತದೆ ಎಂದು ನನಗೆ ಏನು ಗೊತ್ತು? ಆದರೆ ಮೇಷ್ಟ್ರಿಗೆ ಒಂದು ಅನುಕೂಲವಿದೆ. ಗೊತ್ತಿಲ್ಲ ಅಂದರೆ, ಪ್ರಾಜೆಕ್ಟ್ ವರ್ಕ್ ಎಂದು ವಿದ್ಯಾರ್ಥಿಗಳಿಗೆ ಕೊಡಬಹುದು. ಆ ಹುಡುಗರಿಗೆ ಹೇಳಿದೆ: ನೋಡ್ರೋ, ನನಗಂತೂ ಗೊತ್ತಿಲ್ಲಪ್ಪ. ನೀವೇ ಕಂಡು ಹಿಡಿಯಿರಿ ಎಂದೆ.

ಅಡುಗೆಮನೆಗೆ ಫೋನ್ ಮಾಡಿ (ರೆಸಿಡೆನ್ಸಿಯಲ್ ಸ್ಕೂಲ್‌ನ ಪ್ರಿನ್ಸಿಪಾಲ್ ಅಂದರೆ ಗವರ್ನರ್ ಇದ್ದಂತೆ) ಒಂದು ಪ್ಲಾಸ್ಟಿಕ್ ಬಾಟಲಿ ತೆಗೆದುಕೊಳ್ಳಿ. ಅದರೊಳಗೆ ಮೂರು ಇರುವೆಗಳನ್ನು ಹಾಕಿ; ಮತ್ತೆ ಒಂಚೂರು ಸಕ್ಕರೆ ಹಾಕಿ. ಬಾಟಲಿಯ ಮುಚ್ಚಳಕ್ಕೆ ಒಂದಿಷ್ಟು ತೂತು ಮಾಡಿ ಕೊಡಿ ಎಂದೆ. ಹತ್ತು ನಿಮಿಷದಲ್ಲಿ ಬಂತು. ಅದನ್ನು ಹುಡುಗರಿಗೆ ಕೊಟ್ಟು ನೀವೇ ನೋಡಿ ಇರುವೆ ಹೇಗೆ ಮಲಗುತ್ತದೆಂದು ನೀವೇ ನನಗೆ ಹೇಳಬೇಕು ಎಂದು ಹೇಳಿದೆ. ಅವರು ತೆಗೆದುಕೊಂಡು ಹೋದರು – ವಿಂಬಲ್ಡನ್ ಟ್ರೋಫಿಯನ್ನು ತೆಗೆದುಕೊಂಡು ಹೋದಂತೆ.

