ಪದಕಗಳನ್ನು ಹಿಡಿದ ಕೈಯಲ್ಲಿ ಬಂದೂಕು ಹಿಡಿದು ದೇಶಸೇವೆಗೆ ಹೊರಟ ಕುಂದಾಪುರದ ವಿದ್ಯಾ .ಎಚ್. ಗೌಡ

ಭಾರತೀಯ ಸೇನೆ ಎಂದಾಕ್ಷಣ ಎಂತವನಿಗಾದರೂ ರೋಮಾಂಚನವಾಗುತ್ತದೆ. ದೇಶ ಭಕ್ತಿಯ ಭಾವ ಸ್ಫುರಿಸುತ್ತದೆ. ಅದರಲ್ಲಿ ತಾನೂ ಕೆಲಸ ಮಾಡಬೇಕೆಂದು ಹಲವಾರು ಜನ ಕನಸು ಕಂಡು ಸತತ ಪ್ರಯತ್ನ ನಡೆಸುತ್ತಲೇ ಇರುತ್ತಾರೆ. ಆದರೂ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಯಾಕೆಂದರೆ ಭಾರತೀಯ ಸೇನೆ ಯುದ್ಧಕ್ಕೆ ನಿಂತರೆ ಹೇಗೆ‌ ಸುಲಭದ ತುತ್ತಲ್ಲವೋ ಹಾಗೆ ಅದಕ್ಕೆ ಆಯ್ಕೆಯಾಗುವುದು ಕೂಡ ಸುಲಭದ ಮಾತಲ್ಲ. ಅನೇಕ ಪರೀಕ್ಷೆಗಳಿಗೆ ಮೈಮನಸ್ಸನ್ನು ಒಡ್ಡಿ ತೇರ್ಗಡೆಯಾಗುವುದು ಸುಲಭ ಸಾಧ್ಯವೂ ಅಲ್ಲ. ಆದರೆ ಉಡುಪಿ ಜಿಲ್ಲೆಯ ಹೆಣ್ಣು ಮಗಳೋರ್ವಳು ತನ್ನ ಮೊದಲ ಯತ್ನದಲ್ಲಿಯೇ ಭಾರತೀಯ ಸೇನೆಯ ಬಿಎಸ್ಎಫ್ (B.S.F- Border Security Force)ಗೆ ಆಯ್ಕೆಯಾಗುವುದರ ಮೂಲಕ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.

ಸೇನೆಗೆ ಮಹಿಳೆಯರಿಗೂ ಅವಕಾಶ ಕಲ್ಪಿಸಿದ ಮೇಲೆ ಸೇನೆಗೆ ಸೇರುವ ಮಹಿಳೆಯರ ಸಂಖ್ಯೆ ಹೆಚ್ಚಾಗುತ್ತಿದ್ದು ಪ್ರಸಕ್ತ ಸಾಲಿನಲ್ಲಿ ಉಡುಪಿ ಜಿಲ್ಲೆಯಿಂದ ಆಯ್ಕೆಯಾದ ಏಕಮಾತ್ರ ಅಭ್ಯರ್ಥಿ ಈಕೆಯ ಹೆಸರು ವಿದ್ಯಾ .ಎಚ್. ಗೌಡ

ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಯಳಜಿತ ಎನ್ನುವ ಕುಗ್ರಾಮದಲ್ಲಿನ ಹುಣ್ಸೆಮಕ್ಕಿಯ ರಮೇಶ ಗೌಡ ಮತ್ತು ಪಾರ್ವತಿ ಎನ್ನುವ ಬಡ ಕೃಷಿಕ ದಂಪತಿಗಳ ೨ ಮಕ್ಕಳಲ್ಲಿ ವಿದ್ಯಾ ಕಿರಿಯವರು.  ಕೃಷಿಕರಾದರೂ ಬಡತನ ಮೈಮೇಲೆ ಹೊದ್ದುಕೊಂಡೇ ಇದ್ದರೂ ಮಕ್ಕಳ ವಿದ್ಯಾಭ್ಯಾಸ ಮತ್ತು ಅವರ ಆಸೆ ಕನಸುಗಳಿಗೆ ಪ್ರೇರಣೆಯಾಗಿ ನಿಂತ ತಂದೆಯೇ ನಾನು ಸೇನೆಗೆ ತಲುಪಲು ಕಾರಣ ಎಂದು ವಿದ್ಯಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಮಗಳು ಸೇನೆ ಸೇರುತ್ತಿರುವುದರ ಬಗ್ಗೆ ಖುಷಿಯಿದೆ. ನಾನು  ಹೆಚ್ಚು ಓದಿಲ್ಲ. ಆದರೆ ಮಕ್ಕಳು ಚನ್ನಾಗಿ ಕಲಿತು ಒಳ್ಳೆಯ ಕೆಲಸ ಪಡೆಯಲಿ ಎಂಬ ಆಸೆ ಇತ್ತು. ಅದರಂತೆ ಮಗಳು ಒಳ್ಳೆಯ ಶಿಕ್ಷಣ ಪಡೆದು ಸೇನೆಗೆ ಆಯ್ಕೆಯಾಗಿದ್ದಾಳೆ ಅದರ ಬಗ್ಗೆ ಹೆಮ್ಮೆಯಿದೆ.
ರಮೇಶ ಗೌಡ (ವಿದ್ಯಾಳ ತಂದೆ)

ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಯಳಜಿತದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದ ವಿದ್ಯಾ ಬಾಲ್ಯದಲ್ಲಿಯೇ ಕ್ರೀಡೆಯನ್ನು ಉಸಿರಾಗಿಸಿಕೊಂಡು ಬೆಳೆದವರು. ಈಕೆಯಲ್ಲಿ ಚಿಗುರುತ್ತಿದ್ದ ಕ್ರೀಡಾ ಪ್ರತಿಭೆಯನ್ನು ನೀರೆರೆದು ಪ್ರೋತ್ಸಾಹಿಸಿದವರು ದೈಹಿಕ ಶಿಕ್ಷಕಿ ಜ್ಯೋತಿ H.S ಅವರು.  7& 8 ನೇ ತರಗತಿಯಲ್ಲಿಯೇ ಅಥ್ಲೇಟಿಕ್ಸ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾ ಅಲ್ಲಿಂದ ತಿರುಗಿ ನೋಡಲೇ ಇಲ್ಲ.

ಮುಂದೆ ಕೊಲ್ಲೂರಿನ ಮೂಕಾಂಬಿಕಾ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಮುಂದುವರಿಸಿ ದೈಹಿಕ ಶಿಕ್ಷಕರಾದ ಸಚಿನ್ ಶೆಟ್ಟಿ ಅವರ ಸಮರ್ಥ ಮಾರ್ಗದರ್ಶನದಲ್ಲಿ ಪಳಗಿ ನೆಟ್ ಬಾಲ್ ನಲ್ಲಿ ರಾಜ್ಯ ರಾಷ್ಟ್ರ ಮಟ್ಟದವನ್ನು ಪ್ರತಿನಿಧಿಸುತ್ತಾರೆ.

ಸರ್ಕಾರಿ ಪದವಿ ಪೂರ್ವ ಕಾಲೇಜು ಕುಂದಾಪುರದಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಬಿಎಸ್ಸಿ ಪದವಿ ಓದಿದ ವಿದ್ಯಾ ಈ ಅವಧಿಯಲ್ಲಿ ಕೂಡ ನೆಟ್ ಬಾಲ್ ಮತ್ತು ಪೋಲ್ ವಾಲ್ಟ್ ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾಗುತ್ತಾರೆ‌.

