ರಥಸಪ್ತಮಿ ವಿಶೇಷ : ರೋಗ ನಿವರಣೆಗೆ, ದೇಹದಾರ್ಡ್ಯ ಹಾಗೂ ಒಳ್ಳೆಯ ಆರೋಗ್ಯಕ್ಕೆ ಸೂರ್ಯನ ಆರಾಧನೆ ಮಾಡೋಣ

ಲೇಖನ: ನಿತಿನ್ ಕೊರಳ್ಳಿ, ಯೋಗ ಶಿಕ್ಷಕ.

ಮಾಘ ಮಾಸ ಶುಕ್ಲ ಪಕ್ಷದ ಸಪ್ತಮಿಯನ್ನು ರಥಸಪ್ತಮಿ ಎಂದು ಕರೆಯುತ್ತಾರೆ. ಸೂರ್ಯನು ರಥವನ್ನೆರಿದ ದಿನವನ್ನು ರಥಸಪ್ತಮಿಯನ್ನಾಗಿ ಆಚರಿಸುತ್ತಾರೆ. ಆ ದಿನ ಸೂರ್ಯನು ಕಶ್ಯಪ ಮತ್ತು ಅದಿತಿದೇವಿಯ ಮಗನಾಗಿ ಜನಿಸಿದ ದಿನ, ಆದ್ದರಿಂದ ಆವತ್ತು ಸೂರ್ಯಜಯಂತಿ ಎಂದೂ ಕರೆಯುತ್ತಾರೆ. ಸೂರ್ಯನು ಏಳು ಕುದುರೆಗಳಿರುವ ರಥವನ್ನು ಏರಿ ಅದರ ಪಥವನ್ನು ದಕ್ಷಿಣದಿಂದ ಉತ್ತರ ದಿಕ್ಕಿಗೆ ಚಲಿಸುವ ವಿಶೇಷ ದಿನ ರಥ ಸಪ್ತಮಿ.

ಸೂರ್ಯನು ಪ್ರತಿವರ್ಷ ರಥ ಬದಲಿಸಿ ತನ್ನ ಕಾರ್ಯವನ್ನು ಚುರುಕುಗೊಳಿಸುತ್ತಾನೆ. ಈ ಮೂಲಕ ಭೂಮಿಯಲ್ಲಿ ವಾಸಿಸುವ ನಮಗೆ ನವ ಚೈತನ್ಯ ನೀಡುತ್ತಾನೆ. ಈ ಹಿನ್ನೆಲೆಯಲ್ಲಿ ಆತನನ್ನು ಗೌರವಿಸುವ ಸಲುವಾಗಿ ದೇಶಾದ್ಯಂತ ರಥಸಪ್ತಮಿ ಆಚರಿಸಲಾಗುತ್ತಿದೆ. ಚಳಿಗಾಲದಿಂದಾಗಿ ಮುದುಡಿದ್ದ ಶರೀರ, ರಥಸಪ್ತಮಿಯ ಬಳಿಕ ಸೂರ್ಯನ ಶಾಖದಿಂದಾಗಿ ನವಚೈತನ್ಯ ತುಂಬಿಕೊಳ್ಳುತ್ತದೆ.

ನಮಗೆಲ್ಲರಿಗೂ ತಿಳಿದಂತೆ, ಹಸುಗೂಸಿನ ಕಣ್ಣುಗಳು ಸಾಮಾನ್ಯವಾಗಿ ಹಳದಿ ಬಣ್ಣಕ್ಕೆ ತಿರುಗಿದ ಸಂದರ್ಭದಲ್ಲಿ ಪ್ರತಿದಿನ ಎಳೆಬಿಸಿಲಿಗೆ ಮಗುವನ್ನು ಮಲಗಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಭೂಮಿಯಲ್ಲಿನ ಸಕಲ ಜೀವರಾಶಿಗಳ ಚಟುವಟಿಕೆಗಳ ಸೂರ್ಯನಿಂದಲೇ ನಡೆಯುತ್ತಿದೆ. ಸೂರ್ಯನಿಲ್ಲದ ಜೀವನ ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದಲೇ ಪ್ರತ್ಯಕ್ಷವಾಗಿ ಕಾಣುವ ಸೂರ್ಯನ ಆರಾಧನೆ ಋಗ್ ವೇದದ ಕಾಲದಿಂದಲೂ ಚಾಲ್ತಿಯಲ್ಲಿದೆ.

