ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶದ ನಂತರ ನಡೆದ ಅನಿಯಂತ್ರಿತ ಹಿಂಸಾಚಾರಕ್ಕೆ ಆರೆಸ್ಸೆಸ್ ಖಂಡನೆ. ಇದೊಂದು ನಿಯೋಜಿತ ಕೃತ್ಯ

ರಾಷ್ಟ್ರೀಯ ಸ್ವಯಂಸೇವಕ ಸಂಘ, ಮೇ 7, 2021

ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರ ಪತ್ರಿಕಾ ಹೇಳಿಕೆ

ಪ್ರಜಾಪ್ರಭುತ್ವದಲ್ಲಿ ಚುನಾವಣೆಗಳಿಗೆ ಮಹತ್ವದ ಪಾತ್ರವಿದೆ. ಈ ಸಂಪ್ರದಾಯದಂತೆ ಇತ್ತೀಚೆಗೆ ಪಶ್ಚಿಮ ಬಂಗಾಳದ ವಿಧಾನಸಭೆಗೆ ಮತದಾನ ನಡೆಸಲಾಯಿತು. ಇದರಲ್ಲಿ ಬಂಗಾಳದ ಇಡೀ ಸಮಾಜವು ಭಾಗವಹಿಸಿದೆ. ಎದುರಾಳಿಗಳ ವಿರುದ್ಧ ಆರೋಪಗಳನ್ನು ಮತ್ತು ಪ್ರತ್ಯಾರೋಪ ಮಾಡುವಾಗ ಕೆಲವೊಮ್ಮೆ ಮಿತಿಗಳನ್ನು ಮೀರುವುದು ಸಹಜ.

ಸ್ಪರ್ಧಿಸುವ ಎಲ್ಲ ಪಕ್ಷಗಳೂ ನಮ್ಮ ದೇಶಕ್ಕೆ ಸೇರಿದವುಗಳೇ ಆಗಿವೆ. ಮತ್ತು ಚುನಾವಣೆಯಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳು, ಅವರ ಬೆಂಬಲಿಗರು, ಮತದಾರರು ಈ ರಾಷ್ಟ್ರದ ನಾಗರಿಕರು ಎಂಬುದನ್ನು ನಾವು ಯಾವಾಗಲೂ ನೆನಪಿನಲ್ಲಿಡಬೇಕು.

ಚುನಾವಣಾ ಫಲಿತಾಂಶಗಳು ಹೊರಬರುತ್ತಿದ್ದಂತೆಯೇ ರಾಜ್ಯವ್ಯಾಪಿ ನಡೆದ ಹಿಂಸಾಚಾರವು ಅತ್ಯಂತ ಖಂಡನೀಯ ಮತ್ತು ಇದು ವ್ಯವಸ್ಥಿತ ಸಂಚಿನಂತೆ ಕಂಡುಬರುತ್ತಿದೆ.

ಈ ಅಸಹ್ಯಕರ ಹಿಂಸಾಚಾರದಲ್ಲಿ ಸಕ್ರಿಯವಾಗಿರುವ ಸಾಮಾಜವಿರೋಧಿ ಶಕ್ತಿಗಳು ಮಹಿಳೆಯರೊಂದಿಗೆ ಅತ್ಯಂತ ಅನಾಗರಿಕ ಮತ್ತು ತುಚ್ಛವಾಗಿ ವರ್ತಿಸಿದವು. ಮುಗ್ಧ ಜನರನ್ನು ಕ್ರೂರವಾಗಿ ಕೊಂದು ಮನೆಗಳನ್ನು ಸುಟ್ಟುಹಾಕಿತು. ನಾಚಿಕೆಯಿಲ್ಲದೆ ಅಂಗಡಿಗಳು ಮತ್ತು ಮಾಲ್ಗಳನ್ನು ಲೂಟಿ ಮಾಡಿತು. ಅವ್ಯಾಹತವಾಗಿ ನಡೆದ ಈ ಹಿಂಸಾಚಾರದಿಂದಾಗಿ ಸಾವಿರಾರು ಜನರು, ಅದರಲ್ಲಿಯೂ ಮುಖ್ಯವಾಗಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದ ಸಹೋದರರು ಆಶ್ರಯಹೀನರಾಗಿದ್ದಾರೆ. ಅವರ ಜೀವ ಮತ್ತು ಗೌರವವನ್ನು ಉಳಿಸಿಕೊಳ್ಳಲು ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯವನ್ನು ಹುಡುಕಬೇಕಾಗಿದೆ. ಕೂಚ್‌ ಬೆಹಾರ್‌ ನಿಂದ ಸುಂದರ್‌ ಬನ್ಸ್ ವರೆಗೆ ಎಲ್ಲೆಡೆ ಸಾಮಾನ್ಯ ಜನರಲ್ಲಿ ವ್ಯಾಪಕ ಭಯದ ವಾತಾವರಣ ನಿರ್ಮಾಣವಾಗಿದೆ.

