ಅಸ್ಪೃಶ್ಯತೆ ನಿವಾರಣೆಗೆ ಶ್ರಮಿಸಿದ ಆದ್ಯಪುರುಷ ಕುದ್ಮುಲ್ ರಂಗರಾವ್

ಸಾಮಾಜಿಕ ನ್ಯಾಯಕ್ಕಾಗಿ, ದೀನ ದಲಿತರ ಉದ್ಧಾರಕ್ಕಾಗಿ ತಮ್ಮ ಇಡೀ ಜೀವನವನ್ನೇ ತೇಯ್ದ ಶ್ರೀ ಕುದ್ಮಲ್ ರಂಗರಾವ್ (1859 -1928)  ಅವರ ಪುಣ್ಯಸ್ಮರಣೆಯ ಪ್ರಯುಕ್ತ ವಿಶೇಷ ಲೇಖನ.

ಹತ್ತೊಂಬತ್ತು ಇಪ್ಪತ್ತನೇ ಶತಮಾನದಲ್ಲಿ ಕರಾವಳಿಯ ದಲಿತ ಸಮುದಾಯದ ಬದುಕು ಅರ್ಥಪೂರ್ಣವಾಗಲು ಶ್ರಮಿಸಿದ ವಿಭೂತಿ ಪುರುಷರು ಕುದ್ಮುಲ್ ರಂಗರಾಯರು.   ಕಾಸರಗೋಡಿನ ಸಾರಸ್ವತ ಬ್ರಾಹ್ಮಣ ಸಮಾಜಕ್ಕೆ ಸೇರಿದ್ದ ಅವರು ಕೈಗೊಂಡಿದ್ದ ದಲಿತೋದ್ಧಾರದ ಕಾರ್ಯಗಳು ಸ್ವತಃ ಮಹಾತ್ಮ ಗಾಂಧೀಜಿ ಅವರಿಗೆ ಮಾರ್ಗದರ್ಶಿಯಾಗಿದ್ದವು. ೧೯೩೪ ರಲ್ಲಿ ಮಂಗಳೂರಿಗೆ ತಮ್ಮ ಮೂರನೆಯ ಭೇಟಿ ಸಂದರ್ಭದಲ್ಲಿ ಗಾಂಧೀಜಿ ‘ದಲಿತರ ಸೇವೆಯನ್ನು ಕೈಗೊಳ್ಳುವುದಕ್ಕೆ ಕುದ್ಮುಲ್ ರಂಗರಾಯರು ನನಗೆ ಗುರುವಾಗಿ ಪ್ರೇರಣೆ ನೀಡಿದರು’ ಎಂದು ಕೃತಜ್ಞತೆಯಿಂದ ಸ್ಮರಿಸಿದ್ದರು.

ಕರಾವಳಿಯ ಭಾಗದಲ್ಲಿ ದಲಿತ ಕಲ್ಯಾಣದ ಯಾವ ಚಿಂತನೆಯೂ ಇಲ್ಲದಿದ್ದಾಗ ಅದನ್ನು ತಪಸ್ಸಿನಂತೆ ಕೈಗೊಂಡು ಸ್ವಜಾತಿಯವರು ಮತ್ತು ಇತರೆ ಸವರ್ಣೀಯರ ಖಂಡನೆ ಬಹಿಷ್ಕಾರಗಳನ್ನು ಎದುರಿಸಿದರು ಕುದ್ಮುಲ್ ರಂಗರಾಯರು. ಅವರು ಅಸ್ಪೃಶ್ಯರಿಗಾಗಿ ಮೊದಲ ಶಾಲೆಯನ್ನು ಮಂಗಳೂರಿನ ಚಿಲಿಂಬಿಯಲ್ಲಿ ತೆರೆದಾಗ ಬಾಬಾ ಸಾಹೇಬ್ ಅಂಬೇಡ್ಕರ್ ಒಂದು ವರ್ಷದ ಮಗು. ಗಾಂಧೀಜಿ ಭಾರತದ ಸಾಮಾಜಿಕ-ರಾಜಕೀಯ ಕ್ಷೇತ್ರದಲ್ಲಿ ಇನ್ನೂ ಪ್ರವೇಶ ಮಾಡಿರಲಿಲ್ಲ.

