ಸಂಘಂ ಶರಣಂ ಗಚ್ಛಾಮಿ – ಸ್ವಯಂಸೇವಕರಿಗೆ ಮಾತ್ರವಲ್ಲ, ಸಂಘವನ್ನು ತಿಳಿಯಬಯಸುವವರಿಗೆ ಸಂಘ ಮತ್ತು ಅದರ ವ್ಯವಸ್ಥೆಯನ್ನು ತಿಳಿಯಲು ಓದಲೇಬೇಕಾದ ಪುಸ್ತಕ

‘ವ್ಯಕ್ತಿ ಸಣ್ಣವನು. ಸಂಘಟನೆ, ರಾಷ್ಟ್ರ ದೊಡ್ಡದು’ ಎಂಬ ಧ್ಯೇಯದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್) ತನ್ನ ವ್ಯವಸ್ಥೆಯಾದ ಶಾಖೆಗಳಿಂದ ವ್ಯಕ್ತಿ ನಿರ್ಮಾಣ ಮಾಡುತ್ತಾ, ರಾಷ್ಟ್ರದ ಉನ್ನತಿಗೆ ಶ್ರಮಿಸುವುದು ತಿಳಿದಿರುವ ಸಂಗತಿಯೇ. ಈ ಶಾಖೆಯ ಜವಾಬ್ದಾರಿ ಅಲ್ಲಿನ ಮುಖ್ಯ ಶಿಕ್ಷಕನಿಗೆ, ಕಾರ್ಯವಾಹನಿಗಿವೆಯಾದರೂ ಸದಾ ಕಾಲ ಸಂಘಟನೆಯ ಕೆಲಸದ ಮೂಲಕ ರಾಷ್ಟ್ರದ ಕೆಲಸದ ಬಗ್ಗೆ ಧ್ಯಾನಿಸುವ, ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ಸಂನ್ಯಾಸಿಗಳಿರುತ್ತಾರೆಂಬುದು ಹೊರ ವಲಯದಲ್ಲಿದ್ದುಕೊಂಡು ಸಂಘವನ್ನು ಸಂಪೂರ್ಣವಾಗಿ ತಿಳಿದುಕೊಂಡಿದ್ದೇನೆಂಬುವವರಿಗೆ ಗೋಚರಿಸದು. ಈ ಸಂನ್ಯಾಸಿಗಳನ್ನು ಪ್ರಚಾರಕರೆನ್ನುತ್ತಾರೆ. ತಂದೆತಾಯಿ ಬಂಧು ಬಳಗವನ್ನು ತೊರೆದು ಪ್ರಚಾರಕರಾಗಿ ಹೊರಡುವ, ತಮ್ಮ ಸ್ವಾರ್ಥಕ್ಕೆ ಯಾವುದೇ ಕೆಲಸ ಮಾಡದೇ, ರಾಷ್ಟ್ರಹಿತಕ್ಕಾಗಿ ಕೆಲಸ ಮಾಡುವ ಈ ಪ್ರಚಾರಕರನ್ನು ಕಂಡ ಸಂಸಾರಸ್ಥ ಸ್ವಯಂಸೇವಕರು ಒಂದಷ್ಟು ವರ್ಷವಾದರೂ ಸಂಘದ ಪ್ರಚಾರಕನಾಗಿ ಕೆಲಸ ಮಾಡಬೇಕಿತ್ತು ಎಂದನಿಸದಿರದು. 

