ಮನಸ್ಸು ಪಾಸಿಟಿವ್‌ ಆಗಿರಲಿ, ಶರೀರ ಕೊರೊನಾದಿಂದ ನೆಗೆಟಿವ್‌ ಆಗಿರಲಿ : ಡಾ. ಮೋಹನ್‌ ಭಾಗವತ್‌

ಕೊರೊನಾ ರೆಸ್ಪಾನ್ಸ್‌ ಟೀಮ್‌ ಆಶ್ರಯದಲ್ಲಿ “ಪಾಸಿಟಿವಿಟಿ ಅನ್‌ಲಿಮಿಟೆಡ್‌ – ನಾವು ಗೆದ್ದೇ ಗೆಲ್ಲುತ್ತೇವೆ” ಎನ್ನುವ ಶೀರ್ಷಿಕೆಯಲ್ಲಿ ನಡೆಯುತ್ತಿರುವ ಉಪನ್ಯಾಸ ಮಾಲಿಕೆಯ ಐದನೆಯ ಹಾಗೂ ಕೊನೆಯ ಕಂತಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ ಮೋಹನ್‌ ಭಾಗವತ್‌ ಅವರು ಉಪನ್ಯಾಸ ನೀಡಿದರು

ಡಾ ಮೋಹನ್‌ ಭಾಗವತ್‌ ಅವರ ಉಪನ್ಯಾಸದ ಕನ್ನಡ ಅನುವಾದ ಹೀಗಿದೆ

ಸಕಾರಾತ್ಮಕತೆಯ ಕುರಿತು ಮಾತನಾಡಲು ನನಗೆ ತಿಳಿಸಲಾಗಿದೆ. ಕಠಿಣ ಕಾರ್ಯ, ಏಕೆಂದರೆ ಈಗ ಸಂಕಷ್ಟದ ಸಮಯ ನಡಯುತ್ತಿದೆ. ಅನೇಕ ಪರಿವಾರಗಳು ತಮ್ಮವರನ್ನು ಕಳೆದುಕೊಂಡಿವೆ. ಅನೇಕ ಪರಿವಾರಗಳಲ್ಲಿ ಕುಟುಂಬದ ಪಾಲನೆ ಮಾಡುತ್ತಿರುವ ಸದಸ್ಯರೇ ಹೋಗಿಬಿಟ್ಟಿದ್ದಾರೆ. ಹಾಗಾಗಿ ತಮ್ಮವರನ್ನು ಕಳೆದುಕೊಂಡಿರುವ ದುಃಖ ಮತ್ತು ಭವಿಷ್ಯದ ಬದುಕಿನ ಚಿಂತೆ ಇವುಗಳ ಮಧ್ಯೆ ಸಲಹೆ ಸೂಚನೆ ನೀಡುವುದಕ್ಕಿಂತ ಸಾಂತ್ವನ ಹೇಳುವುದು ಅಗತ್ಯ. ಆದರೆ ಇದು ಸಾಂತ್ವನಕ್ಕಿಂತ ಮೀರಿದ ದುಃಖ. ಇಲ್ಲಿ ನಮ್ಮನ್ನು ನಾವೇ ಸಂಭಾಳಿಸಿಕೊಳ್ಳಬೇಕಾಗುತ್ತದೆ. ನಾವೂ ಕೂಡ ಸಾಂತ್ವನ ಹೇಳುತ್ತಿದ್ದೇವೆ, ಕೇವಲ ಸಾಂತ್ವನವಷ್ಟೇ ಅಲ್ಲ ಸಂಘದ ಸ್ವಯಂಸೇವಕರು ಎಲ್ಲ ಕಡೆಗಳಲ್ಲಿ ಈ ಸಮಯದಲ್ಲಿ ಸಮಾಜದ ಅಗತ್ಯವನ್ನು ಪೋರೈಸುವ ಕಾರ್ಯದಲ್ಲಿ ತಮ್ಮ ತಮ್ಮ ಶಕ್ತಿಗನುಸಾರ ತೊಡಗಿಸಿಕೊಂಡಿದ್ದಾರೆ.

ನಮ್ಮವರನ್ನು ಕಳೆದುಕೊಳ್ಳಬೇಕಾದ ಕಠಿಣ ಪರಿಸ್ಥಿತಿಯಲ್ಲಿ ನಾವು ಇಂದು ಇದ್ದೇವೆ. ಹೋದವರು ಒಂದು ರೀತಿಯಲ್ಲಿ ಮುಕ್ತರಾದರು, ಏಕೆಂದರೆ ಅವರಿಗೆ ಈಗಿನ ಪರಿಸ್ಥಿತಿಯನ್ನು  ಎದುರಿಸಬೇಕಾದ ಸನ್ನಿವೇಶವಿಲ್ಲ. ಆದರೆ ನಾವು ಎದುರಿಸಬೇಕು, ನಮ್ಮನ್ನು ರಕ್ಷಿಸಿಕೊಳ್ಳಬೇಕು ಹಾಗೂ ನಮ್ಮವರನ್ನು ರಕ್ಷಿಸಬೇಕು. ಹಾಗಾಗಿ ನಮಗೆ ಋಣಾತ್ಮಕತೆ ಬೇಡ. ಅದರರ್ಥ ಏನೂ ಆಗಿಲ್ಲ ಎಲ್ಲವೂ ಸರಿ ಇದೆ ಎಂದು ಹೇಳುತ್ತಿಲ್ಲ. ಕಠಿಣ ಸನ್ನಿವೇಶವಿದೆ, ವ್ಯಾಕುಲಗೊಳಿಸುವಂತಹ, ಹತಾಶೆಗೊಳಿಸುವ ಪರಿಸ್ಥಿತಿ ಇದೆ. ಆದರೆ ಇಂತಹ ಪರಿಸ್ಥಿತಿ ಇದೆ ಎನ್ನುವುದನ್ನು ಒಪ್ಪಿಕೊಂಡು ನಾವು ನಮ್ಮ ಮನಸ್ಸನ್ನು ಋಣಾತ್ಮಕಗೊಳಿಸಲು ಬಿಡಬಾರದು. ನಮ್ಮ ಮನಸ್ಸನ್ನು ಪಾಸಿಟಿವ್‌ ಆಗಿರಿಸಬೇಕು, ಶರೀರವನ್ನು ಕೊರೊನಾದಿಂದ ನೆಗೆಟಿವ್‌ ಆಗಿರಿಸಬೇಕು.