ಅದು ಭಾನುವಾರ. ಮಧ್ಯಾಹ್ನ ೧ ಗಂಟೆಗೆ ಊಟವಾದ ಮೇಲೆ ನಾನು ಹಾಸ್ಟೆಲಿಗೆ ಹೋದೆ. ಆ ಹುಡುಗರು, ಒಂದು ಟೇಬಲ್ ಮೇಲೆ ಬಾಟಲಿಯನ್ನು ಇಟ್ಟು, ಮೂರೂ ಜನ ಸುತ್ತ ಕುಳಿತು ಅದನ್ನು ನೋಡುತ್ತಿದ್ದರು. ನಾನು ನೋಡಿದೆ. ಏನ್ರೋ, Any good News (ಏನಾದರೂ ಹೊಸ ಸುದ್ದಿ ಇದೆಯಾ?) ಎಂದು ಕೇಳಿದೆ. ಇಲ್ಲ ಸರ್, ಇನ್ನೂ ನೋಡ್ತಾ ಇದ್ದೇವೆ ಅಂದರು. ನಾನು ಬಾಟಲಿಯ ಒಳಗೆ ನೋಡಿದೆ. ನನಗೆ ಸ್ಪಷ್ಟವಾಗಿ ಗೊತ್ತಿತ್ತು ನಾನು ಮೂರು ಕಪ್ಪು ಇರುವೆಗಳನ್ನು ಕೊಟ್ಟಿರುವೆ ಎಂದು. ಹೀಗಾಗಿ, ’ಈ ಹಸಿರು, ಕೆಂಪು ಇರುವೆ ಎಲ್ಲಿಂದ ಬಂತು?’ ಎಂದು ಕೇಳಿದೆ. ಅವರು ಮೂರು ಇರುವೆ ಒಂದೇ ರೀತಿ ಇದ್ದವು. ಬಹಳ ಕನ್‌ಫ್ಯೂಸ್ ಆಗ್ತಾ ಇತ್ತು. ಯಾವುದನ್ನು ನೋಡುವುದೆಂದು ಗೊತ್ತಾಗ್ತಿರಲಿಲ್ಲ. ಅದಕ್ಕಾಗಿ ಆರ್ಟ್ ರೂಮಿಗೆ ತೆಗೆದುಕೊಂಡು ಹೋಗಿ ಒಂದಕ್ಕೆ ಕೆಂಪು, ಒಂದಕ್ಕೆ ಹಸಿರು ಬಣ್ಣ ಹಚ್ಚಿ ತಂದಿದ್ದೇವೆ ಸರ್. ಈಗ ಈ ಕಪ್ಪಿರುವೆಯನ್ನು ಮಾತ್ರ ನೋಡುತ್ತೇವೆ ಸರ್ ಎಂದರು. ನಾನು ’ಆಲ್ ದ ಬೆಸ್ಟ್’ ಎಂದು ಹೇಳಿ ಹೊರಬಂದೆ.

ಸಂಜೆ ೬ ಗಂಟೆಗೆ ಅವರು ನನ್ನ ರೂಮಿಗೆ ಬಂದರು. ಮುಖ ಬಾಯಿ ಕಿವಿಯಿಂದ ಕಿವಿ ತನಕ ನಗುತ್ತಿದ್ದರು. ಏನಾಯಿತು ಎಂದು ಕೇಳಿದೆ. ಸರ್, ಇರುವೆ ಹೇಗೆ ಮಲಗುತ್ತದೆ ಗೊತ್ತಾಯಿತು ಎಂದರು. ’ಹೇಗೆ ಮಲಗುತ್ತೆ’ ಎಂದೆ. ಏನಿಲ್ಲ ಸರ್, ತುಂಬ ಓಡಾಡುತ್ತಲ್ಲ ಸರ್. ಓಡಾಡಿ ಸುಸ್ತಾದಾಗ ಮುಂದಿನ ಎರಡೂ ಕಾಲುಗಳನ್ನು ಎತ್ತಿ ಇಟ್ಟು, ತಲೆ ಅಡ್ಡ ಇಟ್ಟು ಒಂದು ಹದಿನೈದು ಸೆಕೆಂಡ್ ಮಲಗುತ್ತೆ ಎಂದರು. ನಾನು ೧೫ ಸೆಕೆಂಡ್ ಹೇಗೆ ಸಾಕೋ ಎಂದೆ. ಒಬ್ಬ ಹುಡುಗ ಜೋರಾಗಿ ನಕ್ಕು ಸರ್, ನಾವು ಇಷ್ಟು ದೊಡ್ಡವರಿದ್ದೇವಲ್ಲ; ನಮಗೆ ನಿದ್ರೆ ಆರೇಳು ತಾಸು ಬೇಕು. ಇರುವೆ ಸಣ್ಣದಲ್ವಾ ಸರ್. ಅದಕ್ಕೆ ೧೫ ಸೆಕೆಂಡ್ ಸಾಕು ಎಂದು ಹೇಳಿದ.

