ಗ್ಲೋಬಲ್ ಆಗುವುದು ಎಂದರೆ ಪಶ್ಚಿಮದ ಅನುಕರಣೆಯಲ್ಲ: ಮದನ್ ಗೋಪಾಲ್

ಬೆಂಗಳೂರು, ಮಾರ್ಚ್ 27: ಪ್ರಾಚೀನ ಭಾರತೀಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿದ್ದ ತಪ್ಪು ಕಲ್ಪನೆಯನ್ನು ದೂರ ಮಾಡುವಲ್ಲಿ ಹಿರಿಯ ಗಾಂಧಿವಾದಿ, ಸಂಶೋಧಕ ಧರಂಪಾಲ್ ಅವರ ಸಂಶೋಧನೆ ಬಹಳ ಮಹತ್ತ್ವದ್ದು ಎಂದು ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅಭಿಪ್ರಾಯಪಟ್ಟರು.

 ಬೆಂಗಳೂರಿನ ಜೈನ್ ಕಾಲೇಜು ಮತ್ತು ಮಂಗಳೂರು ಲಿಟ್ ಫೆಸ್ಟ್ ಸಹಯೋಗದಲ್ಲಿ ಜಾಯನಗರದ ಜೈನ್ ಕಾಲೇಜಿನಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡುತ್ತಿದ್ದರು. ಭಾರತದಲ್ಲಿ ಕೆಲವು ಮೇಲುಜಾತಿಯವರಿಗೆ ಮಾತ್ರ ಶಿಕ್ಷಣ ಸಿಗುತ್ತಿತ್ತು, ಮಹಿಳೆಯರಿಗೆ ಶಿಕ್ಷಣವಿರಲಿಲ್ಲ ಇತ್ಯಾದಿ ವಿಷಯಗಳನ್ನೇ ವಾಮಪಂಥೀಯ ಇತಿಹಾಸಕಾರರು ಹೇಳಿಕೊಂಡು ಬಂದಿದ್ದರು. ಆದರೆ, ಧರಂಪಾಲ್ ಅವರು ಲಂಡನ್ನಿನಲ್ಲಿ ಕುಳಿತು ಬ್ರಿಟಿಷ್ ಪತ್ರಸಂಗ್ರಹಾಗಾರದಲ್ಲಿನ ದಾಖಲೆಗಳನ್ನು ಅಧ್ಯಯನ ಮಾಡಿ ಭಾರತದ ಗುರುಕುಲಗಳಲ್ಲಿ ಎಲ್ಲ ಜಾತಿಯವರಿಗೆ ಶಿಕ್ಷಣ ಸಿಗುತ್ತಿದ್ದ ಬಗ್ಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಗುರುಕುಲಗಳಿದ್ದ ಬಗ್ಗೆ ದಾಖಲೆ ಸಮೇತ ವಿವರಿಸಿದ್ದಾರೆ. ಅವರು ಬರೆದ ಬ್ಯುಟಿಫುಲ್ ಟ್ರೀ ಎಂಬ ಪುಸ್ತಕದಲ್ಲಿ ಇದರ ವಿವರಗಳಿವೆ ಎಂದು ಹೇಳಿದರು.

ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಇತಿಹಾಸ, ಪರಂಪರೆಯ ಆಧಾರದ ಮೇಲೆ ಭಾರತದ ಭವಿಷ್ಯವನ್ನು ರೂಪಿಸಲಿದೆ. ತನ್ನ ಬಗ್ಗೆ ವಿಶ್ವಾಸವಿಲ್ಲದ, ತನ್ನ ಇತಿಹಾಸದ ಬಗ್ಗೆ ಹೆಮ್ಮೆಯಿಲ್ಲದ ಸಮಾಜ ಜಗತ್ತಿಗೆ ಯಾವುದೇ ಕೊಡುಗೆ ನೀಡಲು ಸಾಧ್ಯವಿಲ್ಲ, ನಾವು ನಮ್ಮನ್ನು ಇಂಡಿಯನ್ ಎಂದು ಗುರುತಿಸಿಕೊಳ್ಳದೇ ಭಾರತೀಯ ಎಂದು ಗುರುತಿಸಿಕೊಂಡಾಗ ಮಾತ್ರ ನಮ್ಮ ಬಗ್ಗೆ ನಮಗೆ ಹೆಮ್ಮೆ ಬರಲು ಸಾಧ್ಯ. ಗ್ಲೋಬಲ್ ಆಗುವುದು ಅಂದರೆ, ಪಶ್ಚಿಮದ ಅನುಕರಣೆಯಲ್ಲ. ನಾವು ನಾವಾಗಿಯೇ ಇದ್ದರೂ ಗ್ಲೋಬಲ್ ಆಗಲು ಸಾಧ್ಯ. ಭಾರತ ತಾನು ಭಾರತವಾಗಿಯೇ ವಿಶ್ವಾಸದಿಂದ ಜಗತ್ತಿನ ಮುಂದೆ ತೆರೆದುಕೊಳ್ಳುತ್ತಿರುವುದರಿಂದ ಇಂದು ಭಾರತಕ್ಕೆ ಜಗತ್ತಿನೆಲ್ಲೆಡೆ ಗೌರವ ಸಲ್ಲುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಶೋಧಕ ಪ್ರೊ. ಜಿ. ಶಿವರಾಮಕೃಷ್ಣನ್ ಅವರು, ಚೆಂಗಲ್ಪಟ್ಟು ಪ್ರದೇಶದ ಬಗೆಗಿನ ಬ್ರಿಟಿಷ್ ಅಧ್ಯಯನದ ಕುರಿತು ಮಾತನಾಡಿದರು. ಹೈದರಾಬಾದಿನ ನಿಜಾಮನಿಂದ 1760 ರಲ್ಲಿ ಜಹಾಗೀರಾಗಿ ಚೆಂಗಲ್ಪಟ್ಟು ಪ್ರದೇಶ ಈಸ್ಟ್ ಇಂಡಿಯಾ ಕಂಪೆನಿಗೆ ಸಿಕ್ಕಿತು. ಬ್ರಿಟಿಷ್ ಇಂಜಿನಿಯರ್ ಬರ್ನಾರ್ಡ್ ಆ ಪ್ರದೇಶದ ಸಂಪೂರ್ಣ ಸರ್ವೇಕ್ಷಣೆ ಮಾಡಿ ಒಂದು ವಿಸ್ತೃತ ವರದಿ ತಯಾರಿಸಿದ. ಅಲ್ಲಿನ ಜನಸಂಖ್ಯೆಯ ರಚನೆ, ಸರ್ಕಾರಕ್ಕೆ ಬರಬಹುದಾದ ಆದಾಯ ಮೊದಲಾದ ಎಲ್ಲ ವಿವರ ಅದರಲ್ಲಿತ್ತು. ಗ್ರಾಮದಲ್ಲಿ ಬೆಳೆದ ಆಹಾರಧಾನ್ಯ ಬೇರೆ ಬೇರೆ ಜನರಿಗೆ ಯಾವ ಪ್ರಮಾಣದಲ್ಲಿ ಹಂಚಿಕೆಯಾಗುತ್ತಿತ್ತು ಎಂಬ ಸಂಪೂರ್ಣ ವಿವರ ಆ ವರದಿಯಲ್ಲಿದೆ. ಇಂತಹ 2,000 ಗ್ರಾಮಗಳ ವಿವರ ಆ ವರದಿಯಲ್ಲಿತ್ತು. ಅಲ್ಲಿನ ಜಾನುವಾರುಗಳ ವಿವರ, ಗ್ರಾಮದಲ್ಲಿ ಉತ್ಪಾದನೆಯಾಗುವ ದವಸ ಧಾನ್ಯಗಳ ಮಾಹಿತಿ ಅದರಲ್ಲಿತ್ತು. ಕೃಷಿ ಭೂಮಿಗೆ ಕೆರೆಯ ನೀರು ಬಿಡುವವರಿಗೆ, ಕ್ಷೌರಿಕರಿಗೆ, ಗುರುಕುಲಗಳಿಗೆ, ದೇವಸ್ಥಾನಗಳಿಗೆ, ಬ್ರಾಹ್ಮಣರಿಗೆ ಎಷ್ಟು ಧಾನ್ಯ ಹಂಚಿಕೆಯಾಗುತ್ತಿತ್ತು ಎಂಬ ವಿವರ ಇತ್ತು. ಪ್ರತಿ ಗ್ರಾಮದ 3 ಶೇಕಡಾ ಕಂದಾಯದ ಹಣ ನೀರಾವರಿಗೆ ಹೋಗುತ್ತಿತ್ತು. ಕೊಯ್ಲಿನ ಬಳಿಕ ಅದನ್ನು ಅಳೆಯುವ ಮೊದಲೇ ಕೆಲವರಿಗೆ ಧಾನ್ಯ ಹಂಚಿಕೆಯಾಗುತ್ತಿತ್ತು. ಅಳತೆ ಮಾಡಿದ ಮೇಲೆ ಶೇಕಡಾವಾರು ಪುನಃ ಕೆಲವರಿಗೆ ಹಂಚಿಕೆಯಾಗುತ್ತಿತ್ತು. ಚೆಂಗಲ್ಪಟ್ಟು ಪ್ರದೇಶದ ಗ್ರಾಮಗಳು ಕಾಂಚೀಪುರ ಹಾಗೂ ಕುಂಭಕೋಣಂ ದೇವಸ್ಥಾನಗಳಿಗೂ ಧಾನ್ಯ ಕೊಡುತ್ತಿದ್ದವು. ಸುಮಾರು 90 ಬೇರೆ ಬೇರೆ ರೀತಿಯ ಜನರಿಗೆ ಧಾನ್ಯ ಹಂಚಿಕೆಯಾಗುತ್ತಿತ್ತು. ಅವರೆಲ್ಲ ಆ ಗ್ರಾಮಗಳಿಗೆ ಬೇರೆ ಬೇರೆ ರೀತಿಯ ಸೇವೆ ಕೊಡುತ್ತಿದ್ದವರು. ಉಚಿತ ಕುಡಿಯುವ ನೀರಿನ ಅಥವಾ ಮಜ್ಜಿಗೆ ವ್ಯವಸ್ಥೆ ಮಾಡುತ್ತಿದ್ದವರಿಗೂ ಪ್ರತಿ ಹಳ್ಳಿಯಲ್ಲಿ ಧಾನ್ಯದ ಪಾಲು ಸಿಗುತ್ತಿತ್ತು. ಹೀಗೆ ಪ್ರಟಿ ಗ್ರಾಮವೂ ತನ್ನ ಗ್ರಾಮದ ಎಲ್ಲರಿಗೂ ಬೇಕಾದ ಆಹಾರ ಸಿಗುವ ವ್ಯವಸ್ಥೆ ಮಾಡುಕೊಂಡು ಸ್ವಾವಲಂಬಿಯಾಗಿರುತ್ತಿತ್ತು ಎಂದರು.

