ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ

ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ
– ಡಾ. ಹ ವೆಂ ಕಾಖಂಡಿಕಿ, ಕನ್ನಡ-ಸಂಸ್ಕೃತಿ ಪರಿಚಾರಕರು

(ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ)

“ವಿಶ್ವಮಾತೆಯ ಗರ್ಭಕಮಲಜಾತ – ಪರಾಗ
ಪರಮಾಣು ಕೀರ್ತಿ ನಾನು!
ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿ
ನಿಂತಂಥ ಮೂರ್ತಿ ನಾನು!”

“ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆ
ನೀಡುವೆನು ರಸಿಕ! ನಿನಗೆ!
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ
ಆ ಸವಿಯ ಹಣಿಸು ನನಗೆ”

“ಒಂದೇ ಒಂದೇ ಒಂದೇ ಕರ್ನಾಟಕ ಒಂದೇ……
………………………….
………………..”
ಹೀಗೆನ್ನದ ಹೆರವರು ಅವರಿದ್ದರು ಒಂದೇ
ಇರದಿದ್ದರು ಒಂದೇ “

ಇಂತಹ ೧೪೫೦ಕ್ಕೂ ಹೆಚ್ಚು ಅಮರ ಕವಿತೆಗಳನ್ನು ಕನ್ನಡಕ್ಕೆ ಕೊಟ್ಟ ‘ಸಾವಿರದ ಕವಿ’, ‘ಶಬ್ದ ಗಾರುಡಿಗ’, ‘ವರಕವಿ’ ಅಂಬಿಕಾತನಯದತ್ತ ( ದತ್ತಾತ್ರೇಯ ರಾಮಚಂದ್ರ ಬೇಂದ್ರೆ) ೧೮೯೬ ಜನವರಿ ೩೧ (ಮಾಘ ವದ್ಯ ಪ್ರತಿಪದೆ, ಮನ್ಮಥ ನಾಮ ಸಂವತ್ಸರ) ರಂದು ಧಾರವಾಡದ ಪೋತ್ನಿಸ್ ಗಲ್ಲಿಯ ಗುಣಾರಿಯವರ ಮನೆಯಲ್ಲಿ ಜನಿಸಿದರು.
ಇವರ ಕೈಯಲ್ಲಿ ಆಡದ ವಿಷಯವೇ ಇರಲಿಲ್ಲ. ಜನ್ಮ ಜನ್ಮಾಂತರದ ಸಂಸ್ಕಾರ, ಸಂಸ್ಕೃತಿ, ಮಡುಗಟ್ಟಿ ಮತ್ತೆ ಅವರಲ್ಲಿ ಬಂದಿತ್ತೇನೋ ಎನ್ನುವಷ್ಟು ಪ್ರಖರವಾಗಿ ಬೆಳೆದು ಕನ್ನಡ ಭಾಷೆ, ಸಂಸ್ಕೃತಿಗೆ ಹಿರಿದಾದ ಕಾಣಿಕೆ ನೀಡಿದರು.

ಅವರ ಒಂದೊಂದು ಕವನವೂ ಓದಿದಷ್ಟು ಹೊಸ ಹೊಸ ಅರ್ಥವನ್ನು ಹೊರ ಹಾಕುತ್ತಲೇ ಇರುತ್ತವೆ.

ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು. ಧಾರವಾಡದ ವಿಕ್ಟೋರಿಯಾ ( ಇಂದಿನ ವಿದ್ಯಾರಣ್ಯ ಶಾಲೆ ) ಶಾಲೆಯಲ್ಲಿ ಅವರು ಓದಿದರು. ಮುಂದಿನ ದಿನಗಳಲ್ಲಿ ಅವರು ಅದೇ ಶಾಲೆಯಲ್ಲಿ ಶಿಕ್ಷಕರೂ ಆಗಿದ್ದರು. ಕಾಲೇಜು ಶಿಕ್ಷಣ ಪುಣೆಯಲ್ಲಿ, ಎಮ್ ಎ ಪದವಿಯನ್ನು ಮುಂಬಯಿ ವಿಶ್ವವಿದ್ಯಾಲಯದಿಂದ ಪಡೆದರು. ಗದುಗಿನಲ್ಲಿ ಕೂಡಾ ಕೆಲ ಕಾಲ ಶಿಕ್ಷಕರಾಗಿದ್ದರು. ಅವರ ‘ನರಬಲಿ’ ಕವಿತೆ ಬ್ರಿಟಿಷ್‌ ಆಡಳಿತದ ಕೆಂಗಣ್ಣಿಗೆ ಗುರಿಯಾಯಿತು. ಬ್ರಿಟಿಷ್ ಸರ್ಕಾರ ಈ ಕವನ ತಮ್ಮ ವಿರುದ್ಧ ಬರೆದದ್ದು ಎಂದು ತೀರ್ಮಾನಿಸಿ ಅವರಿಗೆ ಜೇಲುವಾಸ ಶಿಕ್ಷೆ ನೀಡಿ ಬೆಳಗಾವಿ ಹಿಂಡಲಗಾ ಜೇಲಿಗೆ ಕಳಿಸಿತು. ನಂತರದಲ್ಲಿ ಧಾರವಾಡ ಹತ್ತಿರದ ಗ್ರಾಮ ಮುಗದದಲ್ಲಿ ಸ್ಥಾನ ಬದ್ಧತೆ ಶಿಕ್ಷೆ ಅಡಿ ಒಂದು ಮನೆಯಲ್ಲಿ ಇಟ್ಟಿತು. ಮಹತ್ವದ ವಿಷಯವೆಂದರೆ ಈ ಯಾವ ಸಂಗತಿಗಳೂ ಅವರ ಒಳ ಅಂತಃಶಕ್ತಿಯನ್ನು ಕುಂದಿಸಲಿಲ್ಲ. ಎಲ್ಲಾ ‘ಅವನಿಚ್ಛೆ’ ಎಂದು ದೃಢವಾಗಿ ನಂಬಿದ್ದ ಕವಿ ಬರೀ ಬದುಕಲಿಲ್ಲ, ಬಾಳಿದರು.

ದ ರಾ ಬೇಂದ್ರೆ, 1896 – 1981

ಧಾರವಾಡ, ಹುಬ್ಬಳ್ಳಿ, ಗದಗ, ಪುಣೆ ಮೊದಲಾದ ಕಡೆ ಶಿಕ್ಷಕರಾಗಿ ಕೆಲಸ ಮಾಡಿದರಾದರೂ ಕರ್ನಾಟಕದಲ್ಲಿ ಕಾಯಮ್ ಉದ್ಯೋಗ ಅವರಿಗೆ ಸಿಗಲೇ ಇಲ್ಲ. ನಿಜಕ್ಕೂ ಇದೊಂದು ಸೋಜಿಗದ ಸಂಗತಿ. ಹನ್ನೆರಡು ವರ್ಷಗಳ ಕಾಲ ಸೊಲ್ಲಾಪುರ ಡಿ ಎ ವ್ಹಿ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ೧೯೫೬ರಲ್ಲಿ ನಿವೃತ್ತಿ ಹೊಂದಿದರು. ಆಗ ಅವರಿಗೆ ಅರವತ್ತು ವರ್ಷ.

ಮುಂದಿನ ಹತ್ತು ವರ್ಷಗಳ ಕಾಲ ಅಂದರೆ ೧೯೫೬ ರಿಂದ ೧೯೬೬ ರ ವರೆಗೆ ಧಾರವಾಡ ಆಕಾಶವಾಣಿ ಕೇಂದ್ರದ ಸಾಹಿತ್ಯ ಸಲಹಾಗಾರರಾಗಿ ಸೇವೆ ಸಲ್ಲಿಸಿದರು. ಈ ವೇಳೆಯಲ್ಲಿ ಧಾರವಾಡ ಆಕಾಶವಾಣಿ ಕೇಂದ್ರ ಅತ್ಯುತ್ತಮವಾದ ಕಾರ್ಯಗಳನ್ನು ನೀಡಿ ದೇಶದ ಪ್ರಮುಖ ಕೇಂದ್ರಗಳಲ್ಲಿ ಒಂದಾಗಿತ್ತು.

