ನಂದಾದೀಪವಿದು, ಎಂದಿಗೂ ನಂದದ ಜ್ಯೋತಿಯಿದು..

ಭಾರತ ಅನೇಕ ಅಪ್ರತಿಮ ಹೋರಾಟಗಾರರ ದೇಶ. ತನ್ನ ಒಡಲಾಳದ ನೈಜ ಇತಿಹಾಸದಲ್ಲಿ ಅನೇಕ ಜನ ನಾಯಕರ ಹೋರಾಟದ ಜೀವನ ಕಥೆಯನ್ನು ಜೀವಂತವಾಗಿರಿಸಿಕೊಂಡ ದೇಶ ನಮ್ಮ ಭಾರತ. ಇತಿಹಾಸವೊಂದು ವಾಸ್ತವ. ವಾಸ್ತವವೂ ಇತಿಹಾಸವೇ. ವಾಸ್ತವವನ್ನು ಮತ್ತು ಸತ್ಯಸಂಗತಿಗಳನ್ನು ಎದುರಿಸಲು ವಿಫಲವಾಗುವ ಜನಾಂಗಗಳಿಗೆ ವಿನಾಶ ಕಟ್ಟಿಟ್ಟ ಬುತ್ತಿ. ನಮ್ಮ ಪರಂಪರೆ, ನಮ್ಮ ಸಂಸ್ಕೃತಿಗಳಿಗೆ ಅನೇಕ ಸಹಸ್ರವರ್ಷಗಳ ಇತಿಹಾಸವಿದೆ. ನಾವು ಶತ್ರುಗಳನ್ನು ಅರಿಯಲು ವಿಫಲರಾದೆವು. ನಮ್ಮಲ್ಲಿ ಶೌರ್ಯ – ಶಕ್ತಿಗಳಿದ್ದರೂ ಅಪಾತ್ರರಿಗೆ ಕ್ಷಮೆ ನೀಡಿ ಪೆಟ್ಟು ತಿಂದೆವು. ಅಕ್ಬರನನ್ನು ಗೌರವಿಸುವ ನಮ್ಮ ಇತಿಹಾಸ ರಾಣಾ ಪ್ರತಾಪನನ್ನು ಕೀಳಾಗಿ ಕಾಣುತ್ತದೆ. ದೇಶಭಕ್ತಿಯ ಪಾಠ ಹೇಳಿದರೆ ಸಾಂಪ್ರದಾಯಿಕತೆ(ಕೋಮುವಾದ) ಎನ್ನುತ್ತಾರೆ.  ಭಾರತ ಋಷಿ ಸಂದೇಶದ ದೇಶ. ಇದು ಜನರ ಕಲ್ಯಾಣವಷ್ಟೇ ಅಲ್ಲ. ಗಿಡ-ಮರ, ಪಶು-ಪಕ್ಷಿ ಎಲ್ಲದರ ಹಿತ ಬಯಸಿದ ದೇಶ. ಇಂತಹ ವಿಚಾರ ಭಾರತದಲ್ಲಿ ಮಾತ್ರ ಕಾಣಲು ಸಾಧ್ಯ. ಆದರೆ ಅದರ ತಪ್ಪು ವ್ಯಾಖ್ಯಾನ ಮಾಡುತ್ತಾರೆ. ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದ ಕ್ರಾಂತಿಕಾರಿಗಳನ್ನು ಭಯೋತ್ಪಾದಕರೆಂದು ಕರೆಯುತ್ತಾರೆ. ಇವತ್ತು ಭಾರತೀಯ ಜನತಾ ಪಕ್ಷ ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಜನ್ನಮನ್ನಣೆಗೆ ಪಾತ್ರವಾಗಿ ಅಧಿಕಾರದಲ್ಲಿದೆ. ಅದರ ಜನಬೆಂಬಲದ ತಳಹದಿ ಇನ್ನೂ ವಿಸ್ತಾರವಾಗುತ್ತ ಸಾಗಿದೆ. ಅಂದರೆ ಈ ಪಕ್ಷದ ವಿಚಾರಧಾರೆಗಳು, ಪ್ರತಿಪಾದನೆಗಳು, ತತ್ವ ಸಿದ್ಧಾಂತಗಳು ಜನಸಮೂಹಕ್ಕೆ ಒಪ್ಪಿತವಾಗಿರುವುದೇ ಇದಕ್ಕೆ ಕಾರಣ. ಈ ಯಶಸ್ಸಿನ ಹಿಂದಿನ ಮರ್ಮವೇನು ಎಂದು ಹುಡುಕುತ್ತಾ ಹೋದರೆ ಸಿಗುವ ಉತ್ತರವೇ ’ಪಂಡಿತ ದೀನದಯಾಳ್ ಉಪಾದ್ಯಾಯರು’. ಪಂಡಿತರು ಹಾಕಿದ ತಾತ್ವಿಕ ಪ್ರತಿಪಾದನೆಗಳು ಬಹುಪಾಲು ಭಾರತೀಯರು ಒಪ್ಪಿದ ಮತ್ತು ಒಪ್ಪುವ ಸಾರ್ವಕಾಲಿಕ ಸತ್ಯವಾಗಿದೆ.