ಮೈಸೂರು ರಾಜ್ಯದಲ್ಲಿಯೇ 29,000 ಕೆರೆಗಳು ಇದ್ದವು ಎಂದು ಜಾನ್ ಸ್ಯಾಂಕಿ ಎಂಬ ಬ್ರಿಟಿಷ್ ಇಂಜಿನಿಯರ್ ವರದಿ ಹೇಳುತ್ತದೆ. ಕೆರೆಗಳು ಒಂದಕ್ಕೊಂದು ಸಂಪರ್ಕಗೊಂಡಿದ್ದವು. ಇನ್ನು ಹೆಚ್ಚಿನ ಕೆರೆಗಳನ್ನು ನಿರ್ಮಿಸುವ ಅಗತ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಕೆರೆ ನಿರ್ಮಾಣ ಆಗಿತ್ತು ಎಂದು ಜಾನ್ ಸ್ಯಾಂಕಿಯ 1866ರ ವರದಿ ಹೇಳುತ್ತದೆ. 

ಸ್ವತಃ ಗ್ರಾಮಗಳೇ ಇಂತಹ ವ್ಯವಸ್ಥೆಗಳನ್ನು ರೂಪಿಸಿಕೊಂಡಿದ್ದವು. ಇದನ್ನು ಯಾರೋ ಮಹಾರಾಜರು ರೂಪಿಸಿದ್ದಲ್ಲ. ಇಂತಹ ವ್ಯವಸ್ಥೆ ಹೋಗಿ ಇಂದು ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬನೆ ಬಂದಿದೆ. ತಮ್ಮ ಬಗ್ಗೆ ಮಾತ್ರವಲ್ಲದೇ ಎಲ್ಲರ ಬಗ್ಗೆ ಯೋಚನೆ ಮಾಡುತ್ತಿದ್ದ ಸಮಾಜ ನಮ್ಮಲ್ಲಿತ್ತು. ಇಂತಹ ಸ್ವಾವಲಂಬಿ ಗ್ರಾಮಗಳು, ನಗರಗಳೇ ಭಾರತದ ಭವಿಷ್ಯ. ಆ ಮಾದರಿಗೆ ನಾವು ಹಿಂತಿರುಗದೇ ಸುಸ್ಥಿರ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಹೇಳಿದರು. 

