ವ್ಯಾಟಿಕನ್ ಮತ್ತು ಮಾಧ್ಯಮ

ಅಕ್ಟೋಬರ್ ಕೊನೆಯ ವಾರದಲ್ಲಿ ಯೋಜನೆಯಾಗಿದ್ದ ಜಿ-20 ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಹಲವು ದೇಶಗಳ ಮುಖ್ಯಸ್ಥರು ಇಟಲಿಯ ಮಧ್ಯಭಾಗದಲ್ಲಿರುವ ವ್ಯಾಟಿಕನ್ ನಲ್ಲಿ ಇರುವ ಪೋಪ್ ಫ್ರಾನ್ಸಿಸ್ ಅವರನ್ನೂ ಭೇಟಿಮಾಡುವ ಕಾರ್ಯಕ್ರಮ ಜೋಡಿಸಿಕೊಂಡಿದ್ದರು. ಇವರಲ್ಲಿ ಮುಖ್ಯವಾಗಿ ಅಮೇರಿಕಾದ ಅಧ್ಯಕ್ಷ ಜೋ ಬಿಡೆನ್ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರುಗಳು ಪೋಪ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು.   ಚರ್ಚೆಗೆ ಮುಂಚೆ ಚರ್ಚೆಯ ವಿಷಯಗಳ ಬಗ್ಗೆ ಯಾವ ಸುಳಿವೂ ಸಾರ್ವಜನಿಕರಿಗೆ ಇರಲಿಲ್ಲ.   ಅಮೇರಿಕಾ ಮತ್ತು ಭಾರತದ ಮಾಧ್ಯಮ ಪ್ರತಿನಿಧಿಗಳಿಗೆ ಈ ಭೇಟಿಯನ್ನು ಪ್ರತ್ಯಕ್ಷ ನೋಡಲಾಗಲೀ, ಅಥವಾ ವರದಿಮಾಡಲು ವ್ಯಾಟಿಕನ್ ಚರ್ಚ್ ನ ಸಂಪರ್ಕ ವಿಭಾಗವು ಅನುಮತಿ ನೀಡಲಿಲ್ಲ.  ಭೇಟಿಯ ನಂತರ ವ್ಯಾಟಿಕನ್ ಸಂಪಾದಿಸಿ ಬಿಡುಗಡೆ ಮಾಡಿದ ವಿಡಿಯೋ ಮತ್ತು ವರದಿಗಳು ಜಗತ್ತಿಗೆ ತಲುಪಿದವು.  

ಜಾಗತಿಕ ಮಟ್ಟದ ಪ್ರಮುಖ ಮತೀಯ ನಾಯಕರಲ್ಲೊಬ್ಬರಾದ ಪೋಪ್ ಅವರ ಮಾಧ್ಯಮ ನೀತಿ ಇಷ್ಟು ಬಿಗಿಯಾಗಿರುವುದು ಏಕೆ? ಎಂಬುದು ಸಾರ್ವಜನಿಕ ಕುತೂಹಲವನ್ನು ಕೆರಳಿಸಿರುವುದು ಸಹಜ. 