ಗಾಂಧೀಜಿ ಅವರಿಗಿಂತ ಸುಮಾರು ಹತ್ತು ವರ್ಷ ಮೊದಲು (೨೯ನೇ ಜೂನ್ ೧೮೫೯) ಕಾಸರಗೋಡು ಸಮೀಪದ ಕುದ್ಮುಲ್ ಎಂಬಲ್ಲಿ ಮಧ್ಯಮ ವರ್ಗದ ದೇವಪ್ಪಯ್ಯ-ಗೌರಿ ದಂಪತಿಗಳ ಹಿರಿಯ ಮಗನಾಗಿ ಜನಿಸಿದ ರಂಗರಾಯರು ಬಡತನದಲ್ಲಿ ಬಾಲ್ಯ ಕಳೆದರು. ಬಹು ಕಷ್ಟದಿಂದ ಕಾಸರಗೋಡಿನಲ್ಲಿ ಬಾಲ್ಯ ಶಿಕ್ಷಣವನ್ನು ಮುಗಿಸಿದ ಅವರು ೧೬ನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡರು. ತಾಯಿ ಹಾಗೂ ಆರು ಮಂದಿ ಸೋದರ ಸೋದರಿಯರನ್ನು ಸಾಕುವುದಕ್ಕಾಗಿ ಉದ್ಯೋಗ ಅರಸಿ ಮಂಗಳೂರಿಗೆ ಬಂದರು. ತಿಂಗಳಿಗೆ ೮ ರೂಪಾಯಿ ವೇತನದ ಅಧ್ಯಾಪಕ ವೃತ್ತಿ ಕೈಗೊಂಡರು. ಅಧ್ಯಾಪಕರಾಗಿದ್ದ ಕಾಲದಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆಗೆ ಖಾಸಗಿಯಾಗಿ ಕುಳಿತು ತೇರ್ಗಡೆ ಹೊಂದಿದರು. ಮತ್ತಷ್ಟು ಪರಿಶ್ರಮದಿಂದ ಅಂದಿನ ಪ್ಲೀಡರ್‌ಶಿಪ್ (ವಕಾಲತ್) ಪರೀಕ್ಷೆಯಲ್ಲೂ ಉತ್ತೀರ್ಣರಾದರು. ನಂತರ ಅಧ್ಯಾಪಕ ವೃತ್ತಿ ತ್ಯಜಿಸಿ ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಕೈಗೊಂಡರು.

ಸತ್ಯ, ನ್ಯಾಯಕ್ಕಾಗಿ ಬಡಜನರ, ದೀನ ದಲಿತರ ವಕಾಲತ್ತುಗಳನ್ನೇ ವಹಿಸಿಕೊಂಡು ಅವರಿಗಾಗುತ್ತಿರುವ ಅನ್ಯಾಯ, ವಂಚನೆಗಳ ವಿರುದ್ಧ ಹೋರಾಡುತ್ತಿದ್ದ ರಂಗರಾಯರು ಅದರಲ್ಲಿಯೇ ಹೆಚ್ಚಿನ ಯಶಸ್ಸು ಪಡೆದರು. ಬಡವರ ವಕೀಲರಾಗಿ ಪ್ರಸಿದ್ಧರಾದರು. ರಂಗರಾಯರ ಪ್ರಾಮಾಣಿಕತೆ ಮತ್ತು ಆದರ್ಶ ವ್ಯಕ್ತಿತ್ವ ಆಗಿನ ಇಂಗ್ಲಿಷ್ ನ್ಯಾಯಾಧೀಶರನ್ನು ಆಕರ್ಷಿಸಿತ್ತು.