ಮೊದಲನೆಯ ಪ್ರಮುಖ ವಿಷಯ ಮನಸ್ಸಿನದು. ನಮ್ಮ ಮನಸ್ಸು ಆಯಾಸಗೊಂಡು ಸೋತಿತು ಅಂತಾದರೆ ಹಾವಿನ ಬಾಯಿಯಲ್ಲಿ ಏನೂ ಮಾಡದೇ ಸೋತು ಹೋಗುವ ಇಲಿಯ ಪರಿಸ್ಥಿತಿ ಉಂಟಾಗುತ್ತದೆ. ತನ್ನನ್ನು ರಕ್ಷಿಸಿಕೊಳ್ಳುವ ಪ್ರಯತ್ನವನ್ನೇ ಮಾಡದೇ ಸೋಲುತ್ತದೆ. ನಾವು ಹಾಗಾಗಲು ಬಿಡಬಾರದು, ನಮ್ಮ ಸ್ಥಿತಿಯೂ ಹಾಗಿಲ್ಲ. ಇಡೀ ಚಿತ್ರಣವನ್ನು ಗಮನಿಸಿದರೆ ಎಷ್ಟು ದುಃಖವಿದೆಯೋ ಅಷ್ಟೇ ಭರವಸೆಯೂ ಇದೆ. ಇಂತಹ ಸಮಯದಲ್ಲಿ ಸಮಾಜದ ಕೆಲವು ವಿಕೃತಿಗಳು ಹೊರಬರುತ್ತವೆ ಎನ್ನುವುದು ಸರಿ, ಆದರೆ ಅದಕ್ಕಿಂತ ಹೆಚ್ಚು ಸಮಾಜದ ಒಳ್ಳೆಯತನ ಪ್ರಕಟಗೊಳ್ಳುತ್ತಿವೆ.  ವಿವಿಧ ವರ್ಗಗಳ, ಎಲ್ಲ ಆರ್ಥಿಕ ಸ್ತರಗಳ ಜನರು ಇದು ಸಮಾಜದ ಮೇಲೆ ಎರಗಿರುವ ಸಂಕಟ ಎನ್ನುವುದನ್ನು ಅರಿತುಕೊಂಡು ತಮ್ಮ ರಕ್ಷಣೆಯನ್ನು ಮಾಡಿಕೊಳ್ಳುವುದರ ಜೊತೆಗೆ ತಮಗೆ ಶಕ್ಯವಿದ್ದಷ್ಟು ಮಟ್ಟಿಗೆ ಸಮಾಜದ ನೆರವಿಗೂ ಧಾವಿಸಿದ್ದಾರೆ. ತಮ್ಮ ಸಮಸ್ಯೆಯನ್ನು ಮರೆತು ಇನ್ನೊಬ್ಬರ ಸಹಾಯಕ್ಕೆ ನಿಲ್ಲುವ ಅನೇಕ ಉದಾಹರಣೆಗಳು ನಡೆದಿವೆ. ಇದನ್ನು ನಾವು ಗಮನಿಸಬೇಕು.  ಇದು ನಿರಾಶೆಯ ಪರಿಸ್ಥಿತಿಯಲ್ಲ, ಹೋರಾಡುವ ಸಂದರ್ಭ. ಕಠಿಣ ಸನ್ನಿವೇಶ ಹೌದು ಆದರೆ ಸನ್ನಿವೇಶ ನಮ್ಮ ಮನಸ್ಸಿನ ಭಾವನೆಯ ಮೇಲೆ ಅವಲಂಬಿಸಿದೆ.

ಈ ನಿರಾಶೆ, ಪ್ರತಿದಿನ ಹತ್ತಾರು ಪರಿಚಿತ ಅಪರಿಚಿತರ ಮೃತ್ಯುವಿನ ಸುದ್ದಿಯನ್ನು ಕೇಳುವುದು, ಮಾಧ್ಯಮದ ಮೂಲಕ ಪರಿಸ್ಥಿತಿ ಗಂಭೀರ ವಿಕಾರ ಇತ್ಯಾದಿ ಘೋಷಣೆಗಳನ್ನು ಕೇಳುವುದು ಇವುಗಳು ನಮ್ಮ ಮನಸ್ಸನ್ನು ಉದಾಸಗೊಳಿಸುವವೇ? ದುಃಖಿತಗೊಳಿಸಬಲ್ಲವೇ? ಹೀಗಾಗುವುದಿಲ್ಲ. ಹೀಗೆ ನಡೆದರೆ ವಿನಾಶವಾಗುತ್ತದೆ. ಇಂತಹ ಪರಿಸ್ಥಿತಿ ಮಾನವತೆಯ ಇತಿಹಾಸದಲ್ಲಿ ನಡೆದಿಲ್ಲ, ಇಂತಹ ಕಠಿಣ ಪರಿಸ್ಥಿತಿಗಳನ್ನು ದಾಟಿ ಮಾನವತೆ ಮುಂದೆ ಸಾಗಿ ಬಂದಿದೆ, ಈಗಲೂ ಸಾಗಲಿದೆ.