ಸಾಮಾನ್ಯವಾಗಿ ಎರಡು ದೇಶಗಳ ಮುಖ್ಯಸ್ಥರು ಭೇಟಿ ಆದಾಗ ಅವರ ಚರ್ಚೆಯ ವಿಷಯಗಳನ್ನು ಮೊದಲೇ ಮಾಧ್ಯಮಗಳಿಗೆ ತಿಳಿಸುವುದು ಒಂದು ಪದ್ಧತಿ.  ಆದರೆ, ಪೋಪ್ ಜೊತೆಗಿನ ಯಾವುದೇ ದೇಶದ ಪ್ರತಿನಿಧಿಯ ಜೊತೆಗಿನ ಭೇಟಿಗೆ ವಿಷಯವನ್ನು ಮೊದಲೇ ನಿರ್ಧರಿಸಲಾಗದು ಎಂಬುದು ವ್ಯಾಟಿಕನ್ ನಿಲುವು.  ಈ ನಿಲುವನ್ನು ಅಮೇರಿಕಾ ಮತ್ತು ಭಾರತದ ಸರ್ಕಾರಗಳು ಒಪ್ಪಿಕೊಂಡಿದ್ದವು.  ಹಾಗೆಯೇ, ಸ್ವತಂತ್ರ್ಯ ಮಾಧ್ಯಮ ಸಂಸ್ಥೆಗಳ, ವರದಿಗಾರರ, ಅಥವಾ ಇತರ ದೇಶಗಳ ಅಧಿಕೃತ ಮಾಧ್ಯಮ ಸಂಸ್ಥೆಗಳ ಉಪಸ್ಥಿತಿಗೆ ವ್ಯಾಟಿಕನ್ ಸಂಪರ್ಕ ವಿಭಾಗವು ಅನುಮತಿಯನ್ನು ನೀಡುವುದಿಲ್ಲ.  ತನ್ನದೇ ಮಾಧ್ಯಮ ಪ್ರತಿನಿಧಿಗಳು ತಯಾರಿಸಿದ ವರದಿ, ತೆಗೆದ ಫೋಟೋ ಮತ್ತು ವಿಡಿಯೋಗಳನ್ನು ನಂತರದಲ್ಲಿ ಸಂಪಾದಿಸಿ ಸಾರ್ವಜನಿಕರಿಗೆ ಬಿಡುಗಡೆ ಮಾಡುವುದೇ ವ್ಯಾಟಿಕನ್ ಅನುಸರಿಸುವ ಪದ್ಧತಿ ಎಂದು ಹೇಳಲಾಯಿತು.  

ಜೋ-ಬಿಡೆನ್ ತನ್ನ ಪತ್ನಿ ಸಮೇತರಾಗಿ ಪೋಪ್ ಅವರನ್ನು ಭೇಟಿ ಆದರು.  ಭೇಟಿಯನ್ನು ಮಾಧ್ಯಮಗಳಿಂದ ಮುಚ್ಚಿಟ್ಟ ಇತರ ಕಾರಣಗಳನ್ನು ಅಮೇರಿಕಾದ ಮಾಧ್ಯಮಗಳು ಚರ್ಚಿಸಿದವು.  ಅಮೇರಿಕಾದ ಸರ್ಕಾರವು ಗರ್ಭಪಾತದ ಆಯ್ಕೆಯನ್ನು ಬೆಂಬಲಿಸುತ್ತದೆ. ಆದರೆ, ಚರ್ಚ್ ಈ ಆಯ್ಕೆಯನ್ನು ಒಪ್ಪುವುದಿಲ್ಲ. ಜೋಬಿಡೆನ್ ಕ್ಯಾಥೊಲಿಕ್ ಆದರೂ ಸಹ, ಅವರು ಗರ್ಭಪಾತದ ಆಯ್ಕೆಯ ಪರವಾಗಿದ್ದಾರೆ. ಈ ಕಾರಣಕ್ಕಾಗಿ ಅವರ ಮೇಲೆ ಅಮೇರಿಕಾದ ಚರ್ಚ್ ಗೆ ಅವರ ಮೇಲೆ ಅಸಮಧಾನವಿದೆ.  ಅನೇಕ ಅಮೇರಿಕಾದ ಕ್ರೈಸ್ತ ನಾಯಕರು ಬಿಡೆನ್ ಅವರನ್ನು ಬಹಿಷ್ಕರಿಸಬೇಕೆಂದು ಪೋಪ್ ಅವರಲ್ಲಿ ಮನವಿಯನ್ನೂ  ಸಹ ಮಾಡಿದ್ದಾರೆ.  ಈ ವಿಷಯವು ಪೋಪ್ ಮತ್ತು ಬಿಡೆನ್ ಮಧ್ಯೆ ಚರ್ಚೆಯಲ್ಲಿ ಬಂದರೂ ಅದು ಜಗತ್ತಿಗೆ ತಿಳಿಯಬಾರದೆಂಬುದು ಮಾಧ್ಯಮಗಳ ಅನುಮತಿನಿರಾಕರಣೆಗೆ ಮೊದಲ ಕಾರಣ. 