          ಆಗ ದಕ್ಷಿಣ ಕನ್ನಡ ಜಿಲ್ಲೆ ಬ್ರಿಟಿಷರ ಆಳ್ವಿಕೆಯ ಮದ್ರಾಸ್ ಪ್ರಾಂತ್ಯಕ್ಕೆ ಸೇರಿತ್ತು. ಬ್ರಿಟಿಷ್ ಸರ್ಕಾರ ಜಿಲ್ಲೆಯ ದೀನ ದಲಿತರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆ ತೆರೆದಿತ್ತು. ಅಸ್ಪೃಶ್ಯರಿಗೆ ಪ್ರತ್ಯೇಕ ಶಾಲೆ, ಕಾಲೋನಿ, ಬಾವಿ, ದರಖಾಸ್ತಿನಲ್ಲಿ ಭೂಮಿ ಹಂಚಿಕೆಯ ಯೋಜನೆಗಳನ್ನು ರೂಪಿಸಿತ್ತು.

ಮಂಗಳೂರು ನಗರದ ವೆಲೆನ್ಸಿಯ ಬಳಿ ನಂದಿಗುಡ್ಡೆ ಮುಟ್ಟಿಕಲ್ ಎಂಬಲ್ಲಿ ತೆರೆದಿದ್ದ ಅಸ್ಪೃಶ್ಯರ ಶಾಲೆಯಲ್ಲಿ ನಾಲ್ಕನೇ ತರಗತಿವರೆಗೆ ಕಲಿತಿದ್ದ ಬೆಂದೂರು ಬಾಬು ಎಂಬುವರಿಗೆ ಜಿಲ್ಲಾ ನ್ಯಾಯಾಲಯದಲ್ಲಿ ಪೇದೆಯಾಗಿ ನಿಯುಕ್ತಿ ಮಾಡಿದ್ದು ಕೋರ್ಟಿನಲ್ಲಿ ಕೆಲಸ ಮಾಡುವ ಇತರೆ ನೌಕರರಿಗೆ ಸಹಿಸಲು ಶಕ್ಯವಾಗಲಿಲ್ಲ. ಈ ಸಂದರ್ಭದಲ್ಲಿ ದೀನದಲಿತರ ಬಂಧು ಎಂದು ಪ್ರಸಿದ್ಧರಾಗಿದ್ದ ರಂಗರಾಯರನ್ನು ಕರೆದ ಅಂದಿನ ಇಂಗ್ಲಿಷ್ ನ್ಯಾಯಾಧೀಶರು ‘ಕೋರ್ಟಿನಲ್ಲಿ ಪೇದೆ ಕೆಲಸ ಮಾಡುವುದರಿಂದ ಅಸ್ಪೃಶ್ಯರ ಉದ್ಧಾರ ಸಾಧ್ಯವಿಲ್ಲ; ಅವರಿಗೆ ವಿದ್ಯಾಭ್ಯಾಸ ಕೊಡಿಸುವಂತೆ ನೀವು ಏನಾದರೂ ಮಾಡಿ’ ಎಂದು ಸಲಹೆ ಮಾಡಿದರು.

ದಲಿತರ ಹೀನಾಯ ಸ್ಥಿತಿಯ ಬಗ್ಗೆ ಕಾಳಜಿ ಹೊಂದಿದ್ದ ರಂಗರಾಯರಿಗೆ ಅಸ್ಪೃಶ್ಯರ ಬದುಕಿನ ಸುಧಾರಣೆಗಾಗಿ ಶ್ರಮಿಸುವ ಅವಕಾಶ ಪ್ರಾಪ್ತವಾಯಿತು. ತಮ್ಮ ೩೦ನೇ ವಯಸ್ಸಿನಲ್ಲಿ ಆಧ್ಯಾತ್ಮದ ಕಡೆ ಮನಸ್ಸು ತಿರುಗಿಸಿ ದಲಿತರ ಉದ್ಧಾರಕ್ಕೆ ದುಡಿಯಲು ಸಂಕಲ್ಪಿಸಿದರು.