ಪಂಡಿತ ದೀನದಯಾಳ ಉಪಾದ್ಯಾಯರ ಬಗ್ಗೆ ಸಂಪೂರ್ಣವಾಗಿ ಓದಿಕೊಂಡಿರದವನಾಗಿದ್ದ ನಾನು ಶ್ರೀ ಭಾವೂರಾವ ವೆಂಕಟೇಶ ದೇಶಪಾಂಡೆಯವರು ಬರೆದ ’ನಂದಾದೀಪವಿದು…! ಬೆಳಗಿದ ಬಾಳಿನ ಕಥಾನಕ’ ಎಂಬ ಕೃತಿಯನ್ನು ಓದಿ ಮುಗಿಸಿದೆ. ಕನ್ನಡದಲ್ಲಿ ಉಪಾದ್ಯಾಯರ ಬಗ್ಗೆ ಬಂದ ಮೊದಲ ಪುಸ್ತಕವಾದ ಇದು ಸಾಮಾಜಿಕ ಚಿಂತನೆಗಳ ಸೆಳೆತವುಳ್ಳ ಪ್ರತಿಯೊಬ್ಬನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರುತ್ತದೆ. ಉಪಾದ್ಯಾಯರು ಕೇವಲ ರಾಜಕೀಯ ಮುಖಂಡರು ಎಂದು ನೀವೇನಾದರೂ ಅಂದುಕೊಂಡಿದ್ದರೆ ದಯವಿಟ್ಟು ಈ ಕೃತಿಯನ್ನು ಓದಿ ಮತ್ತು ಅವರ ವೈಚಾರಿಕ ಅಗಾಧತೆಯ ಬಗ್ಗೆ ತಿಳಿದುಕೊಳ್ಳಿ ಎಂದಷ್ಟೇ ನಾನು ಹೇಳುತ್ತೇನೆ. ಈ ಕೃತಿಯನ್ನು ಓದಿ ಮುಗಿಸುವಷ್ಟರ ಹೊತ್ತಿಗೆ ನಮಗೆ ಉಪಾದ್ಯಾಯರ ವಿಶಿಷ್ಟ ವ್ಯಕ್ತಿತ್ವದ ನೈಜ ದರ್ಶನವಾಗುವುದಂತೂ ಸತ್ಯ. ೧೭೦ ಪುಟಗಳ ಈ ಪುಸ್ತಕವನ್ನು ಓದಲು ಕೂಡ ತುಂಬಾ ಸಮಯದ ಅಗತ್ಯವೇನಿಲ್ಲ. ಪಂಡಿತ ದೀನದಯಾಳರೆಂಬ ಅಪ್ರತಿಮ ರಾಷ್ಟ್ರಪುರುಷನ ಅಗಾಧ ವ್ಯಕ್ತಿತ್ವ ರಾಷ್ಟ್ರಸೇವೆಗೆ ಕಟಿಬದ್ಧರಾಗಿರುವ ಇಂದಿನ ಯುವಜನರಿಗೆ ಮಾದರಿ ಮತ್ತು ಮೇಲ್ಪಂಕ್ತಿ ಎಂಬುದು ಈ ಪುಸ್ತಕ ಓದಿ ಮುಗಿಸಿದ ಮೇಲೆ ಅರಿವಾಗುತ್ತದೆ .

