ಬೆಂಗಳೂರು ವಿವಿಯಲ್ಲಿ ಎಚ್ ಎಸ್ ದೊರೆಸ್ವಾಮಿ ಅಧ್ಯಯನ ಪೀಠ?ಸ್ವಾತಂತ್ರ್ಯ ಹೋರಾಟಕ್ಕೆ, ಗಾಂಧೀವಾದಕ್ಕೆ ಮಾಡುವ ಅವಮಾನವಾಗುವುದು : ಮಂಜುನಾಥ ಅಜ್ಜಂಪುರ

ಬೆಂಗಳೂರು ವಿವಿಯಲ್ಲಿ ಎಚ್ ಎಸ್ ದೊರೆಸ್ವಾಮಿ ಅಧ್ಯಯನ ಪೀಠ ಸ್ಥಾಪಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ನೇತೃತ್ವದ ನಿಯೋಗ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದೆ.

ಎಚ್ ಎಸ್ ದೊರೆಸ್ವಾಮಿ

ಈ ಸುದ್ದಿ ಬಿತ್ತರವಾಗುತ್ತಿದ್ದಂತೆ, ಸಾಮಾಜಿಕ ವಲಯದಲ್ಲಿ ಚರ್ಚೆ ಆರಂಭವಾಗಿದ್ದು ತಥಾಕಥಿತ ಸ್ವಾತಂತ್ರ್ಯ ಹೋರಾಟಗಾರ ಎಚ್ ಎಸ್ ದೊರೆಸ್ವಾಮಿ ಹೆಸರಿನಲ್ಲಿ ಅಧ್ಯಯನ ಪೀಠ ಸ್ಥಾಪಿಸಬಾರದು ಎಂಬ ಕೂಗು ವ್ಯಾಪಕವಾಗಿ ಕೇಳಿಬರುತ್ತಿದೆ.

ಇದೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ವಿಶ್ವವಿದ್ಯಾಲಯವೊಂದರಲ್ಲಿ ಅಧ್ಯಯನ ಪೀಠ ಸ್ಥಾಪಿಸುವಂತಹ ಯೋಗ್ಯತೆ, ಅರ್ಹತೆ ಎಚ್.ಎಸ್.ದೊರೆಸ್ವಾಮಿ ಅವರಿಗಿಲ್ಲ ಎಂದು ಲೇಖಕ, ವಾಯ್ಸ್ ಆಫ್ ಇಂಡಿಯಾ ಸರಣಿಯ ಸಂಪಾದಕ ಹಾಗೂ ಅಂಕಣಕಾರ ಮಂಜುನಾಥ ಅಜ್ಜಂಪುರ ಅಭಿಪ್ರಾಯ ಪಟ್ಟಿದ್ದಾರೆ.

ದೊರೆಸ್ವಾಮಿಯವರು ಸ್ವಾತಂತ್ರ ಹೋರಾಟಗಾರರು ಎಂದು ಹೇಳಿಕೊಳ್ಳುವುದುಂಟು. ಅವರನ್ನು “ಗಾಂಧಿವಾದಿ” ಎಂದು ಸಹ ಉಲ್ಲೇಖಿಸುವುದಿದೆ. ಆದರೆ, ಅವರೇ ಹೇಳಿಕೊಂಡಿರುವ ಹಾಗೆ ಬಾಂಬ್ ತಯಾರಿಕೆಯಲ್ಲಿ ಮತ್ತು ಸರ್ಕಾರೀ (ಅಂಚೆ ಕಚೇರಿ ) ದಾಖಲೆಗಳನ್ನು ನಾಶ ಮಾಡುವ ಉದ್ದೇಶದಿಂದ ಬಾಂಬ್ ಸ್ಫೋಟಿಸುವುದರಲ್ಲಿ ನಿರತರಾಗಿದ್ದರಂತೆ. ಹೀಗಿರುವಾಗ ಅಹಿಂಸೆಯ ಪ್ರತಿಪಾದಕರಾದ ಗಾಂಧೀಜಿಯವರ ಹೆಸರನ್ನು ಇವರೊಂದಿಗೆ ಜೋಡಿಸುವುದೂ ತಪ್ಪಾಗುತ್ತದೆ. ಗಾಂಧೀಜಿಯವರು “ಗೋಹತ್ಯಾ ನಿಷೇಧದ” ಪ್ರತಿಪಾದಕರಾಗಿದ್ದರು. ಗೋಹತ್ಯಾ ನಿಷೇಧವು ಗಾಂಧೀಜಿಯವರು ಪ್ರತಿಪಾದಿಸಿದ ಅನೇಕ ಪ್ರಮುಖ ತತ್ವಗಳಲ್ಲೊಂದು. ಆದರೆ, ಈ ದೊರೆಸ್ವಾಮಿಯವರು ಬೆಂಗಳೂರಿನಲ್ಲಿ (ಟೌನ್ ಹಾಲ್ ಬಳಿ ) ಗೋಮಾಂಸ ಭಕ್ಷಕರೊಂದಿಗೆ ಕೈಜೋಡಿಸಿದ್ದರು. ಗೋಮಾಂಸ ಭಕ್ಷಣೆಯನ್ನು ಪ್ರತಿಪಾದಿಸುವುದು ಗಾಂಧಿವಾದದ ವಿರುದ್ಧವಾಗಿದೆ. ಅವರನ್ನು “ಗಾಂಧಿವಾದಿ” ಎನ್ನುವುದು ಸಹ ಗಾಂಧೀಜಿಯವರಿಗೆ ಅವಮಾನ ಮಾಡಿದಂತೆ ಆಗುತ್ತದೆ.