ತಮ್ಮ ಗಳಿಕೆಯ ಹಣದಿಂದ ೧೮೯೨ ರಲ್ಲಿ ಮಂಗಳೂರಿನ ಉರ್ವ ಚಿಲಿಂಬಿಯ ಬಳಿ ಹುಲ್ಲುಮನೆಯನ್ನು ಬಾಡಿಗೆಗೆ ಪಡೆದು ದಲಿತ ಮಕ್ಕಳಿಗಾಗಿ ಮೊದಲ ಶಾಲೆಯನ್ನು ತೆರೆದರು. ರಂಗರಾಯರು ಅಸ್ಪೃಶ್ಯರಿಗಾಗಿ ಶಾಲೆ ತೆರೆದ ವರ್ಷಕ್ಕೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೇವಲ ಒಂದು ವರ್ಷ ಪ್ರಾಯವಾಗಿತ್ತು. ದಲಿತರ ಏಳಿಗೆಗಾಗಿ ಸಮಗ್ರ ಕಾರ‍್ಯಕ್ರಮಗಳನ್ನು ಹಮ್ಮಿಕೊಂಡಿದ್ದ ‘ಡಿಪ್ರೆಸ್ಡ್ ಕ್ಲಾಸಸ್ ಮಿಷನ್’ (ಡಿಸಿಎಂ) ಸಂಸ್ಥೆಯನ್ನು ರಂಗರಾಯರು ೧೮೯೭ ರಲ್ಲಿ ಕೊಡಿಯಾಲಬೈಲಿನಲ್ಲಿ ಸ್ಥಾಪಿಸಿದಾಗ ೭ನೇ ವರ್ಷಕ್ಕೆ ಕಾಲಿಟ್ಟಿದ್ದ ಅಂಬೇಡ್ಕರ್ ಅಂಬೇವಾಡಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸಕ್ಕೆ ಸೇರ್ಪಡೆಯಾಗಿದ್ದರು.

ಚಿಲಿಂಬಿಯ ಶಾಲೆಗೆ ಸವರ್ಣೀಯರ ತೀವ್ರ ವಿರೋಧ ವ್ಯಕ್ತವಾದ ಮೇಲೆ ಅದನ್ನು ಮುಚ್ಚಿ ಕಂಕನಾಡಿ, ಬೋಳೂರಿನಲ್ಲಿ ಪ್ರಾಥಮಿಕ ಶಾಲೆಗಳನ್ನು ತೆರೆದರು. ಆದರೆ ಶಾಲೆಗೆ ಹಿಂದೂ ಅಧ್ಯಾಪಕರೇ ಬರಲಿಲ್ಲ. ರಂಗರಾಯರು ಕ್ರೈಸ್ತ ಅಧ್ಯಾಪಕರನ್ನು ನೇಮಿಸಿಕೊಂಡರು. ಮಂಗಳೂರಿನ ಶೇಡಿಗುಡ್ಡೆಯ ಕೋರ್ಟ್‌ಗುಡ್ಡೆ ಇಳಿಜಾರು ಸ್ಥಳದಲ್ಲಿಯೂ ಒಂದು ಶಾಲೆ ತೆರೆದರು. ವೃತ್ತಿಪರ ಶಿಕ್ಷಣವನ್ನು ನೀಡುವ ಕೈಗಾರಿಕೆ ತರಬೇತಿ ಶಾಲೆಯನ್ನು ಶೇಡಿಗುಡ್ಡೆಯಲ್ಲಿ ತೆರೆದರು. ಅಲೆಮಾರಿಯಾಗಿದ್ದ ಮೂಲನಿವಾಸಿ ಕೊರಗರ ಹತ್ತು ಕುಟುಂಬಗಳಿಗೆ ಶೇಡಿಗುಡ್ಡೆಯಲ್ಲಿಯೇ ಆಶ್ರಯ ಕೊಟ್ಟರು. ಅವರ ಕಸುಬುಗಳಿಗೆ ಸಹಾಯ ಮಾಡಿದರು. ಉಡುಪಿ, ಪುತ್ತೂರಿನಲ್ಲಿ ಕೊರಗರಿಗೆ ಹೆಚ್ಚಿನ ಸಂಖ್ಯೆಯಲ್ಲಿ ದರಖಾಸ್ತು ಜಮೀನುಗಳನ್ನು ಕೊಡಿಸಿದರು. ಶೇಡಿಗುಡ್ಡೆಯಲ್ಲಿ ದಲಿತ ವಿದ್ಯಾರ್ಥಿನಿಯರಿಗೆ ಹೆಣ್ಣು ಮಕ್ಕಳ ನಿಲಯವನ್ನು ಕಟ್ಟಿಸಿದರು. ತಾವು ಸ್ಥಾಪಿಸಿದ ಶಾಲೆಗಳಲ್ಲಿ ನಾಲ್ಕನೇ ತರಗತಿವರೆಗೆ ಕಲಿತ ದಲಿತ ಯುವಕರಿಗೆ ಶಿಕ್ಷಕ ತರಬೇತಿ ಕೊಡಿಸಿ ಇತರ ಶಾಲೆಗಳಿಗೆ ಅಧ್ಯಾಪಕರಾಗಿ ನೇಮಿಸುತ್ತಿದ್ದರು.