ಸಂಘದ ಸಂಸ್ಥಾಪಕ ಡಾ ಹೆಡಗೇವಾರರ ಬಾಲ್ಯ ಕಾಲದ ಇಂತಹುದೇ ಸನ್ನಿವೇಶದಲ್ಲಿ ನಾಗಪುರದಲ್ಲಿ ಪ್ಲೇಗ್‌ ಹರಡಿದ್ದ ಸಂದರ್ಭದಲ್ಲಿ ಅವರ ತಂದೆ ತಾಯಿ ತಮ್ಮ ಕಷ್ಟದ ಪರಿವೆಯೇ ಇಲ್ಲದೇ ಸಮಾಜದ ಸೇವೆಗೆ ನಿಂತರು. ಆ ಸಮಯದಲ್ಲಿ ಔಷಧಿಗಳೂ ಇದ್ದಿರಲಿಲ್ಲ. ಉಳಿದವರ ಸಹಾಯಕ್ಕೆ ನಿಂತರೆ ಖಂಡಿತ ನಮ್ಮ ಮೇಲೆಯೂ ರೋಗ ಎರಗುವುದು ಎನ್ನುವುದನ್ನು ತಿಳಿದೇ ಮುಂದಡಿಯಿಡಬೇಕಿತ್ತು. ಅಂತಹ ಸಮಯದಲ್ಲಿ ಪ್ಲೇಗ್‌ ರೋಗಿಗಳ ಸೇವೆ ಮಾಡುತ್ತ ಒಂದೇ ದಿನ ಇಬ್ಬರೂ ದಿವಂಗತರಾದರು. ಡಾ ಹೆಡಗೇವಾರ್ ಆ ಸಮಯದಲ್ಲಿ ಬಾಲಕರಾಗಿದ್ದರು, ಕೇಶವ ಎಂದು ಕರೆಯಲ್ಪಡುತ್ತಿದ್ದರು. ಡಾಕ್ಟರ್‌ ಆಗಿರಲಿಲ್ಲ. ಆ ಸಂವೇದನಶೀಲ ವಯಸ್ಸಿನಲ್ಲಿ ಅವರ ಮನಸ್ಸಿನ ಮೇಲಾದ ಪರಿಣಾಮ ಏನಾಯಿತು? ಮುಂದೆ ಅವರ ಜೀವನ ದ್ವೇಷದಿಂದ ತುಂಬಿತೇ? ನಿರಾಶರಾದರೇ? ಹಾಗಾಗಲಿಲ್ಲ. ಅವರು ಈ ದುಃಖದ ಕಟುತ್ವವನ್ನು ಜೀರ್ಣಿಸಿಕೊಂಡು ಸಂಪೂರ್ಣ ಸಮಾಜದ ಬಗ್ಗೆ ನಿರಪೇಕ್ಷ ಆತ್ಮೀಯತೆಯ ಸ್ವಭಾವನ್ನು ಬೆಳೆಸಿಕೊಂಡರು. ಅವರ ಸಂಪರ್ಕಕ್ಕೆ ಬಂದವರೆಲ್ಲ, ಅನ್ಯ ವಿಚಾರಧಾರೆಯವರೂ ಸಹ ಒಂದು ಮಾತನ್ನು ಹೇಳಿದ್ದಾರೆ, ಡಾ ಹೆಡಗೇವಾರ್ ಅಂದರೆ ಸ್ನೇಹಪರ ವ್ಯಕ್ತಿ. ಹೀಗಿತ್ತು ಅವರ ಸ್ವಭಾವ.

ಭಾರತೀಯರಾದ ನಾವೆಲ್ಲ ಜೀವನಜರಾಮರಣ ಚಕ್ರ ನಡೆಯುತ್ತಿರುತ್ತದೆ ಎನ್ನುವುದುನ್ನು ನಂಬುತ್ತೇವೆ. ಮನುಷ್ಯ ಹಳೆಯ ಬಟ್ಟೆಯನ್ನು ತ್ಯಜಿಸಿ ಹೊಸ ಬಟ್ಟೆಯನ್ನು ಧರಿಸುವಂತೆ ಹಳೆಯ ನಿರುವಪಯೋಗಿ ಶರೀರವನ್ನು ಬಿಟ್ಟು ಮುಂದಿನ ಜನ್ಮದಲ್ಲಿ ಮುಂದುವರಿಯಲು ಹೊಸ ಶರೀರ ಧಾರಣೆ ಮಾಡುತ್ತಾನೆ. ನಾವು ಇದನ್ನು ತಿಳಿದಿರುವವರು. ನಮಗೆ ಇಂತಹ ಮಾತು ಹೆದರಿಸಲಾರದು, ನಿಷ್ಕ್ರಿಯ, ನಿರಾಶೆಗೊಳಿಸಲಾರದು.