ಈ ಭೀಕರ ಹಿಂಸಾಚಾರವನ್ನು ಆರ್‌ಎಸ್‌ಎಸ್ ತೀವ್ರವಾಗಿ ಖಂಡಿಸುತ್ತದೆ. ಚುನಾವಣಾ ಫಲಿತಾಂಶದ ನಂತರ ನಡೆದ ಈ ಹಿಂಸಾಚಾರವು ಸಹಬಾಳ್ವೆ ಮತ್ತು ಎಲ್ಲರ ಅಭಿಪ್ರಾಯಕ್ಕೆ ಗೌರವ ನೀಡುವ ಭಾರತೀಯ ಸಂಪ್ರದಾಯಕ್ಕೆ ವಿರುದ್ಧವಾಗಿದೆ. ಹಾಗೆಯೇ ಇದು ಪ್ರಜಾಪ್ರಭುತ್ವದ, ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ.

ಈ ಹಿಂಸಾಚಾರವನ್ನು ಹತ್ತಿಕ್ಕುವಲ್ಲಿ ಪಶ್ಚಿಮ ಬಂಗಾಳದ ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದೆ ಮತ್ತು ಅದು ಮೂಖ ಪ್ರೇಕ್ಷಕನಂತೆ ವರ್ತಿಸುತ್ತಿರುವುದು ಈ ತಡೆರಹಿತ ಅಮಾನವೀಯ ಹಿಂಸಾಚಾರದ ಅತ್ಯಂತ ಘೋರ ಭಾಗವಾಗಿದೆ. ಒಂದೆಡೆ ಹಿಂಸಾಚಾರವನ್ನು ನಿಯಂತ್ರಿಸಲು ರಾಜ್ಯ ಪೊಲೀಸರು ಮತ್ತು ಆಡಳಿತವು ಯಾವುದೇ ಉಪಕ್ರಮ ಕೈಗೊಳ್ಳದೇ ಕುಳಿತಿದ್ದರಿಂದಾಗಿ ಇನ್ನೊಂದೆಡೆ ಗಲಭೆಕೋರರು ಯಾವುದಕ್ಕೂ ಹೆದರುವಂತೆ ಕಾಣುತ್ತಿಲ್ಲ.

ಯಾವುದೇ ಪಕ್ಷ ಅಥವಾ ವ್ಯಕ್ತಿ ಅಧಿಕಾರದಲ್ಲಿದ್ದರೂ  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಮೂಲಕ ಸಮಾಜದಲ್ಲಿ ಶಾಂತಿ ಮತ್ತು ಸುರಕ್ಷತೆಯನ್ನು ಸ್ಥಾಪಿಸುವುದು, ಸಾಮಾಜಿಕ ವಿರೋಧಿ ಶಕ್ತಿಗಳಿಗೆ ಕಾನೂನಿನ ಭಯವನ್ನು ಹುಟ್ಟುಹಾಕುವುದು ಮತ್ತು ಹಿಂಸಾತ್ಮಕ ಚಟುವಟಿಕೆಗಳಲ್ಲಿ ತೊಡಗಿರುವವರನ್ನು ಶಿಕ್ಷಿಸುವುದು ಆಡಳಿತ ಯಂತ್ರದ ಪ್ರಮುಖ ಜವಾಬ್ದಾರಿಯಾಗಿದೆ. ಚುನಾವಣಾ ಗೆಲುವು ರಾಜಕೀಯ ಪಕ್ಷಗಳಿಗೆ ಸೇರಿದೆ. ಆದರೆ ಚುನಾಯಿತ ಸರ್ಕಾರವು ಇಡೀ ಸಮಾಜಕ್ಕೆ ಜವಾಬ್ದಾರನಾಗಿರುತ್ತದೆ.