ಔರಂಗಜೇಬನ ಕಾಲದಲ್ಲೂ ಕೂಡಾ ಭಾರತದಲ್ಲಿನ ಹಳ್ಳಿಗಳ ಆದಾಯ ಎಲ್ಲವೂ ಅಲ್ಲಿಯೇ ವಿನಿಯೋಗವಾಗುತ್ತಿತ್ತು. ಎಲ್ಲವೂ ಕೇಂದ್ರದ ಬೊಕ್ಕಸಕ್ಕೆ ಬರುತ್ತಿರಲಿಲ್ಲ. ಶೇಕಡಾ ಒಂದರಷ್ಟು ಮಾತ್ರ ಕೇಂದ್ರಕ್ಕೆ ಬರುತ್ತಿತ್ತು. ಉಳಿದಿದ್ದು ಗ್ರಾಮಗಳಲ್ಲೇ ಖರ್ಚಾಗುತ್ತಿತ್ತು. ತಮಗೆ ಹೆಚ್ಚಿನ ಆದಾಯ ಬರಲಿ ಎಂಬ ದೃಷ್ಟಿಯಿಂದ ಬ್ರಿಟಿಷರು ಇಂತಹ ಸ್ವಾವಲಂಬಿ ಶ್ರೀಮಂತ ಗ್ರಾಮ ವ್ಯವಸ್ಥೆಯನ್ನು ಹಾಳುಗೆಡವಿ, ಎಲ್ಲ ಆದಾಯ ತಮಗೆ ಬರುವಂತಹ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಜಾರಿಗೆ ತಂದರು. ಇದರಿಂದ  ಸರ್ಕಾರದ ಮೇಲೆ ಅವಲಂಬನೆ ಹೆಚ್ಚಾಯಿತು ಎಂದು ವಿವರಿಸಿದರು.

ಮೂರನೇ ವರ್ಷದ ಮಂಗಳೂರು ಲಿಟ್ ಫೆಸ್ಟ್ ನ ಅಂಗವಾಗಿ ಬೆಂಗಳೂರಿನ ಜೈನ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಧರಂಪಾಲ್ ಜನ್ಮ ಶತಮಾನೋತ್ಸವದ ನಿಮಿತ್ತ ಧರಂಪಾಲ್ ಅವರ ಚಿಂತನೆಗಳು ಹಾಗೂ ನಾಳಿನ ಭಾರತ ಎಂಬ ವಿಷಯದ ಕುರಿತು ಈ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಯೋಜಿಸಲಾಗಿತ್ತು.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಅಮರನಾಥ್ ಯಾತ್ರೆಗೆ ಏಪ್ರಿಲ್ 1 ರಿಂದ ನೋಂದಣಿ ಆರಂಭ

Mon Mar 29 , 2021
ದಕ್ಷಿಣ ಕಾಶ್ಮೀರದ ಪ್ರಸಿದ್ಧ ಗುಹಾಂತರ ದೇವಾಲಯವಾದ ಅಮರನಾಥ ದೇಗುಲಕ್ಕೆ ಜಮ್ಮು-ಕಾಶ್ಮೀರ ಸರ್ಕಾರದ ವತಿಯಿಂದ ಪ್ರತೀ ವರ್ಷ ವಾರ್ಷಿಕ ಯಾತ್ರೆ ಕೈಗೊಳ್ಳಲಾಗುತ್ತದೆ. ಈ ವರ್ಷ ಕೈಗೊಳ್ಳಲು ಬರುವವರಿಗೆ ಏಪ್ರಿಲ್ 1ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ. ಕೋವಿಡ್ ಸಂಕಷ್ಟ ಹಾಗೂ ಭದ್ರತೆಯ ಸವಾಲುಗಳ ನಡುವೆ ಕೂಡ ಹಿಂದುಗಳ ಧಾರ್ಮಿಕ ಪವಿತ್ರ ಯಾತ್ರೆಗೆ ಚಾಲನೆ ನೀಡಲಾಗುತ್ತಿದೆ. ಜೂನ್ 28ರಿಂದ ಆಗಸ್ಟ್ 22ರವರೆಗೆ ಯಾತ್ರೆ ನಡೆಯಲಿದೆ. 3880 ಮೀಟರ್ ಎತ್ತರದಲ್ಲಿರುವ ಹಿಮಾಲಯದ ಕಣಿವೆಯಲ್ಲಿರುವ ಪವಿತ್ರ ಹಿಮಲಿಂಗ […]