ಬ್ರಿಟನ್‌ ಪ್ರಧಾನಿಯಾಗಿದ್ದ ಚರ್ಚಿಲ್‌ರ ಕಾರ್ಯಾಲಯದಲ್ಲಿ ಅವರ ಮೇಜಿನ ಮೇಲೆ ಒಂದು ವಾಕ್ಯ ಬರೆದಿರುತ್ತಿತ್ತು “please understand that there is no pessimism in this office,  we are not interested in the possibilities of defeat, they do not exist” ನಮಗೆ ಸೋಲಿನ ಚರ್ಚೆಯಲ್ಲಿ ಆಸಕ್ತಿಯಿಲ್ಲ ಏಕೆಂದರೆ ನಮಗೆ ಸೋಲಾಗುವುದಿಲ್ಲ. ನಾವು ಗೆಲ್ಲಬೇಕು. ತಮ್ಮ ಮಾತಿನಿಂದ, ತಮ್ಮ ಕಾರ್ಯದಿಂದ ಪ್ರೇರಣೆ ನೀಡಿ ಏನೇ ಆಗಲಿ ನಾವು ಸೋಲುವುದಿಲ್ಲ, ಶರಣಾಗುವುದಿಲ್ಲ, ನಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ಮನಸ್ಥಿತಿಗೆ ಇಡೀ ರಾಷ್ಟ್ರವನ್ನು ಚರ್ಚಿಲ್‌ ತಂದು ನಿಲ್ಲಿಸಿದರು. ಅವರು ಗೆದ್ದರು, ಕಠಿಣ ಪರಿಸ್ಥಿತಿಯಲ್ಲಿ ಗೆದ್ದರು. ತಿಂಗಳುಗಟ್ಟಲೇ ನಿರಂತರವಾಗಿ ದಿನರಾತ್ರಿ ಬಾಂಬ್‌ ದಾಳಿಯನ್ನು ಎದುರಿಸಿ ಬ್ರಿಟನ್‌ನ ಜನತೆ  ತಮ್ಮ ದೇಶವನ್ನು ರಕ್ಷಿಸಿದ್ದಷ್ಟೇ ಅಲ್ಲ ಶತ್ರುವನ್ನು ಹಿಮ್ಮೆಟ್ಟಿಸಿದರು. ಇದು ಹೇಗಾಯಿತು? ಏಕೆಂದರೆ ಸ್ವಭಾವ ಹಾಗಿತ್ತು. ಎದುರಿನ ಪರಿಸ್ಥಿತಿ, ಸಂಕಟ, ದುಃಖ, ಅಂಧಕಾರವನ್ನು ನೋಡಿ ಅವರು ಹತಾಶರಾಲಿಲ್ಲ. ಅವರು ಅದನ್ನು ಒಂದು ಸವಾಲಾಗಿ ಸ್ವೀಕರಿಸಿದರು. ನಾವು ಕೂಡ ಇದೇ ಸಂಕಲ್ಪದಿಂದ ಹೋರಾಡಬೇಕು ಮತ್ತು ಸಂಪೂರ್ಣ ವಿಜಯ ಗಳಿಸುವವರೆಗೆ ನಿರಂತರ ಪ್ರಯಾಸ ಮಾಡಬೇಕು.

ಸಂಕಲ್ಪದ ದೃಢತೆಯ ಜೊತೆಗೆ ನಿರಂತರ ಪ್ರಯತ್ನಕ್ಕೂ ಅಷ್ಟೇ ಮಹತ್ವವಿದೆ. ಮೊದಲ ಅಲೆಯ ನಂತರ ನಾವೆಲ್ಲರೂ ಸ್ವಲ್ಪ ಸಡಿಲಗೊಂಡು ಬಿಟ್ಟೆವು. ಸರ್ಕಾರ, ಡಾಕ್ಟರುಗಳು ಎಚ್ಚರಿಸುತ್ತಿದ್ದರು, ಆದರೂ ಸಡಿಲಗೊಳಿಸಬಿಟ್ಟೆವು. ಹಾಗಾಗಿಯೇ ಈ ಸಂಕಟ ಎದುರಾಯಿತು. ಈಗ ಮೂರನೆಯ ಅಲೆಯ ಚರ್ಚೆ ನಡೆಯುತ್ತಿದೆ. ಹಾಗೆಂದು ಹೆದರಬೇಕೆ? ಹೆದರುವುದಲ್ಲಿ ಸಿದ್ಧರಾಗಿಬೇಕು. ಸಾಗರದ ಅಲೆ ತೀರವನ್ನು ಬಡಿದು ಛಿದ್ರಗೊಂಡು ಮರಳುವಂತೆ ಈ ಅಲೆಯೂ ಮರಳಬೇಕು ಅದಕ್ಕೆ ತಕ್ಕ ಸಿದ್ದತೆ ಮಾಡಿಕೊಳ್ಳಬೇಕು. ಈ ಸ್ವಭಾವ ಬೇಕು.  ಈ ದೃಢತೆಯೊಂದಿಗೆ ನಿರಂತರ ಪ್ರಯತ್ನವನ್ನು ನಾವು ಮಾಡಬೇಕು. ಸಮುದ್ರ ಮಂಥನದಲ್ಲಿ ಎಷ್ಟೇ ರತ್ನಗಳು ಬಂದರೂ ಅವುಗಳ ಆಕರ್ಷಣೆಯಿಂದ ಪ್ರಯತ್ನ ನಿಲ್ಲಲಿಲ್ಲ, ನಿರಂತರ ನಡೆಯಿತು. ಹಾಲಾಹಲದಂತಹ ವಿಷ ಉತ್ಪನ್ನವಾದರು ಅದರ ಭಯದಿಂದ ಪ್ರಯಾಸ ನಿಲ್ಲಲಿಲ್ಲ. ಅಮೃತ ಪ್ರಾಪ್ತಿಯ ತನಕ ಯತ್ನ ನಡೆಯಿತು. ಅದಕ್ಕೇ ಸುಭಾಷಿತದಲ್ಲಿ ಹೇಳಿದ್ದು ರತ್ನೈಹಿ ಮಹರ್‌ಹಿ ಸ್ತುತುಷುರ್ನ ನ ದೇವಾಃ, ನ ಭೇಜಿರೆ ಭೀಮವಿಷಯಮ ಭೀತಿಮ್‌| ಸುಧಾಮ್‌ ವಿನಾನಃ ಪ್ರಯುರ್ವಿರಾಮ, ನ ನಿಶ್ಚಿತಾರ್ಥಾತ್‌ ವಿರಮಂತಿ ಧೀರಾಃ|| ದೇವತೆಗಳು ರತ್ನ ಬಂದಿದ್ದರಿಂದ ಸಂತುಷ್ಟರಾಗಲಿಲ್ಲ, ಹಾಲಾಹಲದಂತಹ ವಿಷ ಬಂತೆಂದು ಭಯಗೊಳ್ಳಲಿಲ್ಲ. ಬದಲು ಅಮೃತ ಸಿಗುವವರೆಗೂ ಪ್ರಯತ್ನವನ್ನು ನಿಲ್ಲಿಸಲಿಲ್ಲ. ಧೀರರಾದವರು ನಿಶ್ಚಯ ಮಾಡಿದ ಕಾರ್ಯ ಮುಗಿಯುವವರೆಗೂ ವಿರಮಿಸುವುದಿಲ್ಲ. ನಾವು ಹಾಗೆಯೇ ಪ್ರಯತ್ನ ನಡೆಸಬೇಕು. ಈ ಸಂಕಷ್ಟ ಇಡೀ ಮಾನವತೆಯ ಮೇಲೆ ಎರಗಿದೆ. ಭಾರತವು ಒಂದು ಸಮೂಹವಾಗಿ, ಎಲ್ಲ ಬೇಧಗಳನ್ನು ಮರೆತು, ಗುಣದೋಷಗಳ ಚರ್ಚೆಗೆ ವಿರಾಮ ನೀಡಿ ನಾವು ಒಂದು ತಂಡವಾಗಿ ಕೆಲಸ ಮಾಡಿ ವಿಶ್ವದೆದುರು ಉದಾಹರಣೆಯಾಗಿ ನಿಲ್ಲಬೇಕು.