ಪಶ್ಚಿಮ ಬಂಗಾಳದ ಹೊಸದಾಗಿ ಚುನಾಯಿತವಾದ ಸರ್ಕಾರವು ತನ್ನ ಮೊದಲ ಆದ್ಯತೆಯಾಗಿ ಕಾನೂನಿನ ಪರಿಣಾಮಕಾರಿ ಬಳಕೆಯ ಮೂಲಕ ತಕ್ಷಣವೇ ಹಿಂಸಾಚಾರವನ್ನು ಹತ್ತಿಕ್ಕಬೇಕು. ಯಾವುದೇ ವಿಳಂಬ ಮಾಡದೇ ಅಪರಾಧಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವ ಮೂಲಕ ಪ. ಬಂಗಾಳದ ಜನರಲ್ಲಿ ಸುರಕ್ಷತೆ ಮತ್ತು ವಿಶ್ವಾಸದ ಭಾವನೆಯನ್ನು ಹುಟ್ಟುಹಾಕಬೇಕು. ಪೀಡಿತ ಜನರಲ್ಲಿ ವಿಶ್ವಾಸ ತುಂಬುವ ಮತ್ತು ಅವರ ಪುನರ್ವಸತಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಸರ್ಕಾರವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಒತ್ತಾಯಿಸುತ್ತದೆ. ಹಾಗೂ ಪ. ಬಂಗಾಳದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಸ್ಥಾಪಿಸಲು ಅಗತ್ಯ ಮತ್ತು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಮತ್ತು ರಾಜ್ಯ ಸರ್ಕಾರವು ಮೇಲಿನ ದಿಕ್ಕಿನಲ್ಲಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕೆಂದು ನಾವು ಕೇಂದ್ರ ಸರ್ಕಾರವನ್ನು ಕೋರುತ್ತೇವೆ.

ಬಿಕ್ಕಟ್ಟಿನ ಈ ಸಮಯದಲ್ಲಿ ಹಿಂಸಾಚಾರದಿಂದ ನೊಂದಿರುವ ಜನರಲ್ಲಿ ನಂಬಿಕೆ ಮತ್ತು ವಿಶ್ವಾಸವನ್ನು ಹುಟ್ಟುಹಾಕಲು ದೇಶದ ಎಲ್ಲಾ ಬುದ್ಧಿಜೀವಿಗಳು, ಸಾಮಾಜಿಕ-ಧಾರ್ಮಿಕ ಮತ್ತು ರಾಜಕೀಯ ನಾಯಕರು ಈ ಘಟನೆಯನ್ನು ಕಠಿಣ ಶಬ್ದಗಳಲ್ಲಿ ಖಂಡಿಸಬೇಕು ಮತ್ತು ಶಾಂತಿ, ಸದ್ಭಾವನೆ ಮತ್ತು ಸಾಮರಸ್ಯದ ವಾತಾವರಣ ನಿರ್ಮಾಣವಾಗಲು ನೆರವಾಗುವಂತೆ ಆರೆಸ್ಸೆಸ್ ಮನವಿ ಮಾಡುತ್ತದೆ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮಾನಸಿಕ ಒತ್ತಡ, ಖಿನ್ನತೆ ನಿವಾರಣೆಗೆ ಉಚಿತ ಆಪ್ತ ಸಮಾಲೋಚನೆ

Sat May 8 , 2021
ನಿಮ್ಮ ಜೊತೆಗೆ ಇದೆ ಆಪ್ತ ಸಲಹಾ ಕೇಂದ್ರ ಇಂದಿನ ಕೋವಿಡ್ ವಾತಾವರಣದಲ್ಲಿ ಜನರ ಜೀವನ ಅಸ್ತವ್ಯಸ್ತವಾಗಿದೆ. ಅನೇಕರು ತಮ್ಮ ಹತ್ತಿರದ ಬಂಧುಗಳನ್ನು ಕಳೆದುಕೊಂಡಿದ್ದಾರೆ ಅಥವಾ ಕೋವಿಡ್ ನ ಕಾರಣದಿಂದ ಅನೇಕ ಕಷ್ಟಗಳನ್ನು ಅನುಭವಿಸಿದ್ದಾರೆ. ತುಂಬಾ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಕೌಟುಂಬಿಕ ತೊಂದರೆಯನ್ನು ಇನ್ನೂ ಕೆಲವರು ಅನುಭವಿಸುತ್ತಿದ್ದಾರೆ. ವಿದ್ಯಾರ್ಥಿಗಳು ನಿಯಮಿತ ಶಾಲೆ – ಕಾಲೇಜಿಗೆ ಹೋಗಲು ಅಸಮರ್ಥರಾಗಿ ಖಿನ್ನತೆಯನ್ನು ಅನುಭವಿಸುತ್ತಿದ್ದಾರೆ ಮತ್ತು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅನೇಕರು ಮಾನಸಿಕ […]