ಹೀಗೆ ನೆಟ್ ಬಾಲ್ ನಲ್ಲಿ 5 ಬಾರಿ ರಾಜ್ಯಮಟ್ಟ ಹಾಗೂ ಒಂದು ಬಾರಿ ರಾಷ್ಟ್ರಮಟ್ಟವನ್ನು ಪ್ರತಿನಿಧಿಸಿದರೆ ಮಂಗಳೂರು ಯೂನಿವರ್ಸಿಟಿ ಯ ಅಂತರಾಷ್ಟ್ರೀಯ ನೆಟ್ ಬಾಲ್ ಕ್ಯಾಂಪ್ ನಲ್ಲಿ ಭಾಗವಹಿಸಿದ ಕೀರ್ತಿ ಕೂಡ ಇವರದ್ದು. ಅಥ್ಲೇಟಿಕ್ಸ್ ನಲ್ಲಿ ೬ ಬಾರಿ ರಾಜ್ಯಮಟ್ಟವನ್ನು ಪ್ರತಿನಿಧಿಸಿ ಪೋಲ್ ವಾಲ್ಟ್ ನಲ್ಲಿ ರಾಜ್ಯಮಟ್ಟದಲ್ಲಿ ಕಂಚಿನ ಪದಕ ಪಡೆದ ವಿದ್ಯಾ, ಎರಡು ಬಾರಿ ಜಿಲ್ಲಾ ಮಟ್ಟದ ವೈಯಕ್ತಿಕ ಚಾಂಪಿಯನ್, ನಾಲ್ಕು ಬಾರಿ ತಾಲ್ಲೂಕು ಮಟ್ಟದ ವೈಯಕ್ತಿಕ ಚಾಂಪಿಯನ್ ಅಲ್ಲದೇ B.ed  ಇಲಾಖೆ ನಡೆಸಿದ ಯೂನಿವರ್ಸಿಟಿ ಕ್ರೀಡಾಕೂಟದಲ್ಲಿ ವೈಯಕ್ತಿಕ ಚಾಂಪಿಯನ್ ಆಗಿ ಹೊರಹಿಮ್ಮಿದ್ದಾರೆ.

“ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮಿಂಚುತ್ತಿದ್ದಾಳೆ. ಹಾಗೆ ಸೇನೆಗೆ ಸೇರಬೇಕೆಂಬುದು ಕೂಡ ನನ್ನಂತ ಹಲವಾರು ಹುಡುಗಿಯರ ಕನಸು. ಆದರೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಅದಕ್ಕಾಗಿ ಶ್ರಮವಹಿಸಿದರೆ ಅದು ಕಷ್ಟವೂ ಅಲ್ಲ. ಕುಗ್ರಾಮದ ಹಳ್ಳಿಯ ರೈತನೊಬ್ಬನ ಮಗಳಾಗಿ ಮೊದಲ ಪ್ರಯತ್ನದಲ್ಲಿಯೇ ಇಡೀ ಜಿಲ್ಲೆಗೆ ಒಬ್ಬಳಾಗಿ ಆಯ್ಕೆಯಾಗಿದ್ದರ ಬಗ್ಗೆ ಅತೀವ ಹೆಮ್ಮೆಯಿದೆ.  ದೇಶದ ರಕ್ಷಣೆಯ ಕಾರ್ಯದಲ್ಲಿ ಸೇನೆಯಲ್ಲಿ ಒಬ್ಬಳಾಗಿ ದೇಶಕಾರ್ಯಕ್ಕೆ ಅಳಿಲು ಸೇವೆ ಸಲ್ಲಿಸಲು ಕಾತರದಿಂದ ಕಾಯುತ್ತಿರುವೆ.”

– ವಿದ್ಯಾ ಎಚ್ ಗೌಡ

ಹೀಗೆ ಕ್ರೀಡೆಯಲ್ಲಿ ಅನೇಕ ಸಾಧನೆ ಮಾಡಿ ಹಲವಾರು ಪದಕ ಪ್ರಶಸ್ತಿಗಳನ್ನು ಬಾಚಿಕೊಂಡ ದೈತ್ಯ ಪ್ರತಿಭೆ ಕರ್ನಾಟಕ ಸರ್ಕಾರದ ಕ್ರೀಡಾ ಇಲಾಖೆ ಕ್ರೀಡಾ ಸಾಧಕರಿಗೆ ಕೊಡುವ  ಚೈತ್ರದ ಚಿಗುರು ಪ್ರಶಸ್ತಿಗೂ ೨೦೨೦ ರಲ್ಲಿ ಭಾಜನರಾಗಿದ್ದಾರೆ.

B.ed  ಮಾಡಿರುವ ವಿದ್ಯಾ ಅವರಿಗೆ ಅಧ್ಯಾಪನ ವೃತ್ತಿ ಕೈಬೀಸಿ ಕರೆಯುತ್ತಿದ್ದರೂ, ತನ್ನ ಪ್ರೀತಿಯ ಕ್ರೀಡಾಕ್ಷೇತ್ರದಲ್ಲಿ ಅವಕಾಶದ ಬಾಗಿಲು ತೆಗೆದೇ ಇದ್ದರೂ ಇದೆಲ್ಲವನ್ನು ದಾಟಿ ತಾಯಿ ಭಾರತಿಯ ಸೇವೆಗಾಗಿ ಪದಕಗಳನ್ನು ಹಿಡಿದ ಕೈಯಲ್ಲಿ ಬಂದೂಕು ಹಿಡಿಯಲು ಹೊರಟಿದ್ದಾರೆ.