ಜೊ ಬಿಡೆನ್ ಪತ್ನಿ ಪೋಪ್ ಅವರನ್ನು ಭೇಟಿಮಾಡಲು ಬಂದಾಗ ಕ್ರೈಸ್ತ ಪದ್ಧತಿಯಂತೆ ವಸ್ತ್ರಧಾರಣೆಯನ್ನು ಮಾಡಿ ಬಂದಿದ್ದರು. ಇದು ಅಮೇರಿಕಾದ ಅಧ್ಯಕ್ಷರು ಮತ್ತು ಅವರ ಪತ್ನಿಯವರ ಕ್ಯಾಥೋಲಿಕ್ ಮತ ಶ್ರದ್ಧೆಯನ್ನು ತೋರಿಸುತ್ತದೆ. ಜೊತೆಗೆ, ಜೋ ಬಿಡೆನ್ ಅಥವಾ ಅವರ ಪತ್ನಿಯವರು ಪೋಪ್ ಅವರ ಬಳಿ ಕ್ರೈಸ್ತ ಮತೀಯ ಆಚರಣೆಗಳಾದ ‘ತಪ್ಪೊಪ್ಪಿಗೆ’ ಮತ್ತು ‘ಪಶ್ಚಾತ್ತಾಪ’ ಗಳ ವಿಧಿಗಳನ್ನು ಆಚರಿಸಬಹುದೆಂದೂ ಮತ್ತು ಅದು ಮಾಧ್ಯಮಗಳಿಗೆ ತಿಳಿಯದಿರುವುದು ಸೂಕ್ತವೆಂದೂ ವಿಶ್ಲೇಷಿಸಲಾಯಿತು. 

ಅದೇ ರೀತಿ ಭಾರತದ ಪ್ರಧಾನಿಯವರ ಭೇಟಿಯ ಮಾಹಿತಿಯನ್ನೂ ಸಹ ಭೇಟಿಯ ನಂತರದಲ್ಲೇ ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಯಿತು.  ಮತಾಂತರದಿಂದ ನೊಂದ ಭಾರತದ ಪ್ರಧಾನಿ ಅದರ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಇರುವುದರಿಂದ ಅದು ನೇರವಾಗಿ ಸಾರ್ವಜನಿಕರಿಗೆ ತಲುಪುವುದು ಸೂಕ್ತವಾಗಿರಲಿಲ್ಲ.  ಮೋದಿಯವರು ಪಾಗನ್ ರೀತಿ-ನೀತಿ-ಶಿಷ್ಟಾಚಾರಗಳನ್ನು ಆಚರಿಸುವುದರಿಂದ ನೇರ ಪ್ರಸಾರವಾಗಲೀ, ಮಾಧ್ಯಮಗಳಿಗೆ ಮುಕ್ತ ಅವಕಾಶಗಳಾಗಲೀ ನೀಡುವುದು ಸಂಪರ್ಕ ವಿಭಾಗಕ್ಕೆ ಸಾಧ್ಯವಾಗಲಿಲ್ಲ.  

