ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದವರ ಪ್ರತಿ ಭಾರತದ ನೈತಿಕ ಜವಾಬ್ದಾರಿ ಇದೆ : ಆರೆಸ್ಸೆಸ್ ಸರಸಂಘಚಾಲಕ್, ಡಾ. ಮೋಹನ್ ಭಾಗವತ್,

ಪಾಕಿಸ್ತಾನದಲ್ಲಿ ದೌರ್ಜನ್ಯಕ್ಕೊಳಗಾದವರ ಪ್ರತಿ ಭಾರತದ ನೈತಿಕ ಜವಾಬ್ದಾರಿ ಇದೆ – ಡಾ. ಮೋಹನ್ ಭಾಗವತ್,

ಗವಾಹಾಟಿ: ನಾಗರಿಕ ಪೌರತ್ವ ಕಾಯ್ದೆ (CAA) ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ (NRC) ಯಾವ ಭಾರತೀಯ ನಾಗರಿಕರ ವಿರುದ್ಧ ಅಲ್ಲ ಮತ್ತು ಇವುಗಳಿಂದ ಭಾರತೀಯ ಮುಸಲ್ಮಾನರು ಆತಂಕ ಪಡುವ ಅವಶ್ಯಕತೆಯೂ ಇಲ್ಲ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಡಾ. ಮೋಹನ್ ಭಾಗವತರವರು ಗವಾಹಾಟಿಯಲ್ಲಿ ಹೇಳಿದರು. ನೆಹರು – ಲಿಯಾಕತ್ ಒಪ್ಪಂದವನ್ನು ಉಲ್ಲೇಖಿಸುತ್ತಾ ರಾಷ್ಟ್ರ ವಿಭಜನೆಯ ನಂತರ ಭಾರತ ಮತ್ತು ಪಾಕಿಸ್ತಾನ ತಮ್ಮ ತಮ್ಮ ದೇಶದಲ್ಲಿನ ಧಾರ್ಮಿಕ ಅಲ್ಪಸಂಖ್ಯಾತರನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದ್ದವು. ಭಾರತ ಈ ಭರವಸೆಗೆ ಬದ್ಧವಾಗಿ ನಡೆದುಕೊಂಡಿದೆ. ಆದರೆ ಪಾಕಿಸ್ತಾನ ಹಾಗೆ ನಡೆದುಕೊಳ್ಳಲಿಲ್ಲ. ನಮ್ಮ ಪೂರ್ವಜರು ಮತ್ತು ಹಿರಿಯರು ಅಖಂಡ ಭಾರತದ ಸ್ವಾತಂತ್ರ್ಯಕ್ಕಾಗಿ ಬ್ರಿಟೀಷರ ವಿರುದ್ಧ ಹೋರಾಟ ಮತ್ತು ಸಂಘರ್ಷ ಮಾಡಿದ್ದರು. ದೇಶ ವಿಭಜನೆ ಜನರ ನಿರ್ಣಯವಾಗಿರಲಿಲ್ಲ. ಆಗಿನ ಕೆಲವು ನಾಯಕರು ನಿರ್ಧರಿಸಿದ ವಿಭಜನೆಯನ್ನು ಜನರು ಒಪ್ಪಿಕೊಳ್ಳಬೇಕಾಯಿತು. ದೇಶ ವಿಭಜನೆಯ ಪರಿಣಾಮವಾಗಿ ಸಾವಿರಾರು ಕುಟುಂಬಗಳು ನಿರಾಶ್ರಿತವಾದವು. ಇಂದಿಗೂ ನಿರಾಶ್ರಿತವಾಗಿವೆ. ಹೀಗೆ ನಿರಾಶ್ರಿತರಾಗಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದಲ್ಲಿ ದೌರ್ಜನ್ಯಕ್ಕೊಳಗಾದವರ ಬಗ್ಗೆ ಕಾಳಜಿ ವಹಿಸುವುದು ಭಾರತದ ನೈತಿಕ ಜವಾಬ್ದಾರಿಯಾಗಬೇಕೆಂಬುದು ಆಗಿನ ನಮ್ಮ ಎಲ್ಲಾ ನಾಯಕರ ಅಪೇಕ್ಷೆಯಾಗಿತ್ತು. ಆ ಅಪೇಕ್ಷೆಯನ್ನು ಈಡೇರಿಸುವ ಕಲ್ಪನೆಯೇ CAA ಎಂದು ಮೋಹನ್ ಭಾಗವತರವರು ಹೇಳಿದರು.