ಅಂತಹ ಪ್ರಚಾರಕನೊಬ್ಬನನ್ನು ಕಾದಂಬರಿಯ ನಾಯಕನನ್ನಾಗಿ ಮಾಡಿರುವ ಯಶಸ್ಸು ಡಾ. ಎಚ್ ಆರ್ ವಿಶ್ವಾಸ ಅವರಿಗೆ ಸಲ್ಲಬೇಕು. ಸಮೃದ್ಧ ಸಾಹಿತ್ಯ ಪ್ರಕಟಿಸಿರುವ ‘ಸಂಘಂ ಶರಣಂ ಗಚ್ಛಾಮಿ’ ಎಂಬುದೇ ಆ ಕಾದಂಬರಿ. ಈ ಬಗ್ಗೆ ಹಿರಿಯ ಪ್ರಚಾರಕರಾದ ಚಂದ್ರಶೇಖರ ಭಂಡಾರಿಯವರು ಪುಸ್ತಕದ ಹಿನ್ನುಡಿಯಲ್ಲಿ ಬರೆಯುತ್ತಾ, “ಸಂಘದ ಪ್ರಚಾರಕನೊಬ್ಬನು ಕೇಂದ್ರಬಿಂದುವಾಗಿರುವುದು ಕನ್ನಡ ಸಾಹಿತ್ಯದ ದೃಷ್ಟಿಯಿಂದ ಕೃತಿ ಅನನ್ಯವೆನಿಸಿಕೊಳ್ಳುತ್ತದೆ” ಎಂದು ಹೊಗಳಿದ್ದಾರೆ. ಈ ತರಹದ ಕಾದಂಬರಿಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದ (ಚಕ್ರವರ್ತಿ ತಿರುಮಗನ್) ಹಾಗೂ ಡಾ. ವಿಶ್ವಾಸರು ಬರೆದಾರು ಎಂದು ನಂಬಿದ್ದ (ನ. ಕೃಷ್ಣಪ್ಪ) ಇಬ್ಬರೂ ಪ್ರಚಾರಕರ ದಿವ್ಯಸ್ಮೃತಿಗೆ ಲೇಖಕರು ಕಾದಂಬರಿಯನ್ನು ಅರ್ಪಣೆ ಮಾಡಿದ್ದಾರೆ. 

ಇನ್ನು ಶತಾವಧಾನಿ ಡಾ. ಆರ್ ಗಣೇಶ ಅವರು ಪುಸ್ತಕದ ಮುನ್ನುಡಿಯಲ್ಲಿ “ಸಂಘದ ಮಹೋನ್ನತ ಧ್ಯೇಯವೃಕ್ಷದ ಅಸಂಖ್ಯ ಪರ್ಣಗಳಲ್ಲಿ  ಅದರ ಕಾರ್ಯಕರ್ತರು ಸೇರುತ್ತಾರೆ. ಪೂರ್ಣಾವಧಿ ಕಾರ್ಯಕರ್ತರೆನಿಸಿದ ಪ್ರಚಾರಕರೇ ಕೊಂಬೆ-ರೆಂಬೆಗಳು. ಈ ಕಾದಂಬರಿಯು ಇಂಥ ಮಹಾವೃಕ್ಷದ ಎಲೆಯೊಂದು ಕೊಂಬೆಯಾಗಿ ಕೊನರಿ, ಬೇರಿಗೆ ಬಲನೀಡುವ ಚಿತ್ರವನ್ನು ಕಟ್ಟಿಕೊಟ್ಟಿದೆ” ಎಂದು  ಬರೆದಿದ್ದಾರೆ. 