ಅವನೇನೋ ಹೇಳಿದ. ಆದರೆ ಅದು ಸತ್ಯವೋ ಅಲ್ಲವೋ ಎಂದು ತಿಳಿಯಲು ನಾನು ಕೃಷಿ ವಿಶ್ವವಿದ್ಯಾಲಯಕ್ಕೆ ಫೋನ್ ಮಾಡಿ, ಅಲ್ಲಿಯ ಎಂಟಮಾಲಜಿಸ್ಟ್ (ಕೀಟಶಾಸ್ತ್ರಜ್ಞ)ರಲ್ಲಿ ಕೇಳಿದೆ. ಹೌದು, ಸಾರ್. ಇರುವೆ ನಿದ್ದೆ ಮಾಡುವುದೇ ಹಾಗೆ. ತುಂಬಾ ಓಡಾಡಿದ ಮೇಲೆ ಎರಡು ಕಾಲುಗಳನ್ನು ಮುಂದೆ ಇಟ್ಟುಕೊಂಡು ೧೦-೧೫ ಸೆಕೆಂಡ್ ಮಲಗುತ್ತೆ; ಅಷ್ಟು ಸಾಕು ಅದಕ್ಕೆ ಎಂದರು. ಅವರು ಇರುವೆ ಹೇಗೆ ಮಲಗುತ್ತದೆ ಎಂದು ಗೊತ್ತಾಗಬೇಕಾದರೆ ಪಿಎಚ್‌ಡಿ ಮಾಡಿದರು; ಈ ಮಕ್ಕಳಿಗೆ ಹೀಗೆ ಗೊತ್ತಾಯಿತು. ಈ ವಿಷಯ ಯಾಕೆ ಹೇಳಿದೆನೆಂದರೆ, ಇರುವೆ ಹೇಗೆ ನಿದ್ದೆ ಮಾಡುತ್ತದೆ ಎಂಬುದು ಮೊದಲೇ ಗೊತ್ತಿದ್ದಲ್ಲಿ ನಾನು ಅವರು ಕೇಳಿದೊಡನೆ ಹೇಳಿಬಿಡುತ್ತಿದ್ದೆ. ಆಗ ಜ್ಞಾನಪ್ರಸಾರ ಮಾತ್ರ ಆಗುತ್ತಿತ್ತು. ಅವರಿಗೆ ಅದು ಬೇಗ ಮರೆತೂ ಹೋಗುತ್ತಿತ್ತು. ಈಗ ಅವರೇ ಕಂಡುಕೊಂಡಿರುವುದರಿಂದ ಅದು ಅವರ ಜ್ಞಾನ; ಅವರು ಸೃಷ್ಟಿ ಮಾಡಿದ ಜ್ಞಾನ; ಅದನ್ನು ಮರೆಯಲು ಸಾಧ್ಯವಿಲ್ಲ.