ಗವಾಹಾಟಿಯ ಶ್ರೀಮಂತ ಶಂಕರದೇವ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಪ್ರೊ. ನಾನಿ ಗೋಪಾಲ ಮಹಾಂತ ಅವರ “Citizenship Debate over NRC and CAA, Assam and the politics of history “ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೋಹನ ಭಾಗವತ್ ಅವರು ದೌರ್ಜನ್ಯದ ಭಯದಲ್ಲಿರುವವರಿಗೆ ಆಶ್ರಯ ನೀಡಲೇಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಅಸ್ಸಾಂ ಮುಖ್ಯಮಂತ್ರಿಗಳಾದ ಶ್ರೀ ಹಿಮಾಂತ ಶರ್ಮ ಬಿಸ್ವಾ, ಅಸ್ಸಾಂ ವಿಧಾನಸಭಾಧ್ಯಕ್ಷರಾದ ಬಿಸ್ವಜೀತ ದಲ್ಮಾರಿ ಸಹಿತ ಸಮಾಜದ ಅನೇಕ ಗಣ್ಯರು ಭಾಗವಹಿಸಿದ್ದರು. NRC ಸುತ್ತಮುತ್ತ ಎದ್ದಿರುವ ವಿವಾದಗಳ ಬಗ್ಗೆ ಮಾತನಾಡಿದ ಡಾ. ಮೋಹನ್ ಭಾಗವತ್, ಯಾವುದೇ ದೇಶ ಆಗಲಿ ತನ್ನ ನಾಗರಿಕ ಯಾರು ಎಂದು ತಿಳಿದುಕೊಳ್ಳುವ ಮತ್ತು ತಿಳಿದುಕೊಳ್ಳಲು ಒಂದು ವ್ಯವಸ್ಥೆ ಇರುತ್ತದೆ. ಜಗತ್ತಿನ ಎಲ್ಲಾ ದೇಶಗಳಲ್ಲಿ ತನ್ನ ನಿಜವಾದ ನಾಗರಿಕರು ಯಾರು? ಯಾರು ದೇಶಕ್ಕೆ ಹೊರಗಡೆಯಿಂದ ಬಂದಿದ್ದಾರೆ? ಅವರಲ್ಲಿ ನಿಗದಿತ ಅನುಮತಿ ಪಡೆದು ಬಂದವರಾರು ಮತ್ತು ಅಕ್ರಮವಾಗಿ ನುಸುಳಿದವಾರು ಎಂದು ತಿಳಿದುಕೊಳ್ಳುವ ಒಂದು ವ್ಯವಸ್ಥೆ ಇದ್ದೇ ಇರುತ್ತದೆ. NRC ಕೂಡ ತನ್ನ ನಾಗರಿಕರನ್ನು ಗುರುತಿಸುವ ಇಂತಹದೇ ಒಂದು ವ್ಯವಸ್ಥೆ. ಇದು ಯಾರ ವಿರುದ್ಧವೂ ಅಲ್ಲ. ಆದರೆ ಭಾರತದಲ್ಲಿ ಇದನ್ನು ಕೋಮು ವಿವಾದವನ್ನಾಗಿ ತಿರುಚಲಾಗಿದೆ. CAA ಮತ್ತು NRC ಇವು ಹಿಂದು ಮುಸ್ಲಿಮ್ ವಿಷಯವಲ್ಲ. ಆದರೆ ಭಾರತೀಯರಾದ ನಾವೆಲ್ಲರೂ ಎಚ್ಚರದಿಂದ ಇದ್ದು ದೇಶದ ಭವಿಷ್ಯಕ್ಕೆ ಏನು ಒಳ್ಳೆಯದು ಎಂದು ನಿರ್ಧರಿಸಬೇಕು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹಿಮಾಂತ ಬಿಸ್ವ ಸರ್ಮರವರು CAA ಮತ್ತು NRC ವಿರುದ್ಧ ನಡೆದ ಶಹೀನಬಾಗನಲ್ಲಿ ನಡೆದ ಪ್ರತಿಭಟನೆಗೂ ಹಾಗೂ ಅಸ್ಸಾಂ ನಲ್ಲಿ ನಡೆದ ಪ್ರತಿಭಟನೆಗೂ ವ್ಯತ್ಯಾಸವಿದೆ ಎಂದರು. ಅಸ್ಸಾಮಿನಲ್ಲಿ ನಡೆದ ಪ್ರತಿಭಟನೆ ಅಸ್ಸಾಂನ ಸಂಸ್ಕೃತಿ ಮತ್ತು ಭಾಷೆಯನ್ನು ಉಳಿಸುವದಕ್ಕೋಸ್ಕರ. ಆದರೆ ಶಹೀನಬಾಗನಲ್ಲಿ ನಡೆದ ಪ್ರತಿಭಟನೆ ಕೋಮುವಾದಿಗಳ ಕುಮ್ಮಕ್ಕಿನಿಂದ ನಡೆದದ್ದು ಎಂದರು. ಮುಂದುವರೆದು ಮಾತನಾಡಿದ ಅವರು ಅಸ್ಸಾಂನ ವೈಚಾರಿಕ ಸಮಾಜ ಹೆಚ್ಚಾಗಿ ಎಡಪಂಥೀಯರು ಹಾಗೂ ತಥಾಕಥಿತ ಪ್ರಗತಿಪರರಿಂದ ತುಂಬಿಕೊಂಡಿದೆ. ಯಾರಾದರೂ ಇದಕ್ಕೆ ಪರ್ಯಾಯವಾಗಿ ಮಾತನಾಡಿದರೆ ಎಡಪಂಥೀಯರು ವೈಚಾರಿಕ ಭಯೋತ್ಪಾದನೆ ನಡೆಸುತ್ತಾರೆ ಎಂದರು. ಗೋಪಾಲ ಮಹಾಂತರವರು ಬರೆದ ಪುಸ್ತಕ ಅಸ್ಸಾಂನ ಇತಿಹಾಸ ಮತ್ತು ಸಮಾಜದ ಆಧಾರದ ಮೇಲೆ ಈ ಎಡಪಂಥೀಯ ವಿಚಾರಕ್ಕೆ ಸವಾಲೊಡ್ಡುತ್ತದೆ. ಪುಸ್ತಕದ ಬಗ್ಗೆ ಮಾತನಾಡಿದ ಡಾ. ಮೋಹನ್ ಭಾಗವತರವರು ಈ ಪುಸ್ತಕ ಇಲ್ಲಿವರೆಗೆ ಮುಚ್ಚಿಡಲ್ಪಟ್ಟ ಅಸ್ಸಾಂನ ಹಲವಾರು ಇತಿಹಾಸ ಹಾಗೂ ಸಮಾಜದ ಸತ್ಯಗಳನ್ನು ತೆರೆದಿಡುತ್ತದೆ ಎಂದರು. ಬಹಳಷ್ಟು ಸಂಶೋಧನೆ ಮಾಡಿ ರಚಿಸಿದ ಪುಸ್ತಕ ಇತಿಹಾಸದ ಹಲವಾರು ಸತ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ ಎಂದರು.