‘ಆತ್ಮನೋ ಮೋಕ್ಷಾರ್ಥಂ’ ಎಂಬ ಉಕ್ತಿಯಂತಷ್ಟೇ ಬದುಕು ನಡೆಸದೆ ಜಗತ್ ಹಿತಾಯ ಚ ಎಂಬುದನ್ನೂ ನೆನಪಿನಲ್ಲಿಟ್ಟುಕೊಂಡು, ಆರೆಸ್ಸೆಸ್ ನ ಪ್ರಚಾರಕನಾಗಿ ಹೊರಡಬೇಕೆಂದು ಮನೆ ಬಿಟ್ಟು ಬಂದವರು ತಮ್ಮ ಓದಿನಲ್ಲಿ ಸದಾ ಮುಂದಿದ್ದವರೇ. ಬಿ. ಇ ಪದವೀಧರರು, ಸ್ನಾತಕೋತ್ತರ ಪದವಿ ಹೊಂದಿದವರು, ಡಾಕ್ಟರೇಟ್ ಪಡೆದವರು, ಸಿ ಎ ಮುಗಿಸಿದವರು ಒಟ್ಟಿನಲ್ಲಿ ಬಹುತೇಕ ಇಡಿಯ ಸಮಾಜದಂತೆ ಹಾಯಾಗಿ ಲಕ್ಷಗಟ್ಟಲೆ ಸಂಬಳ ಎಣಿಸಿ ಸಂಸಾರಸ್ಥರಾಗಿ ಉಪಭೋಗದ ಜೀವನ ನಡೆಸಬಹುದಾದವರು ಇವರು. ಒಂದು ಧ್ಯೇಯವನ್ನು ನಂಬಿ, ಪ್ರಚಾರಕ ಜೀವನವನ್ನು ಸಹರ್ಷದಿಂದ ಕಳೆಯುವ ಈ ಸಂನ್ಯಾಸಿಗಳ ಕಾರ್ಯಪದ್ಧತಿಯಿಂದ ಸಂಘಟನೆಯ ಕೆಲಸ ಮುಂದೆಸಾಗುತ್ತದೆ ಎಂಬುದನ್ನು ಸಂಘವನ್ನು ಅರಿಯದವರು ನಿರ್ಲಕ್ಷಿಸಿಬಿಡುತ್ತಾರೆ. 

ಕಾದಂಬರಿಯಲ್ಲಿ ಬರುವ ನಾರಣಪ್ಪ, ಶ್ರೀನಿವಾಸ, ಡಾ. ಚಂದ್ರಶೇಖರ ಭಟ್ಟರು ಸೇರಿದಂತೆ ಹಲವರನ್ನು “ನಾನು ನೋಡಿದ್ದೇನೆ ಅಥವಾ ಕೇಳಿದ್ದೇನೆ” ಎಂದು ಸ್ವಯಂಸೇವಕರಿಗೆ, ಸಂಘದ ಜೊತೆ ಕೆಲಸ ಮಾಡಿದವರಿಗೆ, ಸಂಘವನ್ನು ಹತ್ತಿರದಿಂದ ನೋಡಿದವರಿಗೆ ಅನಿಸದೇ ಇರದು. (ಹಾಗಾಗಿಯೇ ಆ ಪಾತ್ರಗಳ ಬಗ್ಗೆ  ಪುಸ್ತಕ ಪರಿಚಯದಲ್ಲಿ ಬರೆಯುವಾಗ ಬಹುವಚನವನ್ನು ನಾನು ಬಳಸಿದ್ದೇನೆ.) ಜೊತೆಗೆ ತುರ್ತು ಪರಿಸ್ಥಿತಿ, ೯೦ರ ದಶಕದ ರಾಮ ಮಂದಿರದ ಅಭಿಯಾನ ಸೇರಿದಂತೆ ಬರುವ ಸನ್ನಿವೇಶಗಳು ಆಗಿನ ಸಂಘದ ಕೆಲಸ, ಅದು ತೆಗೆದುಕೊಂಡ ಪಾತ್ರ ಎಲ್ಲವನ್ನೂ  ಕಾದಂಬರಿಯಲ್ಲಿ ಲೇಖಕರು ಮನೋಜ್ಞವಾಗಿ ವರ್ಣಿಸಿದ್ದಾರೆ. 