ಆ ದಿನ ಮಹಿಳೆಯರು ಸೂರ್ಯೋದಯದ ಒಳಗೆ ಎದ್ದು ಮನೆಯ ಮುಂದೆ ಸಗಣಿಯಿಂದ ಸಾರಿಸಿ ಅಲ್ಲಿ ರಥದ ಮಧ್ಯ ಸೂರ್ಯನಿರುವ ರಂಗೋಲಿ ಬಿಡಿಸುವುದು ವಿಶೇಷ. ನಂತರ ಮನೆಯವರೆಲ್ಲರೂ ಎಕ್ಕದ ಎಲೆಗಳನ್ನು(ಎಕ್ಕದ ಎಲೆ ಸೂರ್ಯನಿಗೆ ಬಹಳ ಪ್ರೀತಿ) ಭುಜಗಳ ಮೇಲೆ ಇಟ್ಟುಕೊಂಡು ಸ್ನಾನ ಮಾಡಬೇಕು. ನಂತರ ಸೂರ್ಯಮಂತ್ರಗಳನ್ನ ಹೇಳಿ ಸೂರ್ಯನಮಸ್ಕಾರ ಮಾಡಿದಲ್ಲಿ ಸೂರ್ಯನ ಕೃಪೆ ನಮ್ಮ ಮೇಲೆ ಖಂಡಿತ ಬೀಳುವುದು. ರಥಸಪ್ತಮಿಯ ದಿನ ಸೂರ್ಯನಮಸ್ಕಾರ ಯಜ್ಞ ನಡೆಸಿದಲ್ಲಿ ತುಂಬಾ ಶ್ರೇಯಸ್ಕರ. ಎಷ್ಟೋ ಕಡೆಗಳಲ್ಲಿ 108 ಸೂರ್ಯನಮಸ್ಕಾರಗಳನ್ನು ಆಯೋಜಿಸಿರುತ್ತಾರೆ. ಅದನ್ನು ಸೂರ್ಯನಮಸ್ಕಾರ ಯಜ್ಞ ಅಂತಲೂ ಕರೆಯುತ್ತಾರೆ. ಅದರಲ್ಲಿ ಭಾಗವಹಿಸುವ ಜನರು ತಮಗೆ ಸಾಧ್ಯವಾದಷ್ಟು ಸೂರ್ಯನಮಸ್ಕಾರವನ್ನು ಮಾಡಬಹುದಾಗಿರುತ್ತದೆ.

ಸೂರ್ಯನಮಸ್ಕಾರದ ಅಭ್ಯಾಸವು ಮನಸ್ಸು,ದೇಹ ಮತ್ತು ಉಸಿರಾಟದ ವ್ಯವಸ್ಥೆಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ.”ಆರೋಗ್ಯಂ ಭಾಸ್ಕರಾಧಿಚ್ಛೇತ್”ಅಂದರೆ ಸೂರ್ಯ ಆರೋಗ್ಯದಾಯಿ, ವೈಜ್ಞಾನಿಕವಾಗಿಯೂ ಇದು ಸಾಬಿತಾಗಿದೆ.ಸೂರ್ಯನ ಕಿರಣಗಳಲ್ಲಿ ವಿಟಾಮಿನ್ ’ಡಿ’ ಹೇರಳವಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ರೋಗ ನಿವರಣೆಗೆ, ದೇಹದಾರ್ಡ್ಯ ಹಾಗೂ ಒಳ್ಳೆಯ ಆರೋಗ್ಯವನ್ನು ಬಯಸುವವರು ಸೂರ್ಯನ ಆರಾಧನೆ ಮಾಡಬೇಕು. ರೋಗಾಣುಗಳನ್ನು ನಾಶಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯವರ್ಧನೆಯಾಗುತ್ತದೆ. ರೋಗದಿಂದ ನರಳುವವರು ರಥಸಪ್ತಮಿಯ ದಿನದಿಂದಾಲಾದರೂ ಸೂರ್ಯಾರಾಧನೆಯನ್ನು ಮಾಡಿದರೆ ಅರ್ಥಾತ್ ಆತನ ಕಿರಣಗಳಿಗೆ ಸೂಕ್ತ ವೇಳೆಯಲ್ಲಿ ಮೈಯೊಡ್ದಿದರೆ ಬೇಗ ಗುಣಹೊಂದುತ್ತಾರೆ ಎಂಬುದು ವೈಜ್ಞಾನಿಕವಾಗಿ ಸಾಬಿತಾಗಿದೆ.