ಜಿಲ್ಲೆಯ ಅಂದಿನ ಶ್ರೀಮಂತರಿಂದ ಜಮೀನನ್ನು ಕ್ರಯಕ್ಕೆ ಹಾಗೂ ಮೂಲಗೇಣಿಗೆ ಪಡೆದು ದಲಿತರಿಗೆ ಮನೆಗಳನ್ನು ಕಟ್ಟಿಸಲು ಹಾಗೂ ಕೃಷಿ ಮಾಡಲು ವಿತರಿಸಿದರು. ಅವರು ಉಪವೃತ್ತಿ ಕೈಗೊಳ್ಳಲು ನೆರವು ನೀಡಿದರು. ಬಿಜೈ ಕಾಪಿಕಾಡು, ದಡ್ಡಲಕಾಡು ಮತ್ತು ಇನ್ನಿತರ ಕಾಲೋನಿಗಳಲ್ಲಿ ದಲಿತರಿಗೆ ಜಮೀನು ವಿತರಣೆ ಮಾಡುವಾಗ ರಂಗರಾಯರು ‘ಜಮೀನನ್ನು ಪರಿಶಿಷ್ಟರಲ್ಲದವವರಿಗೆ ಯಾವ ಕಾರಣದಿಂದಲೂ ಪರಭಾರೆ ಮಾಡಬಾರದು. ದಲಿತರಿಗೆ ಪರಭಾರೆ ಮಾಡುವುದಿದ್ದರೂ ತಮ್ಮ ಡಿಸಿಎಂ ಸಂಸ್ಥೆಯ ಅನುಮತಿ ಪಡೆಯಬೇಕು’ ಎಂಬ ನಿಬಂಧನೆ ವಿಧಿಸಿದ್ದರು.

