ಸಂಕಲ್ಪ ದಿವಸ್ ವಿಶೇಷ ಲೇಖನ : ಪಾಕಿಸ್ತಾನದ ವಶದಿಂದ ಬಿಡುಗಡೆಗೊಳ್ಳಲಿ ಭಾರತದ ನೆಲ!

ಸಂಸತ್ತಿನ ಸಂಕಲ್ಪ ಸಾಕಾರಕ್ಕೆ ಕಾಲ ಸನ್ನಿಹಿತವಾಗಬಲ್ಲದೇ?
ಪಾಕಿಸ್ತಾನದ ವಶದಿಂದ ಬಿಡುಗಡೆಗೊಳ್ಳಲಿ ಭಾರತದ ನೆಲ

ಲೇಖಕರು: ಸತ್ಯನಾರಾಯಣ ಶಾನಭಾಗ್‌, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ, ಕರ್ನಾಟಕ

ಅಕ್ಟೋಬರ್‌ 26, 1947, ಬ್ರಿಟಿಷರು ಭಾರತದಿಂದ ತೊಲಗಿದ ನಂತರ ಉಂಟಾದ ಸನ್ನಿವೇಶದಲ್ಲಿ ಡೋಗ್ರಾ ವಂಶದ ದೊರೆ ಮಹಾರಾಜ ಹರಿಸಿಂಗರ ಆಡಳಿತಕ್ಕೆ ಒಳಪಟ್ಟಿದ್ದ ಜಮ್ಮು ಕಾಶ್ಮೀರ ರಾಜ್ಯ ಭಾರತ ಅಧಿಪತ್ಯಕ್ಕೆ ಆಡಳಿತಾತ್ಮವಾಗಿ ಸೇರಿದ ದಿವಸ. ತಲೆತಲಾಂತರಗಳ ಆದಿಯಿಂದ ಜಮ್ಮು ಕಾಶ್ಮೀರ ಭಾರತದ ಅವಿಭಾಜ್ಯ ಅಂಗವಾಗಿತ್ತು, ಭರತವರ್ಷದ ಮುಕಟಮಣಿ ಎನಿಸಿತ್ತು. 1947ರ ದೇಶವಿಭಜನೆಯ ನಂತರ ನಡೆದ ಬೆಳವಣಿಗೆಯಲ್ಲಿ ಕಾಶ್ಮೀರವನ್ನು ತನ್ನ ವಶಕ್ಕೆ ತೆಗೆದುಕೊಳ್ಳಬೇಕೆಂದು ಪಾಕಿಸ್ತಾನ ಮಾಡಿದ ದುಸ್ಸಾಹಸ, ನಂತರ ಭಾರತೀಯ ಸೇನೆ ಪಾಕಿಸ್ತಾನವನ್ನು ಹೊರದಬ್ಬುವ ಮೊದಲೇ ಯುದ್ಧವಿರಾಮ ಘೋಷಿಸಿ ವಿಶ್ವಸಂಸ್ಥೆಗೆ ವಿಷಯವನ್ನು ಕೊಂಡೊಯ್ದ ಅಂದಿನ ಪ್ರಧಾನಮಂತ್ರ ನೆಹರು ಅವರ ಅಪ್ರಬುದ್ಧ ನಡೆಯಿಂದಾಗಿ ಗಿಲ್ಗಿಟ್‌-ಬಾಲ್ಟಿಸ್ತಾನ ಮತ್ತು ಶಕ್ಸಗಾಮ್‌ ಕಣಿವೆ ಸೇರಿದಂತೆ ಸುಮಾರು ಸುಮಾರು 90 ಸಾವಿರ ಚಕಿಮೀ. ವಿಸ್ತೀರ್ಣದ ನೆಲ ಪಾಕಿಸ್ತಾನದ ವಶದಲ್ಲಿರುವಂತಾಯಿತು. 1963ರಲ್ಲಿ ತನ್ನ ವಶದಲ್ಲಿದ್ದ ಭಾರತಕ್ಕೆ ಸೇರಿದ ಲಢಾಕಿಕ ಉತ್ತರ ಭಾಗದ ಸುಮಾರು 5 ಸಾವಿರ ಚಕಿಮೀ. ವಿಸ್ತೀರ್ಣದ ಶಕ್ಸಗಾಮ್‌ ಕಣಿವೆಯನ್ನು ಪಾಕಿಸ್ತಾನ ಚೀನಾಕ್ಕೆ ಉಡುಗೊರೆಯಾಗಿಯೂ ನೀಡಿತು. ಈ ನಡುವೆ 370 ನೇ ವಿಧಿ ಮತ್ತಿತರ ರಾಜಕೀಯ, ಪಾಕ್‌ ಪ್ರೇರಿತ ಜಿಹಾದಿ ಭಯೋತ್ಪಾದನೆ, ಕಾಶ್ಮೀರ ಕಣಿವೆಯ ಮುಸಲ್ಮಾನ ಸಮುದಾಯದ ನಾಯಕರ ತುಷ್ಟೀಕರಣ ಇತ್ಯಾದಿಗಳು ಪಾಕ್‌ ಆಕ್ರಮಿತ ಪ್ರದೇಶವನ್ನು ಹಿಂಪಡೆಯುವ ವಿಷಯವನ್ನೇ ಮರೆಸಿದವು. 1965 ಮತ್ತು 1971ರ ನೇರ ಯುದ್ಧಗಳಲ್ಲಿ ಪಾಕಿಸ್ತಾನವನ್ನು ನಮ್ಮ ವೀರ ಸೈನಿಕರು  ರಣರಂಗದಲ್ಲಿ ಮಣಿಸಿದರೂ ಒಪ್ಪಂದದ ಮಾತುಕತೆಯ ಮೇಜಿನಲ್ಲಿ ಭಾರತಕ್ಕೆ ಹಿನ್ನೆಡೆಯೇ ಆಯಿತು ಎಂದರೆ, ಪಾಕ್‌ ವಶದಲ್ಲಿರುವ ನೆಲ ಮುಕ್ತವಾಗಲೇ ಇಲ್ಲ.