1980ರ ದಶಕದಲ್ಲಿ ನನ್ನ ಕಮ್ಯುನಿಸ್ಟ್ ಗೆಳೆಯರ ಮಾತು ಕೇಳಿ, ದೊರೆಸ್ವಾಮಿಯವರನ್ನು ಸ್ವಾತಂತ್ರ್ಯ ಹೋರಾಟಗಾರರೆಂದು ಪರಿಭಾವಿಸಿ, ಒಂದು ಸಂಸ್ಥೆಯ ರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನವನ್ನು ಆಯೋಜಿಸಿದ್ದೆ. ಸನ್ಮಾನಕ್ಕೆ ಕರೆದೊಯ್ಯುವಾಗ ಅವರೊಂದಿಗೆ ಮಾತನಾಡಿದಾಗ ಅವರಿಗೆ ಸ್ವಾತಂತ್ರ್ಯ ಹೋರಾಟದ ಸರಿಯಾದ ಪರಿಚಯವೂ ಇಲ್ಲ ಎಂಬುದು ವೇದ್ಯವಾಯಿತು. ೧೯೪೨ರ “ಕ್ವಿಟ್ ಇಂಡಿಯಾ” ಚಳವಳಿ ಮತ್ತು ವಿದುರಾಶ್ವತ್ಥ ಪ್ರಕರಣದ ಬಗೆಗೆ ಏನೂ ಗೊತ್ತಿಲ್ಲವೆಂಬುದೂ ತಿಳಿಯಿತು. ನಮ್ಮ ಸಂಸ್ಥೆಯ ರಾಜ್ಯೋತ್ಸವ ಸನ್ಮಾನ ಮತ್ತು ನಿಧಿ ಅರ್ಪಣೆಗೆ ಉತ್ತರವಾಗಿ ಮಾತನಾಡಿದ ದೊರೆಸ್ವಾಮಿಯವರ ಭಾಷಣದಲ್ಲಿ, ಅವರು ಸ್ವಾತಂತ್ರ್ಯ ಹೋರಾಟಗಾರ ಎಂಬುದಕ್ಕೆ ಯಾವ ಕುರುಹೂ ಇರಲಿಲ್ಲ. ಸರಿಯಾಗಿ ತಿಳಿಯದೆ ರಾಜ್ಯೋತ್ಸವ ಸನ್ಮಾನ ಮತ್ತು ನಿಧಿ ಅರ್ಪಣೆಗೆ ಅವರನ್ನು ಆಯ್ಕೆ ಮಾಡಿದುದಕ್ಕಾಗಿ ನಮ್ಮ ಸಂಸ್ಥೆಯ ಮೇಲಧಿಕಾರಿಗಳು ನನ್ನನ್ನು ಆಕ್ಷೇಪಿಸಿದರು ಎಂದು ಮಂಜುನಾಥ ಅಜ್ಜಂಪುರ ಅವರು ಹೇಳಿದ್ದಾರೆ.