೧೯೧೮ ರಲ್ಲಿ ಅವರ ಮೊದಲ ಕವಿತೆ ‘ತುತ್ತೂರಿ’ ಪ್ರಭಾತ ಪತ್ರಿಕೆಯಲ್ಲಿ ಪ್ರಕಟವಾಯಿತು.
ಮುಂದಿನ ೬೩ ವರ್ಷಗಳ ಕಾಲ ಎಡಬಿಡದೆ ಸಾಹಿತ್ಯ ಸಾಗರವನ್ನೇ ಕನ್ನಡಿಗರಿಗೆ ನೀಡಿದರು.
ಅವರು ಬದುಕಿದ್ದ ಕಾಲದಲ್ಲಿ ೨೬ ಕವನ ಸಂಕಲನಗಳು ಪ್ರಕಟವಾಗಿವೆ. ಮರಣೋತ್ತರ ಹತ್ತು ಕವನ ಸಂಕಲನಗಳು ಹೊರ ಬಂದವು. ೨೦೦೩ ರಲ್ಲಿ ಅವರ ಸಮಗ್ರ ಕವಿತೆಗಳನ್ನು ಭಾಷ್ಯ, ವಿವರ, ಕೃತಿ ಸೂಚಿ ಸಹಿತ “ಔದುಂಬರ ಗಾಥೆ” ಎನ್ನುವ ಮಹಾಕಾವ್ಯವನ್ನೇ ಕರ್ನಾಟಕಕ್ಕೆ ಬೇಂದ್ರೆ ಅವರ ಮಗ ಡಾ.ವಾಮನ ಬೇಂದ್ರೆ ನೀಡಿದರು. ಡಾ.ಕೆ ಎಸ್ ಶರ್ಮಾ ಪ್ರಕಟಿಸಲು ಸಹಕರಿಸಿದರು ಇದಲ್ಲದೆ ಹದಿನಾಲ್ಕು ನಾಟಕಗಳು, ಕಥೆಗಳು, ಪ್ರಬಂಧಗಳು, ವಿಮರ್ಶೆ, ಭಾಷಣಗಳು, ಬರಹಗಳು ಹೀಗೆ ಎಲ್ಲವನ್ನೂ ಒಂದೆಡೆ ಸೇರಿಸಿ ಸಮಗ್ರ ಸಾಹಿತ್ಯವನ್ನು ಕನ್ನಡಿಗರಿಗೆ ನೀಡಿ ಮಹದುಪಕಾರ ಮಾಡಿದ್ದಾರೆ ವಾಮನ ಬೇಂದ್ರೆಯವರು.

ಬೇಂದ್ರೆ ಅವರ ಗೇಯ ಗೀತೆಗಳನ್ನು ಅನೇಕ ಗಾಯಕರು ಹಾಡಿ ಧ್ವನಿಸುರುಳಿಗಳನ್ನು ಹೊರ ತಂದಿದ್ದಾರೆ. ರಂಗಭೂಮಿ ಕಲಾವಿದರು ಅವರ ಎಲ್ಲಾ ನಾಟಕಗಳನ್ನು ರಂಗದ ಮೇಲೆ ಪ್ರದರ್ಶಿಸಿದ್ದಾರೆ. ಅವರ ಮೇಲೆ ಹತ್ತಾರು ಸಂಶೋಧನಾ ಪ್ರಬಂಧಗಳು ಹೊರ ಬಂದಿವೆ. ಹತ್ತಾರು ವಿಮರ್ಶಾ ಕೃತಿಗಳು ಸಹ ಹೊರ ಬಂದಿವೆ.