          ರಂಗರಾಯರು ತಮ್ಮ ಶಾಲೆಗಳಲ್ಲಿ ಮೂಲ ಶಿಕ್ಷಣವನ್ನು ಜಾರಿಗೆ ತಂದಿದ್ದರು. ಅವರ ಶಾಲೆಗಳಲ್ಲಿ ವೃತ್ತಿಶಿಕ್ಷಣ ಕಲಿಸುವ ವ್ಯವಸ್ಥೆ ಇತ್ತು. ಬಡಗಿ ಕೆಲಸ, ನೇಯ್ಗೆ, ತೋಟಗಾರಿಕೆ, ಕಸೂತಿ ಮತ್ತು ರೇಷ್ಮೆ ಹುಳಸಾಕಣೆ, ತಕಲಿಯಲ್ಲಿ ನೂಲು ಸುತ್ತುವುದು ಮೊದಲಾದವನ್ನು ಕಲಿಸಲಾಗುತ್ತಿತ್ತು. ಅವರು ಮಂಗಳೂರು, ತೋಕೂರು, ಬೋಳೂರು, ದಡ್ಡಲಕಾಡು, ಜೆಪ್ಪು, ಅತ್ತಾವರ, ತಲಪಾಡಿ, ಉಳ್ಳಾಲ, ಮೂಲ್ಕಿ, ಉಡುಪಿ, ಬನ್ನಂಜೆ, ನೇಜಾರು, ಪುತ್ತೂರು ಮುಂತಾದ ಕಡೆ ಸ್ಥಾಪಿಸಿದ ಶಾಲೆಗಳನ್ನು ಹಲವು ವರ್ಷಗಳ ಕಾಲ ಸ್ವಂತವಾಗಿ ನಡೆಸಿಕೊಂಡು ಬಂದರು. ಆದರೆ ನಂತರ ಆರ್ಥಿಕ ಬಿಕ್ಕಟ್ಟಿನ ಕಾರಣ ಕೆಲವನ್ನು ಸರ್ಕಾರದ ವಶಕ್ಕೆ ಒಪ್ಪಿಸಬೇಕಾಯಿತು.

          ರಂಗರಾಯರ ಒತ್ತಡದ ಕಾರಣ ಜಿಲ್ಲಾ ಬೋರ್ಡು ಮತ್ತು ಮಂಗಳೂರು ಪುರಸಭೆಯಲ್ಲಿ ದಲಿತರಿಗೆ ಪ್ರಾತಿನಿಧ್ಯ ದೊರೆಯುವಂತಾಯಿತು. ದಲಿತರಲ್ಲಿ ಸಹಕಾರ ಪ್ರವೃತ್ತಿ ಬೆಳೆಯಲು ‘ಕೋರ್ಟ್‌ಹಿಲ್ ಆದಿದ್ರಾವಿಡ ಸಹಕಾರ ಸಂಘ’ವನ್ನು ಅವರು ಶೇಡಿಗುಡ್ಡೆಯಲ್ಲಿ ಸ್ಥಾಪಿಸಿದರು. ಅನಾಥ ಮಹಿಳೆಯರಿಗಾಗಿ, ಬಾಲ ವಿಧವೆಯರಿಗಾಗಿ ಆಶ್ರಮಗಳನ್ನು ತೆರೆದರು. ಈ ಆಶ್ರಮಗಳಲ್ಲಿ ಜಾತಿ ಭೇದವಿಲ್ಲದೆ ಎಲ್ಲ ಜಾತಿಯ ಅನಾಥ, ವಿಧವೆಯರನ್ನು ಸೇರಿಸಿ ಅವರಿಗೆ ರಕ್ಷಣೆ ಹಾಗೂ ಜೀವನೋಪಾಯ ಮಾರ್ಗಗಳನ್ನು ಕಲ್ಪಿಸಿಕೊಟ್ಟರು.