ಈಚೆಗೆ ೨-೩ ವರ್ಷಗಳ ಹಿಂದೆ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯ, ಬರ್ಕ್ಲಿಯಲ್ಲಿ ನನ್ನ ಲೆಕ್ಚರ್ ಇತ್ತು. ಲೆಕ್ಚರ್ ಮುಗಿಸಿ ಹೊರಗೆ ಬರುವಾಗ ಒಬ್ಬ ಹುಡುಗ, ಎತ್ತರದ ದಾಂಡಿಗ ಬಂದು ಕಾಲುಮುಟ್ಟಿ ನಮಸ್ಕಾರ ಮಾಡಿ, ಸರ್, ಗುರುತು ಸಿಕ್ಕಿತಾ?’ ಎಂದು ಕೇಳಿದ. ಗುರುತು ಸಿಕ್ಕಿದ ಹಾಗಾಯಿತು, ಆದರೆ ಹೆಸರು ನೆನಪಾಗುತ್ತಿಲ್ಲ ಎಂದೆ. ‘I was your student, sir’ ಎಂದ. ಅದು ಗೊತ್ತಾಯಿತು. ಏನು ಮಾಡುತ್ತಿರುವಿರಿ? ಎಂದು ಕೇಳಿದೆ. ಅವನ ಮಾತು ಕೇಳಿ ನನಗೆ ಎಷ್ಟು ಖುಷಿಯಾಯಿತೆಂದರೆ ಎದೆ ಝಲ್ ಎಂದಿತು. ಅವನು ನಾನೀಗ ಮಾಸ್ಟರ್ ಡಿಗ್ರಿ ಮುಗಿಸಿ ಪಿಎಚ್‌ಡಿ ಮಾಡುತ್ತಿದ್ದೇನೆ ಸರ್. ಕೀಟಗಳ ಮೇಲೆ ರೀಸರ್ಚ್ ಮಾಡುತ್ತಿದ್ದೇನೆ ಎಂದ. ಅವನ ಹೆಸರಿನಲ್ಲಿ ಆಗಲೇ ನಾಲ್ಕು ಪೇಟೆಂಟ್‌ಗಳು ಇದ್ದವು. ಪೇಟೆಂಟ್ ಅಂದರೆ ಸುಲಭವಲ್ಲ. ಇನ್ನೊಂದು ಐದಾರು ವರ್ಷ ಹೋಗಲಿ; ಕೀಟಶಾಸ್ತ್ರದಲ್ಲಿ ಆತ ಒಬ್ಬ ಲೀಡರ್ ಆಗುತ್ತಾನೆ. ಅವನು ಹೇಳಿದ: ಇದೆಲ್ಲ ಆದದ್ದು ಆ ಇರುವೆಯಿಂದ ಸರ್ ಎಂದ. ನೋಡಿ, ಇದು ಜ್ಞಾನಸೃಷ್ಟಿ ಆಗುವ ರೀತಿ. ಜ್ಞಾನಸೃಷ್ಟಿ ಎಲ್ಲಿ ಆಗುತ್ತದೆ? ಯಾವ ವಿಷಯ ಚೆನ್ನಾಗಿ ಆಳವಾಗಿ ಮನಸ್ಸನ್ನು ಮುಟ್ಟಿದೆಯೋ ಅದರಲ್ಲಿ ಮಾತ್ರ ನೀವು ಕ್ರಾಂತಿಕಾರಕ ವಿಚಾರಗಳನ್ನು ಮಾಡಬಹುದು.

ನೀವು ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತಿರಿ ಎಂದು ಇಟ್ಟುಕೊಳ್ಳಿ. ಅದು ಬಾಯಿಯ ಭಾಷೆ; ಹೃದಯದ ಭಾಷೆ ಅಲ್ಲ. ಅದರಲ್ಲಿ ನಮ್ಮ ಒರಿಜಿನಲ್ ಥಾಟ್ಸ್ ಬರುವುದಕ್ಕೆ ಸಾಧ್ಯವೇ ಇಲ್ಲ. ಕಲ್ಪನೆ ಮಾಡಿನೋಡಿ. ನಿಮ್ಮ ಕನಸುಗಳು ಯಾವ ಭಾಷೆಯಲ್ಲಿ ಬರುತ್ತವೆ? ನಿಮಗೆ ಎಂದಿಗೂ ಕನಸುಗಳು ಇಂಗ್ಲಿಷ್‌ನಲ್ಲಿ ಬರುವುದಿಲ್ಲ. ಮಾತೃಭಾಷೆಯಲ್ಲೇ ಕನಸು ಬೀಳುವುದು, ಯಾಕೆ? ಅದು ಹೃದಯಕ್ಕೆ ಹತ್ತಿರವಾದ ಭಾಷೆ. ಕಾಲಿಗೇನಾದರೂ ತಾಗಿದರೆ ’ಅಮ್ಮಾ’ ಅನ್ನುತ್ತೇವಲ್ಲವೇ? ಏಕೆಂದರೆ ಅದು ಹೃದಯದ ಭಾಷೆ. ಹೃದಯದ ಭಾಷೆ ಕಲಿಕೆಯ ಭಾಷೆಯೂ ಆದರೆ ಎಷ್ಟು ಸುಲಭ ಆಗುತ್ತದೆ. ಯಾವ ಸಂಕೋಚವೂ ಬೇಡ; ಮಾತೃಭಾಷೆಯಲ್ಲೇ ಶಿಕ್ಷಣ ಕೊಡಿಸಿ. ಇದು ಫೌಂಡೇಶನ್ ಕೋರ್ಸ್. ಚಿಕ್ಕಂದಿನ ವಿದ್ಯೆ ’ಚೂಡಾರತ್ನ’. ಈ ಶಿಕ್ಷಣವನ್ನು ಗಟ್ಟಿಯಾಗಿ ಕೊಡಿಸಿ.