ಪುಣೆ ನಗರದಲ್ಲಿ ಅಲ್ಲಿನ ಉದ್ಯಮಿಗಳು, ವ್ಯಾಪಾರಿಗಳು, ಆಡಳಿತದ ಮಂದಿ, ಡಾಕ್ಟರ್‌ಗಳು, ಆಸ್ಪತ್ರೆಗಳ ಸಿಬ್ಬಂದಿ, ಜನಸಂಘಟನೆಗಳ ಕಾರ್ಯಕರ್ತರು ಎಲ್ಲರೂ ಸೇರಿ ಪಿಪಿಸಿಆರ್‌ ಹೆಸರಿನ ತಂಡವನ್ನು ಕಟ್ಟಿದರು. ಮತ್ತು ತುಂಬ ಒಳ್ಳೆಯ ರೀತಿಯಲ್ಲಿ ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸಿ ಅವರು ಹೊರಬಂದರು. ಎಲ್ಲ ಕಡೆ ಇಂತಹ ಸಾಮೂಹಿಕ ಪ್ರಯತ್ನ ನಡೆಯಬೇಕು. ತಡವಾದರೂ ಚಿಂತೆಯಿಲ್ಲ. ಸಾಮೂಹಿಕ ಯತ್ನದ ಬಲದ ಮೇಲೆ ನಮ್ಮ ವೇಗವನ್ನು ವರ್ಧಿಸಿಕೊಂಡು ಈ ಹಿನ್ನೆಡೆಯನ್ನು ತುಂಬಿಕೊಂಡು ಮುಂದೆ ಸಾಗಬಹುದು. ಸಾಗಬೇಕು.