ಕಾದಂಬರಿಯಲ್ಲಿ ಬರುವ ಒಂದಷ್ಟು ಸನ್ನಿವೇಶಗಳಲ್ಲಿ ಸಾಮಾನ್ಯಾತಿ ಸಾಮಾನ್ಯ ಆರೆಸ್ಸೆಸ್ ನ ಪ್ರಚಾರಕರ ನಡೆ ನುಡಿಗಳ ವರ್ಣನೆಯಿದೆ. ಸಮಾಜದಿಂದಲೇ ಬರುವ ಗುರು ದಕ್ಷಿಣೆಯ ಹಣದಿಂದ ಸಂಘದ ಕೆಲಸ ನಡೆಯುವುದರಿಂದ ಹಣವನ್ನು ವ್ಯಯಮಾಡುವ ವಿಷಯದಲ್ಲಿರಬೇಕಾದ ಪ್ರಜ್ಞೆ, ಜಾಗರೂಕತೆಯ ಬಗ್ಗೆ “ನಾರಾಣಪ್ಪನವರ ಬೋಧನೆಯಂತೆಯೇ” ಪ್ರಚಾರಕರು ಹಿಂದಿನಿಂದಲೂ ನಡೆದುಕೊಂಡುಬಂದಿದ್ದಾರೆ. ಸಾಕಷ್ಟು ಮಟ್ಟಿಗಿನ ಸೇವಾ ಕಾರ್ಯಗಳು ನಡೆಯುತ್ತಿರುವಾಗ, ಹಣದ ವಿಷಯವಾಗಿ ಸಮಾಜವು ಒಮ್ಮೆಯೂ ಸಂಘದ ವಿರುದ್ಧ ಬೊಟ್ಟು ಮಾಡದೇ ಇರುವುದು ಇದಕ್ಕೆ ಸಾಕ್ಷಿ. ಇನ್ನು ಪ್ರಚಾರಕರು ಊಟಕ್ಕೆಂದು ಹೋಟೆಲ್ ಆಶ್ರಯಿಸದೆ ಸಮಾಜದ ಕಡೆ ನೋಡುತ್ತಾ, “ಇಷ್ಟು ಹಿಂದೂ ಮನೆಗಳಿರುವಾಗ ಹೊಟೇಲ್ ಬೇಕೆ?” ಎಂಬ ಮಾತುಗಳನ್ನು ನಾರಾಣಪ್ಪ ಆಡುತ್ತಾರೆ. ಸಂಘ ಹಲವರಿಗೆ ವಿಶೀಷವೆನಿಸುವುದು ಇಂತಹ ಹಲವು ನಡೆಗಳಿಂದಲೇ. ಇನ್ನು ಸಂಘದಲ್ಲಿ ಹುದ್ದೆ ಎಂಬುದಿಲ್ಲ. ಅಲ್ಲಿರುವುದು ಜವಾಬ್ದಾರಿಯಷ್ಟೇ. ತಾಲೂಕು ಮಟ್ಟದಿಂದ ಜಿಲ್ಲಾ ಮಟ್ಟಕ್ಕೆ ನಂತರ ವಿಭಾಗ, ಪ್ರಾಂತ, ಕ್ಷೇತ್ರ, ಅಖಿಲ ಭಾರತಕ್ಕೆ (ಕ್ರಮವಾಗಿ ಹೆಚ್ಚು ಶಾಖೆಗಳನ್ನು ಹೊಂದಿರುವ ಎಂದು ಅರ್ಥೈಸಿಕೊಳ್ಳಬಹುದು) ನಿಯುಕ್ತಿಗೊಳ್ಳುವವರು ಹೆಚ್ಚಿನ ಕೆಲಸವನ್ನು, ಪ್ರವಾಸವನ್ನು, ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ಕೆಲಸ ಮಾಡುವ ಹುಮ್ಮಸ್ಸಿನಿಂದಲೇ ಕಾರ್ಯಕರ್ತರು ಆರೆಸ್ಸೆಸ್ ಜೊತೆ ತಮ್ಮನ್ನು ತಾವು ಜೋಡಿಸಿಕೊಳ್ಳುತ್ತಾರೆ. 
ಕಾದಂಬರಿಯಲ್ಲಿ ಬರುವ  ನಾರಾಣಪ್ಪನವರ ಮಾತುಗಳಾದ “ನಿಜವಾದ ಪ್ರಚಾರಕ ತಾನೇ ಎಲ್ಲ ಕೆಲಸಗಳನ್ನು ಮಾಡ್ತೀನಿ ಅಂತ ಹೊರಡೋದಿಲ್ಲ. ಬದಲಾಗಿ ಸಾಕ್ಷಿಪುರುಷನ ಹಾಗೆ ನಿಂತು ಸ್ಥಾನೀಯ ಕಾರ್ಯಕರ್ತರೇ ಕೆಲಸ ಮುಂದುವರೆಸುವಂತೆ ಮಾಡಿಸುತ್ತಾನೆ. ಹೊಸ ಜವಾಬ್ದಾರಿಯ ದೆಸೆಯಿಂದ ಪ್ರಚಾರಕನ ಕಾರ್ಯಕ್ಷೇತ್ರ ಬದಲಾಗಿ ಹೋದಾಗ ತನ್ನ ಹಿಂದಿನ ಕಾರ್ಯಕ್ಷೇತ್ರದ ಕೆಲಸಗಳು ಬಡವಾಗದೇ ಅದೇ ಹುಮ್ಮಸ್ಸಿನಿಂದ ನಡೆದುಕೊಂಡರೆ ಮಾತ್ರ ಪ್ರಚಾರಕನ ಸಫಲತೆ” ಎಂಬಂತಹ ಮಾತುಗಳಂತೆಯೇ ಸಂಘದ ಪ್ರಚಾರಕರು ೯೬ ವರ್ಷಗಳಿಂದಲೂ ಪಾಲಿಸಿ ಕೊಂಡುಬಂದಿದ್ದಾರೆ. 