ಮಹಾರಾಜರ ಆಳ್ವಿಕೆಗೊಳಪಟ್ಟಿದ್ದ ಅಖಂಡ ಜಮ್ಮು ಕಾಶ್ಮೀರ ರಾಜ್ಯದ ನಕಾಶೆ (1946)

ಈ ಹಿನ್ನೆಲೆಯಲ್ಲಿ 1994ರ ಫೆಬ್ರುವರಿ 22ರಂದು ಭಾರತದ ಸಂಸತ್ತಿನ ಎರಡೂ ಸದನಗಳು ಸರ್ವಸಮ್ಮತಿಯಿಂದ ಅಂಗೀಕರಿಸಿದ ನಿರ್ಣಯ ಬಹಳ ಮಹತ್ವದ್ದಾಗಿದೆ. ತಾನು ಆಕ್ರಮಿಸಿದ ಜಮ್ಮು ಕಾಶ್ಮೀರ ಪ್ರದೇಶದ ಭಯೋತ್ಪಾದಕ ಕ್ಯಾಂಪ್‌ಗಳಲ್ಲಿ ಉಗ್ರವಾದಿಗಳ ತರಬೇತುಗೊಳಿಸಿ ಗಡಿಯಾಚೆಯಿಂದ ಭಾರತದ ಮೇಲೆ ಭಯೋತ್ಪಾದನಾ ಕೃತ್ಯಕ್ಕೆ ತೊಡಗಿರುವ ಪಾಕಿಸ್ತಾನವನ್ನು ಕಠಿಣ ಹಾಗೂ ದೃಢ ಶಬ್ದಗಳಲ್ಲಿ ಈ ನಿರ್ಣಯವು ಖಂಡಿಸಿತು. ಜೊತೆಗೆ ಈ ಸಂಕಲ್ಪದಲ್ಲಿ ಕೆಳಗೆ ಉಲ್ಲೇಖಿಸಿದ ಪ್ರಮುಖ ಅಂಶಗಳನ್ನು ಒತ್ತಿ ಹೇಳಿತು:

ಎ)  ಜಮ್ಮು ಮತ್ತು ಕಾಶ್ಮೀರ ರಾಜ್ಯವು ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಅದನ್ನು ದೇಶದ ಉಳಿದ ಭಾಗದಿಂದ ಬೇರ್ಪಡಿಸುವ ಯಾವುದೇ ಪ್ರಯತ್ನಗಳನ್ನು ಅಗತ್ಯವಿರುವ ಎಲ್ಲ ವಿಧಾನಗಳಿಂದ ಎದುರಿಸಲಾಗುವುದು.

