ಉತ್ಥಾನ ಮಾಸಪತ್ರಿಕೆಯ ಸಂಪಾದಕ ಶ್ರೀ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ಆರೆಸ್ಸೆಸ್‌ನ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ

ಉತ್ಥಾನ ಮಾಸಪತ್ರಿಕೆಯ ಸಂಪಾದಕರಾದ ಶ್ರೀ ಕಾಕುಂಜೆ ಕೇಶವ ಭಟ್ಟ (66 ವರ್ಷ) ಅವರು ನಿನ್ನೆ ರಾತ್ರಿ (ಮೇ 1) 12.15 ಕ್ಕೆ ಬೆಂಗಳೂರಿನಲ್ಲಿ ನಿಧನರಾದರು.

ಶ್ರೀ ಕಾಕುಂಜೆ ಕೇಶವ ಭಟ್ಟ ಅವರ ನಿಧನಕ್ಕೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಆರೆಸ್ಸೆಸ್‌ನ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಘಚಾಲಕರಾದ ವಿ. ನಾಗರಾಜ್, ರಾಷ್ಟ್ರೋತ್ಥಾನ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ನಾ. ದಿನೇಶ್ ಹೆಗ್ಡೆ, ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ಜೆ. ನಂದಕುಮಾರ್, ಉಪಮುಖ್ಯಮಂತ್ರಿಗಳಾದ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಕುಂಜೆ ಕೇಶವ ಭಟ್ಟ ಅವರ ಪರಿಚಯ:

ಕಳೆದ 9 ವರ್ಷಗಳಿಂದ ರಾಷ್ಟ್ರೋತ್ಥಾನ ಪರಿಷತ್ ಪ್ರಕಾಶಿಸುತ್ತಿರುವ ’ಉತ್ಥಾನ’ ಮಾಸಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದ ಕಾಕುಂಜೆ ಕೇಶವ ಭಟ್ಟ ಅವರು ಮೂಲತಃ ಗಡಿನಾಡು ಕಾಸರಗೂಡಿನ ನೀರ್ಚಾಲು ಗ್ರಾಮದ ಕಾಕುಂಜೆಯವರು. ಖ್ಯಾತ ಸಂಸ್ಕೃತ ವಿದ್ವಾಂಸ, ಮೀಮಾಂಸಾ ಶಿರೋಮಣಿ, ವಿದ್ವಾನ್ ಕಾಕುಂಜೆ ಕೃಷ್ಣ ಭಟ್ಟ ಹಾಗೂ ಸಾವಿತ್ರೀ ಅಮ್ಮ ಅವರ ಐದನೇ ಮಗನಾಗಿ ಆಗಸ್ಟ್ ೧೪, ೧೯೫೫ ರಂದು ಕೇಶವ ಭಟ್ ಅವರು ಜನಿಸಿದರು. ನೀರ್ಚಾಲಿನ ಎಂ.ಎಸ್.ಸಿ ಹೈಸ್ಕೂಲ್‌ನಲ್ಲಿ, ಉಡುಪಿಯ ಎಂ.ಜಿ.ಎಂ ಕಾಲೇಜ್ ಹಾಗೂ ಮಣಿಪಾಲದ ಕೆ.ಎಂ.ಸಿ. ಫಾರ್ಮಸಿ ಕಾಲೇಜಿನಲ್ಲಿ ತಮ್ಮ ಶಿಕ್ಷಣ ಪೂರೈಸಿದರು.

ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿದ್ದ ಅವರು ೧೯೮೩ರಲ್ಲಿ ಮಾನನೀಯ ಅಜಿತ್ ಕುಮಾರ್ ಅವರ ಪ್ರೇರಣೆಯಿಂದ ಯೋಗ ತರಬೇತಿ ಪ್ರಾರಂಭಿಸಿದರು. ಪದ್ಮಭೂಷಣ ಡಾ. ಬಿ.ಕೆ.ಎಸ್. ಅಯ್ಯಂಗಾರ್ ಅವರ ಬಳಿ ಯೋಗ ತರಬೇತಿ ಪಡೆದರು. ಕೆಲಕಾಲ ಹಿಂದೂ ಸೇವಾ ಪ್ರತಿಷ್ಠಾನದ ಸೇವಾವೃತ್ತಿಯಾಗಿಯೂ (ಪೂರ್ಣಾವಧಿ ಕಾರ್ಯಕರ್ತರಾಗಿಯೂ) ಕಾರ್ಯನಿರ್ವಹಿಸಿದ್ದರು. ೧೯೮೩ರಿಂದ ಐದು ವರ್ಷಗಳ ಕಾಲ ರಾಷ್ಟ್ರೋತ್ಥಾನ ಸಾಹಿತ್ಯದ ಸಂಪಾದಕೀಯ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದರು.