ನನಗೆ ಬಹಳ ಖುಷಿ. ನನ್ನ ಮೊಮ್ಮಗಳು ಇದೇ ಶಾಲೆಯಲ್ಲಿ ಓದುತ್ತಿದ್ದಾಳೆ. ಅವಳು ಕನ್ನಡವನ್ನು ಚೆನ್ನಾಗಿ ಕಲಿಯುತ್ತಿದ್ದಾಳೆ. ಅದೇ ರೀತಿ ನಿಮ್ಮ ಮಕ್ಕಳು ಕೂಡ ಕನ್ನಡವನ್ನು ಚೆನ್ನಾಗಿ ಕಲಿಯಲಿ. ಅದರ ಜೊತೆಗೆ ಇಂಗ್ಲಿಷನ್ನು ಕೂಡ ಚೆನ್ನಾಗಿ ಕಲಿಯಲಿ. ನಾಳೆ ಜಗತ್ತನ್ನು ಎದುರಿಸಬಹುದು.

ಸ್ವಾಮಿ ವಿವೇಕಾನಂದರು ಬಾಲ್ಯದಲ್ಲಿ ಕಲಿತದ್ದು ಯಾವ ಭಾಷೆಯಲ್ಲಿ? ಬಂಗಾಳಿ ಭಾಷೆಯಲ್ಲಿ. ’ತಿರುಕ್ಕುರಳ್’ ಬರೆದ ಕವಿ ತಮಿಳಿನಲ್ಲೇ ಕಲಿತದ್ದು. ನಮ್ಮ ಹಿರಿಯರೆಲ್ಲ ಯಾವ ಭಾಷೆಯಲ್ಲಿ ಕಲಿತದ್ದು? ಪ್ರಪಂಚದಲ್ಲಿ ಯಾರ‍್ಯಾರು ತುಂಬ ದೊಡ್ಡವರು ಎಂದು ಆಗಿದ್ದಾರೋ (ದೊಡ್ಡವರು ಅಂದರೆ ಹಣ ಜಾಸ್ತಿ ಗಳಿಸಿದವರು ಎಂದಲ್ಲ) ಅಂತಹ ಎಲ್ಲರೂ ಮಾತೃಭಾಷೆಯಲ್ಲೇ ಕಲಿತವರು.

ಡಾ|| ಕಲಾಂ ಅವರ ಜೊತೆ ಸುಮಾರು ೧೫ ವರ್ಷ ಇರುವ ಭಾಗ್ಯ ನನಗಿತ್ತು. ಯಾವಾಗಲೂ ಮಾತನಾಡುವಾಗ ಅವರಿಗೆ ಪಕ್ಕ ತಮಿಳು ಬಂದು ಬಿಡುವುದು. ಅವರು ಪ್ರತಿಯೊಂದು ಭಾಷಣದಲ್ಲಿ ’ತಿರುಕ್ಕುರಳ್’ ಉಲ್ಲೇಖ (ಕೋಟ್) ಮಾಡುತ್ತಿದ್ದರು. ರಾಷ್ಟ್ರಪತಿಯಾಗಿ ಭಾಷಣ ಮಾಡಿದಾಗಲೆಲ್ಲ ತಿರುಕ್ಕುರುಳ್‌ನಲ್ಲಿ, ತಿರುಪ್ಪಾವೈನಲ್ಲಿ ಹೀಗಿದೆ ಎಂದು ಹೇಳುತ್ತಿದ್ದರು. ನನ್ನ ಜೊತೆಗೆ ಮಾತನಾಡಬೇಕಾದರೆ, ’ಅವಳದಾ’ ಎನ್ನುವರು. ನನಗೆ ’ಅವಳದಾ’ ಎಂದರೆ ಏನೆಂದು ಗೊತ್ತಿಲ್ಲ. ನಾನೊಮ್ಮೆ’’What is that you are saying’ ಅವಳದಾ ಅವಳದಾ?’ ಎಂದು ಕೇಲಿದೆ. ಅವಳದಾ ಎಂದರೆ ತಮಿಳಿನಲ್ಲಿ ಅಷ್ಟೆ ಎಂದು. ಅಂದರೆ ಅವರಿಗೆ ಅತ್ಯಂತ ಖುಷಿಯಾದಾಗ ಬರುತ್ತಿದ್ದ ಭಾಷೆ ಮಾತೃಭಾಷೆಯೇ.