ಹೇಗೆ ಅಂದರೆ, ಮೊದಲು ನಮ್ಮನ್ನು ನಾವು ಸರಿಯಾಗಿಟ್ಟುಕೊಳ್ಳಬೇಕು. ಅದಕ್ಕಾಗಿ ದೃಢಸಂಕಲ್ಪ, ಸತತ ಪ್ರಯತ್ನ, ಧೈರ್ಯ ಇವು ಅಗತ್ಯ. ಎರಡನೆಯದು ಜಾಗರೂಕತೆ. ಜಾಗೃತಿಯಿಂದಲೇ ಹೆಚ್ಚಿನ ರಕ್ಷಣೆ ಸಾಧ್ಯ. ವ್ಯಾಯಾಮ ಪ್ರಾಣಾಯಾಮಗಳ ಅಭ್ಯಾಸ. ದೇಹದ ನಿರೋಧಕ ಶಕ್ತಿ, ಶ್ವಾಸ ಶಕ್ತಿ ಪ್ರಾಣದ ತೇಜಸ್ಸನ್ನು ಹೆಚ್ಚಿಸುವ ವ್ಯಾಯಾಮಗಳ ಅಭ್ಯಾಸ ಮಾಡಬೇಕು. ಮನಸ್ಸನ್ನೂ ಶುಭ್ರಗೊಳಿಸುವ ಸೂರ್ಯನಮಸ್ಕಾರದಂತಹ ವ್ಯಾಯಾಮಗಳ ಅಭ್ಯಾಸ. ಇವುಗಳನ್ನು ಕಲಿಯಬೇಕು, ಆನ್‌ಲೈನ್‌ಗಳಲ್ಲೂ ಕಲಿಯುವ ಎಲ್ಲ ಅನುಕೂಲತೆಗಳು ಇಂದಿವೆ. ಶುದ್ಧ ಸಾತ್ವಿಕ ಆಹಾರ ಸೇವನೆ . ಶರೀರದ ಶಕ್ತಿಯನ್ನು ಹೆಚ್ಚಿಸುವ ಆಹಾರ ಸೇವನೆ. ಇವುಗಳ ಕುರಿತೂ ಸಾಕಷ್ಟು ಮಾಹಿತಿ ಅಂತರ್ಜಾಲದಲ್ಲಿ ಸಿಗುತ್ತದೆ. ಆದರೆ ಮಾಹಿತಿ ವೈಜ್ಞಾನಿಕವಾಗಿರುವ ಕುರಿತು ಎಚ್ಚರವಿರಲಿ. ಅಂದರೆ ಪರೀಕ್ಷಿಸಿ ಆ ಮಾಹಿತಿಯ ಉಪಯೋಗ ಪಡೆದುಕೊಳ್ಳಬೇಕು. ಯಾರೋ ಹೇಳಿದರು ಅನ್ನುವ ಮಾತ್ರಕ್ಕೆ, ಪುಸ್ತಕದಲ್ಲಿ ಬರೆದಿದೆ ಎಂದ ಮಾತ್ರಕ್ಕೆ ಅದು ಸರಿ ಅಂತಲ್ಲ. ಹೊಸದೆಂದು ಸರಿ ಅಂತಲೂ ಅಲ್ಲ, ಹಾಗೆಯೇ ಹಳೆಯದು ಹಾಗಾಗಿ ಸರಿ ಹೊಸದಾದದ್ದರಿಂದ ಸರಿಯಲ್ಲ ಎಂದೂ ಅಲ್ಲ. ಯಾವ ಮಾಹಿತಿಯನ್ನೇ ಆಗಲಿ ಪರೀಕ್ಷಿಸಿ ಸ್ವೀಕರಿಸಬೇಕು. ತಜ್ಞರು, ಆಪ್ತರು, ನಮ್ಮ ಅನುಭವ ಮತ್ತು ಅದರ ಹಿಂದಿರುವ ವೈಜ್ಞಾನಿಕ ತರ್ಕ ಇದರ ಪರೀಕ್ಷೆ ಮಾಡಬೇಕು. ಪುರಾಣಮಿತ್ಯೇಮ ನಸಾಧು ಸರ್ವಂ, ನ ಚಾಪಿ ಕಾವ್ಯಂ ನವಮಿತ್ಯವದ್ಯಂ| ಸಂತಃ ಪರೀಕ್ಷ್ಯಾನ್ಯತರದ್‌ ಭಜಂತೇ  ಮೂಡಃ ಪರಪ್ರತ್ಯಯನೇಯ ಬುದ್ಧಿಃ|| ನಮ್ಮಿಂದ ಯಾವುದೇ ತಪ್ಪಾದ ಮಾಹಿತಿ ಸಮಾಜಕ್ಕೆ ಹೋಗದಿರಲಿ ಮತ್ತು ಸಮಾಜದಲ್ಲಿ ಪ್ರಚಾರದಲ್ಲಿ ತಪ್ಪು ಮಾಹಿತಿಗೆ ನಾವು ಬಲಿಯಾಗದೇ ಇರಲಿ ಇದನು ಚಿಂತಿಸಬೇಕು. ಆಯುರ್ವೇದ ನಮ್ಮ ಒಂದು ಸಿದ್ಧವಾದ ಶಾಸ್ತ್ರ, ಅದು ಪರಂಪರೆಯಿಂದ ಅನುಭವಕ್ಕೆ ಬಂದಿರುವುದು, ತರ್ಕಬದ್ಧವಾದುದು ಅದರ ಪ್ರಯೋಜನ ಪಡೆಯುವುದರಲ್ಲಿ ಯಾವ ತೊಂದರೆಯೂ ಇಲ್ಲ. ಆದರೆ ಆಯುರ್ವೇದದ ಹೆಸರಿನಲ್ಲಿ ಇಂದು ಅನೇಕ ವಿಷಯಗಳು ನಡೆಯುತ್ತಿರುತ್ತವೆ. ಅದನ್ನು ಹೇಳುವವರಿಗೆ ಅದರ ಲಾಭವಾಗಿರಬಹುದು ಆದರೆ ಅದು ಆಯುರ್ವೇದ ತರ್ಕಬದ್ಧ ಶಾಸ್ತ್ರದ ವೈಜ್ಞಾನಿಕತೆಯ ಆಧಾರದಲ್ಲಿ ಸಿದ್ದವಾಗುವ ವರೆಗೆ ಇನ್ನೊಬ್ಬರಿಗೆ ಹೇಳಲು ಅರ್ಹವಾದುದಲ್ಲ. ಹಾಗಾಗಿ ಎಚ್ಚರಿಕೆಯಿಂದ ಇಂತಹ ಔಶಧ ಆಹಾರಗಳ ಸೇವನೆ ಮಾಡುವುದು, ವಿಹಾರದ ಕುರಿತು ಲಕ್ಷ್ಯ ವಹಿಸುವುದು. ಯುಕ್ತಾಹಾರವಿಹಾರಸ್ಯ ಯುಕ್ತ ಕರ್ಮಸು ಚೇಷ್ಟಸು| ಶರೀರ ಮನಗಳನ್ನು ದುರ್ಬಲಗೊಳಿಸುವ ಆಹಾರ ವಿಹಾರಗಳನ್ನು ತ್ಯಜಿಸುವುದು.