ಬಿ) ಭಾರತವು ತನ್ನ ಏಕತೆ, ಸಾರ್ವಭೌಮತೆ ಮತ್ತು ನಾಡಿನ ಸಮಗ್ರತೆಗೆ ವಿರುದ್ಧವಾದ ಎಲ್ಲಾ ಯತ್ನಗಳನ್ನು ದೃಢವಾಗಿವಾಗಿ ಎದುರಿಸುವ ಇಚ್ಚಾಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದೆ

ಸಿ) ಪಾಕಿಸ್ತಾನವು ಅಕ್ರಮವಾಗಿ ಅತಿಕ್ರಮಿಸಿಕೊಂಡಿರುವ ಭಾರತಕ್ಕೆ ಸೇರಿದ ಜಮ್ಮು ಮತ್ತು ಕಾಶ್ಮೀರದ ಪ್ರದೇಶಗಳಿಂದ ಖಾಲಿ ಮಾಡಬೇಕು ಎಂದು ಆಗ್ರಹಿಸುತ್ತೇವೆ.

ಡಿ) ಭಾರತದ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವ ಎಲ್ಲಾ ಪ್ರಯತ್ನಗಳನ್ನು ದೃಢವಾಗಿ ಎದುರಿಸಲಾಗುವುದು.

(ಸಂಸತ್‌ ನಿರ್ಣಯದ ಪೂರ್ಣ ಪಠ್ಯವನ್ನು ಅನುಬಂಧದಲ್ಲಿ ನೀಡಲಾಗಿದೆ)

1994 ಫೆಬ್ರುವರಿ 22ರ ಈ ಸಂಸತ್‌ ಸಂಕಲ್ಪ ಪಾಕ್‌ ವಶದಲ್ಲಿರುವ ಭೂಭಾಗ ತನ್ನದು ಎನ್ನುವ ಸಂಗತಿಯನ್ನು ಇನ್ನೊಮ್ಮೆ ಒತ್ತಿ ಹೇಳುವುದರ ಜೊತೆಗೆ ಅದನ್ನು ಮರಳಿ ಪಡೆಯಲು ತಾನು ಕಟಿಬದ್ಧ ಎನ್ನುವ ಸಂದೇಶವನ್ನು ಸ್ಪಷ್ಟವಾಗಿ ತಿಳಿಸಿತು. ಪೆಬ್ರುವರಿ 22 “ಸಂಕಲ್ಪ ದಿವಸ್‌” ಎಂದು ಕೂಡ ಗುರತಿಸಲ್ಪಡುತ್ತದೆ.