ಪದ್ಮಶ್ರೀ ಪ್ರಶಸ್ತಿ, ವಿಶ್ವವಿದ್ಯಾಲಯ ಡಾಕ್ಟರೇಟ್, ನೂರಾರು ಸ್ಥಳಗಳಲ್ಲಿ ಮಾನ ಸನ್ಮಾನಗಳು ಅವರು ಬದುಕಿದ್ದಾಗ ದೊರಕಿದವು. ಅದರಿಂದ ಅವರು ಉಬ್ಬಲಿಲ್ಲ. ದೊರಕದಿದ್ದರೂ ಕೊರಗುತ್ತಿರಲಿಲ್ಲ. ಸ್ವಾಭಿಮಾನಿ ಕವಿ ಅವರಾಗಿದ್ದರು. ವೇದ, ಉಪನಿಷತ್ತು, ಎಲ್ಲಾ ಧರ್ಮಗ್ರಂಥಗಳು, ವಿಜ್ಞಾನ, ಸಂಖ್ಯಾಶಾಸ್ತ್ರ, ಖಗೋಳ, ಭೂಗೋಳ, ಜ್ಯೋತಿಷ್ಯ, ಹೀಗೆ ಎಲ್ಲಾ ಆಯಾಮಗಳನ್ನು ಅಭ್ಯಾಸ ಮಾಡಿದ್ದ ಅವರು ಅವುಗಳ ಕುರಿತು ಗಂಟೆಗಳ ಕಾಲ ಮಾತನಾಡಬಲ್ಲವರಾಗಿದ್ದರು. ಅನ್ಯಾಯ, ಭ್ರಷ್ಟಾಚಾರ, ಇತ್ಯಾದಿ ವಿಷಯಗಳನ್ನು ಖಂಡಿಸುತ್ತಿದ್ದರು. ಒಳ್ಳೆಯದನ್ನು ಬೆಂಬಲಿಸುತ್ತಿದ್ದರು. ಯುವಕರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಅವರ ಕೃತಿಗಳಿಗೆ ಮುನ್ನುಡಿ ಬರೆದು ಹುರುಪು ತುಂಬುತ್ತಿದ್ದರು.

ಇಂತಹ ರಸ ಋಷಿ ದ ರಾ ಬೇಂದ್ರೆ ೧೯೮೧ ಅಕ್ಟೋಬರ್ ೨೬ {ಅಶ್ವಿನ್ ವದ್ಯ ಚತುರ್ದಶಿ) ದೀಪಾವಳಿ ನರಕ ಚತುರ್ದಶಿಯಂದು ನಮ್ಮನ್ನು ಅಗಲಿದರು. ಇಂತಹ ಮಹಾನ್ ಚೇತನಕ್ಕೆ ನಮೋ ನಮಃ.

ಡಾ. ಹ ವೆಂ ಕಾಖಂಡಿಕಿ

ಕನ್ನಡ-ಸಂಸ್ಕೃತಿ ಪರಿಚಾರಕರು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ಪೇಜಾವರ ಶ್ರೀಗಳಿಂದ ಬಳ್ಳಾರಿಯ ಹರಿಶ್ಚಂದ್ರ ಸೇವಾಬಸ್ತಿಯಲ್ಲಿ ಪಾದಯಾತ್ರೆ

Sun Jan 31 , 2021
ಕರ್ನಾಟಕ: ಬಳ್ಳಾರಿ ನಗರದ ಹರಿಶ್ಚಂದ್ರ ನಗರ ಸೇವಾ ಬಸತಿಗೆ ಇಂದು (30/1/21) ಪೇಜಾವರ ಮಠದ ಪೂಜ್ಯ ಶ್ರೀಗಳು, ಅಯೋಧ್ಯಾ ರಾಮ ಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ನ ದಕ್ಷಿಣ ಭಾರತದ ಏಕೈಕ ಪ್ರತಿನಿಧಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ*ಅವರು ಆಗಮಿಸಿದ್ದರು.  ಹರಿಶ್ಚಂದ್ರ ನಗರ ಉಪೇಕ್ಷಿತ ಬಂಧುಗಳ ವಸತಿಯಾಗಿದ್ದು, ಇಡೀ ವಸತಿಯವರು ಸ್ವಾಮೀಜಿಯವರನ್ನು ಭಕ್ತಿಪೂರ್ವಕ ಹಾಗೂ ಆದರದಿಂದ ಸ್ವಾಗತಿಸಿದರು. ಐದು ಮನೆಗಳಲ್ಲಿ ಪಾದಪೂಜೆ ನಡೆಯಿತು. ಕ್ರಿಶ್ಚಿಯನ್ ಹಾಗೂ ಮುಸಲ್ಮಾನರೂ ಸೇರಿದಂತೆ ಸ್ವಾಮಿಜಿಗಳನ್ನು ಸ್ವಾಗತಿಸಿದ್ದು ವಿಶೇಷ. […]