ಹಲವಾರು ದಶಕಗಳಿಂದ ಪೂರ್ವ ಬಂಗಾಳ (ಪ್ರಸಕ್ತ ಬಾಂಗ್ಲಾದೇಶ)ದಿಂದ ನಿರಂತರ ಅಕ್ರಮ ನುಸುಳುವಿಕೆಯಿಂದ ಅಸ್ಸಾಂನ ಸಮಾಜದಲ್ಲುಂಟಾದ ಸ್ವಂತ ಗುರುತಿನ ದ್ವಂದ್ವದ ಆಧಾರದ ಮೇಲೆ ಬರೆದದ್ದು ಈ ಪುಸ್ತಕ ಎಂಬುದು ಇಲ್ಲಿ ಉಲ್ಲೇಖನೀಯ. ಅಸ್ಸಾಂನ ಇತಿಹಾಸ ಮತ್ತು ರಾಷ್ಟ್ರೀಯತೆ ಆರಂಭವಾಗುವುದೇ ೧೯ನೇ ಶತಮಾನದಿಂದ ಎಂಬ ಎಡಪಂಥೀಯ ವಿಚಾರವನ್ನು ಈ ಪುಸ್ತಕ ಪ್ರಶ್ನೆ ಮಾಡುವುದಷ್ಟೇ ಅಲ್ಲ, ಅದಕ್ಕೆ ಈ ಪುಸ್ತಕ ಸವಾಲು ಮಾಡುತ್ತದೆ.