ಆದರೆ ಇದುವರೆಗೆ ಪಾಕಿಸ್ತಾನದ ವಶದ ಪ್ರದೇಶಗಳನ್ನು ಮರಳಿ ಪಡೆಯುವ ಸಂಕಲ್ಪ ಸಿದ್ಧಿಯಾಗಿಲ್ಲ, ಪ್ರಯತ್ನಗಳು ಫಲಿಸಲಿಲ್ಲ. ಆದರೆ ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ 2019ರಲ್ಲಿ ನಡೆದ 370ನೇ ವಿಧಿಯ ಪ್ರಭಾವ ಕೊನೆಗೊಂಡ ವಿದ್ಯಮಾನ, ಜಮ್ಮು ಕಾಶ್ಮೀರ ರಾಜ್ಯದ ಪುನರ್ವಿಂಗಡನೆ, ಪಟ್ಟಭದ್ರರ ಪದಚ್ಯುತಿ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಜಮ್ಮು ಕಾಶ್ಮೀರ ವಿಷಯದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಈವರೆಗಿನ ಸ್ಥಾಪಿತ ನೀತಿಗಿಂತ ಭಿನ್ನವಾದ ಮತ್ತು ಫಲಪ್ರದವಾದ ನೀತಿ ಪಾಕಿಸ್ತಾನವನ್ನು ಆಕ್ರಮಿತ ಪ್ರದೇಶದಿಂದ ಹೊರದಬ್ಬುವ ವಿಷಯದಲ್ಲಿ ಒಂದಿಷ್ಟು ಆಶಾಭಾವವನ್ನು ಹುಟ್ಟಿಸಿವೆ. ಅರ್ಧಶತಮಾನದ ಬೇಡಿಕೆಯಾದ 370ನೇ ವಿಧಿ ರದ್ದಿನ ನಿರ್ಣಾಯಕ ಕ್ರಮದ ನಂತರ ಸಹಜವಾಗಿ ಪಾಕ್‌ ಆಕ್ರಮಿತ ಕಾಶ್ಮೀರದ ವಿಷಯವೂ ಮುನ್ನೆಲೆಗೆ ಬಂದಿತು. ಸರ್ಕಾರದ ಮುಂದೆ ಪ್ರಶ್ನೆಗಳು ಬಂದಾಗ ಪಾಕ್‌ ಆಕ್ರಮಿತ ಪ್ರದೇಶ ಭಾರತದ ಅವಿಭಾಜ್ಯ ಅಂಗ ಅದನ್ನು ಮರಳಿ ಪಡೆಯುತ್ತೇವೆ ಎಂದು ಸ್ವಯಂ ರಕ್ಷಣಾ ಸಚಿವರು, ವಿದೇಶಾಂಗ ಸಚಿವರೇ ದೃಢವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು. “ಪಾಕ್‌ ಆಕ್ರಮಿತ ಪ್ರದೇಶ ನಮಗೆ ಸೇರಬೇಕು ಸಂಸತ್ತು ಬಯಸಿದರೆ, ಮತ್ತು ಆ ಕುರಿತು  ಆದೇಶ ನೀಡಿದರೆ ನಾವು ಅಗತ್ಯವಾದ ಕ್ರಮ ಕೈಗೊಳ್ಳಲು ಸಿದ್ಧರಿದ್ದೇವೆ” (There is a parliamentary resolution that entire J&K is part of India. If Parliament wants it, then, that area (PoK) also should belong to us. When we get orders to that effect, we’ll take appropriate action.) ಎಂದು ಸೇನಾ ಮುಖ್ಯಸ್ಥ ಜನರಲ್‌ ಎಮ್‌ ಎಮ್‌ ನರವಣೆಯವರು ಕೂಡ ಗಂಭೀರವಾಗಿಯೇ ನುಡಿದರು.