ಯವ್ವನದ ವಯಸ್ಸಿನಲ್ಲಿ ಕನಸುಗಳ ಮೂಟೆ ಹೊತ್ತು ಚಂದದ ಬದುಕು ನಮ್ಮದಾಗಬೇಕೆಂಬ ಆಸೆಯಿಂದ ಓಡುತ್ತಿರುವ ಇಂದಿನ ಯುವ ಸಮೂಹದ ಮದ್ಯದಿಂದ ದೇಶಕ್ಕಾಗಿ ಸರ್ವಸ್ವ ಎನ್ನು ಭಾವ ಹೊತ್ತು ಹಳ್ಳಿಯ ಮೂಲೆಯಿಂದ ದೇಶದ ಗಡಿಯ ಭಾಗಕ್ಕೆ ನಡೆಯುವ ಕಲ್ಲುಮುಳ್ಳಿನ ಹಾದಿಯನ್ನು ಆಯ್ಕೆ ಮಾಡಿಕೊಂಡ ವಿದ್ಯಾ ಎಚ್. ಗೌಡ ಇಂದಿನ ಯುವ ಪೀಳಿಗೆಗೆ ಮಾದರಿಯಾಗಿ ನಿಂತಿದ್ದಾರೆ.

ದೇಶದ ರಕ್ಷಣೆಗೆ ಕಟಿಬದ್ಧವಾಗಿ ನಿಂತಿರುವ ಸೇನೆಯಲ್ಲಿ ತಾನು ಒಬ್ಬಳಾಗಿ ತನ್ನಿಂದಾದ ಅಳಿಲು ಸೇವೆಯನ್ನು ಮಾಡಿ ದೇಶಸೇವೆಯೆಂಬ ಬಹುದೊಡ್ಡ ಯಜ್ಞದಲ್ಲಿ  ಸಮಿಧೆಯಾಗಬೇಕೆಂಬುದು ವಿದ್ಯಾ ಅವರ ಮಾತು. ಅದರ ಸಾಕಾರಕ್ಕಾಗಿ ತರಬೇತಿಗಾಗಿ ಗ್ವಾಲಿಯರ್ ಗೆ ಹೊರಟಿದ್ದಾರೆ.  ಅವರಿಗೆ ಶುಭವಾಗಲಿ ಎನ್ನುವುದಷ್ಟೇ ನಮ್ಮ ಹರಕೆ ಹಾರೈಕೆ.

ಪ್ರಶಾಂತ್ ಅರೆಶಿರೂರು.

ಕೃಷಿಕರು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಸೂಪರ್ ಸ್ಟಾರ್ ರಜನಿಕಾಂತ್ ಗೆ 2021ರ ಸಾಲಿನ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ

Thu Apr 1 , 2021
ದಕ್ವಿಣ ಭಾರತದ ಖ್ಯಾತ ನಟ ರಜನಿಕಾಂತ್​ಗೆ ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ಘೋಷಿಸಿದೆ. ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪಡೆದ 51ನೇ ಚಲನಚಿತ್ರ ಕಲಾವಿದ ಎಂಬ ಹೆಗ್ಗಳಿಕೆಗೆ ರಜನಿಕಾಂತ್​ ಪಾತ್ರರಾಗಿದ್ಧಾರೆ. ಗಾಯಕಿ ಆಶಾ ಭೋಸ್ಲೆ, ನಿರ್ದೇಶಕ ಸುಭಾಷ್‌ ಘಾಯ್‌, ನಟ ಮೋಹನ್‌ ಲಾಲ್‌, ಸಂಗೀತ ಸಂಯೋಜಕ ಶಂಕರ್‌ ಮಹದೇವನ್ ಅವರು 2020ನೇ ಸಾಲಿನ ದಾದಾಸಾಹೇಬ್‌ ಫಾಲ್ಕೆ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿದ್ದರು. 2019ನೇ ಸಾಲಿನ 51ನೇ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ದಕ್ಷಿಣ ಭಾರತದ ಖ್ಯಾತ […]