ಈ ಕೃತಿಯಲ್ಲಿ ದೀನದಯಾಳ ರ ಸಂಪೂರ್ಣ ಜೀವನಕಥಾನಕವನ್ನು ಹನ್ನೆರಡು ವಿಭಾಗ ಮಾಡಿ ಹೇಳಲಾಗಿದೆ. ಒಂದೊಂದು ಭಾಗವೂ ದೀನದಯಾಳರ ಜೀವನದ ಪ್ರತಿಯೊಂದು ಮಜಲುಗಳನ್ನು ತೆರೆದಿಡುತ್ತವೆ. ಶ್ರೀ ಉಪಾದ್ಯಾಯರು ರಾಜಕೀಯ ಮುಖಂಡರು ಎನ್ನುವುದಕ್ಕಿಂತ ಹೆಚ್ಚಾಗಿ ಓರ್ವ ತತ್ತ್ವಜ್ಞಾನಿ, ಮೇಧಾವಿ,ಅರ್ಥಶಾಸ್ತ್ರಜ್ಞ, ಕುಶಲ ಸಂಘಟಕ, ಪ್ರಭಾವಿ ವಕ್ತಾರ ಮತ್ತು ಸಮರ್ಥ ಲೇಖಕರಾಗಿದ್ದರು ಎಂಬ ವಿಶೇಷ ಜೀವನ ಸತ್ಯಗಳ ಒಳಹೊಗುವ ಅವಕಾಶ ನಮಗೆ ಈ ಕೃತಿಯ ಮೂಲಕ ದೊರಕುತ್ತದೆ.ಒಂದು ಬೇಸರವೆಂದರೆ ಇಂತಹ ಮಹಾನ್ ವ್ಯಕ್ತಿಯ ಜೀವನ ಕಥೆಯನ್ನು ನಾನು ನನ್ನ ಬಾಲ್ಯದಲ್ಲೇ ಓದುವಂತಾಗಿದ್ದರೆ;ಅದು ನನ್ನ ಮೇಲೆ ಬೀರುತ್ತಿದ್ದ ಪರಿಣಾಮ ಏನಾಗಿರುತ್ತಿತ್ತು? ನಮ್ಮ ಮನಸ್ಸುಗಳ ಮೇಲೆ ಸುಳ್ಳು ರಾಷ್ಟ್ರನಾಯಕರ ಸುಳ್ಳು ಇತಿಹಾಸ ಸವಾರಿಮಾಡಿದ್ದೆಷ್ಟು? ಯಾಕೆ ಕೆಲವು ಸತ್ಯಗಳಿಂದ ನಮ್ಮನ್ನು ದೂರವಿಟ್ಟರು? ಹೀಗೆ ಇನ್ನೂ ಅನೇಕ ಪ್ರಶ್ನೆಗಳು ನಮ್ಮೊಳಗೆ ಸುಳಿಯಲು ಗೊತ್ತಿಲ್ಲದೇ ಶುರುವಾಗಿಬಿಡುತ್ತದೆ. ಇಂತಹ ಮಹಾನ್ ವ್ಯಕ್ತಿಗಳ ಜೀವನಕಥೆಯನ್ನು ನಾವಂತೂ ಬಹಳ ತಡವಾಗಿ ಓದುತ್ತಿದ್ದೇವೆ ಆದರೆ ನಮ್ಮ ಮುಂದಿನ ತಲೆಮಾರುಗಳಿಗೆ ’ನೈಜ ರಾಷ್ಟ್ರನಾಯಕರ’ ಮತ್ತು ’ನೈಜ ಇತಿಹಾಸ’ವನ್ನು ತಲುಪಿಸಿವ ಪ್ರಯತ್ನವನ್ನು ನಾವೇ ಮಾಡಬೇಕು. ಶ್ರೀ ಭಾ ವೆಂ ದೇಶಪಾಂಡೆಯವರು ಅತ್ಯಂತ ಸರಳವಾಗಿ ಮತ್ತು ಅಧ್ಬುತವಾಗಿ ಉಪಾದ್ಯಾಯರ ಜೀವನ ಕಥೆಯನ್ನು ಈ ಕೃತಿಯ ಮೂಲಕ ಬಿಚ್ಚಿಟ್ಟಿದ್ದಾರೆ.