ಯೋಗಾಸನಗಳಲ್ಲಿ ಮೊದಲ ಪ್ರಾಶಸ್ತ್ಯ ಸೂರ್ಯನಮಸ್ಕಾರಕ್ಕಿದೆ. ಏಕೆಂದರೆ ಈ ಅಭ್ಯಾಸವು ಮನಸ್ಸು, ದೇಹ ಮತ್ತು ಉಸಿರಾಟ ವ್ಯವಸ್ಥೆಗಳಿಗೆ ವಿಶೇಷವಾಗಿ ಪರಿಣಾಮಕಾರಿಯಾಗಿದೆ. ಸೂರ್ಯನಮಸ್ಕಾರದಿಂದ ಆಗುವ ಲಾಭಗಳುಯಾವುವೆಂದರೆ:ಮನಸ್ಸಿಗೆ ಶಾಂತಿದೊರೆತು ಉಲ್ಲಾಸಿತವಾಗಿರುತ್ತೆ. ಜೀರ್ಣಕ್ರಿಯೆ ಉತ್ತಮವಾಗುತ್ತೆ. ಮೂಳೆಗಳು ಗಟ್ಟಿಮುಟ್ಟಾಗುತ್ತವೆ. ರಕ್ತಸಂಚಲನೆಯನ್ನು ಅಭಿವೃದ್ದಿಗೊಳಿಸುತ್ತದೆ. ತ್ವಚೆಗೆ ಹೊಳಪು ನೀಡುತ್ತದೆ. ತೂಕ ಇಳಿಸಲು ಸಹಕಾರಿ.

ಸೂರ್ಯರಾಧನೆಯನ್ನು ಮುಖ್ಯವಾಗಿ ಭಾರತ,ಈಜಿಪ್ಟ ಹೀಗೆ ಅನೇಕ ದೇಶಗಳಲ್ಲಿ ಆಚರಿಸುತ್ತಾರೆ. ಆಹಾರಕ್ಕಾಗಿ, ರೋಗ ನಿವಾರಣೆಗಾಗಿ ಸೂರ್ಯೋಪಾಸನೆ ಮಾಡಬೇಕೆಂದು ಸ್ಕಂದ, ವರಾಹ ಪುರಾಣಗಳಲ್ಲಿಯೂ ಹೇಳಲಾಗಿದೆ. ರೋಗಾಣುಗಳನ್ನು ನಾಶ ಪಡಿಸುವ ಶಕ್ತಿ ಸೂರ್ಯನ ಕಿರಣಗಳಲ್ಲಿವೆ. ಬೆಳಗಿನ ಹಾಗೂ ಸಂಜೆಯ ಸೂರ್ಯ ಕಿರಣಗಳಿಂದ ಆರೋಗ್ಯ ವರ್ಧನೆಯಾಗುತ್ತದೆ.

ರಥಸಪ್ತಮಿಯಂದು ಹಾಲನ್ನು ಉಕ್ಕಿಸಿ ಅದೇ ಹಾಲಿನಿಂದ ಗೋದಿ ಪಾಯಸ ಮಾಡಿ ಸೂರ್ಯನಿಗೆ ನೈವೇದ್ಯ ಮಾಡಿದಲ್ಲಿ ನಮ್ಮ ದಾರಿದ್ರ್ಯ ನಾಶವಾಗುತ್ತೆ ಅನ್ನೊ ಪ್ರತೀತಿ. ಹೊಸ ಕೆಲಸ ಪ್ರಾರಂಭಕ್ಕು ಈ ದಿನ ಒಳ್ಳೆಯದು. 5 ವರ್ಷದೊಳಗಿನ ಮಕ್ಕಳಿಗೆ ರಥ ಸಪ್ತಮಿಯಂದು ಹಣ್ಣು ಎರಿಯುವ ಪದ್ಧತಿ (ವಿವಿಧ ಹಣ್ಣುಗಳನ್ನು ತುಂಡರಿಸಿ,ಮಂಡಕ್ಕಿ,ಬಳಸಿ ಅದರಿಂದ ಮಕ್ಕಳಿಗೆ ಎರಿಯುವುದು) ಕೆಲವು
ಸಂಪ್ರದಾಯದಲ್ಲಿದೆ. ಪ್ರತ್ಯಕ್ಷವಾಗಿ ಕಾಣುವ ದೈವೀ ಸ್ವರೂಪಗಳಾದ, ಸೂರ್ಯ, ಚಂದ್ರ, ವೃಕ್ಷ, ಬೆಟ್ಟ, ನದಿಗಳ ಆರಾಧನೆಯನ್ನು ನಮ್ಮ ಪೂರ್ವಿಕರು ಆಚರಣೆಗೆ ತಂದಿರುವುದು ಎಷ್ಟೊಂದು ಅರ್ಥಪೂರ್ಣವಾಗಿದೆಯಲ್ಲವೆ??