ನವೆಂಬರ್ ತಿಂಗಳ ಕೊನೆಯಲ್ಲಿ ಪೋಪ್ ಫ್ರಾನ್ಸಿಸ್ ಅವರು ಫ್ರಾನ್ಸ್ ದೇಶದ ಅಧ್ಯಕ್ಷರಾದ ಎಮ್ಯಾನ್ಯುಯಲ್ ಮ್ಯಾಕ್ರೋನ್ ಅವರನ್ನು ವ್ಯಾಟಿಕನ್ ಪದ್ಧತಿಯಲ್ಲೇ ಭೇಟಿಯಾದರು.  ಭೇಟಿಯ ನಂತರದಲ್ಲಿ ಭೇಟಿಯ ಪ್ರಾರಂಭದಲ್ಲೇ ಅವರಿಬ್ಬರ ನಡುವೆ ನಡೆದ ಸಂಭಾಷಣೆಯ ತುಣುಕೊಂದು ಸಾರ್ವಜನಿಕರಿಗೆ ಸಿಕ್ಕಿತು.   ‘ಎಲ್ಲಾ ಹೇಗೆ ನಡೆಯುತ್ತಿದೆ” ಎಂದು ಅಧ್ಯಕ್ಷರು ಕೇಳಿದರೆ, ‘ಇನ್ನೂ ಬದುಕಿದ್ದೇನೆ” ಎಂದು ಪೋಪ್ ಉತ್ತರಿಸುತ್ತಾರೆ.  ಪೋಪ್ ಅವರ ಈ ಮಾತುಗಳು ದುಃಖಪಟ್ಟು ಅಥವಾ ಮನನೊಂದು ಆಡಿದ ಮಾತುಗಳೇ, ಅದನ್ನು ಫ್ರಾನ್ಸ್ ಅಧ್ಯಕ್ಷರ ಮುಂದೆ ಆಡಿದ್ದೇಕೆ ಎನ್ನುವ ಪ್ರಶ್ನೆಗಳು ಎದ್ದವು. 

ಅದೇ ದಿನ ಪ್ಯಾರಿಸ್ ನ ಆರ್ಚ್ ಬಿಷಪ್ ಮೈಖೇಲ್ ಆಪೆಟಿಟ್ ಅವರು ಫ್ರಾನ್ಸಿಸ್ ಅವರಿಗೆ ತಮ್ಮ ರಾಜೀನಾಮೆ ಪತ್ರ ಕಳಿಸಿದ್ದರು.  ಫ್ರಾನ್ಸಿನ ಮಾಧ್ಯಮಗಳು ಆರ್ಚ್ ಬಿಷಪ್ ಅವರು ಮಹಿಳೆಯೊಬ್ಬರ ಜೊತೆ ಹೊಂದಿದ್ದ ವಿವಾದಾತ್ಮಕ ಸಂಬಂಧಗಳನ್ನು ಬಹಿರಂಗಗೊಳಿಸಿದ ನಂತರ ಅದನ್ನು ಒಪ್ಪಿಕೊಂಡು ಅವರು ತಮ್ಮ ರಾಜಿನಾಮೆಯನ್ನು ನೀಡಿದ್ದರು.   ಇದಕ್ಕೂ ಕೆಲ ಸಮಯದ ಮೊದಲು ಒಂದು ವಿಸ್ಫೋಟಕ ತನಿಖಾ ವರದಿಯು ಫ್ರಾನ್ಸ್ ದೇಶದಲ್ಲಿ ಪ್ರಕಟವಾಗಿತ್ತು. ಈ ವರದಿಯ ಪ್ರಕಾರ 1950 ರಿಂದ ಎಪ್ಪತ್ತು ವರ್ಷಗಳಲ್ಲಿ ದೇಶದಲ್ಲಿ ಸುಮಾರು 3.5 ಲಕ್ಷ ಮಕ್ಕಳನ್ನು ಕ್ಯಾಥೋಲಿಕ್ ಚರ್ಚ ನ ಪಾದ್ರಿಗಳು ಲೈಂಗಿಕವಾಗಿ ದುರುಪಯೋಗ ಪಡಿಸಿಕೊಂಡಿದ್ದರು.  