ಮಂಜುನಾಥ ಅಜ್ಜಂಪುರ, ಲೇಖಕ, ಸಂಪಾದಕ, ಅಂಕಣಕಾರ

ಎರಡು ದಶಕಗಳ ಹಿಂದೆ ಅವರು “ನೆನಪಿನ ಸುರುಳಿ ತೆರೆದಾಗ” ಎಂಬ ಕಳಪೆ ದರ್ಜೆಯ ಒಂದು ಪುಸ್ತಕ ಬರೆದು ಅದರಲ್ಲಿ ಸತ್ಯಕ್ಕೆ ದೂರವಾದ ಸಂಗತಿಗಳನ್ನು ದೊರೆಸ್ವಾಮಿಯವರು ಬರೆದಿದ್ದರು. ಜನವರಿ 1948ರಲ್ಲಿ ಆರೆಸ್ಸೆಸ್ ಸಂಸ್ಥೆಯು ಬೆಂಗಳೂರಿನಲ್ಲಿ ಆಯೋಜಿಸಿದ್ದ ಶಿಬಿರಕ್ಕೆ ನಾಥುರಾಮ್ ಗೋಡ್ಸೆ ಬಂದಿದ್ದ, ಕಾರ್ಯಸ್ಥಾನದಲ್ಲಿ ಭಾಗವಹಿಸಿದ್ದ, ಇತ್ಯಾದಿ ಬರೆದಿದ್ದರು. ಈ ಕುರಿತಂತೆ, ಆರೆಸ್ಸೆಸ್ ಸಂಸ್ಥೆಯ ಹಿರಿಯರು (ಮೈ.ಚ.ಜಯದೇವ-ಜೀ ಅವರು) ದೊರೆಸ್ವಾಮಿಯವರನ್ನು ಭೇಟಿ ಮಾಡಿ, ಸತ್ಯಕ್ಕೆ ದೂರವಾದ ಈ ಮಾತುಗಳಿಗೆ ದಾಖಲೆ ಒದಗಿಸಿ – ರುಜುವಾತು ಪಡಿಸಿ, ಇಲ್ಲವೇ ಪುಸ್ತಕವನ್ನು ಹಿಂದಕ್ಕೆ ತೆಗೆದುಕೊಳ್ಳಿ, ಸ್ಪಷ್ಟೀಕರಣ ನೀಡಿ, ಎಂದು ಆಗ್ರಹಿಸಿದರು. ದೊರೆಸ್ವಾಮಿಯವರು ನಂಬುವಂತಹ ಯಾವ ದಾಖಲೆಯನ್ನೂ ನೀಡಲಿಲ್ಲ, ಒಪ್ಪುವಂತಹ ಯಾವ ಸಾಕ್ಷ್ಯಾಧಾರವನ್ನೂ ಒದಗಿಸಲಿಲ್ಲ. ದೊರೆಸ್ವಾಮಿಯವರು ಸರಿಯಾದ ಸ್ಪಷ್ಟೀಕರಣವನ್ನೂ ನೀಡಲಿಲ್ಲ ಎಂದು ಮಂಜುನಾಥ್ ಅಜ್ಜಂಪುರ ತಿಳಿಸಿದ್ದಾರೆ.

ಕರ್ನಾಟಕ ಸರ್ಕಾರಕ್ಕೆ ಮತ್ತು ಸನ್ಮಾನ್ಯ ಮುಖ್ಯಮಂತ್ರಿಯವರಿಗೆ ವಿನಂತಿ ಏನೆಂದರೆ, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಯಾವ ಕಾರಣಕ್ಕೂ ಎಚ್.ಎಸ್.ದೊರೆಸ್ವಾಮಿ ಅವರ ಹೆಸರಿನಲ್ಲಿ ಅಧ್ಯಯನ ಪೀಠ ಬೇಡ. ಅಷ್ಟೇಕೆ ಯಾವ ವಿಶ್ವವಿದ್ಯಾಲಯದಲ್ಲಿಯೂ ಬೇಡ. ಅದು ಸ್ವಾತಂತ್ರ್ಯ ಹೋರಾಟಕ್ಕೆ, ಗಾಂಧೀವಾದಕ್ಕೆ ಮಾಡುವ ಅವಮಾನವಾಗುತ್ತದೆ ಎಂದು ಲೇಖಕರು ತಿಳಿಸಿದ್ದಾರೆ.’

ಎಚ್ ಎಸ್ ದೊರೆಸ್ವಾಮಿ ಜೊತೆ ಫೆಬ್ರುವರಿ 2020ರಲ್ಲಿ ಪಾಕಿಸ್ತಾನ್ ಜಿಂದಾಬಾದ್” ಘೋಷಣೆ ಕೂಗಿದ ಅಮೂಲ್ಯ ಲಿಯೋನಾ.

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವಿಟ್ ಬಾಲಿಶ ಹಾಗೂ ಬೇಜವಾಬ್ದಾರಿಯಿಂದ ಕೂಡಿದ್ದಾಗಿದೆ : ವಿಹಿಂಪ

Tue Feb 16 , 2021
ಮಾಜಿ ಮುಖ್ಯ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿಯವರು ಪ್ರಸ್ತುತ ನಡೆಯುತ್ತಿರುವ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನದ ಕುರಿತಾಗಿ, ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆ ಎಲ್ಲಿ ತಲುಪುತ್ತದೆ ಗೊತ್ತಿಲ್ಲ ಎಂದು ಟ್ವಿಟ್ ಮಾಡಿದ್ದಾರೆ. ವಿಶ್ವ […]