ಸುಮ್ಮನೇ ಕಾಲಹರಣ ಮಾಡದೇ ಇರುವುದು. ಏನಾದರೂ ಹೊಸದನ್ನು ಕಲಿಯವುದು, ಮನೆಯ ಜನರೊಂದಿಗೆ ಹರಟೆ ಹೊಡೆಯುವುದು. ಮಕ್ಕಳನ್ನು ಇನ್ನೂ ಸರಿಯಾಗಿ ಅರ್ಥ ಮಾಡಿಕೊಳ್ಳುವುದು. ಮಕ್ಕಳು ನಮ್ಮನ್ನು ಹೆಚ್ಚು ಸರಿಯಾಗಿ ತಿಳಿಯಲಿ ಅಂತಹ ಸಂಭಾಷಣೆ ನಡೆಸುವುದು. ಕುಟುಂಬಕ್ಕೂ ಶಿಕ್ಷಣ ನೀಡಬಹುದು ಅಂತಹ ಸಮಯ ನಮಗೆ ಇಂದು ದೊರಕಿದೆ. ಅದರ ಪ್ರಯೋಜನ ಪಡೆದುಕೊಳ್ಳಬಹುದು. ಮಾಸ್ಕ್‌ ಧರಿಸುವುದು, ಅಂತರ ಕಾಪಾಡಿಕೊಂಡು ಸಂಬಂಧಗಳನ್ನು ಬೆಳೆಸುವುದು. ಇವೆಲ್ಲ ಅವಶ್ಯ.  ಹಾಗೆಯೇ ಸ್ವಚ್ಚತೆ ಇತ್ಯಾದಿ ನಮಗೆಲ್ಲ ತಿಳಿದಿರುವ ವಿಷಯಗಳನ್ನು ಜಾಗೃತಿಯಿಂದ ಪಾಲಿಸಬೇಕು.

ಕೆಲವರು ಕೊರೊನಾ ಅಂಟಿಸಿಕೊಳ್ಳುವುದು ಅವಮಾನಕರ ಎಂದು ಮುಚ್ಚಿಡುತ್ತಾರೆ. ಸರಿಯಾದ  ಸಮಯದಲ್ಲಿ ಉಪಚಾರ ಮಾಡಿಸಿಕೊಳ್ಳುವುದಿಲ್ಲ. ಆಸ್ಪತ್ರೆಗೆ ಅಡ್ಮಿಟ್ ಆಗುವುದಿಲ್ಲ. ಇನ್ನು ಕೆಲವರು ಭಯದಿಂದ ಅನಾವಶ್ಯಕವಾಗಿ ಅಗತ್ಯವಿಲ್ಲದಿದ್ದರೂ ಆಸ್ಪತ್ರೆಗೆ ಅಡ್ಮಿಟ್‌ ಆಗುತ್ತಾರೆ. ಆಗ ನಿಜವಾಗಿ ಅಗತ್ಯವಿರುವವರಿಗೆ ಚಿಕಿತ್ಸೆ ಸಿಗುವುದಿಲ್ಲ. ಆದ್ದರಿಂದ ಡಾಕ್ಟರ್‌ರ ಸಲಹೆ ಪಡೆದು ಸರಿಯಾದ ಕ್ರಮದಲ್ಲಿಆರಂಭದಲ್ಲಿಯೇ ಚಿಕಿತ್ಸೆ ಪಡೆದುಕೊಂಡರೆ ಅತ್ಯಂತ ಕಡಿಮೆ ಔಶಧಿಯಲ್ಲಿ ಪ್ರಾಥಮಿಕ ಜಾಗೃತಿಯನ್ನು ಪಾಲಿಸುವುದರಿಂದಲೇ ಈ ರೋಗದಿಂದ ಹೊರಬರಬಹುದು. ನಮ್ಮ ಸಂಪರ್ಕದಲ್ಲಿ ಬರುವವರಿಗೂ ನಾವು ಇದನ್ನು ತಿಳಿಸಬೇಕು. ಹಾಗೆಯೇ ಜನಜಾಗರಣೆಯ ಕಾರ್ಯದಲ್ಲಿ ತೊಡಗಿರುವವರ ಕಾರ್ಯದಲ್ಲಿ ಸಹಭಾಗಿಗಳಾಬಹುದು. ಹಾಗೆಯೇ ಕೊರೊನಾದಿಂದ ಪೀಡಿತರಾದವರ ಸೇವೆಯನ್ನೂ ಮಾಡಬೇಕು. ಆಕ್ಸಿಜನ್, ಬೆಡ್‌ ಇತ್ಯಾದಿಗಳಿಗೆ ಸಹಾಯ ಮಾಡುವುದು. ಸೇವಾಕಾರ್ಯದಲ್ಲಿ ತೊಡಗಿರುವ ಅನೇಕರ ಜೊತೆ ಸೇರಿಕೊಳ್ಳುವುದು.