          ರಂಗರಾಯರು ದಲಿತರ ಏಳಿಗೆಯ ಕಾರ‍್ಯಕ್ರಮಗಳನ್ನು ಕೈಗೊಂಡಿದ್ದಾಗ ಅದನ್ನು ಮಡಿವಂತರು ಸಹಿಸಿಕೊಳ್ಳಲಿಲ್ಲ. ಅವರಿಗೆ ಸಾರಸ್ವತ ಸಮಾಜದ ದೇವಾಲಯಗಳಲ್ಲಿ ಪ್ರವೇಶ ಇರಲಿಲ್ಲ. ಮೇಲುವರ್ಗದವರ ಚಿತಾವಣೆಯಿಂದ ಕ್ಷೌರಿಕರು ಕೂಡ ರಂಗರಾಯರನ್ನು ಬಹಿಷ್ಕರಿಸಿದರು. ಅಗಸರೂ ಬಟ್ಟೆಗಳನ್ನು ಮಡಿ ಮಾಡಲು ನಿರಾಕರಿಸಿದರು. ರಂಗರಾಯರ ಹೆಣ್ಣು ಮಕ್ಕಳನ್ನು ಸಾರ್ವಜನಿಕವಾಗಿ ಅಪಮಾನ ಮಾಡುವ ಬೆದರಿಕೆಗಳು ಬರತೊಡಗಿದವು. ಇದರಿಂದೇನೂ ಅವರು ದಲಿತರ ಸೇವಾ ಕಾರ್ಯದಿಂದ ವಿಚಲಿತರಾಗಲಿಲ್ಲ.

          ಅಸ್ಪೃಶ್ಯ ಸಮುದಾಯದಲ್ಲಿಯೇ ಅತಿ ಹಿಂದುಳಿದಿದ್ದ ತೋಟಿ ಪಂಗಡದವರು ತಮ್ಮ ಪಾರ್ಥಿವ ಶರೀರವನ್ನು ಸ್ಮಶಾನಕ್ಕೆ ಒಯ್ಯಬೇಕು ಎಂಬುದು ರಂಗರಾಯರ ಕೊನೆಯ ಆಸೆಯಾಗಿತ್ತು. ‘ಈ ಪಂಗಡದವರಿಗೆ ಜೀವಿತಕಾಲದಲ್ಲಿ ಹೆಚ್ಚಿನ ಸೇವೆ ಮಾಡಲು ಸಾಧ್ಯವಾಗಲಿಲ್ಲ. ಕೊನೆಗೆ ಅವರ ಸ್ಪರ್ಶದಿಂದಲಾದರೂ ನಮ್ಮ ಆತ್ಮಕ್ಕೆ ಚಿರಶಾಂತಿ ಲಭಿಸೀತು’ ಎಂಬ ಹಿರಿಯಾಸೆಯನ್ನು ಅವರು ತಮ್ಮ ಉಯಿಲಿನಲ್ಲಿ ವ್ಯಕ್ತಪಡಿಸಿದ್ದರು. ರಂಗರಾಯರು ೧೯೨೮ನೇ ಇಸವಿ ಜನವರಿ ೩೦ ರಂದು (೩೦ ವರ್ಷಗಳ ನಂತರ ಅದೇ ದಿನ ಗಾಂಧೀಜಿ ಅವರು ಹುತಾತ್ಮರಾದರು) ಪರಂಧಾಮ ಸೇರಿದಾಗ ತೋಟಿ ಪಂಗಡದವರು ಅವರನ್ನು ಮೆರವಣಿಗೆಯಲ್ಲಿ ಒಯ್ದು ಅತ್ತಾವರದ ಬಾಬುಗುಡ್ಡೆಯ ರುದ್ರಭೂಮಿಯಲ್ಲಿ ಅತ್ಯಂತ ಭಕ್ತಿಯಿಂದ ಅಂತ್ಯಸಂಸ್ಕಾರ ನಡೆಸಿದರು.