ಅನುಭವೀ ಯೋಗ ಶಿಕ್ಷಕರಾಗಿದ್ದ ಅವರು ತದನಂತರ ಯೋಗ ಪ್ರಸಾರ ಮಾಡುವ ಉದ್ದೇಶದಿಂದ ತುಮಕೂರಿನಲ್ಲಿ ತುಮಕೂರು ಯೋಗ ಶಿಕ್ಷಣ ಸಮಿತಿ ಮತ್ತು ಬೆಂಗಳೂರಿನಲ್ಲಿ ಶ್ರೀ ಯೋಗ ಭಾರತೀ ಅಷ್ಟಾಂಗ ಯೋಗ ಶಿಕ್ಷಾ ಕೇಂದ್ರ ಪ್ರಾರಂಭಿಸಿ ಹಲವು ದಶಕಗಳ ಕಾಲ ಸಾವಿರಾರು ಮಂದಿಗೆ ಯೋಗ ತರಬೇತಿ ನೀಡಿದ್ದಾರೆ.

೨೦೧೨ ರಿಂದ ಉತ್ಥಾನ ಮಾಸಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಸಂಪಾದಕತ್ವದಲ್ಲಿ ಉತ್ಥಾನ ಹೊರತಂದ ಅಂಬೇಡ್ಕರ್-೧೫೦, ಜಲಸಂರಕ್ಷಣೆ, ಎಸ್.ಎಲ್. ಭೈರಪ್ಪ ಅವರ ಕುರಿತ ವಿಶೇಷ ಸಂಚಿಕೆಗಳು ಅಪಾರ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಸ್ವತಃ ಲೇಖಕರೂ ಆಗಿರುವ ಅವರು ಒತ್ತಡಕ್ಕೆ ವಿದಾಯ, ಗುಡ್ ಬೈ ಅಸ್ತ್ಮ, ಬದುಕು ಸವಿಯೋಣ, ಆರೋಗ್ಯಕರವಾಗಿ ಬೊಜ್ಜು ಕರಗಿಸುವುದು ಹೇಗೆ, ಸೂರ್ಯನಮಸ್ಕಾರ ಸೇರಿದಂತೆ ೧೦ಕ್ಕೂ ಅಧಿಕ ಪುಸ್ತಕಗಳನ್ನು ಬರೆದಿದ್ದಾರೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಹೊಸ ಅಧ್ಯಾಯಕ್ಕೆ ತೆರೆದುಕೊಳ್ಳುತ್ತಿರುವ ಆರೆಸ್ಸೆಸ್

Tue May 4 , 2021
ರಾಷ್ಟ್ರೀಯ ಸ್ವಯಂಸೇವಕ ಸಂಘದ ನೂತನ ಸರಕಾರ್ಯವಾಹರಾಗಿ ಆಯ್ಕೆಗೊಂಡ ದತ್ತಾತ್ರೇಯ ಹೊಸಬಾಳೆಯವರು ಸಂಘಟನೆಯ ಇತಿಹಾಸದಲ್ಲಿ ಹೊಸ ಘಟ್ಟವೊಂದು ಪ್ರಾರಂಭವಾಗುತ್ತಿರುವುದನ್ನು ಸೂಚಿಸುವಂತಹ ಮಾತುಗಳನ್ನಾಡಿರುವುದು ಹಲವರ ಗಮನ ಸೆಳೆದಿದೆ. ಅವರು ಎರಡು ಪ್ರಮುಖ ಸಂಗತಿಗಳ ಬಗ್ಗೆ ಚರ್ಚಿಸಿದ್ದಾರೆ. ಮೊದಲನೆಯದು ಸಾಮಾಜಿಕ ಅಸಮಾನತೆ; ಎರಡನೆಯದು ಭಾರತದ ಸಂಕಥನ. ಈ ಎರಡೂ ಅಂಶಗಳು ದೇಶಕ್ಕಾಗಲೀ, ಸಂಘಕ್ಕಾಗಲೀ ಹೊಸತೇನೂ ಅಲ್ಲದಿದ್ದರೂ ಈ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳ ಬಗ್ಗೆ ಆರೆಸ್ಸೆಸ್ ಉತ್ಸುಕವಾಗಿರುವುದನ್ನು ಹೊಸಬಾಳೆಯವರ ಹೇಳಿಕೆ ಸೂಚಿಸುತ್ತದೆ. ನೂರರ […]