ಈ ಪ್ರಕರಣಗಳಲ್ಲಿ ಫ್ರಾನ್ಸ್ ದೇಶದ ರಾಜಕಾರಣ ಮತ್ತು ಮಾಧ್ಯಮಗಳ ಪಾತ್ರದ ಬಗ್ಗೆ ಬಹುಶಃ ಕ್ಯಾಥೋಲಿಕ್ ನಾಯಕರಿಗೆ ಅಸಮಾಧಾನ ಇರಬಹುದು.  ಆ ಕಾರಣಕ್ಕಾಗಿಯೇ, ಪೋಪ್ ಅವರು ‘ಇನ್ನೂ ಬದುಕಿದ್ದೇನೆ’ ಎಂಬಂಥಹ ಮಾತುಗಳನ್ನು ಆಡಿರಬಹುದು ಎಂಬ ವಿವರಣೆಗಳು ದೊರೆತವು. 

ಇಂದು ವ್ಯಾಟಿಕನ್ ಸಂಪರ್ಕ ವಿಭಾಗವು ಪೋಪ್ ಮತ್ತು ಕ್ಯಾಥೋಲಿಕ್ ಚರ್ಚ್ ನ ಎಲ್ಲಾ ಸಂವಹನ ಅಗತ್ಯಗಳನ್ನೂ ಪೂರೈಸುತ್ತದೆ.  2015 ರಲ್ಲಿ ಪೋಪ್ ಫ್ರಾನ್ಸಿಸ್ ಈ ವಿಭಾಗವನ್ನು ಪ್ರಾರಂಭಿಸಿದರು.  ಈ ಹಿಂದೆ ಚರ್ಚಿನ ಅಗತ್ಯಗಳನ್ನು ಪೂರೈಸಲು ವಿವಿಧ ಕಾಲಘಟ್ಟಗಳಲ್ಲಿ ಸ್ಥಾಪಿತವಾಗಿದ್ದ ಮುದ್ರಣಾಲಯ, ಅಂತರ್ಜಾಲ, ದಿನ ಪತ್ರಿಕೆ, ವ್ಯಾಟಿಕನ್ ಸುದ್ದಿಮಾಧ್ಯಮ, ವ್ಯಾಟಿಕನ್ ಪ್ರಕಾಶನ ಸಂಸ್ಥೆ, ಚಿತ್ರ, ಧ್ವನಿ ಮತ್ತು ಚಲನಚಿತ್ರ ಮಾಧ್ಯಮಗಳು, ವ್ಯಾಟಿಕನ್ ರೇಡಿಯೋ ಗಳು ಈ ವಿಭಾಗದ ಭಾಗಗಳಾಗಿವೆ.  ವ್ಯಾಟಿಕನ್ ಸಂಪರ್ಕ ವಿಭಾಗವನ್ನು ನಿರ್ವಹಿಸಲು ಡಿಸೆಂಬರ್, 2021 ರ ಮೊದಲವಾರದಲ್ಲಿ ಐದು ಮಂದಿಯ ಹೊಸ ತಂಡವನ್ನು ನೇಮಕಮಾಡಲಾಗಿದೆ.  ಇವರಲ್ಲಿ ಇಬ್ಬರು ಹಿರಿಯ ಬಿಷಪ್ ಗಳೂ, ಒಬ್ಬರು ಕಿರಿಯ ಬಿಷಪ್, ಒಬ್ಬರು ಕಾರ್ಡಿನಲ್ ಮತ್ತು ಒಬ್ಬರು ಸಿಸ್ಟರ್ ಇದ್ದಾರೆ.  