ಕೃತಿಯಲ್ಲೊಂದುಕಡೆ ದೀನದಯಾಳರು ತನ್ನ ಸೋದರಮಾವನಿಗೆ ಬರೆದ ಪತ್ರವೊಂದನ್ನು ಯತಾವತ್ತಾಗಿ ಪ್ರಕಟಿಸಲಾಗಿದೆ. ರಾಷ್ಟ್ರ ಸೇವೆಗಾಗಿ ತ್ಯಾಗಮಯ ಜೀವನ ವ್ರತವನ್ನು ಕೈಗೊಳ್ಳಲು ಸಂಕಲ್ಪ ಮಾಡಿದ ದೀನದಯಾಳರು ತಮ್ಮ ಪವಿತ್ರ ಸಂಕಲ್ಪವನ್ನು ಸೋದರಮಾವನಿಗೆ ತಿಳಿಸಿದ ರೀತಿಯನ್ನು ನೀವು ಸ್ವತಃ ಓದಿಯೇ ಅನುಭವಿಸಬೇಕು. ಅವರ ಆ ಪತ್ರ ರಾಷ್ಟ್ರ ಸೇವೆ ಮಾಡಬಯಸುವ ಪ್ರತಿಯೊಬ್ಬನಿಗೂ ಮಾರ್ಗದರ್ಶಿಯೂ ಹಾಗೂ ಸ್ಪೂರ್ತಿಪ್ರದವೂ ಆಗಿದೆ. ವಿಶೇಷವೆಂದರೆ ಅವರು ಅಂದು ೧೯೪೨ ನೇ ಇಸ್ವಿಯಲ್ಲಿ ಪ್ರಸ್ತಾಪಿಸಿರುವ ಅನೇಕ ವಿಷಯಗಳು ಇಂದಿಗೂ ಪ್ರಸ್ತುತವಾಗಿರುವುದು.ದೀನದಯಾಳರು  ಒಂದುಕಡೆ ಸಮಾಜ ನಮ್ಮ ಜೀವನದ ಮೇಲೆ ಬೀರುವ ಪರಿಣಾಮಗಳ ಮತ್ತು ಉತ್ತಮ ಸಮಾಜ ನಿರ್ಮಾಣದ ಕೈಂಕರ್ಯದ ಬಗ್ಗೆ ಪ್ರತಿಯೊಬ್ಬರೂ ಅಣಿಯಾಗಬೇಕು ಎಂದು ವಿಭಿನ್ನವಾಗಿ ಎಚ್ಚರಿಸುತ್ತಾರೆ –  ’ಯಾವ ಸಮಾಜದ ರಕ್ಷಣೆ ಪೋಷಣೆಗಳಿಗಾಗಿ ರಾಮನು ವನವಾಸ ಮಾಡಿದನೋ, ಕೃಷ್ಣನು ಅಸಂಖ್ಯ ಕಷ್ಟ ನಷ್ಟಗಳನ್ನು ಸಹಿಸಿದನೋ, ರಾಣಾ ಪ್ರತಾಪನು ಕಾಡುಮೇಡುಗಳಲ್ಲಿ ಅಲೆದಾಡಿದನೋ, ಗುರುಗೋವಿಂದ ಸಿಂಹನು ತನ್ನಿಬ್ಬರು ಚಿಕ್ಕ ಮಕ್ಕಳ ಜೀವಂತ ಸಮಾಧಿಯನ್ನು ತಾಳಿಕೊಂಡನೋ ಅದಕ್ಕಾಗಿ ನಾವು ನಮ್ಮ ಕೆಲವೊಂದು ವ್ಯಕ್ತಿಗತ ಆಸೆ ಆಮಿಷಗಳನ್ನು ತ್ಯಜಿಸಲಾರವೇನು? ಇಂದು ಕೈಯೊಳಗೆ ಜೋಳಿಗೆ ಹಿಡಿದು ಸಮಾಜ ನಮ್ಮಿಂದ ಭಿಕ್ಷೆ ಬೇಡುತ್ತಿದೆ. ನಾವು ಅದರ ಬೇಡಿಕೆಯನ್ನು ಅಲಕ್ಷಿಸಿದ್ದೇ ಆದರೆ, ನಾವು ಇಚ್ಚಿಸಲಿ ಬಿಡಲಿ, ನಾವು ಪ್ರೀತಿಸುವ ಸಮಸ್ತ ವಸ್ತುಗಳನ್ನೂ ಕಳೆದುಕೊಳ್ಳಬೇಕಾದ ದಿನ ಬಂದೀತು’. ಇದು ಎಂತಹ ಅದ್ಭುತವಾದ ಮಾತು ಅಲ್ಲವೇ? ಹೀಗೆ ಇನ್ನೂ ಅನೇಕ ಪ್ರಬುದ್ಧವಾದ ಚಿಂತನೆಯ ಗುಚ್ಚವನ್ನೇ ಈ ಕೃತಿಯಲ್ಲಿ ನೀವು ಓದಬಹುದು.