ಅಂತೆಯೇ, ನಾರಾಣಪ್ಪನವರ ಸಂಪರ್ಕದಿಂದ ಮಂಗಳೂರಿನ ಡಾ. ಚಂದ್ರಶೇಖರ ಭಟ್ಟರು ಸಂಘಕ್ಕೆ ಪರಿಚಿತಗೊಂಡು ಧ್ಯೇಯ ನಿಷ್ಠ ಕಾರ್ಯಕರ್ತರಾದ ಬಳಿಕ, ನಾರಾಣಪ್ಪನವರ ಜವಾಬ್ದಾರಿ ಬದಲಾಗಿ ಮುಂದೆ ಹೋದಾಗಲೂ ಡಾ. ಚಂದ್ರಶೇಖರ ಭಟ್ಟರು ಸಂಘದಿಂದ ವಿಮುಖರಾಗದೇ ಸಂಘಟನೆಯ ಕೆಲಸ ಮಾಡುವುದು, ನಂತರದಲ್ಲಿ ಬರುವ ಮತ್ತೊಬ್ಬ ಪ್ರಚಾರಕರ ಜೊತೆಯೂ ಅದೇ ರೀತಿಯಲ್ಲಿ ಕೆಲಸ ಮಾಡುವುದು ಸಹಜ ಸಂಘದ ಕಾರ್ಯವೆನಿಸುತ್ತದೆ. ಒಟ್ಟಿನಲ್ಲಿ ಸಂಘ ಕಾರ್ಯ ಅರ್ಥಾತ್ ಸಮಾಜದ ಕಾರ್ಯ ಅರ್ಥಾತ್  ರಾಷ್ಟ್ರಕಾರ್ಯ ನಿಲ್ಲುವಂತಿಲ್ಲ. ಸಂಘದ ಸಂಸ್ಥಾಪಕರಾದ ಡಾಕ್ಟರ್ ಹೆಡಗೇವಾರ್ ಹೇಳಿರುವಂತೆ “ವೈಯಕ್ತಿಕವಾಗಿ ಎಲ್ಲರೂ ಆಚಾರಶೀಲರು, ನಿಷ್ಠಾವಂತರು, ಸತ್ ಚಾರಿತ್ರ್ಯದವರು. ಆದರೆ, ಸಾಮೂಹಿಕ ಚಾರಿತ್ರ್ಯ, ಸಾಮೂಹಿಕ ಆಚಾರ ಅಭ್ಯಾಸವಾಗಬೇಕಾಗಿರುವುದರಿಂದ ಸಂಘ ಈ ಉದ್ದೇಶದ ಸಿದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ.” ಇನ್ನು ಸಂಘದ  ಪ್ರಚಾರಕರೂ ಈ ಧ್ಯೇಯದೊಂದಿಗೇ ಕೆಲಸಮಾಡುತ್ತಾರೆ. 