ರಥಸಪ್ತಮಿಯ ದಿನ ಸ್ನಾನ ಮಾಡುವಾಗ ಹೇಳಬೇಕಾದ ಶ್ಲೋಕ:

ಯದ್ಯತ್ ಜನ್ಮ ಕೃತಂ ಪಾಪಂ
ಮಯಾ ಸಪ್ತಸು ಜನ್ಮಸು
ತನ್ಮೇ ರೋಗಂ ಚ ಶೋಕಂ ಚ
ಮಾಕರೀ ಹಂತು ಸಪ್ತಮೀ

ಏತತ್ ಜನ್ಮ ಕೃತಂ ಪಾಪಂ
ಯಚ್ಚ ಜನ್ಮಾಂತರಾರ್ಜಿತಂ
ಮನೋ ವಾಕ್ ಕಾಯಜಂ ಯಚ್ಚ
ಜ್ಞಾತಾ ಜ್ಞಾತೇಚ ಯೇ ಪುನಃ

ಇತಿ ಸಪ್ತವಿಧಂ ಪಾಪಂ
ಸ್ನಾನಾನ್ಮೇ ಸಪ್ತ ಸಪ್ತಿಕೇ
ಸಪ್ತವ್ಯಾಧಿ ಸಮಾಯುಕ್ತಂ
ಹರಮಾಕರಿ ಸಪ್ತಮಿ

ಸಪ್ತ ಸಪ್ತ ಮಹಾಸಪ್ತ
ಸಪ್ತದ್ವೀಪಾ ವಸುಂಧರಾ
ಸಪ್ತಾರ್ಕ ಪರ್ಣಮಾದಾಯ
ಸಪ್ತಮೀ ರಥಸಪ್ತಮೀ

ನಿತಿನ್ ಕೊರಳ್ಳಿ.

ಯೋಗ ಶಿಕ್ಷಕ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಭಾರತವನ್ನು ಪುನರ್ನಿರ್ಮಿಸುತ್ತೇವೆ ಎನ್ನುವವರು ಭಾರತ ಹೇಗಿತ್ತು ಎಂದು ತಿಳಿಯಲು ಧರಂಪಾಲರನ್ನು ಓದಿಕೊಳ್ಳಬೇಕು : ಆರೆಸ್ಸೆಸ್ ಸಹ ಸರಕಾರ್ಯವಾಹ ಸುರೇಶ ಸೋನಿ

Fri Feb 19 , 2021
ಗಾಂಧಿವಾದಿ ಶ್ರೀ ಧರಂಪಾಲ್ ಅವರ ಜನ್ಮಶತಾಬ್ದಿ ಅಂಗವಾಗಿ ರಾಷ್ಟ್ರೋತ್ಥಾನ ಸಾಹಿತ್ಯ ಹಾಗೂ ಸೆಂಟರ್ ಫಾರ್ ಪಾಲಿಸಿ ಸ್ಟಡೀಸ್ ಪ್ರಕಟಿಸಿರುವ, ‘ಧರಂಪಾಲ್ ಕ್ಲಾಸಿಕ್ ಸಿರೀಸ್’ ನ 5 ಪುಸ್ತಕಗಳು ಇಂದು ಆರೆಸ್ಸೆಸ್ ನ ಸಹ ಸರಕಾರ್ಯವಾಹರಾದ ಶ್ರೀ ಸುರೇಶ ಸೋನಿ ಲೋಕಾರ್ಪಣೆಗೊಳಿಸಿದರು. ಸರಣಿ ಸಂಪಾದಕರಾದ ಡಾ.ಜೆ.ಕೆ.ಬಜಾಜ್, ಡಾ. ಎಂ.ಡಿ.ಶ್ರೀನಿವಾಸ್ ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಧಾನ ಸಂಪಾದಕರಾದ ನಾಡೋಜ ಎಸ್ ಆರ್ ರಾಮಸ್ವಾಮಿ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ ಪಿ ಕುಮಾರ್ ಉಪಸ್ಥಿತರಿದ್ದರು. […]