ಇಲ್ಲಿ ಖರೀದಿಸಬಹುದು

ಪಾಶ್ಚಿಮಾತ್ಯ ದೇಶಗಳ ವ್ಯಕ್ತಿವಾದ, ಸಮಾಜವಾದ, ಕಮ್ಯುನಿಸಂ ಮತ್ತಿತರ ಪ್ರತಿಪಾದನೆಗಳು ವ್ಯಕ್ತಿಯ ಸಮಗ್ರ ವಿಕಾಸಕ್ಕೆ ಪೂರಕವಾದವುಗಳಲ್ಲ ಎಂಬುದು ಅವರ ಖಚಿತ ಅಭಿಪ್ರಾಯವಾಗಿತ್ತು.ಅವರ ‘ಅಖಂಡ ಭಾರತ’ ಕಲ್ಪನೆಯೇ ವಿಶಿಷ್ಟವಾದುದು. ಸಾಂಸ್ಕೃತಿಕ ಏಕತೆ ಸಾಧಿಸಲು ಪರಿಶ್ರಮಿಸಿದ ಶ್ರೀ ಶಂಕರಾಚಾರ್ಯರು,ರಾಜಕೀಯ ಏಕತೆ ಸಾಧಿಸಲು ಬಯಸಿದ ಚಾಣಕ್ಯ, ಶ್ರೀ ಅರವಿಂದರ ಪ್ರತಿಪಾದನೆಗಳ ಸಾರವನ್ನು ಹೀರಿಕೊಂಡು ಒಡಮೂಡಿದ ಕಲ್ಪನೆ ಇದಾಗಿದೆ. ಇವರ ವೈಚಾರಿಕ ನಿಲುವುಗಳು ಗಾಂಧೀಜಿಯವರ ಹಲವು ವಿಚಾರಧಾರೆಗಳೊಂದಿಗೆ ಕೂಡ ಸಾಮ್ಯತೆ ಹೊಂದಿವೆ.‘ಅಖಂಡ ಭಾರತ’ ಎಂದರೆ ಅದು ಕೇವಲ ಭೌತಿಕ ಗಡಿ ರೇಖೆಯ ಸರಹದ್ದಲ್ಲ. ಬದಲಾಗಿ ‘ಅಖಂಡ ಭಾರತ’ ಎಂಬುದು ಪರಿಪೂರ್ಣತೆಗೆ ತುಡಿಯುವ ಒಂದು ಜೀವನ ದೃಷ್ಟಿಎಂಬುದು ಅವರ ನಿಲುವಾಗಿತ್ತು. ಭಾರತೀಯ ಸಂಸ್ಕೃತಿ ಸಂಘರ್ಷವಾದಿಯಲ್ಲ ಬದಲಿಗೆ ಇದು ‘ಸಮನ್ವಯವಾದಿ’ ಆಗಿದೆ ಎಂಬುದು ಅವರ ಪ್ರತಿಪಾದನೆಯಾಗಿತ್ತು.

ದೀನದಯಾಳರ ಒಡನಾಡಿಯಾಗಿದ್ದ ಶ್ರೀ ಭಾ ವೆಂ ದೇಶಪಾಂಡೆಯವರು ಈ ಕೃತಿಯ ಮೂಲಕ ಸ್ಪಷ್ಟ ಭಾರತೀಯ ಚಿಂತನೆಯ ಮೂಲ ಸತ್ವವನ್ನು ತೆರೆದಿಡುವ ಕೆಲಸವನ್ನೂ ಮಾಡಿದ್ದಾರೆ. ಈ ದೇಶದ ಜ್ಞಾನ ಪರಂಪರೆಯು ಕೇವಲ ಓದು-ಬರಹದ್ದಲ್ಲ ಅಥವಾ ಕೇವಲ ಮಾಹಿತಿಯೂ ಅಲ್ಲ. ಇಲ್ಲಿ ಜ್ಞಾನವೆಂದರೆ ಮನುಷ್ಯತ್ವ ಮತ್ತು ಅದರ ಬಗ್ಗೆ ಸಂಸ್ಕಾರ ನೀಡುವುದಾಗಿದೆ. ಅದಿಲ್ಲವಾದರೆ ಮನುಷ್ಯ ಸಾಕ್ಷರ ರಾಕ್ಷಸನಾಗುತ್ತಾನೆ. ಭಾರತದ ಜ್ಞಾನವನ್ನು ಎಲ್ಲ ಕಡೆಯಿಂದಲೂ ಸ್ವೀಕರಿಸುವ ವ್ಯಾಪಕ ದೃಷ್ಟಿ ನಮಗೆಲ್ಲ ಇರಬೇಕು. ಇದು ಸತ್ಯಾನ್ವೇಷಣೆಯ ಪರಂಪರೆ.ಈ ಪರಂಪರೆಯ ಉಪಾಸಕರಾಗುವ ಮೂಲಕ ರಾಷ್ಟ್ರಸೇವೆಯ ಕೈಂಕರ್ಯದಲ್ಲಿ ಭಾಗಿಯಾಗೋಣ.ದೀನದಯಾಳರ ಸಾವಿಗೆ ಕಾರಣ ನಿಗೂಢವಾಗಿಯೇ ಉಳಿದುಹೋಯಿತು.