ವರದಿ : ಹರೀಶ್ ಕುಲಕರ್ಣಿ

Vishwa Samvada Kendra

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಕಾರ್ಗಿಲ್ ಹೀರೋಗಳು: ಮಾತೃಭೂಮಿಯನ್ನುಳಿಸಿದ ವೀರಪುತ್ರರು #KargilHeroes #KargilVijayDiwas

Mon Jul 26 , 2021
ಕಾರ್ಗಿಲ್ ಹೀರೋಗಳು: ಮಾತೃಭೂಮಿಯನ್ನುಳಿಸಿದ ವೀರಪುತ್ರರು ಹಿಂದೂಸ್ಥಾನದ ಶೌರ್ಯ-ಸಾಹಸವನ್ನು ಜಗತ್ತಿನ ಮುಂದೆ ಮತ್ತೊಮ್ಮೆ ಸಾಬೀತುಪಡಿಸಿದ ಕಾರ್ಗಿಲ್ ಕದನದ ಶೌರ್ಯಗಾಥೆಗೆ 22ನೇ ಸಂವತ್ಸರ.ಪಾಕಿಸ್ತಾನ ಎಷ್ಟೇ ಮೋಸ ಕಪಟಗಳಿಂದ ನಮ್ಮನ್ನು ಗೆಲ್ಲಲು ಪ್ರಯತ್ನಿಸಿದರೂ, ಅದರ ವಿರುದ್ಧ ವೀರೋಚಿತವಾದ ಹೋರಾಟಗೈದು, ಅವರನ್ನು ಪರಾಭವಗೊಳಿಸಿ ಮಾತೃಭೂಮಿಯ ರಕ್ಷಣೆ ಮಾಡುತ್ತಿರುವ ನಮ್ಮ ಭಾರತೀಯ ಸೈನ್ಯದ ವೀರಗಾಥೆ ಹಿಂದೂಸ್ಥಾನದ ಶೌರ್ಯದ ಇತಿಹಾಸಕ್ಕೆ ಸಾಕ್ಷಿಯಾಗಿದೆ. ನಮ್ಮ-ನಿಮ್ಮ ನಡುವೆಯೇ ಹುಟ್ಟಿ ಬೆಳೆದ 20ರಿಂದ 30 ವರ್ಷದ ತರುಣರು ಹೇಗೆ ಅಷ್ಟು ಪರಾಕ್ರಮದಿಂದ ಯುದ್ಧ […]