ಆದ್ದರಿಂದ ಮಾತೃಭಾಷೆಯಲ್ಲಿ ಶಿಕ್ಷಣ ಎನ್ನುವುದು ಕುವೆಂಪು ಅವರು ಹೇಳಿದ ಹಾಗೆ, ಪ್ರಶ್ನೆಯಲ್ಲ; ಅದೇ ಸೆಲ್ಯೂಷನ್ (ಪರಿಹಾರ). ಈಗ ನಮಗೆ ಒಂದು ಭ್ರಮೆ ಹಿಡಿದಿದೆಯಲ್ಲಾ. ಅದರ ಬಗ್ಗೆ ನನಗೊಂದು ಹಠ ಇತ್ತು. ನಾನು ಸರ್ಕಾರಕ್ಕೂ ಹೇಳಿದ್ದೆ. ಸರ್ಕಾರದ ಕೆಲಸಗಳು ಸ್ವಲ್ಪ ನಿಧಾನ; ಹೇಳಿದ ಹಾಗೆ ಮಾಡಬೇಕಾದರೆ ಸ್ವಲ್ಪ ಟೈಮ್ ತೆಗೆದುಕೊಳ್ಳುತ್ತಾರೆ. ಕೆಲಸ ಆಗಬೇಕಾದರೆ ದಶಕಗಳೇ ಹೋಗಬೇಕಾಗುತ್ತದೆ. ಸಚಿವರಿಗೆ ನಾನೊಂದು ಚಾಲೆಂಜ್ ಮಾಡಿದ್ದೆ: ಇಂಗ್ಲಿಷ್ ಮೀಡಿಯಂ ಶಾಲೆಗಳು ಯಾಕೆ ಬಂತು ಎಂದು ಗೊತ್ತಾದರೆ ಕನ್ನಡಮಾಧ್ಯಮ ಯಾಕೆ ಹೋಯಿತು ಎಂದು ಗೊತ್ತಾಗುತ್ತದೆ. ಅದಕ್ಕೆ ನಾನು ಹೇಳಿದೆ: ಜಿಲ್ಲೆಗೊಂದು ಕನ್ನಡ ಮಾಧ್ಯಮ ಶಾಲೆಯನ್ನು ಮಾಡಿ. ಕನ್ನಡ ಮಾಧ್ಯಮದಲ್ಲೇ ಪಾಠ ಮಾಡೋಣ; ಜೊತೆಗೆ ಇಂಗ್ಲಿಷನ್ನು ಚೆನ್ನಾಗಿ ಕಲಿಸೋಣ. ಮಕ್ಕಳಿಗೆ ಎಲ್ಲ ಸಲವತ್ತುಗಳನ್ನು ಕೊಡೋಣ, ಮುಂದೆ ಈ ಮಕ್ಕಳು ಸಾಧನೆ ಮಾಡುವುದನ್ನು ನೋಡಿ ಎಂದು ಹೇಳಿದೆ.