ದುರದೃಷ್ಟವಶಾತ್ ದೇಶಕ್ಕೆ ಇಂಥಹ ಶ್ರೇಷ್ಠ ಮಾರ್ಗದರ್ಶನ ದೊರಕುವ ಸೌಭಾಗ್ಯ ಹೆಚ್ಚು ದಿನ ಉಳಿಯಲಿಲ್ಲ. ದೀನದಯಾಳರೆಂಬ ಭರವಸೆ ಬಹುಬೇಗ ನಮ್ಮನ್ನು ಅಗಲುವಂತಾಯಿತು. ಆದರೆ ಅವರ ಕನಸನ್ನು ನನಸು ಮಾಡುವಂತಹ ಭವ್ಯತೆಯ ಶ್ರದ್ಧೆ ಭಾರತೀಯ ನೆಲದಲ್ಲಿ ಇನ್ನೂ ಹೆಚ್ಚು ಹೆಚ್ಚು ಅರಳಬೇಕಿವೆ. ಅಂಥಹ ಅರಳುವಿಕೆ ಈ ದೇಶದಲ್ಲಿ ಸಾಧ್ಯವಾಗಲಿ ಎಂಬ ಆಶಯದೊಂದಿಗೆ ಈ ಮಹಾತ್ಮನನ್ನು ನಮಿಸೋಣ.

ಈ ಪುಸ್ತಕವು ಇಂದಿನ ಹಾಗೂ ಮುಂದಿನ ಯುವ ಜನಾಂಗಕ್ಕೆ ದೇಶಭಕ್ತಿಯ, ದೇಶೋನ್ನತಿಯ ಪ್ರೇರಣೆ ಒದಗಿಸುವ ಅತ್ಯಮೂಲ್ಯ ಕೆಲಸವನ್ನು ಮಾಡುತ್ತದೆ.ಕೃತಿಯನ್ನು ಪ್ರಕಟಿಸಿದ ರಾಷ್ಟ್ರೋತ್ಥಾನ ಸಾಹಿತ್ಯದವರಿಗೂ ಹೃದಯತುಂಬಿದ ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಪ್ರಸನ್ನ ಕಂಬದಮನೆ

ಲೆಕ್ಕ ಪರಿಶೋಧಕರು, ಲೇಖಕ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸುಪ್ರೀಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ. ಎನ್.ವಿ.ರಮಣ ಹೆಸರು ಶಿಫಾರಸು

Wed Mar 24 , 2021
ಸುಪ್ರೀಂ ಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಹಿರಿಯ ನ್ಯಾಯಮೂರ್ತಿ ಎನ್.ವಿ.ರಮಣ ಅವರ ಹೆಸರನ್ನು ಶಿಫಾರಸು ಮಾಡಿ ಸಿಜೆಐ ಎಸ್‌.ಎ. ಬೊಬ್ಡೆ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರದಿದ್ದಾರೆ. ಪ್ರಸ್ತುತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿರುವ ಎಸ್‌.ಎ. ಬೊಬ್ಡೆ ಅವರು ಏಪ್ರಿಲ್ 23 ರಂದು ನಿವೃತ್ತಿ ಹೊಂದಲಿದ್ದಾರೆ. ಈ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ಗೆ ನೂತನ ಮುಖ್ಯ ನ್ಯಾಯಮೂರ್ತಿ ನೇಮಕಕ್ಕೆ ಶಿಫಾರಸು ಮಾಡಲಾಗಿದೆ. ನ್ಯಾಯಮೂರ್ತಿ ಎನ್.ವಿ. ರಮಣ ಅವರ ಅಧಿಕಾರಾವಧಿ 2022 ರ […]