ಬಾಲ್ಯದಿಂದಲೂ ಸಂಘದ ಪರಿಚಯವಿದ್ದವರು ಮುಂದೆಯೂ ಸ್ವಯಂಸೇವಕರಾಗಿ ಸಮಾಜದ ಕೆಲಸಗಳನ್ನು ಮಾಡುವುದು ಒಂದು ಭಾಗವಾದರೆ, ತಮ್ಮ ಹರೆಯದಲ್ಲಿ ಸಂಘದ ಪರಿಚಯವಾಗಿ ಜೀವನದ ದಿಕ್ಕನ್ನು ಬದಲಿಸಿಕೊಂಡು ಪ್ರಚಾರಕರಾಗಿ ಹೊರಡುವವರ, ಹೊಸ ಜವಾಬ್ದಾರಿ ದೊರೆತು ಹೊಸ ಕ್ಷೇತ್ರಗಳಿಗೆ ಹೊರಟು ಸಂಘಕಾರ್ಯ ಸೊರಗದಂತೆ ಕಾರ್ಯಕರ್ತರನ್ನು ನಿರ್ಮಾಣ ಮಾಡುವ ಕಥೆಯೇ ಈ ಕಾದಂಬರಿಯ ಹೂರಣ. ಹೊಸ ಕಾರ್ಯಕರ್ತರನ್ನು ಹುಡುಕಿ, ರಾಷ್ಟ್ರಕಾರ್ಯದಲ್ಲಿ ಜೋಡಿಸುವ ಹೊಸ ಪ್ರಚಾರಕರು ಬರುತ್ತಲೇ ಇರುತ್ತಾರೆ. ಕಾರ್ಯಕರ್ತರು ಮುಂದಿನ ಸ್ತರಕ್ಕೆ ಹೋಗುತ್ತಾ, ಮತ್ತಷ್ಟು ಗಟ್ಟಿಯಾಗುತ್ತಾ ಬೆಳೆಯುತ್ತಾರೆ. ಕಾದಂಬರಿಯಲ್ಲಿ ಬರುವ ಡಾ. ಚಂದ್ರಶೇಖರ ಭಟ್ಟರು ವೈದ್ಯರಾಗಿದ್ದವರು ಮುಂದೊಂದು ದಿನ ನರ್ಸಿಂಗ್ ಹೋಮ್ ತೆರೆಯಬೇಕೆಂದು ಬಯಸಿದ್ದವರು ನಾರಾಣಪ್ಪನವರ ದಿವ್ಯ ಸಹವಾಸಕ್ಕೆ ಬಂದು ನರ್ಸಿಂಗ್ ಹೋಮ್ ತೆರೆಯುವವರು ಮತ್ಯಾರೋ ಸಿಕ್ಕಾರು, ತಮ್ಮ ಸಮಯವನ್ನು ಸಂಘಕ್ಕೆ ನೀಡುತ್ತಾ ಶಾಲೆಯನ್ನು ಆರಂಭಿಸುವ ಹಂತಕ್ಕೆ ಪರಿವರ್ತನೆ ಹೊಂದುತ್ತಾರೆ. 