ಮಕ್ಕಳ ಶಿಕ್ಷಣ ಈ ಬಾರಿಯು ಬಹುಶಃ ಹಿಂದೆ ಬೀಳಬಹುದು. ಆದರೆ ಅನೌಪಚಾರಿಕವಾಗಿ ಅವರ ಜ್ಞಾನವೃದ್ಧಿಯ ದೃಷ್ಟಿಯಿಂದ ಅವರು  ಕಲಿಕೆ ಹಿಂದೆ ಬೀಳದೆ ಇರಲಿ ಎನ್ನುವ ದೃಷ್ಟಿಯಿಂದ ಸಮಾಜದ ಗಮನಹರಿಸಬೇಕು. ಹೀಗೆಯೆ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಅವರ ಬಗ್ಗೆ ಕಾಳಜಿವಹಿಸಬೇಕು. ಕಡೆಯ ಮಟ್ಟಿಗೆ ಅವರು ಅವರ ಕುಟುಂಬದವರು ಉಪವಾಸವಿರದೇ ಇರಲಿ ಈ ಕುರಿತು ಚಿಂತಿಸಬೇಕು. ನಮ್ಮ ಸಂಪರ್ಕದಲ್ಲಿರುವ ಅಂತಹ ಕುಟುಂಬದವರಿಗೆ ನೆರವಾಗಬಹುದು, ಹಾಗೂ ಈ ಕಾರ್ಯದಲ್ಲಿ ತೊಡಗಿರುವ ಸಂಘಟನೆಗಳ ಜೊತೆ ಕೈಜೋಡಿಸಬಹುದು. ಮುಂದೆ ನಮ್ಮ ಆರ್ಥಿಕ ಸ್ಥಿತಿ ಕೆಳಗೆ ಬೀಳಬಹುದು. ಅದನ್ನು ಎದುರಿಸಲು ಈಗಿಂದಲೇ ಆರಂಭಿಸಬೇಕು. ಕೌಶಲ್ಯ ತರಬೇತಿಯಿಂದ ಹಿಡಿದು ಎಲ್ಲ ವಿಷಯಗಳಲ್ಲಿ ಸಮಾಜ ಮತ್ತು ವ್ಯಕ್ತಿಗತ ನೆಲೆಯಲ್ಲಿ ಏನೇನು ಮಾಡಲು ಸಾಧ್ಯವೋ ಅದನ್ನೆಲ್ಲ ಮಾಡಬೇಕು. ಅಂತಹ ಉದ್ಯೋಗ ಮಾಡುವವರನ್ನು ಹುಡುಕಿ ಅವರಿಂದ ಖರೀದಿಸಬೇಕು. ಈಗ ಬೇಸಿಗೆಯಲ್ಲಿ ನೀರನ್ನು ತಂಪುಗೊಳಿಸುವ ಮಶಿನ್‌ ಖರೀದಿಯ ಬದಲು ಯಾರಾದರೂ ಮಣ್ಣಿನ ಮಡಿಕೆ ಮಾಡುವವನಿದ್ದರೆ ಅವನಿಂದ ಖರೀದಿಸಿ. ಅವನ ಉದ್ಯೋಗ ಇಂದು ಸಂಕಷ್ಟದದಲ್ಲಿದೆ. ಹೀಗೆ ನಾವು ಪ್ರಯಾಸ ಮಾಡಬೇಕು .

ನಿಯಮ, ವ್ಯವಸ್ಥೆ, ಶಿಸ್ತನ್ನು ಪಾಲನೆ ಮಾಡುತ್ತ, ನಾವು ನಡೆಯಬೇಕು ಸಮಾಜವನ್ನೂ ಮುನ್ನಡೆಸಬೇಕು. ನಾವು ಸೇವೆ ಮಾಡಬೇಕು ಸೇವೆ ಮಾಡುತ್ತಿರವವರ ಜೊತೆ ನಾವೂ ಸಹಭಾಗಿಗಳಾಗಬೇಕು. ಹಾಗಿದ್ದರೆ ನಾವು ಮುನ್ನಡೆಯಬಹುದು. ನಾವು ಗೆಲ್ಲಬೇಕು. ಅನೇಕ ಭಯಂಕರ ಸಂಕಟಗಳನ್ನು ಎದುರಿಸಿ ನಾಶವಾಗದ ನಮ್ಮ ದೇಶ, ಈಗ ಬಂದಿರುವ ಮಹಾಮಾರಿಯೇ ಆಗಿರಲಿ, ವಿಶ್ವವ್ಯಾಪಿಯೇ ಆಗಿರಲಿ, ಕಣ್ಣಿಗೆ ಕಾಣದಿರುವ ರೂಪ ಬದಲಿಸುವ ಶತ್ರುವೆ ಆಗಿರಲಿ ಕಠಿಣವಾದ ಯುದ್ಧವನ್ನು ಎದುರಿಸಬೇಕಾಗಿರಲಿ, ಆದರೆ ಹೋರಾಡಲೇಬೇಕು ಮತ್ತು ಗೆಲ್ಲಲೇಬೇಕು. ಇದು ನಮ್ಮ ದೃಢ ಸಂಕಲ್ಪ.         ಉದ್ಭವವಾಗಿರುವ ಪರಿಸ್ಥಿತಿ ನಮ್ಮ ಸದ್ಗುಣಗಳನ್ನು ಪರೀಕ್ಷಿಸುತ್ತದೆ, ದೋಷಗಳನ್ನೂ ಎತ್ತಿತೋರಿಸುತ್ತದೆ. ದೋಷಗಳನ್ನು ದೂರಗೊಳಿಸಿ, ಸದ್ಗುಣಗಳನ್ನು ಬೆಳೆಸಿ ಈ ಪರಿಸ್ಥಿತಿಯೇ ನಮ್ಮನ್ನು ಪ್ರಶಿಕ್ಷಿತಗೊಳಿಸುವುದು. ಇದು ನಮ್ಮ ಧೈರ್ಯದ ಪರೀಕ್ಷೆ. ಒಂದು ಮಾತನ್ನು ನೆನಪಿಡಿ “success is not final, failure is not fatal, the courage to continue is the only thing that matters”  ಯಶಸ್ಸು ಅಂತಿಮವಲ್ಲ, ವಿಫಲತೆ ವಿನಾಶಕವಲ್ಲ, ಮುಂದುವರೆಯುವ ದೈರ್ಯ ಮಾತ್ರ ಮುಖ್ಯವಾದುದು.

ಭಾಷಣದ ಅನುವಾದಕರು : ಸತ್ಯನಾರಾಯಣ ಶಾನಭಾಗ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

Conscience blossoms during Corona crisis

Mon May 17 , 2021
Kannada Article by Sri Ravindra Deshmukh, Vijayavani kannada daily is translated to English by Sri Shambu NashipudiWe are in the midst of difficult times, the corona pandemic has exposed the limitations of human ability to deal with difficult situations. The increasing number of infected people and the deaths along with the […]