ನಮ್ಮ ಜನಕ್ಕೇನೂ ಇಂಗ್ಲಿಷ್ ಬಗ್ಗೆ ಪ್ರೀತಿ ಇದೆ ಎಂದಲ್ಲ. ಇಂಗ್ಲಿಷ್ ಕಲಿತರೆ ಸಂಬಳ ಜಾಸ್ತಿ ಬರುತ್ತದೆ ಎನ್ನುವ ಭ್ರಮೆ ಇದೆ. ಕನ್ನಡವನ್ನು ಚೆನ್ನಾಗಿ ಮಾತೃಭಾಷೆಯಾಗಿ ಕಲಿತು, ವಿಷಯಗಳನ್ನು ಚೆನ್ನಾಗಿ ಕಲಿತು, ಇಂಗ್ಲಿಷನ್ನೂ ಕಲಿತಾಗ ಇದಕ್ಕಿಂತ ಹೆಚ್ಚು ಸಾಧನೆ ಮಾಡುವುದಕ್ಕೆ ಅವಕಾಶವಿದೆಎಂದು ಗೊತ್ತಾದಾಗ ಇದೇ ಜನ ನನಗೆ ಕನ್ನಡ ಮೀಡಿಯಂ ಕೊಡಿ ಸರ್ ಎಂದು ಕೇಳುತ್ತಾರೆ.

ಈಗ ಅಂತಹ ಅವಕಾಶವನ್ನು ರಾಷ್ಟ್ರೋತ್ಥಾನ ಪರಿಷತ್‌ನವರು ಒದಗಿಸಿಕೊಟ್ಟಿದ್ದಾರೆ. ಇಲ್ಲಿ ಎಲ್ಲ ವ್ಯವಸ್ಥೆ ಚೆನ್ನಾಗಿದೆ; ಪಾಠ ಮಾಡುವ ರೀತಿ ಚೆನ್ನಾಗಿದೆ; ಮೇಷ್ಟ್ರು ಚೆನ್ನಾಗಿ ಕಲಿಸುತ್ತಾರೆ. ಇಲ್ಲಿ ಕನ್ನಡ ಮಾಧ್ಯಮದಲ್ಲಿ ಮಕ್ಕಳು ಚೆನ್ನಾಗಿ ಕಲಿಯಲಿ. ಜೊತೆಗೆ ಇಂಗ್ಲಿಷ್ ಕೂಡ ಚೆನ್ನಾಗಿ ಕಲಿಯಲಿ. ಮುಂದೆ ನೋಡಿ ಕಲಿಕೆ ಹೇಗಿರುತ್ತದೆ ಎಂದು; ತಳಹದಿಯಲ್ಲಿ ಗಟ್ಟಿ ಚಿಂತನೆ ಆಗಬೇಕು.