ಜಗತ್ತಿನಾದ್ಯಂತ ಮತ ಪ್ರಚಾರದ ಬಿರುಸನ್ನು ಹೆಚ್ಚಿಸುವ ಚರ್ಚ್ ನ ಪ್ರಯತ್ನಗಳಿಗೆ ಹೆಚ್ಚಿನ ಕೊಡುಗೆಯನ್ನು ಪೋಪ್ ಫ್ರಾನ್ಸಿಸ್ ಅವರು ಸಂಪರ್ಕವಿಭಾಗದಿಂದ ನಿರೀಕ್ಷಿಸುತ್ತಿದ್ದಾರೆ.  ಪೋಪ್ ಮತ್ತು ವ್ಯಾಟಿಕನ್ ಇವೆರಡನ್ನೂ ಜಗತ್ತಿನ ಮುಂದಿಡುವ ಗುರುತರ ಕೆಲಸ ಸಂಪರ್ಕವಿಭಾಗ ಜಾಗರೂಕತೆಯಿಂದ ನಿರ್ವಹಿಸುತ್ತದೆ.  ಅತಿ ನಿಯಂತ್ರಿತವಾಗಿ ಬಿಡುಗಡೆಮಾಡುವ ತುಣುಕುಗಳೇ ಇಷ್ಟು ಚರ್ಚೆಯನ್ನು ಸೃಷ್ಟಿಸುವುದಾದರೆ,  ಮಾಧ್ಯಮಗಳಿಗೆ ಪೋಪ್ ಅವರ ಭೇಟಿಯ ಎಲ್ಲಾ ವಿವರಗಳೂ ಸಿಕ್ಕರೆ ಆಗಬಹುದಾದ ಪರಿಣಾಮಗಳನ್ನು ಗಮನಿಸಿಯೇ, ವ್ಯಾಟಿಕನ್ ಮಾಧ್ಯಮ ನೀತಿ ರೂಪಿತವಾಗಿದೆ ಎಂದೆನಿಸುತ್ತದೆ.

ಎಂ.ಕೆ.ಶ್ರೀಧರನ್

ಎಂ.ಕೆ.ಶ್ರೀಧರನ್, ಮಾಧ್ಯಮ ವಿಶ್ಲೇಷಕ

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸಾವರ್ಕರರ ಅತಿ ಮಹತ್ವದ ಚಿಂತನೆ "ದೇಶ ಮೊದಲು" - ಉದಯ್ ಮೆಹ್ರೂರ್ಕರ್

Sat Dec 18 , 2021
ಬೆಂಗಳೂರಿನಲ್ಲಿ ಡಿಸೆಂಬರ್ 18ರಂದು ಭಾರತ ಸರಕಾರದ ಕೇಂದ್ರ ಮಾಹಿತಿ ಆಯುಕ್ತರಾದ ಉದಯ್ ಮೆಹ್ರೂರ್ಕರ್ ಅವರ ‘ಸಾವರ್ಕರ್ ದಿ ಮ್ಯಾನ್ ಹೂ ಕುಡ್ ಹ್ಯಾವ್ ಪ್ರಿವೆಂಟೆಡ್ ಪಾರ್ಟಿಶನ್’ ಕೃತಿಯು ಶ್ರೀ ನಿರ್ಮಲಾನಂದ ಮಹಾಸ್ವಾಮಿಯವರ ಸಾನ್ನಿಧ್ಯದಲ್ಲಿ ನಗರದ ಪುಟ್ಟಣ ಚೆಟ್ಟಿ ಪುರಭವನದಲ್ಲಿ ಬಿಡುಗಡೆಯಾಗಲಿದೆ. ಇದೇ ಸಂದರ್ಭದಲ್ಲಿ ಸಂವಾದ ತಂಡದ ಜೊತೆಗೆ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ. 1.ಸಾವರ್ಕರ್ ಬಗೆಗೆ, ಅವರ ದೂರದೃಷ್ಟಿ ಮತ್ತು ದೇಶ ವಿಭಜನೆಯ ಕುರಿತು ಈಗಾಗಲೇ ಅನೇಕ ಕೃತಿಗಳ ರಚನೆಯಾಗಿದೆ, ಆದರೆ […]