ಇಂದಿನ ಜಮ್ಮು ಕಾಶ್ಮೀರ ಮತ್ತು ಲಢಾಕ್‌ ನಕಾಶೆ

ಇನ್ನೊಂದೆಡೆ ಪಾಕ್‌ ಆಕ್ರಮಿತ ಪ್ರದೇಶಗಳಲ್ಲಿ ಪಾಕಿಸ್ತಾನದ ದೌರ್ಜನ್ಯ, ಮಾನವಾಧಿಕಾರ ಹನನದ ವಿರುದ್ಧ ಅಲ್ಲಿನ ನಿವಾಸಿಗಳು ಎತ್ತುತ್ತಿರುವ ಧ್ವನಿಯೂ ಜೋರಾಗಿದೆ. ಭಾರತಕ್ಕೆ ಸೇರಬೇಕೆಂಬ ಒಂದು ದೊಡ್ಡ ವರ್ಗ ಅಲ್ಲಿ ಸಕ್ರಿಯವಾಗಿದೆ. ಗಿಲ್ಗಿಟ್‌-ಬಾಲ್ಟಿಸ್ತಾನವನ್ನು ತನ್ನ ಐದನೇ ಪ್ರಾಂತವಾಗಿ ಘೋಷಿಬೇಕೆಂಬ ಪಾಕಿಸ್ತಾನ ಸರ್ಕಾರದ ಹುನ್ನಾರದ ನಡುವೆ ಪ್ರದೇಶದಲ್ಲಿ ಹಾದುಹೋಗುವ  ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್‌ ಕಾರಣದಿಂದ ನುಸುಳಿರುವ ಚೀನಿಯರ ವಿರುದ್ಧವೂ ಆಕ್ರೋಶ ಏರುತ್ತಿದೆ. ಯುರೋಪಿನ ದೇಶಗಳಿಗೆ ವಲಸೆ ಹೋಗಿರುವ ಇಲ್ಲಿನ ಜನರು ವಿದೇಶದಿಂದಲೂ ಪಾಕಿಸ್ತಾನದ ವಶದಿಂದ ಮುಕ್ತಗೊಂಡು ಈ ಪ್ರದೇಶಗಳು ಭಾರತ ಸೇರಲಿ ಎಂದು ಹೋರಾಟ ನಡೆಸಿದ್ದಾರೆ. ಹಾಗೆಯೇ ಪಾಕಿಸ್ತಾನದ ಸಿಂಧ್‌, ಬಲೂಚಿಸ್ತಾನ್‌ ಪ್ರಾಂತಗಳಲ್ಲಿ ಪ್ರತ್ಯೇಕತೆಯ ಪ್ರತಿಭಟನೆಗಳು ಹೆಚ್ಚಾಗುತ್ತಿರುವುದು, ಪಾಕಿಸ್ತಾನ ಒಳಗಿನಿಂದ ದುರ್ಬಲಗೊಳ್ಳುತ್ತಿರುವುದೂ ಕಂಡುಬರುತ್ತಿದೆ. ಇವೆಲ್ಲ ಕಾರಣಗಳಿಂದ ಪಾಕ್‌ ಆಕ್ರಮಿತ ಪ್ರದೇಶಗಳು ಭಾರತವನ್ನು ಮರಳಿಸ ಸೇರುವ ಕಾಲವು ಸನ್ನಿಹಿತವಾಗುತ್ತಿದೆಯೇ? ಎನ್ನುವ ಆಶಾಭಾವ ಮೂಡುತ್ತಿದೆ.

ಆದರೆ ಪೂರ್ವದ ಭಾಗದಲ್ಲಿ 1962 ಯುದ್ಧದಲ್ಲಿ ಕೈತಪ್ಪಿದ ಲಢಾಕಿನ ಅಕ್ಸಾಯ್‌ಚಿನ್‌ ಪ್ರದೇಶದ ಸುಮಾರು 38 ಸಾವಿರ ಚಕಿಮೀ. ಮತ್ತು ಶಕ್ಸಗಾಮ್‌ ಕಣಿವೆಯ 5 ಸಾವಿರ ಚಕಿಮೀ. ಪ್ರದೇಶ ಕಮ್ಯುನಿಸ್ಟ್‌ ಚೀನಾದ ನಿಯಂತ್ರಣಕ್ಕೆ ಸೇರಲ್ಪಟ್ಟಿದೆ. ಇದೂ ಸಹಿತ ಮಹಾರಾಜರ ಆಡಳಿತಕ್ಕೆ ಸೇರಿದ ಅಖಂಡ ಜಮ್ಮು ಕಾಶ್ಮೀರದ ಪ್ರದೇಶವೇ ಆಗಿತ್ತು.  ವಿಸ್ತರಣಾವಾದಿ ಚೀನಾ ಗಡಿನಿಯಂತ್ರಣ ರೇಖೆಯ ಸುತ್ತ ಆಗಾಗ ಗಡಿತಂಟೆಗೆ ಮುಂದಾಗುತ್ತಿರುವ ಘಟನೆಗಳೂ ಮರುಕಳಿಸುತ್ತಿವೆ. ಚೀನಾ ಆಕ್ರಮಿತ ಪ್ರದೇಶಗಳನ್ನೂ ಭಾರತ ಮರಳಿ ಪಡೆಯಬಹುದೇ? ಕಾದು ನೋಡಬೇಕು.

ಅನುಬಂಧ

ಸಂಸತ್ತಿನ ಎರಡೂ ಸದನಗಳಲ್ಲಿ 1994, ಫೆಬ್ರುವರಿ 22ರಂದು ಈ ನಿರ್ಣಯವನ್ನು ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.  ಇದನ್ನು ಇಲ್ಲಿಯವರೆಗೆ ರದ್ದು ಅಥವಾ ತಿದ್ದುಪಡಿ ಮಾಡಿಲ್ಲ. ನಿರ್ಣಯದ ಪೂರ್ಣ ಪಠ್ಯ ಇಲ್ಲಿದೆ