ನಿಮ್ಮ ಮನೆಯನ್ನು ಒಮ್ಮೆ ನೋಡಿ. ಕಾರ್ಪೆಂಟರ್(ಬಡಗಿ) ಬರುತ್ತಾನೆ; ಅವನೇನೂ ಕಲಿತವನಲ್ಲ. ಆದರೆ ಬಡಗಿ ಕೆಲಸವನ್ನು ಚೆನ್ನಾಗಿ ಕಲಿತುಕೊಂಡಿದ್ದಾನೆ. ಅದೇ ರೀತಿ ನಾನು ಕನ್ನಡವನ್ನು ಚೆನ್ನಾಗಿ ಕಲಿತುಕೊಂಡರೆ ಹೊಸ ವಿಷಯಗಳ ವಿಚಾರ ಮಾಡುವುದಕ್ಕೆ ಹೃದಯದ ಭಾಷೆ ತುಂಬ ಅನುಕೂಲವಾಗುತ್ತದೆ. ಇದು ನಾವು ಬೇರೆ ಬೇರೆ ದೇಶಗಳಲ್ಲಿ ನೋಡಿರುವಂಥದು. ರಷ್ಯಾದಲ್ಲಿ ಬಹಳ ಜನರಿಗೆ ಇಂಗ್ಲಿಷ್ ಬರುವುದಿಲ್ಲ. ಜರ್ಮನಿಯಲ್ಲೂ ಬರುವುದಿಲ್ಲ. ಯಾಕೆ ಅವು ದೊಡ್ಡ ದೇಶಗಳಾದವು? ರಷ್ಯಾ, ಅಮೆರಿಕಕ್ಕಿಂತ ಮೊದಲು ಆಕಾಶಯಾನವನ್ನು ಕಳುಹಿಸಿದ ದೇಶ. ಇಂದಿಗೂ ಆಟೋಮೊಬೈಲ್ ಕೈಗಾರಿಕೆಯಲ್ಲಿ ಜರ್ಮನಿಯನ್ನು ಹಿಂದೆಹಾಕಲು ಸಾಧ್ಯವೇ ಇಲ್ಲ. ಇನ್ನು ಕೆಮರಾ ಉದ್ಯಮ. ಯಾಕೆ ಹೀಗಾಯಿತು? ಅವರು ಮಾಡುವುದು ಯಾವುದರಿಂದ? ತಮ್ಮ ಭಾಷೆಯಿಂದಲೇ ಮಾಡಿದ್ದು. ತಮ್ಮ ಭಾಷೆಯನ್ನೇ ಕಲಿತು ದೊಡ್ಡವರಾಗಲು ಅವರಿಗೆ ಸಾಧ್ಯವಿದ್ದರೆ ನಾವು ನಮ್ಮ ಭಾಷೆಯನ್ನೇ (ಅದರ ಮಾಧ್ಯಮದಲ್ಲೇ) ಕಲಿತು ದೊಡ್ಡವರಾಗಲು ಏಕೆ ಸಾಧ್ಯವಿಲ್ಲ? ಖಂಡಿತಾ ಸಾಧ್ಯವಿದೆ. ಅದಕ್ಕೆ ಮುಖ್ಯವಾಗಿ ಪಾಲಕರು ಮನಸ್ಸು ಮಾಡಬೇಕು. ಹೆದರುವ ಕಾರಣವಿಲ್ಲ. ಕನ್ನಡ ಚೆನ್ನಾಗಿ ಕಲಿಯಲಿ.

ಗುರುರಾಜ ಕರಜಗಿ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಚೈನಾ ಅತಿಕ್ರಮಣ ಕಾಂಗ್ರೆಸ್ ನೀತಿಗಳ ಪರಿಣಾಮ: ಅರುಣಾಚಲದ ಸಂಸದ ತಪಿರ್ ಗಾವೋ ಆರೋಪ

Tue Jan 19 , 2021
ಭಾರತದ  ಇಂದಿನ ಸಮಸ್ಯೆಗಳಿಗೆ ಸ್ವಾತಂತ್ರ್ಯಾನಂತರ ದೇಶದ ನೇತೃತ್ವ ವಹಿಸಿದ್ದ ಕಾಂಗ್ರೆಸ್ ನಾಯಕರುಗಳ  ನೀತಿಗಳೇ ಕಾರಣ ಎಂದು ಇತಿಹಾಸ ಸ್ಪಷ್ಟವಾಗಿ ತಿಳಿಸುತ್ತದೆ. ಅಂತಹ  ಒಂದು ಸಮಸ್ಯೆ ಚೈನಾ. ಸ್ವಪ್ರತಿಷ್ಠೆಗಾಗಿ ಪ್ರಥಮ ಪ್ರಧಾನಿ ನೆಹರು ಭದ್ರತಾ ಮಂಡಳಿ ಸದಸ್ಯತ್ವ ಚೀನಾಕ್ಕೆ ಧಾರೆ ಎರೆದ ಉದಾಹರಣೆ ನಮಗೆಲ್ಲಾ ತಿಳಿದೇ ಇದೆ. ಅಂತಹದ್ದೇ ಒಂದು ಸಮಸ್ಯೆ ಅರುಣಾಚಲ ಪ್ರದೇಶದ್ದು. ಅರುಣಾಚಲ ಪ್ರದೇಶ ಹಾಗೂ ಚೀನಾ ಗಡಿ ಪ್ರದೇಶದಲ್ಲಿ ಚೀನಾ ಹೊಸ ಗ್ರಾಮ ರಚಿಸಿಕೊಂಡಿರುವುದು ಬಾಹ್ಯಾಕಾಶದಲ್ಲಿ ಚಿತ್ರಗಳಲ್ಲಿ […]