ಲೇಖಕರ ಪರಿಚಯ

ಸ್ವಯಂಸೇವಕರು ಕಾದಂಬರಿಯನ್ನು ಓದುತ್ತಾ ತಿಳಿದುಕೊಳ್ಳುವ ಹಲವು ವಿಷಯಗಳಿವೆ. ಇನ್ನು ಸಂಘವನ್ನು ನೋಡದಿರುವವರು, ಅದನ್ನು , ಅದರ ವ್ಯವಸ್ಥೆಯನ್ನು ತಿಳಿದುಕೊಳ್ಳಲು,  ಓದಲೇ ಬೇಕಾದ ಪುಸ್ತಕ ‘ಸಂಘಂ ಶರಣಂ ಗಚ್ಛಾಮಿ.’

ಪ್ರವೀಣ್ ಪಟವರ್ಧನ್

One thought on “ಸಂಘಂ ಶರಣಂ ಗಚ್ಛಾಮಿ – ಸ್ವಯಂಸೇವಕರಿಗೆ ಮಾತ್ರವಲ್ಲ, ಸಂಘವನ್ನು ತಿಳಿಯಬಯಸುವವರಿಗೆ ಸಂಘ ಮತ್ತು ಅದರ ವ್ಯವಸ್ಥೆಯನ್ನು ತಿಳಿಯಲು ಓದಲೇಬೇಕಾದ ಪುಸ್ತಕ

  1. ಪುಸ್ತಕದ ಕುರಿತು ಸುಂದರವಾದ ನಿರೂಪಣೆ. ಸಮಾಜದ ಬಗ್ಗೆ ಪ್ರೀತಿ ಇರುವವರು ಸಮಾಜಹಿತ ಕೆಲಸ ಮಾಡಲು ಮುಂದಾಗುವಂತೆ ಹಾಗೆಯೇ ತಮ್ಮ ಕಾರ್ಯದಲ್ಲಿ ಸಂತೃಪ್ತಿಯನ್ನೂ ಸಾರ್ಥಕ್ಯವನ್ನೂ ಕಾಣಲು ಪ್ರೇರಣೆ ನೀಡುವಂತಹ ಉತ್ತಮ ಕೃತಿ.

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರೈತರ ಹೆಸರಿನಲ್ಲಿ ಪ್ರತಿಭಟನೆ: ಅಂತಾರಾಷ್ಟ್ರೀಯ ಷಡ್ಯಂತ್ರ. ಗಣ್ಯರಿಂದ ವಿದೇಶೀ ಶಕ್ತಿಗಳಿಗೆ ಎಚ್ಚರಿಕೆ.

Thu Feb 4 , 2021
ರೈತರ ಹೆಸರಿನಲ್ಲಿ ದೆಹಲಿಯ ಸುತ್ತಮುತ್ತ ನಡೆಯುತ್ತಿರುವ ಹೋರಾಟವು ಭಾರತದ ಏಕತೆ ಮತ್ತು ಬೆಳವಣಿಗೆಯನ್ನು ಸಹಿಸದ ವಿದೇಶೀ ಶಕ್ತಿಗಳು ಭಾರತದಲ್ಲಿ ಅರಾಜಕತೆ ನಿರ್ಮಿಸಲು ನಡೆಸುತ್ತಿರುವ ಪ್ರಯತ್ನದ  ಒಂದು ಭಾಗ ಎಂಬ ಅನುಮಾನಕ್ಕೆ ಸಾಕಷ್ಟು ಪುರಾವೆಗಳು ಇದೀಗ ಹೊರಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಪಾಪ್‌ ತಾರೆ ರಿಹಾನಾ ಮತ್ತು ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್‌ ಹಾಗೂ ಇತರ ಅಂತರರಾಷ್ಟ್ರೀಯ ಮಟ್ಟದ ಖ್ಯಾತ(?)ನಾಮರು ಮಾಡಿ ರುವ ಟ್ವೀಟ್‌ಗೆ […]