“This House”

Notes with deep concern Pakistan’s role in imparting training to the terrorists in camps located in Pakistan and Occupied Kashmir, the supply of weapons and funds, assistance in infiltration of trained militants including foreign mercenaries into Jammu and Kashmir with the avowed purpose of creating disorder disharmony and subversion:

Reiterates that the militants trained in Pakistan are indulging in murder, loot and other heinous crimes against the people, taking them hostage and creating an atmosphere of terror;

Condemns strongly the continued support and encouragement Pakistan is extending to subversive and terrorist activities in the Indian state of Jammu & Kashmir;

Calls upon Pakistan to stop forthwith its support to terrorism, which is in violation of the Simla Agreement and the internationally accepted norms of inter-State conduct and is the root cause of tension between the two countries;

Reiterates that the Indian political and democratic structures and the Constitution provide for firm guarantees for the promotion and protection of human rights of all its citizens;

Regards Pakistan’s anti-India campaign of calumny, and falsehood as unacceptable and deplorable.

Notes with deep concern the highly provocative statements emanating from Pakistan urges Pakistan to refrain from making statements which vitiate the atmosphere and incite public opinion Expresses regret and concern at the pitiable conditions and violations of human rights and denial of democratic freedoms of the people in those areas of the Indian State of Jammu and Kashmir, which are under the illegal occupation of Pakistan;

On behalf of the People of India,

Firmly declares that:

a) The state of Jammu & Kashmir has been, is and shall be an integral part of India and any attempts to separate it from the rest of the country will be resisted by all necessary means;

b) India has the will and capacity to firmly counter all designs against its unity, sovereignty and territorial integrity;

and demands that –

c) Pakistan must vacate the areas of the Indian State of Jammu and Kashmir, which they have occupied through aggression;

and resolves that –

d) All attempts to interfere in the internal affairs of India will be met resolutely.

The Resolution was unanimously adopted, Mr. Speaker: The Resolution is unanimously passed.

February 22, 1994

(Source – Parliamentary Debates: Official report, Volume 170, Issue 2, 1994)

ಸತ್ಯನಾರಾಯಣ ಶಾನಭಾಗ್‌

ಸಂಯೋಜಕರು, ಜಮ್ಮು ಕಾಶ್ಮೀರ ಅಧ್ಯಯನ ಕೇಂದ್ರ, ಕರ್ನಾಟಕ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್

Fri Feb 26 , 2021
ಪತಿತರೋದ್ಧಾರಕ್ಕೆ ಜೀವ ತೇಯ್ದ ವೀರ ಸಾವರ್ಕರ್ 1931ರ ಫೆಬ್ರವರಿ 22. ವೇದಮಂತ್ರ ಘೋಷಗಳು ಮೊಳಗುತ್ತಿರಲು, ಕರವೀರ ಪೀಠದ ಶಂಕರಾಚಾರ್ಯರ ನೇತೃತ್ವದಲ್ಲಿ, ಐದು ಸಾವಿರಕ್ಕೂ ಹೆಚ್ಚು ಹಿಂದೂಗಳ ಸಮ್ಮುಖದಲ್ಲಿ ಭಂಗಿ ಬಾಲಕನೊಬ್ಬ  ಭಗವಾನ್ ವಿಷ್ಣುವಿನ ಮೂರ್ತಿಯನ್ನು ಪ್ರತಿಷ್ಠಾಪಿಸಿದ. ಭಂಗಿ ಬಾಲಕನೊಬ್ಬ ಶಂಕರಾಚಾರ್ಯರ ಪಾದ ಪೂಜೆ ಮಾಡಿ ಅವರಿಗೆ ಪುಷ್ಪ ಮಾಲೆಯೊಂದನ್ನು ಅರ್ಪಿಸಿದ. ಆದಿ ಶಂಕರರು ದೇವನದಿ ಗಂಗೆಯ ತಟದಲ್ಲಿ ಆತ್ಮ ತತ್ತ್ವವನ್ನು ಅರಿತಿದ್ದ ಚಾಂಡಾಲನನ್ನು ಅಪ್ಪಿಕೊಂಡ ಐತಿಹಾಸಿಕ ಘಟನೆಯನ್ನು ಆ ದೃಶ್ಯ […]