          ತಮ್ಮ ಜೀವಿತ ಕಾಲದಲ್ಲಿ ದಲಿತನೊಬ್ಬ ಎಸ್ಸೆಸ್ಸೆಲ್ಸಿ ಉತ್ತೀರ್ಣನಾಗಬೇಕು ಎಂಬುದು ಅವರ ಆಸೆಯಾಗಿತ್ತು. ‘ನಮ್ಮ ವಿದ್ಯಾಸಂಸ್ಥೆಯಲ್ಲಿ ಕಲಿತ ದಲಿತ ಯುವಕ ಪದವೀಧರನಾಗಿ ಉನ್ನತ ಉದ್ಯೋಗ ಪಡೆದು ಅವನದೇ ಆದ ಕಾರಿನಲ್ಲಿ ಹೋಗುತ್ತಿರುವುದನ್ನು ನಾನು ಕಣ್ಣಾರೆ ಕಾಣಬೇಕು. ಆತನ ಕಾರಿನಿಂದ ಏಳುವ ದೂಳು ನನ್ನ ನೆತ್ತಿಗೆ ಬಿದ್ದಾಗ ನನ್ನ ಬದುಕು ಸಾರ್ಥಕವಾಗುತ್ತದೆ’ ಎಂಬ ಹಿರಿಯಾಸೆಯನ್ನೂ ಪ್ರಕಟಿಸಿದ್ದರು. ಈ ಎರಡೂ ಆಸೆಗಳು ಅವರ ಜೀವಿತ ಕಾಲದಲ್ಲಿ ಈಡೇರಲಿಲ್ಲ.

          ದಲಿತರ ಏಳಿಗೆಯ ವಿಚಾರದಲ್ಲಿ ಐತಿಹಾಸಿಕವಾದ ಕಾಳಜಿಯನ್ನು ತಾಳಿ ಅದರಂತೆ ನಡೆದುಕೊಂಡಿದ್ದ ವಿಭೂತಿ ಪುರುಷ ಕುದ್ಮುಲ್ ರಂಗರಾಯರು. ಅವರ ಮಾನವೀಯತೆ ಹಾಗೂ ಸೇವಾಪರತೆ ದಲಿತ ಸಮುದಾಯಕ್ಕೆ ಮಾತ್ರವಲ್ಲದೆ ಸಾಮಾಜಿಕ ಬದಲಾವಣೆಯ ಬಗ್ಗೆ ಚಿಂತನೆ ಇರುವ ಎಲ್ಲರಿಗೂ ಆದರ್ಶ.

* * *

ಕೃಪೆ : ಉತ್ಥಾನ ಮಾಸಪತ್ರಿಕೆ

- ಲಕ್ಷ್ಮಣ ಕೊಡಸೆ

ಲಕ್ಷ್ಮಣ ಕೊಡಸೆ - ‘ಪ್ರಜಾವಾಣಿ ದೈನಿಕದ ನಿವೃತ್ತ ಹಿರಿಯ ಪತ್ರಕರ್ತರು ಹಾಗೂ ಬಹುಶ್ರುತ ಲೇಖಕರು

Leave a Reply

Your email address will not be published. Required fields are marked *

Are you Human? Enter the value below *

This site uses Akismet to reduce spam. Learn how your comment data is processed.

Next Post

ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ

Sun Jan 31 , 2021
ರಸ ಋಷಿ, ವರಕವಿ, ಶಬ್ದ ಗಾರುಡಿಗ ಅಂಬಿಕಾತನಯದತ್ತರನ್ನು ತಿಳಿಯೋಣ ಬನ್ನಿ– ಡಾ. ಹ ವೆಂ ಕಾಖಂಡಿಕಿ, ಕನ್ನಡ-ಸಂಸ್ಕೃತಿ ಪರಿಚಾರಕರು (ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅವರ ೧೨೫ನೇ ಜನ್ಮದಿನದ ನಿಮಿತ್ತ ಈ ವಿಶೇಷ ಲೇಖನ) “ವಿಶ್ವಮಾತೆಯ ಗರ್ಭಕಮಲಜಾತ – ಪರಾಗಪರಮಾಣು ಕೀರ್ತಿ ನಾನು!ಭೂಮಿತಾಯಿಯ ಮೈಯ ಹಿಡಿಮಣ್ಣ ಗುಡಿಗಟ್ಟಿನಿಂತಂಥ ಮೂರ್ತಿ ನಾನು!” “ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೆನೀಡುವೆನು ರಸಿಕ! ನಿನಗೆ!ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆಆ ಸವಿಯ ಹಣಿಸು ನನಗೆ” “ಒಂದೇ ಒಂದೇ ಒಂದೇ […]